ಸರ್ವಜನಾಂಗದ ಶಾಂತಿಯ ಭಾಷೆ : ಎಸ್.ದಿವಾಕರ್

ಕನ್ನಡದ ಸಂದರ್ಭದಲ್ಲಿ ಡಿ.ವಿ.ಜಿ, ವಿ.ಸೀ ಮತ್ತು ಶಂಕರ ಮೊಕಾಶಿ ಪುಣೇಕರ, ಎಂ.ಚ್.ಕೃಷ್ಣಯ್ಯ ಅವರ ಬಹುಕಲಾಸಕ್ತಿಯ ಪರಂಪರೆಯ ಸಮರ್ಥ ವಾರಸುದಾರ ಎಂದು ದಿವಾಕರ್ ಅವರನ್ನು ಕರೆಯಬಹುದು. ಸಣ್ಣಕತೆಗಾರ ದಿವಾಕರ್ ಅವರ ಹಿರಿಯ ಸಾಹಿತಿಗಳಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮೊದಲ ಬಾರಿಗೆ ನಾನು ೧೯೭೫ ರಲ್ಲಿ ದಿವಾಕರ್ ಅವರ ಲೇಖನವನ್ನು ಪ್ರಜಾವಾಣಿಯಲ್ಲಿ  ಓದಿದ್ದೆ. ಸಾಹಿತ್ಯಲೋಕದ ಭೀಷ್ಮ ಡಿ.ವಿ.ಜಿ. ಕಣ್ಮರೆ ಎಂಬ ಶೀರ್ಷಿಕೆ ಇರಬೇಕು. ಅದರಲ್ಲಿ ಅವರು ಡಿ.ವಿ.ಜಿ ಯವರನ್ನು ತಾವು ಮೊದಲು ಭೇಟಿಯಾದ ಪ್ರಸಂಗವನ್ನು ಸ್ವಾರಸ್ಯಕರವಾಗಿ ನಮೂದಿಸಿದ್ದರು. ಆದ್ದರಿಂದಲೆ ಅದು ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ. ನಂತರ ಎಂಬತ್ತರ ಸುಮಾರಿಗೆ ಅವರ ‘ಇತಿಹಾಸ’ ಎನ್ನುವ ಕಥಾ ಸಂಕಲನ ಪ್ರಕಟವಾದಾಗ ಅದನ್ನು ಓದಿ ಬೆಚ್ಚಿಬಿದ್ದಿದ್ದೆ. ಅದಕ್ಕೆ ಕಾರಣ ಅದರಲ್ಲಿ ಕ್ರೌರ್ಯ’ ಎನ್ನುವ ಕತೆ.

ಸುಶಿಕ್ಷಿತ ಸಂಪ್ರದಾಯ ಮನೆತನದ ಹೆಣ್ಣು ಮಗಳು ಅಲುಮೇಲು ಅನುಭವಿಸಿದ ಕ್ರೌರ್ಯದ ಅನನ್ಯ ಅನಾವರಣ ನನ್ನ ತಲ್ಲಣಕ್ಕೆ ದೂಡಿತ್ತು. ಈಗಲೂ ಅದು ನನ್ನ ನೆನಪಲ್ಲಿ ಚಿರವಾಗಿ ಉಳಿದಿದೆ. ಅದನ್ನು ಓದಿದ ಗಿರಿಜಾ ಅವರಿಗೆ ಒಂದು ಪತ್ರ ಬರೆದು ‘ ಅವರ ಕತೆಗಳು ತನ್ನನ್ನು ತಾನು ಕನ್ನಡಿಯಲ್ಲಿ ನೋಡಿ ಕೊಳ್ಳುವ ಹಾಗೆ ಮಾಡಿತು” ಎಂದು ಬರೆದಿದ್ದರು. ಮೇಲಿನ ಮಾತುಗಳನ್ನು ಇಲ್ಲಿ ಉಲ್ಲೇಖ ಮಾಡಲು ಕಾರಣವಿದೆ. ಮೊದಲನೆಯ ಡಿ.ವಿ.ಜಿ ಯವರದನ್ನೆ ತೆಗೆದುಕೊಂಡರು ಈ ಸಂಕಲನ ದಲ್ಲಿ ಅವರ ಹೆಸರನ್ನು ಶೀರ್ಷಿಕೆ ಯಾಗಿ ಹೊಂದಿದ ಲೇಖನವಿದೆ. ಅದರಲ್ಲಿ” ಡಿ.ವಿ.ಜಿ ಆ ಕಾಲದಲ್ಲೆ ಎಷ್ಟರಮಟ್ಟಿಗೆ ಸರ್ರಿಯಲಿಸಮ್ ಕುರಿತು ಮಾತನಾಡುವಷ್ಟು ಆಧುನಿಕರಾಗಿದ್ದರು ಅವರೊಬ್ಬರೆ ಅದನ್ನು ಕುರಿತು ಬರೆದ ಲೇಖಕ “ಎಂದು ಅವರ ಲೇಖನದಿಂದ ಉದ್ದರಿಸಿದ್ದಾರೆ. ಅಷ್ಟು ಮಾತ್ರವಲ್ಲ ಅವರ ಪ್ರಸಿದ್ಧವಾದ ಮಂಕುತಿಮ್ಮನ ಕಗ್ಗದ ” ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ, ಮದುವೆಗೊ ಮಸಣಕೊ” ಎನ್ನುವ ಮಾತುಗಳು ಈಗ ಕ್ಲೀಷೆಯಾಗಿ ಪರಿಣಮಿಸಿವೆ ಎಂಬುದನ್ನು ಸೂಚಿಸಲು ಬಳಸಿದ್ದಾರೆ. ಹೀಗೆ ಏಕಕಾಲಕ್ಕೆ ಅವರ ಸಾಧನೆ ಮತ್ತು ಮಿತಿಯನ್ನು ಗುರುತಿಸಿರುವುದು ಅವರ ವಸ್ತುನಿಷ್ಠತೆಗೆ ಸಾಕ್ಷಿ.

ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವನ್ನು ಭಾಷೆಯನ್ನಾಗಿ ಬದಲಾಯಿಸಿ ಬಳಸುವಾಗ, ಬಹುಶಃ ಅವರು ಎದುರಿಸಿದ ಸಮಸ್ಯೆ ಎಂದರೆ ಅದಕ್ಕೆ ಇರುವ ತೊಡಕುಗಳು ಯಾವುವು ,ಅದಕ್ಕೆ ಕಾರಣಕರ್ತರು ಯಾರು ಮತ್ತು ಅದನ್ನು ಸಾಧಿಸಲು ಇರುವ ಪರ್ಯಾಯಗಳು ಯಾವುವು ಎನ್ನುವ ಅನ್ವೇಷಣೆ ಈ ಪ್ರಬಂಧ ಸಂಕಲನದ ಪ್ರಮುಖ ತಾತ್ವಿಕ ಚೌಕಟ್ಟಾಗಿದೆ. ಅವರು ಶಾಂತಿಯ ಭಾಷೆಯ ತೊಡಕುಗಳನ್ನು ಗುರು ತಿಸುವುದು ಯು.ಜಿ .ಅವರನ್ನು ಕುರಿತ ಪ್ರಬಂಧ ದಲ್ಲಿ .ಅದರಲ್ಲಿ ಅವರು ನಾವು ಕಟ್ಟಿ ಕೊಂಡ ಎಲ್ಲಾ ರೀತಿಯ ಧಾರ್ಮಿಕ, ಸಾಮಾಜಿಕ, ವೈಯಕ್ತಿಕ ಸಂಸ್ಥೆಗಳು ಹೇಗೆ ನಮಗೆ ಕಾಲ್ತೊಡಕಾಗಿ ಪರಿಣಮಿಸಿವೆ ಎಂದು ಅವರು ವಿವರಿಸುತ್ತಾರೆ. ಕೊನೆಯದಾಗಿ ಅವರು ಹೇಳಿದ” ನನ್ನ ಬಳಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವಿಲ್ಲ ,ಬೇರೆಯವರ ಬಳಿಯು ಇರಲು ಸಾಧ್ಯವಿಲ್ಲ” ಮಾತುಗಳು ಮಾತ್ರ ಅವರ ಧಾರ್ಷ್ಟ್ಯವನ್ನು ಸೂಚಿಸುತ್ತವೆ. ತೊಡಕುಗಳನ್ನು ಅವರು ಗುರುತಿಸಿದ ಮೇಲೆ ಅವರು ಅದಕ್ಕೆ ನಮ್ಮ ಸಂವಹನ ರಾಹಿತ್ಯ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತಾರೆ. ನಮ್ಮನ್ನು ಬೆಸೆಯಬೇಕಾದ ಭಾಷೆ ಬೇರ್ಪಡಿಸುವ ಸಾಧನವಾಗಿರುವ ದುರಂತವನ್ನು ಗುರುತಿಸಿ ಅದಕ್ಕೆ ಪರ್ಯಾಯ ಮಾಧ್ಯಮಗಳಾಗಿ ಸಂಗೀತ, ಚಿತ್ರಕಲೆ ಮತ್ತು ಕ್ಯಾಮರಾ ಮೂಲಕ ತೆಗೆವ ಭಾವಚಿತ್ರಗಳನ್ನು ಸೂಚಿಸುತ್ತಾರೆ. ಇದಕ್ಕೆ ಆಯಾ ಮಾಧ್ಯಮಗಳ ಕುರಿತು ಬರೆದ ಪ್ರಬಂಧಗಳು ಸಾಕ್ಷಿ. ಅವುಗಳಲ್ಲಿ ಸಂಗೀತ ಹೇಗೆ ಭಾಷೆಯ ಹಂಗನ್ನು ಕಳೆದುಕೊಂಡರು ಅದರ ಅನುಭವವನ್ನು ವಿವರಿಸಲು ಮತ್ತೆ ನಮಗೆ ಗೊತ್ತಿರುವ ಭಾಷೆಯನ್ನೆ ಬಳಸಬೇಕಾದ ಅನಿವಾರ್ಯತೆಯನ್ನು ಎತ್ತಿ ಹೇಳುತ್ತಾರೆ. ಅದರಂತೆ ಚಿತ್ರಕಲೆಯಲ್ಲಿ ಬಣ್ಣದ ಮಾಧ್ಯಮದ ಮೂಲಕ ಇದನ್ನು ಸಾಧಿಸುವ ಬಗೆಯನ್ನು ಸೂಚಿಸುತ್ತಾರೆ. ಒಂದು ಲೇಖನದಲ್ಲಿ ಸಂಗೀತ ಕೇಳಿದ ಕವಿ ಮತ್ತು ಚಿತ್ರ ಕಲಾವಿದರು ಅದನ್ನು ತಮ್ಮ ಕವಿತೆ ಮತ್ತು ಚಿತ್ರದ ಮೂಲಕ ಸ್ಪಂದಿಸಿದ ಅಪೂರ್ವ ಸಂನಿವೇಶವನ್ನು ದಾಖಲಿಸಿದ್ದಾರೆ.

ಕ್ಯಾಮರಾದ ಭಾವಚಿತ್ರ ಕುರಿತು ನಮ್ಮ ಟಿ.ಎಸ್ .ಸತ್ಯನ್ ಕುರಿತ ಪ್ರಬಂಧ ಮತ್ತು ಎ. ಎನ್ ಮುಕುಂದರ ಮುಖಪುಟಗಳ ಪುಸ್ತಕಕ್ಕೆ ಬರೆದ ಮುನ್ನುಡಿ ಹೇಗೆ ಆ ವ್ಯಕ್ತಿಗಳ ಕುರಿತ ಅನನ್ಯ ಕ್ಷಣಗಳ ದಾಖಲೆಗಳಾಗಿ ಅವು ಸಂಭವಿಸಿವೆ ಎಂದು ನಿರೂಪಿಸಿದ್ದಾರೆ. ಇದಲ್ಲದೆ ಅವರು ಕತೆಗಳ ಕುರಿತು, ಬರೆದ ಪ್ರಬಂಧ ಗಳು ಅನುವಾದಗಳು ಅವರ ವೈಯಕ್ತಿಕ ಅನುಭವ ಗಳ ಜತೆಗೆ ಭಾಷಾಂತರಕಾರನಿಗೆ ಇರಬೇಕಾದ ಸಿದ್ಧತೆಗಳನ್ನು , ಅವನ ಪಾತ್ರವನ್ನು ಸೂಚಿಸುವಲ್ಲಿ ಸಫಲರಾಗಿದ್ದಾರೆ.

ಹೀಗೆ ಸರ್ವಜನಾಂಗದ‌ ಶಾಂತಿಯ ಭಾಷೆಯ ಅನ್ವೇಷಣೆಯಲ್ಲಿ ತೊಡಗಿದ ಈ ಪ್ರಬಂಧಗಳು ಸೂಚಿಸುವ ಮೇಲಿನ ಪರ್ಯಾಯಗಳು ಅವರಿಗೆ ಇರುವ ಗಂಭೀರ ಕಾಳಜಿಯನ್ನು ವ್ಯಕ್ತಪಡಿಸುವಲ್ಲಿ ಸಫಲವಾಗಿವೆ ಎಂದೆ ಹೇಳಬಹುದು.

ಇಂದು ಮನುಕುಲ ಒಂದಾಗಿ ಉಳಿಯಲು ವಿಕಾಸಗೊಳ್ಳಲು ಶಾಂತಿಯನ್ನು ಸಾಧಿಸಲು ಈ ಪರ್ಯಾಯಗಳು ನೆರವು ನೀಡುತ್ತವೆ ಎಂಬ ಗಾಢವಾದ ನಂಬಿಕೆಯನ್ನು ಕಾಣಬಹುದು. ಬರಿ ಮನುಕುಲ ಮಾತ್ರವಲ್ಲ ಅವರ ಕಾಳಜಿ ಸಕಲ ಜೀವಸಂಕುಲಗಳ ಶಾಂತಿಯುತ ಸಹಬಾಳ್ವೆಗೆ ಹಾತೊರೆಯುತ್ತದೆ ಎನ್ನುವುದಕ್ಕೆ ಅವರು ನೊಣವನ್ನು ಕುರಿತ ಪ್ರಬಂಧ ಸಾಕ್ಷಿ.
ಕನ್ನಡದ ಸಂದರ್ಭದಲ್ಲಿ ಡಿ.ವಿ.ಜಿ, ವಿ.ಸೀ ಮತ್ತು ಶಂಕರ ಮೊಕಾಶಿ ಪುಣೇಕರ, ಎಂ.ಚ್.ಕೃಷ್ಣಯ್ಯ ಅವರ ಬಹುಕಲಾಸಕ್ತಿಯ ಪರಂಪರೆಯ ಸಮರ್ಥ ವಾರಸುದಾರ ಎಂದು ದಿವಾಕರ್ ಅವರನ್ನು ಕರೆಯಬಹುದು. ಅವರಿಗೆ ‌ಇರುವ ಸರ್ವಜನಾಂಗದ ಶಾಂತಿಯ ಭಾಷೆಯ ಕನಸು- ಉಳಿದವರಲ್ಲಿ ಮೈಗೂಡಿದಾಗ ನನಸಾದೀತು ಎಂದು ಆಶಿಸಬಹುದು. ಇದನ್ನು ‌ಕಳಿಸಿಕೊಡುವ ಮೂಲಕ ನಮ್ಮ ಓದಿಗೆ ಚಿಂತನೆಗೆ ಅವಕಾಶ ಕಲ್ಪಿಸಿದ ದಿವಾಕರ್ ಅವರಿಗೆ ವಂದನೆ , ಅಭಿನಂದನೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW