ನನ್ನ ತನುವ ತೇರಿನಲಿ ಅವನ ನಿತ್ಯ ಜೀವಯಾತ್ರೆ ….ಅಯೋಧ್ಯಾಧಿಪ ದಶರಥ ತನಯ ಕೌಸಲ್ಯಾನಂದನನು ಪ್ರಜಾವತ್ಸಲನಿವನು…ಕವಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ರಾಮಾರಾಮದಲಿ ತಂಗಿರುವೆ ನಾ
ಭವದ ಹಂಗು ತೊರೆದು
ನೀಲಮೇಘವರ್ಣ ಕಾಂತಿಯಲಿ
ಎನ್ನ ತಮವ ತೊಳೆದು//
ಘನವಿಪಿನದಾ
ಬಾಳ ಹಾದಿಯಿದು
ಭಾರ್ಗವರಾಮನಿರಲು
ಭಯವೆಲ್ಲಿಯದು//
ಮೊರೆವ ರಕ್ಕಸರರೆಲ್ಲ
ಅಡಗಿಹೋಗಿಹರು
ರಾಮನಿರವ ತಿಳಿದು
ಜೀವಭಯವ ತಳೆದು//
ನನ್ನ ರಾಮನವ
ಅಭಯನೀಡುವ
ಸಕಲ ಜೀವಸಂಕುಲಕೆ
ಅದು ಅವನ ಹೆಗ್ಗಳಿಕೆ//
ನನ್ನ ತನುವ ತೇರಿನಲಿ
ಅವನ ನಿತ್ಯ ಜೀವಯಾತ್ರೆ
ಕ್ಷಣಿಕ ನನ್ನ ಬಾಳಿದು
ಅವನೆ ಬರೆದ ಕವಿತೆ//
ಅಯೋಧ್ಯಾಧಿಪ
ದಶರಥ ತನಯ
ಕೌಸಲ್ಯಾನಂದನನು
ಪ್ರಜಾವತ್ಸಲನಿವನು//
ಲಕ್ಷ್ಮಣಾಗ್ರಜ
ಭರತ ಸೇವಿತ
ಸೀತಾಪತಿ ತಾನು
ಮುನಿಜನಪ್ರೀತನು//
ರಾಮನವಮಿಯ
ನವರಾತ್ರಿಯಲಿ
ನಿತ್ಯಾರ್ಚನೆ ನಿನಗೆ
ಧ್ಯಾನದ ಸುಖವೆಮಗೆ//
ಗುಣಾದರ್ಶಗಳ ಖನಿ
ಅವತರಿಸಿದೆ ನೀ ಸುಗುಣಿ
ಮರ್ಯಾದಾ ಪುರುಷೋತ್ತಮ
ಬಾಳ ಪಥಕೆ ಬೆಳಕನು ಚೆಲ್ಲಿ//
ಹರಸುತ ಕಾಯಲು
ನಿನ್ನಯ ಪೌರುಷ
ಬಾಳಿದು ಬುವಿಯಲಿ
ನಮಗೆ ನಿಶ್ಚಿಂತ//
ನೆಲೆಸು ಸತತ
ಹೃದಯದ ಪೀಠದಿ
ಹನುಮ ಸೀತಾ ಲಕ್ಷ್ಮಣ
ಬಳಗದ ಸಹಿತ//
*
ಎಲ್ಲರಿಗೂ ಶ್ರೀರಾಮನವಮಿಯ
ಹಾರ್ದಿಕ ಶುಭಾಶಯಗಳು!
- ಶಿವದೇವಿ ಅವನೀಶಚಂದ್ರ –ಕವಿ, ಲೇಖಕಿ, ಕೊಡಗು
