ಹೈನುಗಾರರ ಸಂಕಷ್ಟವನ್ನು ಅರ್ಥಮಾಡಿಕೊಂಡರೆ ಮಾತ್ರ ನಂದಿನಿ ಉಳಿಯುತ್ತದೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳ ಬೇಕಿದೆ.ತಪ್ಪು, ತೊಡಕುಗಳು ನಮ್ಮಲ್ಲೇ ಇದ್ದು, ಪರಿಹಾರವೂ ನಮ್ಮಲ್ಲೇ ಇದೆ ಎನ್ನುತ್ತಾರೆ ಹೈನುಗಾರರಾದ ನಾಗೇಂದ್ರ ಸಾಗರ್ ಅವರು, ತಪ್ಪದೆ ಮುಂದೆ ಓದಿ…
ಸಂಜೆ ಹಾಲು ಸೊಸೈಟಿಗೆ ಹಾಲು ಹಾಕಲು ಹೋದಾಗ ಕಾರ್ಯದರ್ಶಿ ದೀಕ್ಷಿತರು ಇಗೊಳ್ಳಿ ಕಳೆದ ತಿಂಗಳು ನಿಮ್ಮ ಹಾಲಿನ ಬಾಬ್ತು ಎಂದು ಹಣ ನೀಡಿದರು.. ಪಟ್ಟಿ ನೋಡಿದೆ. ಹಣ ಎಣಿಸಿದೆ.. ಮಾರ್ಚ್ ಮಾಹೆಯಲ್ಲಿ 239.1 ಲೀ. ಹಾಲು ಹಾಕಿದ್ದೇನೆ.. 7955 ರೂಪಾಯಿ ಸಿಕ್ಕಿದೆ.. ಅಂದಾಜು ಲೀಟರ್ರಿಗೆ ರೂ. 33.27 ಸಿಕ್ಕ ಹಾಗಾಯಿತು..
ಎರಡನೇ ಬಾರಿ ಹಣ ಎಣಿಕೆ ಮಾಡಿದೆ.. ನಗು ಬಂದಿತು.. ಬಹುಶಃ ನನ್ನ ಹೈನುಗಾರಿಕೆ ಇತಿಹಾಸದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ಡೈರಿಗೆ ನಾನು ಹಾಲು ಹಾಕಿರಲಿಲ್ಲ. ಇಷ್ಟು ಕಡಿಮೆ ಹಣ ಒಯ್ದೂ ಇರಲಿಲ್ಲ.. ಇದೇ ಡೈರಿಯಿಂದ ತಿಂಗಳು ತಿಂಗಳು ನಲವತ್ತು ಐವತ್ತು ಸಾವಿರ ಹಣ ಒಯ್ದ ದಿನಗಳು ನೆನಪಾದವು.. ಅಷ್ಟು ದುಡ್ಡು ಎಣಿಸುವುದೂ ಸಾಕು.. ಹೈನುಗಾರಿಕೆ ಮಾಡಿ ಬಸವಳಿಯವದೂ ಸಾಕು ಎನ್ನುವ ತೀರ್ಮಾನಕ್ಕೆ ನಾನು ಬಂದಿದ್ದೇನೆ.
ಫೋಟೋ ಕೃಪೆ :GOOGLE
ಇರುವುದಕ್ಕೆ ನಮ್ಮ ಕೊಟ್ಟಿಗೆಯಲ್ಲಿ ಹಾಲು ಕೊಡುವ ನಾಲ್ಕು ಹಸುಗಳೂ ಗಬ್ಬವಿರುವ ಎರಡು ಹಸುಗಳೂ, ಮಣಕ, ಗಂಡು ಕರು, ಪುಟ್ಟ ಕರು ಅಂತೆಲ್ಲ ಹನ್ನೆರಡು ಕರಾವಿದೆ.. ಸುಮಾರು ಮೂವತ್ತು ಲೀಟರ್ ಹಾಲನ್ನೂ ಹಿಂಡುತ್ತೇವೆ.. ಆದರೆ ಈ ಎಲ್ಲಾ ಹಾಲು ಮನೆ ಬಾಗಿಲಿನಲ್ಲೇ ಬಿಕರಿ ಆಗುತ್ತದೆ.. ಡೈರಿಯಲ್ಲಿ ಲೋಕಲ್ ಸೇಲ್ ದರ ನಲವತ್ತು ರೂಪಾಯಿ ಇದ್ದು ನಾವೂ ಕೂಡ ಅದೇ ದರದಲ್ಲಿ ಮಾರುತ್ತಿದ್ದೇವೆ.. ನಂದಿನಿಯವರು ಕೊಡುವ ಈಗಿನ ದರ ಮೂವತ್ತ್ಮೂರರ ಆಸುಪಾಸು ಇದ್ದು ಸರಕಾರ ಕೊಡುವ ಪ್ರೋತ್ಸಾಹ ಧನ ಸೇರಿಸಿ ಮೂವತ್ತೆಂಟು ರೂಪಾಯಿ ಸಿಗುತ್ತದೆ.. ಈಗ ನಂದಿನಿಯಲ್ಲಿ ಹಾಲಿನ ಸರಬರಾಜೇ ಕಡಿಮೆ ಇರುವ ಕಾರಣ ಈ ದರ. ಇಲ್ಲದೇ ಹೋದರೆ ಮೂವತ್ತು ರೂಪಾಯಿ ಸಿಗೋದು ಕಷ್ಟವಿತ್ತು.
ಈಗಿನ ಮೇವಿನ ದರ, ದಾನಿ ಮಿಶ್ರಣದ ದರ, ನೀರ್ವಹಣಾ ವೆಚ್ಚ ಇವೆಲ್ಲ ಲೆಕ್ಕ ಹಾಕಿದರೆ ಹಾಲಿನ ದರ ಐವತ್ತು ರೂಪಾಯಿಗೆ ನಿಗದಿ ಮಾಡಿದರೂ ಲಾಭದಾಯಕ ಅಲ್ಲವೇ ಅಲ್ಲ.. ಹಸು ಸಾಕಣಿಕೆಯಲ್ಲಿ ಖರ್ಚುವೆಚ್ಚಗಳಲ್ಲಿ ಉಳಿಸುವ ಸರ್ವ ಉಪಾಯ ಮತ್ತು ಉಳಿತಾಯದ ಸೂತ್ರಗಳನ್ನು ಪಾಲನೆ ಮಾಡುತ್ತಿರುವ ನನ್ನಂತಹವನಿಗೆ ಹಾಲಿನ ಉತ್ಪಾದನೆಗಾಗಿ ಹೈನುಗಾರಿಕೆ ಬೇಡವಾಗಿದೆ.. ಇನ್ನು ಒಟ್ಟರಾಸಿಯಾಗಿ ಹೈನುಗಾರಿಕೆ ಮಾಡುವವರಿಗೆ ಇದು ನಷ್ಟದ ಬಾಬತ್ತೇ ಸರಿ..
ನಮ್ಮ ಮಲೆನಾಡಿನಲ್ಲಂತೂ ದಿನೇ ದಿನೇ ಹಸು ಸಾಕಣಿಕೆಯಿಂದ ವಿಮುಖರಾಗುವವರ ಸಂಖ್ಯೆಯೇ ಹೆಚ್ಚು.. ನಮ್ಮ ವರದಾಮೂಲ ಹಾಲು ಸೊಸೈಟಿಯ ಕತೆಯನ್ನೇ ತಗೊಳ್ಳಿ.. ಸಂಘ ಆರಂಭ ಆಗಿ ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷ ಆಗುತ್ತಾ ಬಂದಿದೆ.. ಈ ವರ್ಷ ಹಾಲಿನ ಸಂಗ್ರಹ ನೆಲ ಕಚ್ಚಿದೆ. ಇಂದು ಬೆಳಿಗ್ಗೆ ಸಂಘಕ್ಕೆ ಬಂದಿದ್ದು ಕೇವಲ 9.1 ಲೀ. ಬರೀ ಸ್ಥಳೀಯ ಬೇಡಿಕೆಯೇ ಇಪ್ಪತ್ತರಿಂದ ಮೂವತ್ತು ಲೀ. ಇದೆ.. ಇಂದಂತೂ ಕಡೆಯ ಘಳಿಗೆಯಲ್ಲಿ ಒಬ್ಬರು ಮಗುವಿಗೆ ಔಷಧಿಗಾಗಿ ಹಾಲು ಬೇಕಿತ್ತು ಒಂದು ಕುಡ್ತೆಯಾದರೂ ಸಾಕು ಎಂದು ಗೋಗರೆದಿದ್ದರು. ಹಾಲೇ ಇರಲಿಲ್ಲ.. ಸಂಜೆಯಾದರೂ ಅಷ್ಟೇ. ನಲವತ್ತರಿಂದ ಐವತ್ತು ಲೀಟರ್ ಮಾತ್ರ ಹಾಲು ಸಂಗ್ರಹ ಆಗುತ್ತಿದೆ..
ನಮ್ಮ ವರದಾಮೂಲ ಅಂತಲ್ಲ.. ಮಲೆನಾಡಿನ ಬಹುತೇಕ ಸಂಘಗಳಲ್ಲಿ ಇದೇ ಕತೆ.. ಕೆಲವು ಸಂಘಗಳು ಕದ ಮುಚ್ಚಿದೆ.. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಸಂಘವೂ ಸೇರಿದಂತೆ ಇನ್ನಷ್ಟು ಸಂಘಗಳು ಕದ ಮುಚ್ಚುವ ಅಪಾಯ ಇದ್ದೇ ಇದೆ..
ನನಗೆ ಆಶ್ಚರ್ಯ ಆಗುವುದೇನೆಂದರೆ ಹೈನುಗಾರಿಕೆಯಿಂದ ನಮ್ಮ ರೈತರು ಇಷ್ಟು ತ್ವರಿತಗತಿಯಲ್ಲಿ ವಿಮುಖರಾಗುತ್ತಿದ್ದರೂ ಕೆಎಂಎಫ್ಫನವರು ನಯಾ ಪೈಸೆ ತಲೆ ಕೆಡಿಸಿಕೊಂಡಂತಿಲ್ಲ.. ಯಾವ ಅಧಿಕಾರಿಯೂ ಯಾವ ಚುನಾಯಿತ ಪ್ರತಿನಿಧಿಯೂ ನಮ್ಮಲ್ಲಿಗೆ ಬಂದು ನಿಮ್ಮ ಸಮಸ್ಯೆ ಏನು ಅಂತಾಗಲಿ ಅದಕ್ಕೆ ಹೀಗೀಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಲು ಬರಲೇ ಇಲ್ಲ..
ಹೋಗಲಿ ಬೆನ್ನು ಬೆನ್ನಿಗೇ ನಾನು ಅಧಿಕ ಹಾಲು ಕೊಡುವ ನಾಲ್ಕೈದು ಹಸುಗಳನ್ನು ಕಳೆದು ಕೊಂಡಿದ್ದೆ.. ಅದರ ಪರಿಹಾರದ ಹಣ ಪಡೆಯಲು ಹರಸಾಹಸ ಪಟ್ಟೆ. ಇದೇ ಸಾಮಾಜಿಕ ಜಾಲತಾಣದಲ್ಲಿ ನನ್ನ ಆಕ್ರೋಶವನ್ನು ಹೊರ ಹಾಕಿದ ಮೇಲೆಯೇ ಇನ್ಸೂರೆನ್ಸ್ ಹಣ ಸಿಕ್ಕಿದ್ದು.. ಅದೂ ಕೂಡ ನನ್ನ ಸಮಸ್ಯೆಯನ್ನು ಸಹೃದಯರಾದ Renuka Manjunath ಕೆಎಂಎಫ್ಫಿನ ಹಳೆಯ ಎಂಡಿ ಪ್ರೇಮನಾಥ್ ಅವರ ಗಮನಕ್ಕೆ ತಂದು ಅವರು ಒತ್ತಡ ತಂದ ಮೇಲೆಯೇ ಪರಿಹಾರ ಕೈಗೆ ಸಿಕ್ಕಿದ್ದು.. ನನ್ನ ತರಹವೇ ಹಸು ಕಳೆದುಕೊಂಡ ಎಷ್ಟೋ ಹೈನುಗಾರರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರೆ ಅಲ್ಲಿ ಎಷ್ಟು ಜಡತ್ವವಿದೆ ನೋಡಿ…
ನಾವು ಹೈನುಗಾರರು ಎಂತಹ ಸಂಕಷ್ಟದಲ್ಲಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು.. ಇಂತಹವೆಲ್ಲ ಸಮಸ್ಯೆಗಳನ್ನು, ಅದಕ್ಕೆ ನಾವು ನಿರೀಕ್ಷಿಸುವ ಪರಿಹಾರವನ್ನು ನಾನು ಆಗಾಗ ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತೇನೆ.. ಆದರೆ ಇದಕ್ಕೆ ಪ್ರತಿಸ್ಪಂದನೆ ಬಹಳ ಕಡಿಮೆ.. ಈಗ ನಂದಿನಿಯನ್ನು ಗುಜರಾತಿನ ಅಮುಲ್ ನುಂಗಿ ಹಾಕಲಿದೆ ಎಂದು ಹುಯಿಲು ಎದ್ದಿದೆ. ಹಾಗಾಗಿ ಅಮುಲ್ ಅನ್ನು ಒದ್ದೋಡಿಸಿ ಎಂಬ ಧ್ವನಿಯೂ ಕೇಳಿ ಬರುತ್ತಿದೆ.. ಆದರೆ ಇದೇ ಜನ ನಮ್ಮ ಅಳಲಿಗೆ ಧ್ವನಿಯಾಗಿದ್ದರೇ? ಇಲ್ಲವೇ ಇಲ್ಲ.. ನಮ್ಮ ನಂದಿನಿಯನ್ನು ಉಳಿಸುವ ಹೋರಾಟದಲ್ಲಿ ಇರುವ ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ನನ್ನ ಸ್ನೇಹಿತರೂ ಹೌದು.. ಆದರೆ ಇವರ್ಯಾರೂ ನಾನು ಸಮಸ್ಯೆ ಮೂಂದಿಟ್ಟಾಗ ಜೊತೆಗೂಡಿರಲಿಲ್ಲ. ಕಾಳಜಿಯನ್ನು ಷೇರ್ ಮಾಡಿರಲಿಲ್ಲ.. ಹ್ಯಾಷ್ ಟ್ಯಾಗಿನಡಿಯ ಹೋರಾಟವಂತೂ ಇಲ್ಲವೇ ಇಲ್ಲ ಬಿಡಿ…
ಈ ಜನ ಹೈನುಗಾರರು ಉಳಿದರೆ ಮಾತ್ರ ನಂದಿನಿ ಉಳಿಯುತ್ತದೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳ ಬೇಕಿದೆ. ಮೊಟ್ಟ ಮೊದಲು ನನ್ನಂತಹ ಹೈನುಗಾರರಿಗೆ ನ್ಯಾಯ ಒದಗಿಸಿ.. ನಮ್ಮ ಪರವಾಗಿ ಬೀದಿಗಿಳಿಯುವುದು ಹೋಗಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕನಿಷ್ಟ ಸಾಂತ್ವಾನದ ಮಾತುಗಳನ್ನು ಹೇಳದ ಮಂದಿ ಈಗ ಏಕಾಏಕಿ ಈ ಪರಿಯ ಹೋರಾಟಕ್ಕೆ ಹೊರಟಿರುವುದು ಬೂಟಾಟಿಕೆ ಆಗಿ ನನಗೆ ಕಾಣುತ್ತದೆ…
ನಂದಿನಿಯನ್ನು ಉಳಿಸಬೇಕೇ ಮೊಟ್ಟ ಮೊದಲು ಜಡತ್ವವನ್ನೇ ಹಾಸಿ ಹೊದ್ದು ಮಲಗಿರುವ ಸಿಬ್ಬಂದಿಗಳನ್ನು ಮೊದಲು ಎಬ್ಬಿಸಿ. ಭೃಷ್ಟಾಚಾರದ ಆಡೊಂಬಲ ಆಗಿರುವ ಕೆಎಂಎಫ್ಫಿನಲ್ಲಿ ಸೇರಿಕೊಂಡಿರುವ ಹೆಗ್ಗಣಗಳನ್ನು ಹೊಡೆದೋಡಿಸಿ.. ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಕ್ಕಿರುವ ರಾಜಕಾರಣಿಗಳು ಮತ್ತವರ ಚೇಲಾಗಳನ್ನು ಸಂಸ್ಥೆಯಿಂದ ಹೊರ ಹಾಕಲು ಶ್ರಮಿಸಿ.. ಹೈನುಗಾರ ಬೆವರು ಬಸಿದದ್ದರಿಂದಲೇ ತಾವು ತುತ್ತು ಅನ್ನ ತಿನ್ನುತ್ತಿದ್ದೇವೆ ಎನ್ನುವ ಕೃತಜ್ಞತೆಯನ್ನು ಅಲ್ಲಿನ ಸಿಬ್ಬಂದಿಗೆ ಮೊದಲು ಕಲಿಸಿ.. ವೃತ್ತಿಪರತೆ ಮತ್ತು ಬದ್ಧತೆ ಇಲ್ಲದ ಸಿಬ್ಬಂದಿಯಿಂದ ಕೆಎಂಎಫ್ ಹಾಳಾಗುತ್ತಿದೆ. ಮೊದಲು ಇದನ್ನು ಸರಿಪಡಿಸದ ಹೊರತು ಇನ್ನಿತರ ವಿಷಯಗಳ ಬಗ್ಗೆ ವೃಥಾ ಹುಯಿಲು ಎಬ್ಬಿಸುವುದರಲ್ಲಿ ಅರ್ಥವಿಲ್ಲ..
ತಪ್ಪು, ತೊಡಕುಗಳು ನಮ್ಮಲ್ಲೇ ಇದೆ.. ಇಚ್ಛಾಶಕ್ತಿ ಒಂದಿದ್ದರೆ ಪರಿಹಾರವೂ ನಮ್ಮಲ್ಲೇ ಇದೆ.. ಅದನ್ನು ಬಿಟ್ಟು ಗುಲ್ಲು ಎಬ್ಬಿಸುತ್ತಾ ಹೋದರೆ ಆಗುವುದು ಅನರ್ಥವೇ ಹೊರತು ಪರಿಹಾರವಂತೂ ಅಲ್ಲ.. ಕೆಎಂಎಫ್ ಬದಲಾಗದೇ ಹೋದರೆ ಮುಳುಗಿ ಹೋದ ಇನ್ನಿತರ ಸಾರ್ವಜನಿಕ ಸಂಸ್ಥೆಗಳ ಹಣೆಬರಹವೇ ಇದಕ್ಕೂ ಆಗುವುದರಲ್ಲಿ ಸಂಶಯ ಇಲ್ಲ.. ಕೊನೆಗೆ ಯಾರನ್ನೂ ದೂರಿಯೂ ಪ್ರಯೋಜನ ಇಲ್ಲವಾಗುತ್ತದೆ.
- ನಾಗೇಂದ್ರ ಸಾಗರ್