‘ಶರಣ’ ಎಂದರೆ ಅದೊಂದು ಬೆಳಕು! – ಡಿ.ಶಬ್ರಿನಾ ಮಹಮದ್ ಅಲಿ

ಶರಣರು ಲಿಂಗಸಮಾನತೆ, ಜಾತಿಸಮಾನತೆ, ವೃತ್ತಿ ಸಮಾನತೆ ಹೀಗೆ ಸರ್ವರೀತಿಯ ಸಮಾನತೆಯನ್ನ ಬದುಕಿನಲ್ಲಿ ಪಾಲಿಸಿ ಅದರಂತೆಯೇ ಬದುಕಿ ಆ ತತ್ವಗಳನ್ನ ನಮಗಾಗಿ ಅವರ ವಚನಗಳಲ್ಲಿ ಅರುಹಿದ್ದಾರೆ. ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಶಿವಾಚಾರ ಕುರಿತು ಒಂದು ಸುದೀರ್ಘ ಚಿಂತನ, ತಪ್ಪದೆ ಮುಂದೆ ಓದಿ…

“ನೋಯುವ ಹಲ್ಲಿಗೆ ನಾಲಿಗೆ ಪದೇ ಪದೇ ಹೊರಳುವಂತೆ ನನ್ನ ಮನಸ್ಸು ೧೨ ನೇ ಶತಮಾನಕ್ಕೆ ಹೊರಳುತ್ತದೆ” ಗಿರೀಶ್ ಕಾರ್ನಾಡ್ ಅವರ ಮಾತಿನಂತೆ ನನ್ನ ಮನಸ್ಸು ಕೂಡ,ನಮ್ಮ ಬದುಕಿನ ಜಂಜಾಟ,ಕಿತ್ತಾಟ,ತೊಳಲಾಟಗಳ ಪ್ರತಿ ಹೆಜ್ಜೆಗೂ, ೧೨ನೇ ಶತಮಾನದ ಶರಣರತ್ತ,ಶರಣರ ಚಿಂತನೆಗಳತ್ತ ವಾಲುತ್ತದೆ! ಕಾರಣ, ೧೨ನೇ ಶತಮಾನದ ಬಸವಾದಿ ಶರಣರು ಅಂಧಕಾರದ ಕಗ್ಗತ್ತಿಲಿನಲ್ಲಿ ಮುಳುಗಿದ್ದ ಮನುಕುಲದ ಮೇಲೆ ಬೆಳಕು ಚೆಲ್ಲಿ, ಮನುಷ್ಯರನ್ನ ಮನುಷ್ಯರಂತೆ ಕಾಣುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಅತ್ಯಪರೂಪದ ಧನ್ಯತೆಯ ಯುಗವೆಂದು ಹೇಳಬಹದು.

‘ಶರಣ’ ಎನ್ನುವ ಪದ ಸಾಮನ್ಯವಾದದ್ದಲ್ಲ; ಅದೊಂದು ಬೆಳಕು! ಶರಣನಾಗುವುದೆಂದರೆ ಆಡಿದಷ್ಟು ಸುಲಭವಲ್ಲ; ಅದು ನಡೆನುಡಿ ಎರಡಲ್ಲದ ಒಂದಾದ ಆಚಾರ! ಇದೆಲ್ಲವನ್ನ ಅರ್ಥಮಾಡಿಸಲು ಶರಣ/ಬಸವ ತತ್ವದಲ್ಲಿ ಪಂಚಾಚಾರಗಳೆಂಬ ೫ ಆಚಾರಗಳಿವೆ.

೧.ಲಿಂಗಾಚಾರ
೨.ಶಿವಾಚಾರ
೩.ಸದಾಚಾರ
೪ ಗಣಾಚಾರ
೫.ಭೃತ್ಯಾಚಾರ.

ಈಗ ನಾವು ಶಿವಾಚಾರದ ಕುರಿತು ತಿಳಿಯೋಣ.

ಶರಣತತ್ವವನ್ನ ಅರಿಯುವಲ್ಲಿ ಲಿಂಗಾಚಾರ ವರ್ಣಮಾಲೆಯಾದರೆ ಶಿವಾಚಾರ ಕಾಗುಣಿತ ಒತ್ತಕ್ಷರವಿದ್ದಂತೆ. ಈ ಎರಡು ಆಚಾರಗಳನ್ನು ಪರಿಪೂರ್ಣವಾಗಿ ಅರಿತು ಕ್ರಿಯೆಯಲ್ಲಿ ತಂದರೆ ಉಳಿದ ಮೂರು ಆಚಾರಗಳು ನಮಗರಿವಿಲ್ಲದಂತೆ ತಾವಾಗಿಯೇ ನಮ್ಮ ಆಚರಣೆಯಲ್ಲಿ ಬಂದು ಹೋಗುತ್ತವೆ ಎಂಬುದು ನನ್ನ ಅಭಿಪ್ರಾಯ. ಹಾಗಾದರೆ ಶಿವಾಚಾರದ ಅರ್ಥ,’ಇಡೀ ಜಗತ್ತಿಗೆ ಶಿವನೊಬ್ಬನೆ ದೇವಾ,ಶಿವನ ಬಿಟ್ಟು ಅನ್ಯದೈವ ಇಲ್ಲವೆಂದರಿದು ನಿರಾಕಾರ ಶಿವನಿಗೆ ಭಕ್ತರಾಗಿ,ಆ ಶಿವಭಕ್ತರಲ್ಲಿ ಕುಲಗೋತ್ರ, ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೇ ಶಿವಾಚಾರಚಾಗಿದೆ”. ದೇವನ ಪಿತೃತ್ವ ಮಾನವರ ಭಾತೃತ್ವ ಸಾರಲು ಸಮಾಜದಲ್ಲಿ ಬಿತ್ತಲ್ಪಟ್ಟ ವಿಚಾರವೆಲ್ಲಾ ಶಿವಾಚಾರವಾಗಿದೆ.

ಶಿವಾಚಾರದ ಪ್ರಮುಖ ಅಂಶವೆಂದರೆ,”ಜಗದ ಜೀವಿಗಳೆಲ್ಲಾ ಒಬ್ಬ ದೇವನ ಮಕ್ಕಳು. ಜಾತಿ,ಕುಲ ಗೋತ್ರಗಳ ಆಧಾರದ ಮೇಲೆ ಶ್ರೇಷ್ಠ, ಕನಿಷ್ಠ ಎಂದು ಜನಾಂಗವನ್ನು ಬೇರೆ ಬೇರೆ ಮಾಡದೆ ಸರ್ವರೂ ಸಮಾನರು ಎಂದು ಸಾಮಾಜಿಕ ಸಮಾನತೆ ಸಾರುವುದೇ ಆಗಿದೆ”. ಶಿವಾಚಾರವನ್ನು ಕುರಿತು ಶರಣರು ಏನು ಹೇಳುತ್ತಾರೆ ಎಂಬುದನ್ನ ನೋಡಿದಾಗ,ಅಲ್ಲಮಪ್ರಭುಗಳು “ಶಿವಾಚಾರ ಎನ್ನುವುದು ಬೀದಿಯಲ್ಲಿ ಆಡಿದ ಮಾತಿನಂತಲ್ಲ; ಕಾಮ ಕ್ರೋಧಗಳನು ಲಿಂಗಕ್ಕೆ ಅರ್ಪಿತ ಮಾಡದೆ ಶಿವಾಚಾರ ಸಾಧ್ಯವಾಗದು” ಎಂದು ಹೇಳುತ್ತಾರೆ. ಬಸವಣ್ಣನವರು ಅವರ ನಡೆಯೊಂದು ನುಡಿಯೊಂದಾದಡೆ ಶಿವಾಚಾರಕ್ಕವರು ಸಲ್ಲರಯ್ಯ ಬಲ್ಲನು ಸಾತ್ವಿಕರಲ್ಲದವರನೊಲ್ಲನು ಶಿವಾಚಾರವ ಬಲ್ಲನು,ಅಲ್ಲಿ ನಿಲ್ಲನು,ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವಾ” ಎಂದು ಹೇಳುತ್ತಾರೆ.

ಶಿವಾಚಾರವು ಈ ಕೆಳಗಿನ ಮೂರು ಹಂತಗಳಲ್ಲಿ ಸಮಾನತೆಯನ್ನ ಸಾರುತ್ತದೆ.

೧)ಹುಟ್ಟಿನಲ್ಲಿ ಸಮಾನತೆ
೨)ಪ್ರಕೃತಿಯಲ್ಲಿ ಸಮಾನತೆ
೩)ಅರಿವಿನಲ್ಲಿ ಸಮಾನತೆ

  • ಹುಟ್ಟಿನಲ್ಲಿ ಸಮಾನತೆ:

ಶರಣರೆಲ್ಲರೂ ‘ಸರ್ವರು ಸಮಾನರು’ ಎಂಬ ತತ್ವಕ್ಕೆ ಕಟಿಬದ್ಧರಾಗಿದ್ದರು. ಇದಕ್ಕೆ ಭದ್ರಬುನಾದಿ ಹಾಕಿದವರು ಮಹಾಮಾನವತವಾದಿ ಬಸವಣ್ಙನವರು! ಅವರ ಒಂದು ವಚನ ಹೀಗಿದೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ ಜಲ-ಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ
ಏನ ಕೇಳಿ
ಏನು ಫಲ ಕುಲಜನೆಂಬುದಕ್ಕೆ ಆವುದು ದೃಷ್ಟ ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ

ತಾಯಿಯ ಋತುಸ್ರಾವ ನಿಲ್ಲದೆ ಪಿಂಡಕ್ಕೆ ಆಶ್ರಯವಿಲ್ಲ, ಎಲ್ಲರಿಗೂ ಜಲಬಿಂದುವಿನ ವ್ಯವಹಾರವೊಂದೆ, ನಮ್ಮಲ್ಲಿರುವ ಭಾವನೆಗಳೆಲ್ಲಾ ಒಂದೇ ಆಗಿದೆ. ಹೀಗಿರುವಾಗ ನಾನು ಶ್ರೇಷ್ಠ ನೀನು ಕನಿಷ್ಠ ಎಂದು ಹೇಳಲು ಏನು ಸಾಕ್ಷಿ ಇದೆ? ದೊಡ್ಡ ದೊಡ್ಡ ಗ್ರಂಥಗಳನ್ನ ಓದಿ ಏನ್ ಪ್ರಯೋಜನ ಮನುಷ್ಯರನ್ನ ಮನುಷ್ಯರಂತೆ ಕಾಣುತ್ತಿಲ್ಲವಲ್ಲ ಎಂದು ಪ್ರಶ್ನಿಸಿ ವಚನದಲ್ಲಿ ಮುಂದುವರೆದು ಹೇಳ್ತಾರೆ, ನಮ್ಮೆಲ್ಲರ ದೇಹ ಸಪ್ತಧಾತುಗಳಿಂದ ಆಗಿದೆ. ಹಾಗೆಯೇ ನಾವೆಲ್ಲರೂ ತಾಯಿಯ ಯೋನಿಯಿಂದಲೆ ಬಂದಿದ್ದೇವೆ. ಹಾಗಾಗಿ ಮಾನವನ ಹುಟ್ಟಿನಲ್ಲಿ ಎಲ್ಲರೂ ಒಂದೇಯಾಗಿದ್ದಾರೆ ಎಂಬ ಸಾರ್ವಕಾಲಿಕ ಸತ್ಯವನ್ನ ಸಾರಿದ್ದಾರೆ.

  • ಪ್ರಕೃತಿಯಲ್ಲಿ ಸಮಾನತೆ:

ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ

ಪ್ರಕೃತಿ ಸರ್ವರಿಗೂ ಒಂದೇಯಾಗಿದೆ ಎಂಬ ಸತ್ಯವನ್ನು ಸಾರುವ ಬಸವಣ್ಣನವರ ಈ ವಚನ ಎಷ್ಟೊಂದು ಅರ್ಥಗರ್ಭಿತವಾಗಿದೆ! ನಾವು ನಡೆದಾಡುವ ನೆಲ,ಕುಡಿವ ನೀರು ಒಂದೇಯಾಗಿದೆ. ಅದರಲ್ಲಿ ನೀನು ಹೊಲಗೇರಿಯಾದರೂ ಮಾಡು, ಶಿವಾಲಯವಾದರೂ ಮಾಡು. ಅದರಲ್ಲಿ ಯಾವುದೇ ಭಿನ್ನತೆಯಿಲ್ಲ. ಪ್ರಕೃತಿಯಲ್ಲಿ ಇರದ ಭಿನ್ನತೆಯನ್ನ ಮನುಷ್ಯನಾಗಿ ನೀನು ಏಕೆ ಮಾಡುತ್ತೀಯಾ ಎಂದು ಬಸವಣ್ಣನವರು ಅಸಮಾನತೆಯ ಪರ ನಿಂತವರನ್ನ ಪ್ರಶ್ನಿಸುತ್ತಾ ತನ್ನನ್ನು ತಾ ಅರಿತ ಕೂಡಲಸಂಗ ಶರಣರಿಗೆ ನಿಲವೊಂದೆ ಎಂದು ಹೇಳುವ ಮೂಲಕ ಶರಣರು ಸದಾ ಕಾಲ ಸಮಾನತೆ ಅನುಸರಿಸಿ ಮಾನವೀಯ ತತ್ವವನ್ನ ಎತ್ತಿಹಿಡಿಯುವರು ಎಂಬ ಧೃಢತೆಯನ್ನ ಈ ವಚನದಲ್ಲಿ ಹೇಳಿರುವುದನ್ನ ಕಾಣಬಹುದು.

ಇದೇ ತತ್ವವನ್ನ ಬೋಂತಾದೇವಿ ಹೀಗೆ ಹೇಳುತ್ತಾರೆ…

ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣಬಯಲು,
ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.

ಬೋಂತಾದೇವಿಯವರ ಈ ವಚನ ಕೂಡ ಪ್ರಕೃತಿ ಸಮಾನತೆಯನ್ನ ಎತ್ತಿಹಿಡಿದಿದೆ. ಊರ ಒಳಗೆ ಒಂದು ಬಯಲು,ಊರ ಹೊರಗೆ ಮತ್ತೊಂದು ಬಯಲು ಇರಲು ಸಾಧ್ಯವೇ? ಅದರಲ್ಲೂ ಊರೊಳಗೆ ಬ್ರಾಹ್ಮಣ ಬಯಲು,ಊರ ಹೊರಗೆ ಹೊಲೆಬಯಲೆಂದಿರಲು ಸಾಧ್ಯವೇ ಎಂದು ಪ್ರಶ್ನಿಸಿ ಯಾವುದೇ ರೀತಿಯ ಜಾತಿ,ಲಿಂಗ,ವರ್ಗ,ವರ್ಣಬೇಧಗಳಿಲ್ಲದೆ ಸರ್ವರಿಗೂ ಒಂದೇ ಬಯಲು ಎಂಬ ದಿಟ್ಟ ಉತ್ತರವನ್ನ ನೀಡಿದ್ದಾರೆ!

  • ಅರಿವಿನಲ್ಲಿ ಸಮಾನತೆ

ಶಿವಾಚಾರದ ಮತ್ತೊಂದು ಪ್ರಮುಖ ಅಂಶ ಅರಿವಿನಲ್ಲಿ ಸಮಾನತೆ! ಎಲ್ಲಾ ಜೀವಿಗಳು ಸರಿಸಮಾನ. “ಹೆಣ್ಣುಗಂಡೆಂಬ,ಬಡವ ಬಲ್ಲಿದನೆಂಬ,ಮೇಲು ಕೀಳೆಂಬ ಬೇಧವಿಲ್ಲದೆ ಅರಿವು ಸುಪ್ತವಾಗಿದೆ. ಅರಿವು ಅರಳಿ ಆನಂದದ ಅನುಭೂತಿ ಪಡೆಯಲು ಎಲ್ಲರಿಗೂ ಹಕ್ಕಿದೆ” ಶಿವಾಚಾರ ಹೇಳುತ್ತದೆ. ಇದರ ಪ್ರಮುಖ ತತ್ವವನ್ನ ಈ ಕೆಳಗಿನಂತೆ ೩ ಅಂಶಗಳಲ್ಲಿ ಹೇಗೆ ಅರಿವು ಎಲ್ಲರಲ್ಲಿಯೂ ಅಡಗಿದೆ ಎಂಬುದನ್ನ ತಿಳಿಯೋಣಾ.

  • ಲಿಂಗಸಮಾನತೆ
  • ಜಾತಿಸಮಾನತೆ
  • ವೃತ್ತಿಸಮಾನತೆ

೧೨ ನೇ ಶತಮಾನದ ಹಿಂದಿನ ಇತಿಹಾಸದಲ್ಲಿ ‘ಅರಿವು’ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದೆ ಎಂದು ಜನರನ್ನ ನಂಬಿಸಿ ದಿಕ್ಕುತಪ್ಪಿಸಿದ್ದರು. ಆದರೆ ಬಸವಾದಿ ಶರಣರು ಅದನ್ನೆಂದು ನಂಬಲಿಲ್ಲ,ಪಾಲಿಸಲಿಲ್ಲ! ಶಿವಾಚಾರದಂತೆ ಬಾಳಿದ್ದಷ್ಟೇಯಲ್ಲದೆ ಅವರ ವೈಚಾರಿಕತೆಯ, ಸಮಾನತೆಯ ಚಿಂತನೆಗಳ ಮೂಲಕ ಇಂದಿಗೂ ಅವರೆಲ್ಲರು ಜೀವಂತವಾಗಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ.

  • ಲಿಂಗಸಮಾನತೆ

ಬಸವಣ್ಣನವರು ತಮ್ಮ ೮ ನೇ ವಯಸ್ಸಿನಲ್ಲಿ ತನ್ನ ಅಕ್ಕನಾಗಮ್ಮನಿಗೆ ಇಲ್ಲದ ಉಪನಯನ ಸಂಸ್ಕಾರ ನನಗೇಕೆ ಎಂದು ಪ್ರಶ್ನಿಸಿ ಮನೆಯಿಂದ ಹೊರಬಂದರು. ಶಿವಾಚಾರದ ಸಮಾನತೆ ಬಸವಣ್ಣನವರಿಗೆ ಬಾಲಕರಿದ್ದಾಗಲೆ ಅವರನ್ನ ಆವರಿಸಿತ್ತು ಎಂಬುದನ್ನ ನಾವು ತಿಳಿಯಬಹುದು.

ಇನ್ನೂ ಜೇಡರದಾಸಿಮಯ್ಯನವರು
‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ

ಹೆಣ್ಣು ಗಂಡೆಂಬ ಬೇಧ ಈ ದೇಹಕ್ಕೆ ಮಾತ್ರವಷ್ಟೇ ಎಂದು ಹೇಳಿ ‘ಸತಿಪತಿ ಒಂದಾದ ಭಕ್ತಿ ಹಿತವೊಪ್ಪದು ಶಿವಂಗೆ’ ಎಂದು ಹೇಳಿ ಅರಿವಿಗೆ ಹೆಣ್ಣು ಗಂಡೆಂಬ ಬೇಧವಿಲ್ಲ ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಆಯ್ದಕ್ಕಿ ಲಕ್ಕಮ್ಮ’ ಕೂಟಕ್ಕೆ ಸತಿಪತಿಯೆಂಬ ನಾಮಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ? ಎಂದು ಪ್ರಶ್ನಿಸುತ್ತಾರೆ. ಕೂಟ(ದಾಂಪತ್ಯ)ಕ್ಕೆ ಮಾತ್ರ ಹೆಣ್ಣು ಗಂಡೆಂಬ ನಾಮ ಬೇಕು ಅಷ್ಟೇ. ಅರಿವಿಗೆ ಅದರ ಅವಶ್ಯಕತೆಯೆ ಇಲ್ಲ ಅರಿವು ಹೆಣ್ಣಿನಲ್ಲೂ ಇದೆ ಎಂದು ಅತ್ಯಂತ ದಿಟ್ಟವಾಗಿ ಈ ವಚನದಲ್ಲಿ ಅರುಹಿದ್ದಾರೆ.

  • ಜಾತಿಸಮಾನತೆ

ಶಿವಾಚಾರದಲ್ಲಿ ಜಾತಿಬೇಧ ಮಾಡುವಂತಿಲ್ಲ! ಕಾರಣ ‘ಜಾತಿಗಳು ಮಾನವ ಕಲ್ಪಿತವೇ ವಿನ: ಶಿವನ ಸೃಷ್ಠಿಯಲ್ಲ! ಅದಕಾಗಿ
ಸ್ವತಂತ್ರ ಸಿದ್ಧಲಿಂಗ ವಚನಕಾರ ಹೀಗೆ ಹೇಳುತ್ತಾರೆ…

ಅನಲ ಸಂಗದಿಂದ ಕಾಷ್ಠ ಅನಲವಾದಂತೆ,
ಶಿವಸಂಸ್ಕಾರ ಸಂಪನ್ನನಾದ ಶಿವಭಕ್ತನು,
ಶಿವನಹಲ್ಲದೆ ಮಾನವನಾಗಲರಿಯನಯ್ಯ.
ಅದು ಕಾರಣ,
ಶಿವಭಕ್ತಂಗೆ ಜಾತಿಯಿಲ್ಲ ಸೂತಕವಿಲ್ಲ.
ಶಿವನೆಂತಿಹನಂತೆ ಇಹನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಭಕ್ತನು.

ಬಸವಣ್ಣನವರಂತೂ ಜಾತಿಗಳನ್ನು ಎಂದೂ ಒಪ್ಪಲಿಲ್ಲ. ಸರ್ವರು ಸಮಾನರು ಎಂಬುದನ್ನ ಅರ್ಥೈಸುವಲ್ಲಿ ಬಸವಣ್ಣನವರಿಗೆ ಬಸವಣ್ಣನವರೆ ಸಾಟಿ!

ಕೊಲುವನೇ ಮಾದಿಗ ಹೊಲಸು ತಿಂಬವನೇ ಹೊಲೆಯ ಕುಲವೇನೊ ಅವದಿರ ಕುಲವೇನೊ ಸಕಲಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು.
ಕೆಳಜಾತಿ ಮೇಲ್ ಜಾತಿ ಎಂಬುದು ಹುಟ್ಟಿನಿಂದ ಬರುವುದಿಲ್ಲ. ನಮ್ಮ ಗುಣಗಳಿಂದ ನಿರ್ಧರಿತವಾಗುತ್ತದೆ. ಮಾನವೀಯತೆಯ ಸನ್ನಡತೆಯಲ್ಲಿ ಸಾಗಿದವರೆ(ಶರಣರು) ಶ್ರೇಷ್ಟರು ಎಂದು ಈ ವಚನದಲ್ಲಿ ತಿಳಿಸಿದ್ದಾರೆ.

  • ವೃತ್ತಿ ಸಮಾನತೆ:

ವೃತ್ತಿಗಳು ನಮ್ಮ ಅವಶ್ಯಕತೆಗಳನ್ನು ಪೂರೈಸಲು ಇವೆ ವಿನಾ ಅವುಗಳು ಜಾತಿಗಳಲ್ಲ! ವೃತ್ತಿಗಳಲ್ಲಿ ಮೇಲು ಕೀಳೆಂದಿಲ್ಲ. ಎಲ್ಲಾ ವೃತ್ತಿಗಳನ್ನು ಗೌರವದಿಂದ ಕಾಣಬೇಕು ಎಂದು ಶಿವಾಚಾರ ಹೇಳುತ್ತದೆ. ಈ ತತ್ವ ಸಾರುವ ಬಸವಣ್ಣನವರ ೨ ವಚನಗಳು ಹೀಗಿವೆ‌.

ಕಾಸಿ ಕಮ್ಮಾರನಾದ, ಬಿಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವಣೊದಿ
ಹಾರವನಾದ
ಕರ್ಣನಲ್ಲಿ ಜನಿಸಿದವರುಂಟೆ ಜಗದೋಳಗೆ?
ಇದು ಕಾರಣ ಕೂಡಲಸಂಗಮದೆವಾ
ಲಿಂಗಸ್ಥಲವನರಿದವನೇ ಕುಲಜನು!!
—————————-
ದೇವಸಹಿತ ಭಕ್ತ ಮನೆಗೆ
ಕಾಯಕವಾವುದೆಂದು ಬೆಸಗೊಂಡರೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!ಚಿಕ್ಕಯ್ಯನೆಮ್ಮಯ್ಯಭಕ್ತರಲ್ಲಿ ಕುಲವನರಸಿದರೆ
ನಿಮ್ಮ ರಾಣಿವಾಸದಾಣೆ!

  • ಶಿವಾಚಾರದ ವೈಶಿಷ್ಟ್ಯತೆ:

ಒಮ್ಮೆ ಶಿವದೀಕ್ಷೆಯಾದ ಬಳಿಕ ಅವರೊಂದಿಗೆ ಕೂತು ಉಣ್ಣುವುದಷ್ಟೇಯಲ್ಲ; ಕೊಟ್ಟು ಕೊಳ್ಳುವ ವ್ಯವಹಾರ ಮಾಡಬೇಕು ಎಂದು ಶಿವಾಚಾರ ಸಾರುತ್ತದೆ. ಅದಕಾಗಿ ಬಸವಣ್ಣನವರು

ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು
ವಂದಿಸಿ, ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ.
ಎಂದು ಹೇಳಿದ್ದಾರೆ.

ಮೇಲ್ನೋಟಕ್ಕೆ ಕೇವಲ ಉಂಡು ತಿಂದು ನಾವೆಲ್ಲರೂ ಒಂದೇ ಎನ್ನುವುದು ಶಿವಾಚಾರವಾಗದು.

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು:
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರಸುವರು.
ಎಂತಯ್ಯಾ ಅವರ ಭಕ್ತರೆಂಬೆ?
ಎಂತಯ್ಯಾ, ಅವರ ಯುಕ್ತರೆಂಬೆ?
ಕೂಡಲಸಂಗಮದೇವಾ, ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ! ಎಂದು ಹೇಳುತ್ತಾರೆ.
ಲಿಂಗದೀಕ್ಷೆಯಾದ ಬಳಿಕ ಎಲ್ಲಾ ರೀತಿಯ ಬಾಂಧವ್ಯ ಬೆಳಿಯಬೇಕು ಎಂಬುದು ಶಿವಾಚಾರದ ಪ್ರಮುಖ ಅಂಶವಾಗಿದೆ.

ಅಷ್ಟೇಯಲ್ಲದೆ ಲಿಂಗದೀಕ್ಷೆ ಪಡೆದವರ ಹಿಂದಿನ ಜಾತಿಯನ್ನು ಯಾವುದೇ ಕಾರಣಕ್ಕೂ ಅರಸುವಂತಿಲ್ಲ ಎಂಬುದು ಶಿವಾಚಾರದ ಮತ್ತೊಂದು ಪ್ರಮುಖ ತತ್ವವಾಗಿದೆ. ಈ ತತ್ವ ಹೇಳುವ ಬಸವಣ್ಣನವರ ವಚನಗಳು ಹೀಗಿವೆ.

ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ
ಕೂಡಲಸಂಗಯ್ಯ ನಗುವನಯ್ಯಾ.
—————————————-
ಅಪ್ಪನು ನಮ್ಮ ಮಾದಾರ ಚೆನ್ನಯ್ಯಾ:
ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯಾ;
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯಾ;
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯಾ:
ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ?
——————————————
ಇವನಾರವ,ಇವನಾರವ,
ಇವನಾರವನೆಂದೆನಿಸದಿರಯ್ಯಾ.ಇವ ನಮ್ಮವ,ಇವ ನಮ್ಮವ,
ಇವ ನಮ್ಮವನೆಂದೆನಿಸಯ್ಯಾ.
ಕೂಡಲಸ0ಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಎಂದು ಹೇಳುವ ಮೂಲಕ ಶಿವಾಚಾರದ ಪ್ರಮುಖ ತತ್ವವಾದ ಸಮಾನತೆಯನ್ನ ಬಸವಣ್ಣನವರು ಇಡೀ ವಿಶ್ವಕ್ಕೆ ಸಾರಿದ್ದಾರೆ ಎನ್ನುವುದು ನಾವೆಲ್ಲರು ಹೆಮ್ಮೆಪಡಬೇಕಾದ ಸಂಗತಿಯಾಗಿದೆ.

ಶಿವಾಚಾರವನ್ನ ಶರಣರು ಎಷ್ಟು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆಂದರೆಂಬುದನ್ನ ನಮ್ಮಿಂದ ಊಹಿಸಲು ಸಾಧ್ಯವಿಲ್ಲ. ಎಲ್ಲಾ ಶರಣರ ವಚನಗಳು ಶಿವಾಚಾರ ಏನು ಹೇಳುತ್ತದೊ ಅದನ್ನೆ ಹೇಳುತ್ತವೆ. ಲಿಂಗಸಮಾನತೆ, ಜಾತಿಸಮಾನತೆ, ವೃತ್ತಿ ಸಮಾನತೆ ಹೀಗೆ ಸರ್ವರೀತಿಯ ಸಮಾನತೆಯನ್ನ ಬದುಕಿನಲ್ಲಿ ಪಾಲಿಸಿ ಅದರಂತೆಯೇ ಬದುಕಿ ಆ ತತ್ವಗಳನ್ನ ನಮಗಾಗಿ ಅವರ ವಚನಗಳಲ್ಲಿ ಅರುಹಿದ್ದಾರೆ. ಒಂದೇ ವಾಕ್ಯದಲ್ಲಿ ಶಿವಾಚಾರವನ್ನ ಹೇಳುವುದಾದರೆ ಜಾತ್ಯಾತೀತವಾಗಿ ಮಾನವೀಯತೆಯಿಂದ ಸಮಾನತೆಯಿಂದ ಬದುಕುವುದಾಗಿದೆ.ಆ ಭಾವೈಕ್ಯತೆಯ ಬದುಕು ನಮ್ಮದಾಗಬೇಕಾದರೆ ಶಿವಾಚಾರ ಸಾರುವ ಸಕಲ ತತ್ವಗಳನ್ನು ನಮ್ಮ ನಡೆ- ನುಡಿಯಲ್ಲಿ ತರಬೇಕಿದೆ. ಹಾಗಾದಾಗ ಮಾತ್ರ ನಾವು ಶರಣರು ನಡೆದ ಶಿವಾಚಾರದ ಮಾರ್ಗದಲ್ಲಿ ಸಾಗಲು ಸಾಧ್ಯ!

ಶರಣು ಶರಣಾರ್ಥಿಗಳು


  • ಡಿ.ಶಬ್ರಿನಾ ಮಹಮದ್ ಅಲಿ –  ಲೇಖಕಿ, ಚಳ್ಳಕೆರೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW