ಹಸಿದವನಿಗೆ ಊಟ ನೀಡಿ…- ದೇವರಾಜ ಚಾರ್




ಜೀವನದ ಮಹತ್ವ ತಿಳಿಯಬೇಕೆಂದರೆ ಹಳ್ಳಿಯಲ್ಲಿ ಬಾಳಬೇಕು. ಪ್ರತಿಯೊಂದರ ಮಹತ್ವವವನ್ನು ಹಳ್ಳಿ ಜೀವನ ತಿಳಿಸಿಕೊಡುತ್ತದೆ ಎನ್ನುತ್ತಾರೆ ಲೇಖಕರಾದ ದೇವರಾಜ ಚಾರ್ ಅವರು. ಅಷ್ಟೇ ಅಲ್ಲ ಹಸಿದವನಿಗೆ ಊಟ ನೀಡಿ, ಊಟವನ್ನು ವ್ಯರ್ಥ ಮಾಡಬೇಡಿ ಉತ್ತಮ ಸಂದೇಶ ಈ ಲೇಖನದು, ಮುಂದೆ ಓದಿ...

ಹಳ್ಳಿಯಲ್ಲಿ ನಡೆದ ಘಟನೆ

ನಾನು ಹಳ್ಳಿಗೆ ಸ್ನೇಹಿತರೊಬ್ಬರ ಆಹ್ವಾನದ ಮೇರೆಗೆ ಅವರ ಮನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದೆ. ಅವರ ಸಂಬಂಧಿಕರನ್ನು ಹೊರತು ಪಡಿಸಿ, ಆ ಊರಿನ ಎಲ್ಲಾ ಮನೆಗಳಿಗೂ ಆಹ್ವಾನವನ್ನು ನೀಡಿ, ಪೂಜಾ ಸಮಯದಲ್ಲಿ ಮತ್ತೊಮ್ಮೆ ಮನೆಗಳಿಗೆ ಹೋಗಿ ಕರೆಯುವ ಪದ್ಧತಿ. ಒಂದು ಕಡೆ ಪೂಜೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಊಟಕ್ಕಾಗಿ ಬಂದ ಮಂದಿ ಕ್ಯೂ  ನಿಂತಿದ್ದರು. ಆಗ ಊಟಕ್ಕೆ ಮುಖ್ಯವಾಗಿ ಬೇಕಾದ ಬಾಳೆ ಎಲೆಯನ್ನೇ ಊಟದ ಭಟ್ಟರು ತರುವುದನ್ನು ಮರೆತಿದ್ದರು. ಆಗ ಪಕ್ಕದವನಿಗೆ ಹೇಳಿ ಅಲ್ಲಿಂದಲೇ ಬಾಳೆ ಎಲೆ ತರಿಸಿ ಊಟ ಬಡಿಸುತ್ತಾರೆ. ಪ್ರತಿಯೊಬ್ಬರೂ ಸಂತೃಪ್ತಿಯಿಂದ ಊಟ ಮಾಡಿ ಹೊರಡುತ್ತಾರೆ . ಹೀಗೆ ಜಮೀನಿನಲ್ಲಿ ಕೆಲಸ ಮಾಡುವವರು ತಡವಾಗಿ ಬಂದು ಊಟ ಮಾಡಿ ಹೋದರೆ, ಇನ್ನು ಕೆಲವರು ಫೋನ್ ಮಾಡಿ ರಾತ್ರಿಯಾದರೂ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನ್ನು ನೋಡಿ ಅಲ್ಲಿಯ ಜನರ ಪ್ರೀತಿ, ವಿಶ್ವಾಸ, ಊಟದಲ್ಲಿನ ಗೌರವ ,ನೇರ ನುಡಿ ಮುಂತಾದ ನನಗೆ ತುಂಬಾ ಆಪ್ತತೆ ಮೂಡಿಸಿತು.

ಫೋಟೋ ಕೃಪೆ : theculturemap

ನಾನು #ಊಟ ಮಾಡಿ ಜಗಲಿ ಮೇಲೆ ಕೂತು ಎಲೆ ಅಡಿಕೆ ಹಾಕಿಕೊಂಡು ಬಾಯಾಡಿಸಿಕೊಂಡು ಕೂತಿದ್ದೆ, ಆಗ ಶಾಮಿಯಾನದವರು ಬಂದು ಶಾಮಿಯಾನ ತಗೆದರು. ಅಡುಗೆ ಭಟ್ಟರು ಉಳಿದ ಅಡುಗೆಯನ್ನು ಮನೆಯವರ ಪಾತ್ರೆಗಳಿಗೆ ಸುರಿದು, ತಮ್ಮ ಪಾತ್ರೆಗಳನ್ನು ಸ್ವಚ್ಛ ಮಾಡಿಕೊಂಡರು. ಅದನ್ನೇ ಗಮನಿಸುತ್ತಿದ್ದ ನನಗೆ ಊಟ ಉಳಿದರೆ ಚಿಂತೆಯಿಲ್ಲ, ಕಮ್ಮಿ ಆಗಬಾರದು ಮಾರಾಯ್ರೆ. ಉಳಿದರೆ ಊರಿನವರು ಬಂದು ತಗೆದುಕೊಂಡು ಹೋಗಿ ರಾತ್ರಿಯಾದ್ರೂ ಊಟ ಮಾಡುತ್ತಾರೆ ಎಂದರು.ಅವರ ಮಾತಿನಂತೆ ನಿಸ್ಸಂಕೋಚವಾಗಿ ಪಾತ್ರೆಗೆ ಹಾಕಿಸಿಕೊಂಡು ಮನೆಗೆ ಹೋದರು .

ಅಷ್ಟರಲ್ಲಿನಾಲ್ಕೈದು ಮಕ್ಕಳು ಬಂದು, ಊಟ ಮಾಡುತ್ತೇವೆ, ಇಲ್ಲೇ ಊಟ ಕೊಡಿ ಎಂದು ಅಡುಗೆ ಭಟ್ಟರನ್ನು ಕೇಳಿದರು. ಅವರು ಬೇಸರ ಪಟ್ಟುಕೊಳ್ಳದೆ ಮಕ್ಕಳಿಗೆ ಊಟವನ್ನು ಬಡಿಸುತ್ತಾರೆ . ಇದರಲ್ಲಿ ತಿಳಿದುಕೊಳ್ಳುವುದು ಏನೆಂದರೆ ಹಳ್ಳಿಗರಿಗೆ ಇರುವ ಊಟದ ಪ್ರೀತಿ, ಒಬ್ಬರಿಗೊಬ್ಬರಲ್ಲಿ ಇರುವ ಬಾಂಧವ್ಯ, ಆಹಾರವನ್ನು ಗೌರವದಿಂದ ಕಾಣುವ ರೀತಿ , ಅಹಂ ಇಲ್ಲದೆ ಜನ ಬೆರೆಯುತ್ತಾರೆ .
ಮುಖ್ಯವಾಗಿ ಹಳ್ಳಿಗರಲ್ಲಿ ಅನ್ನದ ಬೆಲೆ ತಿಳಿಯುತ್ತದೆ. ಊಟದ ಕಾರ್ಯಕ್ರಮ ಮುಗಿದ ಮೇಲೆ ಮನೆಯ ಗೃಹಿಣಿ ಪ್ರತಿಯೊಂದು ಕುಟುಂಬಕ್ಕೆ ಕವರ್ ಮಾಡಿ, ಅವರ ಕೈಯಲ್ಲಿಡುತ್ತಿದ್ದನ್ನು ನೋಡಿದೆ. ಆ ಕವರ್ ನನ್ನ ಕೈಗೂ ಬಂದಿತು, ಕುತೂಹಲದಿಂದ ತಗೆದು ನೋಡಿದರೆ ಅದರಲ್ಲಿ ಚಕ್ಕುಲಿ,ಕರ್ಚಿಕಾಯಿ ,ನಿಪ್ಪಿಟ್ಟು ,ಕಚ್ಚಾಯ ತರಾವರಿ ಉಂಡೆ ,ಚಿರೋಟಿ ಇತ್ಯಾದಿಗಳು ಇದ್ದವು. ಅದು ಪೂಜೆಯ ಪ್ರಸಾದವೆಂದು ತಿಳಿಯಿತು. ಬರಲಾಗದ ಮನೆಯವರಿಗೂ ಇದಾದರೂ ತಲುಪಲಿ ಎನ್ನುವ ಉದ್ದೇಶ. ಮಕ್ಕಳಿಗೆ ಓಡಾಡಿ ತಿನ್ನಿಸಬೇಕು ಎನ್ನುವ ಪ್ರಮೇಯವೇ ಇಲ್ಲ. ತಟ್ಟೆ ಮುಂದಿಟ್ಟರೆ ಎಲ್ಲವು ಕ್ಲೀನ್.

ಹಾಗೆ ಬೀದಿಯಲ್ಲಿ ಅಡ್ಡಾಡುತ್ತಿರುವಾಗ ಒಂದೆರಡು ಶೌಚಾಲಯವನ್ನು ನೋಡುತ್ತೇನೆ. ಸರ್ಕಾರ ನೀಡುವ ಹನ್ನೆರಡು ಸಾವಿರ ರೂಪಾಯಿಯಲ್ಲಿ ಟಾಯ್ಲೆಟ್ ಕಟ್ಟಿಸಿ ಬಯಲು ಮುಕ್ತ ಶೌಚಾಲಯಕ್ಕೆ ಅಲ್ಲಿಯ ಜನ ನಾಂದಿ ಹಾಡಿದ್ದಾರೆ. ಅದನ್ನು ನೋಡಿ ತುಂಬಾನೇ ಸಂತೋಷವಾಯಿತು.

ಹಾಗೆ ಊರಲ್ಲಿ ಓಡಾಡುವಾಗ ಒಬ್ಬ ರೈತನನ್ನು ಮಾತನಾಡಿಸಿದಾಗ, ಅವರ ಟಗರೊಂದು ರಾತ್ರಿ ಹುರುಳಿಕಾಳು ಜಾಸ್ತಿ ತಿಂದು ಆರೋಗ್ಯದಲ್ಲಿ ಅಸ್ತವ್ಯಸ್ತವಾಗಿತ್ತು.ಅವರು ಆ ಮೂಕಪ್ರಾಣಿಯ ಮೇಲೆ ತೋರುತ್ತಿದ್ದ ಕಾಳಜಿಯನ್ನು ನೋಡಿ ಅಚ್ಚರಿಯೂ ಆಯಿತು.



#ಪಟ್ಟಣದಲ್ಲಿನ_ಘಟನೆ

ಹಳ್ಳಿಯ ಘಟನೆಗೂ ಪಟ್ಟಣದ ಘಟನೆಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತೇವೆ.ನಗರದಲ್ಲಿನ ಬಹುತೇಕ ಮಕ್ಕಳಿಗೆ ಹಸಿವು ಆಗುವುದಿಲ್ಲವೋ ಏನೋ ಗೊತ್ತಿಲ್ಲ. ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ತಿಂಡಿ, ಊಟ ತಿನ್ನಿಸಲು ಹರಸಾಹಸ ಪಡುತ್ತಾರೆ. ಹತ್ತು ವರ್ಷಗಳ ಹಿಂದೆ ತಾಯಂದಿರು ಚಂದ್ರನನ್ನು ತೋರಿಸುತ್ತಲೂ, ಕಥೆಗಳನ್ನು ಹೇಳುತ್ತಲೋ ತಿನ್ನಿಸುತ್ತಿದ್ದರು. ಈಗ ಮೊಬೈಲ್ ನಲ್ಲಿ ವಿಡಿಯೋ ಹಾಕಿ ಕೊಟ್ಟರೆ ಮಾತ್ರ ಮಕ್ಕಳು ಊಟ ತಿನ್ನುತ್ತಾರೆ. ನಗರದ ಮಕ್ಕಳಿಗೆ ಹಸಿವೆ ಗೊತ್ತಿಲ್ಲ. ರುಚಿ ಗೊತ್ತಿರುವುದಿಲ್ಲ. ಆಸ್ವಾದಿಸುತ್ತಾ ತಿನ್ನುವುದಿಲ್ಲ.

ಪಟ್ಟಣದಲ್ಲಿ ನಡೆಯುವ ಅದ್ಧೂರಿ ಮದುವೆಗಳನ್ನು ನೋಡುತ್ತೇವೆ. ಛತ್ರಕ್ಕೆ ಹೋಗುತ್ತಿದ್ದಂತೆ welcome drink ಹೆಸರಿನಲ್ಲಿ ಶರಬತ್ತು ಕೊಡುತ್ತಾರೆ. ಆ  ಶರಬತ್ತನ್ನು ಖಾಲಿ ಮಾಡದೆ ಎರಡೇ ಗುಟುಕು ಕುಡಿದು ಲೋಟ ಅಲ್ಲೇ dust bin ಗೋ ಅಥವಾ ಅಲ್ಲೇ ಎಲ್ಲಾದರೂ ಇಟ್ಟು ಹೊರಡುತ್ತಾರೆ. ಮೊದಲೇ ಬೇಡ ಅಂತ ಹೇಳುವ ಪದ್ದತಿಯೇ ಇಲ್ಲ.. ಕುಡಿದರೆ ಎಲ್ಲಿ ಆರೋಗ್ಯ ವ್ಯತ್ಯಾಸ ಆಗುತ್ತೋ ಅಂತಲೋ ಅಥವಾ ಬಾಯಿ ರುಚಿ ಇಲ್ಲವೆಂತಲೋ ಹಾಗೆ ಬಿಸಾಡೋದು ನೋಡಿದಾಗ ಕೋಪ ನೆತ್ತಿಗೇರುತ್ತದೆ. ತಿಂಡಿ ಮಾಡಿ ಅಂತ ಒತ್ತಾಯ ಮಾಡಿದರೆ, ತಿಂಡಿ ಆಗಿದೆ ಬೇಡ ಅಂತ ಹೇಳದೆ…ರುಚಿ ನೋಡೋಣಾಂತ ಡೈನಿಂಗ್ ಹಾಲ್ಗೆ ಹೋಗಿ, ರುಚಿ ನೋಡಿ ಅರ್ಧಂಬರ್ಧ ತಿಂದು ಬರುತ್ತಾರೆ. ಸಾಲದಕ್ಕೆ ತಮ್ಮ ಸಣ್ಣ ಮಕ್ಕಳಿಗೂ ಒಂದು ಪ್ಲೇಟ್ ಫುಲ್ಲ ತಿಂಡಿ ಹಾಕಿಸಿ ಅದನ್ನು ಕೂಡ ಸರಿಯಾಗಿ ತಿನ್ನದೆ ಎದ್ದು ಹೋಗುತ್ತಾರೆ . ಇನ್ನು ಊಟದ ಸಮಯದಲ್ಲಿ ಬಾಳೆಎಲೆ  ಜೊತೆಗೆ ಮಿನರಲ್ ವಾಟರ್ ಬಾಟಲ್  ಕೊಡುತ್ತಾರೆ . ಆ ನೀರು ಕುಡಿಯದಿದ್ದರೂ ಸಹ ಬಾಟ್ಲಿಯನ್ನು ಓಪನ್ ಮಾಡಿ ನೀರನ್ನು ಬಾಳೆ ಎಲೆ ಮೇಲೆ ಚಿಮುಕಿಸುತ್ತೇವೆ. ಬಡಿಸುವವರು ಒಬ್ಬರಾದ ಮೇಲೆ ಒಬ್ಬರು ಬರುತ್ತಾನೆ ಇರ್ತಾರೆ. ಉಪ್ಪಿನ ಕಾಯಿ, ಗೊಜ್ಜು ,ತರಕಾರಿ ಪಲ್ಯ, ಹಪ್ಪಳ, ಬೋಂಡ ಇತ್ಯಾದಿ……. ಪೂರಿ ಸಾಗು ಹೀಗೆ ಬಾಳೆಎಲೆ ತುಂಬಿರುತ್ತೆ. 75%ಜನ ಯಾವುದನ್ನು ಬೇಡ ಅನ್ನುವುದಿಲ್ಲ. ರುಚಿಯಾದ ಊಟವನ್ನು ತಿಂದು ,ಉಳಿದುದನ್ನು ಬಿಟ್ಟರಾಯಿತು ಎನ್ನುವ ದುರಂಹಕಾರ.

 

ಫೋಟೋ ಕೃಪೆ : onmanorama

ಊಟ ಮಾಡುವನ ಕತೆ ಇದಾದರೆ ಬಡಿಸುವವ ತಿಂದರೆ ತಿನ್ನಲಿ ಬಿಟ್ಟರೆ ಬಿಡಲಿ ಎಂದು ಒಂದಾದ ಮೇಲೊಂದು ಊಟ ಸುರಿಯುತ್ತಾ ಹೋಗುತ್ತಾರೆ. ಬಡಿಸುವುದು ನಮ್ಮ ಧರ್ಮ ,ತಿನ್ನುವುದು ಬಿಡುವುದೂ ನಿಮ್ಮ ಕರ್ಮ. ಯಾರು ಕೂಡಾ ತೃಪ್ತಿಯಿಂದ ಊಟ ಮಾಡುವುದಿಲ್ಲ. ಗಬಗಬನೇ ಊಟ ಮಾಡಬೇಕು ಇಲ್ಲವೆಂದರೆ ಮುಂದಿನ ಪಂಕ್ತಿಯವರು ನಮ್ಮ ಹಿಂದೆ ಬಂದು ನಿಂತಿರುತ್ತಾರೆ. ಕೆಲವರು ತಾಂಬೂಲ, ಬೀಡಾ, ಬಾಳೆಹಣ್ಣು ಬಿಟ್ಟಿರುವುದೂ ಉಂಟು. ಕ್ಲೀನ್ ಮಾಡುವವರು ಯಾವುದನ್ನೂ ಗಮನಿಸದೆ ಎಲ್ಲವನ್ನು ಸ್ವಚ್ಛ ಮಾಡಿಬಿಡುತ್ತಾರ.

ಸುಮಾರು ಅರ್ಧ ಭಾಗ ಕಸದ ಬುಟ್ಟಿಗೆ ಹೋಗುತ್ತೆ. ನಗರದಲ್ಲಿ ಉಳಿದ ಅಡುಗೆಯನ್ನು ಕೊಡಿ ಅಂತ ಯಾರು ಬರುವುದಿಲ್ಲ. ಎಲ್ಲ ಕಸದ ಬುಟ್ಟಿಗೆ ಹೋಗುತ್ತೆ. ಇಲ್ಲಿ ಸ್ವಾಭಿಮಾನದ ಬದುಕು .ದಿಢೀರ್ ಸಂಪಾದನೆ ಆಗಬೇಕು, ಶ್ರೀಮಂತರಾಗಬೇಕು, ಮೋಸನೋ ನ್ಯಾಯನೋ ಒಟ್ಟಿನಲ್ಲಿ ಹಣ ಮಾಡಬೇಕು. ಅಕ್ಕಪಕ್ಕದಲ್ಲಿ ಏನಾದರೂ ಗಮನಿಸುವುದಿಲ್ಲ. ನಾವು ನಮ್ಮ ಮನೆ, ನಮ್ಮ ಬದುಕು ಇಷ್ಟೆ ಇಲ್ಲಿ. ಇದರ ವಿರುದ್ಧವಾಗಿ ನಡೆದರೆ ನಾವು ಮೂರ್ಖರಾಗುತ್ತೇವೆ. ಪಟ್ಟಣದಲ್ಲಿ ಬದುಕುವುದು ಗೊತ್ತಿಲ್ಲ ಎನ್ನುವ ಅಪಮಾನಕ್ಕೆ ಒಳಗಾಗುತ್ತೇವೆ.

ಸ್ವಾರ್ಥಕ್ಕಾಗಿ ಓಡುವ ಬದುಕು ನಗರ ಜೀವನ ಎನ್ನುವುದು ಸತ್ಯ.


  • ದೇವರಾಜ ಚಾರ್ (ನಿವೃತ್ತ ಕೆಪಿಸಿಎಲ್ ಇಂಜೀನಿಯರ್) ಮೈಸೂರು. 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW