ವೈಕುಂಠ ಸಮಾರಾಧನೆಯಲ್ಲಿ ಮಾತ್ರವಲ್ಲ, ರಾತ್ರಿಯ ಏಕಾಂತದಲ್ಲೂ ನನಗೆ ಬೆನ್ನ ಹಿಂದಿನ ಸಾವಿನ ವಿಚಾರ ಬರುವುದಿದೆ. ಸಮಾರಾಧನೆಯಲ್ಲಾದರೆ ಜನ ಇರುತ್ತಾರೆ. ರಾತ್ರಿಯ ಏಕಾಂತದಲ್ಲಿ ಯಾರಿರುತ್ತಾರೆ? ನಿದ್ದೆ ಬಂದರೆ ಭಯವಿಲ್ಲ. ಲೇಖಕರಾದ ವಿಜಯೇಂದ್ರ ಪಾಟೀಲ ಅವರ ‘ಸಾವಿನೊಂದಿಗು ಸರಸವೆ?’ ಲಲಿತ ಪ್ರಬಂಧವನ್ನು ತಪ್ಪದೆ ಮುಂದೆ ಓದಿ…
‘ ಕಾದ ಕಬ್ಬಿಣಕಿತ್ತ ನೀರಂತೆ
ನಿದ್ದೆಯಿಂ ತಿಳಿದವನ ಕನಸಾರುವಂತೆ…
*
ಹಳೆಯ ಪಂಜರದ ಸಡಲಿದ ಸಲಾಕೆಯಂತೆ
ನಿಮಿತ್ತ ಮಾತ್ರವೀ ರುಜೆಯದಕೆ….
*
ಈ ನಮ್ಮ ತಥಾಗತನ ದೇಹಂ ಕೂಡ
ಹರಕು ಬಂಡಿಯೆನೆ ಕುಲುಕುತಿದೆ…’
ಮಂಜೇಶ್ವರ ಗೋವಿಂದ ಪೈ
** **
ಸಾವಿನ ಬಗ್ಗೆ ಲಲಿತ ಪ್ರಬಂಧ ಬರೆಯಬೇಕೆಂಬ ವಿಚಾರ ಹೊಳೆದದ್ದು ದೂರದವರ ಸಾವಿನ ಒಂದು ವೈಕುಂಠ ಸಮಾರಾಧನೆಯಲ್ಲಿ. ಅದೂ, ಪಾಯಸ,ರವೆ ಉಂಡಿ ಮತ್ತು ವಡೆ ಸ್ವೀಕರಿಸುವಾಗ. ಇಂತಹ ಆಲೋಚನೆ ಅಂಥ ವೇಳೆಯಲ್ಲಿ ಬಂತಾದರು ಹೇಗೆ ಎಂದು ನೀವು ವ್ಯಗ್ರರಾಗಬಾರದು. ಕಾರ್ಯ-ಕಾರಣ ಸಂಬಂಧವಿರದ ಯಾವುದಾದರು ಈ ಮರ್ತ್ಯ ಜಗತ್ತಿನಲ್ಲಿದೆಯೇ?
ಮದುವೆಯಲ್ಲಿ, ಸಾವಿನಲ್ಲಿ ಹತ್ತಿರದವರದು ದೂರದವರದು ಎಂಬ ತಾರತಮ್ಯ ಇದ್ದಾಗಲು, ಸೃಷ್ಟಿ-ಲಯಗಳ ಮಹತ್ವ ಅವುಗಳಿಗಿರುವುದರಿಂದ ಅವೆರಡನ್ನೂ ತಪ್ಪಿಸಬಾರದು.ಹಾಗಾಗಿ ಹತ್ತಿರದವರ ಮದುವೆಗೆ ಸ್ವಲ್ಪ ಮೊದಲು ಹೋಗಿ ನಾಲ್ಕು ಕೆಲಸ ಮಾಡಿ ಎರಡು ಮಾತಾಡಿ ಎರಡನೇ,ಮೂರನೆ ಪಙ್ತಿಯಲ್ಲಿ ಊಟಕ್ಕೆ ಕೂರುವ ಜವಾಬ್ದಾರಿ ಹೊರುತ್ತೇವೆ. ದೂರದ ಮದುವೆಯಾದರೆ ಸರಿಯಾಗಿ ಊಟದ ಸಮಯಕ್ಕೆ ಹೋಗಿ ಮೊದಲು ಊಟಮಾಡಿ ಸಾಧ್ಯವಾದರೆ ವಧೂವರರನ್ನು ಭೆಟ್ಟಿಯಾಗುತ್ತೇವೆ… ಸಾವೂ ಅಷ್ಟೇ. ಹತ್ತಿರದ್ದಾದರೆ ಊಟದ ನೆನಪೇ ಆಗುವುದಿಲ್ಲ. ದೂರದವರದ್ದಾದರೆ ನೇರವಾಗಿ ವಡೆ ಪಾಯಸದೂಟ, ಆಪ್ತರ ಸಂಗಡ ಮೆಲುದನಿಯ ಹರಟೆ, ಕಡೆಗೊಂದು ಸಾಂತ್ವನದ ಕಿರು ದೃಶ್ಯ.. ಸಾವಿನಲ್ಲು ಎರಡು ವಿಧಗಳಿವೆ. ‘ಈ ಸಾವು ನ್ಯಾಯವೇ..?’ ಎಂದು ಬಂಧುಗಳು ಕೇಳುವಂತಿರುವ ಅನಿರೀಕ್ಷಿತ ಆಘಾತ ತರುವ,ಎಂಥವರಿಗು ಅಯ್ಯೊ ಎನಿಸುವ ದಾರುಣ ಸಾವು. ಮತ್ತೊಂದು, ‘ಮರಣವೇ ಮಹಾನವಮಿ’ ‘ಬಂದದ್ದು ಒಳ್ಳೆಯದೆ ಆಯ್ತು…’, ‘ಮುಕ್ತರಾದರು…’ ಎನಿಸಿಕೊಳ್ಳುವ ಎರಡೂ ಕಡೆಯ ‘ಸಾರ್ಥಕ ಸಾವು..! ಏನೇ ಇರಲಿ, ಸಾವಿನ ಸಂತ್ರಸ್ತರಿಗೆ ಮಾತ್ರ ಸಂಕಷ್ಟದ ಸಮಯ. ಬಂದವರನ್ನು ಸತ್ತವರ ಜೊತೆಗಿನ ಸಂಬಂಧದ ಮೆರಿಟ್ ಗೆ ಅನುಗುಣವಾಗಿ ತಕ್ಕ ಕಣ್ಣೀರಿನೊಡನೆ ಸ್ವಾಗತಿಸಬೇಕು, ಆಗ್ರಹ ಮಾಡಿ ಸಿಹಿಯೂಟ ಉಣಿಸಿ ಸತ್ತವರ ಆತ್ಮಕ್ಕೆ ತೃಪ್ತಿ ಒದಗಿಸಬೇಕು ಮತ್ತು ಉಂಡವರನ್ನು ಕಳಿಸುವಾಗ ಸಂದರ್ಭ ಬೇಡುವಷ್ಟು ಮತ್ತೆ ಕಣ್ಣೀರಿಡಬೇಕು! ಅಂತಹ ದುಃಖದ ನಡುವೆಯೂ ಹಿರಿಯರ ‘ಆತ್ಮಶಾಂತಿ’ಗಾಗಿ ಐದೈದು ಪಕ್ವಾನ್ನ ಮಾಡಿಸುವವರಿದ್ದಾರೆ ಮತ್ತು ದುಃಖದಲ್ಲೂ ಸುಖವಾಗಿ ಉಣ್ಣುವವರಿದ್ದಾರೆ! ಹೀಗೆ ಸ್ವಂತದ ದುಃಖ ಮರೆತು ಬಂದವರಿಗೆ ಸಿಹಿ ಉಣ್ಣಿಸುವ, ಉಣ್ಣುವ ಭಾವ ನೋಡಿದಾಗಲೆ ಲಲಿತ ಪ್ರಬಂಧಕ್ಕೆ ಇಲ್ಲೊಂದು ಅವಕಾಶವಿದೆ ಎಂದು ನನಗೆ ಅನಿಸಿದ್ದು..!
ವೈಕುಂಠ ಸಮಾರಾಧನೆಯಲ್ಲಿ ಮಾತ್ರವಲ್ಲ, ರಾತ್ರಿಯ ಏಕಾಂತದಲ್ಲೂ ನನಗೆ ಬೆನ್ನ ಹಿಂದಿನ ಸಾವಿನ ವಿಚಾರ ಬರುವುದಿದೆ. ಸಮಾರಾಧನೆಯಲ್ಲಾದರೆ ಜನ ಇರುತ್ತಾರೆ. ರಾತ್ರಿಯ ಏಕಾಂತದಲ್ಲಿ ಯಾರಿರುತ್ತಾರೆ? ನಿದ್ದೆ ಬಂದರೆ ಭಯವಿಲ್ಲ. ಬಾರದಿದ್ದಾಗ ಸತ್ತು ಹೋದ ಯಾರು ಯಾರೊ ಹರಟೆ ಹೊಡೆಯಲು ಹಾಜರಾಗಬಹುದೆಂದು ಅನಿಸತೊಡಗುತ್ತದೆ. ‘ದೇವರ ಸ್ತೋತ್ರ ಹೇಳಿಕೊಂಡು ಮಲಗು’ ಎಂದು ಅಮ್ಮ ಹೇಳುವುದಿದೆ. ಆದರೆ ತಪ್ಪು ತಪ್ಪಾಗಿ ಸಂಸ್ಕೃತ ಶ್ಲೋಕ ಹೇಳಿದರೆ ಫಲ ಸಿಗುವುದಿಲ್ಲ ಮಾತ್ರವಲ್ಲ; ತದ್ವಿರುದ್ಧ ಪರಿಣಾಮವೂ ಆಗುವುದಂತೆ! ಅದೇನೊ,ತಪ್ಪು ತಪ್ಪಾಗಿಯಾದರು ಗಟ್ಟಿಯಾಗಿ ಹಿಂದಿ ಹಾಡು ಹೇಳುವುದರಲ್ಲಿ ಹೆಚ್ಚು ಸುರಕ್ಷತಾ ಭಾವ ನನಗೆ ! ಅರ್ಥ ತಿಳಿಯದ್ದರಿಂದ ಸಾವಿನ ಹಾಡು ಹಾಡಿದರೂ ಭಯವಾಗುವುದಿಲ್ಲ… ಇದು ಒಳಮಾತು. ಜೊತೆಗೆ, ಸಾವಿನ ಬಗೆಗೆ ಬಾಲ್ಯದಿಂದಲೂ ಅದೇನೊ, ಭಯಪೂರಿತ ಆಕರ್ಷಣೆ. ಇದು ದೂರದವರ ಸಾವಿನಲ್ಲಿ ಮಾತ್ರ ಎಂಬ ಸತ್ಯ ಕೂಡ ಹೇಳಬೇಕು… ಸಾವಿಗು ಭಯಕ್ಕು ನಿಜವಾಗಿ ಯಾವ ಸಂಬಂಧವೂ ಇರಬಾರದು. ಬದುಕಿರುವಾಗಲೇ ಅಶಕ್ತನಾಗಿ, ಪರಾಧೀನನಾಗುವ ಮನುಷ್ಯ ಸತ್ತು ಹೋದ ಮೇಲೆ,ಪಾಪ! ಯಾವ ಕೇಡು ಬಗೆದಾನು? ಆದರೆ ಇದರ ಹಿಂದೆ ಯಾವ ದೆವ್ವವಿದೆಯೊ, ಸಾವಿನ ಜೊತೆ ಭಯ ಕೂಡ ಸೇರಿ ಬಿಟ್ಟಿದೆ… ಪಂಜರದಲ್ಲಿಯ ಹುಲಿಯನ್ನು ನೋಡುವಂತೆ ಸಣ್ಣವನಿದ್ದಾಗ ನಾನು ಸತ್ತವರನ್ನು, ಅವರ ಕೊನೆಯ ಮೆರವಣಿಗೆಯನ್ನು ಬಲು ದೂರದಿಂದ, ಒಂದು ಕಾಲು ಹಿಂದೆ ಇಟ್ಟು ಓಡುವ ತಯಾರಿಯಲ್ಲಿಯೇ ನೋಡುತ್ತಿದ್ದೆ. ಆಕಸ್ಮಾತ್ ಪಂಜರದ ಬಾಗಿಲು ತೆರೆದುಕೊಂಡು ಹುಲಿರಾಯನೇನಾದರು ಹೊರಗೆ ನೆಗೆದರೆ? ನಾಗಾಲೋಟಕ್ಕೆ ತಡವಾಗಬಾರದು!
ಜೊತೆಗೆ ಸಾವು ಕಂಡವನ ಮುಖ ಕಡೆಯ ಸಾರಿ ಕಾಣಬೇಕೆಂಬ ಅದಮ್ಯ ಹಂಬಲ ಕೂಡ. ಇದೆಂಥ ಮಾನಸಿಕತೆ ಇದ್ದೀತು! ಮುಂದೆ ಆತ ಸಿಗಲಾರ ಎಂದೊ, ಇಲ್ಲ,ಜೀವ ಎಂದರೆ ಏನು ಹೋಗಿರುತ್ತದೆ ಎಂಬ ಕುತೂಹಲವೊ… ಅದಕ್ಕಾಗಿ ಕಿಂಡಿ ಹುಡುಕಿ, ಹೆಜ್ಜೆ ಎತ್ತರಿಸಿ ನೋಡುವುದು. ಕಂಡೀತೆಂಬ ಎಂಬ ಭಯ, ಕಾಣದಿದ್ದರೆ ನಿರಾಸೆ! ಹೀಗೆ ಆಕರ್ಷಣೆ ವಿಕರ್ಷಣೆಗಳ ದ್ವಂದ್ವದಾಟ…. ಒಬ್ಬನೆ ಇದ್ದಾಗ ಹೆದರಿಸುವ ಸಾವನ್ನು ಬಹಳ ಜನ ಇದ್ದಾಗ ಎದುರಿಸುವುದು ಸುಲಭ ಎನಿಸಿ ಪ್ರಬಂಧ ಬರೆಯಲು ಸಮಾರಂಭದ ಸಮಯವನ್ನು ಆರಿಸಿಕೊಂಡಿರಬೇಕು ಎಂದು ಸೈಕಾಲಾಜಿ ಮಂದಿಗೆ ಗೊತ್ತಿದ್ದೇ ಇರುತ್ತದೆ. ನೀವೂ ಅದನ್ನು ನಂಬಿದರೆ ವಾದವೇ ಇರದು.
ದೆವ್ವಿನ ಬಗ್ಗೆ ಬರೆದ ಪ್ರಬಂಧವನ್ನು ನಾನು ದೆವ್ವಗಳು ಬರಲು ಹೆದರುವ ಮತ್ತು ದೇವತೆಗಳು ಓಡಾಡುವ ಬ್ರಾಹ್ಮೀ ಮುಹೂರ್ತದಲ್ಲಿ ಬರೆದಿದ್ದೆ. ಆದರೆ ಈಗ ಹಾಗೆ ಮಾಡಲಾಗದು. ಈ ಸಾವೆಂಬುದು ದೆವ್ವಕ್ಕಿಂತ ಡೇಂಜರಸ್. ದೆವ್ವಗಳಾದರೆ ರಾತ್ರಿ ಮಾತ್ರ ಬರುತ್ತವೆ ಎಂಬ ಸತ್ಯ ಎಳೆಯ ಮಕ್ಕಳಿಗೂ ಗೊತ್ತು. ಸಾವಿಗೆ ಕಟ್ಟಳೆಗಳೇ ಇಲ್ಲ. ಅದು ಸಂಗೀತದ ರಾಗಗಳಿದ್ದಂತೆ… ಎಂಟು ಪ್ರಹರಗಳಲ್ಲಿ ನಿಗದಿಪಡಿಸಿದಂತೆ ಬರಬಹುದು,ಯಮನ ರಾಗದಂತೆ ಮುಸ್ಸಂಜೆ ಬರಬಹುದು. ಅಥವಾ ಪೀಲು, ಮಾಂಡ್, ಧಾನಿ, ಕಾಫಿ ಹಾಗು ಭೈರವಿಗಳಂತೆ ಕಾಲದ ಕಟ್ಟಳೆ ಇಲ್ಲದೆ ಯಾವಾಗ ಬೇಕಾದಾಗ ಬಂದು ಬಿಡಬಹುದು. ನರಸಿಂಹನಂತೆ ಎಲ್ಲವನ್ನು ಮೀರಿ ಬರಬಹುದು. ಅದೇಕೆ,ಈ ಲಲಿತ ಪ್ರಬಂಧ ಬರೆಯುವಾಗಲೆ ಬರಬಾರದೆಂದಿಲ್ಲ..! ಈ ಭಯದಲ್ಲಿ ದಹಜವಾಗಿ ಬರವಣಿಗೆ ಈಗಲೊ, ಇನ್ನಾವಾಗಲೊ ಎಂಬ ಅಡಚಣಿ ಅನುಭವಿಸುತ್ತಾ ಸಾಗುವುದು… ಅದರೆ ಸಾವೂ ಸೇರಿದಂತೆ ಯಾವುದನ್ನು ಎಷ್ಟು ದಿನ ಮುಂದಕ್ಕೆ ಹಾಕಲಾದೀತು? ಒಂದು ರಾತ್ರಿ, ಬಂದದ್ದು ಬರಲಿ, ಬರೆದರಾಯಿತು, ಎಂಬ ಗಟ್ಟಿ ನಿರ್ಧಾರ ಮಾಡಿ ಹಿಂದಿ ಹಾಡು ಹಾಡಿಕೊಂಡು ಮಲಗಿಕೊಂಡೆ.

** **
ಸಾವನ್ನು ಎತ್ತಿಕೊಂಡು ಲಲಿತ ಪ್ರಬಂಧ ಬರೆಯುವ ನನ್ನ ವಿಚಾರ ಹೇಗೆ ತಿಳಿಯಿತೊ ಏನೊ; ಕೆಲವು ಕವಿಗಳು, ಕಥೆ-ಕಾದಂಬರಿಕಾರರು ಪಡಸಾಲೆಗೆ ಬಂದು ಆಯಕಟ್ಟಿನ ಜಾಗ ಹಿಡಿದು ಕುಳಿತರು. ವಿಮರ್ಶಕರೊಬ್ಬರು ಎತ್ತರದ ಮೇಜು ಏರಿದರು. ಚುಟುಕಿನವರು ಬಿಟ್ಟ ಸ್ಥಳ ತುಂಬಿದರು. ಇವರೆಲ್ಲರ ಹಿಂದೆ ಪುಸ್ತಕದ ಕಪಾಟಿನ ಮರೆಯಲ್ಲಿ ಪತ್ತೇದಾರಿ ಪುರುಷೋತ್ತಮನ ಹ್ಯಾಟು ಕಂಡಿತು.ಸುದ್ದಿ ಸೋರಿಕೆಯ ಮೂಲ ಸ್ಪಷ್ಟವಾಯಿತು! ಮನೆಯೊಡೆಯ ನಾನು. ಆದರೆನು, ಲಲಿತಪ್ರಬಂಧಕಾರನಲ್ಲವೇ? ಖುರ್ಚಿ ಸಿಗಲಿಲ್ಲ. ಹನ್ನೆರಡಾಣೆಯ ಚಾಪೆಯ ಮೇಲೆ ಕುಳಿತು ನಾಟಕ ನೋಡುವಂತೆ ಅವರನ್ನು ನೋಡಬೇಕಾಯಿತು. ನನ್ನ ಸ್ವಾಗತ ಭಾಷಣ ಕೂಡ ಆಗಲಿಲ್ಲ. ಎಲ್ಲರ ಪ್ರತಿನಿಧಿ ಸ್ವರೂಪರಾಗಿ ಕವಿಗಳು ನನ್ನನ್ನು ಮಾತ್ರ ಹೀಗೆ ಉದ್ದೇಶಿಸಿದರು.
” ಲಲಿತ ಪ್ರಬಂಧಕಾರರಿಗೆಂತಲೇ ನಾವು ಕಸಬರಿಗೆ, ಹಂಚೀಪಿಲ್ಲಿ, ಮೀಸೆ, ಮೂಗು,ನೆಗಡಿ, ಚಹಾ-ಭಜಿ, ಬಸ್ ಟಿಕೆಟ್ಟು,ಹರಿದಕೋಟು,ಹಳೆಯಫೋಟೊ ಮುಂತಾದ ನೂರಾರು ವಸ್ತುಗಳನ್ನು ಕೊಟ್ಟೇ ಬಿಟ್ಟಿರುವಾಗ ನೀವು ನಿಮ್ಮ ಕ್ಷೇತ್ರದಾಚೆಗಿನ ಸಾವಿನಂಥ ಘನಗಂಭೀರಕ್ಕೇಕೆ ಆಸೆ ಪಟ್ಟಿರಿ?”
ಇವರು ಇದಕ್ಕೇ ಬಂದಿರಬಹುದೆಂದು ಅನಿಸಿತ್ತು. ಗುಬ್ಬಿಯ ಮೇಲೆ ಬಾಂಬು ಎಸೆಯಲು ಬಂದವರಿಗೆ ಸ್ವಲ್ಪ ನೀರು ಕುಡಿದು ಹೇಳ ಬೇಕಾಯಿತು. ” ಸ್ವಾಮಿ ನೀವು ಪ್ರದಾನಿಸಿದ ಮೀಸಲಾತಿಗು, ಮೋಡಕಾ ಬಜಾರಕ್ಕು ಧನ್ಯವಾದ. ಆದರೆ ಕುಂದಣಗಾರರಿಂದ ಹಿಡಿದು ಗುಂಡೇನಟ್ಟಿಯವರೆಗಿನ ಅನೇಕರು ಈಗಾಗಲೇ ನೀವಿತ್ತ ಎಲ್ಲ ನಿರ್ಜೀವ ವಸ್ತುಗಳ ಮಗ್ಗಲುಗಳನ್ನು ತಮ್ಮ ಶಕ್ತ್ಯಾನುಸಾರ ಮುರಿದು ಹಾಕಿದ್ದಾರೆ. ಅಲ್ಲದೆ ಇತ್ತೀಚೆಗೆ ನಮ್ಮ ಕೋಮಿನವರಿಗು ವಸಿ ಜೀವವಿರುವ ವಸ್ತುಗಳ ಮೇಲೆ ಆಸೆ ಮೂಡುತ್ತಿದೆ..” ಎಂದು ಲಘು ಶೈಲಿಯಲ್ಲಿ ಹೇಳಿ ವಾತಾವರಣವನ್ನು ಲಲಿತ ಪ್ರಬಂಧದ ಮಟ್ಟಕ್ಕೆ ಇಳಿಸಲು ನೋಡಿದೆ.
” ನಿಮಗೂ ಜೀವದ ಮೇಲೆ ಆಸೆಯೇ? ಹಾಗಾದರೆ ಬೆಕ್ಕಿನ ಮೇಲೆ ಬರೆಯಬೇಕು. ನಾಯಿಯ ಮೇಲೆ ಬರೆಯಬೇಕು. ಸಾವೇ ಏಕೆ ಬೇಕು? ಮೇಲಾಗಿ, ಸಾವಿಗೇನು ಜೀವವಿದೆಯೇ?” ಎಂದು ಕವಿಗಳು ಈ ಸಮಯವನ್ನೂ ಕವಿಸಮಯವಾಗಿಸಿದರು. ನನ್ನಂಥ ನಾನೂ ಒಂದು ಕ್ಷಣ ಗಂಭೀರ ಸಾಹಿತಿಗಳ ಮಾದರಿಯಲ್ಲಿ ಅಂತರ್ಮುಖಿಯಾದೆ. ದೀನರ ಬಗ್ಗೆ ದೀನರು,ಸ್ತ್ರೀಯರ ಬಗ್ಗೆ ಸ್ತ್ರೀಯರು ಮಾತ್ರ ಬರೆಯಬೇಕು;ಬೇರೆಯವರು ಬರೆದರೆ ಅದು ಫ್ಯಾಶನ್ನು; ಎಂಬ ವಾದವನ್ನು ನಾನು ಕೇಳಿದವನೇ.ಆದರೂ ಹೀಗೆ ಬೇರೆ ಬೇರೆ ಜಾತಿಯವರಿಗೆ ಬೇರೆ ಬೇರೆ ಸುಡುಗಾಡುಗಳನ್ನು ಹಂಚಿಕೊಟ್ಟಂತೆ ನಮ್ಮೆಡೆಗೆ, ಸತ್ತು ದೆವ್ವ ಕೂಡ ಆಗಲು ಲಾಯಕ್ಕಿರದ ವಿಷಯಗಳೆಂಬ ಹಸುರನು ಎಸೆದು ‘ನಿಮ್ಮದನ್ನು ಅದರಲ್ಲೇ ಮೇಯಿಸಿಕೊಳ್ಳಿ, ಬೇಯಿಸಿಕೊಳ್ಳಿ’ ಅಂತ ಹೇಳುವುದು ಎಷ್ಟು ಸರಿ?.
ಕಡೆಗೂ ಅಂತಿಮ ಧೈರ್ಯ ತೋರಿಸಬೇಕಾಯಿತು. “ಸಾವು ನಿಮ್ಮದು ಮಾತ್ರವೇ? ನಮ್ಮದೂ ಅದು. ಇಷ್ಟಕ್ಕೂ ಎಲ್ಲರ ಸಾವು ಒಂದೇ ರೀತಿ ಇರುತ್ತದೆಯೇ? ಅದರಲ್ಲಿ ನಿಮಗೆ ಬಂದಂತೆ ನೀವು ಒಳಗೊಳ್ಳುತ್ತೀರಿ. ನಮಗೆ ಬಂದಂತೆ ನಾವು ಎಳೆದುಕೊಳ್ಳುತ್ತೇವೆ. ನಮ್ಮ ಪಾಲಿನ ಸಾವಿನ ಹಕ್ಕನ್ನು ಹೇಗೆ ಬಿಟ್ಟು ಕೊಡುವುದು..?” ಎಂದೆಲ್ಲ ಹೇಳಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ನೋಡಿದೆ. “ಲಲಿತ ಪ್ರಬಂಧಕಾರನಲ್ಲಿ ಬಂಡಾಯವೇ?” ಅಂತ ಕತೆಗಾರ ತಕರಾರು ತೆಗೆದಾಗ ವಿಮರ್ಶಕರು ಮಜಾ ತೆಗೆದುಕೊಂಡರು. ಸಾವಿನ ಸುಖಾಂತ್ಯ ದುಸ್ತರ ಎನಿಸಿ ದುಃಖವಾಯಿತು.
“ನಿಮ್ಮ ಧೋರಣೆ ‘ಕಸದಿಂದ ರಸ’ ಎಂಬ ಲಲಿತ ಪ್ರಬಂಧದ ಮೂಲ ತತ್ವವನ್ನೇ ಕೊಂದು ಹಾಕುತ್ತದೆ. ಸಾವಿನಲ್ಲಾವ ಲಾಲಿತ್ಯವಿದೆ? ನಿಮ್ಮ ಕೈಯಲ್ಲಿ ಸಾವು ಹುಡುಗಾಟದ ವಸ್ತುವಾಗಿ ಹೋದರೆ ಯಾರು ಜವಾಬ್ದಾರರು?” ಎಂಬ ಪ್ರಶ್ನೆ ಕೇಳಲ್ಪಟ್ಟಿತು. ನನಗೆ ಪುನರ್ಜನ್ಮ ಪಡೆದಷ್ಟು ಸಂಭ್ರಮವಾಗಿ ಹಾ ಹೂ ಎಂದು ಕ್ಯಾಕಿ ಹೊಡೆದು ಬಿಡುವಂತಾಯಿತು…
ಜಗತ್ತಿನ ಎಲ್ಲರ ಆದಿ ಮತ್ತು ಅಂತಿಮ ಪ್ರಶ್ನೆಯಾದ ಸಾವನ್ನು ಏನಾದರು ಮಾಡಿ ಹುಡುಗಾಟದ ಮಟ್ಟಕ್ಕೆ ಇಳಿಸಿದರೆ ಬದುಕು ಇನ್ನಷ್ಟು ಸಹ್ಯವಾದೀತಲ್ಲವೇ ಎಂಬ ಚಿಂತನೆಯಲ್ಲಿ ಬೆಳೆದವ ನಾನು. ಇಂತಿರುವಾಗ ‘ಸಾವು ಹುಡುಗಾಟವಾದರೆ?’ ಎಂಬ ಜವಾಬ್ದಾರಿಯ ಪ್ರಶ್ನೆ ಕೇಳಲ್ಪಟ್ಟಿತ್ತು. ಈ ಜವಾಬ್ದಾರಿಯನ್ನು ಹೆಣಕ್ಕೆ ಹೆಗಲು ಕೊಟ್ಟವರು ನಯವಾಗಿ ಬದಲಾಯಿಸುವಂತೆ ನಾನೂ ಬದಲಾಯಿಸಬೇಕಾಯಿತು.
“ಇದು ಜವಾಬ್ದಾರಿಯ ಪ್ರಶ್ನೆಯೇ ಅಲ್ಲ. ಸಾಧನೆಯ ಪ್ರಶ್ನೆ. ಸಾವು ನಿಜಕ್ಕೂ ಹುಡುಗಾಟ ಎನಿಸಬೇಕು. ಹುಟ್ಟನ್ನು ಕಾಣುವಂತೆ ಸಾವನ್ನೂ ನೋಡಬೇಕು. ಇದಕ್ಕಾಗಿ ನಾವೆಲ್ಲರೂ ನಮ್ಮ ನಮ್ಮ ಮಾರ್ಗಗಳ ಮೂಲಕ ಶ್ರಮಿಸಬೇಕು.ಅದರಲ್ಲಿ ಲಾಲಿತ್ಯವೂ ಸಾಧ್ಯ”. ಎಂದು ಹೇಳಿ,ಉಭಯತರಿಗು ಬೇಕಾದ ಕವಿ,ಮತ್ತು ಲಲಿತ ಪ್ರಬಂಧಕಾರ ಡುಂಡಿರಾಜರ “ಸತ್ತವರು ಎತ್ತ ಹೋದರು?” ಎಂಬ ಕವನ ವಾಚಿಸಿದೆ.
ಎಷ್ಟೊಂದು ಜನ ಇದ್ದಕ್ಕಿದ್ದಂತೆ ಸತ್ತರಲ್ಲ
ಅವರೆಲ್ಲ ಎತ್ತ ಹೋದರು?
ಇಲ್ಲ, ಅವರೆಲ್ಲ ಎಲ್ಲೂ ಹೋಗಿಲ್ಲ
ಸತ್ತದ್ದು ನಿಜವಾದರೂ ಸತ್ತು ಹೋಗಿಲ್ಲ
ಇದ್ದಾರೆ ಅವರಿದ್ದ ಮನೆಗಳಲ್ಲೆ
ಹಾಯಾಗಿ ನಸುನಗುತ್ತ
ಹಾಕಿಸಿಕೊಂಡು ಹೂಮಾಲೆ
ಲಿವಿಂಗ್ ರೂಂ ಗೋಡೆಯ ಮೇಲೆ
ಇದ್ದಾರೆ ಅವರ ಮಕ್ಕಳ ಮೊಮ್ಮಕ್ಕಳ
ನಡೆ ನುಡಿ, ಮುಖದ ಚಹರೆಗಳಲ್ಲಿ
ಹುಡುಕಿದರೆ ಅಷ್ಟಿಷ್ಟು ಕಾಣುತ್ತ
ಸಂಗಾತಿಗೆ ಆಗಾಗ ನೆನಪಾಗಿ ಕಾಡುತ್ತ
ಸತ್ತ ಗಣ್ಯರೂ ಹೋಗಿಲ್ಲ, ಇದ್ದಾರೆ ಇಲ್ಲಿ
ಕೀರ್ತಿ ಶೇಷರಾಗಿ ಅವರ ಕೃತಿಗಳಲ್ಲಿ
ಯಾವುದೊ ರಸ್ತೆಗೆ ನಾಮ ಫಲಕವಾಗಿ
ವೃತ್ತದಲ್ಲಿ ಪ್ರತಿಮೆಯಾಗಿ ಹೂತುಹೋಗಿ
“ಇದರಲ್ಲಿ ಸಾವು ಮತ್ತು ಲಾಲಿತ್ಯಗಳ ಸೊಗಸಾದ ತಾಳ ಮೇಳವಿಲ್ಲವೇ?” ಎಂದು ಕೇಳಿದೆ. ಆದರೆ ಯಾರಿಗೂ ಕೇಳುವ ವ್ಯವಧಾನವಿರಲಿಲ್ಲ. ಸಾವಿನ ಮತ್ತು ಸಾಹಿತ್ಯದ ಗಾಂಭೀರ್ಯ ಕಳೆಯಲೆಂದೇ ಲಲಿತದ ಮಂದಿ ಹುಟ್ಟಿರುವುದು ಎಂಬ ಠರಾವಿಗೆ ಬಂದಂತಿತ್ತು ಅವರು.
ಹೆಣ ಸಾಗಿಸುವ ಮೊದಲೇ ಪಾಲಿಗಾಗಿ ಬಡಿದಾಡುವ ಮಕ್ಕಳಂತೆ ‘ ಇದು ನಿಮ್ಮ ಕಡೆಯ ಮಾತೇ..?’ ಎಂಬ ಅಶರೀರವಾಣಿ ತೂರಿ ಬಂತು. ಅರೆ! ಎಲ್ಲರ ಜೊತೆ ಮಾತಾಡಿಕೊಂಡು ಬಹುಕಾಲ ಬದುಕಿಕೊಂಡಿಬೇಕೆಂಬ ಶುದ್ಧ ಲೌಕಿಕದವ ನಾನು. ಅಂಥವನಿಗೆ ಇದು ನಿಮ್ಮ ಕಡೆಯ ಮಾತೇ ಎಂದು ಕೇಳಿದರೆ ಹೌದೆನ್ನುವುದೆ, ಅಲ್ಲವೆನ್ನುವುದೆ..? ಮಾತೇ ಬರಲಿಲ್ಲ.
ಈ ಸಂದಿಗ್ಧದ ಲಾಭ ಪಡೆದ ಪತ್ತೇದಾರಿ ಪುರುಷೋತ್ತಮನ ಕೈ ಜೇಬಿಗೆ ಹೋಯಿತು. ಅವನ ವರಸೆಯನ್ನು ನರಸಿಂಹಯ್ಯನವರ ಕಾಲದಿಂದಲೂ ಬಲ್ಲ ನಾನು, ಆತ ಪಿಸ್ತೂಲು ತೆಗೆದು ಸಾವನ್ನು ಹುಡುಗಾಟದ ಮಟ್ಟಕ್ಕೆ ಇಳಿಸಲಿದ್ದಾನೆಂಬುದನ್ನು ಅರಿತು, ಸಾವಿನ ಸಂಕೀರ್ಣ ಮಗ್ಗಲುಗಳನ್ನು ನೇರವಾಗಿಸಿ ‘ಹೋ..’ ಎಂದು ಕೂಗುತ್ತ ಕನಸಿನಿಂದಾಚೆ ಓಡಿ ಬಂದೆ. ಸಾವನ್ನು ಚಹಾದ ಜೊತೆಗೆ ಚರ್ಚಿಸುವುದೇ ಬೇರೆ, ಹತ್ತಿರ ಕುಳ್ಳಿರಿಸಿಕೊಂಡು ಎದುರಿಸುವುದೇ ಬೇರೆ.

ಸಾಹಿತಿಗಳ ಒಡನಾಟ ನನ್ನ ಅನುದಿನದ ಕನಸು. ಆದರೆ ಇಂತಹ ಕನಸುಗಳ ಮೂಲಕ ಅಲ್ಲ. ಮತ್ತು ಇಂಥ ವಿಕ್ಷಿಪ್ತ ಕನಸುಗಳ ಮೂಲಕವಂತು ಅಲ್ಲವೇ ಅಲ್ಲ. ಬೇಂದ್ರೆ,ಕುವೆಂಪು, ಬೆಟಗೇರಿ ಮುಂತಾದ ಹಿರಿಯರು ಬರಿ ಕವಿತೆಗಳನ್ನು ಬರೆಯಲಿಲ್ಲ.ರಸ ಒಸರುವ ಪ್ರಬಂಧಗಳನ್ನೂ ಬರೆದರು.ಹಾಗಿರುವಾಗ ಅಂಥವರ ಬಗ್ಗೆ ಹೀಗೆಲ್ಲ ಯೋಚಿಸುವುದು ಸಾಧುವೇ? ಅಂತಹ ಕೆಲಸ ನಾನು ಮಾಡಲು ಸಾಧ್ಯವೇ? ‘ಕನಸು ನನಗೆ ಮಾಡಿದ ದೊಡ್ಡ ಮೋಸ ಇದು’ ಅಂದುಕೊಂಡು ಕೊಂಚ ಗಂಭೀರನಾದರೂ ಆಮೇಲೆ ನನಗೇ ನಗು ಬಂತು. ಹೇಳಿ ಕೇಳಿ ಕನಸು.. ಯಾರು ಏನು ಬೇಕಾದರು ಬರಬಹುದು,ಮಾತಾಡಬಹುದು.ಅನೇಕ ಸಾರಿ ತೀರಿ ಹೋದ ನನ್ನ ತಂದೆ ತಾಯಿ ಕೂಡ ಬಂದು ಕಾರಣವಿಲ್ಲದೆ ಬೈದು ಹೋಗಿದ್ದಾರೆ… ಕಾವ್ಯದ ಮಂದಿ ಮುಂಚೆ ಹುಟ್ಟಿದ್ದಾರೆ. ಹಾಗಾಗಿ ಸಾವಿನ ಒಳ್ಳೊಳ್ಳೆಯ ರೂಪಕ, ಸಂಕೇತ, ಪ್ರತಿಮೆಗಳಾದ ಕಾಳ ರಾತ್ರಿ, ಕಪ್ಪು ಯಮ,ಅಂಥದೇ ಕೋಣ; ಬಿಳಿ ಬಟ್ಟೆ, ತಣ್ಣನೆಯ ಸ್ಪರ್ಶ, ಹಿಮ, ಕಣಗಿಲ; ಗೂಬೆ, ಹಾಲಕ್ಕಿ, ಟಿಂವಕ್ಕಿ, ಹದ್ದು, ಹಾವು,ಬಾಣಂತಿ ಕೈ; ನಂದುವ ದೀಪ,ಅಷ್ಟೇ ಏಕೆ, ವಡೆ-ಪಾಯಸಗಳೂ ಸಹಜವಾಗಿ ಅವರ ಪಾಲಾಗಿವೆ… ಬಹುಶಃ ಲಲಿತ ಪ್ರಬಂಧಕ್ಕೆ ಏನೂ ಉಳಿಯಲಿಲ್ಲವೆಂಬ ಅಸಹಾಯಕ ಕೋಪ ಸುಪ್ತ ಮನಸ್ಸಿನಲ್ಲಿ ಅಡಗಿ ಈ ಕನಸನ್ನು ನಿರ್ಮಿಸಿರಬೇಕು!
** **
ಹಗಲು ಹಾಗೇ-ಹಾಗೇ ಇತ್ತು… ಆದರೆ ಕಚ್ಚುವ ಬೆಕ್ಕಿನ ಬಾಲ ಎಳೆಯ ಹೋಗುವ ನನ್ನ ಮೂಲ ಪ್ರವೃತ್ತಿಯೇನೂ ಬದಲಾಗಲಿಲ್ಲ. ಅದೇ ರಾತ್ರಿಯ ಕನಸಿನ ಹಳವಂಡ. ಈ ನಡುವೆ ಸಾಕಿದ ಬೆಕ್ಕು ಬಂದು ಬಂದು ತೊಡೆಯ ಮೇಲೆ ಕೂಡ್ರುತ್ತಿತ್ತು.ಅದಕ್ಕೊ,ಬೆನ್ನು ನೀವಿಸಿಕೊಳ್ಳುವ ಚಟ! ಕುಳಿತುಕೊಂಡು ಒಂಭತ್ತು ಸಾರಿ ಬೆನ್ನು ಉಜ್ಜಿಸಿಕೊಂಡು ಸುಖ ಹೊಂದುವ ಬೆಕ್ಕು ಹತ್ತನೆಯ ಸಾರಿ ಉಜ್ಜಹೋದಾಗ ಕಚ್ಚಲು ಬರುತ್ತದೆ..! ನಿಜ..ನಾವು ಒಂಭತ್ತಕ್ಕೇ ನಿಲ್ಲಿಸಬೇಕು. ಆದರೆ ಊಹಿಸುವುದು ಹೇಗೆ? ಸರಿಯಾಗಿ ಇಷ್ಟೇ ಇಷ್ಟು ಸಾರಿ ನೀವಿ ನಿಲ್ಲಿಸಿ ಬಿಡಬೇಕೆಂಬ ಅಂತಃಪ್ರೇರಣೆಯಾಗಲಿ, ಎಚ್ಚರದ ಸ್ಥಿತಿಯಾಗಲಿ ಸಾಧ್ಯವಾಗುತ್ತದೆಯೇ? ಕೆಲಸಾರಿ ಎಂಟಕ್ಕೆ, ಅಷ್ಟೇ ಏಕೆ ಮೂರಕ್ಕೂ ಕಚ್ಚೀತು ಅದು! ಇದರ ಗೊಡವೆಯೇ ಬೇಡ ಎನ್ನಿಸಿದರೂ ನಡೆಯುವುದಿಲ್ಲ.ಸುಮ್ಮನೆ ಕುಳಿತವರ ತೊಡೆಯೇರಿ ಮುದ್ದು ಬರುವಂತೆ ಮಾಡಿ ಮೋಹ ಉಕ್ಕಿಸುತ್ತದೆ. ಅಲ್ಲಿಗೆ ನಮ್ಮರಿವಿನ ಕೈ ನಮ್ಮ ಮೀರಿ ಬೆನ್ನು ಸವರಲು ಮುಂದಾಗುತ್ತದೆ, ಕಚ್ಚಿಸಿಕೊಂಡೂ ಬಿಡುತ್ತದೆ. ಸಾಕಿದ ಬೆಕ್ಕೇ ಹೀಗಾಡುವಾಗ ಕಳ್ಳ ಬೆಕ್ಕನ್ನು ಕಾಯುವವರು ಯಾರು? ಯಾವ ಮಾಯೆಯಲ್ಲಿ,ಯಾವ ಮಾರ್ಗದಿಂದ ಯಾರ ಮನೆಗೆ ನುಗ್ಗಿ, ಕಾಯ್ದು ಕುಳಿತಂತಿರುವ ಹಾಲಿನ ಗಡಿಗೆಯನ್ನು ಉರುಳಿಸಿ ಬಿಡುತ್ತದೊ,ಒಡೆದೇ ಹಾಕುತ್ತದೊ ಹೇಗೆ ಹೇಳುವುದು? ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಹೀಗೆ ಒಡೆದು ಉರುಳಿಸಿ ಹಾಲು ಕುಡಿದು ಹೋಗುವ ಬೆಕ್ಕಿನ ಬಗೆಗೆ, ಆದ ಲುಕ್ಸಾನಿನ ಬಗೆಗೆ ಅಕ್ಕ ಪಕ್ಕದವರೆಲ್ಲ ಮಾತಾಡಿ ಹಳಹಳಿಸುವ ಪದ್ಧತಿ ಇತ್ತು. ಆದರೆ ಬದಲಾದ ಕಾಲದಲ್ಲಿ ಬೆಕ್ಕು ಹಾಲು ಕುಡಿದದ್ದು ಹೋಗಲಿ,ಪಕ್ಕದ ಮನೆಯಲ್ಲಿ ಸಾವು ಸಂಭವಿಸಿದರೂ ಅರಿವಿಗೆ ಬರುವುದಿಲ್ಲ.
ನಮ್ಮ ಗೆಳೆಯನೊಬ್ಬ ಈ ಕಾರಣಗಳಿಂದಾಗಿ ಬೆಕ್ಕು ಸಾಕುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾನೆ. ಆದರೆ ಪ್ರತಿ ಮನುಷ್ಯನಿಗು ಒಂದಿಲ್ಲೊಂದು ಕಚ್ಚುವ ಪ್ರಾಣಿಯನ್ನು ಸಾಕುವ ಮೋಹ ಇದ್ದೇ ಇರುತ್ತದೆ.ಅದು ಜೀವಂತ ಬೆಕ್ಕು,ಗಂಡ, ಹೆಂಡತಿ ಏನೂ ಆಗಿರಬಹುದು.ಇಲ್ಲ ನಿರ್ಜೀವ ಕಾರು – ಬೈಕ್ ಕೂಡ ಆಗಿರಬಹುದು.
ದಿನವಿಡಿ ಹೀಗೆ ಸಾವು ತಲೆಯೇರಿ ಬರುತ್ತಲೇ ಇತ್ತು.. ನಾನು ಮೌನವಾಗಿದ್ದರೆ ಖಂಡಿತ ಹೊಟ್ಟೆ ನೋವೇ ಅದು, ಎಂದು ನಿರ್ಧರಿಸಿ ಬಿಡುವ ಮಡದಿ ‘ಡಾಕ್ಟರರ ಹತ್ತಿರ ಹೋಗಿ ಬನ್ನಿ..’ ಎಂಬ ಸಲಹೆ ನೀಡಿದಳು. ವಿನಾಕಾರಣ ಗಾಬರಿ ಬೇಡವೆಂದು ‘ಅಂಥದ್ದೇನಿಲ್ಲ,ಸಾವಿನ ಬಗೆಗೆ ಆಲೋಚಿಸುತ್ತಿದ್ದೆ…’ ಎಂದು ಸಮಾಧಾನ ಮಾಡಿದೆ. ಆಕೆ ಮಧ್ಯರಾತ್ರಿಯ ಮೊಬೈಲ್ ಕರೆ ಕೇಳಿದಂತೆ ಅರೆಗಳಿಗೆ ಭೀತಿ ಮೆರೆದು ‘ನಿಮಗ್ಯಾಕ್ರೀ ಸಾವಿನ ಯೋಚನೆ? ಇನ್ನೂ ಮಧ್ಯ ವಯಸ್ಸು. ಎಷ್ಟೊಂದು ಜವಾಬ್ದಾರಿಗಳಿವೆ..ಇಂದು ವಟಸಾವಿತ್ರಿ ಹಬ್ಬ ಬೇರೆ..’ ಎಂದವಳೇ ದೇವರ ಮನೆಗೆ ಹೋಗಿ,– ತುಪ್ಪದ್ದೇ ಇರಬೇಕು,– ದೀಪ ಹಚ್ಚಿಟ್ಟು ಜಗತ್ತಿನಲ್ಲಿ ಸಾವೇ ಇಲ್ಲ ಎಂಬ ಧೋರಣೆಯೊಂದಿಗೆ ನಿತ್ಯ ಲೌಕಿಕದತ್ತ ಮುಖ ಮಾಡಿದಳು. ಹೆಂಡತಿ ನಡುವಯಸ್ಸನ್ನು ನೆನಪಿಸಿದ್ದು ಮುಂದಿನ ಮೆರವಣಿಗೆಗೆ ಚಾಲನೆ ನೀಡಿದಂತಾಯಿತು.

ಫೋಟೋ ಕೃಪೆ : google
ನಡುವಯಸ್ಸು! ಸಾವಿನ ಸಂಚಲನಕ್ಕೆ ಹತ್ತಾರು ರಹದಾರಿಗಳು ತೆರೆದುಕೊಳ್ಳುವ ಪ್ರಶಸ್ತ ಕಾಲ. ಬದುಕಲು ಹತ್ತಾರು ದಾರಿಗಳಿರುವಂತೆ ಸಾವಿಗೂ ಹಲವಾರು ಮಾರ್ಗಗಳು ಇರುತ್ತವೆಂದು ಸೂಚಿಸುವ ಕಾಲಾವಧಿ ಇದು. ಅಸ್ಪಷ್ಟ ಸಾವಿನ ಭೂತಗಳು ಕುಣಿಯಲು ಬರುವ ಪೂರ್ಣ ವರ್ತಮಾನ ಕಾಲವಿದು…! ಮಾರಾಟವಾಗದ, ಮಾರಾಟವಾಗದಷ್ಟು ಸಕ್ಕರೆಯ ಉತ್ಪಾದನೆ,ಯದ್ವಾ ತದ್ವಾ ರಕ್ತದ ಚಲನೆ, ಹೃದಯದ ಡವ ಡವ, ಬಡತನ ಸಾರುವ ಕಿಡ್ನಿ, ಲಿವರ್ ಗಳು, ಬೆನ್ನು-ಮಂಡಿ ನೋವು, ಹಲವು ಹನ್ನೆರಡು ಕರ್ಕಾಟಕಾದಿ ರಾಶಿ ಫಲಗಳು… ಒಟ್ಟಾರೆ ನಿರ್ಗಮನಕ್ಕೆ ಚಿಂತೆಯಿಲ್ಲ ಎಂದು ಸೂಚಿಸುವ ಕಾಲ…
ದೇಹಕ್ಕೆ ಚಾಳೀಸು, ಕಣ್ಣಿಗೂ ಚಾಳೀಸು… ಬಾ ಹತ್ತರ ( ಎಪ್ಪತ್ತೆರಡು) ಇನ್ನೂ ದೂರ. ಆದರೂ ಬೇಂದ್ರೆಯವರ ಬಾಹತ್ತರ ಕವನ ಹತ್ತಿರವಾದಂತಹ ಭಯ.ಬದುಕಿನಲ್ಲಿ ಬೇರೂರುತ್ತಿರುವ ಸಮಯ. ಸಾವಿಗೆ ಸಿದ್ಧವಿರದ ಮನಸ್ಸು. ಒಂದೇ ಮಾತಲ್ಲಿ ಇದು ಸಾವಿಗೆ ಅಕಾಲ. ಆದರೆ ಕವಿಗಳಿಗೆ ಯಾರು ಹೇಳುವವರು? ಸಾವನ್ನು ಎದುರಿಸಬೇಕೆಂದರೆ, ಹೆದರಿಸಬೇಕೆಂದರೆ ಯಮನಿಗೆ ಈ ವಯಸ್ಸಿನಲ್ಲಿಯೇ ಚಾಲೇಂಜ್ ಮಾಡಬೇಕು ಅಂತ ಅವರಿಗೆ ಅನಿಸಿದರೆ ತಡಮಾಡದೆ ಅವರು ಯಮನನ್ನೇ ಕರೆಯಬಲ್ಲರು. ಕವಿ, ದಿವಂಗತ ವಿ ಜಿ ಭಟ್ಟರಂತಹ ಕ್ರೇಜಿ ಕವಿ ಹೆದರಿಕೆ ಇಲ್ಲದೆ ‘ಯಮದೇವನಿಗೆ’ ಒಂದು ಅಹವಾಲು ಇಟ್ಟೇ ಬಿಟ್ಟಿದ್ದಾರೆ ನೋಡಿ.
ಎಂದೊ ಒಂದು ದಿನ ಮುಪ್ಪಡರಿ,ದಮ್ಮು ಹಿಡಿದೊ;
ಕರುಳಲ್ಲಿ ಹುಣ್ಣಾಗಿಯೊ
ಹೃದಯಕ್ರಿಯೆ ತೊಡಕಿಗೆ ಸಿಕ್ಕೊ
ಒದ್ದಾಡುತ್ತ ಬಿದ್ದಾಗ
ಕುತ್ತಿಗೆಗೆ ಉರುಳು ಬೀಸಿ ಜಗ್ಗಿ ಎಳೆಯುತ್ತ
ಹೋಗುವುದು ಯಾವ
ಚೆಂದವಯ್ಯ?
ನಡು ವಯಸ್ದಿನಲ್ಲಿ,ಇನ್ನೂ ಗಟ್ಟಿ ಮುಟ್ಟಾಗಿರುವಾಗಲೆ
ಆಮಂತ್ರಿಸುತ್ತೇನೆ, ಇಕೊ-ಈಗಲೆ ದಯಮಾಡಿಸು
ನಿನ್ನ ಕೋಣ ಇಲ್ಲೇ ಕೊಟ್ಟಿಗೆಯಲ್ಲಿ
ನಮ್ಮ ಎಮ್ಮೆ ಆಕಳ ಜೊತೆಗೆ ಹುಲ್ಲು ತಿನ್ನುತ್ತ
ಅಕ್ಕಚ್ಚು ಮೋರುತ್ತ ಹಾಯಾಗಿರಲಿ….
ನಿನ್ನ ಉರುಳು ಬಾವಿಯ ಗಡಗಡೆಯಲ್ಲಿ
ನೇತಾಡುತ್ತಿರಲಿ…
***
ನಾನು ಹೊರಡುವ ಸಮಯ ಬಂದ ಕೂಡಲೆ
ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆ ಸೂಚನೆ ಕೊಡು
ನಿನ್ನ ಬೆಂಬದಿಗೆ,ನಿನ್ನ ಕೋಣನ ಮೇಲೆ
ಕುಳಿತು ನಾನೂ ಹೊರಟು ಬಿಡುತ್ತೇನೆ
ನಗುನಗುತ ಬಂದು ಬಿಡುತ್ತೇನೆ..
ಕೈ ಕಾಲು ಗಟ್ಟಿಯಾಗಿರುವಾಗಲೆ ಚಾರ್ ಧಾಮ್ ಯಾತ್ರೆ ಮಾಡುವ ಹಾಗೆ, ಇದು ಕೂಡ ದೇಹ ಗಟ್ಟಿಯಾಗಿರುವಾಗಲೆ ಮಾಡಬೇಕಾದ ಯಾತ್ರೆ…! ಹೀಗೆ ಯಮದೇವ ನಮ್ಮ ಜೊತೆ ಇದ್ದು ಸಾವಿನ ಭೀತಿ ಹೋಗಲಾಡಿಸಿ ಆಮೇಲೆ ಪ್ರವಾಸಕ್ಕೆ ಕರೆದೊಯ್ಯುವಂತಾದರೆ ಇಲ್ಲಿಯ ಪ್ರವಾಸೋದ್ಯಮ, ಸಂಸಾರೋದ್ಯಮ ಇಲಾಖೆಗಳೇ ಮುಚ್ಚಿ ಹೋದಾವು! ಆಹಾ, ಸಾವು ಎಂತಹ ಚೆಂದ ಎಂದು ನೀವೂ ಅಂದುಕೊಳ್ಳುವಿರಲ್ಲವೇ? ಆದರೆ ನಾನಂತು ಹಾಗೆ ಅಂದುಕೊಳ್ಳುವುದಿಲ್ಲ.
ಕವಿಗಳು ಯಾವಕಾಲದಲ್ಲೂ ಪ್ರಾಪಂಚಿಕರಲ್ಲ. ವ್ಯವಹಾರಸ್ಥರಲ್ಲ. ಏಕೆಂದರೆ ಅವರು ಕವಿಗಳು ಮಾತ್ರ. ಪುಟ್ಟ ಮಕ್ಕಳು, ಸಂಗಾತಿ, ಪಾಲಕರ ಜವಾಬ್ದಾರಿ ಇರುವ ಯಾವ ಗಂಡ – ಹೆಂಡಂದಿರೂ ‘ಎಲ್ಲಾ ಜವಾಬ್ದಾರಿ ನಾನು ಹೊರುತ್ತೇನೆ,ನೀನು ಬೇಕಾದರೆ ಹೊರಟಿರು..’ ಎಂದು ಇದಕ್ಕೆ ಅನುಮತಿ ಕೊಡುವುದಿಲ್ಲ. ಪುರುಷಾರ್ಥ ಸಾಧನೆ ಹಾಳಾಗಲಿ, ಒಂದೆರಡು ತಿಂಗಳ ಪಿಂಚಣಿಯನ್ನಾದರು ತೆಗೆದುಕೊಳ್ಳದೆ ಸತ್ತರೆ ಯಾವ ಪುರುಷಾರ್ಥ ಸಾಧನೆಯಾದೀತು?
ಈ ಮಾರ್ಗದಲ್ಲಿ ಸಾವಿಗು ಒಂದು ಕಟ್ಟು ನಿಟ್ಟಾದ ಜೇಷ್ಠತಾ ಪಟ್ಟಿ ಇರಬೇಕು.ಆಗ ಹೀಗೆಲ್ಲ ಆಗುವುದಿಲ್ಲ… ಸಾಮಾನ್ಯವಾಗಿ ದೇವಲೋಕದಿಂದ ಈ ಜೇಷ್ಠತಾ ಪಟ್ಟಿಯ ಪರಿಪಾಲನೆಯಾಗುತ್ತಿರುತ್ತದೆ.ಆದರೆ ಭೂಲೋಕದ ಸರಕಾರಗಳು ಕೆಲವೊಮ್ಮೆ ತಮ್ಮ ನೌಕರರ ಜೇಷ್ಠತೆಯನ್ನು ತಪ್ಪಿಸಿ ಕಿರಿಯರಿಗೆ ಪಕ್ಷಪಾತದ ಪದೋನ್ನತಿ ನೀಡುವುದಿಲ್ಲವೇ? ದೇವಲೋಕದಿಂದಲೂ ದುರ್ದೈವವಶಾತ್ ಒಮ್ಮೊಮ್ಮೆ ಹಾಗೆ ಆಗುವುದಿದೆ. ಅದು ಮಾತ್ರ ದುರಂತ. ಹೋದವರು ಹೋದರು, ಬದುಕಿದವರು ಸತ್ತೇ ಹೋದರು…! ಕಿರಿಯರ ಮುಂದೆ ಹಿರಿಯರು ನಡೆದು ಹೋಗುವುದೇ ಒಂದು ಘನತೆ ಮತ್ತು ಚೆಂದ. ಲೋಕ ಮೆಚ್ಚಿ ಅಹುದಹುದೆನ್ನಬೇಕು.
ಸಾವಿನ ಘನತೆ ಎಲ್ಲ ಸಂದರ್ಭದಲ್ಲಿ ಸಾವಿನಲ್ಲಿ ಕಾಣದಿರಬಹುದು. ಆದರೆ ಅಂತಿಮ ಯಾತ್ರೆಯಲ್ಲಿ ಕಂಡೇ ಕಾಣುತ್ತದೆ. ಸಣ್ಣ ಪುಟ್ಟ ಕೀಟಗಳ ಸಂಸ್ಕಾರದ ಜವಾಬ್ದಾರಿ ಸಾಮಾನ್ಯವಾಗಿ ಇರುವೆಗಳದು. ದೇಹ ದೊಡ್ಡದಿದ್ದರು ಹಿಂದೆಗೆಯದೆ ತುಂಡರಿಸಿಯಾದರು, ಸಾವಿರ ಸಾವಿರ ಸೇರಿ ಸಾಗಿಸಿ ಬಿಡುತ್ತವೆ. ಅನೇಕ ಸಾಕಿದ ಬೆಕ್ಕು ನಾಯಿಗಳ ನಶೀಬು ಬಡವರಿಗಿಂತ ಚನ್ನಾಗಿರುವುದೂ ಇದೆ. ಆದರೆ ಸತ್ತ ಬೀದಿನಾಯಿಯ ಹಿಂಗಾಲಿಗೆ ಹಗ್ಗ ಕಟ್ಟಿ ಎಳೆದೊಯ್ಯುವ ಏಕ ವ್ಯಕ್ತಿ ಪ್ರದರ್ಶನ ಮಾತ್ರ ನೋಡಬಾರದ್ದು. ನಮ್ಮ ಹಳ್ಳಿಗಳಲ್ಲಿ ಸತ್ತ ಎಮ್ಮೆ-ಕೋಣ ಗಳನ್ನು ಒಯ್ಯುವವರು ಬೊಂಬಿಗೆ ಕಾಲು ಮೇಲಾಗಿಸಿ ಕಟ್ಟಿ, ತಲೆ ಜೋಲಾಡಿಸಿಕೊಂಡು ಅವು ಜೀವಮಾನವೆಲ್ಲ ತಲೆಯೆತ್ತಿ ನಡೆದಾಡಿದ್ದನ್ನು ಲೇವಡಿ ಮಾಡುವಂತೆ ಕೊಂಡೊಯ್ಯುತ್ತಾರೆ. ಹಸು ಎತ್ತುಗಳದು ಕೂಡ ಇದೇ ಗತಿಯಾದರು ಪುಣ್ಯ ಮಾಡಿದ ಕೆಲವಕ್ಕೆ ಚಕ್ಕಡಿಯಲ್ಲಿ ಮಲಗಿ ತಮ್ಮ ಬದುಕಿರುವ ಬಂಧುಗಳಿಂದ ಎಳೆಯಿಸಿಕೊಂಡು ಹೋಗುವ ಸುಯೋಗವಿರುತ್ತದೆ. ಹಲವಕ್ಕಂತೂ ಗದ್ದಿಗೆಯ ಭಾಗ್ಯ..! ಇವೆಲ್ಲ ಸಹಜ ಸಾವು ಕಂಡುಕೊಂಡ ಪ್ರಾಣಿಗಳ ಕಥೆಗಳಾದರೆ ಜೀವವಿರುವಂತೆಯೇ ಕೊಲ್ಲಲ್ಪಡುವ ಪ್ರಾಣಿಗಳದು ಮಾತ್ರ ವಿಭಿನ್ನ ಸಂಚಾರ. ಅವುಗಳ ಅಂತಿಮ ಯಾತ್ರೆ ತುಂಡು ತುಂಡಾಗಿ,ಹಸಿ ಹಸಿಯಾಗಿ,ಮಂಜಿನ ಡಬ್ಬಗಳಲ್ಲಿ, ರೈಲು-ವಿಮಾನಗಳ ಮೂಲಕ ದೂರ ಸಾಗಿ,ಪಾತ್ರೆಗಳಲ್ಲಿ ಬೆಂದು ಉದರದ ಗಮ್ಯ ಸೇರುವಂತಹದು! ಹೀಗೆ,’ ಹುಟ್ಟು ಸಾವಿನಲ್ಲಿ ಧನ್ಯವಾಗಲು’ ಏನೆಲ್ಲ ಅವಸ್ಥೆ ಪಡಬೇಕು.
ಮನುಷ್ಯ ಪ್ರಾಣಿಯ ಅಂತಿಮ ಯಾತ್ರೆ ಪ್ರಾಣಿ ಕೀಟಗಳಂತಲ್ಲ. ಕೂಡ್ರಿಸಿ,ಮಲಗಿಸಿ, ಹಾರಹಾಕಿ,ಅತ್ತರು ಚಿಮುಕಿಸಿ,ಗಂಧದ ಕಡ್ಡಿ ಉರಿಸಿ, ಅಳುವವರ ಧ್ವನಿ ಕೇಳದಂತೆ ಪಟಾಕಿ ಹೊಡೆಯುತ್ತ, ವಾದ್ಯಮೇಳಗಳ ಸಂಭ್ರಮದೊಂದಿಗೆ ಕಳಿಸುವುದನ್ನು ನೋಡಿದರೆ ಸಾವು ಕೇವಲ ಮನುಷ್ಯನಿಗೆ ಮಾತ್ರ ಬರುತ್ತದೆಯೇನೊ ಅನಿಸುತ್ತದೆ.
ನನಗಿನ್ನೂ ನೆನಪಿದೆ, ಊರಿನ ದೊಡ್ಡ ಮನೆತನದ ಹೆಣ್ಣು ಮಗಳೊಬ್ಬಳ ಸಾವಿನ ಸಂದರ್ಭ. ಬಿಸಿ ನೀರ ಸ್ನಾನ, ರೇಶ್ಮೇ ಸೀರೆ, ಕೈ ತುಂಬ ಹಸಿರು ಬಳೆ, ಹಣೆತುಂಬ ಈಬತ್ತಿ – ಕುಂಕುಮ; ಆಕೆ ಸತ್ತೇ ಇಲ್ಲ ಅನಿಸಬೇಕು, ಅಂಥ ಅಲಂಕಾರ! ಹೊರ ಭಾಗದಲ್ಲಿ ಸುತ್ತಮುತ್ತಲಿನ ಹತ್ತೂರ ಭಜನಾ ಮಂಡಳಿಗಳು,ಬಣ್ಣ ಬಣ್ಣದ ಧಡಲ್ ಬಾಜಿ ಪಟಾಕಿಗಳು,ಮೂಟೆಗಟ್ಟಲೆ ಖಾರಾ ಚುರಮರಿ, ಹಂಡೆಯಲ್ಲಿ ನಿರಂತರ ಚಹಾ, ಅಲಂಕೃತ ಪಲ್ಲಕ್ಕಿ.. ಒಂದೇ,ಎರಡೇ.. ನಿಂತು ನೋಡುತ್ತಿದ್ದ ಸಾವಿರ ಕಣ್ಣುಗಳಲ್ಲಿ ಮನೆ ಮಾಡಿದ್ದು ನಿಜಕ್ಕೂ ಸಾವಿನ ಹಬ್ಬ! ಊರಿನ ಸಕಲ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ಹಾಗು ಬೆರಗು! ಅನೇಕರಿಗೆ, ತಮಗು ಇಂಥದೇ ವೈಭವ ಪ್ರಾಪ್ತವಾಗಲಿ ಎಂಬ ಹಂಬಲ. ಅರೆಗಳಿಗೆಯಾದರು ಸರಿ, ಸಾವಿನ ಭಯ ನಿವಾರಿಸಿ ಮೋಹ ತುಂಬುವ ವಾತಾವರಣ… ಒಂದಿಬ್ಬರು ಭಾವುಕ ನಾರಿಯರು ‘ ದೇವರ ದಯದಿಂದ ತಮಗೂ ಇಂಥದೇ ಸಾವು ಬರಲಿ’ ಎಂದು ಬೇಡಿಕೊಂಡರಂತೆ! ಸಾವನ್ನು ಆಕರ್ಷಕಗೊಳಿಸುವ ಮನುಷ್ಯ ಪ್ರಯತ್ನ ತನಗರಿವಿಲ್ಲದೆಯೇ ಹೀಗೆ ನಡೆದುಕೊಂಡೇ ಬಂದಿದೆಯೇನೊ.
ಸಾವಿನ ಆಕರ್ಷಣೆಯನ್ನು ದೇಹ-ಮನಸ್ಸುಗಳಲ್ಲಿ ತುಂಬಿಯೇ ಕಳಿಸುವ ( In built) ಒಂದು ವ್ಯವಸ್ಥೆ ನಿಸರ್ಗದಲ್ಲಿ ಇದ್ದಂತಿದೆ.ಇದು ವಯಸ್ಸಿಗನುಗುಣವಾಗಿ ಬೇರೆ ಬೇರೆಯಾಗಿರುತ್ತದೆ.ತರುಣರಲ್ಲಿ ಇದು ಉತ್ಕಟವಾಗಿರುತ್ತದೆ.ಸಾವಿನೊಂದಿಗೆ ಸರಸವಾಡಲು ಅವರಿಗೆ ಆಕಾಶ,ಸಮುದ್ರ,ಕಾಡು, ಕ್ರೀಡೆ,ಬೆಂಕಿ,ಬೈಕು, ಕಾರು, ಹುಡುಗಿ.. ಯಾವೆಲ್ಲ ವೇದಿಕೆಗಳೂ ಸಾಲುವುದಿಲ್ಲ! ರೈಲು ಹತ್ತಡಿ ದೂರ ಇರುವಾಗ, ಜಾರುವ ಜಲಪಾತದ ಮಗ್ಗುಲಿನಲ್ಲಿ,ಸಮುದ್ರ ಏರಿ ಬರುವಾಗ ಇವರು ಸೆಲ್ಫಿ ತೆಗೆದುಕೊಳ್ಳಬಲ್ಲರು. ತಾವಳಿದರೂ ತಮ್ಮ ಮೊಬೈಲಿನಲ್ಲಿ ನಗುನಗುತ್ತ ಬದುಕುವರು. ಕೆಲವರು ಸ್ವತಃ ಕೊಲೆ ಮಾಡುವಾಗ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವಾಗ ವಿಡಿಯೊ ಮಾಡಿಕೊಳ್ಳುವಷ್ಟು ಸಾವ ಸೆಳೆತಕ್ಕೊಳಗಾದವರು. ಈ ಥ್ರಿಲ್ ಗಳ ಮುಂದೆ ನಿಜದ ಸಾವೆಂಬುದು ಒಂದು ಯಃಕಶ್ಚಿತ ಪದಾರ್ಥ ಅವರಿಗೆ. ಆದರೆ ಇವರ ಜೀವನೋತ್ಸಾಹ ಮೆಚ್ಚಿ ಕೆಲವು ಸಲ ಸಾವು ಸ್ವಲ್ಪ ಪಕ್ಕಕ್ಕೆ ಸರಿದು ಮತ್ತಷ್ಟು ಕಾಲ ಬದುಕುವ ವರ ಕೂಡ ಕೊಡುವುದಿದೆ.
ಅಪರ ವಯಸ್ಕರ ಸಾವಿನ ಆಕರ್ಷಣೆ ಉನ್ನತ ನೆಲೆಯದು. ತಂದೆ,ತಾಯಿ; ಬಂಧು,ಬಳಗ; ಗೆಳೆಯ, ಗೆಳತಿಯರು;ಮೊದಲ ಹೆಂಡತಿ,ತಮ್ಮ ಕಾಲದ ಸಿನಿಮಾ ತಾರೆಯರು, ಮುಂದೆ ನಡೆದು ಬಿಟ್ಟಿರುತ್ತಾರೆ. ಇವರನ್ನು ಮಾತನಾಡಿಸುವವರು ಇಲ್ಲಿಗಿಂತ ಅಲ್ಲಿಯೆ ಹೆಚ್ಚುಮಂದಿ. ಸಾಲದ್ದಕ್ಕೆ ಹಲವು ರೋಗ – ಭವರೋಗಗಳು. ಹೀಗಾಗಿ ‘ಇಲ್ಲಿರುವುದು ಸುಮ್ಮನೆ..’ ಅಂತ ಹಾಡಿಕೊಂಡೇ ಇರುತ್ತಾರೆ. ಬದುಕಿ ‘ಈವರೆಗಿನ ಬದುಕನ್ನು ಹಾಳು ಮಾಡಿಕೊಂಡೆ’ ಎಂಬ ಹಳಹಳಿಕೆಯ ಭಾವದ ಅವರಿಗೆ ‘ಅಲ್ಲಿ’ ಹೋಗಿ ಹೊಸ ಬದುಕು ಆರಂಭಿಸುವ ತವಕವೂ ಕಾಡುತ್ತಿರುತ್ತದೆ.ಅದೊಂದು ನಡುಗಡ್ಡೆಯೊ,ನಮ್ಮ ಲೋಕದಂತಹದೆ ಆದ ಮತ್ತೊಂದೊ ಎಂದು ಯಾರೂ ಯೋಚಿಸುವುದಿಲ್ಲ. ಇವರಿಗೆ ಬೇಕಾದವರು ಅಲ್ಲಿ ಯಾವ ಊರಲ್ಲಿರುತ್ತಾರೊ ಏನೊ! ಇದು ತಿಳಿದರೆ ಕೆಲವರ ಸಾವಿನ ಹುಚ್ಚು ಕಡಿಮೆಯಾದರೂ ಆಗಬಹುದು. ಆದರೆ ಇವರ ಬೀಳ್ಕೊಡುವ ಸಮಾರಂಭದ ವೇದಿಕೆಯನ್ನು ಕೆಲವು ಆಪ್ತರು,ಎಲೆ ಮರೆಯ ಹಣ್ಣಿನ ತೆರದಲ್ಲಿ ಆಗಲೆ ಶೃಂಗರಿಸತೊಡಗಿರುತ್ತಾರೆ. ಈಗ ದೇವರ ನೆನಪು ಬಲವತ್ತರವಾಗಿ ‘ ಆತ ಇರುವುದು ಕೂಡ ಅಲ್ಲೇ ಅಲ್ಲವೇ?’ ಅನ್ನಿಸತೊಡಗುತ್ತದೆ.ಈ ತನಕ ಸರಿಯಾಗಿ ಅರ್ಥವಾಗದ ‘ತೊಟ್ಟು ಕಳಚುವ ಹಣ್ಣು’ ‘ಉದುರುವ ಹಣ್ಣೆಲೆ’ ಮುಂತಾದ ಸೊಗಸಾದ ರೂಪಕಗಳ ಅರ್ಥ ಈಗ ಸ್ಪಷ್ಟವಾಗಿ ಆಗತೊಡಗುತ್ತದೆ. ಈ ಲೋಕದ ವ್ಯವಹಾರ ಚುಕ್ತಾ ಮಾಡಲು ಇಷ್ಟು ಮೊತ್ತ ಸಾಕಲ್ಲವೇ? ಈ ಹೊತ್ತಲ್ಲಿ ಅವರಿಗೆ ಒಂದು ಇರುವೆ ಕಚ್ಚಿದರೂ ಸಾಕು,ಸಾವು ಬಂದೇ ಬಿಡುತ್ತದೆ.
ಒಟ್ಟಾರೆ, ಈ ವಯಸ್ಕರಲ್ಲಿ ಕೆಲವರಿಗಾದರು ‘ಇಲ್ಲಿರುವವರ ಸಂಗ ಸಾಕು,ಇನ್ನು ಅಲ್ಲಿಯವರದೂ ಬೇಡ…’ ಎನಿಸುವುದಿದೆ. ಹುಟ್ಟು-ಸಾವು ಎರಡೂ ಸಾಕೆಂಬ ಅಂಥವರಿಗೆ ಈಗ ಬರುತ್ತಿರುವ ಸಾವು ‘ಮರಣವೃಕ್ಷದೊಳಮೃತಫಲದಂತೆ..’ ಕಂಡೀತು! ಅವರು ಬದುಕನ್ನು ಮಾತ್ರವಲ್ಲ,ಸಾವನ್ನು ಕೂಡ ಗೆದ್ದವರು ಎಂದು ಕೆಲವರಾದರು ಹೇಳಿಯಾರು.
ಇಷ್ಟು ಮಾತ್ರದಿಂದ ‘ವಯಸ್ಸಾದವರಿಗೆ ಮಾತ್ರ ಸಾವಿನ ಹಕ್ಕು’ ಎಂದು ಹೇಳಲಾಗುವುದಿಲ್ಲ. ಬ್ಯಾಂಕ್ ಅಥವಾ ಹೊರಗೆ ಸಾಲ ಪಡೆದು ಬರಗಾಲ ಮತ್ತು ಸರಕಾರಗಳಿಂದ ಹಾಳಾದ ಯಾವುದೆ ವಯಸ್ಸಿನ ರೈತ; ಬಿಇ ಗಳನ್ನು ನೋಡಿದ ಬಿಎ ಗಳು; ಬಹುರಾಷ್ಟ್ರೀಯರನ್ನು ಕಂಡ ದೇಶೀ ಉದ್ಯಮಿಗಳು; ಎಬಿಸಿಡಿ ಗಳ ಮುಂದಿನ ಅಆಇಈ ಕಂದಮ್ಮಗಳು; ಸಾವಿನ ಹಕ್ಕಿಗಾಗಿ ಬದುಕಿಕೊಂಡು ಎಷ್ಟು ದಿನ ಕಾಯ್ದಾವು? ಅದಿರಲಿ,ಸಾವೆಂಬ ಸಮ್ಮೋಹಿನಿಗೆ ಈ ಜಾಗತೀಕರಣದ ಅಧ್ವರ್ಯುಗಳಿಗಿಂತ ವಿಭಿನ್ನವಾಗಿ ಒಳಪಡಿಸುತ್ತಿದ್ದ ನನ್ನ ಇಂಗ್ಲೀಷ್ ಪ್ರಾಧ್ಯಾಪಕರೊಬ್ಬರ ಕಥೆಯನ್ನು ನಾನು ಹೇಳಲೇಬೇಕು.
ಅವರು ಸಿ ಎ ಬ್ರಹ್ಮಶಾಸ್ತ್ರಿ. ಸೂಟು,ಬೂಟು,ಟೈ, ದಪ್ಪ ಮೀಸೆ,ದೊಡ್ಡ ಮುಖ,ದೊಡ್ಡ ಕಣ್ಣು… ಭೂಲೋಕದ ಯಮರಾಯ ದೊಡ್ಡಣ್ಣನವರದೆ ನೆನಪು!ಕ್ಲಾಸಿನ ಬಾಗಿಲಲ್ಲಿ ನಿಂತು ಬೀಸಾಡಲು ಏನೂ ಉಳಿದಿರದಂತೆ ಸಿಗರೇಟಿನ ಜೀವ ಹಿಂಡಿ-ಹೀರಿ, ಕಣ್ಣಲ್ಲಿ ಮಂಜಿನಂತಹ ನೀರು ಮತ್ತು ಹೊಗೆ ತುಳುಕಿಸುತ್ತ ಒಳ ಬಂದರೆಂದರೆ ಹುಡುಗರಿಗೆ ಆಧುನಿಕ ಅವಧೂತರೆ ಬಂದು ನಿಂತಂತೆ! ನಮಗೆ “Way of life” ಕಲಿಸ ಬೇಕಾಗಿದ್ದ ಅವರು ಮೊದಲ ದಿನವೇ ” ವಿದ್ಯಾರ್ಥಿ ಮಿತ್ರರೆ,ನನಗೆ ಗೊತ್ತಿದೆ; ಮತ್ತು ನಿಮಗೂ ತಿಳಿದಿರಲಿ, ನನ್ನ ಭವಿಷ್ಯದ ಕಾಯಿಲೆ ಕ್ಯಾನ್ಸರ್..” ಎಂದು ಹೇಳಿ ಗಡದ್ದಾಗಿ ನಕ್ಕಿದ್ದರು.ಹುಡುಗಿಯರು ನಿಸರ್ಗ ನಿಯಮ ಮೀರದೆ ಸಣ್ಣದಾಗಿ ಕಣ್ಣು-ಮೂಗು ಒದ್ದೆ ಮಾಡಿಕೊಂಡು, ಕರ್ತವ್ಯ ಪೂರೈಸಿ ಮುಂದಿನ ಬದುಕುವ ದಾರಿಗೆ ಸನ್ನದ್ಧರಾದರೆ, ಸ್ಥೂಲ ಬುದ್ಧಿಯ ಹುಡುಗರು ಸಾವಿನ ಆ ಆಕರ್ಷಕ ಬೀಜಗಳನ್ನು ತಡಮಾಡದೆ ತಮ್ಮೊಳಗೆ ಬಿಟ್ಟುಕೊಂಡು ಗುರುಗಳ ನಿಷ್ಠಾವಂತ ಅನುಯಾಯಿಗಳಾಗಿ ಬದಲಾದರು.
ಮುಂದಿನ ದಿನಗಳಲ್ಲಿ ಶಾಸ್ತ್ರಿಗಳದೆ ಬ್ರ್ಯಾಂಡಿನ ಸಿಗರೇಟನ್ನು ಅವರದೆ ಶೈಲಿಯಲ್ಲಿ — ಹವಾಯಿ ಚಪ್ಪಲಿ ಹಾಕಿಕೊಂಡ ಹುಡುಗ ಕೂಡ — ಸೇದುತ್ತ, ” You know,my future disease is cancer..” ಎಂದು ಹೇಳುತ್ತ ತಿರುಗುವುದು ಒಂದು ಫ್ಯಾಶನ್ನೇ ಆಗಿಹೋಯಿತು! ಇದನ್ನು ಕಂಡ ಶಾಸ್ತ್ರಿಗಳು ‘ ಇದು ನನ್ನ ಭವಿಷ್ಯದ ಕಾಯಿಲೆ ಮಾತ್ರ,ನಾನು ಪೇಟೆಂಟ್ ಪಡೆದಿದ್ದೇನೆ, ಕೇವಲ ನನ್ನ ಹಕ್ಕು …’ ಎಂದು ವಾರ್ಷಿಕೋತ್ಸವದಲ್ಲಿ ಸಾರಿ ಸಾರಿ ಹೇಳಿದರೂ ಸಾವು ಸಮ್ಮೋಹಿತ ವಿದ್ಯಾರ್ಥಿಗಳು ಕೇಳಲಿಲ್ಲ…
‘You know my future disease is cancer’ ಎಂಬ ಆದಿ ವಾಕ್ಯಕ್ಕೆ ‘ ಇದು ನನ್ನೊಬ್ಬನ ಭವಿಷ್ಯದ ಕಾಯಿಲೆ ಮಾತ್ರ,ನಾನು ಪೇಟೆಂಟ್ ಪಡೆದಿದ್ದೇನೆ,ಕೇವಲ ನನ್ನ ಹಕ್ಕು ..’ ಎಂಬ ಅಂತ್ಯ ವಾಕ್ಯವನ್ನೂ ಸೇರಿಸಿ ವಾತಾವರಣವನ್ನು ಧೂಮ್ರವಲಯವನ್ನಾಗಿಸಿ ಸಾವಿನ ಮಟ್ಟದ ಅಸಂಗತ ಸಂಭ್ರಮ ಅನುಭವಿಸಿದರು… ಶಾಸ್ತ್ರೀ ರಾಜೀನಾಮೆ ಕೊಟ್ಟು ಹೋದರು!
ಮುಂದೆ ಶಾಸ್ತ್ರೀಯವರು ಗೋಣಿಕೊಪ್ಪಲಿನಲ್ಲಿ ಪ್ರಾಚಾರ್ಯರಾದಾಗ ಸಿಕ್ಕಿದ್ದರು. ಚಿಕ್ಕ ಮೀಸೆ,ಸ್ವಚ್ಛ ಕಣ್ಣು, ಸಿಗರೇಟು ಬಿಟ್ಟು ಸಂಸಾರಸ್ಥರಾಗಿದ್ದರು… ಇವರನ್ನು ಬೆಳಗಾವಿಗೆ ಕರೆದು ಬದುಕಿರುವ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ಏರ್ಪಡಿಸಿ ‘ Real way of life’ ‘ ಖರೆ ಖರೆ ಬದುಕಿನ ಮಾರ್ಗ..’ ಎಂಬ ಮರು ಪಾಠ ಮಾಡಿಸಿದರೆ? ಎಂಬ ಆಗದ ಹೋಗದ ಕಡೆಯ ಪ್ರಯತ್ನದಂತಹ ವಿಚಾರವೊಂದು ಹೊಳೆದು ಹೋಯಿತು…ಆದರೆ ಗೆಳೆಯರ ಅಭಿಪ್ರಾಯ ತದ್ವಿರುದ್ಧದ್ದಾಗಿತ್ತು.ಗುರುಗಳ ಹಳೆಯ ಗಂಭೀರ ಮಾತು ಈಗಲೂ ಬದುಕಿನ ಹುರುಡು-ಹುಮ್ಮಸ್ಸಾಗಿ, ಜೀವಂತಿಕೆಯದಾಗಿ ಉಳಿದಿತ್ತು. ಮತ್ತು ಈಗಿನ ನಗುಮೊಗದ ಬದುಕಿಸುವ ಮಾತು ಬದುಕಿನಲ್ಲಿ ಸೋತ ಮುದುಕರ ಮಾತಾಗಿ, ಶಾಸ್ತ್ರಿಗಳ ಬಗ್ಗೆ ಭ್ರಮನಿರಸನವಾಗಿ ಬಿಟ್ಟಿತ್ತು…ಸಾವಿನ ಆಕರ್ಷಣೆ ಬಿಟ್ಟುಕೊಟ್ಟು ಬದುಕಲು ಅವರಾರೂ ಸಿದ್ಧರಿರಲಿಲ್ಲ.
***
ಜಗತ್ತಿಗೆ ಜಾಣತನ ತೋರಿಸಲು ಏನೆಲ್ಲ ಹೇಳಿದರೂ ಆಂತರ್ಯದ ಮಾತು ನನಗಾದರು ತಿಳಿದೇ ಇರುತ್ತದೆ. ಕೊನೆಗಾದರು ನಾನು ಇಲ್ಲಿ ಹೇಳಲೇಬೇಕು…
ಸಾವೆಂಬುದು ನನಗೂ ಬೇಡವಾದ ಭಯವೇ.
‘ ದಾರೊ ನಿ ಚಿಣ್ಣಾದಾರೋ
ಕಾರು ರಾತ್ರಿಯೊಳೆಮ್ಮಾಗರಕೆ ಬಂದವ
ಇಕ್ಕಿದ ಕದಗಳಿಕ್ಯಾವೆ; ನಿದ್ರೆ —
ಉಕ್ಕೇರಿ ಕಣ್ಣು ಮುಚ್ಯಾವೆ…’
ಎಂದು ಪ್ರಸನ್ನ ವೆಂಕಟ ದಾಸರಂತೆ, ಯಮನನ್ನು ಸಾವಿನ ಸಮ್ಮುಖದಲ್ಲಿ ‘ ಚಿಣ್ಣಾ’ ಎಂದು ಮುದ್ದುಗರೆಯುತ್ತ ಕರೆಯುವ ಸ್ಥಿತಪ್ರಜ್ಣ ಭಾವ ನನ್ನಿಂದ ಬಹಳ, ಬಹಳ ದೂರವಿದೆ. ಪುಟ್ಟ ಮಕ್ಕಳು ಸೀನಿದರೆ ತಕ್ಷಣವೇ, ” ಆಯುಷ್ಮಾನ್ ಭವ..” ಎನ್ನುವ ಮೂಲಕ ಅವರಿಗೆ ದೀರ್ಘಾಯುಷ್ಯ ಕೋರುವುದರ ಹಿಂದೆ ಸಾವಿನ ಭಯವೇ ಇರುತ್ತದೆ.
ವೈಚಾರಿಕ ಭಾಷಣ ಮಾಡಿ ಬರುವಾಗಲೂ ಸಣ್ಣ ಪುಟ್ಟ ಶಕುನಗಳು ಕಿರಿ ಕಿರಿ ಮಾಡುವುದಿರುತ್ತದೆ. ಲಲಿತ ಪ್ರಬಂಧದ ಮೂಲಕ ಏನೆಲ್ಲ ಹುಡುಗಾಟದ ನಾಟಕ ಮಾಡಿದರು ಇತರರಿಗಾಗುವಷ್ಟೆ ಭಯ ನನಗು ಆಗುತ್ತದೆ. ಆದರು, ಇದನ್ನು ಬರೆಯಲೇ ಬೇಕಾಗಿತ್ತು.
ಮಾಗಿಯ ಕೊರೆಯುವ ಚಳಿಯಲ್ಲಿ ತಣ್ಣೀರಿನ ಸ್ನಾನ ಮಾಡುವ ಪ್ರಸಂಗ ಬಂದರೆ ಇಷ್ಷಿಷ್ಟೆ ನೀರನ್ನು ದೇಹದ ಒಂದೊಂದೇ ಭಾಗಕ್ಕೆ ಸ್ವಲ್ಪ ಸ್ವಲ್ಪ ಪರಿಚಯಿಸುತ್ತ, ಪರಿಚಯಿಸುತ್ತ, ಚಳಿಯ ಗೆಳೆತನ ಮಾಡಿಕೊಂಡು, ಕಡೆಗೊಮ್ಮೆ ಧೈರ್ಯವಾಗಿ ಇಡೀ ಪಾತ್ರೆಯನ್ನೇ ಮೇಲೆತ್ತಿ ತಲೆಯ ಮೇಲೆ ಸುರಿದುಕೊಂಡು ಸ್ನಾನ ಮುಗಿಸುತ್ತೇವಲ್ಲ, ಹಾಗೆಯೇ. ವಿ ಜಿ ಭಟ್ಟರು ಯಮನನ್ನು ಕೋಣದ ಸಹಿತ ಮನೆಗೇ ಕರೆದಂತೆ. ಈ ಬರೆಹವೆಂಬುದು ಕೂಡ ನನ್ನನ್ನೇ ನಾನು ಸ್ನಾನಕ್ಕೆ ಸಿದ್ಧಗೊಳಿಸಿಕೊಳ್ಳುವ ಒಂದು ಪ್ರಯತ್ನ.
” ಇನ್ನು ಮುಂದೆ ಶಬ್ದವಿಲ್ಲ!”
- ವಿಜಯೇಂದ್ರ ಪಾಟೀಲ
