ರಂಗಭೂಮಿ ಯಾರ ಮಾಧ್ಯಮ

ಲೇಖನ – ಹೂಲಿ ಶೇಖರ್

email- aakritikannada@gmail.com

ಕನ್ನಡ ರಂಗಭೂಮಿಗೆ ಮೂರು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಇರೋದನ್ನ ಕೇಳಿ ತಿಳಿದಿದೀವಿ. ಇಷ್ಟು ಕಾಲದ ಈ ಇತಿಹಾಸದೊಳಗ ಕನ್ನಡ ರಂಗಭೂಮಿ ಅನೇಕ ಸ್ತರಗಳನ್ನ, ಅನೇಕ ಪದರುಗಳನ್ನ, ಅನೇಕ ರೂಪಗಳನ್ನ, ಅಷ್ಟೇ ಅಲ್ಲ. ಅನೇಕ ಬದಲಾವಣೆಗಳನ್ನ ದಾಟಿ ಬಂದಿದೆ. ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಕೆಲವು ಸಂಗತಿಗಳನ್ನ ನಾವು ನೆನಪಿಸಿಕೊಳ್ಳಲೇಬೇಕು. ಅವುಗಳಲ್ಲಿ ನಾಳ್‌ ಪಗರಣಗಳು, ಗೊಟ್ಟಿಗಳು, ಹಗಲುವೇಷ, ತೊಗಲುಬೊಂಬೆಯಾಟ, ಸಂಸ್ಕೃತ ನಾಟಕಗಳು, ಜಾನಪದ ಬಯಲಾಟಗಳು, ಪೌರಾಣಿಕ ನಾಟಕಗಳು, ಪಾರಿಜಾತ, ಸಣ್ಣಾಟಗಳು, ಅಥವಾ ದಪ್ಪಿನಾಟಗಳು, ನಂತರ ಸಾಮಾಜಿಕ ವೃತ್ತಿ ಕಂಪನಿ ನಾಟಕಗಳು, ಹವ್ಯಾಸಿ ನಾಟಕಗಳು ಮತ್ತು ಆಧುನಿಕ ಹವ್ಯಾಸಿ ನಾಟಕಗಳು, ಅಸಂಗತ ನಾಟಕಗಳು, ಬೀದೀ ನಾಟಕಗಳು, ರೂಪಕ ನೃತ್ಯ ನಾಟಕಗಳು ಹೀಗೆ ರಂಗಭೂಮಿ ತನ್ನ ರೂಪ-ವಿಸ್ತಾರವನ್ನ, ಕಾಲಕಾಲಕ್ಕೆ ಬದಲಾಯಿಸಿಕೊಂಡು ಬಂದಿರೋದನ್ನ ನಾವು ಗಮನಿಸಿದೀವಿ.

ಇದು ಒಟ್ಟಾರೆ ರಂಗಭೂಮಿಯ ಪ್ರದರ್ಶನಗಳ ಬಗ್ಗೆ ಮಾತಾಡುವಾಗ ಹೇಳಬಹುದಾಂಥದ್ದು. ಆದ್ರೆ ರಂಗ ಪಠ್ಯದ ಬಗ್ಗೆ ಹೇಳುವಾಗ ಮಾತ್ರ ನಾವು ಇಂಥ ಸಮೃದ್ಧತೆಯನ್ನು ಹೇಳೋದಕ್ಕೆ ಆಗೋದಿಲ್ಲ. ಯಾಕಂದ್ರೆ ಕನ್ನಡಕ್ಕೆ ರಂಗಭೂಮಿ ಬಂದ ಎರಡು ಸಾವಿರ ವರ್ಷಗಳ ನಂತರ ರಂಗ ಪಠ್ಯ ಬಂದಿತು ಅನ್ನೋದನ್ನ ಇಲ್ಲಿ ಗಮನಿಸಬೇಕು. ಹಾಗಿದ್ರೆ ಕನ್ನಡ ರಂಗಭೂಮಿಯಲ್ಲಿ ನಾಟಕ ಸಾಹಿತ್ಯ ಮೊದಲು ಇರಲಿಲ್ಲವೆ ಎಂದರೆ ಅದು ಕಾವ್ಯರೂಪದ, ಕಥಾನಕ ರೂಪದಲ್ಲಿ ಇತ್ತು ಎಂದು ಹೇಳಬಹುದು. ಇಂದು ಸಾಹಿತ್ಯ ಪ್ರಾಕಾರಗಳಲ್ಲಿ ನಾಟಕವೂ ಒಂದು ಪ್ರಾಕಾರ ಎಂದು ಹೇಳಿ ಸುಮ್ಮನಾಗಿಬಿಡುತ್ತೇವೆ. ಆದರೆ ಎಲ್ಲಾ ಸಾಹಿತ್ಯ ಪ್ರಾಕಾರಗಳ ಮೂಲ ನಾಟಕ ಎಂಬುದನ್ನು ಮರತೇಬಿಡುತ್ತೇವೆ. ಅಥವಾ ಅಸಡ್ಡೆ ತೋರುತ್ತೇವೆ. ಜಾಣ ಕುರುಡುತನ ತೋರಿಸ್ತೀವಿ. ಕಾಳಿದಾಸನನ್ನು ಮಹಾ ಕವಿ ಎಂದು ಹೇಳುವ ನಾವು ಅವನೊಬ್ಬ ಮಹಾನಾಟಕಕಾರ ಎಂದು ಯಾಕೆ ಕರೆಯುವುದಿಲ್ಲ ಹೇಳಿ. ಕಾವ್ಯೇಷು ರಮ್ಯಂ ನಾಟಕಂ ಎಂದು ಸ್ವತಃ ಕಾಳಿದಾಸನೇ ಹೇಳಿದರೂ ನಾವು ಅದನ್ನು ಅಲ್ಲಲ್ಲಿ ಹಾಗೇ ತಟ್ಟಿ ಮಲಗಿಸುತ್ತೇವೆ. ಕಾವ್ಯ ಪ್ರಾಕಾರದಲ್ಲಿ ನಾಟಕ ಸಾಹಿತ್ಯವೇ ಶ್ರೇಷ್ಠ ಪ್ರಾಕಾರ ಎಂಬುದನ್ನು ಅರಗಿಸಿಕೊಳ್ಳುವುದಕ್ಕೆ ಇಂದಿನ ಕವಿಗಳಿಗೆ ಆಗುತ್ತಿಲ್ಲ. ಇವತ್ತಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗೋಷ್ಠಿಗಳು ಧಂಡಿಯಾಗಿ ಇದ್ದಷ್ಟು ಅಲ್ಲಿ ನಾಟಕಕ್ಕೆ ಶಾಸ್ತ್ರಕ್ಕೂ ಗೋಷ್ಠಿಗಳಿಗೆ ಅವಕಾಶ ಇರೋದಿಲ್ಲ. ಈ ನ್ಯೂನ್ಯತೆಯನ್ನು ಯಾರೂ ಪ್ರಶ್ನಿಸುವುದಿಲ್ಲ. ಪ್ರಶ್ನಿಸಿದರೂ ಉತ್ತರಿಸುವುದಕ್ಕೆ ಯಾರೂ ಇರೋದಿಲ್ಲ. ಇದು ನಾಟಕ ಸಾಹಿತ್ಯವನ್ನು ಕಡೆಗಣಿದ್ದು ಮೇಲ್ನೋಟಕ್ಕೇ ಕಾಣುವ ಸಂಗತಿ.

ನಾಟಕ ಸಾಹಿತ್ಯ ಹುಟ್ಟಿಕೊಂಡಿದ್ದು ಮೊದಲು ಸಂಸ್ಕೃತದಲ್ಲಿ. ಭಾಸ, ಕಾಳಿದಾಸರಿಂದ ಆರಂಭವಾದ ಈ ರಚನಾ ಪ್ರಯತ್ನಗಳು ಮುಂದೆ ಹಳೆಗನ್ನಡದಲ್ಲಿ, ನಂತರ ನಡುಗನ್ನಡದಲ್ಲಿ, ಆನಂತರ ಆಡುಗನ್ನಡದಲ್ಲಿ-ರೂಢಿಗನ್ನಡದಲ್ಲಿ ನಾಟಕ ಸಾಹಿತ್ಯದ ಪರಂಪರೆ ಮುದುವರೀತಾ ಬಂತು.

ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಏನಂದರೆ ನಾಟಕಗಳನ್ನು ಬರೆಯುತ್ತಿದ್ದವರನ್ನು ಯಾರೂ ನಾಟಕಕಾರರು ಎಂದು ಕರೆಯುತ್ತಿರಲಿಲ್ಲ. ಆಗೆಲ್ಲ ಅವರಿಗೆ ಕವಿಗಳೆಂದೇ ಕರೆಯುತ್ತಿದ್ದರು. ಅದರರ್ಥ ನಾಟಕ ಬರೆಯುವವರು ಕವಿಗಳೇ ಹೊರತು ಭಾಷ್ಯ ಬರೆಯುವ ಪಂಡಿತರಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು.

ನಾಟಕ ಬರೆಯದವ ಕವಿಯೇ ಅಲ್ಲ. ಹಾಗೆಯೇ ಕವಿಯಾಗದವ ನಾಟಕಕಾರನೇ ಅಲ್ಲ ಎಂಬುದು ಸಾಮಾನ್ಯ ತಿಳುವಳಿಕೆ ಆಗಿತ್ತು.

ಅದರಂತೆ ಮುಂದೆ ನಾಟಕಗಳನ್ನು ರಚಿಸಿದವರು ಕವಿಗಳೆಂದೇ ಪ್ರಸಿದ್ಧರಾದರು. ನಾಟಕ ಸಾಹಿತ್ಯ ಕಾವ್ಯ ಪ್ರಾಕಾರದ ಒಂದು ಭಾಗ ಅಂತ ಕರೆದದ್ದೂ ಸುಳ್ಳಲ್ಲ. ಕಾವ್ಯ ಪ್ರಾಕರಾದಲ್ಲಿ ನಾಟಕವು ರಮ್ಯವಾದದ್ದು ಎಂದೂ ಹೆಸರು ಹೇಳಿದರು. ಕಾವ್ಯೇಷು ರಮ್ಯಂ ನಾಟಕಂ ಎಂದು ಹೇಳಿದ್ದೂ ಅದಕ್ಕೆ ಪೂರಕವಾಗಿಯೇ. ನಾಟಕ ಬರೆಯುವವರನ್ನು ಕವಿಗಳೆಂದು ಕರೆಯು ರೂಢಿ ಇತ್ತೀಚಿನ ಕಂಪನಿ ನಾಟಕಗಳ ಕಾಲಕ್ಕೂ ಸಾಗಿಬಂದದ್ದನ್ನ ನಾವು ನೋಡ್ತೀವಿ. ಸಂಸ್ಕೃತ ನಾಟಕಗಳಲ್ಲಿ ಹುಟ್ಟಿಕೊಂಡ ಕಾವ್ಯ ಮುಂದೆ ಭಾಷೆಯ ಬದಲಾವಣೆ ಕಾಲಗಳಲ್ಲೂ ನಾಟಕ ಸಾಹಿತ್ಯವಾಗಿ ಮುಂದುವರೆದ್ದನ್ನು ಕಾಣ್ತೀವಿ. ಮತ್ತುಅದು ಪೌರಾಣಿಕ ಮತ್ತು ಚಾರಿತ್ರಿಕ ನಾಟಕಗಳಲ್ಲೂ ಮುಂದುವರೆದ ಭಾಗವಾಗಿರೋದನ್ನ ನಾವು ಕಾಣ್ತೀವಿ.

ಇಲ್ಲಿ ನಾಟಕಗಳ ಭಾಷೆ ಆಯಾ ಕಾಲದ ಶಿಷ್ಟ ಮತ್ತು ಪಾಂಡಿತ್ಯಪೂರ್ಣ ಭಾಷೆಯನ್ನ ರೂಢಿಸಿಕೊಂಡು ರಚನೆಯಾಗಿವೆ. ಮತ್ತು ಅಂಥ ಭಾಷೆಗಳಲ್ಲಿಯೇ ನಾಟಕ ರಚನೆಗಳು ನಡೆದವು. ಆಗ ನಾಟಕದ ಸೂತ್ರಧಾರನೆಂದರೆ ನಿರ್ದೇಶಕನೇ ಆಗಿರುತ್ತಿದ್ದ. ಅತನೇ ರಂಗಕ್ಕೆ ಬಂದು ನಾಟಕ ಪ್ರಯೋಗವನ್ನ ನಡೆಸಿಕೊಡ್ತಾ ಇದ್ದ. ಮತ್ತು ಸಾಹಿತ್ಯ ದೋಷಗಳನ್ನು ಕೈಬಿಟ್ಟು ಪ್ರಯೋಗ ಶುದ್ಧತೆಯತ್ತ ಗಮನ ಕೊಡುವವನೂ ಆತನೇ ಆಗಿದ್ದ.

ಅದರಿಂದ ನಾಟಕಕಾರ ಪಠ್ಯದಲ್ಲಿ ಏನ್‌ ಬರೆದಿದಾನೋ ಅದು ಯಥಾವತ್‌ ಆಗಿ ಭಕ್ತಿಯಿಂದ ಪ್ರಯೋಗಿಸುವ ಕಾಲ ಇತ್ತು. ಅದರಿಂದ ಕವಿಗೆ ಅಂದರೆ ನಾಟಕಕಾರನಿಗೆ ದೊಡ್ಡ ಮರ್ಯಾದೆಯೇ ಆಗ ಇತ್ತು. ಇದನ್ನು ನಾವು ಪೌರಾಣಿಕ-ಬಯಲಾಟ ಪರಂಪರೆಯಲ್ಲಿ ಕಾಣಬಹುದು. ನಾಟಕಕಾರ ಬರೆದುದನ್ನು ಪ್ರತಿ ಮಾಡಿಕೊಂಡು ಅದನ್ನೇ ನಟರಿಗೆ ಚೋಪಡಿ ಮಾಡಿಕೊಳ್ಳಲು ಹೇಳ್ತಾ ಇದ್ರು. ಈ ಚೋಪಡಿಗಳೇ ಅವತ್ತಿನ ಬರಹ ರೂಪದ ಕಥಾನಕಗಳು. ಇಂಥ ಚೋಪಡಿಗಳನ್ನು ಪ್ರತಿ ಮಾಡಿಕೊಳ್ಳುವಾಗ ಬದಲಾವಣೆಗಳೂ ಆಗುತ್ತಿದ್ದು ಮೂಲ ಹೇಗಿತ್ತು ಅಂತ ಹೇಳುವುದೂ ಕಷ್ಟವಾಗುತ್ತಿತ್ತು.

ಯಕ್ಷಗಾನದಲ್ಲಿ ಈ ಬದಲಾವಣೆ ಇನ್ನೊಂದು ರೂಪದಲ್ಲಿ ಆಗುತ್ತಿತ್ತು ಈಗಲೂ ಆಗುತ್ತಿದೆ. ಇಲ್ಲಿ ಶಿಷ್ಟರೂ, ಜ್ಞಾನವಂತರೂ, ವಾಕ್‌ಪಟುಗಳೂ ಆದ ನಟರೂ ಇರೋದ್ರಿಂದ ಮೂಲ ರಚನೆಕಾರನ ಸಾಹಿತ್ಯವು ಪ್ರದರ್ಶನ ಹಂತದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತ ಬರುತ್ತಿದೆ. ಮೊದಲು ಈ ಬದಲಾವಣೆ ಈಗಿನಷ್ಟಿರಲಿಲ್ಲ. ರಚನೆಕಾರನ ಸಾಹಿತ್ಯವನ್ನು ಕೇಂದ್ರವಾಗಿಟ್ಟುಕೊಂಡು ನಟರಾದವರೇ ಪ್ರಯೋಗ ಹಂತದಲ್ಲಿ ಅದನ್ನು ಬದಲಾವಣೆ-ವಿಸ್ತರಣೆ ಮಾಡ್ತಾ ಇರೋದನ್ನು ಗಮನಿಸಬೇಕು. ಇದರಿಂದ ಮೂಲ ಲೇಖಕನ ಸಾಹಿತ್ಯ ಬೇಗ ಕೈಗೇ ಸಿಗುವುದಿಲ್ಲ. ಅದನ್ನು ಮೂಲದಲ್ಲಿಯೇ ಹುಡುಕಬೇಕು. ಯಕ್ಷಗಾನದಲ್ಲಿ ಪಾಂಡಿತ್ಯ ಪೂರ್ಣ ಚುರುಕಾದ ವಾಕ್ಯ ರಚನೆ ನೋಡುಗರನ್ನು ಸೆಳೆಯುತ್ತಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಅನಕ್ಷರಸ್ಥರೇ ಹೆಚ್ಚು ಇರೋದ್ರಿಂದ ಯಕ್ಷಗಾನದ ಶಿಷ್ಟ ಭಾಷೆ ಅವರಿಗೆ ಹೆಚ್ಚು ಅರ್ಥವಾಗದೆ ಅವರು ಬಯಲಾಟದ ಕಡೆಗೆ ವಾಲಿದರು. ಮತ್ತು ಅಲ್ಲಿಯ ನಾಟಕ ರಚನೆಕಾರರು ದೊಡ್ಡಾಟ ಪರಂಪರೆಯನ್ನು ಹುಟ್ಟು ಹಾಕಿದ್ದು ಗೊತ್ತಿರುವ ಸಂಗತಿ. ಇಲ್ಲಿಯೂ ಕೂಡ ಮೂಲ ರಚನೆಗಳು ಕೈ ಬರಹದಲ್ಲಿ ಪ್ರತಿ ಮಾಡಿಕೊಳ್ಳುವಾಗ ಬದಲಾಗುತ್ತ ಹೋದದ್ದೂ ತಿಳಿಯುತ್ತದೆ. ಇಂಥ ಬದಲಾವಣೆಗಳು ಸಣ್ಣಾಟಗಳನ್ನೂ ಬಿಟ್ಟಿಲ್ಲ. ಸಂಗ್ಯಾ-ಬಾಳ್ಯಾ ಸಣ್ಣಾಟ ಬರೆದ ಪತ್ತಾರ ಮಾಸ್ತರನ ಮೂಲ ಪ್ರತಿಯು ಚೋಪಡಿ ಮಾಡಿಕೊಳ್ಳುವ ಹಂತದಲ್ಲಿ ಅನೇಕ ಬದಲಾವಣೆಯನ್ನು ಕಂಡಿದೆ. ಅದು ಮೂಲ ಲೇಖಕನ ಸಾಹಿತ್ಯದ ವಿಸ್ತರಣೆ ಎಂದು ನಾವು ಭಾವಿಸ ಬಹುದು.

ಆದರೆ ವೃತ್ತಿ ನಾಟಕ ಕಂಪನಿಗಳು ನಾಟಕ ಬರೆದ ಕವಿಗೆ ಹೆಚ್ಚು ನಿಷ್ಠರಾಗಿದ್ದು ದೃಶ್ಯಗಳು ಎಲ್ಲಿಯೂ, ಸಂಭಾಷಣೆಗಳು ಬದಲಾಗುತ್ತಿರಲಿಲ್ಲ. ಯಾಕಂದ್ರೆ ಇಲ್ಲಿಯ ನಟರು ಹೆಚ್ಚು ಕಲಿತವರಾಗಿರಲ್ಲಿಲ್ಲ. ಅವರ ಓದು ಎರಡು ಮೂರನೇ ತರಗತಿಗೇ ನಿಂತಿರುತ್ತಿತ್ತು. ನಾಟಕದ ಕವಿ ಬರೆದದ್ದನ್ನು ಅಷ್ಟೇ ಗೌರವದಿಂದ ಓದಿ, ಲೀಲಾ ಜಾಲವಾಗಿ ಅಭಿನಯಿಸಿ ತೋರಿಸುವ ಪ್ರತಿಭೆ ಅವರದಾಗಿತ್ತು. ಮತ್ತು ನಾಟಕ ಬರೆದ ಕವಿಯ ಹೆಸರನ್ನು ಮುಂದಿಟ್ಟುಕೊಂಡೇ ಆಡ್ತಾ ಇದ್ರು. ಆಗಿನ ನಾಟಕಕಾರರು ನವರಸಗಳನ್ನು ಇಟ್ಟುಕೊಂಡೇ ಸಾಮಾಜಿಕ ನಾಟಕ ಬರೀತಾ ಇದ್ರು. ಇವರ ಕಥಾ ಹಂದರಗಳು ಎಲ್ಲಿಯೂ ಬದಲಾವಣೆ ಮಾಡದಷ್ಟು ರಚನಾ ಬಂಧದಲ್ಲಿ ಗಟ್ಟಿ ಆಗಿರುತ್ತಿದ್ದವು. ಹಾಗಾಗಿ ಅಂದಿನ ಕಾಲದಲ್ಲಿ ಎಚ್‌.ಎನ್‌.ಹೂಗಾರ, ಭಸ್ಮೆ, ಮಾಂಡ್ರೆ, ಜೋಶಿ, ಕೀರಣಗಿ, ಮುಂತಾದವರು ಒಂದು ಕಾಲದ ದೊಡ್ಡ ನಾಟಕಕಾರರಾಗಿ ಉಳಿಯೋದಕ್ಕೆ ಕಾರಣ ಆಯ್ತು. ಪೌರಾಣಿಕ ನಾಟಕ ರಚನೆಯಲ್ಲಿ ಕಂದಗಲ್ಲ ಹನುಮಂತರಾಯರು, ಮತ್ತು ಬಿ.ಪುಟ್ಟಸ್ವಾಮಯ್ಯನವರನ್ನು ಸರಿಗಟ್ಟುವ ಕವಿಗಳೇ ಇರಲಿಲ್ಲ. ಇವರೆಲ್ಲರ ಹೆಸರು ಉಳಿಯಲು ದೊಡ್ಡ ಕಾರಣ ಅಂದ್ರೆ ಅವರ ಕೃತಿಗಳು ಹೆಚ್ಚು ಬದಲಾವಣೆ ಇಲ್ಲದೆ ರಂಗದಲ್ಲಿ ಪ್ರಯೋಗಗೊಳ್ತಾ ಇದ್ದವು. ಅನ್ನುವುದೇ ಕಾರಣವಾಗಿದೆ.

ಆದರೆ ಇತ್ತೀಚಿನ ಆಧುನಿಕ ರಂಗಭೂಮಿಯಲ್ಲಿ ನಿರ್ದೇಶಕನ ಹಸ್ತಕ್ಷೇಪ ಅತಿಯಾಗಿ ಪ್ರಯೋಗವೆಂದರೆ ಸಿದ್ಧ ನಾಟಕವನ್ನು ಮುರಿದು ಕಟ್ಟುವುದೇ ಆಗಿದೆ. ಅದಕ್ಕೆ ಕಾರಣ ತಾಂತ್ರಿಕತೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು, ತೀವ್ರಸ್ಪರ್ಧೆಗಳು. ನಿರ್ದೇಶಕ ಇಲ್ಲಿ ನಟನನ್ನು ಟೂಲ್ಸಿನಂತೆ ಬಳಸಿಕೊಳ್ಳುತ್ತಿರುವುದು ಮತ್ತು ಕೊನೆಯಲ್ಲಿ ಇದು ನಿರ್ದೇಶಕನ ರಂಗಭೂಮಿ ಎಂದು ಹೇಳಿಕೊಳ್ಳುವುದೇ ಆಗಿದೆ. ಹಾಗೆ ನೋಡಿದರೆ ಇದು ನಾಟಕಕಾರ ಮತ್ತು ನಟನ ಕ್ಷೇತ್ರವಾಗಬೇಕಿತ್ತು. ಹಿಂದೆಲ್ಲ ನಿರ್ದೇಶಕ ಎಂಬ ಪದವೇ ನಾಟಕಕ್ಕಿರಲಿಲ್ಲ. ನಾಟಕದ ಮಾಸ್ತರು ಇದ್ದರು. ಕವಿಯ ಆಶಯವನ್ನು ಇವರೇ ಸಾಕಾರಗೊಳಿಸುತ್ತಿದ್ದರು. ಆದರೆ ಮುಂದೆ ಇವರೇ ಈವೆಂಟ ಮ್ಯಾನೇಜರುಗಳೂ ಆದರು.

ಎಲ್ಲ ಕ್ಷೇತ್ರಗಳಲ್ಲಿರುವಂತೆ ರಂಗ ಭೂಮಿಯಲ್ಲೂ ಬದಲಾವಣೆ ಆಗುತ್ತ ಬಂದಿವೆ. ಈಗ ನಾಟಕ ರಚನೆ ಪ್ರಯೋಗದ ಒಂದು ಭಾಗವಾಗಿ ಅದನ್ನು ಜೋಡಿಸುವ ಸೂತ್ರಧಾರನ ಕೈಗೆ ಸಿಕ್ಕ ಎಳೆಯಾಗಿ ಹೋಗಿದೆ. ನಟನೆ, ತಾಂತ್ರಿಕತೆ, ಸಂಗೀತ ಮತ್ತು ನಾಟಕ ರಚನೆ ಈ ಸೂತ್ರಕ್ಕೆ ಸಿಕ್ಕ ಕೊಂಡಿಗಳಾಗಿವೆಯಷ್ಟೇ. ನಾಟಕ ಸಾಹಿತ್ಯ ಅನ್ನುವುದು ಒಂದು ಸ್ಪಾರ್ಕ ಲೈಟ್‌ ಅಷ್ಟೇ. ಇದು ಬದಲಾಗದಿದ್ದರೆ ಮುಂದೆ ಒಂದಿನ ನಾಟಕ ಸಾಹಿತ್ಯವೇ ಇರದೆ ಅದೊಂದು ಸಮೂಹ ಸೃಷ್ಟಿಯಾಗಿ ಸ್ಪಾರ್ಕಗಳು ಹುಟ್ಟದೆ ಮಂದ ಬೆಳಕಿನಲ್ಲಿ ತಡಕಾಡುವ ಸ್ಥಿತಿಯೂ ಬರಬಹದು ಎಂದು ನನಗನಿಸುತ್ತದೆ.

ಲೇಖನ – ಹೂಲಿ ಶೇಖರ್

email – aakritikannada@gmail.com

Home
News
Search
All Articles
Videos
About
%d bloggers like this:
Aakruti Kannada

FREE
VIEW