ಆ ಎರಡು ಬಟ್ಟೆಗಳ ಬೆಲೆ – ಶಾಲಿನಿ ಹೂಲಿ ಪ್ರದೀಪ್



ಇಂದು- ಅಂದು ಕೊಳ್ಳುವ ಬಟ್ಟೆಯಲ್ಲಿದ್ದ ಸಂತೋಷ ಹೇಗಿತ್ತು ಗೊತ್ತಾ?…ಆ ದಿನಗಳು ಮತ್ತೆ ನೆನಪಾಗುತ್ತಿದೆ…ನಿಮಗೂ ನೆನಪಾಗುತ್ತಿದ್ದರೆ ಬರೆದು ಕಳುಹಿಸಬಹುದು. ಮುಂದೆ ಓದಿ..

ವರ್ಷಕ್ಕೆ ಎರಡು ಸಾರಿ ಅಪ್ಪ ಬಟ್ಟೆ ಕೊಡಿಸುತ್ತಿದ್ದರು. ಒಂದು ನನ್ನ ಹುಟ್ಟುಹಬ್ಬಕ್ಕೆ, ಇನ್ನೊಂದು ದಸರಾ ಹಬ್ಬಕ್ಕೆ. ವರ್ಷಕ್ಕೆ ಎರಡೇ ಹೊಸ ಬಟ್ಟೆಯಾದರೂ ಬೇಸರವಿರಲಿಲ್ಲ, ಬದಲಾಗಿ ಅದನ್ನು ಕೊಳ್ಳುವಾಗ ಸಾಕಷ್ಟು ಸಂತೋಷ, ಸಂಭ್ರಮವಿರುತ್ತಿತ್ತು.

ಹೊಸ ಬಟ್ಟೆ ಕೊಳ್ಳಬೇಕಾದರೆ ಅಂಬಿಕಾನಗರದಿಂದ ೧೭ ಕಿಮಿ ದೂರದ ದಾಂಡೇಲಿಗೆ ಹೋಗಬೇಕಿತ್ತು. ದಾಂಡೇಲಿ ಇಂದಿನಷ್ಟು ಬೆಳೆದಿರಲಿಲ್ಲ,ಪ್ರವಾಸಿತಾಣವು ಆಗಿರಲಿಲ್ಲ. ಆದರೆ ನಮಗೆ ದಾಂಡೇಲಿ ಎಂದರೆ ಹಳ್ಳಿ ಹೈದೆ ಪ್ಯಾಟೆಗೆ ಹೋದ್ಲು ಅನ್ನುವಂತೆ ಇತ್ತು. ದಾಂಡೇಲಿಗೆ ಹೋಗುವುದೆಂದರೆ ಏನೋ ಸಂತೋಷ. ಅದರಲ್ಲೂ ಬಟ್ಟೆ ಖರೀದಿಗೆ ಎಂದರೆ ಮುಗಿತು… ಮನಸ್ಸುಇನ್ನಷ್ಟು ಹಿಗ್ಗುತ್ತಿತ್ತು.

ಹುಟ್ಟುಹಬ್ಬದ ಒಂದು ವಾರದ ಮುಂಚೆ ದಾಂಡೇಲಿ ಹೋಗುವ ತಯಾರಿ ನಡೆಯುತ್ತಿತ್ತು. ಅಪ್ಪ,ಅಮ್ಮ, ನಾನು …ಅಪ್ಪನ #ಬಜಾಜ್ ಸ್ಕೂಟರ್ ನಲ್ಲಿ ಮೂರು ಜನ ಹತ್ತಿ ಹೊರಟರೆ…ಕಾಡಿನ ಮಧ್ಯೆ ಎಲ್ಲಿಯೂ ನಿಲ್ಲುತ್ತಿರಲಿಲ್ಲ…ನಿಂತರೆ ಕಾಡಿನ ಪ್ರಾಣಿಗೆ ಒಳ್ಳೆಯ ಆಹಾರ ಆಗುತ್ತಿರುತ್ತಿದ್ದೆವು. ಹಾಗಾಗಿ ಸೀದಾ ದಾಂಡೇಲಿಯೇ ಗಾಡಿ ಸ್ಟಾಪ್ ಆಗುತ್ತಿತ್ತು. ಮುಟ್ಟುವುದರೊಳಗೆ ಅಪ್ಪ, ಅಮ್ಮನ ಮಧ್ಯೆ ಕೂತು ಸ್ಯಾಂಡ್ ವಿಚ್ ಆಗಿರುತ್ತಿದ್ದೆ. ಆದರೆ ಬಟ್ಟೆ ಮೇಲಿನ ಆಸೆ ಧಣಿವನ್ನಾರಿಸುತ್ತಿತ್ತು.



#ದಾಂಡೇಲಿಯಲ್ಲಿ ಬಟ್ಟೆಯಂಗಡಿಯೆಂದರೆ ಸೋನಾಲಿ ಅಥವಾ ಸ್ಟೇಟಪೋರಿಯಂ ಅಷ್ಟೇ. ತಮಾಷೆಯೆಂದರೆ ತಗೊಳ್ಳುವ ಒಂದು ಬಟ್ಟೆಗೆ, ಅಪ್ಪನ ಬೆವರಿಳಿಸಿ ಬಿಡುತ್ತಿದ್ದೆವು. ಒಂದು ಅಂಗಡಿಗೆ ಎಂಟ್ರಿ ಕೊಟ್ಟರೆ ಹೊರಕ್ಕೆ ಬರಲು ಒಂದು ತಾಸಿಗಿಂತ ಹೆಚ್ಛೆ ಆಗುತ್ತಿತ್ತು.  ಬಟ್ಟೆ ಮನಸ್ಸಿಗೊಪ್ಪುವವರೆಗೂ ಅಂಗಡಿಯಲ್ಲಿದ್ದ ಬಟ್ಟೆಯನ್ನೆಲ್ಲ ತಗೆಸಿ ಮೇಲೆ ಕೆಳಗೆ ನೋಡಿ ಮುಗಿಸುವಷ್ಟರಲ್ಲಿ ಅಪ್ಪ ಸುಸ್ತಾಗಿ ಅಂಗಡಿಯ ಮೂಲೆಯಲ್ಲಿದ್ದ ಸ್ಟೂಲೋ, ಖುರ್ಚಿಯೊ ಎಳೆದು ಕೂತು ಬಿಡುತ್ತಿದ್ದರು. ಹಾಗೂ- ಹೀಗೂ ಮಾಡಿದ ಮೇಲೆ ಕೊನೆಗೊಂದು ಬಟ್ಟೆ ಆಯ್ಕೆ ಆಗುತ್ತಿತ್ತು. ಆದರೆ ಅಂಗಡಿಯವನು ಹೇಳಿದ ರೆಟ್ ಗೆ ನಾವು ಒಪ್ಪುವುದೇ? ಉತ್ತರಕರ್ನಾಟಕ ಮಂದಿ ನಾವು…ಚೌಕಾಸಿ ಮಾಡದೇ ಕೊಳ್ಳುವುದೇ? ಸಾಧ್ಯವೇ ಇಲ್ಲ… ಅಲ್ಲಿಗೆ ನಮ್ಮದು ಒಂದು ರೆಟ್ ಫಿಕ್ಸ್ ಆಗಿರುತ್ತಿತ್ತು, ಅದಕ್ಕೆ ಅಮ್ಮ- ಅಂಗಡಿಯವನ ಮಧ್ಯೆ ಚೌಕಾಸಿ ಮಾತುಕತೆ ನಡೆಯುತ್ತಿತ್ತು. ಅವನು ನಮ್ಮ ರೆಟ್ ಗೆ ಕೊಡದಿದ್ದಾಗ ಪಕ್ಕದ ಅಂಗಡಿಗೆ ಹೋಗೋಣ ಎಂದು ಅಮ್ಮ ನನಗೆ ಸನ್ನೆ ಮಾಡುತ್ತಿದ್ದರು. ಪಕ್ಕದ ಅಂಗಡಿಯಲ್ಲಿ ಇನ್ನು ಚನ್ನಾಗಿರೋ ಬಟ್ಟೆ ಸಿಗಬಹುದೆಂಬ ಆಸೆಗೆ ಆಯ್ಕೆ ಮಾಡಿದ ಬಟ್ಟೆಯನ್ನು ಅಲ್ಲೇ ಇಟ್ಟು, ಹೊರಕ್ಕೆ ರೈಯ್ಯ…ಅನ್ನುತ್ತಿದ್ದೆ. ಆಗ ಅಪ್ಪನ ಮುಖ ನೋಡಬೇಕು…ಎಲ್ಲರ ಮುಂದೆ ಮಾತನಾಡುವ ಹಾಗಿಲ್ಲ..ಬೈಯ್ಯುವ ಹಾಗೆಯೂ ಇಲ್ಲ…ಮುಖ ಉಬ್ಬಿಸಿಕೊಂಡೆ ಹಿಂದೆ ಬರುತ್ತಿದ್ದರು..ಇದ್ದ ಎರಡನೇ ಅಂಗಡಿಯಲ್ಲಿಯೂ ಹಾಗೆ ಒಂದು ಗಂಟೆ ಆದ ಮೇಲೆ ಬಟ್ಟೆ ಸೆಲೆಕ್ಷನ್ ಆಗುತ್ತಿತ್ತು, ಫೈನಲ್ ನಲ್ಲಿ ಅದೇ ರೇಟ್ ನ ಸಮಸ್ಯೆ ಉಲ್ಬಣವಾಗುತ್ತಿತ್ತು…ಕಾಲನ್ನು ಹಿಂದೆ- ಮುಂದೆ ಮಾಡಿದರೆ ಅಂಗಡಿಯವ ನಾವು ಹೇಳಿದ ರೇಟ್ ಗೆ ಬರುತ್ತಾನೆ ಎನ್ನುವ ಲೆಕ್ಕ ಅಮ್ಮನದು…ಅಮ್ಮನ ತಂತ್ರ ಫಲಿಸಿ, ಕೊನೆಗೆ ಹೇಗೋ ಬಟ್ಟೆ ಖರೀದಿಗೆ ಅಸ್ತು ಸಿಗುತ್ತಿತ್ತು. ಬಟ್ಟೆ ಖರೀದಿ ಮಾಡಿದ ಮೇಲೆ ಮೊದಲಿನ ಅಂಗಡಿಯವನಿಗೆ ಕವರ್ ಕಾಣುವಂತೆ ತೋರಿಸಿಕೊಳ್ಳುತ್ತಾ ಹೋಗುವುದು ಇನ್ನು ಮಜಾ ಕೊಡುತ್ತಿತ್ತು…

ಫೋಟೋ ಕೃಪೆ : Chitra food

ಬಟ್ಟೆ ಖರೀದಿ ಆದಮೇಲೆ ಕಾಲು ನೋವು ಗೊತ್ತಾಗುತ್ತಿತ್ತು…ಆಗ #ರಾಯಲ್ ಬೇಕರಿ ಒಳಕ್ಕೆ ನುಗ್ಗುತ್ತಿದ್ದೆವು. ಅಲ್ಲಿನ ಸೆಟ್ ದೋಸಾ, ಸಾಗು… ಆಹಾಹಾ…ಕೇಳಬೇಕಾ?. ನಾನು ದೋಸೆ ಬರೋವರೆಗೂ ಕವರ್ ನಲ್ಲಿದ್ದ ಬಟ್ಟೆ ಮೇಲೆ ಕಣ್ಣಾಡಿಸುತ್ತಾ ಕೂಡುತ್ತಿದ್ದರೆ, ಅಪ್ಪ, ಅಮ್ಮನಿಗೆ ಕ್ಲಾಸ್ ತಗೆದುಕೊಳ್ಳುತ್ತಿದ್ದರು. ಒಂದು ಬಟ್ಟೆಗೆ ಎರಡು ಮೂರೂ ತಾಸು ಮಾಡಿದೆ.ಬುದ್ದಿ ಬೇಡ್ವಾ?…ಅಂದರೆ…ಅಮ್ಮ ಅದಕ್ಕೊಂದು ಪ್ರತಿಕ್ರಿಯೆ. ಇಬ್ಬರ ಮಾತಿನಿಂದ ಮೂಡ್ ಠುಸ್ ಆಗಬೇಕು ಎನ್ನುವಷ್ಟರಲ್ಲಿ ಬಿಸಿ ಬಿಸಿ ಸೆಟ್ ದೋಸಾ ಬಂದು ಬಿಡುತ್ತಿತ್ತು…ಅಲ್ಲಿಗೆ ಮೋಡ ಕವಿದ ವಾತಾವರಣ ತಿಳಿಯಾಗುತ್ತಿತ್ತು. ನನ್ನ ಒಂದು ಕೈಯಲ್ಲಿ ಹೊಸ ಬಟ್ಟೆ ಕವರ್, ಇನ್ನೊಂದು ಕೈಯಲ್ಲಿ ಸೆಟ್ ದೋಸಾ…ಎಂತಹ ಆನಂದ ಅಂತೀರಾ.

ತಿಂದಾದ ನಂತರ ಸೀದಾ ಮತ್ತೆ ಸ್ಯಾಂಡ್ವಿಚ್ ಯಾತ್ರೆ ಶುರು… ಮನೆಗೆ ಬಂದಾಕ್ಷಣ ಕವರನಲ್ಲಿದ್ದ ಬಟ್ಟೆ ತಗೆದು ನೋಡಿ ಮನಸ್ಸು ಇನ್ನಷ್ಟು ಖುಷಿ ಪಡುತ್ತಿತ್ತು..ಟ್ರಯಲ್ ಮಾಡಿದ ಮೇಲೆ ನಾನೆ ಸಿಂಡ್ರೆಲಾ ಅನ್ನುವಷ್ಟು ಹಿಗ್ಗುತ್ತಿದ್ದೆ. ಬಟ್ಟೆ ಮಡುಚುವಾಗ ಅದಕ್ಕೆ ನೋವಾಗದಂತೆ ನಿಧಾನವಾಗಿ ತಿದ್ದಿ- ತೀಡಿ ಮತ್ತೆ ಕವರ್ ನಲ್ಲಿ ಹಾಕಿಡುತ್ತಿದ್ದೆ..ಅಲ್ಲಿಂದ ಹುಟ್ಟು ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿತ್ತು.



ಹುಟ್ಟುಹಬ್ಬದ ದಿನವಂತೂ ನಾನೇ ಮಹಾನ್ ನಾಯಕಿ…ಬೆಳಗ್ಗೆ ಬೇಗ ಎದ್ದು ಹೊಸ ಬಟ್ಟೆ ತೊಟ್ಟು… ದೇವರಿಗೆ,ಅಪ್ಪ-ಅಮ್ಮನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಕೈಯಲ್ಲಿ ಚಾಕಲೇಟ್ ಡಬ್ಬ ಹಿಡಿದು ಮನೆಯಿಂದ ಹೊರಕ್ಕೆ ಬಿದ್ದರೆ…ಅಂದು ಅಕ್ಕಪಕ್ಕದ ಮನೆಯಲ್ಲೆಲ್ಲಾ ನಮ್ಮದೇ ಹವಾ…ಏಕೆಂದರೆ ಹುಟ್ಟುಹಬ್ಬದಂದು ಮನೆ ಮನೆಗೆ ಹೋಗಿ ಚಾಕಲೇಟ್ ಕೊಟ್ಟು , ಹಿರಿಯರಿಗೆ ಕಾಲಿಗೆ ನಮಸ್ಕರಿಸಿ, ಮುಂದಿನ ಮನೆಗೆ ಹೋಗುವುದು ಅಂದಿನ ಸಂಭ್ರಮಾಚರಣೆ..ಇಂದು ಬಿಡಿ… ಅಪ್ಪ ಅಮ್ಮನ ಕಾಲಿಗೆ ಮಕ್ಕಳು ನಮಸ್ಕರಿಸುವುದೇ ಅಪರೂಪ.

ಇಡೀ ದಿನ ಒಂದು ರೀತಿಯ ಗತ್ತು …’ಇಂದು ನನ್ನ ಹುಟ್ಟುಹಬ್ಬ’ ಎನ್ನುವ ಕೊಡು ಇರುತ್ತಿತ್ತು… ಮನೆಗೆ ಎಷ್ಟೋತ್ತಿಗೆ ಹೋಗಲಿ ಯಾರು ನನ್ನನ್ನು ಬೈಯ್ಯುತ್ತಿರಲಿಲ್ಲ. ಟ್ರಾಫಿಕ್ ಸಮಸ್ಯೆಯಂತೂ ಇರಲೇ ಇಲ್ಲ…ಸೂಜಿ ಬಿದ್ದರೂ, ಅದರ ಸದ್ದು ಕೇಳಿವಷ್ಟು ಶಾಂತವಾದಾಗ ಊರು. ಗಾಡಿಗಳು ಓಡಾಡಿದರೂ ಕೆಪಿಸಿಲ್ ಗಾಡಿಗಳು, ಇಲ್ಲವೇ ಅಲ್ಲೊಂದು ಇಲ್ಲೊಂದು ಮನೆಯಲ್ಲಿದ್ದ ಓಮಿನಿ ಕಾರ್ ಗಳು. ಹೀಗಿದ್ದಾಗ ಬೆಂಗಳೂರಿನಲ್ಲಿನ ಭಯದ ವಾತಾವಣರವೂ ಅಲ್ಲಿ ನಮ್ಮನ್ನು ಕಾಡಲಿಲ್ಲ …ಎಲ್ಲವು ಕೂಲ್ ಕೂಲ್ ಜೀವನ…

ಇಂದಿನಂತೆ ಎಲ್ಲಾ ಮಕ್ಕಳನ್ನೆಲ್ಲ ಸೇರಿಸಿ ಕೇಕ್ ಕಟ್ ಮಾಡುವ ಸಂಭ್ರಮಾಚರಣೆ ಅಂದು ಇರುತ್ತಿರಲಿಲ್ಲ.ಎಲ್ಲರ ಹುಟ್ಟುಹಬ್ಬ ಹೀಗೆಯೇ ಇರುತ್ತಿತ್ತು…

ಒಂದು ಬಟ್ಟೆ ಕೊಳ್ಳುವಾಗ ,ತೋಡುವಾಗ, ಚಾಕಲೇಟ್ ಹಿಡಿದು ಮನೆ ಮನೆ ಹೋಗುವ ಅಂದಿನ ಸಂತೋಷ ಇಂದಿನ ಯಾವ ಹುಟ್ಟುಹಬ್ಬದಲ್ಲಿಯೂ ಇಲ್ಲ.  ಅಂದು ನಮ್ಮ ಮನೆಯವರಿಗೆಲ್ಲ ಸೇರಿ ಒಂದೇ ಕಪಾಟಿತ್ತು. ಅದರಲ್ಲಿಯೇ ಎಲ್ಲರ ಬಟ್ಟೆಗಳಿರುತ್ತಿದ್ದವು. ಆದರೆ ಇಂದು ನನ್ನದೆಯಾದ ಪ್ರತ್ಯೇಕ ಕಪಾಟ್ ಇದೆ, ಬಟ್ಟೆಗಳೇ ನನ್ನನ್ನು ಗೋಗರೆಯುವಷ್ಟು ಬಟ್ಟೆಗಳಿವೆ. ಆದರೆ ಆ ಎರಡು ಬಟ್ಟೆಯಲ್ಲಿದ್ದ ಸಂತೋಷ ಈಗಿಲ್ಲ.

ಪ್ರತಿವರ್ಷ ನನ್ನ ಹುಟ್ಟುಹಬ್ಬ ಬಂದಾಗ ಅದೇ ಎರಡು ಬಟ್ಟೆ… ನೆನೆದು ಮುಂದೆ ಸಾಗುತ್ತೇನೆ…ಹಳೆಯ ಸಂತೋಷ ಹುಡುಕುತ್ತಿದ್ದೇನೆ.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading