ಅಮೇರಿಕಾದಿಂದ ಭಾರತಕ್ಕೆ ಮರಳಿ, ಸಿಹಿ ಸುದ್ದಿ ನೀಡಬೇಕು ಎನ್ನುವಷ್ಟರಲ್ಲಿ ಭಾರತ ಹಾಗು ಚೀನಾ ನಡುವೆ ಯುದ್ಧದ ಭಯ ಶುರುವಾಗಿತ್ತು.ರತನ ಟಾಟಾ ಅವರ ಪ್ರೇಮ ಏನಾಯಿತು ಮುಂದೆ ಓದಿ…
“ಆತ” #ಅಮೇರಿಕಾದ, ಲಾಸ್ಏಂಜಲೀಸ್ ನಲ್ಲಿ ಓದುತ್ತಿದ್ದ ಸಮಯ. 25 ಹರೆಯ ಗರಿಗೆದರಿದ ವಯಸ್ಸದು.
ಅಮೇರಿಕಾದ ಮುದ್ದು ಯುವತಿಯ ಪ್ರೇಮ ಪಾಶಕ್ಕೆ ಸಿಲುಕಿ ಬಕ ಪಕ್ಷಿಯಂತೆ ಅವಳ ಪ್ರೇಮ ನೋಟಕ್ಕೆ ಕಾಯುತ್ತಿದ್ದ. ಅವಳನ್ನ ಜೀವಕ್ಕಿಂತ ಹೆಚ್ಚೆ ಪ್ರೀತಿಸತೊಡಗಿದ. ಕೆಲದಿನಗಳ ನಿರಂತರ ಪ್ರೇಮದ ಹರಿವು, ಪ್ರೀತಿಯ ನೋಟದಿಂದ ಕೆಲ ದಿನಗಳಲ್ಲಿ “ಅವಳ”ಲ್ಲಿಯೂ ಪ್ರೇಮದ ಸೆಳೆತ ಶುರುವಾಯಿತು. ಆತನ ಪ್ರೇಮಪಾಶದಲ್ಲಿ ಬಂಧಿಯಾದಳು. “ಆತನ” ನಿಷ್ಕಲ್ಮಶ ಪ್ರೀತಿಯ ನೋಟಕ್ಕೆ ತಲ್ಲಣಿಸಿ. ಹೃದಯಾಂತರಾಳದಿಂದ ಒಪ್ಪಿ, ನಾಚಿ ನೀರಾದಳು ಬೆಳದಿಂಗಳ ಬಾಲೆ.
#ಲಾಸ್_ಏಂಜಲೀಸ್ ಅವರ ಪಾಲಿಗೆ “ಸ್ವರ್ಗ”ವಾಯಿತು.
ಪ್ರೇಮ ಪಕ್ಷಿಗಳು ಆಕಾಶದೇತ್ತರಕ್ಕೆ ಕನಸು ಕಟ್ಟಿ ಕಳೆದ ವರುಷಗಳು ನಿಮಿಷದಂತೆ ಭಾಸವಾಗುತ್ತಿದ್ದವು. ಎರಡು ವರುಷಗಳ ಸುದೀರ್ಘ ಸಮಯ ಉರುಳಿ ಹೋಯಿತು.

ಫೋಟೋ ಕೃಪೆ :upvartanew
ಆತ ತನ್ನ ತಾಯ್ನಾಡು ಭಾರತಕ್ಕೆ ಮರಳಿ, “ಮದುವೆ ವಿಷಯ ಮನೆಯಲ್ಲಿ ಪ್ರಸ್ತಾಪಿಸಿ, ತಿಳಿಸುವೆ..!!” ಅಂತ ಹೊರಟು ನಿಂತ, ಅವಳು ಮತ್ತು ಅವಳ ತಂದೆ-ತಾಯಿಯು ಸಹ ಅವರ ಮದುವೆಗೆ ಒಪ್ಪಿಗೆ ಸೂಚಿಸಿ ಬೀಳ್ಕೊಟ್ಟರು.
ಅದು 1962 ರ ಕ್ರೂರ ಸಮಯ. ಭಾರತ- ಚೀನಾ ನಡುವೆ ಯುದ್ಧ ಘೋಷಣೆ ಆಗಿತ್ತು. ಭಾರತ ಮತ್ತು ಚೀನಾ ಎರಡೂ ದೇಶದಲ್ಲಿ ಯುದ್ಧೋನ್ಮಾದ ಉತ್ತುಂಗಕ್ಕೇರುತಿದ್ದವು.
ಆತ ಅಮೇರಿಕಾದಿಂದ ಭಾರತಕ್ಕೆ ಮರಳಿ, ಸಿಹಿ ಸುದ್ದಿಯಂತೆ.. “ವಿದೇಶದಲ್ಲಿನ ತನ್ನ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿ, ತಮ್ಮ ಮನೆಯಲ್ಲಿ ಒಪ್ಪಿದ್ದನ್ನು ತಿಳಿಸಿದ”. “ಮದುವೆಯಾಗಲು ತಾನು ಸಿದ್ಧ” ಎಂದ. ಅವರ ಪ್ರೇಮ ಮತ್ತೊಂದು ಮೈಲುಗಲ್ಲಿನತ್ತ ದಾಪುಗಾಲಿಡುವುದರಲ್ಲಿತ್ತು.
ಅವಳ ತಂದೆ-ತಾಯಿ ಭಾರತ -ಚೀನಾ ಯುದ್ಧೋನ್ಮಾದದ ಭೋರ್ಗರತಕ್ಕೆ ಬೆಚ್ಚಿಬಿದ್ದಿದ್ದರು. ಅಲ್ಲೋಲ ಕಲ್ಲೋಲವಾದರು. ಶತಾಯಗತಾಯ ಅವರು ತಮ್ಮ ಕರುಳಿನ ಕುಡಿಯನ್ನು ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ. ಇಲ್ಲಿನ ಭೀಕರತೆ ನೆನೆದು ತಣ್ಣಗಾದರು. ಅವಳೋ.. “ಅಮೇರಿಕಾದಲ್ಲಿಯೇ ಮದುವೆಯಾಗಿ.. ಇಲ್ಲಿಯೇ ಬದುಕಿ ಬಿಡೋಣ ಬಾ..!!”ಅಂತ ಗೋಗರಿಯ ತೊಡಗಿದಳು.
ತನ್ನ ತಾಯ್ನಾಡು ಭಾರತವನ್ನು ಬಿಟ್ಟು ಅಲುಗಾಡಲು ಈತನಿಗೆ ಚೂರು ಮನಸ್ಸಿರಲಿಲ್ಲ. ತಾಯ್ನಾಡು ಮೇಲೆ ವಿಪರೀತ ಪ್ರೀತಿ, ವ್ಯಾಮೋಹ.
ಅದ್ಯಾವ “ದುಷ್ಟ ಶಕ್ತಿ” ಕಣ್ಣು ಇವರ ಪ್ರೀತಿ ಮೇಲೆ ಬಿತ್ತೋ..!!!
ಅವರಿಬ್ಬರ ಪ್ರೇಮ ಕೊಂಡಿ ಕಳಚಿ ತುಂಡಾಯಿತು. ಅವಳೋ ಅಮೇರಿಕದಲ್ಲಿ ಮತ್ತೊಬ್ಬನನ್ನು ಮದುವೆಯಾಗಿ ಸಂಸಾರ ಸಾಗರದಲ್ಲಿಳಿದಳು. ಈತ ಭಾರತದಲ್ಲಿ ಒಂಟಿ. ಭಗ್ನ ಪ್ರೇಮಿಯಾಗಿಬಿಟ್ಟ.
ಬಿಟ್ಟು ಹೋದವರಿಗಿಂತ, ಒಂಟಿಯಾಗಿ ಉಳಿದವರು ಹೆಚ್ಚು ನೋವು ಅನುಭವಿಸುತ್ತಾರೆ ಪ್ರೀತಿಯಲ್ಲಿ.
ವಿಧಿ ಬರಹವೇ ಭಿನ್ನ…..
ಒಂಟಿ ಭಗ್ನ ಪ್ರೇಮಿ ತನ್ನ ಪ್ರೇಮ ವೈಫಲ್ಯ ಮರೆಯಲು ಹೆಣಗಾಡಿ, ತನ್ನ ಸಂಪೂರ್ಣ ಸಮಯವನ್ನ ತನ್ನ ಕಂಪನಿ ಅಭಿವೃದ್ಧಿ ಪಡಿಸಿಲು ವಿನಿಯೋಗಿಸತೊಡಗಿದ. ಯೋಚಿಸಲು ಸಮಯ ಸಾಲದಂತೆ ದುಡಿಯತೊಡಗಿದ.

ಫೋಟೋ ಕೃಪೆ : thestatesman
ಆ ಭಗ್ನ ಪ್ರೇಮಿ, ಯೋಚಿಸಲು ಸಮಯವಿಲ್ಲದ ತರಹ ಅವಿರತ ಶ್ರಮ ಪಟ್ಟ. ಆ ವ್ಯಕ್ತಿ ಇನ್ನ್ಯಾರೋ ಅಲ್ಲ.. ದೈತ್ಯ “ಟಾಟಾ ಕಂಪನಿ” ಒಡೆಯ, ಪದ್ಮವಿಭೂಷಣ, ಪದ್ಮಭೂಷಣ ರತನ್ ಜೀ ಟಾಟಾ.
ರತನ್ ಟಾಟಾ ರವರು ಇಂದಿನವರೆಗೂ ಮದುವೆಯಾಗದೆ “Single” ಆಗಿದ್ದು, ಮದುವೆಯನ್ನೆ ಮರೆತುಬಿಟ್ಟಿದ್ದಾರೆ. ಟಾಟಾ ಮೋಟರ್ಸ್ನಿಂದ ಹಿಡಿದು #ಟಾಟಾ_ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ, ಟಾಟಾ ಇನ್ಶುರೆನ್ಸ್, ಟಾಟಾ ಟೀ, ಟಾಟಾ ಉಪ್ಪು ಹೀಗೆ ಪ್ರತಿಯೊಬ್ಬರ ಬದುಕಿನ ಜೊತೆಯಲ್ಲಿ ಟಾಟಾ ಬೆರೆತು ಹೋಗುವಂತೆ ಸಂಸ್ಥೆಯನ್ನು ಕಟ್ಟಿದ ಯಶಸ್ವಿಉದ್ಯಮಿ.
ಮದುವೆಯಾಗಲೂ ಅದ್ಯಾವ ಮನಸ್ಸಿನಿಂದ ಒಂದಲ್ಲ..ಎರಡಲ್ಲ.. ನಾಲ್ಕು ಬಾರಿ ಪ್ರಯತ್ನಿಸಿದರೂ… ಕಂಕಣ ಭಾಗ್ಯ ಕೊಡಿ ಬರಲೇ ಇಲ್ಲ. ಏನೇ ಮಾಡಿದರೂ ಯಶಸ್ಸು ಕಂಡಿದ್ದಾರೆ. ಆದರೆ ಒಂದೇ ಒಂದು ವಿಷಯದಲ್ಲಿ ಅವರು ವೈಫಲ್ಯವನ್ನ ಅನುಭವಿಸಿದ್ದು ಅದುವೇ ಪ್ರೀತಿ, ಲವ್, ಪ್ಯಾರ್, ಮೊಹಬ್ಬತ್.
- ಡಾ. ಪ್ರಕಾಶ ಬಾರ್ಕಿ . (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
