ಕವಿಯತ್ರಿ ಶೀತಲ್ ಹೆಗಡೆ ಅವರ ‘ಶೀತಲತೆ’ ಕವನ ಸಂಕಲನದ ಕುರಿತು ಕವಿ ಪದ್ಮನಾಭ. ಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಶೀತಲತೆ
ಲೇಖಕಿ : ಶೀತಲ್ ಹೆಗಡೆ
ಪ್ರಕಾರ : ಕವನಗಳು
ಜೀವನದ ವಿವಿಧ ಮಜಲುಗಳಲ್ಲಿ ಪರಿಸ್ಥಿತಿಗಳಿಗೆ ತಕ್ಕಂತೆ ಮಾನವನ ಮನಸ್ಸು ಸ್ಪಂಧಿಸುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ಹೃದಯವೀಣೆ ಮಧುರ ರಾಗಗಳನ್ನು ಮಿಡಿಯುತ್ತಿರುತ್ತದೆ. ಅಂತಹ ರಾಗಗಳಿಗೆ ಭಾವಸ್ಪರ್ಶ ನೀಡಿ ಪದಗಳಲ್ಲಿ ಬಂಧಿಸಿದಾಗ ಕವಿತೆಗಳಾಗುತ್ತವೆ. ಈ ರೀತಿ ಹುಟ್ಟಿದ ಕವಿತೆಗಳನ್ನು ಒಟ್ಟುಗೂಡಿಸಿ ಶ್ರೀಮತಿ ಶೀತಲ್ ಹೆಗಡೆಯವರು ” ಶೀತಲತೆ” ಎಂಬ ಕವನಸಂಕಲನವನ್ನು ಹೊರತಂದಿದ್ದಾರೆ.

ಕೃತಿಯ ಒಳಪುಟಗಳನ್ನು ತಿರುವಿದಾಗ ಶೃಂಗಾರರಸದ ರಮ್ಯ ಜಾಡಿನತ್ತ ಲೇಖಕಿಯ ಒಲವು ಹೆಚ್ಚಾಗಿರುವಂತೆ ಕಂಡರೂ ಕೃತಿಯಲ್ಲಿ ಭಕ್ತಿ, ವಾತ್ಸಲ್ಯ, ಶೃಂಗಾರ, ಲವಲವಿಕೆ, ಲೋಕಜ್ಞಾನ ಬಾಂಧವ್ಯ ಎಲ್ಲವೂ ಅಡಕವಾಗಿವೆ. “ಮುರಳೀಲೋಲ” ಶ್ರೀ ಕೃಷ್ಣನ ಸ್ತುತಿಸುವ ಗೀತೆಯಾಗಿದೆ. “ಗುರುವಂದನೆ ” ಗುರುವಿನ ಮಹಿಮೆಯನ್ನು ಸಾರುವ ಕವನವಾಗಿದೆ.
“ಅಂತರಂಗದ ತಮವ ಕಳೆದು
ದಿವ್ಯಾನುಭೂತಿ ನೀಡುವ ಶಕ್ತಿ”
ಎಂದು ಗುರುಮಹಿಮೆಯನ್ನು ಬಣ್ಣಿಸುತ್ತಾ ಸಾಗುವ ಈ ಕವನ
“ಅನೂಹ್ಯ ಅಸಾಧಾರಣ ನವಶಕ್ತಿಯ ಬುಗ್ಗೆ
ಸದಾ ಅನುಗ್ರಹಿಸೆಂದು ಕೇಳುವೆ ತಲೆಬಾಗಿ” ಎಂದು ಗುರುವಿನಂಘ್ರಿಯಲ್ಲಿ ಶರಣಾಗುತ್ತಾ ಮುಕ್ತಾಯವಾಗುತ್ತದೆ.
ಯಾರೇ ಆಗಲಿ ಜೀವನದಲ್ಲಿ ಮೊದಲು ಕೇಳುವ ಹಾಡೆಂದರೆ “ಜೋಗುಳ”. ಅಂತಹ ಒಂದು ಜೋಗಳ ಗೀತೆ ಈ ಕೃತಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಲೋಕಕ್ಕೆ ತಂದಿತು ಅಮ್ಮನ ಮಡಿಲು ಲೋಕವ ತೋರಿತು ಅಪ್ಪನ ಹೆಗಲು. ಈ ಅಪ್ಪನೆಂಬ ಅದ್ಭುತದ ಬಗ್ಗೆ ಲೇಖಕಿ ಬರೆದಿರುವ ಈ ಸಾಲುಗಳು ಗಮನ ಸೆಳೆಯುತ್ತವೆ.
“ಆಪತ್ತಿಗೆ ಸವಾಲೊಡ್ಡಿ ಸದಾ ಮುನ್ನುಗ್ಗುವ
ಎದೆಗಾರಿಕೆಗೆ ಹೆಸರಾದ ಅಪ್ಪ.
ಏಳುಬೀಳುಗಳ ಸಮನಾಗಿ ಸ್ವೀಕರಿಸಿ
ಸಮತೋಲನ ಕಾಯ್ವ ಚತುರ ಅಪ್ಪ”
ಕವನ ಎಂದರೇನು ಎಂಬ ಪ್ರಶ್ನೆ ಹಾಕಿದಾಗ ಸಾಮಾನ್ಯವಾಗಿ ಎಲ್ಲರೂ ನೀಡುವ ಉತ್ತರ “ಮನಸಿನ ಭಾವಗಳಿಗೆ ಕವಿಯು ಕೊಡುವ ಶಬ್ದರೂಪ”. ಎಂದೇ ಆಗಿರುತ್ತದೆ. ಸಂಸ್ಕೃತ ಜ್ಞಾನ ಇದ್ದವರು “ಕವೇಃ ಇದಂ ಕಾವ್ಯಂ” , ಶಬ್ದಾರ್ಥೌ ಸಹಿತಂ ಕಾವ್ಯಂ”. ವಾಕ್ಯಂ ರಸಾತ್ಮಕಂ ಕಾವ್ಯಂ ಎಂದು ಹೇಳುತ್ತಾರೆ. ಮನಸ್ಸಿನ ಭಾವಗಳನ್ನು ಮನಸಿನಲ್ಲಿ ಹೊಳೆದ ಹಾಗೆ ಯಥಾವತ್ತಾಗಿ ಪದಗಳಲ್ಲಿ ಇಳಿಸಿಬಿಟ್ಟರೆ ಕವನ/ಕಾವ್ಯ ಆಗುವುದೇ? ಖಂಡಿತ ಇಲ್ಲ. ಇದ್ದುದನ್ನು ಇದ್ದ ಹಾಗೆಯೇ ಹೇಳಿಬಿಟ್ಟರೆ ಅದು ವರದಿ ಅಥವ ಲೇಖನ.ಆಗಿಬಿಡುತ್ತದೆ. ವಾಸ್ತವಿಕ ಅಥವ ಕಾಲ್ಪನಿಕ ವಿಷಯ ಯಾವುದೇ ಆಗಿರಲಿ ಅದನ್ನು ನಾವು ಆನಂದಿಸಿ ಅನುಭವಿಸಿ ಓದುಗರೂ ಅನುಭವಿಸಿ ಆನಂದಿಸುವಂತೆ ಉಚಿತ ಶಬ್ದಪ್ರಯೋಗಗಳಿಂದ ಬರೆದಾಗ ಮಾತ್ರ ಅದು ಕವನ ಎನಿಸುತ್ತದೆ. ಇದನ್ನೇ “ರಮಣೀಯಾರ್ಥ ಪ್ರತಿಪಾದಕಃ ಕಾವ್ಯಃ” ಎಂದು ಹೇಳಿದ್ದಾರೆ. ಅಂದಹಾಗೆ ಕವನ ಎಂದರೇನು ಎಂದು ಲೇಖಕಿ ಶೀತಲ್ ಹೆಗಡೆ. ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರೆ.
“ಮನದಾಳದಲ್ಲಡಗಿದ ಮಾರ್ದನಿಯೇ”, “ಭಾವನೆಗಳಿಗೆ ರಂಗು ತುಂಬುವ ಕುಚ್ಛವೇ” ಕವಿಗಳ ಹೃದಯಪಲ್ಲಕ್ಕಿಯ ಶೃಂಗಾರವೇ ಎಂದು ಕವನವನ್ನು ವರ್ಣಿಸಿದ್ದಾರೆ. ಭಾವಶುದ್ಧಿ ಹಾಗೂ ಭಾಷಾಶುದ್ಧಿ ಬೆರೆತ ಕವನವು ನಿಜವಾಗಲೂ ಸಾಹಿತ್ಯದ ಅಭಿಮಾನಿಗಳಿಗೆ ರಸದೌತಣವೇ ಆಗುತ್ತದೆ.

ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಶ್ರೀ ಪುನೀತ್ ರಾಜಕುಮಾರ್ ರವರ ಬಗ್ಗೆ ಮೂಡಿದ “ಹೊಸಬೆಳಕು” ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರಾಸಬದ್ಧವಾಗಿ, ಭಾವಬದ್ಧವಾಗಿ ಹಾಡುವಂತಿದೆ. ಆ ಕವನದ ಕೆಲವು ಸಾಲುಗಳು
“ಕೋಟಿಜನರ ಪಾಲಿಗೆ ರಾಜರತ್ನ ನೀನಾದೆ
ಅಸಹಾಯಕ ಅಬಲೆಯರಿಗೆ ಕಣ್ಮಣಿಯಾದೆ
ರಾಜಕುಮಾರನಂತೆ ಇದ್ದರೂ ಮೆರೆಯಲಿಲ್ವ
ಉಪಕಾರಕೆ ಪ್ರತಿಯಾಗಿ ಅಪಕಾರಿಯಾಗಿಲ್ಲ”
ಪ್ರೀತಿ ಪ್ರೇಮ ಪ್ರಣಯಭಾವ ಎಂದರೆ ಮಧುವಿನಂತೆ ಮಧುರ ಹೂವಿನಂತೆ ಕೋಮಲ ಮಂಜಿನಂತೆ ಶೀತಲ . ಅಂತಹ ಕೋಮಲ ಶೀತಲ ಭಾವದ ಕವನಗಳು. ಈ ಕೃತಿಯಲ್ಲಿ ಸಾಕಷ್ಟಿವೆ. ಅವುಗಳಲ್ಲಿ “ಶೀತಲತೆ” ಮೈಸೂರು ಮಲ್ಲಿಗೆ ಹಾಗೂ ಅಭಿಲಾಷೆ ಕವನಗಳು ಗಮನ ಸೆಳೆಯುತ್ತವೆ. ಅಭಿಲಾಷೆ ಕವನದ ಸಾಲುಗಳನ್ನು ನೋಡಿ
“ಮೌನಕೂ ತಿಳಿದಿಹುದು ನಿನ್ನ ವಿಳಾಸವು”
“ಆತ್ಮಗಳ ಮಿಲನಕೆ ತಡೆಯೊಡ್ಡುವುದು ತರವೇ
ಭಾವಬಂಧನದ ಸಂಗಮಕೆ ಆಣತಿ ಬೇಕಿಹುದೇ
ಸೃಷ್ಟಿಸಿದ ಬ್ರಹ್ಮನೇ ಬೆಸೆದಿರುವ ಬ್ರಹ್ಮಗಂಟಿಗೆ
ತಲೆದೂಗಲೇಬೇಕು ಭಗವಂತನ ಅಭಿಲಾಷೆಗೆ”
ಕೊನೆಯದಾಗಿ ಗುಪ್ತಗಾಮಿನಿ ಕವನದಲ್ಲಿ ಲೇಖಕಿ ಹೇಳಿರುವ ಸಾಲುಗಳನ್ನು ನೋಡಿ
“ಸುಪ್ತ ಸಂಧಿಗ್ಧ ತಿರುವುಗಳ ಸ್ವೀಕರಿಸಬೇಕೆಲ್ಲರೂ. ಆಶಾಭಾವದಲೆಗಳ ಜೊತೆ ಸಾಗಬೇಕೆಲ್ಲರೂ” ಹೀಗೆ ಆಶಾಭಾವದೊಂದಿಗೆ ಲೇಖಕಿ ಶೀತಲ್ ಹೆಗಡೆಯವರ ಸಾಹಿತ್ಯ ಯಾನ ಸುಗಮವಾಗಿ ಸಾಗಲಿ ಎಂದು ಹಾರೈಸುವೆ.
- ಪದ್ಮನಾಭ. ಡಿ
