ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾಪ್ರತಿಭೆ ಶಕ್ತಿ ಪ್ರಸಾದ್



ನಮ್ಮ ಚಿತ್ರರಂಗ ೭೦ -೮೦  ರ ದಶಕದಲ್ಲಿ ಕಂಡಂತಹ ಅಪರೂಪದ ಕಲಾಪ್ರತಿಭೆ ದಿವಂಗತ “ಶಕ್ತಿ ಪ್ರಸಾದ್”. ಅವರ ಕಲಾ ಬದುಕಿನಲ್ಲಿ, ಸುಮಾರು ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಂದಿಗೂ ಕನ್ನಡಿಗರ ಮನಗಳಲ್ಲಿ ಹಚ್ಚ ಹಸಿರಾಗಿದ್ದಾರೆ. 

ಖ್ಯಾತ ಖಳನಟರಾಗಿ, ಉತ್ತಮ ಪೋಷಕ ನಟರಾಗಿ ತನ್ನದೆ ಆದ ಛಾಪು ಮೂಡಿಸಿದಂತಹವರು. ತಮ್ಮ ಮನೋಜ್ಞ ಅಭಿನಯ, ಕಂಚಿನ ಕಂಠದ ಮೂಲಕ ಜನ-ಮನ ಗೆದ್ದಂತಹವರು. ೧೯ ಮೇ ೧೯೨೮ ರಂದು ತುಮಕೂರಿನ ಮಧುಗಿರಿಯಲ್ಲಿ ಜನಿಸಿದರು.ರಾಮಸ್ವಾಮಿ ಎನ್ನುವುದು ಇವರ ಜನ್ಮ ನಾಮವಾಗಿತ್ತು. ರಂಗಭೂಮಿ ಸೇರಿದ ಮೇಲೆ ಅವರ ಪಾತ್ರ, ಅಭಿನಯ,ಭಾವಾಶೈಲಿ ನೋಡಿ “ಶಕ್ತಿ ಪ್ರಸಾದ್” ಎಂದು ಕರೆದರು. ರೈತ ಕುಟುಂಬದಲ್ಲಿ ಹುಟ್ಟಿದ ಶಕ್ತಿ ಪ್ರಸಾದ್‌ ರವರಿಗೆ ಚಿಕ್ಕಂದಿನಿಂದಲೂ ಕಲೆಯ ಮೇಲೆ ಆಸಕ್ತಿಯಿತ್ತು. ಬಡತನದ ಪರಿಸ್ಥಿತಿಯಲ್ಲಿ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ. ತಮ್ಮ ತಂದೆಯೊಂದಿಗೆ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡರು. ಆವಾಗಲೇ ಕಲೆಯ ಮೇಲೆ ಆಸಕ್ತಿಯಿದ್ದಿದರಿಂದ. ಸ್ನೇಹಿತರೊಂದಿಗೆ ಕಂಪನಿ ನಾಟಕಗಳಲ್ಲಿ ಅಭಿನಯಿಸಲು ಸುರು ಮಾಡಿದರು. ತಮ್ಮ ಊರಿನಲ್ಲಿ ವಾರ್ಷಿಕ ಸಭೆ,ಸಮಾರಂಭ ಕಾರ್ಯಕ್ರಮಗಳಲ್ಲಿ ಶಕ್ತಿ ಪ್ರಸಾದ್‌ರವರೆ, ಮುಖ್ಯ ಆಕರ್ಷಣೆಯಾಗಿರುತ್ತಿದ್ದರು. ಹೀಗೆ ತಮ್ಮ ಕೆಲಸದ ಜೊತೆಗೆ ಒಂದು ಭಾಗವಾಗಿ ಕಲಾ ಜೀವನವನ್ನು ಪ್ರಾರಂಭಿಸಿದರು. ಒಮ್ಮೆ ಯಾವುದೋ ತಿರುಗಾಟಕ್ಕೆಂದು ನಾಟಕ ಮಾಡಲು ಹೋದಾಗ, ಶಕ್ತಿ ಪ್ರಸಾದ್‌ ರವರನ್ನು ಖ್ಯಾತ ರಂಗಭೂಮಿ ನಿರ್ದೆಶಕರಾದಂತಹ ಗುಬ್ಬಿ ವೀರಣ್ಣನವರು ನೋಡಿದರು. ಆವಾಗಲೆ ಅವರಲ್ಲಿನ ಕಲಾ ಚಾತುರ್ಯತೆ,ಅಭಿನಯ ಗಾಂಭೀರ್ಯತೆ ಕಂಡು ತಮ್ಮ ರಂಗಭೂಮಿಗೆ ಆಹ್ವಾನಿಸಿದರು. ಅಲ್ಲಿಂದಲೆ ಶಕ್ತಿ ಪ್ರಸಾದ್‌ ರವರ ಬೆಳ್ಳಿತೆರೆಯ ಜೀವನವು ಪ್ರಾರಂಭವಾಯಿತು. ಒಮ್ಮೆ ಅವರ ಕಂಚಿನ ಧ್ವನಿಯ ಅಭಿನಯವನ್ನು ಕಂಡ ಖ್ಯಾತ ನಿರ್ದೆಶಕರಾದಂತಹ ʼಜಿ.ವಿ.ಅಯ್ಯರ್‌ʼ ರವರು ೧೯೬೭ ರಲ್ಲಿ ಬಂದಂತಹ ತಮ್ಮ “ಇಮ್ಮಡಿ ಪುಲಕೇಶಿ” ಚಿತ್ರದಲ್ಲಿ ʼರಾಜಪ್ರತಿನಿಧಿ ಮಂಗಳೇಶನʼ ಪಾತ್ರಕ್ಕೆ ಆಯ್ಕೆ ಮಾಡಿ ಕೊಂಡರು.

ಮೊದಲ ಚಿತ್ರದಲ್ಲೆ ಡಾ.ರಾಜ್‌ ಕುಮಾರರವರೊಂದಿಗೆ, ಅಭಿನಯಿಸಿ ಸೈ ಎನಿಸಿಕೊಂಡರು. ಆಮೇಲೆ ಡಾ.ರಾಜ್‌ ಕುಮಾರವರ ಜೊತೆಗೆ ಮತ್ತಷ್ಟು ಅವಕಾಶಗಳು ಹುಡುಕಿ ಬಂದವು. ಜೇಡರ ಬಲೆ, ಗೋವಾದಲ್ಲಿ ಸಿ.ಐ.ಡಿ ೯೯೯ ಧೂಮಕೇತು ನಂತಹ ಚಿತ್ರಗಳಲ್ಲಿ ನಟಿಸಿದರು. ತಮ್ಮ ಶಾಂತ ಸ್ವಭಾವ ಹಾಗೂ ಮನೋಜ್ಞ ಅಭಿನಯದ ಮೂಲಕ ಅಂದಿನ ಕಲಾವಿದರೆಲ್ಲರಿಗೂ, ಶಕ್ತಿ ಪ್ರಸಾದ್‌ ರವರು ತುಂಬಾ ಆಪ್ತರಾಗಿ ಬಿಟ್ಟರು. ಬಾಲಣ್ಣ, ಕಲ್ಯಾಣ್‌ ಕುಮಾರ್‌, ನರಸಿಂಹರಾಜು, ಉದಯ ಕುಮಾರ್‌, ಸಂಪತ್ ಕುಮಾರ್‌ ಎಲ್ಲರಿಗೂ ಅಚ್ಚುಮೆಚ್ಚಿನವರಾದರು. ಎಲ್ಲರೊಂದಿಗೂ ಮಧುರ ಬಾಂಧವ್ಯದಿಂದ ಕಲಾ ಜೀವನದಲ್ಲಿ ಬೆರೆತ್ತಿದ್ದರು. ೭೦ -೮೦ ರ ದಶಕದಲ್ಲಿ ಶಕ್ತಿ ಪ್ರಸಾದರವರು ಬಹು ಬೇಡಿಕೆಯ ಖಳನಟ ಹಾಗೂ ಉತ್ತಮ ಪೋಷಕ ನಟರಾಗಿದ್ದರು. ಸಿಪಾಯಿ ರಾಮು, ಬಂಗಾರದ ಪಂಜರ, ವಿಜಯ ವಿಕ್ರಮ್‌,ಪ್ರಳಯಾಂತಕ, ‘ಒಂದೇ ರಕ್ತ’,’ ಗಜೇಂದ್ರ’, ‘ಗುರು ಭಕ್ತಿ’, ‘ವಜ್ರಮುಷ್ಠಿ’ ಚಿತ್ರಗಳಲ್ಲಿನ ಅವರ ಅಭಿನಯವಂತು ಅಪೂರ್ವ ಅಭಿನಯ. ಶಕ್ತಿ ಪ್ರಸಾದ್‌ ರವರು ಬರೀ ಖಳನಟ,ಪೋಷಕ ಪಾತ್ರವಷ್ಟೆ ಅಲ್ಲ. ಹಾಸ್ಯನಟರಾಗಿ ಕೂಡ ತಮ್ಮ ಕಲಾ ಚತುರತೆಯನ್ನು ತೋರಿಸಿದ್ದರು. ಠಕ್ಕ ಬಿಟ್ರೆ ಸಿಕ್ಕ, ಹಾವು ಏಣಿ ಆಟ, ಸುಭದ್ರ ಕಲ್ಯಾಣ, ಬ್ಯಾಂಕರ್‌ ಮಾರ್ಗಯ್ಯ, ಗಂಧದಗುಡಿ,ಚಿತ್ರಗಳಲ್ಲಿ ಹಾಸ್ಯ ಪಾತ್ರದ ಮೂಲಕ ನಟಿಸಿದ್ದರು.



ಅಂದಿನ ಮೇರು ನಟರಾದಂತಹ ವಿಷ್ಣುವರ್ಧನ್‌, ಅಂಬರೀಷ್‌,ಪ್ರಭಾಕರ್‌,ಶಂಕರನಾಗ್‌ ರವರೊಂದಿಗೆ ಸುಮಾರು ೭೦ ಕ್ಕೂ ಹೆಚ್ಚು ಚಿತ್ರಗಳಲ್ಲಿ, ಎಲ್ಲಾ ಥರದ ಪಾತ್ರಗಳಲ್ಲಿ ಮಿಂಚಿದ್ದರು. ನಂತರ ತಮ್ಮ ಮಕ್ಕಳಾದ ಅರ್ಜುನ್‌ ಸರ್ಜಾ ಹಾಗೂ ದಿ.ಕಿಶೋರ್‌ ಸರ್ಜಾರವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದರು. ಅರ್ಜುನ್‌ ಸರ್ಜಾ ರವರು ಇಂದು ದಕ್ಷಿಣ ಭಾರತದ ಖ್ಯಾತ ನಾಯಕನಟ ಹಾಗೂ ನಿರ್ದೆಶಕರಾಗಿದ್ದಾರೆ. ಶಕ್ತಿ ಪ್ರಸಾದ್‌ ರವರು ತಮ್ಮ ೫೮ ನೇ ವಯಸ್ಸಿನಲ್ಲಿ,ಆಗಸ್ಟ್‌ ರಲ್ಲಿ ಹೃದಯಘಾತದಿಂದ ತಮ್ಮ ಕಲಾಬದುಕನ್ನು ಪೂರ್ಣಗೊಳಿಸಿದರು.

ಅಭಿಮಾನಿ ಬಳಗವನ್ನು ಬಿಟ್ಟು ಮತ್ತೆ ಬಾರದ ಲೋಕಕ್ಕೆ ಹೋದರು. ಇಂದು ಅವರ ಕಲಾಜೀವನದ ನೆನಪು ಮಾತ್ರ ನಮ್ಮೊಂದಿಗೆ. ತಮ್ಮ ೨೦ ವರ್ಷಗಳ ಕಲಾ ಬದುಕಿನಲ್ಲಿ, ಸುಮಾರು ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಂದಿಗೂ ನಮ್ಮ ಕನ್ನಡಿಗರ ಮನಸ್ಸಲ್ಲಿ ನೆನಪಿದಾರೆ.

ಶಕ್ತಿ ಪ್ರಸಾದರವರ ಕುಟುಂಬ ಸಹ ಕಲಾಕುಟುಂಬವೆ ಆಗಿದೆ. ಶಕ್ತಿಪ್ರಸಾದರವರೊಂದಿಗೆ ಸುರುವಾದ ಕಲಾ ಬದುಕು, ಇಂದು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು

ಕೂಡ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ನಮ್ಮನ್ನೆಲ್ಲಾ ಅಗಲಿದ ನಟ ಚಿರಂಜೀವಿ ಸರ್ಜಾ ರವರು ಶಕ್ತಿ ಪ್ರಸಾದರವರ ಮೊಮ್ಮಕ್ಕಳಲ್ಲಿ ಒಬ್ಬರಾಗಿದ್ದರು. ತಮ್ಮ ಅಲ್ಪಾವಧಿಯಲ್ಲೆ

(ಶಕ್ತಿ ಪ್ರಸಾದ್‌ರವರ ಹಿರಿಯ ಮಗ ನಿರ್ದೆಶಕ ದಿ.ಕಿಶೋರ್‌ ಸರ್ಜಾ,  ಮೊಮ್ಮಗ ದಿ. ಚಿರಂಜೀವಿ ಸರ್ಜಾ)

ಅಗಲಿದ್ದು ಎಲ್ಲರಿಗೂ ದುಃಖವನ್ನುಂಟು ಮಾಡಿತು. ಇವತ್ತಿಗೂ ನಂಬುವುದಕ್ಕೆ ಅಸಾಧ್ಯವೆನಿಸುತ್ತದೆ.ಏನೆ ಆದರು ಕಲಾಸೇವೆ ಮಾಡುವಾಗಲೆ ಶಕ್ತಿ ಪ್ರಸಾದ್‌ರವರನ್ನು ಹಾಗೂ ಅವರ ಹಿರಿಯ ಮಗ ನಿರ್ದೆಶಕರಾದಂತಹ ಕಿಶೋರ್‌ ಸರ್ಜಾ, ಮೊಮ್ಮಗ ಚಿರಂಜೀವಿ ಸರ್ಜಾರವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತವೆ ಆಗಿದೆ. ಅವರ ಕುಟುಂಬದ ಮುಂದಿನ ಕಲಾಜೀವನ ಸುಖವಾಗಿರಲಿ

ಮತ್ತಷ್ಟು ಕಲಾಸೇವೆ ಮಾಡುವಂತಾಗಲಿ ಎಂಬುದೇ ನಮ್ಮ ಆಕೃತಿ ಬಳಗದ ಆಶಯ.


  • ಲೇಖನ್‌ ನಾಗರಾಜ್‌, ಹರಡಸೆ, ಹೊನ್ನಾವರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW