ಶ್ರಾವಣ ಬಂತು ಕಾಡಿಗೆ : ಸುಜಾತ ರವೀಶ್

ವರಕವಿ ಬೇಂದ್ರೆಯವರ ೧೩೦ನೆಯ ಜಯಂತಿ ಪ್ರಯುಕ್ತ ಶ್ರಾವಣದ ಸೊಬಗಿನ ಅವರ ಕವನ ಪರಿಚಯ ಕುರಿತು ಲೇಖಕಿ ಸುಜಾತ ರವೀಶ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಚೈತ್ರ ವೈಶಾಖದ ಬಿಸಿಲನ್ನು ಧಗೆಯನ್ನು ಅನುಭವಿಸಿ ಧರಣಿ ಆಷಾಢದಲ್ಲಿ  ಮಳೆಯ ತಂಪಿನ ಅನುಭವವನ್ನು ಕಾಣುತ್ತಾಳೆ. ಶ್ರಾವಣದಲ್ಲಿ ಅವಳ ತಂಪಿನ ಪೆಂಪು ಸೊಂಪು ಹಚ್ಚ ಹಸಿರಲ್ಲಿ ಅರಳಿದ ಹೂವುಗಳಲ್ಲಿ ಹೊರಹೊಮ್ಮುತ್ತದೆ . ಹಾಗಾಗಿಯೇ ಶ್ರಾವಣವೆಂದರೆ ಕವಿಗಳಿಗೆ ಸಂತಸ. ಜನಸಾಮಾನ್ಯರಿಗೆ ದಿನ ಬೆಳಗಾದರೆ ಒಂದಲ್ಲಾ ಒಂದು ಹಬ್ಬದ ಸಂಭ್ರಮ. ತಿಮ್ಮಪ್ಪನ ಉಪಾಸನೆ, ಮಂಚಾಲೆಯ ಗುರುಗಳ ಆರಾಧನೆ, ಶ್ರೀಕೃಷ್ಣನ ಜನ್ಮ ದಿನೋತ್ಸವ ಅರವಿಂದರ ಜನ್ಮದಿನ ಹೀಗೆ ಎಲ್ಲಾ ಆಧ್ಯಾತ್ಮಿಕ ಅಧ್ವರ್ಯುಗಳ ವರ್ಧಂತಿ ಗಳು ಸೇರಿ ಇದು ಪಂಡಿತ ಪಾಮರರೆಲ್ಲರಿಗೂ ಸೊಗಯಿಸುವ ಮಾಸ . ಸುತ್ತಣ ಪ್ರಕೃತಿಯ ಸೊಬಗು ಸಂಭ್ರಮದ ಬೆರಗು ಎಲ್ಲಾ ಮೇಳೈಸಿದ ಈ ಶ್ರಾವಣ ಮಾಸದ ಆಗಮನವನ್ನು ಕವಿಗಳು ಕಾವ್ಯದ ವಸ್ತುಗಳನ್ನಾಗಿಸಿಯೇ ಇದ್ದಾರೆ. ಅದರಲ್ಲೂ ವರಕವಿ ಬೇಂದ್ರೆಯವರಂತೂ ಶ್ರಾವಣದ ಕವಿ ಎಂದೇ ಪ್ರಸಿದ್ಧರು. ಸುಮಾರು ಹನ್ನೊಂದಕ್ಕೂ ಹೆಚ್ಚು  ಶ್ರಾವಣದ ಕುರಿತಾದ ಕವನಗಳನ್ನು ಬರೆದ ಹೆಗ್ಗಳಿಕೆ ಕವಿವರ್ಯ ರದ್ದು. ಮೊದಮೊದಲ ಕವನಗಳು ಪ್ರಕೃತಿಯ ಸೊಬಗು ಬೆಡಗಿನ ಬಗ್ಗೆಯಾದರೆ ಬರಬರುತ್ತಾ ಅದರಲ್ಲಿ ಆಧ್ಯಾತ್ಮದ ಚಿಂತನೆಯ ಹೊಳಹು ಮೂಡುತ್ತಾ ಬಂದಿರುವುದನ್ನು ಗಮನಿಸಬಹುದು.  ಪಂಚೇಂದ್ರಿಯಗಳಿಗೆ ಅನುಭವ ತರುವ ಸೊಬಗಿನೊಂದಿಗೆ ಆತ್ಮ ಸಂತೋಷದ ಅನುಭವವು ಇಲ್ಲಿ ಸಂಗಮವಾಗಿದೆ.

ಪ್ರಸ್ತುತದ ಶ್ರಾವಣ ಬಂತು ಕಾಡಿಗೆ ಕವನವು ಹಾಗೆಯೇ. ಶ್ರಾವಣದ ಸೊಬಗನ್ನು ಪದಗಳಲ್ಲಿ ಹಿಡಿದಿಡುತ್ತದೆ ಇದು ಓದುವುದಕ್ಕಿಂತ ಕೇಳುವುದಕ್ಕೆ ಹಿತವಾದ ಕವನ . ಆ ಪ್ರಾಸಬದ್ಧ ಪದಗಳ ಏರಿಳಿತಗಳು ಮಳೆಹನಿಯ ರಿಂಗಣದಂತೆಯೇ ಕಿವಿಗೆ ಹಿತವಾದ ಅನುಭವ ಕಟ್ಟಿಕೊಡುತ್ತದೆ.

ಶ್ರಾವಣ ಬಂತು ಕಾಡಿಗೆ  | ಬಂತು ನಾಡಿಗೆ  |
ಬಂತು ಬೀಡಿಗೆ  | ಶ್ರಾವಣ ಬಂತು      || ಪಲ್ಲವಿ ||
ಕಡಲಿಗೆ ಬಂತು ಶ್ರಾವಣ  | ಕುಣಿದ್ಹಾಂಗ ರಾವಣಾ
ಕುಣಿದಾಗ ಗಾಳಿ  | ಭೈರವನ ರೂಪತಾಳಿ         || ಅನುಪಲ್ಲವಿ ||

ಹಾಡಿನ ಪಲ್ಲವಿಯಲ್ಲಿ ಶ್ರಾವಣ ಬಂದ ಬಗೆಯನ್ನು ಹೇಳುತ್ತಾರೆ. ಮೊದಲಿಗೆ ಕಡಲಲ್ಲಿ ಶ್ರಾವಣ ಆಗಮಿಸಿದ ಬಗೆಯನ್ನು ಹೇಳುತ್ತಾ ಅದನ್ನು ರಾವಣನ ಕುಣಿತಕ್ಕೆ ಹೋಲಿಸುತ್ತಾರೆ . ಹಾಗೆ ನೋಡಿದರೆ ದಕ್ಷಿಣದ ಕಡಲಿನಿಂದ ಮುಂಗಾರು ಬರುವುದು ಸಹಜವಲ್ಲವೇ? ಆದರೆ ರಾವಣನಂತೆ ಜೋರು ಕುಣಿತವಾದರೂ ಇದು ವಿನಾಶಕಾರಿಯಲ್ಲ ಭೈರವನ ರೂಪತಾಳಿ ಕುಣಿದಾಗ ಗಾಳಿ ಎನ್ನುವಲ್ಲಿ ಶಿವನ ನೃತ್ಯಕ್ಕೆ ಇದನ್ನು ಹೋಲಿಸಿದಾಗ ಶುಭ ಸೂಚಕ ಎಂಬಂತೆ ತೋರುತ್ತದೆ. ಕಡಲಿನಿಂದ ಬಂದ ಶ್ರಾವಣದ ಮಳೆ ನಂತರ ಕಾಡಿಗೆ ನಂತರ ಜನಗಳಿರುವ ವಸತಿಯ ಬೀಡಿಗೆ ಬರುತ್ತದೆ.

ಶ್ರಾವಣ ಬಂತು ಘಟ್ಟಕ್ಕ  | ರಾಜ್ಯಪಟ್ಟಕ್ಕ  |
ಬಾನಮಟ್ಟಕ್ಕ  |
ಏರ್ಯಾ್ವ ಮುಗಿಲು  | ರವಿ ಕಾಣೆ ಹಾಡೆಹಗಲು ||

ಘಟ್ಟಗಳ ಮೇಲಿಂದ ಸಾಗಿ ಬರುವ ಮುಗಿಲುಗಳು ಇಡೀ ಭೂಮಿಯನ್ನು ಆವರಿಸಿಕೊಂಡಿರುತ್ತದೆ ರವಿಯನ್ನು ಮುಚ್ಚಿಹಾಕಿ ಹಾಡಹಗಲೇ ರವಿ ಮೋಡಗಳ ಹಿಂದೆ ಕಣ್ಮರೆಯಾಗುವ ಬಗ್ಗೆ ಹೇಳುತ್ತಾರೆ. ಶ್ರಾವಣದಲ್ಲಿ ಮಳೆಯ ಹನಿಯ ಸಿಂಚನದೊಂದಿಗೆ ಸೂರ್ಯನ ಹೂಬಿಸಿಲು ಸೇರಿ ನೆರಳು ಬೆಳಕಿನಾಟ ಆಡಿ ಹಿತ ಅನುಭವ ತರುವ ಬಗೆಯ ವರ್ಣನೆ ಇದು

ಶ್ರಾವಣಾ ಬಂತು ಹೊಳಿಗಳಿಗೆ  | ಅದೇ ಶುಭಗಳಿಗೆ |
ಹೊಳಿಗೆ ಮತ್ತು ಮಳಿಗೆ |
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ ||

ಕವಿ ಕಲ್ಪನೆಯ ಉತ್ತಮ ನಿದರ್ಶನ ಇಲ್ಲಿ!  ಬೆಟ್ಟಗಳನ್ನು ದಾಟಿ ಬಂದ ಮಳೆ ಹೊಳೆಯ ಮೇಲೆ ಧಾರಾಕಾರ ಸುರಿಯುತ್ತಿದೆ. ಮಳೆ ಎಲ್ಲಿಗೆ ಮುಗಿಯುತ್ತದೆ ಹೊಳೆ ಎಲ್ಲಿ ಆರಂಭವಾಗುತ್ತದೆ ಎಂದು ತಿಳಿಯದ ಆ ಘಟ್ಟದಲ್ಲಿ ಹೊಳೆ ಮಳೆಗಳು ಸೇರಿಕೊಂಡು ಅದಕ್ಕೆ ಲಗ್ನವಾಗಿದೆ ಎಂಬ ಕವಿಯ ಮಾತು ಎಷ್ಟು ಸುಂದರ ಸತ್ಯ ಅಲ್ಲವೇ? ಈ ಸಾಲುಗಳನ್ನು ಪ್ರಧಾನಮಂತ್ರಿ ಮೋದಿಯವರು ಶ್ರಾವಣದ ಮಹತ್ವದ ಬಗ್ಗೆ ಹೇಳುತ್ತಾ ತಮ್ಮ ಮನ್ ಕೀ ಬಾತ್ ನಲ್ಲೂ ಉಪಯೋಗಿಸಿಕೊಂಡಿದ್ದಾರೆ ಎಂದರೆ ಇದರ ಅನುಪಮತೆಯ ಅರಿವಾಗುತ್ತದೆ .

ಶ್ರಾವಣಾ ಬಂತು ಊರಿಗೆ | ಕೇರಿಕೇರಿಗೆ |
ಹೊಡೆದ ಝೂರಿಗೆ |
ಜೋಕಾಲಿ ಏರಿ | ಅಡರ್ಯಾಭವ ಮರಕ ಹಾರಿ ||

ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ |
ಮನದ ನನಿಕೊನಿಗೆ |
ಒಡೆದಾವ ಹಾಡೂ | ರಸ ಉಕ್ಕತಾವ ನೋಡು |
ಶ್ರಾವಣಾ ಬಂತು ||

ಶ್ರಾವಣ ಒಂಟಿಯಾಗಿ ಬಂದಿಲ್ಲ ತನ್ನೊಂದಿಗೆ ಹಬ್ಬದ ದಿಬ್ಬಣವನ್ನು ಹೊತ್ತು ತಂದಿದೆ. ಶ್ರಾವಣದ ಮುನ್ನಾದಿನದ ಭೀಮನ ಅಮವಾಸ್ಯೆಯಿಂದ ಹಿಡಿದು ಹಿಂದೂಗಳಿಗೆ ಹಬ್ಬದ ಸಾಲು ಸಾಲೇ. ಸೋಮವಾರದ  ಶಿವನ ಪೂಜೆ, ಮಂಗಳವಾರದ ಮಂಗಳಗೌರಿ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮಿ

ಶ್ರಾವಣ ಶನಿವಾರದ ಮಧುಕರಿ ವೃತ್ತಿ ವೆಂಕಟರಮಣನ ಆರಾಧನೆ, ರಾಘವೇಂದ್ರ ಸ್ವಾಮಿಗಳ ಆರಾಧನೆ ನಾಗರಪಂಚಮಿ ರಾಖಿ ಹುಣ್ಣಿಮೆ ಇದೆಲ್ಲದರೊಂದಿಗೆ ಅರವಿಂದರ ಜನ್ಮದಿನವೂ ಪಾಣಿನಿ ಮಹರ್ಷಿಗಳ ಜನ್ಮದಿನವೂ ಈ ಮಾಸದಲ್ಲಿಯೇ . ಹಾಗಾಗಿಯೇ ಜೋಕಾಲಿ ಜೀಕುವ ಹೆಂಗೆಳೆಯರ   ಸಂಭ್ರಮ ಮನೆ ಮನೆಗಳಲ್ಲಿ ಕಟ್ಟಿದ ಹಸಿರಿನ ತೋರಣ ಹೋಳಿಗೆಯ ಹೂರಣದಾ ಗಮ ಗುರುಗಳ ಆರಾಧನೆಯಲ್ಲಿನ ಭಕ್ತಿಯ ಕ್ರಮ ಇವೆಲ್ಲವೂ ರಸೋತ್ಕೃಷ್ಟ ಅನುಭವವನ್ನು ತಂದು ಮನೆ ಮನೆಗಳಲ್ಲೂ ಶ್ರಾವಣದ ಸೊಗಡು ಹರಿಯುವಂತೆ ಮಾಡುತ್ತದೆ.

ಬೆಟ್ಟ ತೊಟ್ಟಾವ ಕುತನಿಯ ಅಂಗಿ |
ಹಸಿರು ನೋಡ ತಂಗಿ |
ಹೊರಟಾವೆಲ್ಲೊ ಜಂಗಿ |
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||

ಇದುವರೆಗೂ ಆದ ವರುಣನ ಆಗಮನದಿಂದ ಗುಡ್ಡ ಬೆಟ್ಟಗಳ ಮೇಲೆಲ್ಲ ಹಸಿರು ಕುಡಿಯೊಡೆದು ಚಿಕ್ಕಮಕ್ಕಳು ಕುತನಿ ಅಂದರೆ ವೆಲ್ವೆಟ್ ನ ಅಂಗಿಯನ್ನು ತೊಟ್ಟಂತೆ ಭಾಸವಾಗುತ್ತಿದೆ . ಅಲ್ಲಿಯೂ ಸಹ ಜಾತ್ರೆ ಹಬ್ಬಗಳಲ್ಲಿ ಮಕ್ಕಳ ಸಂಭ್ರಮವನ್ನು ಅವರ ಮೊಗ ಪ್ರತಿಫಲಿಸಿದಂತೆ ಬೆಟ್ಟದ ದೃಶ್ಯ ನಗೆಯನ್ನು ಪ್ರತಿಫಲಿಸುವಂತೆ ಅನ್ನಿಸುತ್ತದೆ. ಇಲ್ಲಿನ ತಂಗಿ ಸಂಬೋಧನೆಯು ಶ್ರಾವಣದ ಪಂಚಮಿಗೆ ಬಂದ ತಂಗಿ ಯನ್ನು ರಾಖಿ ಹಬ್ಬದ ಸಹೋದರಿ ಪ್ರೀತಿಯನ್ನು ಧ್ವನಿಸುವ ಹಾಗಿದೆ.

ಬನ ಬನ ನೋಡು ಈಗ ಹ್ಯಾಂಗ |
ಮದುವಿ ಮಗನ್ಹಾಂಗ |
ತಲಿಗೆ ಬಾಸಿಂಗ |
ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||

ಶ್ರಾವಣ ಎಂದರೆ ಹೂಗಳು ಅರಳಿ ನಿಲ್ಲುವ ಕಾಲ. ಕಾಡು ಹೂಗಳಿರಲಿ ಪೂಜೆಗೆ ಬೇಕಾದ ಹೂಗಳಿರಲಿ ಸಮೃದ್ಧ ಈ ಕಾಲದಲ್ಲಿ . ಹಾಗಾಗಿಯೇ ಬಲ ಬನಗಳಲ್ಲಿ ಚಿಗುರೊಡೆದು ಗಿಡ ಬಳ್ಳಿಗಳ ತುದಿಯಲ್ಲಿ ಬಿಟ್ಟಿರುವ ಹೂವು ಬಾಸಿಂಗವನ್ನು ಧರಿಸಿದ ಮದುಮಗನ ಸಂಭ್ರಮವನ್ನು ಎತ್ತಿ ತೋರುವಂತೆ ಕಾಣುತ್ತದೆ ಎನ್ನುತ್ತಾರೆ .

ಹಸಿರುಟ್ಟ ಬಸುರಿಯ ಹಾಂಗ |
ನೆಲಾ ಹೊಲಾ ಹಾಂಗ |
ಅರಿಸಿಣ ಒಡೆಧಾಂಗ |
ಹೊಮ್ಮತಾವ | ಬಂಗಾರ ಚಿಮ್ಮತಾವ ||

ಬನಗಳು ಮದುಮಗನನ್ನು ಹೋದರೆ ಭೂಮಿಯು ಹಸಿರುಟ್ಟ ಬಸುರಿಯಂತೆ ಫಲವತ್ತತೆಯಿಂದ ಬಾಗಿ ನಿಂತಿದೆ ಎನ್ನುತ್ತಾರೆ ಅಲ್ಲಲ್ಲಿ ಚಿಗುರೊಡೆದ ಹಳದಿ ಗಿಡ ಹೂವುಗಳು ಬಸುರಿ ಹೆಂಗಸು ತೊಳೆದುಕೊಂಡ ಅರಿಶಿಣ ತೊಟ್ಟ ಬಂಗಾರದ ಚೆಲುವನ್ನು ಪ್ರತಿನಿಧಿಸುತ್ತದೆ .

ಗುಡ್ಡ ಗುಡ್ಡ ಸ್ಥಾವರಲಿಂಗ |
ಅವಕ ಅಭ್ಯಂಗ |
ಎರಿತಾವನ್ನೋ ಹಾಂಗ |
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||

ಗುಡ್ಡ ಬೆಟ್ಟಗಳು ಕವಿಯ ಕಣ್ಣಿಗೆ ಸ್ಥಾವರಲಿಂಗದ ಹಾಗೆ ತೋರುತ್ತದೆ ಎಡೆಬಿಡದೆ ಸುರಿಯುವ ಮಳೆ ಅವುಗಳಿಗೆ ಅಭ್ಯಂಗಸ್ನಾನ ಮಾಡಿಸುತ್ತಿವೆಯೇನೋ ಎಂಬಂತೆ . ಸುತ್ತ ನೆರೆದ ಕಪ್ಪು ಮೋಡಗಳು ಸ್ಥಾವರಲಿಂಗವೆಂದೂ ಗುಡ್ಡಕ್ಕೆ ಅಭಿಷೇಕ ಮಾಡಿ ಅಭ್ಯಂಗಸ್ನಾನ ಮಾಡಿಸುತ್ತಿದೆ ಎಂಬ ಕಲ್ಪನೆಯೇ ಎಷ್ಟು ಸುಂದರ ಅನುಭೂತಿ . ಅಲ್ಲದೆ ಈ ಅಭ್ಯಂಗ ವೆನ್ನುವುದು 1ರೀತಿ ಯಜ್ಞಯಾಗಾದಿಗಳಿಗೆ ಮುಂಚಿನ ಶುಭ ಸ್ನಾನ . ಶ್ರಾವಣವೆಂಬ ಸಾಮಾನ್ಯಜಾ ಪುಣ್ಯಕಾರ್ಯಕ್ಕೆ ಮೊದಲು ಬೆಟ್ಟಗಳಿಗೆ ಮಳೆಹನಿಗಳ ಅಭ್ಯಂಗ .

ನಾಡೆಲ್ಲ ಏರಿಯ ವಾರಿ |
ಹರಿತಾವ ಝರಿ |


  • ಸುಜಾತ ರವೀಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading