‘ಅಪ್ಪ’ ಎಂಬ ಆಕಾಶ ಮತ್ತು ಭೂಮಿ



ಅಪ್ಪ ಎಂದಾಗಲ್ಲೆಲ್ಲ ನನಗೆ ಎರಡು ಇಂಸಿಡೆಂಟ್ ನೆನಪಾಗುತ್ತದೆ. ನನ್ನ ಪೂರ್ತಿ ಹೆಸರಿನ ಅರ್ಧ ಭಾಗ ಅಪ್ಪನೇ ತುಂಬಿಕೊಂಡಿದ್ದಾರೆ. ಅರ್ಧ ಜನ ನನ್ನನ್ನು “ಸುಧೀಂದ್ರನ ಮಗಳು” ಎಂದು ಗುರುತಿಸಿ ನನ್ನ ಹೆಸರನ್ನೇ ಮರೆಯುವಷ್ಟು ಅಪ್ಪನ್ನನ್ನು ಪ್ರೀತಿಸುವವರಿದ್ದಾರೆ. ಮುಂದೆ ಓದಿ…

ಘಟನೆ ೧

ಒಮ್ಮೆ ಅಪ್ಪ ಕೆಲಸದ ಮೇಲೆ ರಷ್ಯಾದ ಮಾಸ್ಕೋಗೆ ಹೋಗಿದ್ದರು. ಎಂದಿನಂತೆ ಅಪ್ಪನಿಗೆ ದಿನಾ ಫೋನ್ ಮಾಡಿ, “ಯಾವಾಗ ಬರ್ತ್ಯಾ ಅಪ್ಪ, ಯಾವಾಗ ಬರ್ತ್ಯಾ ಅಪ್ಪ” ಎಂದು ಕೇಳಿ ಕೇಳಿ ಸುಸ್ತು ಮಾಡಿದ್ದೆ. ಅಪ್ಪ “ಒಂದು ವಾರ ಬಿಟ್ಟು, ೨ ವಾರ ಬಿಟ್ಟು” ಎಂದು ಅನ್ನುತ್ತಿದ್ದರು. ಇನ್ನು ಮಾಸ್ಕೋದಿಂದ ಹೊರಡುವ ದಿನ ಬಂತು, “ಏನು ಬೇಕು ಮಗಳೇ?” ಎಂದು ಕೇಳಿದ್ದರು, “ಸೂಟ್ ಕೇಸ್ ತುಂಬ ಚಾಕ್ಲೇಟ್ ಬೇಕಪ್ಪ” ಎಂದು ಅಂದಿದ್ದೆ. ಅದನ್ನೆಲ್ಲಾ ಹೇಳಿ ಮರೆತೂ ಹೋಗಿದ್ದೆ.

(ಖ್ಯಾತ ಲೇಖಕರು ಹಾಲ್ಡೊಡ್ಡೇರಿ ಸುಧೀಂದ್ರ)

ಸರಿ ಅಪ್ಪ ಮನೆಗೆ ಬಂದರು, ನಾನು ಸ್ಕೂಲಿಗೆ ಹೋಗಿದ್ದೆ, ಸಂಜೆ ಬಂದರೆ ಒಂದು ರೂಮಿನಲ್ಲಿ ದೊಡ್ಡ ಸೂಟ್ ಕೇಸ್ ಇಟ್ಟಿದ್ದರು. ತೆಗೆದರೆ ನಿಜವಾಗಿಯೂ ಅದರ ಪೂರ್ತಿ ಚಾಕ್ಲೇಟ್ ಇತ್ತು. ಒಂದು 35 ಕೆಜಿಯ ಸೂಟ್ಕೇಸಿನ ತುಂಬಾ ಚಾಕ್ಲೇಟ್ ತಂದಿದ್ದರು ಅಪ್ಪ.

ಅವರನ್ನ ಕಸ್ಟಮ್ಸಿನಲ್ಲಿ ಹಿಡಿದ್ದಿದ್ದರೂ ಸಹ. ವೈಟ್ ಪಾಸ್ಪೋರ್ಟು ಮತ್ತು ಮಗಳಿಗೆ ಚಾಕ್ಲೇಟ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಸಬೂಬಿನೊಂದಿಗೆ ಬಿಟ್ಟಿದ್ದರಂತೆ. ಒಂದು ಸೂಟ್ಕೇಸಿನ ಬಟ್ಟೆಯನ್ನೆಲ್ಲಾ ಬಿಟ್ಟು, ಮಗಳಿಗೆ ಚಾಕ್ಲೇಟ್ ತಂದಿದ್ದರು ಅಪ್ಪ. ನಾನು ಸುಮ್ಮನೆ ಹೇಳುವ ಮಾತನ್ನ ನಿಜ ಮಾಡೋದು ಅಪ್ಪ ಮಾತ್ರ



ಘಟನೆ ೨

ನಾನು ಸೆಕೆಂಡ್ ಪಿಯೂಸಿಯಲ್ಲಿ ಓದೋದು ಬಿಟ್ಟು ಆರಾಮಾಗಿ ಸಂಗೀತ, ನಾಟಕ ಅಂದುಕೊಂಡಿದ್ದೆ. ಹೋಗಲಿ ಅದರಲ್ಲೂ ಏನು ಅಂತಹ ಸಾಧನೆ ಮಾಡಿರಲ್ಲಿಲ್ಲ. ಸುಮ್ಮನೆ ಕ್ಲಾಸ್ ಚಕ್ಕರ್ ಹಾಕೋಕೆ ಒಂದು ನೆಪ ಅಷ್ಟೆ. ಎಸ್ಸೆಸೆಲ್ಸಿಯಲ್ಲಿ ವಿಪರೀತ ಮಾರ್ಕ್ಸ್ ತೆಗೆದುಕೊಂಡ ಓವರ್ ಕಾನ್ಫೆಡೆನ್ಸ್ ನನ್ನಲ್ಲಿತ್ತು. “ಬರತ್ತೆ ಬಿಡು ಮಾರ್ಕ್ಸ್” ಅನ್ನೋ ಕೊಬ್ಬು. ಅಪ್ಪ ಒಂದೆರೆಡು ಬಾರಿ ಮೆತ್ತಗೆ ಹೇಳಿದ್ದರು, “ಹತ್ತನೇ ಕ್ಲಾಸಿನ ಹಾಗಲ್ಲ ಇದು, ಸರಿಯಾಗಿ ಓದು, ಇದು ನಿನ್ನ ಜೀವನದ ಟರ್ನಿಂಗ್ ಪಾಯಿಂಟ್” ಎಂದು. ನಾನು ಆರಾಮಾಗಿಯೇ ಇದ್ದೆ. ಎಕ್ಸಾಮು ಬರೆದೆ. ಅತೀ ಸಾಧಾರಣ ಮಾರ್ಕ್ಸು, ಅತೀ ಸಾಧಾರಣ ಸಿಇಟಿ ರ್ಯಾಂಕು ಬಂತು. ಅಪ್ಪನಿಗೆ ಇದ್ದ ಕನೆಕ್ಷನ್ಸು, ದುಡ್ಡು ಇವೆಲ್ಲವೂ ನನ್ನನ್ನ ಕಾಪಾಡುತ್ತದೆ ಎಂಬ ಕೆಟ್ಟ ಕಾನ್ಫಿಡೆನ್ಸು ನನ್ನಲ್ಲಿತ್ತು. ಅಪ್ಪ ರಿಸೆಲ್ಟ್ ನೋಡಿ ಒಂದೇ ಮಾತು ಹೇಳಿದರು, “ನಿನ್ನ ಯೋಗ್ಯತೆಗೆ ಎಲ್ಲಿ ಸೀಟು ಸಿಗತ್ತೋ ಅಲ್ಲಿ ಸೇರ್ಕೊಂಡು ಇಂಜಿನಿಯರಿಂಗ್ ಮುಗಿಸು, ಗುಡ್ ಲಕ್” ಅಂದರು. “ನೆನೆಪಿರಲಿ ನೀನು ಎಷ್ಟೇ ಮಾರ್ಕ್ಸ್ ತೆಗೆದರೂ ನನ್ನ ಮಗಳೇ ಅದೇನು ಬದಲಾಗಲ್ಲ” ಎಂದು ಸಾಂತ್ವನ ಹೇಳಿ ಹೋದರು.

(ಅಪ್ಪನೊಂದಿಗೆ ಮೇಘನಾ ಸುಧೀಂದ್ರ)

ನಾನು ಊರಾಚೆ ಕಾಲೇಜಿಗೆ ಸೇರಿದೆ. ದಿನಾ ಬೆಳಗ್ಗೆ ೬ ಘಂಟೆಗೆ ಹೊರಟರೆ ಸಂಜೆ ೬ ಘಂಟೆಗೆ ಬರುತ್ತಿದ್ದೆ. ೧ ವರ್ಷ ಆಟಾಡಿದ್ದಕ್ಕೆ ೪ ವರ್ಷ ಒದ್ದಾಡಿದೆ. ಅಪ್ಪ ಸುಮ್ಮನೆ ಮುಗುಳ್ನಗುತ್ತಿದ್ದರು. ಇಂಜಿನಿಯರಿಂಗ್ ಮುಗಿಸಿದ ನಂತರ, “ನೀನು ಯಾರ ಶಿಫಾರಸ್ಸಿನಲ್ಲೋ, ಯಾರ ದುಡ್ಡಲ್ಲೋ ಓದಲ್ಲಿಲ್ಲ ನಿನ್ನ ಯೋಗ್ಯತೆಗೆ ತಕ್ಕ ಹಾಗೆ ಓದಿದೆ, ಯಾವತ್ತೂ ಅಷ್ಟೇ ನೀನು ಕಷ್ಟ ಪಟ್ಟು ನೀನು ದಕ್ಕಿಸಿಕೊಂಡಿದ್ದೇ ನಿನ್ನ ಬಳಿ ಶಾಶ್ವತವಾಗಿ ಉಳಿಯೋದು, ಅಪ್ಪ ಅಮ್ಮ ಫ್ರೀಯಾಗಿ ಕೊಟ್ಟಿದ್ದೂ ಉಳಿಯಲ್ಲ” ಎಂಬ ಅತಿ ದೊಡ್ಡ ಜೀವನದ ಪಾಠವನ್ನು ಹೇಳಿಕೊಟ್ಟರು. ಇದಾದ ನಂತರ ನಾನು ಯಾವತ್ತೂ ಯಾವುದನ್ನೂ ಲೈಟಾಗಿ ತೆಗೆದುಕೊಳ್ಳಲ್ಲಿಲ್ಲ. ತಲೆ ಬಗ್ಗಿಸಿ ಕೆಲಸ ಮಾಡಿಕೊಂಡು ಹೋಗಿದ್ದೇನೆ. ಅದು ವಿದೇಶದಲ್ಲಿ ಮಾಸ್ಟರ್ಸ್ ಇರಬಹುದು, ಅಥವಾ ಕೆಲಸ ಇರಬಹುದು ಅಥವಾ ಪುಸ್ತಕ/ಲೇಖನ ಬರೆಯೋದಿರಬಹುದು.

ಪ್ರೀತಿ ಮಾಡುತ್ತಲೇ ಅಸಂಖ್ಯಾತ ಜೀವನ ಪಾಠ ಕಲಿಸುತ್ತಿರುವ ಅಪ್ಪನಿಗೆ ಅಪ್ಪನ ದಿನದ ಶುಭಾಶಯಗಳು. ನೀನೆ ನನಗೆ ಸ್ಪೂರ್ತಿ ಅಪ್ಪ. ನನ್ನ ಮೂರನೆಯ ಪುಸ್ತಕವನ್ನ( #AI ಕಥೆಗಳು) ನಿನಗೇ ಅರ್ಪಣೆ ಮಾಡಿದ್ದೇನೆ.


  • ಮೇಘನಾ ಸುಧೀಂದ್ರ (ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಬರಹಗಾರರು – ಜಯನಗರದ ಹುಡುಗಿ, ಲಿಪಿಯ ಪತ್ರಗಳು, #AI ಕಥೆಗಳು ಅವರು ಬರೆದ ಪುಸ್ತಕಗಳು)

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading