ಸಾವಿನ ಬಾಗಿಲು ತೆರೆಯದಿರು – ಮಂಜುನಾಥ ಚಾಂದ್



ಖ್ಯಾತ ಕವಿ ಪಾಬ್ಲೋ ನೆರುಡಾ ಅವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕವಿ ಮಂಜುನಾಥ ಚಾಂದ್ ಅವರು, ಸಾವಿನ ಬಾಗಿಲು ತೆರೆದು, ಸರಿದು ಹೋಗದಿರು…ಸುಂದರ ಸಾಲುಗಳು ಓದುಗರಮುಂದಿದೆ…

ತಿರುಗಾಟದ ತಿಪ್ಪನಂತೆ
ದೇಶ ಸುತ್ತದಿದ್ದರೆ
ಕೋಶಗಳನೂ ಓದದಿದ್ದರೆ
ಜೀವನದ ಮಿಡಿತಗಳನು
ಕಿವಿಯಾನಿಸಿ ಕೇಳದಿದ್ದರೆ
ಕನಿಷ್ಠ ನಿನ್ನ ಪ್ರಶಂಸೆ
ನಿನಗೆ ಅಪಥ್ಯವಾದರೆ
ಅದು ನಿನ್ನ
ಸಾವಿನ ಕ್ಷಣದ ಆರಂಭ

ನಿನ್ನ ಆತ್ಮಗೌರವವನ್ನೇ
ಧಿಕ್ಕರಿಸಿ ಹೊರಟಾಗ
ಅನ್ಯರ ಸಹಾಯಕ್ಕೂ
ನೀ ಬೆನ್ನು ಹಾಕಿದಾಗ
ಅದು ನಿನ್ನ
ಸಾವಿನ ಕ್ಷಣದ ಆರಂಭ

ನಿನ್ನ ಚಟಗಳಿಗೇ
ನೀನು ದಾಸನಾಗಿಬಿಟ್ಟರೆ
ನಡೆದ ಹಾದಿಯಲ್ಲೇ
ದಿನವೂ ನಡೆಯುತ್ತಿದ್ದರೆ
ನಿನ್ನ ದಿನಚರಿ
ಕೊಂಚವೂ ಬದಲಾಗದಿದ್ದರೆ
ಅದು ನಿನ್ನ
ಸಾವಿನ ಕ್ಷಣದ ಆರಂಭ

ಕನಿಷ್ಠ ಬಣ್ಣದ ಬಣ್ಣದ
ಬಟ್ಟೆಯೂ ಧರಿಸದಿದ್ದರೆ
ದಿನಕ್ಕೊಬ್ಬ
ಅಪರಿಚಿತನೊಂದಿಗೆ
ಮಾತಾಡದೇ ಇದ್ದರೆ
ಅದು ನಿನ್ನ
ಸಾವಿನ ಕ್ಷಣದ ಆರಂಭ

ಒಂದರೆ ಪಾವು ಮೋಹಭಾವ
ನಿನ್ನೊಳಗೆ ಹರಿಯದೇ ಇದ್ದರೆ
ಮತ್ತದರ ಕಿಡಿಗಳು
ನಿನ್ನ ಕಣ್ಣಲ್ಲಿ ಮಿಂಚಾಗದಿದ್ದರೆ
ನಿನ್ನ ಎದೆಬಡಿತಗಳು
ಬಿರುಸಾಗದಿದ್ದರೆ
ಅದು ನಿನ್ನ
ಸಾವಿನ ಕ್ಷಣದ ಆರಂಭ

ಅನಿಶ್ಚಿತ ಕ್ಷಣಗಳಿಗಂಜಿ
ಕೆಡುಕುಗಳಿಗೆ
ಮುಖಾಮುಖಿಯಾಗದಿದ್ದರೆ
ನಿನ್ನ ಕನಸುಗಳನು
ನೀನೇ ಬೆಂಬತ್ತಿ ಹೋಗದಿದ್ದರೆ
ಒಮ್ಮೆಯಾದರೂ
ಅರ್ಥಪೂರ್ಣ ಸಲಹೆಗಳನು
ಧಿಕ್ಕರಿಸಲಾಗದಿದ್ದರೆ
ಅದು ನಿನ್ನ
ಸಾವಿನ ಕ್ಷಣದ ಆರಂಭ

ಖುಷಿ ಖುಷಿಯಾಗಿರುವುದ
ಮರೆತು
ಸುಮ್ಮನೇ ಹೀಗೆ
ಸಾವಿನ ಬಾಗಿಲು ತೆರೆದು
ಸರಿದು ಹೋಗದಿರು

ಮೂಲ: ಪಾಬ್ಲೋ ನೆರುಡಾ


  • ಕನ್ನಡಕ್ಕೆ: ಮಂಜುನಾಥ ಚಾಂದ್  (ಖ್ಯಾತ ಲೇಖಕರು, ಕತೆಗಾರರು, ಪತ್ರಕರ್ತರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading