ಬೆವರ ಹನಿ ಬಿದ್ದಾಗ… – ಡಾ. ಕೆ. ಬಿ. ರಂಗಸ್ವಾಮಿ

ನಾವು ನಡೆಯುವಾಗ ಅಥವಾ ದೇಹಕ್ಕೆ ಶ್ರಮ ನೀಡಿದಾಗ ಏಕೆ ಬೆವರುತ್ತೇವೆ ಎಂಬುದು ಒಂದು ಕುತೂಹಲಕಾರಿ ಸಂಗತಿಯ ಜೊತೆಗೆ ಬೆವರಿಳಿಸಿದಷ್ಟೂ ದೇಹ ಆರೋಗ್ಯದಿಂದಿರುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ, ಬೆವರಿನ ಮಹತ್ವದ ಕುರಿತು ಇನ್ನಷ್ಟು ಮಾಹಿತಿಯನ್ನು ಡಾ. ಕೆ. ಬಿ. ರಂಗಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ತಪ್ಪದೆ ಮುಂದೆ ಓದಿ…

ಅದೊಂದು ಮುಂಜಾನೆ ಪಾರ್ಕ್ ನಲ್ಲಿ ವಾಕ್ ಮಾಡುತ್ತಿರುವಾಗ ಜೊತೆಗೂಡಿದ ಹಿರಿಯ ಸ್ನೇಹಿತರೊಬ್ಬರು ‘ಎಷ್ಟೊಂದು ಬೆವೆತುಬಿಟ್ಟಿದ್ದೀರಾ…?’ ಎಂದರು. ‘ಹೊಲಗದ್ದೆಗಳಲ್ಲಂತೂ ಬೆವೆಯಲಾಗುವುದಿಲ್ಲ. ಇಲ್ಲಾದರೂ ಬೆವೆಯೋಣ ಬಿಡಿ ‘ ಎಂದೆ ನಾನು ನಗುತ್ತಾ. ಹಾಗೆಯೇ ಮುಂದುವರಿದು ‘ರೈತನ ಬೆವರ ಹನಿಗೆ ಎಷ್ಟೊಂದು ಮಹತ್ವವಿದೆಯಲ್ಲವೆ?’ ಎಂದೆ. ‘ಅದರ ಕುರಿತು ಒಂದು ಹಾಡೇ ಇದೆಯಲ್ಲವೆ?’ ಎಂದರು ಅವರು. ‘ಬೆಳುವಲದ ಮಡಿಲಲ್ಲಿ… ಬೆವರ ಹನಿ ಬಿದ್ದಾಗ…’ ಎಂಬುದೊಂದು ಸುಪ್ರಸಿದ್ಧ ಹಳೆಯ ಚಲನಚಿತ್ರಗೀತೆ. ಹಿರಿಯ ನಟ ರಾಜೇಶ್ ಅಭಿನಯದ ಆ ಹಾಡಿನಲ್ಲಿ ಬೆವರ ಹನಿಯ ಮಹತ್ವವನ್ನು ಅಮೋಘವಾಗಿ ಚಿತ್ರೀಕರಿಸಲಾಗಿದೆ. ರೈತನೊಬ್ಬ ಬೆವರನ್ನು ಭೂಮಿಗೆ ಹನಿಸದಿದ್ದರೆ ನಾವ್ಯಾರೂ ನಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಂತ್ರಗಳ ಆವಿಷ್ಕಾರದಿಂದ ರೈತಾಪಿ ಜನರ ಶ್ರಮದಾಯಕ‌ ಕೆಲಸಗಳು ಎಷ್ಟೋ ಕಡಿಮೆಯಾಗಿದ್ದರೂ ಇಂದಿಗೂ ಹೊಲಗದ್ದೆಗಳಲ್ಲಿ ಬೆವರು ಬಸಿಯುವ ಸಾಕಷ್ಟು ರೈತರಿದ್ದಾರೆ. ಬಿಸಿಲಲ್ಲಿ ಬೇಯುವ ರೈತನ ದೇಹದಿಂದ ಅನೈಚ್ಛಿಕವಾಗಿ ಬೆವರು ಸುರಿದರೆ, ಅವನು ಬೆಳೆದ ಅನ್ನ ತಿನ್ನುವ ನಾವು ಮಾತ್ರ ಬೆವರು ಹನಿಯಲೆಂದೇ ಸಾಕಷ್ಟು ಕಸರತ್ತು ಮಾಡುತ್ತೇವೆ.


ಫೋಟೋ ಕೃಪೆ : google

ಬೆವರು ಹರಿಸುವುದು ದೇಹವನ್ನು ಸುಸ್ಥಿತಿಯಲ್ಲಿಡುವಂಥ ಒಂದು ನೈಸರ್ಗಿಕ ಪ್ರಕ್ರಿಯೆ. ಸ್ವೇದಗ್ರಂಥಿಗಳಿಂದ ಬೆವರೇ ಬರದಿದ್ದರೆ ಅದೊಂದು ಅನಾರೋಗ್ಯದ ಲಕ್ಷಣ. ಕೆಲವು ವ್ಯಕ್ತಿಗಳಲ್ಲಿ ಆನುವಂಶೀಯವಾಗಿ ಈ ಸಮಸ್ಯೆಯಿರುತ್ತದೆ ಮತ್ತು ಇಂಥ ವ್ಯಕ್ತಿಗಳ ಮೈ ಯಾವಾಗಲೂ ಕೆಂಡದಂತೆ ಸುಡುತ್ತಿರುತ್ತದೆ. ಇದಕ್ಕೆ ಅ್ಯನ್ ಹೈಡ್ರೋಸಿಸ್ (anhidrosis) ಎನ್ನಲಾಗುತ್ತದೆ. ಹಾಗೆಯೇ ಕೆಲವು ವ್ಯಕ್ತಿಗಳು ಸದಾ ಅತಿಯಾಗಿ ಬೆವರುತ್ತಿರುತ್ತಾರೆ ಮತ್ತು ಇಂಥ ವ್ಯಕ್ತಿಗಳ ಸ್ವೇದಗ್ರಂಥಿಗಳು ಅತಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದನ್ನು ಹೈಪರ್ ಹೈಡ್ರೋಸಿಸ್ (hyperhidrosis) ಎನ್ನಲಾಗುತ್ತದೆ. ನನ್ನ ಸ್ನೇಹಿತನೊಬ್ಬ ಇಂಥ ಸಮಸ್ಯೆಯಿಂದ ಬಳಲುತ್ತಿದ್ದ ಮತ್ತು ಎಷ್ಟೇ ಒರೆಸಿಕೊಂಡರೂ ಕ್ಷಣಮಾತ್ರದಲ್ಲಿ ಅವನ ಅಂಗೈ ಒದ್ದೆಯಾಗಿಬಿಡುತ್ತಿತ್ತು. ಶೇಕ್ ಹ್ಯಾಂಡ್ ಮಾಡಿಬಿಟ್ಟರಂತೂ ಅವನ ಅಂಗೈನ ಬೆವರ ಹನಿಗಳೆಲ್ಲವೂ ಸರಾಗವಾಗಿ ನಮ್ಮ ಅಂಗೈಗೆ ಟ್ರಾನ್ಸಫರ್ ಆಗಿಬಿಡುತ್ತಿದ್ದವು. ಇಂಥ ವ್ಯಕ್ತಿಗಳಲ್ಲಿ ಬೆವರಿನಿಂದ ಉಂಟಾಗುವ ವಾಸನೆಯೂ ಹೆಚ್ಚು. ಅಂಥ ವಾಸನೆ ಹೇಗಿರುತ್ತದೆಂದು ಖುದ್ದಾಗಿ ತಿಳಿಯಬೇಕೆಂದರೆ ಕಾಲುಚೀಲ ಬಿಚ್ಚುವ ಸಮಯದಲ್ಲಿ ಅವರ ಪಕ್ಕದಲ್ಲಿರಬೇಕು. ಅಬ್ಬಬ್ಬಾ… ಆ ವಾಸನೆಗೆ ಹೊಟ್ಟೆ ತೊಳೆಸಿದಂತಾಗುವುದಂತೂ ಗ್ಯಾರಂಟಿ. ಬೆವರಿನಿಂದ ಒದ್ದೆಯಾಗುವ ಕಂಕುಳು, ತೊಡೆಸಂದಿ ಮುಂತಾದ ದೇಹದ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ದಾಳಿಯಿಡತೊಡಗುತ್ತವೆ. ಹಾಗಾಗಿಯೇ ಇಂಥ ದುರ್ವಾಸನೆ ಬರುವುದು. ಹಾಗೆಯೇ ಸದಾ ಒದ್ದೆಯಿರುವ ಚರ್ಮದ ಮೇಲೆ ಶಿಲೀಂಧ್ರಗಳಂಥ ಪರಾವಲಂಬಿಗಳ ಸೋಂಕು ಸಹ ಉಂಟಾಗಬಹುದು. ಟೀನಿಯಾ ವರ್ಸಿಕಲರ್, ಟೀನಿಯಾ ಕಾರ್ಪೋರಿಸ್ ಎಂಬುವು ಇಂಥ ಸಮಸ್ಯೆಗಳಲ್ಲಿ ಕೆಲವು. ಹೆಚ್ಚು ಬೆವರುವ ಕೆಲವು ವ್ಯಕ್ತಿಗಳ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಸೆಕೆಗುಳ್ಳೆಗಳೂ ಸರ್ವೇಸಾಮಾನ್ಯ.
ಸಾಮಾನ್ಯವಾಗಿ ಚಳಿಗಾಲದಲ್ಲಿ ನಾವೆಲ್ಲರೂ ಕಡಿಮೆ ಬೆವರುತ್ತೇವೆ. ಹಾಗಾಗಿ ನಾವು ಸೇವಿಸುವ ದ್ರವಪದಾರ್ಥಗಳು ಮೂತ್ರದ ಮುಖಾಂತರ ಹೊರಹೋಗುತ್ತವೆ. ಆದರೆ ಬೇಸಿಗೆಯಲ್ಲಿ ಹೆಚ್ಚೆಚ್ಚು ಬೆವರುವುದರಿಂದ ಮೂತ್ರದ ಪ್ರಮಾಣವೂ ಕಡಿಮೆಯಾಗಿಬಿಡುತ್ತದೆ.

ಫೋಟೋ ಕೃಪೆ : google

ನಾವು ನಡೆಯುವಾಗ ಅಥವಾ ದೇಹಕ್ಕೆ ಶ್ರಮ ನೀಡಿದಾಗ ಏಕೆ ಬೆವರುತ್ತೇವೆ ಎಂಬುದು ಒಂದು ಕುತೂಹಲಕಾರಿ ಸಂಗತಿ. ನಮ್ಮ ದೇಹವನ್ನೊಂದು ಕುಲುಮೆಯಂತೆ ಪರಿಗಣಿಸಬಹುದು. ನಮ್ಮ‌ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗಿರುವ ಶಕ್ತಿಯೇ ಉರುವಲು. ದೇಹ ಈ ಉರುವಲನ್ನು ಹೆಚ್ಚು ಹೆಚ್ಚು ವ್ಯಯಿಸತೊಡಗಿದಂತೆಲ್ಲಾ ಸ್ವೇದಗ್ರಂಥಿಗಳಿಂದ ಬೆವರಿನ ರೂಪದಲ್ಲಿ ನೀರು ಹೊರಹೊಮ್ಮತೊಡಗುತ್ತದೆ. ಹಾಗೆಯೇ ಇನ್ನೊಂದು ವಿಷಯ. ನಾವು ಮೂತ್ರ, ಕಣ್ಣೀರು ಮುಂತಾದ ಶರೀರದ ದ್ರವಗಳನ್ನು ಐಚ್ಛಿಕವಾಗಿ ತಡೆಹಿಡಿಯಬಲ್ಲೆವಾದರೂ ಬೆವರು ಸ್ರವಿಕೆಯನ್ನು ಮಾತ್ರ ತಡೆಹಿಡಿಯಲಾರೆವು. ಶರೀರದ ಅಂಗರಚನೆ, ಅಂಗಕ್ರಿಯೆಗಳೆಲ್ಲವೂ ವಿಸ್ಮಯಕಾರಿ ಸಂಗತಿಗಳು. ನಡಿಗೆಯ ಗತಿ ಹಾಗೂ ಕ್ರಮಿಸುವ ದೂರ ಹಣೆಯ ಮೇಲೆ ಬೆವರ ಹನಿ ಮೂಡಿಸುವಂತಿದ್ದರೆ ಮಾತ್ರ ಅದರಿಂದ ದೇಹಕ್ಕೊಂದಿಷ್ಟು ಪ್ರಯೋಜನ ಎನ್ನುತ್ತಾರೆ ತಜ್ಞರು.

ಒಬ್ಬ ವ್ಯಕ್ತಿ ಆತಂಕಗೊಂಡಾಗ ಬೇಡ ಬೇಡವೆಂದರೂ ಬೆವರತೊಡಗುತ್ತಾನೆ. ವಧು ಪರೀಕ್ಷೆಗೆಂದು ಬರುವ ಯುವಕನ ಎದುರು ತಲೆತಗ್ಗಿಸಿ ನೆಲಕೆರೆಯುತ್ತಾ ನಿಂತ ಯುವತಿಯ ಹಣೆಯ ಮೇಲೆ ಮೂಡುವ ಬೆವರ ಹನಿಗಳೇ ಇದಕ್ಕೆ ತಾಜಾ ಉದಾಹರಣೆ. ಇದು ಅಂದಕಾಲತ್ತಿಲೆ. ಈಗ ಬಿಡಿ ‘ಸ್ವಂತ ಮನೆಯಿದೆಯೇ?’ ‘ಅತ್ತೆ ಮಾವ ಜೊತೆಯಲ್ಲಿರುವರಾ?’ ‘ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ?’…. ಮುಂತಾದ ಪ್ರಶ್ನೆಗಳನ್ನು ಮಿಸೈಲ್ ಗಳಂತೆ ತೂರಿ ಬಿಡುವ ಯುವತಿಯರೇ ಭಾವೀ ವರಮಹಾಶಯನಿಗೆ ಬೆವರಿಳಿಯುವಂತೆ ಮಾಡಿಬಿಡುತ್ತಾರೆ.

ರನ್ನನ ಗದಾಯುದ್ಧದಲ್ಲಿ ಬರುವ ‘ನೀರೊಳಗಿರ್ದುಂ ಬೆಮರ್ದನುರಗಪತಾಕಂ’ ಎಂಬ ಮಹಾಭಾರತದ ಪ್ರಸಂಗದ ವರ್ಣನೆಯಂತೂ ಅತ್ಯದ್ಭುತ. ತನ್ನೆಲ್ಲಾ ಬಂಧುಬಾಂಧವರನ್ನು ಕಳೆದುಕೊಂಡು ಅತ್ಯಂತ ದುರ್ಬಲನಾಗಿ ವೈಶಂಪಾಯನ ಸರೋವರದಲ್ಲಿ ಅಡಗಿಕುಳಿತ ದುರ್ಯೋಧನ, ಭೀಮನ ಆರ್ಭಟ, ಗರ್ಜನೆ ಮತ್ತು ಆಕ್ರೋಶಗಳಿಗಂಜಿ ನೀರೊಳಗಿದ್ದರೂ ಜಲಜಲ ಬೆವೆತುಬಿಟ್ಟಿದ್ದನಂತೆ. ಎಂತಹ ರಮ್ಯ ಕಲ್ಪನೆ ಅಲ್ಲವೆ ಆ ಕವಿಯದ್ದು?.

ಇನ್ನು ಎಳೆಯ ಮಕ್ಕಳು ಬೆವರುವುದರ ಬಗ್ಗೆ ಒಂದಿಷ್ಟು ಗಮನಹರಿಸೋಣ. ಸಾಮಾನ್ಯವಾಗಿ ನವಜಾತ ಶಿಶುಗಳು ಬೆವರುವುದಿಲ್ಲ. ಸ್ವೇದ ಗ್ರಂಥಿಗಳು ವಿಕಸಿತಗೊಂಡಂತೆಲ್ಲಾ ಶಿಶುಗಳು ಬೆವರತೊಡಗುತ್ತವೆ. ಹೆಚ್ಚು ಬೆವರುವ ಕೆಲ ಶಿಶುಗಳಲ್ಲಿ ‘ರಿಕೆಟ್ಸ್’ ಎಂಬ ‘ಡಿ’ ಜೀವಸತ್ವದ ಕೊರತೆಯ ಸಮಸ್ಯೆಯಿರಬಹುದು.ಇದಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿರುತ್ತದೆ. ಹಾಗೆಯೇ ಹೃದಯದ ಕಾರ್ಯಕ್ಷಮತೆ ಕ್ಷೀಣಿಸಿದಾಗಲೂ ಕೆಲವು ಶಿಶುಗಳು ಬೆವರುವುದುಂಟು ಮತ್ತು ಇದು ಮಗು ಎದೆಹಾಲು ಕುಡಿಯುವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದ್ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ಕೆಲವು ಶಿಶುಗಳು ಬೆವರುತ್ತಿರುತ್ತವೆ. ಅದೂ ಹಣೆಯ ಸುತ್ತಲೇ ಹೆಚ್ಚು. ಇದು ಮೊದಲ ಒಂದೆರಡು ವರ್ಷಗಳಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿರುವ ಮಿದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುತ್ತಿರುವುದರ ಸಂಕೇತ ಎಂಬುದು ಕೆಲವು ತಜ್ಞರ ಅಭಿಮತ.

ಫೋಟೋ ಕೃಪೆ : google

ಸೆಕೆಯಿದ್ದಾಗ ರಾತ್ರಿ ವೇಳೆ ಬೆವರುವುದು ಸಹಜವಾದರೂ ಥಂಡಿಕಾಲದಲ್ಲಿ ಯಾರೇ ಆಗಲಿ ರಾತ್ರಿ ವೇಳೆ ಬೆವರಿದರೆ ಅದು ಕ್ಷಯ, ಎಚ್ ಐ ವಿ ಮುಂತಾದ ಗಂಭೀರ ಸ್ವರೂಪದ ಕಾಯಿಲೆಗಳ ಲಕ್ಷಣವಿರಬಹುದು ಎನ್ನುತ್ತದೆ ವಿಜ್ಞಾನ. ಹಾಗೆಯೇ ಕೆಲವು ವ್ಯಕ್ತಿಗಳು ಇದ್ದಕ್ಕಿದ್ದಂತೆಯೇ ಮಂಕುಕವಿದವರಂತಾಗಿ ಬೆವರತೊಡಗುತ್ತಾರೆ. ನಿಂತಿದ್ದವರು ಕುಸಿಯತೊಡಗುತ್ತಾರೆ. ಇಂಥ ಸನ್ನಿವೇಶಗಳು ವಿದ್ಯಾರ್ಥಿಗಳನ್ನು ನಿಲ್ಲಿಸಿಕೊಂಡು ಪಾಠ ಹೇಳಿಕೊಡುತ್ತಿರುವಾಗ ಸರ್ವೇಸಾಮಾನ್ಯ ಮತ್ತು ಅದರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ. ತಿಂಡಿ ತಿಂದು ಹೋಗು ಎಂದು ಹೆತ್ತಮ್ಮ ಎಷ್ಟೇ ಒತ್ತಾಯಿಸಿದರೂ ಕೇರ್ ಮಾಡದೆ ಆ ಹುಡುಗಿಯರು ಖಾಲಿ ಹೊಟ್ಟೆಯಲ್ಲೇ ಶಾಲಾಕಾಲೇಜುಗಳಿಗೆ ಹೋಗುವುದು ಸಾಮಾನ್ಯ. ಬೆಳಗಿನ ಉಪಾಹಾರ ತ್ಯಜಿಸಿದರೆ ತೂಕ ಕಡಿಮೆಯಾಗುವುದೆಂಬ ಯಾರದ್ದೋ ಪೊಳ್ಳು ಮಾತನ್ನು ನಂಬಿ ಬೆಳಗಿನ ಉಪಾಹಾರ ಬಿಡುವವರೂ ಇದ್ದಾರೆ. ಇಂತಹವರ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣದಲ್ಲಿ ಗಣನೀಯ ಇಳಿಕೆಯುಂಟಾಗಿಬಿಡುತ್ತದೆ. ಇಂಥ ಪರಿಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಹೈಪೋಗ್ಲೈಸೀಮಿಯಾ’ ಎನ್ನಲಾಗುತ್ತದೆ. ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಮಧುಮೇಹಿಗಳಲ್ಲೂ ಇದೊಂದು ಸರ್ವೇಸಾಮಾನ್ಯ ಸಮಸ್ಯೆ. ಹಾಗಾಗಿಯೇ ಗ್ಲೂಕೋಸ್ ನ್ನೋ ಸಕ್ಕರೆಯನ್ನೋ ಸದಾ ಜೊತೆಯಲ್ಲಿಟ್ಟುಕೊಂಡಿರುವಂತೆ ಅವರಿಗೆ ಸಲಹೆ ನೀಡಲಾಗಿರುತ್ತದೆ. ಹಾಗೆಯೇ ಹೃದಯಾಘಾತವಾದಾಗಲೂ ಒಬ್ಬ ವ್ಯಕ್ತಿ ಹೆಚ್ಚು ಬೆವರತೊಡಗುತ್ತಾನೆ. ಯಾವುದೇ ವ್ಯಕ್ತಿ ಜಠರ ಭಾಗದಲ್ಲೋ ಎದೆಯ ಮಧ್ಯ ಭಾಗದಲ್ಲೋ ಇದ್ದಕ್ಜಿದ್ದಂತೆ ನೋವೆಂದು ಹೇಳುತ್ತಾ ಜಲಜಲ ಬೆವರತೊಡಗಿದನೆಂದರೆ ಅದನ್ನು ಹೃದಯಾಘಾತದ ಲಕ್ಷಣವೆಂದು ಪರಿಗಣಿಸಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಬೇಕೆಂಬುದು ಪರಿಣಿತರ ಅನುಭವದ ಮಾತು.

ನಾಚಿ ಮುದ್ದೆಯಾದ ಹೆಣ್ಣಿನ ಹಣೆಯ ಮೇಲೆ ಮೂಡುವ ಬೆವರ ಹನಿಗಳು ಚಳಿಗಾಲದ ಮುಂಜಾನೆಯಲ್ಲಿ ಹೂ ಎಸಳಿನ ಮೇಲೆ ಬಿದ್ದ ಮಂಜಿನ ಹನಿಗಳಂತೆ ಫಳಫಳ ಹೊಳೆಯುತ್ತಿರುತ್ತವೆ. ಪಾರ್ವತಿಯ ಮೈಮೇಲೆ ಉದ್ಭವಿಸಿದ ಬೆವರಿನ ಮಣ್ಣಿನಿಂದ ರೂಪುಗೊಂಡು ಜೀವ ಪಡೆದಿದ್ದ ಬಾಲಕನೇ ಪರಮೇಶ್ವರನ ಉಗ್ರ ಕೋಪಕ್ಕೆ ಬಲಿಯಾಗಿ ಗಜಾನನನಾಗಿ ರೂಪು ತಳೆದ ಪುರಾಣದ ಕಥೆ ಎಲ್ಲರಿಗೂ ತಿಳಿದಿರುವಂಥದ್ದೇ.

ಕೆಲ ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಸಂಗತಿಯೊಂದು ಕುತೂಹಲಕಾರಿಯೂ ಆತಂಕ ಮೂಡಿಸುವಂಥದ್ದೂ ಆಗಿದ್ದಿತು. ಹರಿಯಾಣದ ಶಾಲೆಯೊಂದರಲ್ಲಿ ಮಕ್ಕಳು ಕಪ್ಪೆಯೊಂದಿಗೆ ಆಟವಾಡುತ್ತಿದ್ದುದನ್ನು ಆಕ್ಷೇಪಿಸಿದ ಶಿಕ್ಷಕರಿಗೆ ಮಕ್ಕಳೆಲ್ಲಾ ಸೇರಿಕೊಂಡು ಚೆನ್ನಾಗಿ ಥಳಿಸಿ ಬಿಟ್ಟಿದ್ದರಂತೆ. ದೂರು ಆಧರಿಸಿ ಬಂದ ಪೊಲೀಸರು ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ತಿಳಿದುಬಂದುದೇನೆಂದರೆ, ಕಪ್ಪೆಗಳನ್ನು ನಿತ್ರಾಣಗೊಳಿಸಿದ ಮಕ್ಕಳು ಅವುಗಳಿಂದ ಹೊರಹೊಮ್ಮಿದ ಬೆವರನ್ನು ನೆಕ್ಕುವ ಅಭ್ಯಾಸ ರೂಡಿಸಿಕೊಂಡಿದ್ದರಂತೆ. ಅದಷ್ಟೇ ಆಗಿದ್ದರೆ ಹೋಗಲಿಬಿಡು ಎಂದು ಸುಮ್ಮನಿದ್ದು ಬಿಡಬಹುದಿತ್ತು. ಆದರೆ ಆ ಬೆವರಿನಿಂದ ಮಕ್ಕಳು ಅಮಲೇರಿಸಿಕೊಳ್ಳುತ್ತಿದ್ದರು ಎಂಬುದೇ ಅಚ್ಚರಿ ಮತ್ತು ಆಘಾತ ಮೂಡಿಸುವ ಸಂಗತಿ. ಇಂಥವುಗಳನ್ನೆಲ್ಲಾ ಅದ್ಹೇಗೆ ಕಲಿತಿದ್ದವೋ ಆ ಪುಟ್ಟ ಮಕ್ಕಳು.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಯಾರಿಗಾದರೂ ಚೆನ್ನಾಗಿ ಜೋರು ಮಾಡಿದಾಗ ‘ಅವನಿಗೆ ಹೇಗೆ ಬೆವರಿಳಿಸಿಬಿಟ್ಟೆ ನೋಡು’ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಇತರರ ಬಳಿ ಹೇಳಿಕೊಳ್ಳುತ್ತಿರುವುದನ್ನು ಕೇಳುತ್ತಿರುತ್ತೇವೆ.

ಬೆವರಿಳಿಸಿದಷ್ಟೂ ದೇಹ ಆರೋಗ್ಯದಿಂದಿರುತ್ತದೆಂಬುದು ಸಂಶೋಧನೆಗಳಿಂದ ಸಾಬೀತಾದ ಸಂಗತಿ. ಹಾಗಾಗಿ ದಿನಕ್ಕೊಂದಿಷ್ಟಾದರೂ ಬೆವರಿಳಿಸಲು ನೀವೂ ಸಂಕಲ್ಪ ತೊಡುತ್ತೀರಲ್ಲವೆ?


  • ಡಾ. ಕೆ. ಬಿ. ರಂಗಸ್ವಾಮಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW