ಕರ್ನಾಟಕದ ಸಾಧಕಿಯರು (ಭಾಗ ೪) : ದಾಂಡೇಲಿಯ ಕೌಸಲ್ಯ ರವೀಂದ್ರ 



ವನವಾಸಿಗಳ ಬದುಕಲ್ಲಿ ಬೆಳಕು ತಂದವರು ದಾಂಡೇಲಿಯ ಕೌಸಲ್ಯ ರವೀಂದ್ರ ಅವರು. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದವರಾದವರು. ೧೯೯೦ ರಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಮೂಲಕ ಸೇವಾ ಬದುಕಿಗೆ ಕಾಲಿಟ್ಟವರು. ಅವರ ಬಗ್ಗೆ ರಘುರಾಂ ಅವರು ಕಲೆ ಹಾಕಿದ್ದಾರೆ.ಓದಿ ನಿಮ್ಮ ಅಭಿಪ್ರಾಯ ತಿಳಿಸಿ…

ಹಿಂದು ಸೇವಾ ಪ್ರತಿಷ್ಠಾನವು  ಹಲವು ಸೇವಾ ಯೋಜನೆಗಳನ್ನು ನಡೆಸುತ್ತಿದೆ.    ಇವುಗಳಲ್ಲಿ ವನವಾಸಿ ಕಲ್ಯಾಣದ ಮಹಿಳಾ ವಿಭಾಗದ ದಕ್ಷಿಣ ಭಾರತದ ಜವಾಬ್ದಾರಿಯನ್ನು ಹೊತ್ತ ಕೌಸಲ್ಯ ಅವರು #ದಾಂಡೇಲಿಯಲ್ಲಿರುವ ವನವಾಸಿ ಹೆಣ್ಣು ಮಕ್ಕಳ ಹಾಸ್ಟೆಲ್ ಬಳಿಯಲ್ಲೇ ವಾಸವಿದ್ದಾರೆ.  ಮೂಲತಃ ಮಂಡ್ಯ ಜಿಲ್ಲೆಯ #ಪಾಂಡವಪುರದವರಾದ ಇವರು ೧೯೯೦ ರಲ್ಲಿ  ಈ ಸೇವಾ ಕಾರ್ಯಕ್ಕೆ ಆಗಮಸಿದರು.  ಬರಿ ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಓದಿದರೂ ಕೂಡ, ಬದುಕಿನ  ಪ್ರಯಾಣದಲ್ಲಿ  ಸೇವಾ ಕ್ಷೇತ್ರವನ್ನು  ಆಯ್ಕೆ ಮಾಡಿಕೊಂಡು,
ಅವರ ಬದುಕಿನ 24×7 ಸೇವೆ ವನವಾಸಿಗಳ ಕಲ್ಯಾಣಕ್ಕೆಂದೇ ಮೀಸಲು ಇಟ್ಟಿದ್ದಾರೆ.

ಅವರು ೧೯೯೦ ರಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತಿಯಾಗಿ ಸೇರಿದರು.  #ತಿಪಟೂರಿನಲ್ಲಿ ಎರಡು ವರ್ಷ ತರಬೇತಿ,  ನಂತರ ಗುಂಡೊಳ್ಳಿ ಎಂಬ ಗ್ರಾಮದಲ್ಲಿ ಶಿಶುಮಂದಿರ ನಡೆಸಿ, ನಂತರ ಧಾರವಾಡದ ಶಿವನಗರಕ್ಕೆ ಬಂದರು.   ಇದು ಅತ್ಯಂತ ಹಿಂದುಳಿದ ಪ್ರದೇಶ.  ಇವರನ್ನು ಕಂಡರೆ ಅಲ್ಲಿನ ಜನರು ಹೆದರಿ ಓಡಿ ಹೋಗುತ್ತಿದ್ದರಂತೆ.  ಅವರ ಬಳಿ ಮಗುವನ್ನು ಹೇಗೆ ಶಿಶುಮಂದಿರಕ್ಕೆ ಕಳುಹಿಸಿ ಎಂದು ಕೇಳಲು ಆಗುತ್ತೆ?  ಹೇಗೋ ಮಾಡಿ ಕರೆದುಕೊಂಡು ಬಂದರೂ ನಂತರ ದನ ಮೇಯಿಸುವುದಕ್ಕೆ ಜನ ಬೇಕು ಎಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರಂತೆ.

ವನವಾಸಿಗಳು ದಟ್ಟ ಕಾಡಿನಲ್ಲಿ ಬದುಕುತ್ತಿದ್ದರು.  ಅವರ ಹಾಡಿಯ(ವಾಸಸ್ಥಾನ) ಬಳಿಯಲ್ಲೇ  ಇವರು ಗುಡಿಸಲು ಕಟ್ಟಿಕೊಂಡು ವಾಸ ಮಾಡಲು ಪ್ರಾರಂಭ ಮಾಡಿದರು.  ಅಲ್ಲಿಯ ಜನರ ಮುಗ್ಧತೆ ಇವರನ್ನು ಅಲ್ಲಿ ಕಟ್ಟಿಹಾಕಿ, ಅವರ ಬದುಕನ್ನು  ವನವಾಸಿಗಳ ಕಲ್ಯಾಣಕ್ಕೆಂದೇ ಮೀಸಲಿಡಬೇಕು ಎಂದು ನಿರ್ಧರಿಸಿದರು.

ಮೊದಲು ಅಲ್ಲಿನ ಮಹಿಳೆಯರಲ್ಲಿ ಸ್ವಚ್ಛತೆಯ, ಪೌಷ್ಟಿಕ ಆಹಾರ, ಉಳಿತಾಯದ ಕುರಿತು ಅರಿವು ಮೂಡಿಸುವ ಯತ್ನ ಮಾಡಿದರು.  ವಸವಾಸಿಗಳು ಪಶುಸಂಗೋಪನೆಯ ಮೇಲೆ ಮಾತ್ರ  ಅವಲಂಬಿಸಿದ್ದರು. ವನವಾಸಿಗಳಿಗೆ  ಉಳಿತಾಯದ ಮಾರ್ಗ ತಿಳಿಸಿ, ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದರು.  ಆ ಮೂಲಕ ಅವರೆಲ್ಲ ವಾರಕ್ಕೆ ಕನಿಷ್ಠ೧೦ ರೂಪಾಯಿಯನ್ನಾದರೂ ಉಳಿಸುವಂತೆ ಮಾಡುವ ಕೆಲಸವನ್ನು  ಮಾಡಿದರು. ಕ್ರಮೇಣ ಶಿಕ್ಷಣದ ಮಹತ್ವದ  ಬಗ್ಗೆ ಅರಿವು ಮೂಡಿಸಿದರು.  ಇವರ ಸತತ ಪರಿಶ್ರಮದ ಫಲವಾಗಿ ಅವರು ತಮ್ಮ ಮಕ್ಕಳನ್ನು ಓದಿಸಲು ಮುಂದಾದರು. ಮೊದಲು ಒಂದಕ್ಷರವನ್ನೂ ಓದಿರದ ವನವಾಸಿಗಳಲ್ಲೇ ಈಗ ಬಿಎ, ಬಿಕಾಂ, ಬಿಎಸ್ಸಿ ಪದವಿ ಪಡೆದವರಿದ್ದಾರೆ. ಪೊಲೀಸ್ ಇಲಾಖೆ, ಮಿಲಿಟರಿಯಲ್ಲೂ ಕೆಲಸಕ್ಕೆ ಸೇರಿದ್ದಾರೆ.

೨೦೦೦  ನೇ ಇಸವಿಯಲ್ಲಿ ರವೀಂದ್ರ ಅವರನ್ನು ಮದುವೆಯಾಗಿ ನಂತರವೂ #ವನವಾಸಿ_ಕಲ್ಯಾಣ ಕೆಲಸವನ್ನು  ಮುಂದುವರಿಸಿದರು.  ಈ ಬದುಕಿನಲ್ಲಿ ಅವರು  ಸಂತೃಪ್ತಿಯನ್ನು ಕಾಣುತ್ತಿದ್ದಾರೆ.   ಹಿಂದು ಸೇವಾ ಪ್ರತಿಷ್ಠಾನದ ದಿವಂಗತ ಪ್ರಕಾಶ್ ಜೀ ಕಾಮತ್ ಮತ್ತು ಶ್ರೀಧರ ಸಾಗರ್ ಮುಂತಾದ ಹಿರಿಯರ  ಮಾರ್ಗದರ್ಶಕರ ಬಳಿ ಕೆಲಸದಲ್ಲಿ  ತೊಡಗಿಸಿಕೊಂಡು  ವನವಾಸಿ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ  ಕೆಲಸಮಾಡುತ್ತಿದ್ದಾರೆ.



ಇವರೆಲ್ಲರ ಪ್ರಯತ್ನದಿಂದ ಅಲ್ಲಿ ಈಗ  ಬದಲಾವಣೆಯ ಗಾಳಿ ಬೀಸಲು ಪ್ರಾರಂಭ  ಆಗಿದೆ. ಈಗ ಇವರು ವಾಸವಿರುವ ಉತ್ತರ ಕನ್ನಡದ ದಾಂಡೇಲಿಯಲ್ಲಿರುವ ವನವಾಸಿ ಹೆಣ್ಣು ಮಕ್ಕಳ ಹಾಸ್ಟೇಲ್ ನಲ್ಲಿ ೪೦ -೫೦ ಮಕ್ಕಳು ವಾಸವಿದ್ದಾರೆ! ಎಸ್ ಎಸ್ ಎಲ್ ಸಿಯ ನಂತರ ಅವರನ್ನು ಮೈಸೂರಿನ ಕುವೆಂಪುನಗರದಲ್ಲಿರುವ ಹಾಸ್ಟೆಲ್ಗೆ ಕಳಿಸಿ, ಹೆಚ್ಚಿನ ಶಿಕ್ಷಣ ಕೊಡಿಸುತ್ತಿದ್ದಾರೆ.

(ಫೋಟೋ ಕೃಪೆ : oneindia)


  • ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading