ಅವಸರವೇನಿತ್ತು ಅಪ್ಪಾ? ಹೋಗೇ ಬಿಟ್ಟೆಯಾ ಅಪ್ಪಾ?

ಯಾರ ವಂಚನೆಗೆ ಬಲಿಯಾದೆ? ನಿನ್ನ ಕೊಲೆಗಾರರು ಯಾರು? ಕಪಟಿ ಡಾಕ್ಟರ್ ಗಳಾ? ದುರುಳು ವಿಧಿಯಾ? ಕುರುಡ ದೇವರಾ? ಪರಮ ಮೂರ್ಖನಾದ ನಾನಾ? ಲೇಖಕ ವಿನಾಯಕ ಅರಳಸುರಳಿ ಅವರ ಅಂತರಾಳದ ನುಡಿಗಳನ್ನು ಓದುವಾಗ ಕಣ್ಣಂಚಿನಲ್ಲಿ ನೀರು ಬಂತು, ನೀವು ಓದಿ…

ಹೋಗುವ ಒಂದು ವಾರದ ಮುನ್ನ ಏಳಲಿಕ್ಕೂ ಆಗದ ಅಮಲಿನಲ್ಲೇ ನನ್ನ ಬೆನ್ನು ತಡವಿ ಮುದ್ದಿಸಿದೆಯಲ್ಲಾ.. ನಿನಗೆ ಗೊತ್ತಿತ್ತಾ ನಾಳೆಯಿಂದ ಏಳಲಾರೆ ಎಂಬುದು? ಎಷ್ಟೊಂದು ನರಳಿಬಿಟ್ಟೆಯಲ್ಲಾ? ಮಾತಾಡಲೂ ಬಿಡದ ಕಫ, ಬೇಯುವ ಜ್ವರ, ಬಾಯ್ತುಂಬಾ ಹುಣ್ಣು, ಬೆನ್ನ ತುಂಬಾ ಗಾಯ, ಆಚೆ ಮಲಗಿದರೆ ಅಲ್ಲಿ ನೋವು, ಈಚೆ ಹೊರಳಿದರೆ ಈಚೆ ಕೀವು, ಕೊರಡಾದ ಕಾಲುಗಳು, ಬಾತುಕೊಂಡ ಕೈಯಿ.. ಎಷ್ಟೊಂದು ಅನುಭವಿಸಿಬಿಟ್ಟೆ. ನೀನು ಅಷ್ಟೆಲ್ಲಾ ಪ್ರೀತಿಸುವ ನಾನು ಜೀವಂತವಾಗಿದ್ದುಕೊಂಡೂ ನೀನು ಇಷ್ಟೆಲ್ಲಾ ನೋವು ಅನುಭವಿಸಬೇಕಾಗಿ ಬಂತಲ್ಲಾ.. ಹೇಳು ಅಪ್ಪ.. ಈ ಪಶ್ಚಾತ್ತಾಪದಿಂದ ಎಂದಿಗಾದರೂ ಹೊರಬಂದೇನಾ?

ಕೆಂಡದ ಕುಡಿಕೆಯ ಕೈಗಿಟ್ಟು ನಿನ್ನ ಮುಖದ ಮೇಲೆ ಸುರಿಯಲು ಹೇಳಿದರು. ಹೇಳು ಅಪ್ಪ.. ಈ ನನ್ನ ಜನುಮಕ್ಕೆ ಇದಕ್ಕಿಂತ ಕ್ರೂರ ಶಿಕ್ಷೆ ಇನ್ನೊಂದು ಬೇಕಾ? ನಿನ್ನನ್ನೊಮ್ಮೆ ಬಲವಾಗಿ ಎಳೆದರೆ ಎಲ್ಲಿ ನೋವಾದೀತೋ ಎಂದು ಹೆದರುತ್ತಿದ್ದ ಇದೇ ನನ್ನ ಕೈಯಿಂದ ನಿನ್ನ ದೇಹಕ್ಕೆ ಬೆಂಕಿ ಕೊಟ್ಟೆನಲ್ಲಾ.. ಮಗನೊಬ್ಬನ ಬದುಕಿನಲ್ಲಿ ಇದಕ್ಕಿಂತ ಕೆಟ್ಟ ಘಳಿಗೆ ಇನ್ಯಾವುದಾದರೂ ಇದ್ದೀತಾ? ಚಿತೆಯ ಕ್ರೂರ ಬೆಂಕಿ ನಿನ್ನ ಇಡೀ ದೇಹವ ಸುಡುತ್ತಿದ್ದರೆ ನಾನು ಮಾತ್ರ ತಿರುಗಿನೋಡದೆ ಬಂದು ಬಿಟ್ಟೆನಲ್ಲಾ.. ಹೇಳು ಅಪ್ಪಾ.. ಈ ಜನುಮದಲ್ಲಿ ಇದಕ್ಕೆ ಕ್ಷಮೆಯಿದೆಯಾ?

ಈಗ ಎಲ್ಲಿರುವೆ ಅಪ್ಪಾ? ಯಮನ ಲೋಕದಲ್ಲಾ? ಅದೇನು ನರಕವಾ? ಸ್ವರ್ಗವಾ? ಇಲ್ಲ.. ಬದುಕಿನಲ್ಲೇ ನರಕವ ನೋಡಿದವ ನೀನು. ಅರೆಪ್ರಜ್ಞಾವಸ್ಥೆಯಲ್ಲಿ, ಮೈ ತುಂಬಾ ಸುಡುವ ಗಾಯಗಳ ಇಟ್ಟುಕೊಂಡು, ಬೆನ್ಬಿಡದೆ ಕಾಡುವ ಫಿಟ್ಸಿನ ಜೊತೆ ಹೋರಾಡುತ್ತಾ ಕ್ಷಣ ಕ್ಷಣಕ್ಕೂ ನೊಂದು ಬೆಂದ ನಿನಗೇನಾದರೂ ಇನ್ನೊಂದು ನರಕವ ಕೊಟ್ಟದ್ದೇ ಆದರೆ ಆ ಚಿತ್ರಗುಪ್ತ, ಯಮಧರ್ಮರಿಗೆ ಅದಕ್ಕಿಂತ ಕ್ರೂರವಾದ ನರಕಕ್ಕೆ ಹೋಗುತ್ತಾರೆ.‌

ಪ್ರೀತಿಯ ದೇವರೇ.. ನಗುತ್ತಿದ್ದೀಯಾ? ನಮ್ಮೆಲ್ಲರ ಅಳಿಸಿ, ನೀ‌ನು ಮಾತ್ರ ನಕ್ಕ ಮಾತ್ರಕ್ಕೆ ದೇವರಾಗಿ ಬಿಡುವೆಯಾ? ನೂರಾ ನಲವತ್ಮೂರು ದಿನಗಳ ಆಸ್ಪತ್ರೆವಾಸದಲ್ಲಿ ನಾನು ಕಳೆದ ಒಂದೊಂದು ನೋವಿನ ಘಳಿಗೆ, ಹರಿಸಿದ ಕಣ್ಣೀರು, ನಿನ್ನ ಕಾಡಿ ಬೇಡಿದ ಪ್ರಾರ್ಥನೆ.. ಇವಕ್ಕೆಲ್ಲಾ ಸಣ್ಣ ಬೆಲೆಯನ್ನೂ ಕೊಡದೇ ಹೋದೆಯಾ? ಅಪ್ಪನಲ್ಲಿ ನರಳುತ್ತಾ ಮುಲುಗಿದ ವೇಳೆ ನೀನು ಮಾತ್ರ ನಗುತ್ತಾ ದೇವರಾದೆಯಾ? ಅವನ ಯಾತನೆಯ ತಾಪ, ನನ್ನ ವೇದನೆಯ ಶಾಪ ನಿನ್ನನ್ನು ಸುಮ್ಮನೆ ಬಿಟ್ಟೀತಾ?

ಹೇಳು ದೇವರೇ.. ನಿನಗೆ ಅಪ್ಪ ಇಲ್ಲವಾ? ಕಣ್ಣೆದುರೇ ಅವನು ನರಳುವಾಗ ಮಗನ ಎದೆಯಲ್ಲಿ ಸಿಡಿಯುವ ಜ್ವಾಲಾಮುಖಿಯ ತೀವ್ರತೆಯೇನೆನ್ನುವುದು ನಿನಗೆ ಗೊತ್ತಿಲ್ಲವಾ? ಎಲ್ಲಾ ತಿಳಿದೂ ಯಾಕೆ ಹೀಗೆ ದ್ರೋಹ ಮಾಡಿದೆ? ನಿನ್ನ ಯಾವ ಅರ್ಥವಿಲ್ಲದ ವೇದಾಂತದ ಸಾಧನೆಗೋಸ್ಕರ ಮಗುವಿನಂಥಾ ನನ್ನ ಅಪ್ಪನನ್ನು ಆ ಪರಿ ಹಿಂಸಿಸಿದೆ?

ಇಲ್ಲಿ ಕೇಳು ದೇವರೇ.. ಅಪ್ಪನ ಪ್ರಜ್ಞೆಯನ್ನು, ಅವನ ಮಾತನ್ನು, ದೃಷ್ಟಿಯನ್ನು, ಕೈ ಕಾಲುಗಳ ಚಲನೆಯನ್ನು ಹೀಗೆ ಅವನ ಸರ್ವಸ್ವನ್ನೂ ಕಿತ್ತುಕೊಂಡು ನನ್ನೊಡನೆ ಮಾತಾಡಲಾಗದಂತೆ ಮಾಡಿದೆ ಎಂಬ ಹೆಮ್ಮೆಯಲ್ಲಿ ಬೀಗುವವನೇ.. ಇಲ್ಲಿ ಕೇಳು. ನೆನ್ನೆ ರಾತ್ರೆ, ಸಾವಿಗೆ ಕೆಲವೇ ಗಂಟೆ ದೂರದಲ್ಲಿ ಕ್ಷೀಣವಾಗಿ ಉಸಿರಾಡುತ್ತಾ ಮಲಗಿದ್ದ ಅಪ್ಪನನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತೆನಲ್ಲಾ.. ಆಗ ನಿನ್ನ ಪರಮ ಕಠೋರ ಶಿಕ್ಷೆಗಳೆಲ್ಲವನ್ನೂ ಮೀರಿ ಅಪ್ಪ ನನ್ನೊಂದಿಗೆ ಮಾತಾಡಿಬಿಟ್ಟ. ಈ ಲೋಕದ ಯಾವ ಭಾಷೆಯೂ ಅರ್ಥವಾಗದ ಆ ಕ್ಷೀಣ ಸ್ಥಿತಿಯಲ್ಲಿದ್ದಾಗಲೂ, ನಾನು ಅಪ್ಪಿ ಅತ್ತೊಡನೆ ಅವನ ಕಣ್ಣಿಂದ ಬಳಬಳನೆ ನೀರು ಹರಿದು ಹೋಯ್ತು. ಅಪ್ಪ ಮಾತಾಡಿದ.. ಭಾಷೆಯ ಮೂಲಕ ಅಲ್ಲ, ಸಂಜ್ಞೆಯ ಮೂಲಕ ಅಲ್ಲ, ಕಣ್ಣೀರಿನ ಮೂಲಕ.. ಅಪ್ಪ.. ನನ್ನ ಅಪ್ಪ.. ನಿನ್ನ ಎಲ್ಲ ಕಠೋರ ನಿರ್ಬಂಧಗಳನ್ನೂ ಮೀರಿ ನನ್ನೊಟ್ಟಿಗೆ ಮಾತಾಡಿದ. ಈಗ ಹೇಳು.. ಗೆದ್ದದ್ದು ಯಾರು? ನೀನಾ? ನಿನ್ನ ಕ್ರೌರ್ಯವಾ? ಅಥವಾ ನನ್ನ ಹಾಗೂ ಅಪ್ಪನ ಪರಮ ಪವಿತ್ರ ಅನುಬಂಧವಾ?

ಕಿತ್ತುಕೊಂಡೆಯಾ? ಅವನನ್ನು ಕರೆಸಿಕೊಂಡು, ಎರೆಡೂವರೆ ವರ್ಷದ ನನ್ನ ಹೋರಾಟವೆಲ್ಲವ ಸೋಲಿಸಿದೆನೆಂದು ಬೀಗುತ್ತಿರುವೆಯಾ? ಇಲ್ಲಿ ಕೇಳು.. ನಿನ್ನ ಸೃಷ್ಟಿಗೆ, ನಿನ್ನ ಮಾಯೆಗೆ, ನಿನ್ನ ಶಾಪಕ್ಕೆ ಅವನನ್ನು ಕೇವಲ ಭೌತಿಕವಾಗಿ ಕಿತ್ತುಕೊಳ್ಳುವ ಶಕ್ತಿಯಿದೆಯೇ ಹೊರತು ನನ್ನ ಪ್ರತಿ ಕ್ಷಣದ ಎದೆ ಬಡಿತದಲ್ಲೂ ಸೇರಿ ಹೋಗಿರುವ ಅವನನ್ನು ಅಲ್ಲಿಂದ ಬೇರೆ ಮಾಡುವ ತಾಕತ್ತಿಲ್ಲ. ಅವನು ಇಲ್ಲಿದ್ದಾನೆ.. ನನ್ನ ಹೃದಯದಲ್ಲಿ ಬೆಚ್ಚಗೆ ಕುಳಿತಿದ್ದಾನೆ. ಅಲ್ಲಿಂದಲೇ ನನ್ನನ್ನು ಅಣ್ಣಾ ಅಂತ ಕರೆಯುತ್ತಿದ್ದಾನೆ. ನಾನು ಇಲ್ಲಿಂದಲೇ ಅವನಿಗೆ ಊಟ ಮಾಡಿಸುತ್ತೇನೆ. ಮುದ್ದಿಸುತ್ತೇನೆ. ಅವನಿಷ್ಟದ ಹಾಡುಗಳ ಹಾಕಿ ಖುಷಿ ಪಡಿಸುತ್ತೇನೆ. ಕಥೆ ಹೇಳುತ್ತೇನೆ. ಮಡಿಲಲ್ಲಿ ಮಲಗಿಸಿ ಲಾಲಿ ಹಾಡುತ್ತೇನೆ. ನಿನ್ನ ಕರ್ಮಾನುಕರ್ಮಗಳ ಕುರುಡು ಲೆಕ್ಕಾಚಾರಕ್ಕೆಂದೂ ಅರ್ಥವಾಗದ ಭಾಷೆಯಲ್ಲಿ ಅವನನ್ನು ಸಂತೈಸುತ್ತೇನೆ.

ಸಾಕು ದೊರೆಯೇ.. ಈ ಯಾತನೆಯೆಲ್ಲವ ಅವನ ಬದುಕಿಗಷ್ಟೇ ಸೀಮಿತ ಮಾಡು. ಸಾವಿನಲ್ಲಾದರೂ ಅವನಿಗೆ ಶಾಂತಿ ಕೊಡು. ನಿನ್ನ ಸ್ವರ್ಗದ ಸುಕೋಮಲ ಹಾಸಿಗೆಯನ್ನು ಅವನಿಗೆ ಕೊಡು. ಅವನಿಷ್ಟದ ಪಾಯಸ, ಅವನಿಷ್ಟದ ಹಾಡು, ಅವನಿಷ್ಟದ ಬಟ್ಟೆ.. ದಯವಿಟ್ಟು ಇವನ್ನೆಲ್ಲಾ ಅವನಿಗೆ ಕೊಡು‌. ದಯವಿಟ್ಟು ಈ ಒಂದು ಕೋರಿಕೆಯನ್ನಾದರೂ ಇಡೇರಿಸು.. ನೀನು ದೇವರೇ ಆಗಿದ್ದಲ್ಲಿ.

ಯಾಕೆ ಹೋಗಿ ಬಿಟ್ಟೆ ಅಪ್ಪಾ?

ಏನೆಲ್ಲಾ ಬಾಕಿ ಇತ್ತು.. ಅದೆಷ್ಟೋ ನೂರು ಪೀಲೆ ಬಾಟಲಿಗಳ ತಾ ಎಂದು ಕೇಳಲಿಕ್ಕಿತ್ತು. ನಿಂತ ನಿಲುವಿನಲ್ಲೇ ಓಡಿ ನಿನಗೋಸ್ಕರ ಅದನ್ನು ತರಲಿಕ್ಕಿತ್ತು‌. ನೀ ಕೇಳಿದ ಸ್ಪೀಕರ್ ಗಳ ತಂದು ಹಾಡು ಕೇಳಿಸಲಿಕ್ಕಿತ್ತು. ನಿನ್ನ ಕೈ ಹಿಡಿದು ನಿನ್ನ ನೆಚ್ಚಿನ ತೋಟಕ್ಕೆ ಕರೆದೊಯ್ಯುವುದಿತ್ತು. ನಿನ್ನ ಇಂಥಾ ಪುಟ್ಟ ಪುಟ್ಟ ಆಸೆಗಳ ಈಡೇರಿಸುತ್ತ ಈ ಬದುಕ ಸಾರ್ಥಕ ಮಾಡಿಕೊಳ್ಳುವುದು ಬಾಕಿ ಇತ್ತು.

ಮುಂದೆಂದೋ ಬರುವ ನನ್ನ ಮಡದಿಯ ಜೊತೆಗೆ ನಿನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದಿತ್ತು. ನೀನು ಅವಳನ್ನು ಪ್ರೀತಿಯಿಂದ ಹರಸುವುದು ನೋಡಿ ಕಣ್ತುಂಬಿಕೊಂಡು ನಗಲಿಕ್ಕಿತ್ತು. ನನ್ನ ಪುಟ್ಟ ಮಗಳು ನಿನ್ನ ಅಜ್ಜಾ ಎಂದು ಕೂಗುವುದ ಕಿವಿ ತುಂಬಾ ಕೇಳಲಿಕ್ಕಿತ್ತು. ಅವಳಿಗೆ ನೀನು ಸಿಹಿ ನೀಡಿ ಮುದ್ದಿಸುವುದ ಕಣ್ತುಂಬಾ ನೋಡಿ ಈ ಜನುಮವ ಸಾರ್ಥಕ ಪಡಿಸಿಕೊಳ್ಳಲಿಕ್ಕಿತ್ತು..

ಅಷ್ಟರೊಳಗೇ ಹೋಗಿಬಿಟ್ಟೆಯಾ ಅಪ್ಪಾ?

ಒಂದೇ ಒಂದು ನಿಮಿಷ ನಾನು ಆಚೆ ಹೋದರೂ ಸಹಿಸದವ ನೀನು. ತೀರ್ಥಹಳ್ಳಿಗೆ ಹೊರಟರೆ “ಬೇಗ ಬಾ.. ಕಾಯ್ತಾ ಇರ್ತೀನಿ” ಎಂದು ಕಣ್ತುಂಬಿ ಕಳಿಸಿಕೊಡುತ್ತಿದ್ದವ ನೀನು. ಈಗ ಇಡೀ ಜನುಮದಲ್ಲೆಂದೂ ನನಗೆ ಮತ್ತೆ ಸಿಗಲಾರದಂತೆ ನನ್ನನ್ನು ಬಿಟ್ಟು ಹೋದೆಯಲ್ಲಾ? ಇದು ನ್ಯಾಯವಾ? ನೀನಿಲ್ಲದ ಈ ಬದುಕ ಹೇಗೆ ಬದುಕಲಿ ಅಪ್ಪಾ? ಎಲ್ಲಿ ಹೋದರೂ ನಿನ್ನದೇ ಗುರಿತು. ಎಲ್ಲಿ ನಡೆದರೂ ನಿನ್ನದೇ ಹೆಜ್ಜೆ.. ದಿನದ ಪ್ರತಿಯೊಂದು ನಿಮಿಷದಲ್ಲೂ ನಿನ್ನದೇ ನೆನಪು.. ನಾನೇ ತಪ್ಪು ಮಾಡಿಬಿಟ್ಟೆನಾ? ನನ್ನ ಮೂರ್ಖತನಕ್ಕೆ ನೀನು ಬಲಿಯಾದೆಯಾ? ಕ್ಷಣ ಕ್ಷಣಕ್ಕೂ ಇಂಥದೇ ನೂರು ನೂರು ಪಶ್ಚಾತ್ತಾಪ.. ಇಷ್ಟೆಲ್ಲ ನೋವುಗಳ ಎದೆಯಲ್ಲಿಟ್ಟುಕೊಂಡು ನಾನು ಬದುಕಬಲ್ಲೆನಾ?

ಈ ನಗುವ ಮುಖದಲ್ಲಿ ಬರಿ ನೋವಿದೆಯೋ
ಉಸಿರಾಡೋ ಶವಕೆಲ್ಲಿ ಸಾವಿದೆಯೋ?


  • ವಿನಾಯಕ ಅರಳಸುರಳಿ –  ಗುಬ್ಬಿಪುಕ್ಕ ಯೂಟ್ಯೂಬ್ ಚಾನೆಲ್ ನ ಸಂಸ್ಥಾಪಕರು, ಲೇಖಕರು.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW