ಮಹಿಳಾ ಪ್ರಧಾನ ಸಿನಿಮಾಗಳು ನಮ್ಮಲ್ಲಿ ಬರುವುದು ತೀರಾ ವಿರಳ. ಶೇರ್ನಿ ಸಿನಿಮಾದಲ್ಲಿ ಯಾವುದೇ ಹಾಡು – ಟಪಾಗುಂಚ್ಚಿ ಸ್ಟೆಪ್ ಗಳು ಇರದೇ ಇರಬಹುದು, ಆದರೆ ಕತೆ ಗಟ್ಟಿಯಾಗಿದ್ದರೇ ಸಿನಿಮಾ ಗೆಲ್ಲುತ್ತದೆ ಎನ್ನುವುದಕ್ಕೆ ವಿದ್ಯಾಬಾಲನ್ ಅಭಿನಯದ ಈ ಸಿನಿಮಾವೇ ಸಾಕ್ಷಿ.ಅಮೆಜಾನ್ ಪ್ರೈಮ್ ನಲ್ಲಿ ಸದ್ದು ಮಾಡುತ್ತಿರುವ ‘ಶೇರ್ನಿ’ ಒಮ್ಮೆ ನೋಡಿ…
ನನ್ನಜ್ಜ ಬ್ರಿಟಿಷ್ ಭಾರತದಿಂದ ಆರಂಭಿಸಿ ಮತ್ತು ಬಳಿಕ ಎಪ್ಪತ್ತರ ದಶಕದ ಆರಂಭದ ತನಕ ಅರಣ್ಯಸೇವೆಯಲ್ಲಿದ್ದು, ಫಾರೆಸ್ಟರ್ ಆಗಿ ನಿವೃತ್ತರಾದವರು. ಬೆಳ್ತಂಗಡಿಯಿಂದ ಆರಂಭಿಸಿ ಕೊಲ್ಲೂರಿನ ತನಕ ಹಲವೆಡೆ ಅರಣ್ಯದ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡಿರುವವರು ಅವರು. ಅವರ ಅರಣ್ಯದ ನೂರಾರು ಕಥೆಗಳನ್ನು ಕೇಳುತ್ತಲೇ ಬೆಳೆದವನು ನಾನು.
ವಿದ್ಯಾ ಬಾಲನ್ ಅವರ #ಶೇರ್ನಿ ಸಿನಿಮಾ ಆ ಎಲ್ಲ ನೆನಪುಗಳನ್ನು ಮತ್ತೆ ಹಸಿಗೊಳಿಸಿತು. ನಾನಿ(ನಾ) ಯಾದ್ ಕರಾ ದೀ ಅಂತಾರಲ್ಲ… ಹಾಗೆ!
ಮುಖಾಮುಖಿಗಳ ಸಮರ್ಥ ಚಿತ್ರಣ. ನಗರವಾಸಿಗಳು-ಕಾಡುವಾಸಿಗಳು; ಕಾಡುಪ್ರಾಣಿ-ಮನುಷ್ಯರು; ಪರಿಸರ-ವಿಕಾಸ; ಸರ್ಕಾರಿ ಕೆಲಸ-ರಾಜಕಾರಣ; ಪರಿಸರಾಸಕ್ತರು-ಶಿಕಾರಿಗಳು; ಡಾಕ್ಯುಮೆಂಟರಿ-ಸಿನಿಮಾ; ಮೀಡಿಯಾ-ವಾಸ್ತವ …. ಈ ಅನುಭವ ಕಟ್ಟಿಕೊಡುವ ಸಮಗ್ರ ಚಿತ್ರಣಕ್ಕಾಗಿಯಾದರೂ ಅಗತ್ಯ ನೋಡಬೇಕಾದ ಚಿತ್ರ ಇದು. ನನಗೆ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡಿದ ಖುಷಿ; ಅದೂ ವಿದ್ಯಾಬಾಲನ್!.

ನೂರು ಬಾರಿ ಕಾಡಿಗೆ ಹೋದರೆ ನಿಮಗೆ ಹುಲಿ ಒಮ್ಮೆ ಕಾಣಿಸಬಹುದು, ಆದರೆ ಹುಲಿಗೆ ತೊಂಬತ್ತೊಂಬತ್ತು ಬಾರಿ ನೀವು ಕಾಣಿಸಿರುತ್ತೀರಿ. ಯಾಕೆಂದರೆ ಹುಲಿಗೆ ಸೇರಿದ ಜಾಗದಲ್ಲಿ ಇಂದು ಗಣಿಗಾರಿಕೆ, ಸಾಗುವಾನಿ ಪ್ಲಾಂಟೇಶನ್‌ಗಳಾಗಿವೆ. ದೇಶದ ಎಲ್ಲ ಊರುಗಳ ಕಥೆ ಇದು. ಆ ಹಿನ್ನೆಲೆಯಲ್ಲಿ Learn to pick your battles ಎಂಬ ಪಾಠಕ್ಕೆ ಜೀವಪರವಾದ ಉತ್ತರ ಈ ಸಿನಿಮಾ. ಅರಣ್ಯ-ಮೇವಿನ ಜಾಗ-ಗ್ರಾಮದ ಅಂಚುಗಳಲ್ಲಿ ಹುಲಿ-ಮನುಷ್ಯರ ನಡುವಿನ ಸಾವು ಬದುಕಿನ ಹೋರಾಟದ ಕಥೆಯನ್ನು ಹೇಳುತ್ತಲೇ, ವ್ಯವಸ್ಥೆಯನ್ನು ಬೆತ್ತಲು ಮಾಡಿದ ವಿಧಾನ ಇಷ್ಟವಾಯಿತು. “ಶೇರ್ನಿ” ತಲೆಯಲ್ಲಿಟ್ಟುಕೊಂಡು ಸಿನಿಮಾ ನೋಡಿದರೆ ನಿರಾಸೆ ಆಗಬಹುದು. ನಿರೀಕ್ಷೆಗಳಿಲ್ಲದೆ ಜೀವ ಪ್ರೀತಿಯಿಂದ ನೋಡಿ, ನಿಮಗೂ ಇಷ್ಟ ಆದೀತು.
ನನ್ನ ಪ್ರಕಾರ MUST SEE. ಅಮೆಜಾನ್‌ನಲ್ಲಿದೆ. (ನಿರ್ದೇಶನ: ಅಮಿತ್ ವಿ. ಮಾಸೂರ್ಕರ್)
- ರಾಜಾರಾಂ ತಲ್ಲೂರ್ (ಸಾಹಿತಿಗಳು, ಲೇಖಕರು)
