ಸೆರಗಿನೊಳಗಣ ಕೆಂಡ ಮತ್ತು ಇತರ ಕತೆಗಳು

ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ ಧಾರವಾಡ ಆಯೋಜಿತ ೨೦೨೨ ರ ಡಾ.ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ ಹಸ್ತಪ್ರತಿ ಚೊಚ್ಚಲ ಸಾಹಿತ್ಯ ಸಂಕಲನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಗೌರಿ ಚಂದ್ರಕೇಸರಿ ಅವರ ‘ಸೆರಗಿನೊಳಗಣ ಕೆಂಡ ಮತ್ತು ಇತರ ಕತೆಗಳು’ ಕೃತಿಯ ಕುರಿತು ನನ್ನದೆರಡು ಮಾತು, ಮುಂದೆ ಓದಿ…

ಕೃತಿಯ ಹೆಸರು: ಸೆರಗಿನೊಳಗಣ ಕೆಂಡ
ಲೇಖಕಿ : ಗೌರಿ ಚಂದ್ರಕೇಸರಿ

ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಹೊಸನಗರ.
ಪುಟಗಳ ಸಂಖ್ಯೆ: 136
ಬೆಲೆ: 130/-ರೂ.
ಪುಸ್ತಕಕ್ಕಾಗಿ ಸಂಪರ್ಕಿಸಿ:9886099091

ತಡವಾದರೂ ಓದಲೇಬೇಕು ಎಂದುಕೊಂಡಂತಹ ಪುಸ್ತಕ “ಸೆರಗಿನೊಳಗಣ ಕೆಂಡ ಮತ್ತು ಇತರ ಕತೆಗಳು”. ಲೇಖಕಿ ಗೌರಿ ಚಂದ್ರಕೇಸರಿ ಕತೆಯ ಆರಂಭದಲ್ಲಿ ‘ನಾನೇಕೆ ಬರೆಯುತ್ತೇನೆ’ ಎನ್ನುವುದನ್ನು ಓದುಗರಿಗೆ ಚಂದವಾಗಿ ಹೇಳುತ್ತಾರೆ ಅದೇನೆಂದರೆ ಬರಹವೆನ್ನುವುದು ಹೆಣ್ಣೊಬ್ಬಳು ಹೊತ್ತ ಬಸರಿನಂತೆ. ಭಾವನೆ, ಉದ್ವೇಗ, ಮಧುರವಾದ ನೋವುಗಳಿಗೆ ಒಂದು ಸುಂದರವಾದ ಆಕಾರವನ್ನು ಕೊಟ್ಟು ದಿನ ತುಂಬಿ ಹೊರಕ್ಕೆ ಬಂದಾಗ ಒಂದು ಪುಸ್ತಕವಾಗುತ್ತದೆ, ಒಂದು ಕತೆಯಾಗುತ್ತದೆ ಎಂದು ವರ್ಣಿಸುತ್ತಾರೆ. ಗರ್ಭದಲ್ಲಿನ ಮಗುವಿನ ಒದೆತ, ಹೊರ ಬರುವ ತವಕದಂತೆ ಕತೆಗಾರನ ಮನಸ್ಥಿತಿಯಾಗಿರುತ್ತದೆ. ಅವರ ಆರಂಭದ ಮಾತುಗಳೇ ಓದುಗರಿಗೆ ಒಂದು ರೀತಿ ಕುತೂಹಲ ಹುಟ್ಟಿಸುತ್ತದೆ.

ಗೌರಿ ಚಂದ್ರಕೇಸರಿ ಅವರ ಕಥಾಸಂಕಲನ ಮೊದಲ ಕೃತಿಯಾದರೂ ಅವರು ಬರವಣಿಗೆ ಕ್ಷೇತ್ರಕ್ಕೆ ಹೊಸಬರಲ್ಲ. ಅವರ ಲೇಖನಗಳು, ಪ್ರಬಂಧಗಳು ಸಾಕಷ್ಟು ಪತ್ರಿಕೆಗಳಲ್ಲಿ ಪ್ರಕಟಕೊಂಡಿದ್ದು, ಬಹುಮಾನಗಳನ್ನು ಪಡೆದುಕೊಂಡಿದೆ. ಈ ಕಥಾಸಂಕಲನಕ್ಕೂ ಡಾ.ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಬಂದ ಕೃತಿ ಎಂದ ಮೇಲೆ ಅದಕ್ಕೂ ಒಂದು ತೂಕವಿರುತ್ತದೆ ಎಂದು ಭಾವಿಸಿ ನಾನು ಪುಸ್ತಕ ಕೈಗೆ ಎತ್ತಿಕೊಂಡೆ. ಈ ಕಥಾ ಸಂಕಲನದಲ್ಲಿ ಈ ಒಟ್ಟು 15 ಕಥೆಗಳಿವೆ. ಒಂದೊಂದು ಕಥೆ ಒಂದೊಂದು ರೀತಿಯಲ್ಲಿ ಓದುಗರನ್ನು ಆಕರ್ಷಿಸುತ್ತಾ ಹೋಗುತ್ತದೆ.

ಅದರಲ್ಲಿ ಅವರ ಮೊದಲ ಕತೆ ‘ಸಾವಕ್ಕನ ಅರ್ಜಿ’ ನನ್ನನ್ನು, ಆಕರ್ಷಿಸಿತು. ಮುಗ್ಧ ಮನಸ್ಸುಗಳ ಜೊತೆಗಿನ ಚಲ್ಲಾಟವು ಒಂದು ಕಡೆಯಾದರೆ, ಅಧಿಕಾರ, ಹಣದ ದರ್ಪ ಇರುವವರ ಇನ್ನೊಂದು ಕಡೆ. ಈ ಕಥೆಯಲ್ಲಿ ಮಂತ್ರಿಗಳ ಗ್ರಾಮ ವಾಸ್ತವ್ಯದ ನೈಜ್ಯ ಬಣ್ಣವನ್ನು ಲೇಖಕಿ ಬಿಚ್ಚಿಟ್ಟಿದ್ದಾರೆ. ‘ಬಸಿರ ಪೆಟ್ಟಿಗೆಗಳು ಬಾಡಿಗೆಗಿವೆ’ ಇದು ಕಥಾಸಂಕಲನದಲ್ಲಿ ಬರುವ ಇನ್ನೊಂದು ಕತೆ. ಹೆಸರೇ ಹೇಳುವಂತೆ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸುವ ಬಾಕ್ಸ್ ಬೇಬಿ ಪದ್ಧತಿ ಇದು, ಇದೊಂದು ವೈದ್ಯಕೀಯ ಕ್ಷೇತ್ರದಲ್ಲೊಂದು ಮಹತ್ತರವಾದ ಸಾಧನೆ ಎನ್ನಬೇಕೋ ಅಥವಾ ಸಂತಾನ ಭಾಗ್ಯಕ್ಕಾಗಿ ಹಂಬಲಿಸುವವರ ದೌರ್ಬಲ್ಯವನ್ನು ಅರಿತು ಹಣ ಮಾಡುವ ವೈದ್ಯರ ಚಾಣಾಕ್ಷತನ ಎನ್ನಬೇಕೋ ಗೊತ್ತಿಲ್ಲ. ಗರ್ಭಧಾರಣೆಯಿಲ್ಲದೆ ಯಾವುದೇ ಕಷ್ಟವಿಲ್ಲದೆ ಮಗು ಬಾಕ್ಸ್ ನಲ್ಲಿ ಹೇಗೆ ಬೆಳೆಯತ್ತದೆ ಎನ್ನುವ ವೈಜ್ಞಾನಿಕ ಪರಿಚಯವನ್ನು ಲೇಖಕಿ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಕುಡುಕ ಗಂಡ, ಅಳಬುರಕ ಮಗನ ನಡುವೆ ತನ್ನ ಜೀವವನ್ನು ತೇಯುವ ‘ನಾವಿಬ್ಬರು ನಮಗೊಂದು’ ಹೆಣ್ಣುಮಗಳ ನೋವಿನ ಕತೆಯನ್ನು ಇದರಲ್ಲಿ ಕಾಣಬಹುದು. ಇದು ನನ್ನ ಮನ ಮುಟ್ಟಿದಂತಹ ಕತೆ. ಹೆಣ್ಣಿನ ಜನ್ಮಕ್ಕ ಒಂದ್ ಹೆಣ್ ಇದ್ರೆ ಸೈ, ಆಸರಕ್ಕ ಬ್ಯಾಸರಕ್ಕ ಅಂತ್ ಹೆಣ್ಣು ಮಗುವಿನ ಆಸೆ ಹೊತ್ತ ಕಥಾನಾಯಕಿ. ಆದರೆ ಗಂಡ ನೋಡಿದರೆ ತಿಪ್ಪೆ ಸಾರುವಷ್ಟು ಕುಡಿತಕ್ಕೆ ದಾಸ. ಎರಡು ವರ್ಷದ ಭಿಮೇಶಿ ಬಗಲದಲ್ಲೇ ಹೊತ್ತು ಕೊಂಡು ಅಂಗನವಾಡಿಯಲ್ಲಿ ಅಡುಗೆ ಮಾಡುವ ಈಕೆ. ಕುಡುಕ ಗಂಡನ ನಡುವಿನ ಹೋರಾಟದಲ್ಲಿ ಅವಳ ಇನ್ನೊಂದು ಮಗುವಿನ ಕನಸ್ಸು ನುಚ್ಚು ನೂರಾಗುವುದರ ಜೊತೆಗೆ ಇದ್ದ ಒಂದು ಮಗುವು ಕೂಡಾ ಕೊನೆಯುಸಿರೆಳೆಯುತ್ತದೆ ಮತ್ತು  ಕಥಾನಾಯಕಿಯ ದುರಂತದ ಕತೆ ಮನಸ್ಸಲ್ಲಿ ಅಚ್ಚಳಿಯದೆ ಕೂರುತ್ತದೆ.

‘ಸೆರಗಿನೊಳಗಣ ಕೆಂಡ’ ಕತೆಗಾರ್ತಿ ಗೌರಿ ಚಂದ್ರಕೇಸರಿ

ಕಥಾಸಂಕಲನದಲ್ಲಿ ಸಾಮಾಜಿಕ ಕಾಳಜಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ, ಜೊತೆಗೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಆಗುವ ಶೋಷಣೆಯನ್ನು  ಕತೆಯಲ್ಲಿ ಪಾತ್ರದ ಮೂಲಕ ಮನದಟ್ಟು ಮಾಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಗೌರಿಯವರು ಎರಡು ಮೂರೂ ಕತೆಯನ್ನು ಉತ್ತರ ಕರ್ನಾಕಟದ ಜವಾರಿ ಭಾಷೆಯಾಗಿದ್ದು, ಆ ಭಾಷೆಯ ಮೇಲಿನ ಹಿಡಿತ, ಅಲ್ಲಿನ ಸಂಸ್ಕೃತಿ, ಜೀವನ ಶೈಲಿಯನ್ನು ಕತೆಯಲ್ಲಿ ಕಾಣಬಹುದು. ಆದರೆ ಕಥಾಸಂಕಲನ ಪೂರ್ತಿ ಉತ್ತರ ಕರ್ನಾಟಕ ಭಾಷೆಯಲ್ಲಿ ಬರೆದಿದ್ದರೇ ಪುಸ್ತಕ ಇನ್ನಷ್ಟು ಆಪ್ತವಾಗುತ್ತಿತ್ತು, ಏಕೆಂದರೆ ಉತ್ತರಕರ್ನಾಟಕ ಭಾಷೆಯ ಬರವಣಿಗೆ ಇತ್ತೀಚಿನ ದಿನಗಳಲ್ಲಿ ಬರೆಯುವ ಬರಹಗಾರರು ಕಮ್ಮಿ ಇದ್ದಾರೆ. ಗೌರಿಯವರು ಇದರ ಬಗ್ಗೆ ಯೋಚಿಸಿ ಮುಂದಿನ ದಿನಗಳಲ್ಲಿ ಈ ಭಾಷೆಯ ಬಗ್ಗೆ ಗಮನ ಹರಿಸಿದರೆ ಗಂಡು ಮೆಟ್ಟಿದ ನಾಡಲ್ಲಿ ಇವರು ಹೆಚ್ಚು ಜನರ ಪ್ರೀತಿ ಗೆಲ್ಲುತ್ತಾರೆ ಅನ್ನುವುದು ನನ್ನದೊಂದು ಅನಿಸಿಕೆ.

ಓದುಗರ ಕುತೂಹಲಕ್ಕಾಗಿ ಪುಸ್ತಕದ ಎಲ್ಲ ಕತೆಗಳನ್ನು ನಾನು ಹೇಳದೆ ಬಿಟ್ಟಿದ್ದೀನಿ, ‘ಸೆರಗಿನೊಳಗಣ ಕೆಂಡ ಮತ್ತು ಇತರ ಕತೆಗಳು’ ಒಂದು ಸಾಮಾಜಿಕ ಕಳಕಳಿ, ಹೆಣ್ಣು ಮಗಳ ಭಾವನೆ ತುಂಬಿದಂತಹ ಪುಸ್ತಕ. ಗೌರಿಯವರು ಇನ್ನಷ್ಟು ಪುಸ್ತಕಗಳನ್ನು ತರಲಿ ಎಂದು ಆಕೃತಿಕನ್ನಡ ಪರವಾಗಿ ಶುಭ ಹಾರೈಸುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW