ಜನವರಿ ೧ ರಂದು ಹೊಸ ವರ್ಷವನ್ನು ಆಚರಿಸುತ್ತಿರುವ ಹಾಗೆ ಇದೇ ದಿನ ಕಲ್ಪತರು ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ. 1886 ರಲ್ಲಿ ಶ್ರೀ ರಾಮಕೃಷ್ಣರು ಕಾಶೀಪುರ ಎಂಬ ಉದ್ಯಾನದ ಮನೆಯಲ್ಲಿ ತಮ್ಮ ಚಿಕಿತ್ಸೆಗೆಂದು ಉಳಿದಿದ್ದ ಸಂದರ್ಭದಲ್ಲಿ ನಡೆದ ಘಟನೆಯೊಂದು ಈ ಕಲ್ಪತರು ದಿನದ ಆಚರಣೆಗೆ ಕಾರಣವಾಯಿತು ಎನ್ನಲಾಗಿದೆ, ಆ ಘಟನೆಯನ್ನೊಮ್ಮೆ ಇಲ್ಲಿ ಸ್ಮರಿಸುತ್ತ ಅದರ ಔಚಿತ್ಯ, ಮಹತ್ವವನ್ನು ಹಾಗೂ ಅದರ ಪ್ರಾಮುಖ್ಯತೆಯೇನು ಎನ್ನುವುದನ್ನು ತಿಳಿಯೋಣ. – ️ಶೋಭಾವತಿ ಆರ್, ತಪ್ಪದೆ ಮುಂದೆ ಓದಿ…
ಸ್ಥಾಪಕಾಯ ಚ ಧರ್ಮಸ್ಯ,
ಸರ್ವ ಧರ್ಮ ಸ್ವರೂಪಿಣೇ,
ಅವತಾರ ವರಿಷ್ಠಾಯ
ರಾಮಕೃಷ್ಣಾಯ ತೇ ನಮಃ ।
ಭಕ್ತರ ಒತ್ತಾಯದ ಮೇರೆಗೆ ಕಾಶೀಪುರ ಉದ್ಯಾನದಲ್ಲಿ ಶ್ರೀ ರಾಮಕೃಷ್ಣರು ವಾಸವಾಗಿದ್ದಾರೆ, ಅಂದು 1886 ಶುಕ್ರವಾರ ರಜಾ ದಿನವಾದ್ದರಿಂದ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಒಬ್ಬೊಬ್ಬರಾಗಿ ಕಲ್ಕತ್ತದಿಂದ ಬಂದು ಶ್ರೀ ರಾಮಕೃಷ್ಣರು ವಾಸವಾಗಿದ್ದಂತಹ ಮನೆಯ ಬಳಿ ಸೇರುತ್ತಿದ್ದಾರೆ, ಶ್ರೀ ರಾಮಕೃಷ್ಣರು ಎಂದಿಗಿಂತ ಇಂದು ಹೆಚ್ಚು ಲವಲವಿಕೆಯಿಂದ ಹಸನ್ಮುಖರಾಗಿ ಕಾಣುತ್ತಿದ್ದಾರೆ. ಬಹಳ ದಿವಸಗಳ ನಂತರ ಕಾಶೀಪುರ ಉದ್ಯಾನವನದಲ್ಲಿ ವಾಯು ಸೇವನೆ ಮಾಡಲೆಂದು ಒಂದಿಬ್ಬರು ಸಹಾಯಕರೊಡಗೂಡಿ ಮಹಡಿಯಿಂದ ಇಳಿದು ನೆಲಮಹಡಿಗೆ ಬಂದಾಗ ಮನೆಯ ಒಳಗೆ ಹೊರಗೆ ಎಲ್ಲ ಕಡೆಯೂ ಭಕ್ತರು ನೆರೆದಿದ್ದಾರೆ, ಅವರೆಲ್ಲ ಶ್ರೀ ರಾಮಕೃಷ್ಣರನ್ನು ನೋಡಿದ ಕೂಡಲೇ ಸಂಭ್ರಮದಿಂದ ಎದ್ದು ಬಂದು ಪ್ರಣಾಮ ಮಾಡಿದರು, ಶ್ರೀ ರಾಮಕೃಷ್ಣರು ಮನೆಯ ಹೊರಗೆ ಬಂದು ತೋಟದ ಮಾರ್ಗದಲ್ಲಿ ಮುಂದುವರಿದರು, ಭಕ್ತರೆಲ್ಲರೂ ಸಹ ಅವರ ಹಿಂದೆಯೇ ಹೊರಟರು, ರಸ್ತೆಯ ಮಧ್ಯಭಾಗಕ್ಕೆ ಬಂದಾಗ ಅಲ್ಲಿ ಗಿರೀಶ್ ಚಂದ್ರ ಘೋಶ್, ರಾಮ, ಅತುಲ ಮತ್ತು ಇನ್ನು ಕೆಲವರು ಮರದ ಕೆಳಗೆ ಕುಳಿತು ಮಾತನಾಡುತ್ತಾ ಕುಳಿತಿರುವುದನ್ನು ಕಂಡರು, ಅವರೆಲ್ಲರೂ ಶ್ರೀ ರಾಮಕೃಷ್ಣರ ಹತ್ತಿರ ಬಂದು ಆನಂದದಿಂದ ನಮಸ್ಕರಿಸಿದರು, ಇಡೀ ವಾತಾವರಣ ಸಂತೋಷದಿಂದ ತುಂಬಿದೆ, ಎಲ್ಲರೂ ಕೂಡ ಆನಂದದಲ್ಲಿ ತಲ್ಲೀನರಾಗಿದ್ದಾರೆ, ಇಂತಹ ಆನಂದ ಮೌನವಾಗಿ ಆಸ್ವಾಧಿಸಲ್ಪಡುತ್ತಿದೆ, ಯಾರಿಗೂ ಕೂಡ ಒಂದು ರೀತಿಯಲ್ಲಿ ಮಾತನಾಡಲು ಇಷ್ಟವಿಲ್ಲದ ಒಂದು ದಿವ್ಯ ವಾತಾವರಣ ಅಲ್ಲಿ ನೆಲೆಸಿದೆ.

ಶ್ರೀ ರಾಮಕೃಷ್ಣರ ತರುಣ ಸಾಧಕ ಶಿಷ್ಯರೂ ಕೂಡ ಹಿಂದಿನ ದಿನ ರಾತ್ರಿಯೆಲ್ಲ ಅವರ ಸೇವೆಯನ್ನು ಮಾಡುತ್ತಾ, ಜಪ ತಪಾದಿಗಳನ್ನು ಮಾಡುತ್ತಾ ಅಲ್ಲಿಯೇ ಇದ್ದರು, ಸ್ವಲ್ಪ ದಣಿದಿದ್ದರಿಂದ ಲಾಟು ಮತ್ತು ಶರತ್ ಚಂದ್ರನನ್ನು ಹೊರತುಪಡಿಸಿ ಉಳಿದವರೆಲ್ಲರೂ ವಿಶ್ರಾಂತಿಗೆಂದು ಹೋಗಿದ್ದಾರೆ. ಅನಿರೀಕ್ಷಿತವಾಗಿ ಶ್ರೀ ರಾಮಕೃಷ್ಣರು ಗಿರೀಶನ ಬಳಿ ನಿಂತಿದ್ದಾರೆ ಹಾಗೂ ಗಿರೀಶನನ್ನು ಕೇಳುತ್ತಿದ್ದಾರೆ….ಇದರ ಬಗ್ಗೆ(ತಮ್ಮ ಶರೀರವನ್ನು ತೋರಿಸುತ್ತಾ), ಇದರ ಅವತರಣದ ಬಗ್ಗೆ ಎಲ್ಲರ ಮುಂದೆ ಕೂಡ ಎಷ್ಟೋ ವಿಷಯಗಳನ್ನು ಹೇಳಿಕೊಂಡು ತಿರುಗಾಡುತ್ತಿರುವೆಯಂತಲ್ಲ ಇದರಲ್ಲಿ ನೀನು ಅಂತಹದ್ದು ಕಂಡದ್ದಾದರೂ ಏನು? ಇದರ ಬಗ್ಗೆ ನೀನು ಏನು ತಿಳಿದುಕೊಂಡಿರುವೆ? ಎಂದು ಶ್ರೀ ರಾಮಕೃಷ್ಣರು ಕೇಳುತ್ತಿದ್ದಾರೆ, ಹೀಗೆ ಏಕಾಏಕಿ ಬಂದ ಪ್ರಶ್ನೆಯಿಂದ ಗಿರೀಶನು ಸ್ವಲ್ಪವೂ ವಿಚಲಿತನಾಗದೆ ಶ್ರೀ ರಾಮಕೃಷ್ಣರ ಪದತಲದಲ್ಲಿ ಮಂಡಿಯೂರಿ ಕುಳಿತು ತಲೆಯೆತ್ತಿ ಕೈ ಜೋಡಿಸಿ ಭಾವ ಭರಿತನಾಗಿ ಗದ್ಗದ ಸ್ವರದಲ್ಲಿ ಹೇಳತೊಡಗಿದ “ಯಾರ ಮಹಿಮೆಯನ್ನು ಬಣ್ಣಿಸಿ ಮುಗಿಸಲು ವ್ಯಾಸ ವಾಲ್ಮೀಕಿ ಮುನಿಗಳಿಗೂ ಸಾಧ್ಯವಾಗಲಿಲ್ಲವೋ” ಅಂತಹವರ ಬಗ್ಗೆ ಅಲ್ಪನಾದ ನಾನು ಏನನ್ನು ತಾನೆ ಹೇಳಲಿ, “ಯಾರ ಮಹಿಮೆಯನ್ನು ಬಣ್ಣಿಸಲು ಹೊರಟ ವ್ಯಾಸ ವಾಲ್ಮೀಕಿಗಳು ಮೂಕರಾದರೋ ಅದನ್ನು ವಿವರಿಸಲು ಸಫಲವಾಗಲಿಲ್ಲವೋ” ಅಂತಹವರ ಬಗ್ಗೆ ಅಲ್ಪನಾದ ನಾನು ಏನನ್ನು ತಾನೆ ಹೇಳಲಿ.
ರಾಮಾಯಣದ ಕತೃ ವಾಲ್ಮೀಕಿ ಆತ ಶ್ರೀ ರಾಮಾಯಣದ ಚರಿತ್ರೆಯನ್ನು ಬಣ್ಣಿಸಿದವರು, ವ್ಯಾಸರೋ ಮಹಾಭಾರತದ ಮೂಲಕ ಶ್ರೀ ಕೃಷ್ಣನ ಗುಣ ಕಥನವನ್ನು ಮಾಡುವುದಕ್ಕೆ ಯತ್ನಿಸಿದವರು, ಶ್ರೀ ರಾಮನೂ ಶ್ರೀ ಕೃಷ್ಣನೂ ಸ್ವಯಂ ಪರಂಬ್ರಹ್ಮನ ಅವತಾರರು, ಹಾಗಿರುವಾಗ ಈಗ ಶ್ರೀ ರಾಮಕೃಷ್ಣರಿಬ್ಬರೂ ಕೂಡ ಒಟ್ಟಾಗಿ ಶ್ರೀ ರಾಮಕೃಷ್ಣರ ರೂಪದಲ್ಲಿ ಅವತರಿಸಿದ್ದಾರೆ, ಅವರ ಮಹಿಮೆಯನ್ನು ಕುರಿತು ಬಣ್ಣಿಸುವುದಕ್ಕೆ ತನ್ನಂತಹ ಸಾಮಾನ್ಯ ಮರ್ತ್ಯನಿಗೆ ಸಾಧ್ಯವಿಲ್ಲ ಎನ್ನುವುದನ್ನು ಅತ್ಯಂತ ವಿನೀತನಾಗಿ ಗಿರೀಶ್ ಚಂದ್ರ ಘೋಶ್ ಶ್ರೀ ರಾಮಕೃಷ್ಣರ ಮುಂದೆ ಮಂಡಿಯೂರಿ ಕೈ ಜೋಡಿಸಿಕೊಂಡು ತನ್ನ ಸೀಮಿತತೆಯನ್ನು ಈ ರೀತಿಯಲ್ಲಿ ವಿನಂತಿಸಿಕೊಳ್ಳುತ್ತಿದ್ದಾನೆ.

ಗಿರೀಶನ ಅಂತರಾಳದಿಂದ ಬಂದಂತಹ ಈ ಸರಳ ವಿಶ್ವಾಸದ ಮಾತುಗಳನ್ನು ಕೇಳಿ ಶ್ರೀ ರಾಮಕೃಷ್ಣರು ಮುಗ್ದರಾಗುತ್ತಾರೆ, ಹೀಗೆ ಗಿರೀಶ ಭಕ್ತರೆಲ್ಲರ ಪ್ರತಿನಿಧಿಯಾಗಿ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಇಲ್ಲಿ ನಿರೂಪಿಸಿದ್ದಾನೆ, ಭಕ್ತರ ವಕ್ತಾರನಂತೆ ಇಲ್ಲಿ ಮಾತನಾಡಿದ್ದಾನೆ, ಶ್ರೀ ರಾಮಕೃಷ್ಣರ ಪ್ರಶ್ನೆಗೆ ಅವನು ಉತ್ತರಿಸಿದ್ದು ಎಲ್ಲರ ಪರವಾಗಿ ಆದ್ದರಿಂದ ಶ್ರೀ ರಾಮಕೃಷ್ಣರು ಎಲ್ಲ ಭಕ್ತರನ್ನುದ್ದೇಶಿಸಿ ಮಂದಸ್ಮಿತರಾಗಿ “ನಾನಿನ್ನೇನು ತಾನೇ ಹೇಳಲಿ, ನಿಮಗೆಲ್ಲ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ” ಹೀಗೆನ್ನುತ್ತ ಭಕ್ತರ ಮೇಲಿನ ತಮ್ಮ ಕರುಣೆ ವಾತ್ಸಲ್ಯಗಳಿಂದ ಮೈ ಮರೆತು ಭಾವಾವಿಷ್ಟರಾಗಿ ಭಗವಾನ್ ಶ್ರೀ ರಾಮಕೃಷ್ಣರು ನಿಂತುಬಿಟ್ಟರು. ಶ್ರೀ ರಾಮಕೃಷ್ಣರ ಉತ್ಕತ ಭಾವದ ಈ ಮಾತು ಅಲ್ಲಿ ಆನಂದದ ಕೋಲಾಹಲವನ್ನೇ ಉಂಟು ಮಾಡಿತ್ತು, ನಿಜಕ್ಕೂ ಅಲ್ಲಿ ಪ್ರಚಂಡ ವಾತಾವರಣ ನಿರ್ಮಾಣವಾಯ್ತು ಎಂದು ಹೇಳಲಾಗಿದೆ, ಇದು ಕೇಳುಗರ ಊಹೆಗೂ ನಿಲುಕುವಂತದ್ದಲ್ಲ ಅದನ್ನು ಮೀರಿದ ವಾತಾವರಣವೇ ನಿರ್ಮಾಣವಾಗಿತ್ತೆಂದು ಹೇಳಲಾಗಿದೆ.
ಶ್ರೀ ರಾಮಕೃಷ್ಣರ ಆಶೀರ್ವಾದದ ಆ ಎರಡು ನುಡಿಗಳು ನೇರವಾಗಿ ಭಕ್ತರ ಹೃದಯಾಂತರಾಳವನ್ನು ಹೊಕ್ಕಿತು, ಅಲ್ಲಿ ಆನಂದದ ಮಹಾ ತರಂಗಗಳನ್ನು ಎಬ್ಬಿಸಿತು, ದೇಶ ಕಾಲಗಳನ್ನು ಅವರೆಲ್ಲರೂ ಮರೆಯುವಂತೆ ಮಾಡಿತು, ಶ್ರೀ ರಾಮಕೃಷ್ಣರ ಅನಾರೋಗ್ಯದ ವಿಷಯವಾಗಲಿ, ಅವರು ಆರೋಗ್ಯವಂತರಾಗುವವರೆಗೂ ಅವರ ಪಾದಮುಟ್ಟಿ ನಮಸ್ಕರಿಸುವುದು ಬೇಡವೆಂದು ತಾವೇ ಸ್ವತಃ ಹಾಕಿಕೊಂಡಿದ್ದ ನಿಯಮವಾಗಲಿ ಭಕ್ತರಿಗೆ ಮರೆತುಹೋಗಿತ್ತು, ತಮ್ಮ ನಿಯಮವನ್ನು ತಾವೇ ಮಾಸಿ ಹೋಗುವಂತೆ ಅವರೆಲ್ಲ ನಡೆದುಕೊಂಡುಬಿಟ್ಟರು. “ನಿಮಗೆಲ್ಲ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ” ಎಂಬ ಆಶೀರ್ವಚನವನ್ನು ಕೇಳಿದೊಡನೆ ಗಿರೀಶ್ ಚಂದ್ರ ಘೋಶ್ “ಜೈ ರಾಮಕೃಷ್ಣ, ಜೈ ರಾಮಕೃಷ್ಣ” ಎಂದು ಉದ್ಗೋಷಿಸುತ್ತಾ ಅವರ ಪಾದಕ್ಕೆರಗಿದ, ಮರುಕ್ಷಣವೇ ಅಲ್ಲಿದ್ದ ಎಲ್ಲರ ಧ್ವನಿ ಜೈ ರಾಮಕೃಷ್ಣ ಜೈ ರಾಮಕೃಷ್ಣ ಅಂತ ನೂರು ಪಟ್ಟು ಹೆಚ್ಚಾಗಿ ಅದು ಪ್ರತಿಧ್ವನಿಸಿತು, ಅಲ್ಲಿ ರಾಮಕೃಷ್ಣರಿಗೆ ಜೈಕಾರ ಮೊಳಗಿತು, ಎಲ್ಲರೂ ಶ್ರೀ ರಾಮಕೃಷ್ಣರ ಪಾದಗಳಿಗೆ ಎರಗಿ ಅವರ ಪಾದದೂಳಿಯನ್ನು ಭಕ್ತಿ ಶ್ರದ್ದೆಯಿಂದ ಸ್ವೀಕರಿಸುತ್ತಿದ್ದಾರೆ, ಆಗ ಶ್ರೀ ರಾಮಕೃಷ್ಣರ ಅಹೈತುಕ ಕರುಣೆಯ ಸಾಗರ ಎನ್ನುವಂತದ್ದು ಸೀಮೆಗಳನ್ನು ಮೀರಿ ಉಕ್ಕಿ ಹರಿಯಲಾರಂಭಿಸಿತು, ತಮ್ಮ ಬಳಿಗೆ ಬಂದ ಪ್ರತಿಯೊಬ್ಬ ಭಕ್ತರನ್ನೂ ಕೂಡ ಸ್ಪರ್ಶಿಸಿ ಸೂಕ್ತ ಮಂತ್ರಗಳನ್ನು ಉಚ್ಚರಿಸಿ ರಾಮಕೃಷ್ಣರು ಭಕ್ತರನ್ನು ಹರಸುವುದಕ್ಕೆ ಪ್ರಾರಂಭಿಸಿದರು.

ಶ್ರೀ ರಾಮಕೃಷ್ಣರ ಜೀವಿತಾವಧಿಯಲ್ಲಿ ದಕ್ಶಿಣೇಶ್ವರದಲ್ಲಿ ಅವರು ಎಷ್ಟೋ ಜನಕ್ಕೆ ಈ ರೀತಿಯ ಕೃಪೆಯನ್ನು ನೀಡಿದ್ದಾರೆ, ಆದರೆ ಅವರೆಲ್ಲರೂ ಸಾಧಕರಾಗಿದ್ದವರು, ಅದರಲ್ಲೂ ಎಲ್ಲೋ ಆಗೊಬ್ಬ ಈಗೊಬ್ಬ ಸಾಧಕನಿಗೆ ಈ ರೀತಿಯ ಕೃಪಾವರ್ಷ ಸಿಗುತ್ತಿತ್ತು, ಆದರೆ ಇಂದು ಕಾಶೀಪುರದ ಉದ್ಯಾನವನದಲ್ಲಿ ನೆರೆದ ಪ್ರತಿಯೊಬ್ಬರನ್ನೂ ಕೂಡ ಶ್ರೀ ರಾಮಕೃಷ್ಣರು ಹರಸುತ್ತಾ ಇದ್ದಾರೆ, ಸಾಧಕನೋ ಅಲ್ಲವೋ ಯಾವುದನ್ನೂ ಲೆಕ್ಕಿಸದೆ ಅವಿಚ್ಚಿನ್ನವಾಗಿ ರಾಮಕೃಷ್ಣರ ಕೃಪಾದೃಷ್ಟಿ ಎಲ್ಲರ ಮೇಲೆ ಬೀಳುತ್ತಾ ಇದೆ, ಇದನ್ನು ಕಂಡು ಭಕ್ತರ ಆನಂದ ಆಶ್ಚರ್ಯಗಳಿಗೆ ಪಾರವೇ ಇಲ್ಲ, ಮಲಯ ಮಾರುತ ಬೀಸಿದಾಗ ಎಲ್ಲ ಮರಗಳು ಕೂಡ ಗಂಧದ ಮರಗಳಾಗುತ್ತವೆ ಎಂದು ಶ್ರೀ ರಾಮಕೃಷ್ಣರು ಹಲವಾರು ಸಲ ಹೇಳಿರುವುದನ್ನು ಭಕ್ತರು ಕೇಳಿಸಿಕೊಂಡಿದ್ದರು, ಅದೇ ರೀತಿಯಲ್ಲಿ ಶ್ರೀ ರಾಮಕೃಷ್ಣರ ಕೃಪಾವರ್ಷ ಹರಿಯುತಲಿದ್ದು ಎಲ್ಲರೂ ಕೂಡ ಬದುಕಿನ ಧನ್ಯತೆಯನ್ನು ಈಗ ಅನುಭವಕ್ಕೆ ತಂದುಕೊಳ್ಳುತ್ತಿದ್ದಾರೆ, ಶ್ರೀ ರಾಮಕೃಷ್ಣರು ತಮ್ಮ ಮಾನವತೆಯ ಪರದೆಯನ್ನು ಕಿತ್ತೊಗೆದು ದೈವತ್ವವನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಭಕ್ತರಿಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ, ಅಂದು ಶ್ರೀ ರಾಮಕೃಷ್ಣರು ಭಕ್ತರ ಅರ್ಹತೆಗೂ ಮೀರಿ ಅವರ ಮೇಲೆ ಕೃಪಾ ವರ್ಷ ಮಾಡಿದ್ದರು, ಆ ಸಮಯದಲ್ಲಿ ಅವರೊಬ್ಬ ಕಲ್ಪವೃಕ್ಷವೇ ಅಗಿ ಹೋಗಿದ್ದರು.
ರಾಮಚಂದ್ರ ದತ್ತ ಮತ್ತು ಕೆಲವು ಭಕ್ತರು ಈ ಒಂದು ಪವಿತ್ರ ಸನ್ನಿವೇಶದ ಕ್ಷಣಗಳನ್ನು ಭಕ್ತ ಸಮೂಹದಲ್ಲಿ ಬಹಳ ತ್ವರಿತವಾಗಿ ಪ್ರಚಾರ ಮಾಡಿದರು, ತತ್ಪರಿಣಾಮವಾಗಿ ಜನವರಿ 01, ಶ್ರೀ ರಾಮಕೃಷ್ಣರ ಭಕ್ತ ವಲಯದಲ್ಲಿ ಕಲ್ಪತರು ದಿನವೆಂದೇ ಪ್ರಸಿದ್ದಿಯಾಯಿತು, ಅಂದಿನಿಂದ ಪ್ರತೀ ವರ್ಷ ಜನವರಿ 01, ವಿಶ್ವದಾದ್ಯಂತ ರಾಮಕೃಷ್ಣ ಆಶ್ರಮಗಳಲ್ಲಿ ಮತ್ತು ರಾಮಕೃಷ್ಣ ಭಕ್ತ ಸಮೂಹದಲ್ಲಿ ಕಲ್ಪತರು ದಿನದ ಆಚರಣೆಯನ್ನು ನಾವು ಗಮನಿಸಬಹುದು.
ಕಲ್ಪತರು ಗುಣವೆಂದರೆ ಯಾರು ಏನನ್ನೇ ಬೇಡಲಿ ಅದನ್ನು ಅವರಿಗೆ ಕೊಡುವಂತದ್ದು, ಅದರಿಂದ ಅವರಿಗೆ ಹಿತವಾಗುತ್ತದೆಯೋ, ಶ್ರೇಯಸ್ಸಾಗುತ್ತದೆಯೋ, ಇದ್ಯಾವುದನ್ನೂ ಯೋಚಿಸದೆ ಕೇಳಿದ್ದನ್ನೆಲ್ಲ ಕೊಡುವುದು ಕಲ್ಪವೃಕ್ಷದ ಸ್ವಭಾವ, ಇದರಿಂದ ಕಲ್ಪವೃಕ್ಷದಿಂದ ಪಡೆದದ್ದನ್ನು ಒಳ್ಳೆಯದಕ್ಕೆ ಬಳಸಿಕೊಂಡವರದೆಷ್ಟು ಜನ ಇದ್ದಾರೋ ಅದರಿಂದ ಹಾನಿ ಮಾಡಿಕೊಂಡವರೂ ಕೂಡ ಬಹಳಷ್ಟು ಜನ ಇದ್ದಾರೆ, ಆದರೆ ಶ್ರೀ ರಾಮಕೃಷ್ಣರು ಹಾಗೆ ಮಾಡಲಿಲ್ಲ, ಇದನ್ನು ನಾವಿಲ್ಲಿ ಗಮನಿಸುವಂತಹ ಅಂಶ, ಶ್ರೀ ರಾಮಕೃಷ್ಣರು ಆಧುನಿಕ ಯುಗದಲ್ಲಿ ಸುಧಾರಿತ ಕಲ್ಪತರುವಾಗಿ ಶ್ರೇಷ್ಠವಾಗಿ ನಮ್ಮ ಜೀವನಕ್ಕೆ ಉದ್ದಾರಕ್ಕೆ ಪೂರಕವಾಗುವ ರೀತಿಯಲ್ಲಿ ಕಲ್ಪತರುವಾಗಿ ನಡೆದುಕೊಂಡರು ಎಂಬುದನ್ನು ಶ್ರೀ ಶಾರದಾನಂದರು ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದಲ್ಲಿ ಉಲ್ಲೇಖಿಸಿದ್ದಾರೆ. ಶ್ರೀ ರಾಮಕೃಷ್ಣರು ಜಗತ್ತಿನ ಜನರ ಅಲೌಕಿಕ ಸುಖ ಪ್ರಾಪ್ತಿಯ ದಾರಿಯನ್ನು ಸುಗಮಗೊಳಿಸಿದರು, ನಿಜಕ್ಕೂ ಅಂದು ಶ್ರೀ ರಾಮಕೃಷ್ಣರು ತಮ್ಮ ದೈವತ್ವವನ್ನು ಅಥವಾ ದೇವ ಮಾನವತ್ವವನ್ನು ಬಹಿರಂಗಗೊಳಿಸಿದರು, ತಮ್ಮಲ್ಲಿ ಶರಣಾಗಿ ಬಂದ ಸರ್ವರಿಗೂ ಪಕ್ಷಪಾತವಿಲ್ಲದೆ ಅಭಯವನ್ನು ಆಶ್ರಯವನ್ನು ನೀಡಿದರು ಎಂಬುದೇ ಇತಿಹಾಸ. ಭಗವಂತನ ಕಲ್ಯಾಣ ಗುಣಗಳು ಅಸಂಖ್ಯಾತ.. ಆದರೆ ಆ ಎಲ್ಲ ಕಲ್ಯಾಣ ಗುಣಗಳಲ್ಲಿ ಕರುಣೆಯೇ ಪ್ರಧಾನವಾದದ್ದು.

ಅಂದು ಕಲ್ಪತರು ದಿನದಂದು ನೆರೆದಿದ್ದ ಭಕ್ತರೆಲ್ಲರಿಗೂ ಆಶೀರ್ವಾದ ಸಿಕ್ಕಿದೆ ನಿಜ, ಆದರೆ ಅದು ಇಂದಿಗೂ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ
ಮಾಸ್ಟರ್ ಮಹಾಶಯನಿಗೆ ಒಮ್ಮೆ ಭಕ್ತರೊಬ್ಬರು ಹೀಗೆ ಕೇಳುತ್ತಾರೆ ನೀವು ಅದೃಷ್ಟಶಾಲಿಗಳು ಮಾಸ್ಟರ್ ನೀವು ಶ್ರೀ ರಾಮಕೃಷ್ಣರನ್ನು ನೋಡಿರುವಿರಿ, ಅವರ ಮಾತುಗಳನ್ನು ಕೇಳಿರುವಿರಿ, ಅವರ ಸೇವೆಯನ್ನು ಮಾಡಿರುವಿರಿ ಹಾಗೂ ಅವರನ್ನು ಸ್ಪರ್ಶಿಸಿರುವಿರಿ, ಆದ್ದರಿಂದ ಅವರ ಪೂರ್ಣ ಕೃಪೆ ನಿಮಗಾಗಿದೆ, ಆದರೆ ನಮ್ಮ ಪಾಡೇನು ಎಂದು.
ಆಗ ಮಾಸ್ಟರ್ ಅತ್ಯಂತ ಪ್ರೀತಿಯಿಂದ ಹೇಳುತ್ತಾರೆ ನೀವು ಆ ರೀತಿಯಾಗಿ ದಯವಿಟ್ಟು ಯೋಚನೆ ಮಾಡಬಾರದು, ಶ್ರೀ ರಾಮಕೃಷ್ಣರು ಅಂದು ಹೇಳುತ್ತಿದ್ದರು “ತಮ್ಮ ಶಕ್ತಿ ಮತ್ತು ಸಂಪತ್ತುಗಳು ತಮ್ಮ ಸತ್ ಸಂತಾನ ವರ್ಗಕ್ಕೆ ಎಂದಿಗೂ ಕೂಡ ಪ್ರಾಪ್ತವಾಗುತ್ತದೆ, ಅವರ ತ್ಯಾಗ, ವೈರಾಗ್ಯ, ಜ್ಞಾನ, ಭಕ್ತಿ, ಮತ್ತು ಶ್ರೀ ರಾಮಕೃಷ್ಣರ ಪ್ರೀತಿ ( Love of Sri Ramakrishna) ಇದೆಲ್ಲವೂ ಕೂಡ ಭಕ್ತರ ಆಸ್ತಿಯಾಗಿ ಮುಂದುವರೆಯುತ್ತದೆ ಎಂದು. ಇದನ್ನು ನಾವಿಲ್ಲಿ ಗಮನಿಸಬೇಕಾದದ್ದೇ, ಪ್ರಾಪಂಚಿಕ ಜಗತ್ತಿನಲ್ಲಿ ತಂದೆಯ ಆಸ್ತಿ ತಮ್ಮ ಮಕ್ಕಳ ಪಾಲಿಗೆ ಎಂದು ಇರುವಾಗ ಆಧ್ಯಾತ್ಮಿಕ ಪಥದಲ್ಲೂ ಕೂಡ ಶ್ರೀ ರಾಮಕೃಷ್ಣರು ಅವರ ಆಧ್ಯಾತ್ಮಿಕ ಸಂಪತ್ತನ್ನೇ ನಮಗೆಲ್ಲ ಆಸ್ತಿಯಾಗಿ ಹಾಗೂ ಉಳಿದ ಭಕ್ತರ ಉದ್ದಾರಕ್ಕಾಗಿ ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಹೊಸ ವರ್ಷದ ಹಾರ್ಧಿಕ ಶುಭಾಶಯಗಳೊಂದಿಗೆ ಎಲ್ಲರಿಗೂ ಕಲ್ಪತರು ದಿನದ ಹಾರ್ಧಿಕ ಶುಭಾಶಯಗಳು, ಎಲ್ಲರಿಗೂ ಶ್ರೀ ರಾಮಕೃಷ್ಣರ ಕೃಪಾಶೀರ್ವಾದ ಲಭಿಸಲಿ.
ಜೈ ರಾಮಕೃಷ್ಣ
(ಸತ್ಸಂಗ ಸಂಗ್ರಹ)
- ️ಶೋಭಾವತಿ ಆರ್- ಕುಣಿಗಲ್, ತುಮಕೂರು ಜಿಲ್ಲೆ.
