ವಸಂತ ಗಣೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹಳೆಯ ನೆನಪಿಹುದಿಲ್ಲಿ
ಹೊಸತೇನೂ ಘಟಿಸಿಲ್ಲ,
ನೀನಿರದ ಬಾಳ ಪುಟ ಖಾಲಿ ಖಾಲಿ
ಐದು ದಶಕದ ಹಿಂದೆ ಪಡಿಯಕ್ಕಿಯೊಡನೆ
ಅಡಿಯಿಟ್ಟ ದಿನವಿನ್ನು ನನ್ನಲ್ಲಿ ಹಚ್ಚಹಸಿರು
ಮತ್ತೆರಡು ದಶಕಗಳು ಮತ್ತಿನಲಿ ಕಳೆದಿತ್ತು
ನಿನ್ನೊಲವ ಸಾಂಗತ್ಯದಲತಿ ಮಧುರವಾಗಿ
ಎನಿತು ಆತುರ ನಿನಗೆ ಅರ್ಧ ಪಯಣಕೆ
ಎದ್ದು ಹೊರಟಿದ್ದೆ ನೀನು ನನ್ನೊಂಟಿ ಮಾಡಿ
ನೀನಿರದ ನನ್ನಿರುವಿಗೇನಿಹುದು ಹಿರಿದರ್ಥ
ಮರಳುಗಾಡಿನ ಮಧ್ಯೆ ಒಂಟಿ ಬರಡುಬಾಳು
ಚಪ್ಪರದ ಕಾಲಿನ ಮಂಚ ತಾರದು ನಿದಿರೆ
ನಿನ್ನ ಇನಿ ದನಿಯ ಜೋಗುಳದ ಹಾಡಿಲ್ಲದೇ
ಆರಾಮ ಕುರ್ಚಿಯೂ ದಣಿವನೀಗಿಸದಿಂದು
ತಲೆಬಾಗಿಲಲೆ ನೀನೀಡುವ ಬೆಲ್ಲ ನೀರಿಲ್ಲದೆ
ನಿನ್ನ ಬೆರಳಿನ ಸ್ಪರ್ಶವಿಲ್ಲದ ವೀಳ್ಯದಲಿ ರುಚಿಯಿಲ್ಲ, ಕಂಪು ಬೀರದು ಅಡಿಕೆಹೋಳು
ತಾಂಬೂಲ ರುಚಿಯಿಲ್ಲ, ಸುಣ್ಣ ಸುಡುತಿದೆ ಎನ್ನ ಮನದಲಿ ಉರಿಯುತಿಹ ಅಗ್ನಿಯಂತೆ.
ಬಲಿತು ಹಕ್ಕಿಯ ರೆಕ್ಕೆ ಹಾರಿವೆ ಬಹುದೂರ
ಹಾರಲಾರೆನು ನಾನು, ಒಂಟಿ ರೆಕ್ಕೆಯ ಹಕ್ಕಿ
ನಿನ್ನ ನೆನಪಲೇ ನಾ ಉಸಿರಾಡುತಿಹೆನಿಂದು
ನಿರ್ಜೀವ ಮೇಜು ಕುರ್ಚಿಗಳ ಜೊತೆಗೆ.
ಅರೆಕ್ಷಣ ಮರೆಯಲಾಗದು ನಿನ್ನ, ಭೌತಿಕ ಕಾಯ ಅಳಿದು ಕಳೆದರು ದಶಕ ಮೂರು
ನೀ ಎನ್ನ ಮನದಾಳದಲಿ ಉಳಿಸಿ ಹೋಗಿಹ ಸಿಹಿನೆನಪುಗಳ ಸರಮಾಲೆ ಸಾವಿರಾರು.
- ವಸಂತ ಗಣೇಶ್