ಸವದತ್ತಿ ತಾಲೂಕಿನ ಪರಿಚಯ – ಯ.ರು.ಪಾಟೀಲ

IMG-20200530-WA0043

ಕಾದಂಬರಿಕಾರ ಯ.ರು.ಪಾಟೀಲರ ಬರಲಿರುವ ಪುಸ್ತಕ.

ಸವದತ್ತಿ ತಾಲೂಕು ಕುರಿತು ಶ್ರೀ ಯ.ರು.ಪಾಟೀಲರು ಬರೆದಿರುವ ಈ ಪುಸ್ತಕವನ್ನು ಅತ್ಯಂತ ಕುತೂಹಲ ಮತ್ತು ಅಭಿಮಾನದಿಂದ ಓದಿದ್ದೇನೆ. ಯಾಕಂದರೆ ನಾನೂ ಈ ತಾಲೂಕಿನಲ್ಲಿ ಹುಟ್ಟಿ ಬೆಳೆದವನು. ಇಲ್ಲಿನ ಮಣ್ಣಿನ ಋಣ ನನಗೂ ಇದೆ. ಸವದತ್ತಿ ಕುರಿತ ಸಮಗ್ರ ವಿವರಗಳುಳ್ಳ ಪುಸ್ತಕವನ್ನು ನಾನು ಇದುವರೆಗೆ ನೋಡಿರಲಿಲ್ಲ ಈ ಬಗ್ಗೆ ಹುಡುಕುತ್ತಿದ್ದೆ.

ನನ್ನ ಹಾಗೆ ಕುತೂಹಲಿಗಳಾದ ತಾಲೂಕಿನ ಮತ್ತು ಜಿಲ್ಲೆಯ ಅನೇಕ ಇತಿಹಾಸಕ್ತರೂ ಇದ್ದಾರೇನೋ. ಅಂಥವರೆಲ್ಲರ ಮನ ತಣಿಸಲು ಶ್ರೀ ಯ.ರು.ಪಾಟೀಲ ಅವರು ಅತ್ಯಂತ ಶ್ರಮ ವಹಿಸಿ ಈ ಪುಸ್ತಕ ಸಿದ್ಧ ಮಾಡಿ ಕನ್ನಡಿಗರ ಕೈಗೆ ಕೊಟ್ಟಿದ್ದಾರೆ. ತಾಲೂಕಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮತ್ತು ಸವದತ್ತಿ ತಾಲೂಕನ್ನು ರಾಜ್ಯದ ಭೂ ನಕ್ಷೆಯಲ್ಲಿ ಎದ್ದು ಕಾಣುವ ಹಾಗೆ ಮಾಡಿದ್ದು ಶ್ರೀ ಪಾಟೀಲ ಅವರ ಶ್ರಮದ ಹಿಂದಿನ ಸಾರ್ಥಕತೆಯೂ ಹೌದು. ಮತ್ತು ಇದನ್ನು ಓದುವ ನಮಗೆಲ್ಲರಿಗೂ ಆ ಸಾರ್ಥಕತೆಯ ಧನ್ಯತಾಭಾವ ಒದಗಿಸಿ ಕೊಟ್ಟ ಪರಿಯೂ ಹೌದು.

ಸವದತ್ತಿಯಲ್ಲಿಯೇ ಹುಟ್ಟಿ, ಅಲ್ಲಿಯೇ ಬಾಲ್ಯವನ್ನು ಕಳೆದ ಅವರು ವೃತ್ತಿಯಲ್ಲಿ ತಹಶೀಲದಾರರಾಗಿ ನಿವೃತ್ತಿಯಾದವರು. ಅವರು ಬರವಣಿಗೆಯಲ್ಲಿ ಸಿದ್ಧಹಸ್ತರು ಎಂಬುದನ್ನು ಇಲ್ಲಿ ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ. ಈಗಾಗಲೇ ಅವರು ಮಕ್ಕಳಿಗಾಗಿ ಸರಳ ಕತೆಗಳು ಎಂಬ ಪುಸ್ತಕ ತಂದಿದ್ದಾರೆ. ಸವದತ್ತಿ ಉಕ್ಕಿನ ಕೋಟೆ, ಎಲ್ಲರ ಅಮ್ಮ ಎಲ್ಲಮ್ಮ, ಬೆಳವಡಿ ಮಲ್ಲಮ್ಮ ಮಹಾರಾಣಿ, ನಮ್ಮ ಹೆಮ್ಮೆಯ ಕಿತ್ತೂರು, ಕನ್ನಡವೇ ಕಾಯಕ, ಸವದತ್ತಿ ಸಂಸ್ಕೃತಿ ಪರಿಚಯ, ಎಂಬ ಸಂಶೋಧನಾ ಪುಸ್ತಕಗಳನ್ನು ಹೊರತಂದಿದ್ದಾರೆ.ಅಲ್ಲದೆ ಕರುನಾಡ ಸಿಡಿಲು ಬೆಳವಡಿಯ ರಾಣಿ ಮಲ್ಲಮ್ಮ ಹಾಗೂ ಬೆಳ್ಳುಚುಕ್ಕಿ ಕನಸು ಬಂಗಾರದ ಕನಸು ಎಂಬ ಕಾದಂಬರಿಗಳನ್ನೂ ತಂದಿದ್ದಾರೆ. ಇನ್ನೂ ಸಾಕಷ್ಟು ಸಂಖ್ಯೆ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಶಿಕ್ಷಕೇತರ ಸಾಹಿತಿಗಳು ನೀಡುವ ಸಾಹಿತ್ಯದಲ್ಲಿ ಆಡಂಬರವಾಗಲೀ ಅಲಂಕಾರವಾಗಲೀ ಇರುವುದಿಲ್ಲ. ಬದಲಾಗಿ ಅವರ ಅನುಭವವೇ ಸಾಹಿತ್ಯ ರೂಪದಲ್ಲಿ ಮೂಡಿ ಬಂದಿರುತ್ತದೆ. ಅನುಭವಪೂರ್ಣ ಬರವಣಿಗೆ ಹೆಚ್ಚು ಆಪ್ತವಾಗಿರುತ್ತದೆ ಎಂಬುದು ನನ್ನ ನಿಲುವು. ಈ ಪುಸ್ತಕದಲ್ಲಿರುವ ವಿವರಗಳನ್ನು ಗಮನಿಸಿದರೆ ಇದು ಯಾವ ಸಂಶೋಧನಾ ಗ್ರಂಥಕ್ಕೂ ಕಡಿಮೆಯಿಲ್ಲ. ಪಿಹೆಚ್‌ಡಿ ಮಹಾ ಪ್ರಬಂಧಕ್ಕೂ ಕಡಿಮೆಯಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಅಷ್ಟೊಂದು ನಿಖರ ಮಾಹಿತಿಗಳನ್ನು ಕ್ರೋಢೀಕರಿಸಿ, ವರ್ಗೀಕರಿಸಿಕೊಂಡು ಹೇಳಿದ್ದು ನೋಡಿದರೆ ನಮಗೆ ಹಾಗನ್ನಿಸದೇ ಇರದು.

amma

ಸವದತ್ತಿ ತಾಲೂಕಿನ ಪೌರಾಣಿಕ, ಐತಿಹಾಸಿಕ, ಸಮಕಾಲೀನ ವಿವರಗಳನ್ನು ಕ್ರೋಢೀಕರಿಸಿದ ರೀತಿ ನಿಜಕ್ಕೂ ನಮ್ಮನ್ನು ಬೆರಗು ಗೊಳಿಸುತ್ತದೆ. ಈ ತಾಲೂಕಿನಲ್ಲಿ ಏನಿಲ್ಲ? ಪೌರಾಣಿಕ ಕಾಲಕ್ಕೆ ಹೋದರೆ ಕಾರ್ತಿವೀರಾರ್ಜುನ, ಜಮದಗ್ನಿ, ರೇಣುಕೆ, ಪರಶುರಾಮರ ಕತೆ ಇಂದಿಗೂ ನಾಡಿನ ಜನರ ಬಾಯಲ್ಲಿದೆ. ಸವದತ್ತಿ ಎಲ್ಲಮ್ಮನ ಗುಡ್ಡ ಇಂದಿಗೂ ಅದಕ್ಕೆಲ್ಲ ಸಾಕ್ಷೀಭೂತವಾಗಿದೆ. ಲಕ್ಷ ಲಕ್ಷ ಜನ ಇಂದಿಗೂ ಅಲ್ಲಿಗೆ ಧಾವಿಸಿ ಬರುತ್ತಾರೆ. ಕಾರ್ತಿವೀರಾರ್ಜುನನ ರಾಜಧಾನಿ ಮಾಹಿಷ್ಮತಿ ನಗರವಾಗಿದ್ದ ಹೂಲಿ ಇಲ್ಲಿಯೇ ಇದೆ. ರೇಣುಕೆಯ ಚಿತ್ತ ಚಂಚಲಕ್ಕೆ ಕಾರಣವಾದ ಮಲಾಪಹಾರಿ ನದಿ ಇಂದು ಮಲಪ್ರಭೆಯಾಗಿ ಇಲ್ಲಿಯೇ ಹರಿಯುತ್ತಿದ್ದಾಳೆ.

ಇತಿಹಾಸದ ಕತೆಗೆ ಪ್ರೇರಣೆಯಾದ ರಟ್ಟರಸರು ಜಿಲ್ಲೆಯಲ್ಲಿಯೇ ಏಕೈಕ ಸಾಮ್ರಾಟರು, ಮತ್ತು ಜಿಲ್ಲೆಯ ಪ್ರಥಮ ಅರಸರು. ಸುಮಾರು ಮುನ್ನೂರು ವರ್ಷಗಳ ಕಾಲ ಅವರು ಸವದತ್ತಿಯನ್ನು ಆಳುತ್ತಾರೆ ಎಂದು ಹೇಳುವ ಯ.ರು.ಪಾಟೀಲರು ಆ ಕುರಿತು ಹಲವಾರು ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಹತ್ತು ಹಲವು ಇತಿಹಾಸ ತಜ್ಞರ ಪುಸ್ತಕಗಳನ್ನು ಓದಿದ್ದಾರೆ. ವಿಷಯ ಸಂಗ್ರಹಣೆ ಸರಳ ಕೆಲಸವಲ್ಲ. ಲೇಖಕರು ಕೃತಿಗೆ ಎಲ್ಲಿಯೂ ಲೋಪವಾಗಬಾರದು ಎಂಬ ಕಾರಣಕ್ಕೆ ತಾವು ಸಂಗ್ರಹಿಸಿದ ಮಾಹಿತಿಗಳ ಮೂಲಗಳನ್ನೂ ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಇದರಿಂದ ಓದುಗರಿಗೆ ಕೃತಿಯ ನಿಖರತೆಯ ಅರಿವಾಗುತ್ತದೆ.

amma

ಇಲ್ಲೊಂದು ಮಾತು ನಾವು ನೆನಪಿಸಿಕೊಳ್ಳಲೇಬೇಕು. ಇದೇ ಲೇಖಕರು ಸವದತ್ತಿ ಉಕ್ಕಿನ ಕೋಟೆ ಕೃತಿ ಹೊರ ತಂದ ಮೇಲೆ ಸರಕಾರದ ಗಮನಕ್ಕೆ ಬೀಳುತ್ತಿರುವ ಸವದತ್ತಿ ಕೋಟೆಯ ಬಗ್ಗೆ ತಿಳಿಯಿತು. ಸ್ಥಳೀಯ ಜನನಾಯಕರು ಮತ್ತು ಲೇಖಕರ ಪ್ರಯತ್ನಗಳೂ ಸೇರಿ ಕೋಟೆಗೆ ಕಾಯಕಲ್ಪವಾದದ್ದು ಮೆಚ್ಚಲೇಬೇಕಾದ ಸಂಗತಿ. ಲೇಖಕನ ಕೆಲಸ ಬರೀ ಬರೆಯುದಷ್ಟೇ ಅಲ್ಲ. ರಚನಾತ್ಮಕ ಕೆಲಸ ಮಾಡುವುದೂ ಅವನ ಕರ್ತವ್ಯ ಎಂದು ತೋರಿಸಿಕೊಟ್ಟರು ಈ ಲೇಖಕರು. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

ತಾಲೂಕನ್ನಾಳಿದ ದೇಸಾಯರ ಬಗ್ಗೆಯೂ ಇಲ್ಲಿ ಮಾಹಿತಿ ಸಂಗ್ರಹಿಸಿ ಕೊಟ್ಟಿದ್ದಾರೆ. ತಾಲೂಕಿನ ದೇಸಾಯರ ಬಗ್ಗೆ ತಿಳಿಯುವುದೇ ಒಂದು ಗಮ್ಮತ್ತಿನ ಸಂಗತಿ. ಬಹುಶಃ ಕೆಲವು ದೇಸಾಯರು ಕಿತ್ತೂರಿನ ಮತ್ತು ಬೆಳವಡಿಯ ದೇಸಗತಿಗೆ ಕುಲ ಸಂಬಂಧದಲ್ಲಿ ಹತ್ತಿರದವರೇ ಆಗಿದ್ದರು ಎನ್ನುವುದು ಇನ್ನಷ್ಟು ಕುತೂಹಲ ಮೂಡಿಸುತ್ತದೆ. ಸವದತ್ತಿ ಸೀಮೆಯ ನ್ನಾಳಿದ ಸಿರಸಂಗಿ ದೇಸಾಯರು, ತಲ್ಲೂರು ದೇಸಾಯರು, ಚಚಡಿ ದೇಸಾಯರು, ರುದ್ರಾಪುರ ದೇಸಾಯರು ಈ ತಾಲೂಕಿನವರೆ. ಇವರೆಲ್ಲರ ಬಗ್ಗೆ ಇಲ್ಲಿ ಶ್ರೀ ಯ.ರು.ಪಾಟೀಲರು ನಮಗೆ ಗೊತ್ತಿರದ ಅದೆಷ್ಟೋ ವಿವರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ತಾಲೂಕಿನ ಇತಿಹಾಸದ ಬಗ್ಗೆ ನಮಗೆ ಕುತೂಹಲ ಮೂಡಿಸುತ್ತಾರಲ್ಲದೆ. ಮುಂದಿನ ಪೀಳಿಗೆಗೆ ಅಪರೂಪದ ಮಾಹಿತಿಯನ್ನು ಕೊಡುತ್ತಾರೆ. ಚಚಡಿ ದೇಸಾಯರು ಆಗಿನ್ನೂ ಸಮಾಜದ ಮೂಲ ಧಾತುವಿನಿಂದ ದೂರವಿದ್ದ ಕಾಲದಲ್ಲಿ ಅವರಿಗೆ ನೂರಾರು ಎಕರೆ ಭೂಮಿಯನ್ನು ಸಾಗುವಳಿ ಮಾಡಲು ಕೊಡುತ್ತಾರೆ. ಸಾಹಿತ್ಯ ಮತ್ತು ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಕೆಂಪೇಗೌಡರು, ಮೈಸೂರು ಅರಸರು, ಕೊಡಗು ಅರಸರು, ಟೀಪು ಹೈದರಾಲಿಯನ್ನು ಬಿಟ್ಟರೆ ನಾಡು ಆಳಿದವರಿಲ್ಲ. ಆದರೆ ಉತ್ತರ ಕರ್ನಾಟಕದಲ್ಲಿ ಅದೆಷ್ಟು ಸಂಸ್ಥಾನಿಕರು ಆಳಿ ಹೋದರು. ಅದೆಷ್ಟು ಅರಸರು ಸೀಮೋಲಂಘನ ಮಾಡಿದರು. ಅದೆಷ್ಟು ಜನ ಬ್ರಿಟಿಷರ ವಿರುದ್ಧ ಹೋರಾಡಿದರು. ಅವರನ್ನೆಲ್ಲ ಇತಿಹಾಸದಲ್ಲಿ ನಾವು ಓದದಿದ್ದರೆ ಇನ್ಯಾರು ಓದುತ್ತಾರೆ. ನಮ್ಮ ಪೀಳಿಗೆ ನಮ್ಮನ್ನು ಕ್ಷಮಿಸಬೇಕಾದರೆ ಇಂಥ ಪುಸ್ತಕಗಳು ಇನ್ನಷ್ಟು ಬರಬೇಕು. ಯ.ರು.ಪಾಟೀಲರು ಅದಕ್ಕೊಂದು ಮಾರ್ಗ ತೋರಿಸಿದ್ದಾರೆ.

amma

ಅಂಧಕೇಶ್ವರ ದೇವಾಲಯ

ಬರೀ ಆಳರಸರ ಬಗ್ಗೆ ಅಷ್ಟೇ ಅಲ್ಲ. ಇಲ್ಲಿ ಆಗಿ ಹೋದ ಸಿದ್ಧ ಪುರುಷರು, ಋಷಿ ಪುಂಗವರ ಬಗ್ಗೆಯೂ ವಿವರ ಕಟ್ಟಿಕೊಡುತ್ತಾ ಹೋಗುತ್ತಾರೆ. ಯಲ್ಲಮ್ಮ ದೇವಿಯನ್ನು ಶಾಪದಿಂದ ಮುಕ್ತ ಮಾಡಿದ ಎಕ್ಕಯ್ಯ-ಜೋಗಯ್ಯ ಋಷಿಗಳು, ಸಿರಸಂಗಿಯಲ್ಲಿದ್ದ ಶೃಂಗಮುನಿ, ಅಗ್ರಹಾರವಾಗಿದ್ದ ಪೂವಲ್ಲಿ, ಮುನಿಗಳ ನಾಡಾಗಿದ್ದ ಮುನವಳ್ಳಿ, ಮುರುಗೋಡು, ಹೀಗೆ ಎಲ್ಲೆಲ್ಲಿ ಏನು ಇತಿಹಾಸ ಸಿಗುತ್ತದೋ ಎಲ್ಲವನ್ನು ಹೆಕ್ಕಿ ತಮ್ಮ ಜೋಳಿಗೆಗೆ ಹಾಕಿಕೊಂಡಿದ್ದಾರೆ ಪಾಟೀಲರು. ಇದರಿಂದ ಇಡೀ ಪುಸ್ತಕ ತನ್ನ ಆಕರ್ಷಣೆ ಮತ್ತು ಕುತೂಹಲ ಹೆಚ್ಚಿಸಿಕೊಂಡಿದೆ. ಈ ತಾಲೂಕಿನಲ್ಲಿ ಬಗೆದಷ್ಟೂ ವಿವರಗಳು ಸಿಗುತ್ತಾವೇನೋ. ಯಾವುದನ್ನೂ ಬಿಡದ ಪಾಟೀಲರು ನಮಗಾಗಿ ಎಲ್ಲವನ್ನೂ ಬಗೆಯುತ್ತ, ಸಿಕ್ಕ ಇತಿಹಾಸದ ಮುತ್ತುರತ್ನಗಳನ್ನು ಕಟ್ಟಿ ನಮ್ಮ ಮುಂದೆ ಹರವಿಡುತ್ತಾರೆ. ಇವುಗಳನ್ನು ಹೇಳುವಾಗ ಯಾವ ಭಾವಾವೇಷಕ್ಕೂ ಒಳಗಾಗದೆ ಸರಳವಾದ ಭಾಷೆಯಲ್ಲಿ ವಿವರಿಸುತ್ತಾ ಹೋಗುತ್ತಾರೆ.

ಈ ಪುಸ್ತಕದಲ್ಲಿ ಪ್ರಾಸ್ತಾವನೆ, ಪ್ರಾಚೀನ ಇತಿಹಾಸ, ಪರಿಸರ-ಪುರಾಣ, ಪರಂಪರೆಯ ಊರುಗಳು, ಸಂಸ್ಥಾನಗಳು, ಕೋಟೆ-ಕೊತ್ತಲಗಳು, ಧರ್ಮ ಸಂಸ್ಕತಿ, ಜಾನಪದ ಸಾಹಿತ್ಯ, ವ್ಯಕ್ತಿ ಚಿತ್ರಗಳು, ಸ್ವಾತಂತ್ರ್ಯ ಚಳುವಳಿ, -ಆಡಳಿತ, ಸಂಕೀರ್ಣ, ಸವದತ್ತಿ ಮುಂದೇನು ಹೀಗೆ ವರ್ಗೀಕರಣ ಮಾಡಿದ್ದು ವಿಷಯ ತಿಳಿಯಲು ಅನುಕೂಲವಾಗಿದೆ. ಸವದತ್ತಿ ಕುರಿತು ಈ ಹಿಂದೆ ಬಂದ ಪುಸ್ತಕ ಮಾಹಿತಿಗಳನ್ನೂ ನೀಡಿದ್ದಾರೆ ಇಲ್ಲಿ. ಅವು ತಾಲೂಕಿನ ಬಗ್ಗೆ ಒಟ್ಟಾರೆ ಮಾಹಿತಿ ಅರಿಯಲು ಸಾಧ್ಯವಾಗಿರಲಿಲ್ಲ. ಅವುಗಳ ಮಿತಿಯಲ್ಲಿ ಅವು ಕೆಲಸ ಮಾಡಿದವು. ಆ ಕೊರತೆಯನ್ನು ನೀಗಿಸಲೋಸುಗವೇ ಶ್ರೀ ಯ.ರು.ಪಾಟೀಲ ಅವರು ಈ ಆಕರವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ ಅನಿಸುತ್ತದೆ. ಸವದತ್ತಿ ಕುರಿತು ಇದುವರೆಗೆ ಪ್ರಕಟವಾದ ಲೇಖನಗಳು ಮತ್ತು ಅವುಗಳನ್ನು ಬರೆದವರ ಬಗ್ಗೆ ಮಾಹಿತಿಯನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಅವು ಯಾವ ಸಂದರ್ಭದಲ್ಲಿ ಯಾರಿಂದ ಹೇಗೆ ಪ್ರಕಟವಾದವು ಎಂದೂ ಪಾಟೀಲರು ತಿಳಿಸಿದ್ದಾರೆ. ಸವದತ್ತಿ ಮತ್ತು ಇತರ ವಿಷಯಗಳ ಬಗ್ಗೆ ಸಂಶೋಧನಾ ರಚಿಸಿದವರನ್ನು ಮತ್ತು ಪಿ.ಎಚ್‌.ಡಿ ಪ್ರಬಂಧಗಳನ್ನು ಬರೆದವರನ್ನೂ ಉಲ್ಲೇಖಿಸಲಾಗಿದೆ. ೧೯೭೮ ರಿಂದ ಈಚೆಗೆ ರಚಿತವಾದ ಲೇಖನಗಳ ಮಾಹಿತಿಯನ್ನು ನೀಡಿರುವುದು ಪುಸ್ತಕದ ಘನತೆ ಮತ್ತು ನಿಖರತೆಯನ್ನು ಹೆಚ್ಚಿಸಿದೆ. ಸವದತ್ತಿ ಕುರಿತು ಪ್ರಕಟವಾದ ಪಿ.ಎಚ್‌.ಡಿ ಮಹಾ ಪ್ರಬಂಧಗಳನ್ನು ಇಲ್ಲಿ ದಾಖಲಿಸಿ ನಮ್ಮ ಅವಲೋಕನಕ್ಕೆ ಇಟ್ಟಿರುವುದು ಗ್ರಂಥ ಲೇಖಕರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.

amma

ಇಲ್ಲಿ ನನ್ನ ಗಮನ ಸೆಳೆದದ್ದು ನಮ್ಮ ತಾಲೂಕಿನ ಹಳ್ಳಿಗಾಡನಲ್ಲಿ ಹಿಂದೆ ಇದ್ದ ಆಟಗಳ ವಿವರಣೆ. ನಾವೆಲ್ಲ ಚಿನ್ನಿ-ದಾಂಡುಗಳನ್ನು ಆಡಿಕೊಂಡೇ ಬೆಳೆದವರು. ಹುಡ್ತುತು ಆಟ ಇವತ್ತು ಕಬಡ್ಡಿ ಆಟವಾಗಿ ಬದಲಾಗಿದೆ. ಚಿನ್ನೀದಾಂಡು ಕ್ರಿಕೆಟ್ಟಿಗೆ ಹತ್ತಿರವಾಗಿದೆ. ಮರಕೋತಿ ಮತ್ತು ಲಗೋರಿ ಆಟಗಳು ಇವತ್ತಿಗೂ ಮಕ್ಕಳಿಗೆ ಹೊಸ ಆಟಗಳೇ. ಕುಸ್ತಿ ಕೂಡ ಒಂದು ಆಟವೆ. ಕತ್ತಿಯಾಟ, ಗುಂಡಿನ ಒಗೆದಾಟ, ಬಡಗಿಯಾಟಗಳು ಅಂದಿನ ಯುದ್ಧದಾಟಕ್ಕೆ ಸಮೀಪವಿದ್ದಂಥವು. ಸವದತ್ತಿ ತಾಲೂಕಿನಲ್ಲಿ ಇವೆಲ್ಲ ಜನಪ್ರಿಯ ಆಟಗಳೇ. ಲೇಖಕರು ಇಲ್ಲಿ ಅವನ್ನೆಲ್ಲ ಮತ್ತೆ ನಮ್ಮ ನೆನಪಿನ ಪರೆದೆಗೆ ಮೂಡಿಸಿದ್ದಾರೆ.

ತಾಲೂಕಿನ ಬರೀ ಆಟಗಳನ್ನಷ್ಟೇ ಹೇಳಿಲ್ಲ. ಇಲ್ಲಿರುವ ಸಾಂಪ್ರಾದಾಯಿಕ ಊಟ-ತಿನಿಸುಗಳನ್ನೂ ಹೇಳಿದ್ದಾರೆ. ಇಂದು ನಾರ್ಥ್‌ ಡಿಶ್‌ಗಳ ಭರಾಟೆಯಲ್ಲಿ ಕನ್ನಡಿಗರ ಊಟದ ಪರಂಪರೆಯೇ ನಾಶವಾಗುತ್ತಿದೆ. ಇಲ್ಲ ಅದು ಫ್ಯಾನ್ಸಿಯಾಗುತ್ತಿದೆ. ತಾಲೂಕಿನಲ್ಲಿ ಬೆಳೆಯುವ ಗೋದಿ, ಜೋಳ, ಸಜ್ಜೆ, ಕಡಲೆ, ಶೇಂಗಾ, ಎಳ್ಳು, ಹೆಸರು,ಕುಸುಬಿ ಇವುಗಳನ್ನು ಬಳಸಿಕೊಂಡೇ ವೈವಿಧ್ಯಮಯ ಅಡುಗೆ ತಯಾರಿಸುವ ಕಲೆ ನಮ್ಮವರಿಗಿತ್ತು. ಇಲ್ಲಿ ಹೊಲದ ಬದುವುಗಳಲ್ಲಿ ಬೆಳೆಯುವ ಬದನೆ, ಡೊಣ್ಣಿ ಮೆನಸಿನಕಾಯಿ, ಬೆಂಡೆ, ಪುಂಡಿ, ಚವುಳೀಕಾಯಿ, ಹೀರೇಕಾಯಿ, ಸವತೇಕಾಯಿ, ಬಳ್ಳೊಳ್ಳಿ, ಉಳ್ಳಾಗಡ್ಡಿ, ಮುಂತಾದ ಕಾಯಿಪಲ್ಲೆಗಳನ್ನು ಯತ್ಥೇಚ್ಛವಾಗಿ ಬೆಳೆದು-ಬಳಸುವುದು ಇಲ್ಲಿಯ ಜನರ ವಾಡಿಕೆ. ಅದರಲ್ಲೂ ವೈವಿಧ್ಯತೆ ತೋರುವ ತಾಲೂಕಿನ ಜನ ಸಹಜ ಆರೋಗ್ಯವಂತರು. ಹಣ್ಣುಗಳನ್ನೂ ಬೆಳೆಯುತ್ತಾರೆ ಎಂದು ನೆನಪಿಸುವ ಲೇಖಕರು ತಾಲೂಕಿನ ಆಹಾರ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಸವದತ್ತಿ ತಾಲೂಕಿನ ಗೋದೀ ಹುಗ್ಗಿಯ ರುಚಿಯೇ ಬೇರೆ. ಸಂತೆಗಳಲ್ಲಿ, ಜಾತ್ರೆಗಳಲ್ಲಿ ಸಿಗುವ ಪುಗ್ಗೆ, ಭಜಿ, ಸೂಸಲ, ಒಗ್ಗರಣೀ ಚುನಮರಿಗಳು ಇಲ್ಲಿಯೇ ಸಿಗಬೇಕು. ಅವುಗಳನ್ನು ಸವಿಯದ ಹಳ್ಳಿಗಳೇ ಈ ತಾಲೂಕಿನಲ್ಲಿ ಇಲ್ಲ. ಲೇಖಕರು ಅದನ್ನೆಲ್ಲ ರಸವತ್ತಾಗಿ ವಿವರಿಸಿದ್ದಾರೆ.

amma

ಏನಿಲ್ಲ ಈ ಪುಸ್ತಕದಲ್ಲಿ. ತಾಲೂಕಿನ ಜಾತ್ರೆಗಳು, ಹಿಂದು ಹಬ್ಬಗಳು, ಮುಸ್ಲಿಮ್‌ ಹಬ್ಬಗಳನ್ನು ತಾರತಮ್ಯವಿಲ್ಲದೆ ಎಲ್ಲರೂ ಆಚರಿಸುವ ಪದ್ಧತಿ ಈ ತಾಲೂಕಿನದು. ಮೊಹರಮ್‌ ಹಬ್ಬದಲ್ಲಿ ಹಾಡಿ ಹೆಜ್ಜೆ ಹಾಕುವವರೂ ಹಿಂದುಗಳು. ಮಸೀದಿಗಳಿಗೆ ಹೋಗಿ ಎಡೆಕೊಟ್ಟು ಬರುವ ಪದ್ಧತಿ ತಾಲೂಕಿನಲ್ಲಿದೆ. ಹಾಗೆಯೇ ಮಠ, ಗುಡಿಗಳ ಜಾತ್ರೆಯಲ್ಲಿ ಮುಸ್ಲಿಮರೂ ಭಾಗವಹಿಸುವುದು ವಾಡಿಕೆ. ಇಂಥ ಅಪರೂಪದ ಸಂಗತಿಗಳನ್ನು ಇಲ್ಲಿ ದಾಖಲಿಸಿರುವುದು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ.

ತಾಲೂಕಿನ ಸಾಂಸ್ಕೃತಿಕ ಒಳನೋಟಗಳನ್ನೂ ಲೇಖಕರು ಇಲ್ಲಿ ದಾಖಲಿಸಿ ಆಸಕ್ತರ ಮನ ತಣಿಸಿದ್ದಾರೆ. ನಾಟಕ ರಂಗದ ಏಣಗಿ ಬಾಳಪ್ಪ, ಹಾಡುಗಾರ ಹುಕ್ಕೇರಿ ಬಾಳಪ್ಪ, ಸಾಹಿತ್ಯ ಸಂಶೋಧಕ ಶಂ.ಬಾ.ಜೋಶಿ, ನಟರಾದ ಏಣಗಿ ನಟರಾಜ, ಗುರ್ಲಹೊಸೂರಿನ ಅಣ್ಣಾ ಸಾಹೇಬ ಕಿರ್ಲೋಸ್ಕರ, ಮುರುಗೋಡಿನ ರೇಣುಕಮ್ಮ, ಮುಂತಾದವರನ್ನು ನೆನಪಿಸಿಕೊಂಡಿದ್ದಾರೆ. ತಾಲೂಕಿನ ಅನೇಕ ಸಾಹಿತಿ ಕವಿಗಳನ್ನೂ ಈ ಸಂದರ್ಭದಲ್ಲಿ ದಾಖಲಿಸಿರುವುದು ಮಾನನೀಯ ವಾಗಿದೆ. ಬೆಳಗಾವಿ ಜಿಲ್ಲೆಯ ಕನ್ನಡ ಭಾಷೆ ಮೊದಲಿನಿಂದಲೂ ವೈವಿಧ್ಯಪೂರ್ಣವಾದ್ದದ್ದು. ಮಾತಾಡುವ ಕನ್ನಡದಲ್ಲಿ ಹಲವು ಮರಾಠಿ ಪದಗಳು ಈಗ ನಮ್ಮವೇ ಆಗಿ ಹೋಗಿವೆ. ಭಾಷಾ ಶೈಲಿಯಲ್ಲೂ ವ್ಯತ್ಯಾಸವಿದೆ. ಬಳಸುವ ಭಾಷೆಯಲ್ಲಿ ಹಾಸು ಹೊಕ್ಕಾಗಿರುವ ಕನ್ನಡದ ಬೈಗುಳಗಳು ಇಲ್ಲಿ ವಿಶಿಷ್ಠವಾಗಿವೆ.ಅದನ್ನು ಇಲ್ಲಿ ಲೇಖಕರು ಉಲ್ಲೇಖಿಸಿದ್ದಾರೆ. ಬಯ್ಗುಳಲ್ಲಿರುವ ವೈಶಿಷ್ಠ್ಯತೆಯನ್ನು ಕೇಳಿಯೇ ಆನಂದಿಸಬೇಕು. ಕೋಪದಲ್ಲಿಯೂ ಬಯ್ಗಳಗಳು, ಪ್ರೀತಿಯಲ್ಲೂ ಬಯ್ಗುಳಗಳು ಯತ್ಥೇಚ್ಛವಾಗಿ ಇಲ್ಲಿ ಬಳಕೆಯಾಗುವ ಪರಿಯನ್ನು ಲೇಖಕರು ವಿವರಿಸಿದ್ದಾರೆ.

ಇದಷ್ಟೇ ಅಲ್ಲ. ತಾಲೂಕಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳು ಮತ್ತು ಜನಾನುರಾಗಿ ರಾಜಕೀಯ ವ್ಯಕ್ತಿಗಳನ್ನೂ ಈ ಸಂಪುಟದಲ್ಲಿ ತಂದಿರುವುದು ಸಮಕಾಲೀನ ಸಂದರ್ಭಕ್ಕೆ ಲೇಖಕರು ಕೊಟ್ಟ ನ್ಯಾಯವಾಗಿದೆ. ಇಡೀ ಪುಸ್ತಕ ಸವದತ್ತಿ ತಾಲೂಕಿನ ರಸಗವಳದಂತಿದ್ದು ಇತಿಹಾಸ ತಿಳಿಯಬೇಕೆನ್ನುವವರಿಗೆ ಇದು ಅಪರೂಪದ್ದಾಗಿದೆ.

ಇಂಥದೊಂದು ಸಾಹಸ ಮಾಡಿ ತಾಲೂಕಿನ ಋಣ ತೀರಿಸುವ ಕೆಲಸ ಮಾಡಿರುವ ಶ್ರೀ ಯ.ರು.ಪಾಟೀಲರನ್ನು ನಾನು ತುಂಬ ಹೃದಯದಿಂದ ಅಭಿನಂದಿಸುತ್ತೇನೆ. ರಾಜ್ಯದಲ್ಲಿ ತಾಲೂಕುಗಳನ್ನು ಪರಿಚಯಿಸುವ ಅನೇಕರು ಈ ಹಿಂದೆ ಮಾಡಿದ್ದಾರೆ. ಆದರೆ ಯ.ರು.ಪಾಟೀಲರಷ್ಟು ವಿವರ ಸಂಗ್ರಿಸಿಕೊಟ್ಟವರು ಬೇರೆ ಯಾರೂ ಇಲ್ಲ. ಮುಂದೆ ಇಂಥ ಪುಸ್ತಕ ಬರೆಯಬೇಕೆನ್ನುವ ಸ್ನೇಹಿತರು ಇದನ್ನು ಮಾದರಿಯಾಗಿಟ್ಟು ಕೊಳ್ಳಬಹುದು. ನನಗಂತೂ ಸಂತೋಷವಾಗಿದೆ. ಆ ಸಂತೋಷ ಓದುಗರಾದ ನಿಮಗೂ ಸಿಗಲಿ ಎಂದು ಹಾರೈಸುತ್ತ ಲೇಖಕರನ್ನು ಅಭಿನಂದಿಸುತ್ತೇನೆ.

ಲೇಖನ : ಹೂಲಿಶೇಖರ್ (ಖ್ಯಾತ ನಾಟಕಕಾರರು ಮತ್ತು ಚಿತ್ರ ಸಂಭಾಷಣಾಕಾರರು)

bf2fb3_da95706332c74d5c859197064ad9f6f3~mv2.jpg

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಹೂಲಿಶೇಖರ್ ಅವರ ಹಿಂದಿನ ಬರಹಗಳು : 

0 0 votes
Article Rating

Leave a Reply

1 Comment
Inline Feedbacks
View all comments
siddappa patil

ಐತಿಹಾಸಿಕ ಪಾವನ ಭೂಮಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು,

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW