“ಸಾವಿತ್ರಿ” ಕಾದಂಬರಿ ಪರಿಚಯ – ಲಾವಣ್ಯ ಪ್ರಭಾ

“ಶ್ರೀ ಪುರುಷೋತ್ತಮ ಶಿವರಾಮ್ ರೇಗೇ” ಅವರು ಬರೆದ ಮರಾಠಿ ಕಾದಂಬರಿ ” ಸಾವಿತ್ರಿ” ಯನ್ನು ಕನ್ನಡಕ್ಕೆ ತಂದವರು ಶ್ರೀಮತಿ ಗಿರಿಜಾ ಶಾಸ್ತ್ರಿ ಅವರು. ಸಾವಿತ್ರಿ ಕುರಿತು ಲೇಖಕಿ ಲಾವಣ್ಯ ಪ್ರಭಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ….

ಪುಸ್ತಕ : ಸಾವಿತ್ರಿ
ಮೂಲ ಲೇಖಕರು : ಶ್ರೀ ಪುರುಷೋತ್ತಮ ಶಿವರಾಮ್ ರೇಗೇ
ಕನ್ನಡಕ್ಕೆ ಅನುವಾದ : ಗಿರಿಜಾ ಶಾಸ್ತ್ರಿ
ಪ್ರಕಾರ : ಕಾದಂಬರಿ
ಪ್ರಕಾಶಕರು :ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ಶ್ರೀಮತಿ ಗಿರಿಜಾ ಶಾಸ್ತ್ರಿ ಅವರು ತಮ್ಮ ಪತಿ ಶ್ರೀಯುತ ರಘುನಾಥ್ ಕೃಷ್ಣಮಾಚಾರ್ ಅವರೊಡಗೂಡಿ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಯಿತ್ತ ಈ ಇಬ್ಬರೂ ಪ್ರತಿಭಾವಂತ ದಂಪತಿಗಳು ಮೈಸೂರಿನ ನಮ್ಮ ಮನೆಗೆ ಬಂದು ಹೋದಾಗಿನ ಅವರ ಒಡನಾಟದ ಕ್ಷಣಗಳು ನನ್ನ ಪಾಲಿಗೆ ಅತ್ಯಂತ ಅಮೂಲ್ಯ. ಮುಂಬೈನಿಂದ ಅಮೆರಿಕಾಗೆ ಹೊರಡುವ ಮೊದಲು , ನಾನು ಕುತೂಹಲ ತೋರಿದ “ಸಾವಿತ್ರಿ” ಯನ್ನು ಮೈಸೂರಿಗೆ ಕಳಿಸಿ ಹೋದ ಅವರ ಕಾಳಜಿ ಪ್ರೀತಿಗೆ ಈ ಪುಟ್ಟ ಬರಹ.

“ಶ್ರೀ ಪುರುಷೋತ್ತಮ ಶಿವರಾಮ್ ರೇಗೇ” ಅವರು ಬರೆದ ಮರಾಠಿ ಕಾದಂಬರಿ ” ಸಾವಿತ್ರಿ” ಯನ್ನು ಕನ್ನಡಕ್ಕೆ ತಂದವರು ಶ್ರೀಮತಿ ಗಿರಿಜಾ ಶಾಸ್ತ್ರಿ. ಇದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಕಟಣೆ.

” ಸಾವಿತ್ರಿ” ಈ ಕಾದಂಬರಿಯಲ್ಲಿರುವುದು ಕಥಾ ನಾಯಕಿ ಒಬ್ಬಳೇ. ಕರ್ನಾಟಕದ ಕೂರ್ಗ್ ನ ತಿರುಪೇಟೆಯ ವಾಸಿಯಾದ ಅವಳು ‘ ಅವನಿಗೆ ‘ 1939 ರಿಂದ 1947 ರವರೆಗೆ ಎಂಟು ವರ್ಷಗಳ ಕಾಲ ಬರೆದ 39 ಪತ್ರಗಳು ಇಲ್ಲಿವೆ. ‘ಸಾವಿತ್ರಿ’ ಎಂಬ ಆಕೆ ‘ಆನಂದಭಾವಿನಿ’ ಆದದ್ದು ಹೇಗೆ? ಈ ಕಾದಂಬರಿ ಅತ್ಯಂತ ವಿಶೇಷ ಯಾಕೆ?…..ಮುಂದೆ ಓದಿ….

‘ ಅವನು ‘ ಅವಳಿಗೆ ಪತ್ರ ಬರೆಯುವುದೇ ಇಲ್ಲ , ಆದರೆ ಸಾವಿತ್ರಿಯೊಬ್ಬಳೇ ಬರೆಯುವ ಪ್ರತಿ ಪತ್ರಗಳ ಮೂಲಕ ಅವನ ಸ್ವಭಾವ , ಅವನ ಭೇಟಿ, ತಾಯಿಯಿಲ್ಲದ ಆಕೆ ತನ್ನ ತಂದೆಯೊಡನಿರುವ ಮನೆಗೆ ಆತ ಬಂದು ಹೋದಾಗ ನಡೆದ ಘಟನೆಗಳು , ಅವನ ಪ್ರೇಮಕ್ಕೆ ಅವಳ ಸ್ಪಂದನೆ , ತಂದೆಯೊಡಗೂಡಿ ಆಕೆ ಜಪಾನ್ ಪ್ರವಾಸ ಹೋಗುವಾಗ ,’ಅವನೂ’ ಸಹಾ ಇಂಗ್ಲೆಂಡ್ ನ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರವೇಶಾವಕಾಶ ಪಡೆದುಕೊಂಡು ಹೋದದ್ದು , ಜಪಾನ್ ಯುದ್ಧ ಸಂದರ್ಭದಲ್ಲಿ ಸಾವಿತ್ರಿ ತಂದೆಯನ್ನು ಕಳೆದುಕೊಂಡು ಸೈನ್ಯದಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದಾಗ ಮೇಜರ್ ಜನರಲ್ ನ ಮಗು ಬೀನಾ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥವಾದಾಗ ಮಗು ಬೀನಾ ಹಾಗೂ ಲ್ಯೋರೆ ಎಂಬ ಸ್ನೇಹಿತೆಯೊಂದಿಗೆ ಭಾರತಕ್ಕೆ ಮರಳುವ ಮತ್ತು ಇಲ್ಲಿ ಬಂದು ಕಲಾಶಾಲೆಯನ್ನು ಪ್ರಾರಂಭಿಸುವ ಪ್ರಸ್ತಾಪಗಳು….

ಎಲ್ಲವೂ ಅವಳು ಅವನಿಗೆ ಬರೆದ ಪತ್ರದ ಮುಖೇನವಾಗಿಯೇ ಓದುಗರಿಗೆ ತಿಳಿಯುತ್ತಾ ಹೋಗುವುದು ಕುತೂಹಲ ಹುಟ್ಟಿಸುತ್ತದೆ. ಅಚ್ಚರಿ‌ ಮೂಡಿಸುತ್ತದೆ.

ತಾಯಿಯಿಲ್ಲದ ‘ಸಾವಿತ್ರಿ’ ಯನ್ನು ಸಲಹುತ್ತಿದ್ದ ಆಕೆಯ ತಂದೆ ಬಹುದೊಡ್ಡ ವಿದ್ವಾಂಸರು. ತತ್ವಮೀಮಾಂಸೆಯ ಬಗ್ಗೆ ಉಪನ್ಯಾಸ ಚರ್ಚೆಗಳನ್ನು ಮಾಡುತ್ತಿದ್ದವರು. ಒಮ್ಮೆ ಅವಳನ್ನು “ಆನಂದಭಾವಿನಿ” ಎಂದು ಮರು ನಾಮಕರಣ ಮಾಡಿದವರು. ಹೆಣ್ಣು , ಪ್ರಕೃತಿ ತಾನು ಮುಟ್ಟಿದ್ದಲ್ಲೆಲ್ಲಾ ಹಸಿರನ್ನು ಹೊಳೆಸಿ ಉಸಿರನ್ನು ಕಾಪಿಟ್ಟ ಜೀವಂತಿಕೆಯ ಸ್ಪರ್ಶಮಣಿ. ಆನಂದಭಾವಿನಿಯಾಗಿರಲಿ ಮಗಳು ಎಂದು ಹಾರೈಸಿದ ತಂದೆಯ ಮಗಳಾದ ‘ ಸಾವಿತ್ರಿ’ ಇಡೀ ಕಾದಂಬರಿಯಲ್ಲಿ ಆಡಂಬರ, ಅಬ್ಬರವಿಲ್ಲದ ಸರಳ ಹೆಣ್ಣಾಗಿ ಪ್ರಕೃತಿಯ ಸಹಜತೆಯೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಸದಾ ಆನಂದವಾಗಿರುವ , ಈಗಾಗಲೇ ಪ್ರೇಮದ ಬಗೆಗಿರುವ ಸಿದ್ಧರೂಪಗಳನ್ನು ಏಕತಾತನತೆಗಳನ್ನು‌ ಮುರಿದು ಹೊಸ ಹೊಳಹುಗಳಲ್ಲಿ ಪ್ರೇಮದ ವ್ಯಾಖ್ಯಾನ ಹೊಳೆಸುವ ಪರಿಗೆ ಮನ ಸೋಲಲೇಬೇಕು.

ಈ ಕಾದಂಬರಿ ‘ಸಾವಿತ್ರಿ’ಯ ರಂಗಪ್ರಯೋಗ “ಆನಂದಭಾವಿನಿ” ನೆನ್ನೆಯಷ್ಟೇ ನಾನು ನೋಡಿದೆ. ಮೈಸೂರಿನ ” Centre for Culture Communication and Creativity ” ಸಂಸ್ಥೆಯ ಡಾ.ಶ್ರೀಪಾದ ಭಟ್ ನಿರ್ದೇಶನದ , ಕಾದಂಬರಿಯನ್ನು ರಂಗರೂಪಕ್ಕಿಳಿಸಲು ನೆರವಾದ ಸುಧಾ ಆಡುಕಲ್ ಪ್ರತಿಭಾವಂತ ಕಲಾವಿದೆ ‘ ಸಿರಿ ವಾನಳ್ಳಿ’ ಅಭಿನಯದ ಒಂದೂವರೆ ಗಂಟೆಯ ಏಕವ್ಯಕ್ತಿ ಪ್ರದರ್ಶನದ ಮೂಲಕ ” ಸಾವಿತ್ರಿ” ನನ್ನೊಳಗೆ ‘ಆನಂದಭಾವಿನಿ’ಯಾಗಿ ತನ್ನನ್ನು ಮತ್ತಷ್ಟು ತೆರೆದುಕೊಂಡಳು ಅಥವಾ ಅವಳ ಆನಂದದ ಲೋಕಕ್ಕೆ ನಾನು ಮತ್ತಷ್ಟು ತೆರೆದುಕೊಂಡೆನೇನೋ…?

ಒಟ್ಟಿನಲ್ಲಿ ನಾನು ” ಸಾವಿತ್ರಿ” ಯ ‘ಆನಂದಭಾವಿನಿ’ ರೂಪದ ಸವಿಯನ್ನು ಮತ್ತಷ್ಟು ಸವಿದೆ. ಅದ್ಭುತ ರಂಗಪ್ರಯೋಗ. ನಾಟಕ ವೀಕ್ಷಿಸಿದ ಮೇಲೆ ಪುಸ್ತಕದ ಬಗೆಗಿನ ಬರಹ ನನ್ನೊಳಗೆ ಮತ್ತಷ್ಟು ಸುಸ್ಪಷ್ಟವಾಯಿತು ಮತ್ತು ಅದಕ್ಕಾಗಿ ಸಮರ್ಥ ನಿರ್ದೇಶಕರಾದ ಡಾ ಶ್ರೀಪಾದ ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮತ್ತಷ್ಟು ಯಶಸ್ವಿ ಪ್ರದರ್ಶನಗಳಾಗಲಿ ಎಂದು ಹಾರೈಸುವೆ.

* ರಾಜಮ್ಮ ಸಾವಿತ್ರಿಗೆ ಹೇಳುವ ಕತೆಯಲ್ಲಿ ಬರುವ ‘ನವಿಲು’ ಸ್ವಾತಂತ್ರ್ಯ ಮತ್ತು ಆನಂದದ ಸಂಕೇತವಾಗಿ ಕಾಣುವುದು. ‘ “ನವಿಲು ನಮಗೆ ಬೇಕೆಂದರೆ ನಾವೇ ನವಿಲಾಗಿಬಿಡುವುದು” ಎಂಬ ಮಾತುಗಳಲ್ಲಿ “ಆನಂದ ನಮಗೆ ಬೇಕೆಂದಲ್ಲಿ‌ ನಾವೇ ಆನಂದವಾಗಿಬಿಡುವುದು” ಹಾಗೆಯೇ ” ಅವನು ಬೇಕೆಂದಲ್ಲಿ ನಾವೇ ಅವನಾಗಿಬಿಡುವುದು” ಎಂಬ ಅದ್ವೈತ ಹೊಳೆಯುತ್ತದೆ.

* ” ( ನಾನು) ಯಾರನ್ನು ಇಚ್ಛಿಸುತ್ತೇನೋ ಅವನನ್ನು ಪ್ರಚಂಡ ಬಲಿಷ್ಠನನ್ನಾಗಿಯೂ, ವಿಕಸಿತ ಚೇತನನ್ನಾಗಿಯೂ , ಋಷಿಯನ್ನಾಗಿಯೂ , ಶ್ರೇಷ್ಠ ಮೇಧಾವಿಯನ್ನಾಗಿಯೂ ಮಾಡುತ್ತೇನೆ ” – ಎಂಬ ಋಗ್ವೇದದ ಸಾಲುಗಳ ಉಲ್ಲೇಖ..ಆನಂದಭಾವಿನಿಯ ವ್ಯಕ್ತಿತ್ವದಲ್ಲೂ ಕಾಣಬಹುದು.

* ಏಳು ಕನ್ನಿಕೆಯರ ನಿವಾಸದ ಕತೆ….ನನಗೆ ನನ್ನ ಅಜ್ಜಿ ಹೇಳುತ್ತಿದ್ದ ಕತೆಗಳ ಲೋಕಕ್ಕೆ ಕರೆದೊಯ್ದಿದ್ದಂತೂ ನಿಜ.

* ಕೂರ್ಗ್ ನ ಆಂಗ್ಲ ಕಾಫಿ ಪ್ಲಾಂಟರ್ ಎಜ್ ವರ್ಥ್ ರವರ ಜನ್ಮಜನ್ಮಾಂತರಗಳ ನಂಬಿಕೆ ನಮ್ಮದಷ್ಟೇ ಅಲ್ಲ….ಪ್ರಪಂಚದಲ್ಲಿ ಜನರಿರುವ ಎಲ್ಲೆಡೆಯೂ ಕಾಣಬಹುದೆಂಬ ಸತ್ಯ.

* ಸಾವಿತ್ರಿಯ ತಂದೆ ಜಪಾನಿನ ಕ್ಯೂಟೋದ” ಆನಂದ ಮಿಶನ್” ಎಂಬ ತತ್ವ ಜಿಜ್ಞಾಸುಗಳ ಸಂಸ್ಥೆಯಲ್ಲಿ ಉಪನ್ಯಾಸ ನೀಡುವ ಉಲ್ಲೇಖ, ನೇತಾಜಿ ಸುಭಾಷ್ ಚಂದ್ರ ಅವರ ‘ಆಜಾದ್ ಹಿಂದ್ ‘ ಸೇನೆಯ ಪ್ರಸ್ತಾಪ.

* ಜಪಾನಿನ ಮೇಲೆ ಆಕ್ರಮಣವಾದ ಸಂದರ್ಭದ ಯುದ್ಧದ ಭಯಂಕರತೆ ಕ್ರೂರತೆಯನ್ನು ಸಮರ್ಥವಾಗಿ ಹೇಳುವ ಪ್ರತಿಮೆಯಾಗಿ ” ಹಾಡುವ ಮರ ” ಬರುತ್ತದೆ. ಮನುಷ್ಯನ ಅಂತಃಸತ್ವವನ್ನೂ ಮನುಷ್ಯತ್ವವನ್ನೂ ಅಡಗಿಸುವ ದಬ್ಬಾಳಿಕೆಯ ಪ್ರಭುತ್ವದೆದುರು ಮಾನವೀಯತೆಯೊಂದೇ ಮನುಷ್ಯನಾಗಲು ಇರಬೇಕಾದ , ಪ್ರಕೃತಿಯೊಂದಿಗೆ ಬದುಕಬೇಕಾದ ಮೌಲ್ಯವೆಂಬಂತೆ ಹಾಡುವ ಮರವನ್ನು ಕಡಿದರೂ ಅಲ್ಲಿ ವಾಸವಿದ್ದ ಹಕ್ಕಿಗಳು ಸತ್ತರೂ , ಆಡಳಿತದ ದೌರ್ಜ್ಯನ್ಯಕ್ಕೆದುರಾಗಿ ನಿಂತ ಮರವೇ ಅಂತಹ ಪ್ರಭುತ್ವವನ್ನು ಕೊನೆಗಾಣಿಸಲು ಸಶಕ್ತವಾಗುವುದು ಮತ್ತು ಮತ್ತಷ್ಟು ಮರಗಳು ಬೆಳೆದು ನಿಂತು ಹಾಡು ಮುಂದುವರಿಯುವುದು…ಸ್ವಾತಂತ್ರ್ಯ ಮತ್ತು ಆನಂದದ ಅವಿಚ್ಛಿನ್ನ ಮಿಡಿತ ಮುಂದುವರೆಯಲೇಬೇಕು ಎಂಬ ಆಶಯ….ಸೊಗಸಾಗಿದೆ.

ನಿರ್ದೇಶಕರಾದ ಡಾ ಶ್ರೀಪಾದ ಭಟ್

* ಜಪಾನಿನಲ್ಲಿ ತಂದೆಯನ್ನು ಕಳೆದುಕೊಂಡು, ತಬ್ಬಲಿಯಾದ ಮೇಜರ್ ಜನರಲ್ ಮಗು ಬೀನಾ ಮತ್ತು ಗೆಳತಿ ಲ್ಯೋರೆ ಜೊತೆಗೂಡಿ ಭಾರತಕ್ಕೆ ಬಂದ ಸಾವಿತ್ರಿ ಅರ್ಥಾತ್ ಆನಂದಭಾವಿನಿ ತಂದೆಯ ಗೆಳೆಯ ” ಎಜ್ ವರ್ಥ್” ರ ಸ್ಮರಣಾರ್ಥ ” ನಾಟ್ಯ ಗೃಹ “(ಕಲಾ ಶಾಲೆ)ಯನ್ನು ಸ್ಥಾಪಿಸಿ ರಾಜಮ್ಮ ಹೇಳುತ್ತಿದ್ದ ನವಿಲಿನ ಕತೆಯನ್ನು ರಂಗದ ಮೇಲೆ ಪ್ರಸ್ತುತ ಪಡಿಸುವ ಸಮಯದಲ್ಲಿ ನವಿಲಿನ ಪಾತ್ರವನ್ನು ಎಂಟು ವರ್ಷಗಳ ಕಾಲ ಬರೆದ ಪತ್ರದ ನಾಯಕ ಅವಳ ಪ್ರಿಯಗೆಳೆಯನಿಗೆ ಒಪ್ಪಿಸುವುದು ಅವನೇ ಅವಳ ಜೀವನದ ಆನಂದದ ಕಾರಣಸ್ವರೂಪವಾದ ನವಿಲು ಎಂಬ ಹೊಳಹು ಹೊಳೆಯುವುದಲ್ಲದೇ….ಆ ನವಿಲಿನ ರಂಗಪ್ರಯೋಗದ ಪ್ರದರ್ಶನ ದಿನವನ್ನು ಆಗಸ್ಟ್ 15 ,1947 ಎಂದು ತನ್ನ ಕೊನೆಯ ಪತ್ರದಲ್ಲಿ ಉಲ್ಲೇಖಿಸುವಲ್ಲಿ ” ನವಿಲು ” ಬಿಳಿಯ ಹಂಸಗಳನ್ನು ಅಂದರೆ ಬ್ರಿಟಿಷರನ್ನು ಭಾರತದಿಂದ ಅಟ್ಟಿ ನಮ್ಮ ಸ್ವಾತಂತ್ರ್ಯವನ್ನು ಭದ್ರ ಮಾಡಿಕೊಂಡ ರೂಪಕವಾಗಿಯೂ ನಮಗೆ ಕಂಡುಬರುತ್ತದೆ.

* ಆನಂದ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ” ನವಿಲು” ಕಂಡು ಬಂದರೆ , ಮಾನವೀಯತೆಯ ಜರೂರತ್ತನ್ನು ಒತ್ತಿಹೇಳುವ “ಹಾಡುವ ಮರ” ಕಾಣಿಸುತ್ತದೆ.

* ಎಲ್ಲಾ ಸೃಜನಶೀಲ ಕಲೆ ಸಾಹಿತ್ಯ ಸಂಗೀತ ಮನುಷ್ಯನನ್ನು ಮೃದುವಾಗಿಸುತ್ತವೆ ಕ್ರೌರ್ಯವನ್ನು ದೂರವಾಗಿಸುತ್ತವೆ ಎನ್ನುವ ಹಿನ್ನೆಲೆಯಲ್ಲಿ ಕಲಾಶಾಲೆಯ ಸ್ಥಾಪನೆ.
ಈ ಎಲ್ಲವನ್ನೂ ಎಂಬತ್ತು ಪುಟದ ಪುಟ್ಟ ಕಾದಂಬರಿಯಲ್ಲಿ ಅಡಗಿಸಿಟ್ಟ ಮೂಲ ಲೇಖಕರ ಪ್ರತಿಭಾವಂತಿಕೆಗೆ ನನ್ನದೊಂದು ಹ್ಯಾಟ್ಸಾಫ್.

ಕೊನೆಯಲ್ಲಿ ನೆನ್ನೆ ಮೈಸೂರಿನಲ್ಲಿ ನಡೆದ ರಂಗದ ಮೇಲಿನ “ಆನಂದಭಾವಿನಿ” ಪ್ರೇಕ್ಷಕರಿಗೆ ಎಸೆಯುವ ಪ್ರಶ್ನೆ “ಬಂದೂಕಿನ ಗುರಿಯ ವಿರುದ್ಧ ತುದಿಯಲ್ಲೇನಿರಬೇಕು? “.. ” ಹೂವು, ಬದುಕು , ಕನಸು, ಮಗು , …” ಹೀಗೆ ಉತ್ತರಗಳು ಬಂದಾಗ ಆಕೆ “ಬಂದೂಕಿನ ವಿರುದ್ಧ ತುದಿಯಲ್ಲಿರುವುದು ಬಂದೂಕಿಗೆ ವಿರುದ್ಧವಾಗಿರುವುದೆಲ್ಲವೂ” ಎಂಬ ಮಾತಿನಿಂದ ನಾಟಕದ ಮುಕ್ತಾಯ ಅತ್ಯಂತ ಹೃದಯಸ್ಪರ್ಶಿಯಾಗಿತ್ತು.

ಯುದ್ಧ , ಶಾಂತಿ , ಮತ್ತು ಪ್ರೇಮಗಳ ಸಮ್ಮಿಶ್ರಣವಾದ ಕಾದಂಬರಿಯಲ್ಲಿ ಯುದ್ದವಿಲ್ಲದೆ ಶಾಂತ ವಾತಾವರಣದಲ್ಲಿ ಪ್ರೇಮ ಅರಳಲು ಬದುಕಲು ಮತ್ತು ಬದುಕಿಸಲು ಸಾಧ್ಯ ಎಂಬ ಆಶಯ ಎಂದಿಗೂ ಪ್ರಸ್ತುತವೇ.

“ಆನಂದಭಾವಿನಿ” ಮತ್ತು “ಅವನು” ಒಬ್ಬರೊಳಗೊಬ್ಬರು ಬೆಸೆದುಕೊಂಡಂತೆ ಕಾಣುವಲ್ಲಿ ನಾನೇ ಅವನು ಎಂಬ ಅದ್ವೈತ ರೂಪದ ಮೂಲಕ ನಮ್ಮೊಳಗೆ ಅವನನ್ನು ಗುರುತಿಸಿಕೊಳ್ಳಬೇಕಷ್ಟೇ ಎಂದು ನನಗನಿಸುತ್ತದೆ.

ನವಿಲನ್ನು ಮತ್ತು ಅವನನ್ನು ಎಲ್ಲಿ ಹುಡುಕುವಿರಿ….? ನಾನವನನ್ನು ಹುಡುಕಲಾರೆ ಅವಾ ನನ್ನಲ್ಲೇ ಈಗಾಗಲೇ ಸ್ಥಾಪಿತವಾದವನು…ನಾನೇ ಅವನಾದವನು…
“ನವಿಲು ಬೇಕೆಂದಲ್ಲಿ ನಾವೇ ನವಿಲಾಗಬೇಕು , ಅವನು‌ ಬೇಕೆಂದಲ್ಲಿ ನಾವೇ ಅವನಾಗಬೇಕು…” ಹೌದಲ್ಲವೇ?

ಗಿರಿಜಾ ಮೇಡಂ….”ಸಾವಿತ್ರಿ” ಕಾದಂಬರಿಯನ್ನು ಕಳಿಸಿಕೊಟ್ಟು ಡಾ. ಶ್ರೀಪಾದ ಭಟ್ ರ “ಆನಂದಭಾವಿನಿ” ಯ ರಂಗರೂಪದ ಮೂಲಕ ನನ್ನನ್ನು ಆನಂದಭಾವಿನಿಯನ್ನಾಗಿಸಿದ್ದೀರಿ. ತುಂಬಾ ಧನ್ಯವಾದಗಳು…ಮತ್ತೆ ಮೈಸೂರಿಗೆ ಬನ್ನಿ .


  • ಲಾವಣ್ಯ ಪ್ರಭಾ
ಸ್ಪರ್ಶ ಶಿಲೆ ಕವಯತ್ರಿ ಕೆ ಎಸ್ ಲಾವಣ್ಯ ಪ್ರಭಾ
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW