ನೇತಾಜಿ ಸುಭಾಷ್‍ಚಂದ್ರ ಬೋಸ್ ರವರ 125ನೇ ಜನ್ಮ ವಾರ್ಷಿಕ ನೇತಾಜಿಯವರ ರಾಣಿ ಝಾನ್ಸಿ ರೆಜಿಮೆಂಟ್ (RJR) ನೆನೆಯೋಣ! 12 ಜುಲೈ 2022 ಬೆಂಗಳೂರು – ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS).
“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”
“ಅನ್ಯಾಯ ಮತ್ತು ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ”
ಹೀಗೆ ಭಾರತೀಯರಿಗೆ ಕರೆ ಕೊಟ್ಟವರು ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿತ್ವದ ನೇತಾಜಿ ಸುಭಾಷಚಂದ್ರ ಬೋಸ್. ಅನುಪಮ ತ್ಯಾಗ, ಸಾಹಸಗಳ ಮೂರ್ತ ಸ್ವರೂಪರಾಗಿದ್ದ ಅವರು ಶೋಷಿತ – ಮರ್ದಿತ ಜನತೆಯ ಸ್ಫೂರ್ತಿಯ ಸೆಲೆ. ಅಪಾರ ಕಷ್ಟ ನಿಷ್ಟುರಗಳನ್ನೆದುರಿಸಿ ಸ್ವಾತಂತ್ರ್ಯದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿನ ರಾಜಿ ಇಲ್ಲದ ಹೋರಾಟದ, ಸಂಧಾನಾತೀತ ಪಂಥದ ಅಗ್ರಗಣ್ಯ ನಾಯಕರು.

ಫೋಟೋ ಕೃಪೆ : herzindagi
ನೇತಾಜಿ ಸುಭಾಷ್‍ಚಂದ್ರ ಬೋಸ್‍ರು ಜನಿಸಿದ್ದು 1897ರ ಜನವರಿ 23ರಂದು. ಅವರ 125ನೇ ಜನ್ಮ ವಾರ್ಷಿಕವನ್ನು ದೇಶದಾದ್ಯಂತ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಅತ್ಯಂತ ಗೌರವದಿಂದ ಆಚರಿಸುತ್ತಿದೆ. ಸುಭಾಷಚಂದ್ರ ಬೋಸ್ ಚಿಕ್ಕಂದಿನಿಂದಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ಅವರಿಗೆ ತಾವು ಓದುತ್ತಿದ್ದ ಮಿಶನರಿ ಶಾಲೆ ಮತ್ತು ಅಲ್ಲಿನ ವಾತಾವರಣ ಪರದೇಶಿ ಎನಿಸುತ್ತಿದ್ದ ಕಾರಣ, ಆ ಪುಟ್ಟ ಗುಂಡಿಗೆಯಲ್ಲೂ ಬಂಡಾಯದ ಬೆಂಕಿ ಹೊಗೆಯಾಡುತ್ತಿತ್ತು. ಶಾಲಾ-ಕಾಲೇಜು ಘಟ್ಟದಿಂದಲೇ ಅವರೊಬ್ಬ ಅಪ್ಪಟ ಮಾನವತಾವಾದಿ, ಹಾಗೂ ಸಮಾಜ ಸುಧಾರಕನಾಗಿ ಮಾರ್ಪಟ್ಟು, ಅಂತಿಮವಾಗಿ ರಾಜಕೀಯ ಸಂಘರ್ಷಕ್ಕೆ ಧುಮುಕಿದರು. 1919 ರಲ್ಲಿ ಪದವಿ ಶಿಕ್ಷಣ ಪೂರೈಸಿ, ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ನಿಮಿತ್ತ ಇಂಗ್ಲೆಂಡಿಗೆ ಹೊರಡುವ ವೇಳೆಗಾಗಲೇ, ಅವರಲ್ಲಿ ಒಂದು ವಿಶಿಷ್ಟ ವ್ಯಕ್ತಿತ್ವ ಮತ್ತು ಉದಾತ್ತ ಧ್ಯೇಯ ಧೃಡವಾಗಿ ನೆಲೆಗೊಂಡಿತ್ತು. ಭಾರತವನ್ನು ಪರಕೀಯರಾಳ್ವಿಕೆಯ ಗುಲಾಮಗಿರಿಯಿಂದ ವಿಮುಕ್ತವಾಗಿಸುವ ಅವರ ಅದಮ್ಯ ಸಂಕಲ್ಪ, ವೈಯಕ್ತಿಕ ಜೀವನ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ಮಂಕಾಗಿಸಿತ್ತು. ಆ ಸಂಕಲ್ಪ ಮುಂದೆಂದೂ ಮಾಸಲಿಲ್ಲ, ಸೋಲೊಪ್ಪಲಿಲ್ಲ. ಆದ್ದರಿಂದಲೆ ಅವರು ಐ.ಸಿ.ಎಸ್ ಪದವಿಗೆ ರಾಜಿನಾಮೆ ನೀಡಿ ಸ್ವಾತಂತ್ರ್ಯ ಆಂದೋಲನದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಹಿಂದಿರುಗಿದರು.
1921ರಲ್ಲಿ ಸುಭಾಷರು ಭಾರತಕ್ಕೆ ಹಿಂತಿರುಗಿದ ನಂತರ ರಾಜಕೀಯ ಆಂದೋಲನದಲ್ಲಿ ಧುಮುಕಿ ಸಕ್ರಿಯವಾಗಿ ಪಾಲ್ಗೊಂಡರು. ಸ್ವಾತಂತ್ರ್ಯ ಚಳುವಳಿಯಲ್ಲಿ ಇದ್ದ ಎರಡು ಪಂಥಗಳಲ್ಲಿ ದುಂಡು ಮೇಜಿನ ಸಭೆ, ಮನವಿ ಸಲ್ಲಿಸುವುದು, ಬ್ರಿಟಿಷರೊಂದಿಗೆ ಮಾತುಕತೆ ನಡೆಸುವ ಮುಂತಾದ ವಿಧಾನಗಳನ್ನು ಸಂಧಾನ ಪಂಥ ಅನುಸರಿಸುತ್ತಿದ್ದರೆ, ಮತ್ತೊಂದು ಪಂಥ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆಯೊಂದಿಗೆ ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂದು ರಾಜಿರಹಿತ ಪಂಥ ಹೋರಾಡುತ್ತಿತ್ತು. ಈ ರಾಜಿರಹಿತ ಪಂಥದ ನಾಯಕರಾಗಿ ನೇತಾಜಿಯವರು ಹೋರಾಟಕ್ಕೆ ನೇತೃತ್ವ ನೀಡಿದರು.
ನೇತಾಜಿಯವರ ದೃಷ್ಟಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಕೇವಲ ರಾಜಕೀಯ ಸ್ವಾತಂತ್ರ್ಯವಷ್ಟೇ ಆಗಿರದೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಾಗಿತ್ತು. ಅವರು ಸರ್ವಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಧರ್ಮ ನಿರಪೇಕ್ಷ ಮಾನವತಾವಾದವನ್ನು ಎತ್ತಿಹಿಡಿದರು.
ನೇತಾಜಿಯವರ ರಾಣಿ ಝಾನ್ಸಿ ರೆಜಿಮೆಂಟ್ – ಮಹಿಳಾ ಸಮಾನತೆಯ ಹಾದಿಯಲ್ಲಿ ಮೈಲಿಗಲ್ಲು
“ಈ ಅಂತಿಮ ಸ್ವಾತಂತ್ರ್ಯ ಸಮರದಲ್ಲಿ ನಮಗೆ ಒಬ್ಬ ಝಾನ್ಸಿ ರಾಣಿ ಇದ್ದರೆ ಸಾಲದು, ಸಹಸ್ರ ಸಹಸ್ರ ಝಾನ್ಸಿ ರಾಣಿಯರು ಬೇಕಾಗಿದ್ದಾರೆ…. “ಭಾರತೀಯ ಮಹಿಳೆಯರು ಸಂತೋಷದಿಂದ, ಧೈರ್ಯದಿಂದ ಕೈಜೋಡಿಸದೆ ಇದ್ದಂಥ ಸಾರ್ವಜನಿಕ ಕಾರ್ಯಾಚರಣೆಯ ಯಾವುದೇ ವಲಯವಾಗಲೀ ಇಲ್ಲ!

ಫೋಟೋ ಕೃಪೆ : google
ಇಚಿತಹ ರಣಕಹಳೆ ಮೊಳಗಿಸಿದ ನೇತಾಜಿ ಸುಭಾಷರು ಬ್ರಿಟಿಷರ ವಿರುದ್ಧ ಹೋರಾಡಲು ಇಂಡಿಯನ್ ನ್ಯಾಷನಲ್ ಆರ್ಮಿ (Iಓಂ) ಗೆ ನೇತೃತ್ವ ನೀಡಿದ್ದರು. ಮತ್ತು ಮಹಿಳೆಯರೂ ಪುರುಷರಿಗೆ ಸರಿಸಮಾನರು ಎಂದು ಸಾಬೀತು ಪಡಿಸುವ ದಿಕ್ಕಿನಲ್ಲಿ `ಮಹಿಳಾ ಯೋಧೆಯರ ಪಡೆ’ ಯೊಂದನ್ನು ಸ್ಥಾಪಿಸಿದರು. ಅದೇ ಸುಪ್ರಸಿದ್ಧ `ರಾಣಿ ಝಾನ್ಸಿ ರೆಜಿಮೆಂಟ್’! ಸ್ವಾತಂತ್ರ್ಯ ಹೋರಾಟದಲ್ಲಿ ಅದರಲ್ಲೂ ಸಶಸ್ತ್ರ ಹೋರಾಟದಲ್ಲಿ ಮಹಿಳೆಯರು ವಹಿಸಬಹುದಾದ ಪಾತ್ರವನ್ನು ಸರಿಯಾದ ರೀತಿಯಲ್ಲಿ ಗುರುತಿಸಿದ ಹೆಗ್ಗಳಿಕೆ ನೇತಾಜಿಗೆ ಸೇರಿದ್ದು. ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದ ಕಾಲದಲ್ಲಿ ನೇತಾಜಿ ಮಹಿಳಾ ಯೋಧೆಯರ ಪಡೆಯೊಂದನ್ನು ಸೃಷ್ಟಿಸಿದ್ದು ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡಿದ್ದು ಒಂದು ಅದ್ಭುತ ಕಾರ್ಯವಾಗಿತ್ತು. ಹೀಗೆ ಮಹಿಳೆಯರಿಗಾಗಿಯೇ ಒಂದು ಸೇನಾ ತುಕಡಿಯನ್ನು ಸಿದ್ಧ ಪಡಿಸಿದ್ದು ಇಡೀ ವಿಶ್ವದಲ್ಲಿಯೇ ಒಂದು ಅಭೂತಪೂರ್ವ ವಿದ್ಯಮಾನ!!
ಇದು ಅನನ್ಯ ಸಾಹಸ ಪ್ರಯತ್ನವೇ ಸರಿ! ಏಕೆಂದರೆ ಮಹಿಳೆಯರು ಸಂಘಟನೆ, ರಾಜಕೀಯ ಚಟುವಟಿಕೆ, ಬಹಿರಂಗ ಸಭೆ – ಮೆರವಣಿಗೆಗಳಲ್ಲಿ ಭಾಗವಹಿಸುವುದರ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಅವರು ಕ್ರಾಂತಿಕಾರಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಊಹಿಸಲು ಅಸಾಧ್ಯವಾದ ಮಾತಾಗಿತ್ತು. ಊಳಿಗಮಾನ್ಯ ಚಿಂತನೆಗಳ ಪ್ರಭಾವವು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿತ್ತು ಎಂಬುದು ನಾವಿಂದು ಊಹಿಸಬಹುದು!
1943ರ ಜುಲೈ 9 ರಂದು ಸಿಂಗಪುರದಲ್ಲಿ ನೇತಾಜಿ ಭಾಷಣ ಕೇಳಲು ನೆರೆದಿದ್ದವರು 1 ಲಕ್ಷಕ್ಕಿಂತಲೂ ಹೆಚ್ಚು ಜನ! ನೇತಾಜಿಯವರ ಮೈನವಿರೇಳಿಸುವ, ಸ್ಫೂರ್ತಿದಾಯಕ ಮಾತುಗಳನ್ನು ಮೈಯೆಲ್ಲಾ ಕಿವಿಯಾಗಿ ಕೇಳಿದರು, ಹುರುಪಿನಿಂದ ಸ್ಪಂದಿಸಿದರು. ಅದರಲ್ಲೂ ಅವರು ಹೆಣ್ಣುಮಕ್ಕಳನ್ನು ಉದ್ದೇಶಿಸಿ, “ಧೀರ ಭಾರತೀಯ ಮಹಿಳೆಯರ ಒಂದು ಸೇನಾ ತುಕಡಿಯ ರಚನೆ ಅವಶ್ಯಕ; ಇವರು 1857 ರ ಪ್ರಥಮ ಭಾರತ ಸಂಗ್ರಾಮದಲ್ಲಿ ತನ್ನ ಖಡ್ಗ ಝಳಪಿಸಿದ ವೀರ ಝಾನ್ಸಿರಾಣಿ ಯಂತೆ ಖಡ್ಗ ಹಿಡಿದು ಸಾವನ್ನು ಎದುರಿಸುವಂತವರಾಗಿರಬೇಕು….”, ಎಂದು ಕರೆ ನೀಡಿದಾಗ ಆ ಮಾತುಗಳು, ಹೆಣ್ಣುಮಕ್ಕಳಲ್ಲಿ ಸಮರೋತ್ಸಾಹ ತುಂಬಿದವು. ಆ ದಿನ ರಾಣಿ ಝಾನ್ಸಿ ರೆಜಿಮೆಂಟ್‍ಗೆ ನಾಂದಿ ಹಾಕಿತು.

ಫೋಟೋ ಕೃಪೆ : google
ಅವರ ಕರೆಗೆ ಓಗೊಟ್ಟು ಮೂರು ದಿನಗಳ ನಂತರ ಅಂದರೆ ಜುಲೈ – 12 ರಂದು ಕ್ಯಾಪ್ಟನ್ ಲಕ್ಷ್ಮಿ ಯವರ ನೇತೃತ್ವದಲ್ಲಿ ಮಹಿಳೆಯರೆಲ್ಲಾ ಒಂದುಗೂಡಿ ನೇತಾಜಿಯವರಿಗೆ ಪೆರೇಡ್ ಮೂಲಕ ಹೋರಾಟದ ವಂದನೆಗಳನ್ನು ಅರ್ಪಿಸಿದರು. ಅಂದಿನಿಂದ ಓಂ ನಲ್ಲಿ ಪ್ರತ್ಯೇಕವಾದ ತುಕಡಿಯೊಂದು ತರಬೇತಿಯನ್ನು ಪಡೆಯಲು ಪ್ರಾರಂಭಿಸಿತು. ರಾಣಿ ಝಾನ್ಸಿ ರೆಜಿಮೆಂಟ್ ಬಲವರ್ಧನೆ ಹೊಂದಿತು.
ನೇತಾಜಿಯವರು ತಮ್ಮ ಬಗ್ಗೆ ಹೊಂದಿದ್ದ ವಿಶ್ವಾಸವನ್ನು ಹೃದಯಾಂತರಾಳದಿಂದ ಗುರುತಿಸಿದ ಹೆಣ್ಣುಮಕ್ಕಳು ಅವರ ಕರೆಗೆ ಓಗೊಟ್ಟರು. ತಮ್ಮ ತನು ಮನ ಧನವನ್ನೆಲ್ಲಾ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಬಲಿಕೊಡಲು ಕಾತುರರಾದರು. ನೇತಾಜಿಯವರು ಮೊಟ್ಟಮೊದಲ ಬಾರಿಗೆ ನೂರಾರು ಸ್ತ್ರೀಯರು ಶಸ್ತ್ರಾಸ್ತ್ರ ತರಬೇತಿ ಹೊಂದಿ ಸಜ್ಜಾಗುವಂತೆ ಪ್ರೇರೇಪಿಸಿದರು. ಈ ಸಹೋದರಿಯರು ಹಸಿವು, ನೀರಡಿಕೆ ಸಾವು-ನೋವುಗಳನ್ನು ಲೆಕ್ಕಿಸದೆ, ಬೆಟ್ಟಗುಡ್ಡಗಳನ್ನು ಹಾದು ಸ್ವಾತಂತ್ರ್ಯಕ್ಕಾಗಿ ಕಾದಾಡಿದ ಈ ವೀರ ವನಿತೆಯರು ಇತಿಹಾಸದಲ್ಲಿ ಅತ್ಯಂತ ಉಜ್ವಲ ಅಧ್ಯಾಯಗಳ ಸೃಷ್ಟಿಕರ್ತರಾಗಿದ್ದಾರೆ.
ಇಂದಿನ ಭಾರತ
2020ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 107 ದೇಶಗಳಲ್ಲಿ 94 ನೇ ಸ್ಥಾನದಲ್ಲಿದೆ. ಪ್ರತಿದಿನ 20 ಮಿಲಿಯನ್ ಜನರು ಹಸಿವೆಯಿಂದ ಬಳಲುತ್ತಾರೆÀ. ಪ್ರತಿವರ್ಷ 10 ಮಿಲಿಯನ್ ಜನರು ಹಸಿವೆಯಿಂದ ಸಾಯುತ್ತಾರೆ. ಕೆಲಸದಿಂದ ವಜಾ ಗೊಳಿಸುವಿಕೆ ಮತ್ತು ನಿರುದ್ಯೋಗದ ಅಂಕಿಅಂಶಗಳು ಆತಂಕಕಾರಿ ಮಟ್ಟವನ್ನು ತಲುಪಿವೆ. ಈಗಾಗಲೇ 6,80,000 ಕಾರ್ಖಾನೆಗಳನ್ನು ಮುಚ್ಚಲಾಗಿದೆ ಮತ್ತು ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೀಕರ ಬಡತನಕ್ಕೆ ದೂಕಲ್ಪಟ್ಟ ಲಕ್ಷಾಂತರ ಯುವಜನರು ಗುಲಾಮರಂತೆ ದುಡಿದಾದರೂ ಜೀವನ ಸಾಗಿಸಬೇಕೆಂದು ವಲಸೆ ಕಾರ್ಮಿಕರಾಗಿ ವಿವಿಧ ರಾಜ್ಯಗಳಿಗೆ ಧಾವಿಸುತ್ತಿದ್ದಾರೆ.

ಫೋಟೋ ಕೃಪೆ : google
ಒಂದೆಡೆ ಆರ್ಥಿಕ ದುಃಸ್ಥಿತಿ ಹೀಗಿದ್ದರೆ ಮತ್ತೊಂದೆಡೆ ಮಾನವೀಯ ಮೌಲ್ಯಗಳ ಅಧಃಪತನ, ಹಸುಗೂಸುಗಳಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ಮತ್ತು ಸಾಮಾಜಿಕ, ಸಾಂಸ್ಕøತಿಕ ಕ್ರೌರ್ಯಗಳು ನಡೆಯುತ್ತಿವೆ. ಅಶ್ಲೀಲತೆ, ಮಾದಕ ವಸ್ತುಗಳ ಮೂಲಕ ಯುವಜನರ ನೈತಿಕತೆಯ ಮೇಲೆ ದಾಳಿ ನಡೆಸಲಾಗುತ್ತಿದೆ, ಸಮಾಜದಲ್ಲಿ ಎಲ್ಲಾ ಜನರ ನಡುವಿನ ಪ್ರೀತಿ ಸ್ನೇಹಗಳನ್ನು ಬಲಪಡಿಸುವುದರ ಬದಲು ಜಾತಿ, ಧರ್ಮ, ಪ್ರಾಂತ್ಯ ಇತ್ಯಾದಿಗಳ ಹೆಸರಲ್ಲಿ ಅವರನ್ನು ವಿಭಜಿಸುತ್ತಾ ಅವರಲ್ಲಿರುವ ಒಗ್ಗಟ್ಟನ್ನು ಮತ್ತು ಸಾಮರಸ್ಯವನ್ನು ನಾಶಪಡಿಸಲಾಗುತ್ತಿದೆ. ಒಟ್ಟಾರೆ ಮನುಷ್ಯನಿಂದ ಮನುಷ್ಯನನ್ನು ನಿರ್ದಯವಾಗಿ ಶೋಷಿಸುವುದನ್ನು ಆಧಾರವಾಗಿಸಿ ಕೊಂಡಿರುವ ಬಂಡವಾಳಶಾಹಿ ಆಳ್ವಿಕೆಯ ಅಡಿಯಲ್ಲಿ ಎಂತಹ ಕತ್ತಲೆ ಸ್ವತಂತ್ರ ಭಾರತವನ್ನು ಆವರಿಸಿಕೊಂಡಿದೆ! ನಮ್ಮ ದೇಶದ ಈ ಭವಿಷ್ಯಕ್ಕಾಗಿ ನೇತಾಜಿ ಸುಭಾಷ್ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರೇ?
ನೇತಾಜಿಯವರು ಕನಸು ಕಂಡಿದ್ದು ಇಂತಹ ಭಾರತವನ್ನಲ್ಲ. ಅವರು ಕಂಡ ಭಾರತ ಸಮ ಸಮಾಜದ ಭಾರತ. ನೇತಾಜಿಯವರ ಅಪೂರ್ಣವಾಗಿರುವ ಕನಸನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಶೋಷಣಾ ರಹಿತ ಸಮಾಜದ ಸ್ಥಾಪನೆಯತ್ತ ಮುಂದುವರೆದರೆ ಮಾತ್ರ ನಾವು ನೇತಾಜಿಯವರನ್ನು ನೆನಪಿಸಿಕೊಳ್ಳುವುದು, ಅವರಿಗೆ ಗೌರವ ಸಲ್ಲಿಸುವುದು ಅರ್ಥಪೂರ್ಣವಾಗುತ್ತದೆ.
ಈ ಸಂದರ್ಭದಲ್ಲಿ ಜುಲೈ 12 – 2022 ರಂದು ಝಾನ್ಸಿ ರಾಣಿ ರೆಜಿಮೆಂಟ್ ಸ್ಥಾಪನೆ ದಿನದ ಅಂಗವಾಗಿ AIMSS ಬೆಂಗಳೂರಿನ ವಿವಿಧ ಬಡಾವಣೆಯಲ್ಲಿ ಮಹಿಳೆಯರ ಮೆರವಣಿಗೆ, ಸೂಕ್ತಿ ಛಾಯಾಚಿತ್ರ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಸಭೆಯನ್ನು ಸಂಘಟಿಸಲಾಗುತ್ತಿದೆ.
ಇಚಿತಹ ಉದಾತ್ತ ಕಾರ್ಯಕ್ಕೆ ಸಮಾಜದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸಮಾಜದ ಹಿತವನ್ನು ಬಯಸುವವರು ಎಲ್ಲರು ಕೈ ಜೋಡಿಸಬೇಕಾಗಿ (RJR) ಬೆಂಗಳೂರು ಜಿಲ್ಲಾಸಮಿತಿ ಸಮಿತಿಯು ಕರೆ ನೀಡುತ್ತದೆ.
ರಾಣಿ ಝಾನ್ಸಿ ರೆಜಿಮೆಂಟ್ (RJR) ಸ್ಥಾಪನೆಯ ಸಮಯದಲ್ಲಿ ನೇತಾಜಿ ಸುಭಾಷ್‍ರ ಭಾಷಣ ಸಭೆ ಶುರುವಾಗುವ 2 ಗಂಟೆಗಳ ಮುನ್ನವೇ 10-12 ಮೈಲಿ ನಡೆದು ಬಂದಿದ್ದ ಮಹಿಳೆಯರಿಂದ ಸಭಾಂಗಣ ತುಂಬಿ ಹೋಗಿತ್ತು. ನೇತಾಜಿ ತಮ್ಮ ಭಾವಪೂರ್ಣ ಭಾಷಣದಲ್ಲಿ ಹೇಳಿದ್ದು :
“ಭಾರತೀಯ ಮಹಿಳೆಯರು ಸಂತೋಷದಿಂದ, ಧೈರ್ಯದಿಂದ ನಮ್ಮ ಪುರುಷರೊಂದಿಗೆ ಕೈಜೋಡಿಸದೆ ಇದ್ದಂಥ ಸಾರ್ವಜನಿಕ ಕಾರ್ಯಾಚರಣೆಯ ಯಾವುದೇ ವಲಯವಾಗಲೀ, ರಾಷ್ಟ್ರೀಯ ಹೋರಾಟದ ಯಾವುದೇ ವಿಭಾಗವಾಗಲೀ ಇಲ್ಲ ಎಂದು ನಾನು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ವಾಸ್ತವದಲ್ಲಿ, ಅನ್ನ ನೀರಿಲ್ಲದೆ ಹಳ್ಳಿಗಳಲ್ಲಿ ಓಡಾಡುವುದಾಗಲೀ, ಒಂದಾದ ನಂತರ ಇನ್ನೊಂದರಂತೆ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದರಲ್ಲಾಗಲೀ, ಮನೆಯಿಂದ ಮನೆಗೆ ಸ್ವಾತಂತ್ರ್ಯದ ಸಂದೇಶವನ್ನು ಕೊಂಡೊಯ್ಯುವುದಾಗಲೀ, ಚುನಾವಣಾ ಪ್ರಚಾರ ಕಾರ್ಯವಾಗಲೀ, ಸರ್ಕಾರಿ ಆದೇಶ ಉಲ್ಲಂಘಿಸಿ ರಸ್ತೆಗಳಲ್ಲಿ ಮೆರವಣಿಗೆ ಹೋಗುವುದಾಗಲೀ, ಬ್ರಿಟಿಷ್ ಪೊಲೀಸರ ಲಾಟಿಗಳನ್ನು, ಬಂಧನ, ಅಪಮಾನಗಳನ್ನು ಕೆಚ್ಚಿನಿಂದ ಎದುರಿಸುವಲ್ಲಿಯಾಗಲೀ ಎಲ್ಲಿಯೂ ನಮ್ಮ ಹೆಣ್ಣುಮಕ್ಕಳು ಹಿಂದೆ ಬಿದ್ದಿಲ್ಲ. ನಮ್ಮ ಧೀರ ಸೋದರಿಯರು ಗುಪ್ತ ಕ್ರಾಂತಿಕಾರಿ ಹೋರಾಟದಲ್ಲೂ ಮುಖ್ಯ ಪಾತ್ರ ವಹಿಸಿದ್ದಾರೆ. ಅವಶ್ಯಕತೆ ಬಿದ್ದರೆ ತಾವು ತಮ್ಮ ಸೋದರರಂತೆ ಚೆನ್ನಾಗಿಯೇ ಪಿಸ್ತೂಲಿನಿಂದ ಗುಂಡು ಹಾರಿಸಬಲ್ಲೆವು ಎಂದು ತೋರಿಸಿಕೊಟ್ಟಿದ್ದಾರೆ. ಇಂದು ನಾನು ನಿಮ್ಮಲ್ಲಿ ನನ್ನ ಸಂಪೂರ್ಣ ಭರವಸೆಯನ್ನು ವ್ಯಕ್ತ ಪಡಿಸಬಲ್ಲೆ ಎಂದರೆ, ಅದಕ್ಕೆ ಕಾರಣ, ನನಗೆ ನಮ್ಮ ಮಹಿಳೆಯರ ಸಾಮಥ್ರ್ಯದ ಅರಿವಿದೆ ಎಂದರ್ಥ. ಹಾಗಾಗಿಯೇ, ಯಾವುದೇ ಅತಿಶಯೋಕ್ತಿ ಇಲ್ಲದೆ ನಾನು ಹೇಳಬಲ್ಲೆ, ನಮ್ಮ ಸೋದರಿಯರು ಸಹಿಸಲಾಗದ ಯಾವುದೇ ಸಂಕಷ್ಟವಿಲ್ಲ ಎಚಿದು…”
“… ಬಂದೂಕು ಹಿಡಿಯುವುದು ಮಹಿಳೆಯರಿಗೆ ತಕ್ಕುದಲ್ಲ ಎಂದು ಯಾರಾದರೂ, ಇಲ್ಲಿ, ಅಥವಾ ಇನ್ನೆಲ್ಲಿಯಾದರೂ ಹೇಳಿದರೆ, ನಾನವರಿಗೆ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿ ಎಂದು ಹೇಳುತ್ತೇನೆ. ಹಿಂದೆ ನಮ್ಮ ವೀರ ರಮಣಿಯರು ಮಾಡಿದ್ದೇನು? 1857ರ ಕ್ರಾಂತಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧೀರ ಝಾನ್ಸಿ ರಾಣಿ ಮಾಡಿದ್ದೇನು? ರಣರಂಗದಲ್ಲಿ ತನ್ನ ಸೇನೆಯ ನೇತೃತ್ವ ವಹಿಸಿದ್ದು, ಖಡ್ಗ ಹಿಡಿದು ಕುದುರೆ ಸವಾರಿ ಮಾಡುತ್ತಾ ಕಾದಾಡಿದ ಈ ರಾಣಿಯೇ.”
“ಹಾಗಾಗಿ, ಈ ಅಂತಿಮ ಸ್ವಾತಂತ್ರ್ಯ ಸಮರದಲ್ಲಿ ನಮಗೆ ಬೇಕಾಗಿರುವುದು ಒಬ್ಬ ಝಾನ್ಸಿ ರಾಣಿಯಲ್ಲ, ಬದಲಿಗೆ, ಸಹಸ್ರ ಸಹಸ್ರ ಝಾನ್ಸಿರಾಣಿಯರು. ಮುಖ್ಯವಾಗಿರುವುದು ನೀವು ಎಷ್ಟು ರೈಫಲ್‍ಗಳನ್ನು ಹಿಡಿದಿರುತ್ತೀರಿ ಅಥವಾ ಎಷ್ಟು ಗುಂಡು ಹೊಡೆಯುತ್ತೀರಿ ಎಂಬುದಲ್ಲ; ಪ್ರಾಮುಖ್ಯತೆ ಇರುವುದು, ನಿಮ್ಮ ಈ ಧೀರ ನಿದರ್ಶನ ಬೀರುವ ನೈತಿಕ ಪ್ರಭಾವದಲ್ಲಿ…..”
- ಎಂ.ಶಾಂತ ( ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ,ಜಿಲ್ಲಾ ಕಾರ್ಯದರ್ಶಿ )ಬೆಂಗಳೂರು