ಸವ್ಯಸಾಚಿ ಸಾಹಿತಿ: ಅನಿತಾ. ಪಿ.ತಾಕೊಡೆ

ಅನಿತಾ. ಪಿ.ತಾಕೊಡೆ ಅವರ ‘ಸವ್ಯಸಾಚಿ ಸಾಹಿತಿ’ ಪುಸ್ತಕದಲ್ಲಿ ಇದರಲ್ಲಿ ಜನಾರ್ದನ ಭಟ್ಟರ ಸಾಧನೆಯ ವಿವಿಧ ಮುಖಗಳು ಅನಾವರಣಗೊಂಡಿವೆ.ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಜನಾರ್ದನ ಭಟ್ ಅವರ ಬದುಕು ಬರಹಗಳ ಸಮೀಕ್ಷೆ ಯನ್ನು ಮಾಡಿ ತನ್ನ ಎಂ.ಎ.ಪದವಿಗಾಗಿ ಮು.ವಿ.ವಿ.ಕನ್ನಡ ವಿಭಾಗಕ್ಕೆ ಸಲ್ಲಿಸಿದ ಸಂಪ್ರಬಂಧವನ್ನು ಈ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಜನಾರ್ದನ ಭಟ್ಟರ ಸಾಧನೆಯ ವಿವಿಧ ಮುಖಗಳು ಅನಾವರಣಗೊಂಡಿವೆ. ಅದಕ್ಕೆ ಹಿನ್ನೆಲೆಯಲ್ಲಿ ಅವರ ಜೀವನದ ಹೆಜ್ಜೆಗುರುತುಗಳನ್ನು ಅವರ ಮೊದಲ ಅಧ್ಯಾಯದಲ್ಲಿ ಗುರುತಿಸಿದ್ದಾರೆ. ಎರಡನೇ ಅಧ್ಯಾಯ ಅವರ ಆಪ್ತ ಸಂದರ್ಶನವನ್ನು ಹೊಂದಿದೆ. ಅದು ಅವರ ಬರಹಗಳ ಹಿನ್ನೆಲೆಯ ಮೇಲೆ ಬೆಳಕು ‌ಚೆಲ್ಲುತ್ತದೆ.

ಮೂರನೆಯ ಅಧ್ಯಾಯ ಅವರ ಸಣ್ಣಕಥೆಗಳ ಸಮೀಕ್ಷೆಗೆ ಮೀಸಲಾಗಿದೆ.ಅವು ಸಮಾಜ ವಿಮರ್ಶೆಯನ್ನು ವಿಭಿನ್ನ ರೀತಿಯಲ್ಲಿ ಮಾಡುವುದರ ಅನಾವರಣ ಮಾಡಲಾಗಿದೆ. ವಿಮರ್ಶಕರ ಅಭಿಪ್ರಾಯಗಳನ್ನು ಉಲ್ಲೇಖ ಮಾಡಿದ್ದಾರೆ. ನಾಲ್ಕನೇ ಅಧ್ಯಾಯದಲ್ಲಿ ಅವರ ಕಾದಂಬರಿಗಳ ಸಮೀಕ್ಷೆ ಇದೆ.

ಮೊದಲ ಮೂರು ಕಾದಂಬರಿಗಳು ಒಂದೇ ವಸ್ತುವಿನ ವಿನ್ಯಾಸವನ್ನು ಒಳಗೊಂಡಿವೆ. ಅವುಗಳ ನಡುವೆ ಇರುವ ಸಂಬಂಧಾಂತರಗಳನ್ನು ವಿವರಿಸಲಾಗಿದೆ. ಪ್ರತಿ ಕಾದಂಬರಿಯ ಸಮೀಕ್ಷೆ ನಂತರ ಅದನ್ನು ಕುರಿತು ‌ವಿಮರ್ಶಕರ ಅಭಿಪ್ರಾಯಗಳನ್ನು ನಮೂದಿಸಿರುವರು. ಸ್ವಾತಂತ್ರ್ಯಪೂರ್ವ ಮತ್ತು ನಂತರದ ವರ್ಷಗಳಲ್ಲಿ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಪಲ್ಲಟಗಳನ್ನು ಒಂದು ನಿರ್ದಿಷ್ಟ ಕುಟುಂಬದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಮೌಲ್ಯಗಳ ಅಧಃಪತನದ ಸ್ವರೂಪದ ಅನ್ವೇಷಣೆ ಇದೆ.- ಉತ್ತರಾಧಿಕಾರ, ಹಸ್ತಾಂತರ ಮತ್ತು ಅನಿಕೇತನಗಳ ಮೂಲಕ.

ಕೊನೆಯ ಎರಡು ಕಾದಂಬರಿಗಳು ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ನಡೆದ ವಿಪರ್ಯಯವನ್ನು ವಿಷಾದ ಭರಿತ ಧ್ವನಿಯಲ್ಲಿ ಚಿತ್ರಿಸಿದ ಬಗೆಯ ಅನಾವರಣ ಮಾಡಿದ್ದಾರೆ. ಇಲ್ಲಿ ಕೂಡ ಅವರ ಕಾದಂಬರಿಗಳ ಮಹತ್ವದ ಕುರಿತು ವಿಮರ್ಶಕರ ಉಲ್ಲೇಖಗಳು ಇವೆ. ಐದನೇ ಅಧ್ಯಾಯದಲ್ಲಿ ಅವರು ಸಂಪಾದಕರಾಗಿ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ಶತಮಾನದ ಸಣ್ಣಕಥೆಗಳ ಮತ್ತು ಉಡುಪಿ ಜಿಲ್ಲೆಯ ಶತಮಾನದ ಕತೆಗಳ ಸಂಪಾದಿಸಿ ,ಅವುಗಳಿಗೆ ಅಧ್ಯಯನ ಪೂರ್ಣ ಪ್ರಸ್ತಾವನೆ ಗಳನ್ನು ಬರೆಯುವ ಮೂಲಕ ದಕ್ಷಿಣ ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಾಣ ಮಾಡಿರುವ ಮಹತ್ವದ ಕಾರ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ‌ ಆರನೆಯ ಅಧ್ಯಾಯದಲ್ಲಿ ಅವರ ಅನುವಾದ ಮಾಡಿದ ವಿಶ್ವ ಕಥಾರತ್ನಗಳ ಪರಿಚಯ, ಮತ್ತು ಸಾಹಿತ್ಯ ವಿಮರ್ಶೆ ಯ ಬರಹಗಳು, ಕೆಲವು ಲೇಖಕರ ಕುರಿತು ಅಧ್ಯಯನ ಶೀಲ ಬರಹಗಳು, ಅನ್ಯಾನ್ಯ ಶಿಸ್ತುಗಳ ಪರಿಚಯ ಮಾಡಿಕೊಡುವ ಬರಹಗಳು, ಮತ್ತು ಅವರ ಸಂಶೋಧನೆ- ಬೆರ್ಮರ್ ಬ್ರಹ್ಮ ಅಲ್ಲ ಶಿವ ಎಂದು ಸ್ಥಾಪಿಸಿದ ಸಾಧನೆಗಳನ್ನು ಒಳಗೊಂಡಿದೆ. ಏಳನೇ ಅಧ್ಯಾಯದಲ್ಲಿ ಸಮಾಪನವಿದ್ದು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡ ಅಂಶಗಳನ್ನು ಒಳಗೊಂಡಿದೆ.

ಸಾಧನೆಗಳು: ೧:ಬಹುಶಃ ಮೊದಲ ಬಾರಿಗೆ ಜನಾರ್ದನ ಭಟ್ಟರ ಸಾಹಿತ್ಯದ ಇಡಿಯಾಗಿ ಒಂದೆಡೆ ತಂದು ಸಮೀಕ್ಷೆಗೆ ಒಳಪಡಿಸಿರುವುದು. ೨: ಪ್ರತಿ ಪ್ರಕಾರಕ್ಕೂ ಒಂದೊಂದು ಅಧ್ಯಾಯವನ್ನು ಮೀಸಲಾಗಿರಿಸಿ ವ್ಯವಸ್ಥಿತವಾಗಿ ಅವುಗಳಲ್ಲಿ ಅವರ ಸಾಧನೆಯನ್ನು ಮಂಡಿಸಿರುವುದು. ೩: ಸರಳ ಮತ್ತು ನಿಸ್ಸಂದಿಗ್ಧವಾದ ಶೈಲಿಯ ಬಳಕೆ. ಮಿತಿಗಳು:

೧: ತೌಲನಿಕ ಅಧ್ಯಯನದ ಕೊರತೆ. (ವಿಮರ್ಶಕರ ಉಲ್ಲೇಖ ಹೊರತು ಪಡಿಸಿ)

೨: ಇದರಿಂದಾಗಿ ಅವರ ಅನನ್ಯತೆ ಮತ್ತು ಸ್ಥಾನ ನಿರ್ದೇಶನ ಮಾಡಲು ಸಾಧ್ಯವಾಗಿಲ್ಲ.

೩: ಸಂಶೋಧನೆಯಲ್ಲಿ ಉತ್ಪ್ರೇಕ್ಷೆ ಗೆ ಅವಕಾಶ ಇಲ್ಲ ( ಡಾ. ಜನಾರ್ಧನ ಭಟ್ಟರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಮುಂದುವರಿದು ಯಶಸ್ಸನ್ನು ಗಳಿಸಿದವರು ಪುಟ: ೨೨೧)

೪. ಕೆಲವು ಲಿಪಿ ಸ್ಖಾಲಿತ್ಯಗಳು ಉಳಿದು ಬಂದಿವೆ. ಮೊದಲ ಬಾರಿಗೆ ಕೈಗೊಂಡ ಈ ಬಗೆಯ ಶೈಕ್ಷಣಿಕ ಅಧ್ಯಯನದಲ್ಲಿ ಇವು ಅನಿವಾರ್ಯ. ಸೃಜನಶೀಲ ಮತ್ತು ಸೃಜನೇತರ ಎರಡೂ
ಕ್ಷೇತ್ರಗಳಲ್ಲಿ ಜನಾರ್ದನ ಭಟ್ಟರು ಮಾಡಿರುವ ಸಾಧನೆಯ ಅನಾವರಣ ಮಾಡಿರುವ ಈ ಕೃತಿ ಗೆ ‘ ಸವ್ಯಸಾಚಿ ಸಾಹಿತಿ’ ಎಂಬ ಸಾರ್ಥಕ ಶೀರ್ಷಿಕೆಯನ್ನು ಇಟ್ಟಿರುವುದು ಔಚಿತ್ಯ ಪೂರ್ಣವಾಗಿದೆ.ಗೆಳೆಯರಾದ ಜನಾರ್ದನ ಭಟ್ಟರಿಗೆ ಮತ್ತು ನನ್ನ ಶಿಷ್ಯೆ ಅನಿತಾ ಪೂಜಾರಿಗೆ ಅಭಿನಂದನ. ಪುಸ್ತಕ ಕಳಿಸಿದ ಸೌಜನ್ಯಕ್ಕೆ ಕೃತಜ್ಞತೆ.


  • ರಘುನಾಥ್ ಕೃಷ್ಣಮಾಚಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading