ನಮ್ಮ ಮನೆಯಲ್ಲಿ ಸುಬ್ಬಿ ಅಂತಾ ಒಂದು ಆಡು ಇತ್ತು. ಆ ಆಡು ಅಂತಿಂತ ಆಡಲ್ಲ. ಬೆಳಿಗ್ಗೆ ಬರೋಬ್ಬರಿ ಒಂದು ಚರಿಗೆ ಹಾಲು ಹಿಂಡುತ್ತಿತ್ತು. ಆದರೆ ಅದರ ಹಾಲನ್ನು ಹಿಂಡಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾಕೆ ಅಂತ ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣವನ್ನು ತಪ್ಪದೆ ಓದಿ…
ಹಾಲು ಕೊಟ್ಟವರ ನೆನಪಿನ ಲೋಕ
ಸರ್ವಜ್ಞ ದೇಶ ಸಂಚಾರಿಯಾಗಿ ಅಡ್ಡಾಡುತ್ತಿದ್ದ.
ಭಿಕ್ಷಾನ್ನ ಉಂಡದ್ದರಿಂದಲೇ ಆತ ಬೆರಿಕಿತನ ಕಲ್ತುಕೊಂಡು ಚತುರ ನುಡಿ ಆಡುತಿದ್ದನೆಂದು ಹೇಳಬಹುದು.
ಕಣಕದ ಕಡುಬಾಗಿ ಮಣಕೆಮ್ಮೆ ಹಾಲಾಗಿ
ಕುಣಿಕುಣಿದು ಕಡೆವ ಸತಿಯಾಗಿ ಬೆಳವಲ
ಅಣಕ ನೋಡೆಂದ ಸರ್ವಜ್ಞ.
ಈ ವಚನವನ್ನು ಓದಿದ ಮೇಲೆ ನನಗೂ ಅಂತಹ ಹಾಲು ಉಣ್ಣಬೇಕೆಂಬ ಆಸೆ ಚಿಗುರುತ್ತಿದೆ. ಆದರೆ ಅಂಥ ಹಾಲು ಯಾರ ತಂದು ಕೊಡುತ್ತಾರೆ ಹೇಳ್ರಿ? ಬಹಳ ಕಷ್ಟ. ಎಷ್ಟು ರೊಕ್ಕಾ ಕೊಟ್ರೂ ನಿಮಗೆ ಚಲೋ ಹಾಲು ತಂದು ಕುಡ್ಸವ್ರು ಸಿಗೋದಿಲ್ಲ. ನಮಗೆ ಹಾಲು ಕುಡಿಸಿದವರೆಂದರೆ ಮೊಟ್ಟ ಮೊದಲು ತಾಯಿಯೇ ಹಾಲು ಕುಡಿಸಿರುತ್ತಾಳೆ ಅಲ್ಲವೆ. ಆಮೇಲೆ ನಮ್ಮ ಮನೆಯ ಕರಿಯೆಮ್ಮೆ ಕುಡಿಸಿದ್ದು ಎಂದರೆ ತಪ್ಪಾಗಲಾರದು. ನಮ್ಮ ಮನೆಯಲ್ಲಿ ಸುಬ್ಬಿ ಅಂತಾ ಒಂದು ಆಡು ಇತ್ತು ಆ ಆಡು ಅಂತಿಂತ ಆಡಲ್ಲ. ಬೆಳಿಗ್ಗೆ ಬರೋಬ್ಬರಿ ಒಂದು ಚರಿಗೆ ಹಾಲು ಹಿಂಡುತ್ತಿತ್ತು. ಆದರೆ ಅದರ ಹಾಲನ್ನು ಹಿಂಡಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದು ಕಟ್ಟು ಮಸ್ತಾದ ಆಳೆತ್ತರದ ಆಡಾಗಿದ್ದುದರಿಂದ ಒಬ್ಬರೇ ಅದನ್ನು ಹಿಡಿದುಕೊಂಡು ಹಿಂಡಲಿಕ್ಕೆ ಸಾಧ್ಯವಿರಲಿಲ್ಲ. ಒಬ್ಬರು ಅದನ್ನು ಅಮುಕಿ ಹಿಡಿದು ಮತ್ತೊಬ್ಬರು ಹಿಂಡಿಕೊಳ್ಳಬೇಕಾಗುತ್ತಿತ್ತು. ನಮ್ಮ ಮನೆಯಲ್ಲಿ ಏಳೆಂಟು ಎಮ್ಮೆಗಳಿದ್ದರೂ ನಮಗೆ ಹಾಲು ಸಿಕ್ಕುತ್ತಿದ್ದುದು ಅಷ್ಟಕ್ಕಷ್ಟೇ. ದೊಡ್ಡ ಗಡಿಗೆಯ ತುಂಬಾ ಹಾಲು ಹಿಂಡಿಕೊಂಡು ಘಮ ಘಮ ಎನ್ನುವಂತೆ ಬೆರಣಿ ಹಾಕಿ ಕಾಸಿ ಹೆಪ್ಪು ಹಾಕಿ ಬೆಳಿಗ್ಗೆ ಕಡೆದರೆ ಪ್ರತಿ ಸಲಕ್ಕೆ ಒಂದು ಕಿಲೋದಷ್ಟು ಬೆಣ್ಣೆ ಬರುತ್ತಿತ್ತು. ನಮ್ಮ ಪಾಲಿಗೆ ಮಜ್ಜಿಗೆಯೇ ಸೈ. ಆದರೂ ಒಮ್ಮೊಮ್ಮೆ ಆ ಹಾಲಿನ ಉಸ್ತುವಾರಿ ನೋಡಿಕೊಳ್ಳುವ ಯಜಮಾನಿ ಮನೆಯಲ್ಲಿಲ್ಲದ ಸಮಯ ನೋಡಿ ನಾವು ಕಳ್ಳ ಬೆಕ್ಕುಗಳಾಗಿ ಮಟ ಮಟ ಮಧ್ಯಾಹ್ನ ಹಾಲು ಕಳವು ಮಾಡಿ ಸವಿದು ಬಿಡುತ್ತಿದ್ದೆವು. ಹಾಲನ್ನು ಯಾರೋ ಕದ್ದಿದ್ದಾರೆಂದು ಆಮೇಲೆ ಆಕೆ ಗಲಾಟೆ ಮಾಡಿದರೆ ನಾವು ಗಪ್ ಚಿಪ್ ಅಲ್ಲಿಂದ ಓಡಿ ಹೋಗುತ್ತಿದ್ದೆವು. ಗಟ್ಟಿಯಾದ ಆ ಹಾಲು ನವಣಿ ಅಕ್ಕಿಯ ಅನ್ನದಲ್ಲಿಯೋ, ಇಲ್ಲವೆ ಬಿಳಿಜೋಳದಿಂದ ಮಾಡಿದ ಸಂಗಟಿಯಲ್ಲಿಯೋ ಹಾಕಿಕೊಂಡು ಉಂಡರೆ ಅದ್ಭುತವಾಗಿರುತ್ತಿತ್ತು. ಆ ರುಚಿ ನೆನಪಾದರೆ ಈಗಲೂ ನನಗೆ ಬಾಯಿಯಲ್ಲಿ ನೀರೊಸರುತ್ತದೆ. ಮತ್ತೆ ದುಗ್ಗನ ಅಕ್ಕಿ ಎನ್ನುವ ನೆಲ್ಲಕ್ಕಿ ಬರುತ್ತಿತ್ತು. ಅದು ನಮ್ಮ ಸ್ಥಳೀಯ ತಳಿ. ಆ ಅಕ್ಕಿಯ ಅನ್ನದಲ್ಲಿ ಹಾಲು ಹಾಕಿಕೊಂಡು ಉಂಡರೆ ನಾವು ಒಂದಿ0ಚು ಎತ್ತರ ಬೆಳೆದು ಬಿಡುತ್ತಿದ್ದೇವೆ ಎಂಬ ಅನಿಸಿಕೆ ಮೂಡುತ್ತಿತ್ತು. ಅಂಥ ಹಾಲನ್ನು ಉಂಡ ಮೇಲೆ ಕೈ ಮೂಸಿ ನೋಡಿಕೊಂಡರೆ ಘಮ ಘಮ ಎನ್ನುತ್ತಿತ್ತು. ಇದು ನಾವು ಮಕ್ಕಳಿದ್ದಾಗಿನ ಕಥೆ.
ಫೋಟೋ ಕೃಪೆ : google
ನಾವು ದೊಡ್ಡವರಾಗಿ ಓದಲಿಕ್ಕೆ ಹೋದ ಮೇಲೆ ಯಾವಾಗಲೋ ಒಮ್ಮೆ ಮನೆಗೆ ಬಂದು ಊಟಕ್ಕೆ ಕುಳಿತರೆ “ಪಾಪ ಆತಗ ಹಾಲು ಎಲ್ಲಿ ಬರಬೇಕು. ಅನ್ನದಾಗ ಒಂದು ನಾಕು ಕಾಳು ಹಾಲು ಹಾಕಿ ಬುಡು” ಎಂದು ಮನೆಯ ಯಜಮಾನ ಅಪ್ಪಣೆ ಮಾಡಿದರೆ ಯಜಮಾನಿ ಬೇಸರಿಕೆಯಿಂದ ನಾಲ್ಕು ಚಮಚದಷ್ಟು ಹಾಲು ಹುಯ್ದು “ಕಲಸಿಗ್ಯಾ ಆಮ್ಯಾಲೆ ಮಜ್ಜಿಗಿ ಹಾಕ್ತೀನಿ” ಎಂದು ಹಾಲಿನ ಗಡಿಗೆಯನ್ನು ಒಯ್ದು ಒಲೆಯ ಮೇಲಿಡುತ್ತಿದ್ದಳು. ಅದಕ್ಕೆ ನನಗೆ ಆ ಅನುಕಂಪದ ಹಾಲು ಬೇಡವಾಗಿರುತ್ತಿತ್ತು. ಅದು ಅಲ್ಲದೆ ಅಲ್ಲಿ ಕುಳಿತ ಏಳೆಂಟು ಜನರಲ್ಲಿ ನನಗೊಬ್ಬನಿಗೆ ಹಾಲಿನ ಸಮಾರಾಧನೆಯಾದಾಗ ಆ ಅವರೆಲ್ಲರೂ ನನ್ನ ಗಂಗಾಳದತ್ತಲೇ ನೋಡುತ್ತಿರುವಾಗ ಆ ಹಾಲು ನನಗೆ ರುಚಿಯೆನಿಸುತ್ತಿರಲಿಲ್ಲ. ಈ ಕಾರಣಕ್ಕೆ ಹಾಲಿನ ಬಗ್ಗೆ ನನಗೆ ಒಂದು ರೀತಿಯ ತಾತ್ಸಾರವೇ ಮನೆ ಮಾಡಿಕೊಂಡಿತ್ತು ಎಂದರೂ ಅಡ್ಡಿಯಿಲ್ಲ. ನಾಲ್ಕನೆ ವರ್ಗದಿಂದ ಎಂ.ಎ ಮುಗಿಯುವ ವರೆಗೆ ಊರೂರು ಅಡ್ಡಾಡಿ ನೌಕರಿ ಹಿಡಿದು, ಒಂದು ಹೆಂಡತಿ ಮಾಡಿಕೊಂಡು ಹಾವೇರಿಗೆ ಬಂದಾಗ, ಮತ್ತೆ ಹಾಲಿನ ಸಮಸ್ಯೆ ಉಂಟಾಯಿತು.
ನನ್ನ ಹೆಂಡತಿ ದೊಡ್ಡ ಗೌಡನ ಮಗಳು ಅಲ್ಲಿ ಬೇಕಾದಷ್ಟು ಹಯನು ಇತ್ತು. ಹಾಲು ಮೊಸರು ಯಥೇಚ್ಛವಾಗಿ ಉಂಡು ಕೈ ತೊಳೆದುಕೊಂಡಾಕಿ, ಇಲ್ಲಿ ಬಂದು ಎಂಟಾಣೆಗೆ ಲೀಟರು ನೀರು ಹಾಲನ್ನು ಕೊಂಡು ಕೊಂಡರೆ “ ಅಯ್ಯ ಇದೇನ್ರಿ ಚಾಕ ಎಷ್ಟು ಹಾಲು ಹಾಕಿದೂ ಬೇಳಗಾಗದಲ್ಲ” ಎಂದು ತಕರಾರು ತೆಗೆಯುತ್ತಿದ್ದಳು. ನನಗೆ ಸಮಜಾಯಿಷಿ ಕೊಡುವುದು ಸುಲಭವಾಗುತ್ತಿರಲಿಲ್ಲ. “ ಮಲೆನಾಡಲ್ಲ! ತಂಪು ಪ್ರದೇಶ, ಅದಕ್ಕೆ ಇಲ್ಲಿ ಚಹ ಕರ‍್ರಗಾಗತ್ತ” ಎಂದು ಒಂದು ಹರಿಶ್ಚಂದ್ರನ ಸುಳ್ಳು ಹೇಳುತ್ತಿದ್ದೆ. ನಾವು ನೌಕರಿಗೆ ಸೇರಿದಾಗ ಕಾಲೇಜಿನಲ್ಲಿ ಲೆಕ್ಚರರ ಆದವರಿಗೆ ಒಂದಿಷ್ಟು ಕಿಮ್ಮತ್ತು ಜ್ಯಾಸ್ತಿ ಇತ್ತು. ನಮ್ಮ ಮನೆಗೆ ಹಾಲು ಕೊಡುವವರು ಆಚೆ ಮನೆಗೆ ಹೋಗಿ ‘ಕಾಲೇಜಿನ ಲೆಚ್ಚರಿಗೆ ಹಾಲು ಕೊಡ್ತೀನಿ ನಾನು’ ಎಂದು ಜಂಬದಿ0ದ ಹೇಳಿಕೊಳ್ಳುತ್ತಿದ್ದರು. ಮತ್ತೆ ನಮಗೆ ಹಾಲು ಬೇಕೆಂದು ಗೌಳಿಗರಿಗೆ ಹೇಳಿದರೆ ಬಹಳ ಖುಷಿಯಿಂದ ಹಾಲು ತಂದು ಹಾಕುತ್ತಿದ್ದರು. ಅದಕ್ಕೆ ನಮಗೆ ಒಳ್ಳೆಯ ಹಾಲು ಕೊಡುವ ಯಾರನ್ನಾದರೂ ಪರಿಚಯಿಸಿರಿ ಎಂದು ಸ್ಥಳೀಯ ಗೆಳೆಯ ಮರ್ತುರ ಇರಪಾಕ್ಷಪ್ಪನಿಗೆ ಒಂದು ದಿವಸ ಹೇಳಿದೆ. “ ಅಯ್ಯೋ ನೀರು ಹಾಕಲಾರದ ಹಾಲು ನಿಮಗ ಎಲ್ಲಿಯೂ ಸಿಕ್ಕುವುದಿಲ್ಲ. ಅದಕ್ಕ ಅದರಾಗ ಒಂದಿಷ್ಟು ಕಮ್ಮಿ ನೀರು ಹಾಕಿದ ಹಾಲು ಕೊಡುವವರ ಹತ್ತಿರ ತಗಾಳ್ರಿ” ಎಂದರು.

ಅವರು ನನಗೆ ಒಳ್ಳೆಯ ಹಾಲಿನ ವ್ಯಕ್ತಿಯೊಬ್ಬರನ್ನು ಪರಿಚಯಿಸಿದರು. ಅವರು ಯಾರೆಂದರೆ ಗೌಳಿ ಮಹದೇವಪ್ಪ. ಆ ಗೌಳಿ ಮಹದೇವಪ್ಪನಾದರೂ ನಮಗೆ ಎಂಟಾಣೆಗೆ ಸೇರು ಹಾಲು ಕೊಡುತ್ತಿದ್ದರು. ಸೇರು ಎಂದರೆ ಈಗಿನ ಒಂದು ಲೀಟರಿಗಿಂತಲೂ ಸ್ವಲ್ಪ ಜ್ಯಾಸ್ತಿ ಇತ್ತು ಅಂತಾ ನನ್ನ ಅನಿಸಿಕೆ. ಮಹದೇವಪ್ಪನ ಹಾಲು ನಾವು ಮೊದಲು ತೆಗೆದುಕೊಳ್ಳುತ್ತಿದ್ದ ಹಾಲಿಗಿಂತಲೂ ಒಂದಿಷ್ಟು ಗಟ್ಟಿಯಾಗಿರುತ್ತಿದ್ದವು. ಅವರು ಹಾಲಿಗೆ ನೀರು ಹಾಕಿದರೂ ಗಟ್ಟಿಯಾದ ನೀರು ಹಾಕುತ್ತಿದ್ದರೆಂದು ಕಾಣುತ್ತದೆ, ಅದಕ್ಕೆ ನನ್ನ ಹೆಂಡತಿ ಅಡ್ಡಿಯಿಲ್ರಿ, ಈಗ ನಾವು ಮಲೆನಾಡು ಬಿಟ್ಟು ಬೈಲು ಸೀಮೆಗೆ ಬಂದಾಗ ಆತು ಎಂದು ಹೇಳಿ ನನ್ನ ಮಾತನ್ನೆ ನನಗೆ ತಿರುಗಿಸುವ ಮೂಲಕ ತನ್ನ ಜಾಣತನ ತರ‍್ಪಡಿಸುತ್ತಿದ್ದಳು. ಆ ಗೌಳಿ ಮಹದೇವಪ್ಪನೆಂದರೆ ಈಗಿನ ಹಾಲಿನವರಂತೆ ಕ್ಯಾನುಗಳನ್ನು ಸೈಕಲ್ಲಿಗೆ ತೂಗು ಹಾಕಿಕೊಂಡು ಬರುತ್ತಿರಲಿಲ್ಲ. ಒಂದು ದೊಡ್ಡ ತಾಮ್ರದ ಕೊಡದ ತುಂಬಾ ಹಾಲು ತುಂಬಿಕೊಂಡು ಅದನ್ನು ಸೈಕಲ್ಲಿನ ಕ್ಯಾರಿಯರ್ ಮೇಲಿಟ್ಟುಕೊಂಡು ಬರುತ್ತಿದ್ದರು. ಅದರಲ್ಲಿ ಹಾಲು ಅಳೆಯುವ ಮಾಪು ಹಾಕಿ ನಮ್ಮ ಡಬರಿಗೆ ಸುರಿಯುತ್ತಿದ್ದರು. ಅಷ್ಟು ಮಾತ್ರವಲ್ಲ, ಹಾಲು ಕೊಟ್ಟ ಮೇಲೆ “ಹ್ಯಾಂಗ ಅದಾವ್ರಿ ಅಕ್ಕಾವ್ರ ಹಾಲು” ಎಂದು ಬೈಲು ಸೀಮೆಯ ನನ್ನ ಹೆಂಡತಿಯನ್ನು ಕೇಳುತ್ತಿದ್ದರು. “ಹೆ ಹೇ ಭಾಳಾ ಚಲೋ ಇರ‍್ತಾವ ಬಿಡ್ರಿ. ನಿಮಗ ಖರೆ ಹೇಳಬೇಕಂದ್ರ ನಮ್ಮ ಮನಿಯ ಎಮ್ಮಿ ಹಾಲ ಇದ್ದಾಂಗ ಇರ‍್ತಾವ ನೋಡ್ರಿ“ ಎಂದು ಹೇಳುವ ಮೂಲಕ ಖರೆ ಹೇಳ್ತೀನಂತ ಒಂದು ದೊಡ್ಡ ಸುಳ್ಳು ಹೇಳಿ ಬಿಡುತ್ತಿದ್ದಳು. ಆ ಗೌಳಿ ಮಹದೇವಪ್ಪನೂ ನಮಗೆ ಸಾಕಷ್ಟು ಗೌರವ ಕೊಡುತ್ತಿದ್ದ. ಹಾಲು ಕೊಟ್ಟ ಮೇಲೆ ಹತ್ತು ನಿಮಿಷ ನಿಂತು ನಮ್ಮ ಜೊತೆಗೆ ಮಾತಾಡಿ ಸುಖ ದು:ಖ ವಿಚಾರಿಸಿ ಹೋಗುತ್ತಿದ್ದ. ಆತ ತುಂಬಾ ಕಷ್ಟ ಸಹಿಷ್ಣು ಎಂದು ತಾನೇ ಹೇಳಿಕೊಳ್ಳುತ್ತಿದ್ದ. ಬೆಳಿಗ್ಗೆ ಗೌರಾಪುರ, ಹೊಸಹಳ್ಳಿ, ಆಲದಕಟ್ಟಿ, ದೇವಿಹೊಸೂರುಗಳಿಗೆ ಹೋಗಿ ಹಾಲು ತುಂಬಿಸಿಕೊಂಡು ಬಂದು ಮತ್ತೆ ನಮ್ಮಗಳ ಮನೆ ಮನೆಗೆ ಅಡ್ಡಾಡಿ ಹಾಲು ಕೊಟ್ಟು ಹೋಗಬೇಕಾದರ ಮಧ್ಯಹ್ನ ಮೂರು ಗಂಟೆ ಆಗತ್ರಿ ಸರ್ ಎಂದು ಹೇಳುತ್ತಿದ್ದ ಯಾರು ಕಷ್ಟದಿಂದ ಕೆಲಸ ಮಾಡುತ್ತಾರೆ ಅವರ ಮನೆಗೆ ಕರೆಯದಿದ್ದರೂ ಬಂದು ಲಕ್ಷ್ಮಿನೆಲಸುತ್ತಾಳೆ ಎಂದು ಹೇಳುತ್ತಾರೆ. ಅದಕ್ಕೆ ಏನೋ ಈಗ ಆ ಗೌಳಿ ಮಹದೇವಪ್ಪ ಸಾಕಷ್ಟು ಶ್ರೀಮಂತರಾಗಿದ್ದಾರೆ0ದು ಕೇಳಿದ್ದೇನೆ. ಸಾಯಂಕಾಲ ಹೈಸ್ಕೂಲಿನ ಮೈದಾನದಲ್ಲಿ ಅಡ್ಡಾಡಲಿಕ್ಕೆ ಬರುತ್ತಾರೆ. ಶ್ರೀಮಂತ ಆಗಿರುವುದು ಹಾಲು ಕೊಂಡು ಮಾರಿ ಅಲ್ಲ ಎ.ಪಿ.ಎಂ.ಸಿ ಯಲ್ಲಿ ಅಂಗಡಿ ಮಾಡಿ ಬೇರೆ ಬೇರೆ ವಸ್ತುಗಳನ್ನು ಮಾರಿಸುವ ದಲಾಲರಾಗುವ ಮೂಲಕ ಸಿರಿವಂತರಾಗಿದ್ದಾರೆ. ಆ ಗೌಳಿ ಮಹದೇವಪ್ಪನವರನ್ನು ಈಗಲೂ ಮಾತಾಡಿಸಿದಾಗ “ನನ್ನ ನೆನಪೈತೇನ್ರಿ ಸರ್” ಎಂದು ಕೇಳುತ್ತಾರೆ. ಮಹದೇವಪ್ಪನವರು ಬಿಟ್ಟ ಮೇಲೆ ಮತ್ತೆ ಯಾರು ಯಾರದೋ ಹಾಲಿನ ರುಚಿ ನೋಡಿದ್ದೇವೆ.
ಆದರೆ ಹಳ್ಳಿಯಿಂದ ತಂದು ಕೊಡುತ್ತಿದ್ದ ಹಾಲು, ಸ್ಥಳೀಯವಾಗಿ ತೆಗೆದುಕೊಳ್ಳುತ್ತಿದ್ದ ಹಾಲು ಯಾವುದನ್ನು ಉಪಯೋಗಿಸಿದಾಗಲೂ ಮಹದೇವಪ್ಪನ ಹಾಲನ್ನು ನೆನಪಿಸಿಕೊಳ್ಳುವಂತಾಗಿತ್ತು. ಅಂದರೆ ಅಲ್ಲಿ ಹಾಲೆಂಬ ಹಾಲೇ ಇರುತ್ತಿರಲಿಲ್ಲ. ನಮ್ಮ ಮಕ್ಕಳು ಮೊಸರನ್ನು ಅಪೇಕ್ಷಿಸಿ ಕೊಂಡ ಹಾಲಿಗೆ ಹೆಪ್ಪು ಹಾಕಿದಾಗ ಆ ಮೊಸರನ್ನು ನೋಡಿ “ಅಯ್ಯ ಇದರಾಗ ಮೊಸರೂ ಇಲ್ಲ, ಹಾಲೂ ಇಲ್ಲ್ರ” ಎಂದು ಉದ್ಘಾರ ತೆಗೆಯುತ್ತಿದ್ದರು. ಯಾಕಂದರೆ ಹಾಲಿನ ಅಂಶ ಮೊಸರಾಗಿ ಕೆಳಗೆ ಕುಳಿತು ಮೇಲೆ ಮುಕ್ಕಾಲು ಭಾಗ ಬರಿ ನೀರು ನಿಂತಿರುತ್ತಿತ್ತು.
ಫೋಟೋ ಕೃಪೆ : google
ಮು0ದೆ ನಮ್ಮ ಮನೆಯ ಹತ್ತಿರವೇ ಎಮ್ಮೆ ಕಟ್ಟಿಕೊಂಡಿದ್ದ ಒಬ್ಬ ಗೃಹಣಿ ಗದ್ದಿಗೆವ್ವ ಬಂದು” ನಾವು ಚಲೋ ಹಾಲು ಕೊಡ್ತೀವಿ ನಮ್ಮ ಹಂತೇಲಿ ತಗೋಳ್ರಿ. ಹೆಚ್ಚಿಗೇನೂ ರೊಕ್ಕಾ ಕೊಡಬ್ಯಾಡ್ರಿ. ಈಗ ಅವರಿಗೆ ಎಷ್ಟು ಕೊಡ್ತೀರೋ ಅಷ್ಟ ಕೊಡ್ರಿ” ಎಂದು ನನ್ನ ಹೆಂಡತಿಗೆ ಹೇಳಿ ನಮ್ಮ ಮನೆಯ ಹಾಲಿನ ಕಂಟ್ರಾಕ್ಟ ಪಡೆದುಕೊಂಡಿದ್ದಳು. ಆ ಹೆಣ್ಣು ಮಗಳ ಮಗ ಗಣೇಶ ನಮಗೆ ಹಾಲು ತಂದು ಕೊಡುತ್ತಿದ್ದ. ಆ ಗಣೇಶ ತುಂಬಾ ಪ್ರಾಮಾಣಿಕ ಹುಡುಗನಾಗಿದ್ದ. ಯಾಕಂದರೆ ಒಂದು ದಿವಸ ಆ ಹೆಣ್ಣು ಮಗಳನ್ನು ಕರೆಯಿಸಿ, “ಹಾಲು ಬಹಳ ನೀರು ನರ‍್ತಾವು ನಿನಗೆ ಒಂದು ನಾಲ್ಕಾಣೆ ಹೆಚ್ಚಿಗೆ ಕೊಡ್ತೀನಿ, ಚಲೋ ಹಾಲು ಕೊಡ್ರಿ.” ಎಂದು ಹೇಳಿದೆ. ಆಗ ಆ ಹೆಣ್ಣುಮಗಳಿಗೆ ಖುಷಿಯಾಯಿತು, “ಹಾಂಗಾದರ ಒಂದು ಹನಿ ನೀರೂ ಹಾಕಲಾರದ ಹಾಂಗ ಗಟ್ಟಿ ಹಾಲ ತಂದು ಕೊಡ್ತೀನಿ ಬುಡ್ರಿ ಅಣ್ಣಾವ್ರ” ಎಂದು ಹೇಳಿದಳು. ಆಕೆಯ ಜೊತೆಗೆ ಬಂದಿದ್ದ ಆಕೆಯ ಮಗ ಗಣೇಶ, “ ಸರ! ಸುಮ್ನ ಹೆಚ್ಚಿಗೆ ರೊಕ್ಕಾ ಯಾಕ ಕೊಡ್ತೀರಿ. ನೀವು ಎಷ್ಟು ರೊಕ್ಕಾ ಹೆಚ್ಚಿಗೆ ಕೊಟ್ರೂ ನಮ್ಮ ಅವ್ವಾ ಹಾಲಿನೊಳಗ ನೀರು ಹಾಕೋದ ಬಿಡಾಂಗಿಲ್ಲ.” ಎಂದು ಖರೆ ಹರಿಶ್ಚಂದ್ರನ ಮಾತು ಹೇಳಿ ಆಕೆಯ ಕೈಯಿಂದ ಸಾಕಷ್ಟು ಹೊಡೆತ ತಿಂದು ಬಿಟ್ಟಿದ್ದ.
ಹಾವೇರಿಯಿಂದ ನಾವು ನಿಪ್ಪಾಣಿಗೆ ವರ್ಗಾವಣೆ ಆಗಿ ಹೋದಾಗ ಅಲ್ಲಿ ಒಂದಿಷ್ಟು ವಾಸಿ ಎಂದು ಹೇಳಬೇಕು. ಅಲ್ಲಿ ಮರಾಠಾ ಜನ ಬಹಳ ಖಡಕ್ ಜನ. ಹಾಲು ಚಲೋ ಇರ‍್ಲಿಲ್ಲ ಅಂದ್ರ ಅವನನ್ನು ಹೊಡೆದು ಓಡಿಸಿ ಬಿಡುತ್ತಿದ್ದರು. ಅದು ಅಲ್ಲದೆ ಅಲ್ಲಿ ಹಾಲಿನ ಡೇರಿ ಇದ್ದುದ್ದರಿಂದ ಅಲ್ಲಿಯೂ ಒಳ್ಳೆಯ ಹಾಲು ಸಿಕ್ಕುತ್ತಿತ್ತು. ಅಲ್ಲಿ ನಮಗೆ ಹಾಲು ಕೊಡುತ್ತಿದ್ದ ರಾಜು ಮಹಾರಾಷ್ಟದ ಆಜೂರಿನವನು. ಅವನಿಗೆ ಕನ್ನಡ ಬರುತ್ತಿರಲಿಲ್ಲ, ನನ್ನ ಹೆಂಡತಿಗೆ ಮರಾಠಿ ಬರುತ್ತಿರಲಿಲ್ಲ. “ದೂಧ ಕಸಾ ಹೈ ಮೌಸಿ” ಎಂದು ಅವನೂ ನನ್ನ ಮಡದಿಯನ್ನು ಕೇಳಿದಾಗ “ ಅಡ್ಡಿಯಿಲ್ಲಪ್ಪಾ ದೂಧ ಇದ್ದಾಂಗ ಅದಾವ” ಎಂದು ಹೇಳುತ್ತಿದ್ದಳು.
ಹಾಲೆಂಜಲು ಪೇಯನ, ಉದಕವೆಂಜಲು ಮತ್ಸಯದ
ಪುಷ್ಪವೆಂಜಲು ತುಂಬಿಯ
ಎಂತು ಪೂಜಿಸುವೆ ಶಿವ ಶಿವಾ ಎಂತು ಪೂಜಿಸುವೆ?
ಈ ಎಂಜಲಗಳನತಿಗಳೆವಡೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲ ಸಂಗಮದೇವಾ.
ನಾನು ಅಸಹಾಯಕಎಂಜಲನ್ನೇ ಕೊಡುತ್ತಿದ್ದೇನೆ ಎಂದು ಬಸವಣ್ಣ ಕೂಡಲ ಸಂಗಮನಿಗೆ ಹೇಳುತ್ತಾನೆ. ಹಾಗೆ ಈ ಹಾಲು ಕೊಡುವವರು ಬಸವಣ್ಣ ಹೇಳಿಲ್ಲವೇ? ಹಾಲು ನೀರಿದ್ದೇನು ಎಂತಿದ್ದರೇನು ಬಂದದ್ದನ್ನು ಸ್ವೀಕರಿಸಬೇಕೆಂದು ಹೇಳಿ ನಮಗೆ ಸಮರ್ಪಿಸುತ್ತಾರೆ.
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ದೊಡ್ಡ ತಲೆಗೆ ಸಣ್ಣ ಮಾಲೆ – (ಭಾಗ ೬)
- ಉಪ್ಪಾರ ಮರಿಯಪ್ಪನ ಮಿಂಚುವ ಜಾತ್ರೆಯ ಅಂಗಿ – (ಭಾಗ ೭)
- ಕೋರಗಲ್ ವಿರೂಪಾಕ್ಷಪ್ಪ , ಹಾವೇರಿ