ಒಂದು ಸಿನಿಮಾ ಎರಡು ದೃಷ್ಟಿಕೋನಗಳು…ತೆರೆಯ ಮೇಲೆ ‘ವಿದ್ಯಾಬಾಲನ್’ ಶೇರ್ನಿಯಾದರೆ, ತೆರೆಯ ಹಿಂದೆ ಮಹಾರಾಷ್ಟ್ರದ ಐಎಫ್ ಎಸ್ ಅಧಿಕಾರಿ ‘ಕೆ.ಎಂ. ಆಭರಣ’ ಶೇರ್ನಿ, ಇವರ ಜೀವನಾಧರಿತ ಚಿತ್ರವೇ ಈ ಸಿನಿಮಾ.
ಆ ಊರಿಗೆ ವಿದ್ಯಾ ವಿನ್ಸೆಂಟ್ (ವಿದ್ಯಾ ಬಾಲನ್ ) ಹೊಸ DFO ಆಗಿ ನೇಮಕವಾಗುತ್ತಾರೆ. ಊರಲ್ಲಿ ಹುಲಿಗಳ ಹಾವಳಿ. ಗ್ರಾಮದ ಮಂದಿ, ಪ್ರಾಣಿಗಳನ್ನು ಹಾಡುಹಗಲೇ ಹುಲಿಗಳು ಕೊಂದುಬಿಡುತ್ತಿದ್ದವು. ಊರಲ್ಲಿ ಹುಲಿಗಿಂತಲೂ ದುಷ್ಟರೆನಿಸಿದ ಕೆಲವು ರಾಜಕಾರಣಿಗಳ ಮೇಲಾಟ. ಇವೆಲ್ಲವುಗಳ ನಡುವೆ ಗ್ರಾಮಸ್ಥರ ಬದುಕು ಹೇಗಿರಬೇಡ? ಇಂಥಾ ಊರಿಗೆ ಬಂದ ಮಹಿಳಾ DFO ಸ್ಥಿತಿ ಹೇಗಿದ್ದೀತು?
ಇದನ್ನು ಮತ್ತೆ ಹೇಳಬೇಕಾಗಿಲ್ಲ!!

ಫೋಟೋ ಕೃಪೆ : mid day
ಸುತ್ತಮುತ್ತ ನಡೆಯುವ ಸಂಗತಿಗಳೇ ಶೇರ್ನಿ ಕಥಾವಸ್ತು. ಮನುಷ್ಯ ಪರಿಸರದ ಮೇಲೆ ನಡೆಸುವ ದಬ್ಬಾಳಿಕೆಯನ್ನು ಕಥಾವಸ್ತುವಾಗಿಟ್ಟುಕೊಂಡು ಮಾಡಿರುವ ಸಿನಿಮಾವಿದು.
ಈ ತರದ ಕತೆಯನ್ನು ಮಾಡಿದರೆ ಸಿನಿಮಾ ಓಡುತ್ತಾ? ಎಂದು ಕೆಲವರಿಗಾದರೂ ಅನಿಸಬಹುದು. ಆದರೆ ಇಂಥ ಸಿನಿಮಾ ಮಾಡಲೂ ಧೈರ್ಯ ಬೇಕು. ಅದಕ್ಕಾಗಿ ನಿರ್ದೇಶಕ ಅಮಿತ್ ವಿ ಮಸೂರ್ ಕರ್ ಗೆ ಮೊದಲ ಚಪ್ಪಾಳೆ!!ಪರಿಸರ, ಅದರ ಸುತ್ತಮುತ್ತ ಕಥೆಗಳನ್ನು ಹೆಣೆದು ತೆರೆಮೇಲೆ ತಂದ ಸಿನಿಮಾಗಳು (ಹೋಲಿಕೆ ಮಾಡಿದರೆ) ಕಡಿಮೆನೇ.
ಇಡೀ ಸಿನಿಮಾ ನೋಡುತ್ತಾ ಹೋದಂತೆ ಬಹಳಷ್ಟು ಕಡೆ ನನಗನಿಸಿದ್ದು ಇದೇನು ಡಾಕ್ಯುಮೆಂಟರಿಯೇನೋ ಎಂದು! ನಿಧಾನಗತಿಯಲ್ಲಿ ಸಾಗುವ ಕಥೆ, ಎಲ್ಲವೂ ಪಕ್ಕಾ Natural, ಹಾಡುಗಳ ಅಬ್ಬರವಿಲ್ಲ, ಎಲ್ಲಿ ಬೇಕೋ ಅಲ್ಲಿ ಕೇಳಿಯೂ ಕೇಳಿಸದಂತಿರುವ ಹಿನ್ನೆಲೆ ಸಂಗೀತ, ಬಹುತೇಕ ಸಂದರ್ಭದಲ್ಲಿ ನಿಶ್ಯಬ್ಧದಲ್ಲೇ ಮಾತಾಡುವ ದೃಶ್ಯಗಳು…! ಇಡೀ ಚಿತ್ರದ ಸಿನಿಮಾಟೋಗ್ರಫಿ ಬಗ್ಗೆ ಬಹಳ ಮೆಚ್ಚುಗೆಯಿದೆ ನನಗೆ. ಎಲ್ಲಿಯೂ ಅತೀ ಎನಿಸುವ ದೃಶ್ಯಗಳಿಲ್ಲ.

ಫೋಟೋ ಕೃಪೆ : DNA India
ಆದರೆ ಚಿತ್ರದ ಕೊನೆಯ ಭಾಗ ಇನ್ನು ಒಂಚೂರು ಗಟ್ಟಿಯಾಗಬಹುದಿತ್ತೇನೋ ಅನಿಸಿದ್ದು ನಿಜ. ವಿದ್ಯಾ ಅವರ ಕುಟುಂಬದವರ ಕೆಲವು ಸನ್ನಿವೇಶಗಳು ಅನಗತ್ಯವಾಗಿ ಎನಿಸಿತ್ತು. ಆರಂಭದಿಂದ ಕೊನೆ ತನಕ ಒಂದೇ ಗತಿಯಲ್ಲಿ ಸಾಗಿದ ಚಿತ್ರದಲ್ಲಿ ವಿದ್ಯಾ ಎಲ್ಲಿಯೂ “ಶೇರ್ನಿ’’ಯಾಗಿ ಅಬ್ಬರಿಸುವುದಿಲ್ಲ. ರಾಜಕಾರಣಿಗಳು, ಅವರಿಗೆ ಕೈಗೊಂಬೆಯಾಗಿ ನಿಲ್ಲುವಂಥ ಅಧಿಕಾರಿಗಳ ನಡುವೆ ಓರ್ವ ದಕ್ಷ ಮತ್ತುತಾಳ್ಮೆಯ ಅಧಿಕಾರಿಣಿಯಾಗಿ ಅವರು ಗಮನಸೆಳೆಯುತ್ತಾರೆ. ಇಲ್ಲಿ ವಿದ್ಯಾಬಾಲನ್ ಸೇರಿದಂತೆ ಎಲ್ಲರದೂ ಸಹಜಾಭಿನಯ.
ಅಮಿತ್ ವಿ ಮಸೂರ್ ಕರ್ ಈ ಹಿಂದೆ ನಿರ್ದೇಶಿಸಿದ ನ್ಯೂಟನ್ ಚಿತ್ರಕ್ಕೂ, ಶೇರ್ನಿಗೂ ಸಾಮ್ಯತೆಗಳಿವೆ. ಶೇರ್ನಿಯಲ್ಲಿ DFO ಅಧಿಕಾರಿಯ ತೊಳಲಾಟವಿದ್ದರೆ, ನ್ಯೂಟನ್ನಲ್ಲಿ ನಕ್ಸಲ್ ಹಾವಳಿ ಹೆಚ್ಚಿರುವ ಕಾಡುಪ್ರದೇಶದಲ್ಲಿ ಚುನಾವಣಾ ಅಧಿಕಾರಿಯೊಬ್ಬರಿಗೆ ಎದುರಾಗುವ ಸವಾಲುಗಳನ್ನು ಚಿತ್ರದ ಮೂಲಕ ಹೇಳಿದ್ದಾರೆ. ಅಮಿತ್ ವಿ ಮಸೂರ್ ಕರ್ ತನ್ನೆರಡು ಚಿತ್ರಗಳಲ್ಲೂ ವ್ಯವಸ್ಥೆಯ ಹುಳುಕುಗಳಿಗೆ ಕನ್ನಡಿ ಹಿಡಿಯುವ ಪುಟ್ಟ ಪ್ರಯತ್ನ ಮಾಡಿದ್ದಾರೆ.

(ಮಹಾರಾಷ್ಟ್ರದ ಐಎಫ್ ಎಸ್ ಅಧಿಕಾರಿ ಕೆ.ಎಂ. ಆಭರಣ)

ಇದು ಜೀವನಾಧಾರಿತ ಚಿತ್ರವಾಗಿದ್ದರಿಂದ ಈ ಚಿತ್ರವನ್ನು ಕಥೆ ಇರೋ ತರಾನೇ (ಏನನ್ನೂ ಹೆಚ್ಚುವರಿ ಸೇರಿಸದೆ) ತೆಗೆದಿದ್ದಾರೇನೋ..!! ಏಕೆಂದರೆ ಕತೆಯ ಕ್ಲೈಮಾಕ್ಸ್ ಡಿಎಫ್ ಒ ವಿದ್ಯಾ ಅವರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಮಾಡುವಲ್ಲಿಗೇ ನಿಂತುಹೋಗುತ್ತದೆ!!
ನಮ್ಮ ನಡುವೆ ಇಂಥ ನೂರಾರು “ಶೇರ್ನಿ”ಯರು ಇದ್ದಾರೆ!!)
ಕೃಪೆ : ಫೇಸ್ಬುಕ್
- ಚಿತ್ರಾ ಸಂತೋಷ್ (ವೃತ್ತಿ ಪತ್ರಿಕೋದ್ಯಮ. ಪ್ರವೃತ್ತಿ ಸಂಗೀತ, ಸಿನಿಮಾ, ಸಾಹಿತ್ಯ, ಕಲೆಗಾರರು)
