ಇತ್ತಿತ್ತಲಾಗಿ ಅವಳೆಡೆಗೆ ಅವನದೊಂದು ತಣ್ಣನೆಯ ಅಸಡ್ಡೆ, ಮದುವೆಯಾಗಿ ಮೂರು ವಸಂತಗಳ ನಂತರ ಚಿಗುರೊಡೆದ ತಿರಸ್ಕಾರವಿದು. ಅವಳಿಗೆ ಸೂಕ್ಷ್ಮವಾಗಿ ಇದು ಗಮನಕ್ಕೂ ಬಂದಿದೆ. ಹೆಣ್ಣು ಜೀವ ಅದೇಷ್ಟೋ ನೊಂದು ನಿಟ್ಟುಸುರಾಗಿದೆಯೋ?. ಮೊದಲಿದ್ದ ಸಪೂರ ಮೈಮಾಟ ಮಾಯವಾಗಿ, ಸಾದುಕಪ್ಪಾಗಿ ದಪ್ಪವಾಗಿದ್ದಾಳೆ!!! ಬಳಕುವ ಬಳ್ಳಿಯಂತಿದ್ದ ಸೊಂಟದ ಸುತ್ತ ಹಿಡಿ..ಹಿಡಿಯಾಗಿ ಬೊಜ್ಜು ಜಮೆಯಾಗಿ ಜೊತು ಬಿದ್ದಿದೆ.!!! ಜೇನು ಜಾರಿ ಹೊಕ್ಕಳಕ್ಕಿಳಿದ ಹೊಟ್ಟೆಯ ಮೇಲೆ ಗೀರು ಗೀರಾದ ನೆರಿಗೆಗಳು. ನೋಡಲು ಅಸಹ್ಯ.!!! ನುಣುಪು ರೆಷ್ಮೇಯಂತಿದ್ದ ಕೂದಲುಗಳು ಅಲ್ಲಲ್ಲಿ ತಮ್ಮ ಜಾಗ ಬಿಟ್ಟು ನಡೆದು,ಬೆಳ್ಳಿ ಕೂದಲುಗಳು ಇಣುಕಿ ಕಣ್ಣಾಕುತಿವೆ!!! ಮೊದಲು ಮೈ ಮುಚ್ಚಿ, ಅಲ್ಲಲ್ಲಿ ದೇಹ ದರ್ಶನ ಮಾಡಿಸುತ್ತಿದ್ದ ಡ್ರೇಸ್ಸುಗಳು ಕಪಾಟು ಸೇರಿವೆ. ಇವಳ ಇವಾಗಿನ ಸೈಜಿಗೆ ಅವು ಹೊಂದದೆ ಕನಲಿ ಕಂಗಾಲಾಗಿ, ಗೂಡು ಸೇರಿವೆ.!!

ಫೋಟೋ ಕೃಪೆ : romper
ಅವಳ ನೋಡಿದರೆ ಮಾದಕತೆ ಜರ್ರನೆ ಇಳಿದು “ತಿರಸ್ಕಾರ” ಹಬೆಯಾಡುತಿದೆ…ಮೊದಲಿನ ಉತ್ತೇಜನ ಗಂಗೆ ಪಾಲು…
ಸಪೂರವಾದವಳನ್ನ ಊರೂರು ಹುಡುಕಿ ಹೆಕ್ಕಿ ನೀನೆ ತಾನೆ ಮದುವೆಯಾದದ್ದು?. ಅವಳು ಕಾಪಿಟ್ಟುಕೊಂಡ ಸೌಂದರ್ಯ, ಕನ್ಯತ್ವವನ್ನೆ ನೀನೆ ತಾನೆ ಕಬಳಿಸಿದ್ದು?. ಮದುವೆ, ಜೀವನ ನೊಗಕ್ಕೆ ನೀನೆ ತಾನೆ ಅವಳ ಹೆಗಲ ಸಹಾಯ ಪಡೆದಿದ್ದು!?. ತನ್ನವರನ್ನು ಬಿಟ್ಟು ಬಂದವಳನ್ನ, ಕೊನೆತನಕ ಕಾಪಾಡುವೆನೆಂದು ಅಗ್ನಿಸಾಕ್ಷಿಯಾಗಿ ಮಾಂಗಲ್ಯ ಕಟ್ಟಿದವನು..ನೀನಲ್ಲವೆ!!? ನಿನ್ನಲ್ಲಿ ಹೆಡೆಯೆತ್ತಿದ ಹರೆಯದ ದಾಹವನ್ನ, ಹೊತ್ತಿಲ್ಲದ ಹೊತ್ತಲ್ಲಿ ನಿನ್ನಲ್ಲೆದ್ದ ಉತ್ತೇಜನವನ್ನ ಅವಳೆ ತಾನೆ ತಣ್ಣಗಾಗಿಸಿ, ಅನುಭವ ನೀಡಿದವಳು!!? ತನ್ನ ಇಷ್ಟಕಷ್ಟಗಳನ್ನ ಬದಿಗೊತ್ತಿ, ನಿನಗಾಗಿ ಎತ್ತಿನಂತೆ ದುಡಿದು, ತುತ್ತು ತಿನಿಸಿದವಳಲ್ಲವೆ!? ಕೇವಲ ಅವಳ ದೇಹ ಸೌಂದರ್ಯ ಕುಂದಿತ್ತೆಂದು “ತಿರಸ್ಕಾರ” ಬೆಳೆಸಿಕೊಳ್ಳುವುದು ನ್ಯಾಯವಾ? ನಿನ್ನ ಸಂತಾನ ಬೆಳೆಸಲು, ತನ್ನ ಸೌಂದರ್ಯವನ್ನು ಬದಿಗೊತ್ತಿ ಹೊಟ್ಟೆಯಲ್ಲಿ ಚಿಗುರೊಡೆದ ನಿನ್ನ ಕುಡಿಗೆ ಆಸರೆಯಾದಳು.
ಫೋಟೋ ಕೃಪೆ : google
ಯಮಯಾತನೆ ಅನುಭವಿಸಿ, ಸಹಜವಾಗಿಯೋ ಅಥವಾ ಹೊಟ್ಟೆಗೆ ಕತ್ತರಿ ಹಾಕಿಕೊಂಡೋ ಮಗು ಹೆತ್ತು ಕೈಗಿಟ್ಟು, ನಿನಗೆ “ಅಪ್ಪ”ನಾಗುವ ಪ್ರಮೋಷನ್ ಕೊಟ್ಟಳು. ಹೆರಿಗೆಯ ನಂತರದ ಅವಳ ಹೊಟ್ಟೆಯ ಮೇಲಿನ “ಹೆರಿಗೆಯ ನೆರಿಗೆ”ಗಳಿಗೆ ನಿನ್ನ ಮಗು ಮತ್ತು ನೀನೆ ಕಾರಣೀಕರ್ತ. ಅವಳ ದೇಹದಲ್ಲಾದ ಹಾರ್ಮೋನುಗಳ ಏರುಪೇರಿನಿಂದ ತೂಕ ಹೆಚ್ಚಾಗಿ, ಕೋಮಲ ಬಣ್ಣ ನಶಿಸಲು ಕಾರಣೀಕರ್ತನೂ ನೀನೆ. ನಿನ್ನ ಮಕ್ಕಳ ಸಾಕಿ ಸಲುಹಲು, ನಿನ್ನ ಗಳಿಕೆಯಲ್ಲಿ ನಿಮ್ಮ ಹೊಟ್ಟೆ ಹೊರೆಯುತಿರುವವಳು ಅವಳಲ್ಲವೆ. ಹಗಲು- ರಾತ್ರಿಯನ್ನದೆ, ಕಾಯಿಲೆ, ಹಬ್ಬ ಹರಿದಿನ ಕಡೆಗಾಣಿಸಿ, ಒಮ್ಮೇಯು ರಜೆ ಪಡೆಯದೇ ನಿಮ್ಮ ಸೇವೆ ಮಾಡುತ್ತಿರುವವಳವಳು.
ನಿನ್ನ ಇರುಸು-ಮುರುಸು, ಕೋಪ ನುಂಗಿಕೊಂಡು ಬದುಕು ದೂಡುತ್ತಿರುವಳು. ನಿನ್ನ ಬಾಳ ಬಂಡಿಗೆ ಚಕ್ರವಾಗಿ. ದಣಿವರಿಯದ ಜೀವವದು. ಮೊಗೆಮೊಗೆದು ಪ್ರೀತಿ ಕೊಡುವುದಷ್ಟೇ ಗೊತ್ತು, ಇನ್ನೇಲ್ಲಿಯ ಸೌಂದರ್ಯ. ಇವಾಗ ನಿನಗೆ ಉದ್ರೇಕವಾಗುತ್ತಿಲ್ಲವೆಂದು, ಕೇವಲ ನಿನ್ನ “ಕಾಮದಾಹ”ದ ದೇಹದ ಚಿಂತೆಗೆ ಅವಳನ್ನು ತಿರಸ್ಕರಿಸುವ ಮೊದಲು, ಅವಳ ತ್ಯಾಗವನ್ನೊಮ್ಮೆ ನೀನೊಬ್ಬನೆ ಕೂತು ಯೋಚಿಸು. ಅವಳ ಈಗಿನ ಎಲ್ಲದಕ್ಕೂ ನೀನೆ ಕಾರಣ. ಅವಳ ಭವಿಷ್ಯದ ಬದುಕಿನ ರೂವಾರಿಯೂ ನೀನೆ. ನಿನ್ನ ತಂದೆಯು ನಿನ್ನ ಹಾಗೆ ಅಂದುಕೊಂಡಿದ್ದರೆ, ನಿನ್ನ ತಾಯಿಯ ಗತಿಯೇನಾಗುತಿತ್ತು? ನೀನೆಲ್ಲಿರುತ್ತಿದ್ದೆ? ಹೆಣ್ಣು ತ್ಯಾಗಮಯಿ, ಮಮತಾಮಯಿ.
ಈ ಬರಹ ಹೆಂಡತಿಯನ್ನು ಕೇವಲ ಸೌಂದರ್ಯ, ಕಾಮದ ನೆಪವೊಡ್ಡಿ ತಿರಸ್ಕರಿಸುವ ಎಲ್ಲ ಗಂಡಂದಿರಿಗೂ ಅರ್ಪಣೆ…
- ಡಾ.ಪ್ರಕಾಶ ಬಾರ್ಕಿ, ಕಾಗಿನೆಲೆ.

