ನಾನು ಓದಿದ್ದೇನೆ. ಅದರಲ್ಲಿಯೂ ಡಬಲ್ ಗ್ರ್ಯಾಜುಯೆಟ್. ಆರು ವರ್ಷ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೇನೆ ಎನ್ನುವಾಗ ನನ್ನಲ್ಲಿದ್ದ ಅಹಂಕಾರಕ್ಕೆ ಎಣೆ ಎನ್ನುವುದೇ ಇರಲಿಲ್ಲ. ಆದರೆ ಆ ಅಹಂಕಾರವನ್ನೆಲ್ಲ ತೊಡೆದು ಹಾಕಿದ್ದು ಮತ್ಯಾರು ಅಲ್ಲ ‘ಗೃಹಿಣಿ’ ಎನ್ನುವ ಪಟ್ಟ. ಗೃಹಿಣಿಗೂ, ನನ್ನ ಅಹಂಕಾರಕ್ಕೂ ಏನಿರಬಹುದು ಸಂಬಂಧ ಎಂದು ನೀವೆಲ್ಲ ಯೋಚಿಸುತ್ತಿರಬಹುದು. ಈ ಎರಡರ ನಡುವೆ ಗಾಢವಾದ ಸಂಬಂಧವಿದೆ. ಮದುವೆಯಾದ ಮೇಲೆ ಪತ್ರಿಕೋದ್ಯಮದಲ್ಲಿನ ಕೆಲಸವನ್ನು ಬಿಟ್ಟೆ. ಮನೆ-ಮಕ್ಕಳು-ಸಂಸಾರ ಎನ್ನುವ ನೌಕೆಯಲ್ಲಿ ನಾನು ಏನು? ಎನ್ನುವುದನ್ನೇ ಮರೆತು ಹೋದೆ. ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮಾಡು-ತಿಕ್ಕು- ತೋಳಿ, ಮಕ್ಕಳಿಗೆ ಪಾಠ ಮಾಡು, ಅವರಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅದರ ನೇರ ಹೊಣೆ ನಾನಾದೆ. ಮಾಡಿದ ಅಡುಗೆಯಲ್ಲಿ ಹುಳುಕು ಹುಡುಕಿ ಬಯ್ಯುವ ಗಂಡ-ಮಕ್ಕಳ ಮಧ್ಯೆ ಅಪ್ಪಟ ಗೃಹಿಣಿಯಾದೆ.
ಎದುರು ಮನೆಯ ಕವಿತಾ, ಪಕ್ಕದ ಮನೆ ವೀಣಾ ಕೆಲ್ಸಕ್ಕೆ ಹೋಗುವಾಗ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಕಣ್ಣುಗಳು, ನನ್ನ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು. ನನ್ನ ಸಂಬಂಧಿಗಳಲ್ಲಿ ಗೃಹಿಣಿ ಪಟ್ಟವನ್ನು ಅಲಂಕರಿಸಿದ್ದವರಲ್ಲಿ ನಾನೊಬ್ಬಳೇ ಎನ್ನುವಾಗ ಮನಸ್ಸು ಕುದಿಯುತ್ತಿತ್ತು. ಗೃಹಿಣಿ ಪಟ್ಟದಿಂದ ತಪ್ಪಿಸಿಕೊಂಡು ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದ ಎಷ್ಟೋ ನನ್ನ ಹತ್ತಿರದವರ ಚುಚ್ಚು ಮಾತುಗಳು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದವು. ಹೀಗೆ ಗೃಹಿಣಿ ಎನ್ನುವ ಪದ ದಿನೇ ದಿನೇ ನನ್ನ ಉಸಿರುಗಟ್ಟಿಸುತ್ತಿತ್ತು. ನಾನು ಕೂಡ ಎಷ್ಟೋ ಸಾರಿ ಗೃಹಿಣಿ ಪಟ್ಟದಿಂದ ತಪ್ಪಿಸಿಕೊಳ್ಳಲು ಶತ ಪ್ರಯತ್ನವನ್ನು ಮಾಡಿದ್ದೆ. ಆದರೆ ಅದ್ಯಾವುದೂ ಫಲಕಾರಿಯಾಗಲಿಲ್ಲ. ಕಾರಣವಾಗಿದ್ದು ಕುಟುಂಬದ ಜವಾಬ್ದಾರಿಗಳು. ಈ ಎಲ್ಲ ತೊಳಲಾಟದಲ್ಲಿ ಎಷ್ಟೋ ಸಾರಿ ಮನೆಯ ಪಾತ್ರೆಗಳೆಲ್ಲವೂ ನೆಗ್ಗಿ ಹೋಗಿದ್ದವು. ತುಂಬು ಸಂಸಾರದಲ್ಲಿದ್ದರೂ ಎಲ್ಲೋ ಒಂದು ಕಡೆ ಒಂಟಿತನವು ನನ್ನನ್ನು ಕಾಡುತ್ತಿತ್ತು.
ಹೀಗೆ ಜರ್ ಜರಿತವಾಗಿದ್ದ ನಾನು, ಅಲ್ಲ…ಅಲ್ಲ…’ಗೃಹಿಣಿ’ಗೆ ಆತ್ಮ ವಿಶ್ವಾಸವನ್ನು ತುಂಬಿದ್ದು ಈ ಕರೋನ್ ವೈರಸ್. ಗೃಹಿಣಿ ಎಂದು ಮೂಗುಮುರಿಯುತ್ತಿದ್ದವರೆಲ್ಲ ಕರೋನ್ ವೈರಸ್ ಹಲವಾರು ಪಾಠವನ್ನು ಹೇಳಿಕೊಟ್ಟಿದೆ.ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರಿಂದ ಹಿಡಿದು, ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ-ಪುರಷರ ಕೈಯಲ್ಲಿ ಸೌಟು ನೋಡಿದಾಗ ಎಲ್ಲಿಲ್ಲದ ಆನಂದ ಗೃಹಿಣಿಗೆ ಆಗುತ್ತದೆ. ಗೃಹಿಣಿ ಮಾಡಿದ ಅಡುಗೆಗೆ ಹೆಸರಿಡುತ್ತಿದ್ದವರೆಲ್ಲ ಈಗ ಸಿಕ್ಕಿದ್ದೇ ಪಂಚ ಭಕ್ಷ ಪರಮಾನ್ನ ಎಂದು ಊಟ ಮಾಡುತ್ತಿದ್ದಾರೆ. ಮನೆಯಲ್ಲಿ ಬಗ್ಗದ ಮೈ-ಕೈಗಳು ಇಂದು ಪಾತ್ರೆ ತೊಳೆಯುತ್ತಿವೆ, ನೆಲವರೆಸುತ್ತಿವೆ. ಮನೆಯೊಂದೇ ಅಲ್ಲ,ಈಡಿ ಜಗತ್ತೇ ‘ಗೃಹಿಣಿ’ಯಾಗಿ ಪ್ರತಿಯೊಬ್ಬರನ್ನು ಅಡುಗೆ ಮನೆಯಲ್ಲಿ ತಂದು ನಿಲ್ಲಿಸಿದೆ. ಗೃಹಿಣಿಯ ಮುಂದೆ ಸಾವಿರ-ಲಕ್ಷ-ಕೋಟಿ ಎಂದು ಅಹಂಕಾರದಿಂದ ಮೆರೆಯುತ್ತಿದ್ದವರ ಬಾಯಿ ಈಗ ಮುಚ್ಚಿದೆ. ಗಂಡ-ಮಕ್ಕಳು ಹೊರಗೆ ಹೋದಾಗ ಗೃಹಿಣಿಯ ಕೆಲಸ ಏನು? ಎಂದು ಪ್ರಶ್ನಿಸುವವರ ಬಾಯಿಗೆ ಕರೋನ ವೈರಸ್ ಬೀಗ ಜಡಿದಿದೆ.
(ಸಾಂದರ್ಭಿಕ ಚಿತ್ರ)
ಇಂದು ಇಡೀ ಜಗತ್ತು ಸ್ತಬ್ಧವಾಗಿ ಹೋಗಿದೆ. ಬಹುತೇಕ ಜನರು ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕೂತಿದ್ದಾರೆ. ಆದರೆ ಗೃಹಿಣಿ ಮಾತ್ರ ಯಾವ ಪರಿಸ್ಥಿತಿಗೂ ಜಗ್ಗದೆ ತನ್ನ ಕೆಲಸವನ್ನು ಎಂದಿನಂತೆ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಮನೆಯ ಸಾರಥಿಯಾಗಿ ನಿಂತಿದ್ದಾಳೆ. ಗೃಹಿಣಿ ಎಂದರೆ ಹೊರಗೆ ದುಡಿಯಲು ಸಾಮರ್ಥ್ಯವಿಲ್ಲದವಳು ಎಂದು ಅಪಹಾಸ್ಯ ಮಾಡುತ್ತಿದ್ದ ಕೆಟ್ಟ ದೃಷ್ಟಿಗಳು ಈಗ ಅಡುಗೆ ಮನೆಯಲ್ಲಿ ಕಂಗಾಲಾಗಿವೆ.
ಹೌದು…ಈಗ ನನಗೆ ಯಾವುದೇ ಸಂಕೋಚವಿಲ್ಲ. ನಾನೊಬ್ಬಳು ಅಪ್ಪಟ ಗೃಹಿಣಿ. ನನ್ನಲ್ಲಿ ಅದೇ ಅಹಂಕಾರ, ಅದೇ ಆತ್ಮವಿಶ್ವಾಸ ಮತ್ತೆ ಜಾಗೃತಗೊಂಡಿದೆ. ಜಗತ್ತಿಗೆ ಹೆಮ್ಮಾರಿಯಾಗಿ ನಿಂತಿರುವ ಕರೋನ್ ವೈರಸ್, ಗೃಹಿಣಿಯರ ಪಾಲಿಗೆ ಆಶಾ ಕಿರಣ ಮೂಡಿಸಿದ ಧ್ರುವತಾರೆಯಾಗಿದೆ.
ಪ್ರತಿಯೊಬ್ಬ ಗೃಹಿಣಿಯ ನಿಸ್ವಾರ್ಥ ಸೇವೆಗೆ ನನ್ನಪುಟ್ಟದೊಂದು ಲೇಖನದ ಮೂಲಕ ನಮನ ಹೇಳುತ್ತೇನೆ…
ಲೇಖನ : ಶಾಲಿನಿ ಹೂಲಿ ಪ್ರದೀಪ್