ಅಹಲ್ಯೆಯ ಶಾಪ ವಿಮೋಚನಾಗೈದ ಮಹಾಮಹಿಮ ನಮ್ಮ ರಾಮ…ಕವಿ ರಶ್ಮಿ ಪ್ರಸಾದ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ರಾಮನೆಂದರೆ ಪಿತೃವಾಕ್ಯ ಪರಿಪಾಲನೆಯ ನಿದರ್ಶನ
ಸತ್ಯಾದರ್ಶಗಳ ರಾಜನೀತಿ ರಾಜಧರ್ಮದ ಪ್ರದರ್ಶನ
ಮಾದರಿ ಬದುಕಿನ ಸಂಸ್ಕೃತಿ ಸಂಸ್ಕಾರಗಳ ದಿಗ್ದರ್ಶನ
ಜೀವ-ಜೀವನಗಳ ಸತ್ವ ತತ್ವಗಳ ಮೇರು ಸಂಕೀರ್ತನ.!
ಅಪ್ರತಿಮ ಭ್ರಾತೃತ್ವದ ಬಂಧ ಸಾಕ್ಷೀಕರಿಸಿದ ದಿವ್ಯಜೀವ
ಅಪೂರ್ವ ಸ್ನೇಹಬಂಧ ಪುಷ್ಠೀಕರಿಸಿದ ಮಹಾನುಭಾವ
ಅನನ್ಯ ದಾಂಪತ್ಯಾನುಬಂಧ ನಿರೂಪಿಸಿದ ಪ್ರೇಮದೈವ
ಸಕಲ ಋಷಿಮುನಿ ಜನರ ಸೇವೆಗೈದ ದೇವಾನುದೇವ.!
ಅಹಲ್ಯೆಯ ಶಾಪ ವಿಮೋಚನಾಗೈದ ಮಹಾಮಹಿಮ
ಶಬರಿ ಎಂಜಲಫಲವನೂ ಸ್ವೀಕರಿಸಿದ ಕಾರುಣ್ಯಧಾಮ
ಜಟಾಯುವಿಗೆ ಮೋಕ್ಷ ದಯಪಾಲಿಸಿದ ಚೈತನ್ಯಧಾಮ
ಸುಗ್ರೀವನ ತಲೆಕಾಯ್ದು ಹರಸಿದ ವೀರ ಪುರುಶೋತ್ತಮ.!
ಅಹಿರಾವಣ ಮಹಿರಾವಣ ಕುಂಭಕರ್ಣರ ಸಂಹಾರಕ
ದೈತ್ಯದಶಕಂಠ ಲಂಕೇಶನ ಶಿರತರಿದ ಅಸುರಕುಲಾಂತಕ
ದುಷ್ಟಶಿಕ್ಷಕ ಶಿಷ್ಟರಕ್ಷಕನಾಗಿ ಮೆರೆದ ಧರ್ಮ ಸಂಸ್ಥಾಪಕ
ಧರಣಿಯಾಳುತ ತ್ರೇತಾಯುಗ ಬೆಳಗಿದ ರಘುಕುಲತಿಲಕ.!
- ರಶ್ಮಿ ಪ್ರಸಾದ್ (ರಾಶಿ)
