#ಶರಾವತಿ_ಕಣಿವೆ_ಯೋಜನೆಯೇ ಒಂದು ಸಾಹಸಮಯ, ಅಭೂತಪೂರ್ವ ಮತ್ತು ಅದ್ಭುತವಾದದ್ದು. ಅಂದು ದಟ್ಟ ಕಾಡಿನ ನಡುವೆ ಈ ಯೋಜನೆಯ ಕಾರ್ಯಗಳನ್ನು ಮಾಡುವಾಗ ಬಂದೊದಗಿದ ಸಂಕಷ್ಟ ಮತ್ತು ಸವಾಲುಗಳು ಅಷ್ಟಿಷ್ಟಲ್ಲ. ಆ ಪರಿಶ್ರಮದ ಹಿಂದೆ ಎಂ.ಎಸ ತಿರುಮಲೆ ಅವರ ಪಾತ್ರವಿದೆ. ಎಂ.ಎಸ ತಿರುಮಲೆ ಅವರ ಬಗ್ಗೆ ಹಾಗು ಶರಾವತಿ ಜಲವಿದ್ಯುತ್ ಯೋಜನೆಯ ಕುತೂಹಲಕಾರಿ ವಿಷಯಗಳನ್ನು ಲೇಖಕರಾದ ಶಿವಕುಮಾರ್ ಬಾಣಾವರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ…
ಅದು ಅರವತ್ತರ ದಶಕದ ಆರಂಭ. ಶರಾವತಿಯಲ್ಲಿ ಆ ಕಾಲಕ್ಕೆ ಅತ್ಯಂತ ಬೃಹತ್ ಎನ್ನಬಹುದಾದ ವಿದ್ಯುತ್ ಉತ್ಪಾದನಾ ಕೇಂದ್ರದ ಸ್ಥಾಪನೆಗಾಗಿ #ಲಿಂಗನಮಕ್ಕಿ ಮತ್ತು ತಲಕಳಲೆ ಜಲಾಶಯಗಳು ಭರದಿಂದ ಪೂರ್ಣಗೊಳ್ಳುತ್ತಿದ್ದ ಕಾಲ.ಶರಾವತಿಯಲ್ಲಿ ವಿದ್ಯುದಾಗಾರದ ನಿರ್ಮಾಣವೂ ಭರದಿಂದ ಮುಂದುವರೆದಿತ್ತು.
#ವೊಡನ್_ಬೈಲು ಎಂಬಲ್ಲಿ ಸರ್ಜ್ ಟ್ಯಾಂಕ್ ನಿರ್ಮಾಣವೂ ಮುಗಿಯುತ್ತಾ ಬಂದಿತ್ತು. ಇದೀಗ ಸರ್ಜ್ ಟ್ಯಾಂಕಿನಿಂದ ವಾಲ್ವ್ ಹೌಸಿಗೆ ಅಲ್ಲಿಂದ ಮುಂದೆ ಕಣಿವೆಯಲ್ಲಿ ಒಂದೂವರೆ ಸಾವಿರ ಅಡಿ ಕೆಳಗಿನ ವಿದ್ಯುದಾಗಾರಕ್ಕೆ ಚಿತ್ರದಲ್ಲಿ ತೋರಿಸಿದ ಪೆನ್ಸ್ಟಾಕ್ ಪೈಪಗಳನ್ನು ಅಳವಡಿಸುವ ಕೆಲಸ ಬಾಕಿಯಿತ್ತು.

ಆಗ ಇಲ್ಲಿ ಈ ಕಾಮಗಾರಿಗಾಗಿ ಕಾಡನ್ನು ಕಡಿದು ನೆಲವನ್ನು ಅಗೆಯುತ್ತಲೇ ಆಘಾತ ಕಾದಿತ್ತು, ಅದೆಂದರೆ ಅಲ್ಲಿನ ನೆಲ ಸಾಕಷ್ಟು ಘಟ್ಟಿಯಾಗಿರಲಿಲ್ಲ. ಅಪಾರ ಶಕ್ತಿಯುಳ್ಳ ಪೈಪ್ಗಳನ್ನು ಅಳವಡಿಸಿದರೆ ಇಡಿ ಗುಡ್ಡವೇ ಜಾರಿ,ಕುಸಿದು ಹೋಗುವ ಅಪಾಯವಿತ್ತು.ಒಂದು ಸಾವಿರದ ನಾಲ್ಕು ನೂರಾ ಹನ್ನೊಂದು ಮೀಟರ್ ಉದ್ದದ ಪೈಪಿನಲ್ಲಿ ಒಂದೂವರೆ ಸಾವಿರ ಅಡಿ ಒತ್ತಡದಲ್ಲಿ (ಹೆಡ್ ) ವಿದ್ಯುದಾಗಾರಕ್ಕೆ ಮೇಲೆ ಚಿತ್ರದಲ್ಲಿ ತೋರಿಸಿದ ಪೆನ್ಸ್ಟಾಕ್ ಪೈಪಗಳನ್ನು ಅಳವಡಿಸುವ ಕೆಲಸ ಬಾಕಿಯಿತ್ತು.ಈ ಪೈಪ್ಗಳ ಅಗಲ ಕೇಳಿದರೆ ಆಶ್ಚರ್ಯವಾದೀತು! ಇದರೊಳಗೆ ಆನೆಗಳು ಸುಲಭವಾಗಿ ತೂರಬಹುದು. ಇವುಗಳ ವ್ಯಾಸ ೨.೪೮ ಮೀಟರ್ ಅರ್ಥಾತ್ ಸುಮಾರು ಎಂಟು ಅಡಿ. ಒಂದೊಂದು ಪೈಪೂ ಒಂದು ಲಕ್ಷದ ಇಪ್ಪತ್ತುನಾಲ್ಕು ಸಾವಿರ ಬಿಹೆಚ್ ಪಿ ಪವರ್ ಉತ್ಪತ್ತಿ ಮಾಡಬಲ್ಲ ಟರ್ಬೈನ್ ಗಳನ್ನು ಮುನ್ನೂರು ಆರ್ ಪಿ ಎಂ ಗಳಷ್ಟು ತಿರುಗಿಸುವ ನೀರನ್ನು ಹೊತ್ತೊಯ್ಯಬೇಕು.ಅಕಸ್ಮಾತ್ ಜನರೇಟರ್ ಹಠಾತ್ ನಿಂತರೆ ಉಂಟಾಗುವ ಬಲಿಷ್ಠ ಕ್ಷೋಭೆಯನ್ನು (ವಾಟರ್ ಹ್ಯಾಮ್ಮರ್) ತಡೆದುಕೊಳ್ಳಬೇಕು. ಇಂತಹ ಒಂದಲ್ಲ, ಹತ್ತು ಸಾಲು ಪೈಪ್ ಗಳು .
ಒಂದೂವರೆ ಸಾವಿರ ಅಡಿ ಎತ್ತರದಿಂದ ಒತ್ತಿ ಬರುವ ಜಲಶಕ್ತಿಯನ್ನು ತಡೆದು ನಿಲ್ಲಿಸುವಂತೆ ಆ ಪೈಪ್ಗಳನ್ನು ಅಳವಡಿಸುವ ಬಗೆ ಹೇಗೆಂಬ ಚಿಂತೆ ಹೆಚ್ ಇ ಸಿ ಪಿ ಇಂಜಿನಿಯರ್ ಗಳನ್ನು ಕಾಡಿತು ಕೊನೆಗೆ ಅವರು ಇದಕ್ಕೆ ಕಂಡುಕೊಂಡ ಪರಿಹಾರವೇ ಪೈಲ್ ಫೌಂಡೇಶನ್ . ಆದರೆ ಈ ರೀತಿಯ ಫೌಂಡೇಶನ್ ಗಳನ್ನು ಕೇವಲ ಬಹು ಮಹಡಿ ಕಟ್ಟಡ,ವಿಶಾಲ ನದಿಗಳ ಸೇತುವೆಗಳಿಗೆ ಬಳಸಲಾಗುತ್ತಿತ್ತೇ ವಿನಃ ಪೈಪ್ ಲೈನ್ ಅಳವಡಿಸಲು,ಅದೂ ಬೆಟ್ಟದ ಇಳಿಜಾರಿನಲ್ಲಿ ಅದುವರೆಗೂ ಬಳಸಿದ ಉದಾಹರಣೆಗಳಿರಲಿಲ್ಲ.ಆದರೆ ರಾಜ್ಯದ ಇಂಜಿನಿಅರ್ಗಳು ಬಹುವಿಧದಲ್ಲಿ ಚರ್ಚಿಸಿ ಅದನ್ನು ಬಳಸುವ ನಿರ್ಣಯಕ್ಕೆ ಬಂದಿದ್ದರೂ ಕೇಂದ್ರ ಸರ್ಕಾರದ ಇಂಜಿನಿಯರುಗಳಿಗೆ,ಅದರಲ್ಲೂ ಕೇಂದ್ರ ನೀರಾವರಿ ಸಚಿವರಾಗಿದ್ದ ಖ್ಯಾತ ಇಂಜಿನಿಅರ್ ಕೆ.ಎಲ್.ರಾವ್ ರವರಿಗೆ ಈ ಕುರಿತು ಸಂದೇಹಗಳಿದ್ದವು. ಶರಾವತಿ ಯೋಜನೆ ಅಮೇರಿಕಾದ ಸಾಲ ಸಹಾಯದ ಮೂಲಕ ಕೈಗೆತ್ತಿಕೊಂಡಿದ್ದ ಕಾರಣದಿಂದ ಮತ್ತು ಆಢಳಿತಾತ್ಮಕ ಕಾರಣದಿಂದ ಸಿ.ಬಿ.ಐ.ಪಿ (ಕೇಂದ್ರ ಸರ್ಖಾರೀ ಸಂಸ್ಥೆ) ಯಾ ಒಪ್ಪಿಗೆ ತೆಗೆದುಕೊಳ್ಳಲೇ ಬೇಕಿತ್ತು. ಕೆ.ಎಲ್.ರಾವ್ ಮತ್ತು ಕೇಂದ್ರ ಇಂಜಿನಿಯರುಗಳ ಪ್ರಕಾರ, ಬತ್ತವನ್ನು ಅಗೆದು ಸಮತಟ್ಟಾದ ಇಳಿಜಾರನ್ನು ನಿರ್ಮಿಸಿ,ಅದಕ್ಕೆ ಕಾಂಕ್ರೀಟ್ ಬಳಸಿ,ಹಗುರವಾದ ಆಂಕರ್ ಪಾಯಿಂಟ್ಗಳನ್ನು ಅಳವಡಿಸಿ ಈ ಬೃಹತ್ ಪೆನ್ಸ್ಟಾಕ್ಗಳನ್ನು ಇಳಿಸಬೇಕಿತ್ತು. ಆದರೆ ಮಲೆನಾಡು ಮಧ್ಯದ ಈ ಗುಡ್ಡದಲ್ಲಿ ಕೃತಕ ಕಾಂಕ್ರೀಟ್ ಇಳಿಜಾರು ನಿರ್ಮಿಸಿದರೆ ಇಡಿ ಗುಡ್ಡವೇ ಇಳಿಜಾರು ಸಮೇತ ಕುಸಿದು ಹೋಗುವುದೆಂಬುದು ರಾಜ್ಯದ ಇಂಜಿನಿಯರುಗಳ ಆತಂಕ. ಈ ಅಭಿಪ್ರಾಯಬೇಧದಿಂದಾಗಿ ಯೋಜನೆಯೇ ವಿಳಂಬಗೊಳ್ಳುವ ಸಾಧ್ಯತೆಯಿತ್ತು.
ವಿವಾದ ತಾರಕಕ್ಕೇರುವ ಸಂದರ್ಭದಲ್ಲಿ,ಕೇಂದ್ರ ಸರ್ಖಾರವು ಇದಕ್ಕೆ ವಿಶೇಷ ಕಾರ್ಯದರ್ಶಿಯಾಗಿ , ಶ್ರೀಯುತ ಎಂ.ಎಸ ತಿರುಮಲೆ ಎಂಬ ಕರ್ನಾಟಕದವರೇ ಆದ, ಸುಪ್ರಸಿದ್ದ , ನಿವೃತ್ತ , ಇಂಜಿನಿಯರೊಬ್ಬರನ್ನು ನೇಮಿಸುತ್ತದೆ. #ಎಂ_ಎಸ್_ತಿರುಮಲೆಯವರು ಅತ್ಯಂತ ತಜ್ಞ ಇಂಜಿನಿಯರಾಗಿದ್ದು ಒರಿಸ್ಸಾದ ಪ್ರಖ್ಯಾತ ಹಿರಾಕುಡ್ ಡ್ಯಾಮಿನ ನಿರ್ಮಾಣದ ವೇಳೆ ಉದ್ಭವಿಸಿದ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿ ಆ ಜಲಾಶಯವು ಪೂರ್ಣಗೊಳ್ಳುವಲ್ಲಿ ತಮ್ಮ ಪ್ರತಿಭೆ ಮೆರೆದಿದ್ದರು.ಇಂದಿಗೂ ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿರುವುದನ್ನು ನಾವು ನೋಡಬಹುದು.
ಇದೇ ತರಹ ತುಂಗಭದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲೂ ವಿಶೇಷ ಸಲಹೆಗಾರರಾಗಿ ತಿರುಮಲೆಯವರು ಅದರ ನಿರ್ಮಾಣಕ್ಕೆ ತಮ್ಮ ದಕ್ಷತೆಯನ್ನು ಧಾರೆಯೆರೆದಿದ್ದರು.ಇಂತಹ ಶ್ರೇಷ್ಠ ಇಂಜಿನಿಯರ್ ಶರಾವತಿಯ ನಿರ್ಮಾಣದ ಈ ಸಂದರ್ಭದಲ್ಲಿ ಸಂಪೂರ್ಣ ಅಂಧರಾಗಿದ್ದರು. ಅವರಿಗೆ ಓದಲು,ಬರೆಯಲು ಸಹಾಯಕರಾಗಿ ಒಬ್ಬ ಇಂಜಿನಿಯರ್ ಸಹಾಯಕನನ್ನು ನೇಮಿಸಲಾಗಿತ್ತು. ಅವರು, ಎಲ್ಲ ವಿವರಗಳನ್ನೂ ಪರಿಶೀಲಿಸಿ,ಕರ್ನಾಟಕದ ಇಂಜಿನಿಯರುಗಳ ಸಲಹೆಯಂತೆ ಪೈಲ್ ಫೌಂಡೇಶನ್ ಅಲವಡಿಸುವುದೇ ಸೂಕ್ತ್ವೆಂಬ ಅಭಿಪ್ರಾಯ ತಳೆಯುತ್ತಾರೆ. ಆದರೆ ಸ್ವತಃ ಪ್ರತಿಭಾವಂತ ಇಂಜಿನಿಯರ್ ಆಗಿದ್ದ ಕೇಂದ್ರ ಸಚಿವ ಕೆ.ಎಲ್ ರಾವ್ ರವರನ್ನು ಒಪ್ಪಿಸುವುದು ಹೇಗೆ ಎಂಬುದೇ ಸಮಸ್ಯೆಯಾಗಿತ್ತು.ಅದಕ್ಕೂ ತಿರುಮಲೆಯವರ ಸೇವೆಯನ್ನೇ ಬಳಸಿಕೊಳ್ಳಲಾಯಿತು. ಕೆ.ಎಲ್ ರಾವ್ ರವರು ಸಚಿವರಾಗುವ ಬಹಳ ಮೊದಲು ಎಂ.ಎಸ ತಿರುಮಲೆಯವರ ಸಹಾಯಕರಾಗಿ ವೃತ್ತಿ ನಿರ್ವಹಿಸಿದ್ದರು.ಹಾಗಾಗಿ ಅವರೆಂದೂ ತರುಮಲೆಯವರಿಗೆ ಎದಿರಾಡುತ್ತಿರಲಿಲ್ಲ.ಜೊತೆಗೆ ರಾವ್ ರವರಿಗೆ ತಿರುಮಲೆಯವರ ಇಂಜಿನಿಯರಿಂಗ್ ಸಾಮರ್ಥ್ಯದ ಆಳ,ಅಗಲಗಳ ಅರಿವಿತ್ತು.ಈಗ,ತಿರುಮಲೆಯವರೇ ಪೈಲ್ ಫೌಂಡೇಶನ್ ಹೇಗೆ ತರ್ಸ್ಟ ಬ್ಲಾಕ್ ಗಳನ್ನು ಪೆನ್ ಸ್ಟಾಕ್ ಹಿಡಿದಿಡುವಂತೆ ಮಾಡಬಲ್ಲದೆಂಬುದನ್ನು ಡ್ರಾಯಿಂಗ್ ಗಳ ಮೂಲಕ ವೈಜ್ಞಾನಿಕವಾಗಿ ವಿವರಿಸುತ್ತಾರೆ. ನಂತರ ಕ್ರೋಢಿಕೃತ ಅಭಿಪ್ರಾಯದ ಮೇರೆಗೆ , ರೋಡಿಯೋ ಹಜರತ್ ಎಂಬ ಕಂಪನಿಗೆ ಪೈಲ್ ಫೌಂಡೇಶನ್ ಹಾಕಿ,ತರ್ಸ್ಟ್ ಬ್ಲಾಕ್ ನಿರ್ಮಿಸಿ ಪೆನ್ ಸ್ಟಾಕ್ ಪೈಪ್ ಅಳವಡಿಸಿವ ಗುತ್ತಿಗೆ ನೀಡಲಾಗುತ್ತದೆ. ಇಲ್ಲಿ ಸಹ್ಯಾದ್ರಿಯ ತುದಿಯಿಂದ ಭೀಮಗಾತ್ರದ ಈ ಕೊಳಾಯಿಗಳಲ್ಲಿ ಅಪಾರ ಜಲಶಕ್ತಿ ವಿದ್ಯುದಾಗಾರಕ್ಕೆ ಹರಿದು,ರಕ್ಕಸ ಜಲಯಂತ್ರಗಳನ್ನು ತಿರುಗಿಸಿ ಜೋಗದ ಸಿರಿ ಬೆಳಕನ್ನು ರಾಜ್ಯದ ಮನೆಮನೆಗೆ ತಲುಪಿಸುತ್ತದೆ.
ನಾವು, ನೀವು ನಮ್ಮ ಮನೆ ಬೆಳಗಿದಾಗಳಾದರೂ ಎಂ.ಎಸ ತಿರುಮಲೆಯಂತವರ ಅಪಾರ ಪರಿಶ್ರಮ ,ಶ್ರದ್ಧೆ,ಸೇವೆ ಈ ಬೆಳಕಿನ ಹಿಂದೆ ಅಡಗಿದೆಯೆಂಬುದನ್ನು ನೆನೆಸಿಕೊಂಡಾದರೂ ಅವರಿಗೆ ಕೃತಜ್ಞತೆ ಹೇಳಬಹುದೇನೋ.ಯಾಕೆಂದರೆ ತಿರುಮಲೆಯವರ ಪ್ರತಿಮೆ ಹಿರಾಕುಡ್ ಡ್ಯಾಮ್ ಮೇಲಿದೆ. ಆದರೆ ಶರಾವತಿಯಲ್ಲಿ,ಅವರ ಪ್ರತಿಮೆಯಿರಲಿ,ಅವರ ಹೆಸರೂ ಇಲ್ಲ ಎನ್ನುವುದೇ ಬೇಸರದ ಸಂಗತಿ.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
