‘ಪ್ರತಿಮೆ’ ಕವನ – ಜೆ ಕೆ ರಮೇಶ್



ನನ್ನನ್ನು ಕವಿಯಾಗಿಸಿದ್ದು, ಆ ಒಂದು ಅಮೃತ ಶಿಲೆ . ಅದುವೇ ಹೈದರಾಬಾದ್ ನ ಸಾಲಾರ್ಜಂಗ್ ಮ್ಯೂಸಿಯಂನಲ್ಲಿರುವ ಅಮೃತ ಶಿಲೆಯ ಪ್ರತಿಮೆ ಎಂದು ಕವಿ ತನ್ನಲ್ಲಿ ಅಡುಗಿದ ಕವಿತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ…

ನಾನು ಕವಿಯಾಗಲಿಲ್ಲ. ಆದರೂ ನನ್ನೊಳಗೊಬ್ಬ ಕವಿ ಇರಬಹುದೇನೊ ಎಂಬ ಸಂಶಯ ಆಗಾಗ ಬರುವುದಿತ್ತು.ಐವತ್ತು ವರ್ಷಗಳಿಗೂ ಮೊದಲು ನಾನು ಶಿವಮೊಗ್ಗೆಯ ಸಹ್ಯಾದ್ರಿಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನನ್ನ ಹಾಸ್ಟೆಲ್ ರೂಮಿನ ಗೋಡೆಗೆ ತೂಗುಹಾಕಿದ್ದ ಕ್ಯಾಲೆಂಡರ್ ಚಿತ್ರ ನೋಡಿ ಒಂದು ಪದ್ಯ ಬರೆದಿದ್ದೆ .ಆ ಚಿತ್ರ ಹೈದರಾಬಾದ್ ನ ಸಾಲಾರ್ಜಂಗ್ ಮ್ಯೂಸಿಯಂನಲ್ಲಿರುವ ಅಮೃತ ಶಿಲೆಯ ಪ್ರತಿಮೆಯದೆಂದು ನಂತರ ತಿಳಿಯಿತು. ಹಳೆಯ ನೆನಪುಗಳನ್ನು ಕೆದಕುತ್ತ ಆ ಕವಿತೆಯನ್ನಿಲ್ಲಿ ಮತ್ತೆ ಬೆರಳಚ್ಚಿಸಿದ್ದೇನೆ.

ಪ್ರತಿಮೆ
ತನ್ನ ನೋಡದಿರಲೆಂದೇನೋ
ಕತ್ತಲ ನಡುವೆ
ನಗ್ನ! ಪೂರ್ಣ ನಗ್ನ!! ಪ್ರತಿಮೆ
(ಒಂದು ದಾರವೂ ಇಲ್ಲ )
ಪ್ರಕೃತಿ ದೇವಿಯ ಹಾಗೆ
ಯಾರ ಕಾಟ….ಶಾಪವೋ
(ನೂರಾರು ಇಂದ್ರರು ಈ ಲೋಕದೊಳಗೆ)
ನಕ್ತಂಚರಿಯಾಗಿ
ಸುತ್ತಿ….ಬೇಸತ್ತು
ಕುಳಿತಿರಬೇಕು
ಬೆಳ್ಳಗೆ
ಕಪ್ಪಿನ ನಡುವೆ ಬೆಳ್ಳಗೆ
ಮಹಾಶ್ವೇತೆಯ ಹಾಗೆ
ಕಲ್ಲಾದಹಲ್ಯೆ ಹೆತ್ತಳೆನ್ನಲೆ ?
ತೊಡೆಗಳೆರಡರ ನಡುವೆ
ಮುದ್ದು ಮಗು
ಬಂದ ದಾರಿಯಲ್ಲಿಯೇ

ಬಂದ ಹಾಗೇ
(ಉಡಿದಾರವೂ ಇಲ್ಲ)
ಬಾಯ ಎದೆ ತುದಿಗಿಟ್ಟು ಚಪ್ಪರಿಸಿದ್ದಾನೆ
ಕ್ಷೀರ ಸಾಗರದಿಂದ ತೊಟ್ಟಿಕ್ಕುತ್ತಿರಬೇಕು
ಅಮೃತ ….ಮುಗ್ದನಗು
ಮುಖದ ಮೇಲೆ
ಅವನ ಕೈ ಅವಳೆದೆಯ ಮೇಲೆ
ಪೂರ್ಣ ಸ್ವಾತಂತ್ರ್ಯ!
ತಾಯ ದೇಹರಾಜ್ಯಕ್ಕವನೆ ರಾಜ
ಮನಕೂ ಕೂಡ
ಅವಳ ಮುಖ ಶಾಂತ
ಪ್ರಶಾಂತ
ಏನು ಹೆಮ್ಮೆಯೋ ಆಕೆಗೆ ?
ಸೇಡು ತೀರಿಸಿಕೊಳ್ಳಲು ಸಿಡಿಗುಂಡು
ಸಿಕ್ಕಿರಬೇಕು
ಮಹಾ ಶಿಲ್ಪಿ….ಈ
ತಾಯ ಹೆತ್ತ ತಂದೆ.


  • ಜೆ ಕೆ ರಮೇಶ್, ತೀರ್ಥಹಳ್ಳಿ

One thought on “‘ಪ್ರತಿಮೆ’ ಕವನ – ಜೆ ಕೆ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading