ರೇಶ್ಮಾಗುಳೇದಗುಡ್ಡಾಕರ್ ಅವರ ಈ ಕತೆಯಲ್ಲಿ ಒಂದು ಕಡೆ ಮಾನವೀಯತೆಯ ಪಾಠ ಹೇಳುತ್ತದೆ, ಇನ್ನೊಂದು ಕಡೆ ಮನುಷ್ಯನ ದುರಾಸೆಗೆ ಪ್ರಕೃತಿಯ ನೀಡುವ ಉತ್ತರ ನೋಡಬಹುದು. ಕತೆ ಓದಿ ತಪ್ಪದೆ ನಿಮ್ಮ ಅಭಿಪ್ರಾಯ ತಿಳಿಸಿ…
‘ಶರಣ ಸರ್, ನೋಡಿ… ನಿಮ್ಮ ಬಿಲ್ ಹದಿನೆಂಟು ಸಾವಿರದ ಒಂಭೈನೂರ ಎಪ್ಪತ್ತು ಅಯ್ತು’… ಎಂದು ಕಿರಾಣಿ ಅಂಗಡಿ ಸೇಟು ಏರುದನಿಯಲ್ಲಿ ಕೂಗಿದ . ಜನ ಜಂಗುಳಿ ಇದ್ದ ಅಂಗಡಿ ಅದು, ಶರಣ ಮುಂಜಾನೆಯೇ ಅಂಗಡಿಗೆ ಬಂದು ಕುಳಿತಿದ್ದ. ತನ್ನ ಪಾಳಿ ಬರೂವವರೆಗೂ ಕಾದು ಸಾಮಾನು ಲಿಸ್ಟ್ ಕೊಟ್ಟು ಹೊರ ಕುಳಿತಿದ್ದ.
ಮೊದಲೇ ಅಂಗಡಿ ಗಿಜಿ ಗಿಜಿ ಎನ್ನುತ್ತಿತ್ತು . ಇನ್ನು ಈ ಹಬ್ಬದ ಸಮಯದಲ್ಲಿ ಬೇಕೆ?… ದಸರಾ ,ದೀಪಾವಳಿ ,ಕಾರ್ತಿಕ ,ಹಾಗೆ ಹಬ್ಬದ ಪಟ್ಟಿ ಬೆಳೆಯುತ್ತದೆ. ಎದ್ದು ಒಳ ಹೋಗಿ ಬಿಲ್ ತೆಗೆದು ನೋಡಿದಾಗ ಜೇಬ್ ನಲ್ಲಿ ಹಣ ಅಷ್ಟು ಇರಲಿಲ್ಲ. ಸೇಟು ” ಒಮ್ಮೆ ಸಾಮಾನು ನೋಡಿಕೊಳ್ಳಿ ” ಎಂದ. ಶರಣ “ಅದೇಲ್ಲ ಮನೆ ಹೆಂಗಸರ ಕೆಲಸ, ನಂದು ಎನಿದ್ದರೂ ತಂದು ಹಾಕುವುದು ಅಷ್ಟೇ” ಎಂದ. ಸೇಟು “ಎಲ್ಲ ಜಮಾ ಮಾಡುವೀರಾ? ಇಲ್ಲ… ಮುಂದಿನ ತಿಂಗಳು ಕೊಡುವಿರಾ…? ” ಎಂದ .
“ಎಲ್ಲ ಒಂದೇಸಲ ಕಟ್ಟುವೆ ಪೋನ್ ಪೇ ಐತೇನು” ಎಂದ. “ಹಾ ಇದೆ ನೋಡಿ “ಎಂದು ಸೇಟು. ತನ್ನ ಜೇಬಿನಿಂದ ಮೊಬೈಲ್ ತೆಗೆದು ಸ್ಕ್ಯಾನ್ ಮಾಡಿದ. ಹಣ ಪಾವತಿಯಾಯಿತು. ಎಲ್ಲವನ್ನು ತನ್ನ ಆಳಿನ ಕೈಗೆ ಒಪ್ಪಿಸಿ, ಮನೆಗೆ ಮುಟ್ಟಿಸುವಂತೆ ಹೇಳಿ, ತಾನು ಬೈಕ್ ಹತ್ತಿ ತೋಟದ ಕಡೆ ಹೋರಟ.
ಈ ಶರಣ ಬಡ್ಡಿ ಬಸಪ್ಪನ ಒಬ್ಬನೇ ಮಗ. ಶರಣ ಅಪ್ಪನ ವ್ಯಹಾರದ ಜೊತೆಗೆ ತನ್ನ ಗೊಬ್ಬರದ ಅಂಗಡಿಯನ್ನು ಇಟ್ಟುಕೊಂಡಿದ್ದ. ಜೀವನಕ್ಕೆ ಯಾವುದು ಕಡಿಮೆ ಇರಲಿಲ್ಲ. ಹೀಗಿರುವಾಗ ಬಸಪ್ಪ ಕಾಲಿಗೆ ಆದ ಗಾಯ ಒಂದು ನೆವವಾಯಿತು. ಹಾಸಿಗೆ ಹಿಡಿದವನು ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಎಲ್ಲ ದವಾಖಾನಿ ಖದ ಬಡಿದು ಒಂದು ವಾರದಲ್ಲೇ ಗೊಟಕ್ ಎಂದ.

ಫೋಟೋ ಕೃಪೆ : google
ತಂದೆಯ ಜೊತೆ ದವಾಖಾನಿ ಸುತ್ತಿದ ಶರಣನಿಗೆ ಲೆಕ್ಕಪತ್ರ ಯಾವುದು ತಿಳಿಯಲಿಲ್ಲ. ದವಾಖಾನಿ ಬಿಲ್ಲು ಹನುಮಂತನ ಬಾಲದಂತೆ ಬೆಳೆಯಿತೆ ಹೊರತು, ಬಸಪ್ಪನ ಪ್ರಾಣ ಬರಲಿಲ್ಲ.
ಬಡ್ಡಿಯ ವ್ಯವಹಾರ ಮಾಡಿ ಗಳಿಸಿದ ಆಸ್ತಿ ಅವನು ಸತ್ತ ಮೇಲೆ ಅರ್ಧ ಕರಗಿತು. ಇತ್ತ ಬಸಪ್ಪನ ಹೆಂಡತಿ ಸರಸಮ್ಮ ಯಾವುದೇ ಪತ್ರ ಇದ್ದರೇ ನೀಡು ,ಇಲ್ಲವಾದರೆ ಎಲ್ಲವನ್ನು ಸುಟ್ಟು ಇದ್ದದ್ದರಲ್ಲಿ ಇರು ರೂಕ್ಕದ ಧಿಮಾಕು ಬಿಡು ಎಂದು ಮಗನಿಗೆ ತಾಕೀತು ಮಾಡಿದ್ದಳು. ಬಸಪ್ಪ ಸಾಯುವ ಒಂದು ವಾರದ ಮೊದಲು ಹಣ ಪಡೆದ ಸಂಕವ್ವ. ಬಡ್ಡಿ ಕಟ್ಟಲಾಗದೆ ತನ್ನ ಜೀವನೋಪಾಯಕ್ಕಾಗಿ ಇದ್ದ ಹಸುವನ್ನು ಮಾರಿ ಅಸಲು ನೀಡಲು ಮುಂದಾಗಿದ್ದರೂ ಬಸಪ್ಪ ಅದನ್ನು ಮುಟ್ಟದೆ ಸತಾಯಿಸಿದ್ದ. ಆ ಬಡಪಾಯಿ ಹೆಣ್ಣು ಮಗಳು ಕಣ್ಣೀರು, ನೋವು- ವ್ಯಥೆಯನ್ನು ಕಣ್ಣಾರೆ ಕಂಡ ಸರಸಮ್ಮನ ಹೃದಯ ಒದ್ದಾಡಿತ್ತು .ಗಂಡನಿಗೆ ಬುದ್ದಿಮಾತು ಹೇಳುವುದು ಬಿಟ್ಟು ವರ್ಷಗಳೇ ಕಳೆದಿದ್ದವು.
ಈ ಘಟನೆ ನಂತರ ಆದ ಬದಲಾವಣೆಗಳು ಅವಳಿಗೆ ಮತ್ತಷ್ಟು ವೈರಾಗ್ಯವನ್ನು ತಂದೂಡ್ಡಿದ್ದವು. ಅತ್ತ ಬಸಪ್ಪ ಸತ್ತ ಎಂದು ತಿಳಿದ ಕೂಡಲೇ ,ಹೆಣ ಬರುವ ಮೊದಲೇ ಸರಸಮ್ಮ ಸಂಕವ್ವನ ಜತೆ ಇದ್ದ ಮಾಳ, ಕರಿಯಪ್ಪ,ದ್ಯಾಮವ್ವರ ಸಾಲದ ಪತ್ರ ಸುಟ್ಟು ಅವರ ವಸ್ತುಗಳನ್ನು ಹಿಂದಿರುಗಿಸಿ ನಿರಾಳಳಾಗಿದ್ದಳು.
ಮಗ ಬಂದಾಗ ಸಮಯ ನೋಡಿ ಅವನಿಗೆ ತಿಳಿ ಹೇಳಿದಳು. ಶರಣನು ಯಾವ ತಗಾದೆಯೂ ಎತ್ತದೆ ಸರಿ ಎಂದು ತೆಪ್ಪಗಾದ. ಅದಕ್ಕೂ ಬಲವಾದ ಕಾರಣವಿತ್ತು. ಬಸಪ್ಪ ಬದುಕಿದ್ದಾಗಲೇ ಎಂ ಎಲ್ ಎ ಮುನಿಯಪ್ಪನ ಮಗನ ಜೊತೆ ಸೇರಿ ಬಸಪ್ಪನಿಗೆ ತಿಳಿಯದ ಹಾಗೆ ಒಂದಷ್ಟು ಜಮೀನನ್ನು ಬಡ್ಡಿಯ ಹಣದಲ್ಲಿ ಖರೀದಿ ಮಾಡಿದ್ದ.
ಆ ಜಮೀನು ಅವನ ಕನಸಾಗಿತ್ತು . ಅದನ್ನು ಖರೀದಿಸಲು ಬಹು ಪ್ರಯಾಸವಾಗಿತ್ತು, ಎಂ.ಎಲ್.ಎ ಮಗನ ಕೃಪಾಕಟಾಕ್ಷದಿಂದ ದುಪಟ್ಟು ಹಣ ನೀಡಿ ಖರೀದಿಸಿದ್ದ . ನಾಲ್ಕು ವರ್ಷ ಕೆಳಗೆ ಆ ಜಾಗವು ಫಲವತ್ತಾಗಿ ಬಂದು ಸಂಪತ್ಬರಿತವಾಗಿತ್ತು. ಉಳಿದ ಜಾಗದಲ್ಲಿ ಅಡಿಕೆ, ತೆಂಗು ಬೆಳೆಯಬೇಕು ಎಂದು ಬ್ಯಾಂಕ್ ಸಾಲ ಪಡೆದಿದ್ದ ಮತ್ತೊಂದು ಬ್ಯಾಂಕ್ ಅಲ್ಲಿ . ಅದು ರೋಹನ್ ದೆಸೆಯಿಂದ…!? ಬಸಪ್ಪ ಸತ್ತ ವರ್ಷಕ್ಕೆ ದಸರಾ ಹಬ್ಬ ಮತ್ತೆ ಬಂದಿತು . ಸಾಲ ಪಡೆದ ಜನರು ಸಂಭ್ರಮದಿಂದ ಹಬ್ಬ ಮಾಡಲು ಉತ್ಸುಕರಾಗಿದ್ದರು.
ಬಸಪ್ಪನ ಅಕಾಲಿಕ ಮರಣ, ಎಲ್ಲ ಸಾಲ ಮನ್ನಮಾಡಿತ್ತು.
ಬಡ್ಡಿ, ಚಕ್ರಬಡ್ಡಿಯಿಂದ ಬಸಪ್ಪ ಬಡವರನ್ನು ಕಟ್ಟು ಹಾಕಿದ್ದ. ಅವನ ಸಾಲದ ಸುಳಿಗೆ ಸಿಕ್ಕು ಮಂದಿ ಒದ್ದಾಡುತ್ತಿದ್ದರು. ಅವನ ಸಾವಿಗೆನಿಂದ ಊರಿನ ದೈವಕ್ಕೆ ಜನ ಕೋಟಿ ಕೋಟಿ ನಮನಗಳು ಹಾಕಿದ್ದರು. ಹಬ್ಬಕ್ಕೆ ಇನ್ನೂ ಕೆಲವೇ ದಿನ ಬಾಕಿ ಇದ್ದವು , ಜನರು ಬಟ್ಟೆ,ಸಾಮಾನು ,ಗಾಡಿಗಳ ಖರೀದಿಯ ಭರದಲ್ಲಿ ಇದ್ದರು . ಶರಣನೂ ಈ ಹಬ್ಬ ಮುಗಿದ ಮೇಲೆ ತೋಟ ಮಾಡುವ ಹೆಬ್ಬಯಕೆಯಲ್ಲಿ ಇದ್ದ.

ಫೋಟೋ ಕೃಪೆ : google
ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹಗಲು, ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸುತ್ತ ಮುತ್ತಲಿನ ಊರಿನ ಕೊಳ್ಳಗಳು ತುಂಬಿ ಹರಿದವು. ರಸ್ತೆಗಳು ಮಾಯವಾದವು. ಈ ಮಳೆಗೆ ಬರೋಬ್ಬರಿ ನಲವತ್ತು ವರ್ಷಕ್ಕೆ ಕೊಕನೂರಿನ ಕೆರೆ ತುಂಬಿ ಕೋಡಿ ಹರಿಯಿತು. ಈ ಮಳೆಗೆ ಶರಣನ ಜಮೀನು ಕೆರೆಯ ಮೂಲಸ್ಥಾನವಾಯಿತು.
ರಾಜಕೀಯ ಪ್ರಭಾವದಿಂದ ಕೆರೆಯನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ಶರಣನ ಜಾಮೀನು ನೀರು ಪಾಲಾಗಿತ್ತು. ಈ ಜಮೀನನ್ನು ಕೊಡಿಸಿದ ರೋಹಿತ್ ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪ್ರಕೃತಿಯ ಆಟ ಬಲ್ಲವರಾರು. ಇತ್ತಕಡೆ ಕೆರೆ ವಿಶಾಲವಾಯಿತು, ಮತ್ತೆ ತನ್ನ ಸಿರಿಯನ್ನು ಪಡೆಯಿತು. ಅದರ ಒಡಲು ಹಿಗ್ಗಿತು . ಜಮೀನಿನ ಭೂಮಿ ಕುಸಿದು ನೀರು ಪನ್ನಿರಾಗಿ ಹರಿಯಿತು.
ಶರಣನ ಬದುಕು ಮೂರಾಬಟ್ಟೆ ಆಯಿತು. ಆ ಜಮೀನಿಗಾಗಿ ಮಾಡಿದ ಸಾಲ ಮತ್ತು ಹೊಸದಾಗಿ ಮಾಡಿದ ಸಾಲಕ್ಕೆ ಮನೆ ,ಅಂಗಡಿಗಳು ಬ್ಯಾಂಕಿನ ಪಾಲಾದವು. ಎಲ್ಲವ ಕಳೆದುಕೊಂಡ ಶರಣ ತನ್ನೂರಿಗೆ ಮರಳಿದ.
- ರೇಶ್ಮಾಗುಳೇದಗುಡ್ಡಾಕರ್