ಸೃಷ್ಠಿಯ ಮೊದಲ ದಿನವೇ ಯುಗಾದಿ

ಪರಿಸರದ ಸೌಂದರ್ಯ ಇಮ್ಮಡಿಗೊಂಡು ಹೂವುಗಳ ಸುಗಂಧದೊಂದಿಗೆ ಪ್ರಾತಃಕಾಲದಿ ಬೀಸುವ ತಂಪಾದ ಗಾಳಿಯು ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಈ ಸೃಷ್ಠಿಯ ಮೊದಲ ದಿನವೇ ಯುಗಾದಿ. ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಲೇಖನಿಯಲ್ಲಿ ಮೂಡಿದ ಯುಗಾದಿ ಹಬ್ಬ, ತಪ್ಪದೆ ಮುಂದೆ ಓದಿ…

ಚೈತ್ರ ಮಾಸ ಅದರ ಇನ್ನೊಂದು ಹೆಸರು ಮಧು ಮಾಸ. ವೇದಗಳಲ್ಲಿ ಚೈತ್ರವನ್ನು ‘ಮಧು ಮಾಸ’ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ  ಋತುಗಳ ರಾಜನೆಂದು ಕರೆಯಲಾಗುವ ವಸಂತ ಋತುವು ತನ್ನ ಪೂರ್ಣ ಯೌವನದಲ್ಲಿರುತ್ತದೆ. ಹೊಸ ಚಿಗುರುಗಳಿಂದ ಮರಗಿಡಗಳು ಹಳೆಯ ಎಲೆಗಳನ್ನು ಉದುರಿಸಿ, ಕೆಂಪು ಮತ್ತು ಗುಲಾಬಿ ಮಿಶ್ರಿತ ಹೊಸ ಚಿಗುರನ್ನು ಧರಿಸುತ್ತವೆ. ಮಾವು – ಬೇವು ಮರಗಳಲ್ಲಿ ಹೂವು ಅರಳಿ ನಳನಳಿಸುತ್ತವೆ.

ಪರಿಸರದ ಸೌಂದರ್ಯ ಇಮ್ಮಡಿಗೊಂಡು ಹೂವುಗಳ ಸುಗಂಧದೊಂದಿಗೆ ಪ್ರಾತಃಕಾಲದಿ ಬೀಸುವ ತಂಪಾದ ಗಾಳಿಯು ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಕೋಗಿಲೆಯ ಗಾಯನ ಮಾಧುರ್ಯವೂ ಚೈತ್ರದ ಆಗಮನವನ್ನು ಸಾರುತ್ತದೆ.ಇಡಿ ಧರಿತ್ರಿಯು ಮದುವಣಗಿತ್ತಿ ಸಿಂಗಾರಗೊಂಡು ನಯನ ಮನೋಹರವಾಗಿ ಕಂಗೊಳಿಸುವ ಸುಸಮಯವಿದು ಮಧುಮಾಸ – ವಸಂತ ಋತುವಿನ ಸಮ್ಮಿಲನ ಕುರಿತು ಅದೆಷ್ಟು ವರ್ಣಿಸಿದರು ಅಲ್ಪವೆನಿಸುತ್ತದೆ.

ನಮ್ಮ ಕರುನಾಡಿನ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರ ಒಂದು ಉತ್ಕೃಷ್ಟ ಸಾಹಿತ್ಯವು ಹೀಗಿದೆ :

ಸುರಲೋಕದ ಸುರವನದಿ ಮಿಂದು
ಸುರಲೋಕದ ಸಂಪದವ ತಂದು
ನವ ಸಂವತ್ಸರ ಭೂಮಿಗೆ ಬಂದು
ಹೊಸ ಹರುಷವ ತರಲಿ || ೧ ||

ಮಾವಿನ ಮರದಲಿ ಚಿಗುರು ಮೂಡಿ
ಕೋಗಿಲೆ ಹಾಡಿದೆ ಇಂಪನು ಬೀರಿ
ಬೇವು ಬೆಲ್ಲವ ಸವಿಯುತ ನಾವು
ಸಂಭ್ರಮದಿಂದ ನಲಿಯುವ ಬನ್ನಿ || ೨ ||

ಹಳೆಯ ಎಲೆಗಳು ಉದುರಿ ಹೋಗಿ
ಹೊಸ ಜನ್ಮವ ತಳೆದೆವು ನಾವು
ವಸಂತ ಋತುವಿನ ಆಗಮನದಲಿ
ಬಾಳೆಲ್ಲವೂ ಬಂಗಾರವಾಗಲಿ || ೩ ||

ಕುವೆಂಪು ಅವರ ಸಾಹಿತ್ಯವು ಕೇವಲ ವರ್ಣನೆಯಾಗಿರದೆ, ಜೀವನದಲ್ಲಿ ಹೊಸ ಬದಲಾವಣೆ ಮತ್ತು ಉತ್ಸಾಹವನ್ನು ತರುವ “ದರ್ಶನ”ವನ್ನೂ ಒಳಗೊಂಡಿದೆ.

ಇಂತಹ ಅಪೂರ್ವ ಕಾಲದಿ ಆಗಮಿಸುವ ಭಾರತೀಯ ನೂತನ ವರ್ಷ ಪ್ರಾರಂಭೋತ್ಸವ ಯುಗಾದಿ ಹಬ್ಬವು ನಮ್ಮೆಲ್ಲರ ಹೆಮ್ಮೆಯು,ಆದರೆ ನಾವಿಂದು ಪಾಶ್ಚಿಮಾತ್ಯ ಸಂಸ್ಕೃತಿಯ ಅಡಿಯಾಳುಗಳಂತೆ ವರ್ತಿಸುತ್ತಾ ಯುಗಾದಿ ಹಬ್ಬವು ನೆಪಮಾತ್ರಕ್ಕೆ ಅನ್ನುವಂತೆ ಆಚರಿಸಿ. ಆಂಗ್ಲ ಗ್ರೆಗೋರಿಯನ್ ಕ್ಯಾಲೆಂಡರ್ ಹೊಸ ವರ್ಷವನ್ನು ಮತ್ತಿನ ಗತ್ತಿನಲ್ಲಿ ಅತ್ಯಂತ ವೈಭವದಿಂದ ಸ್ವಾಗತಿಸುವ ಸಬೂಬಿನಲ್ಲಿ ಕಂಠಪೂರ್ತಿ ಹೆಂಡ ( ವಿಸ್ಕಿ- ಬ್ರಾಂಡಿ )ಕುಡಿದು – ತಿಂದು ತೇಗುತ್ತಾ ಎಲ್ಲೆಂದರಲ್ಲಿ ಬಿದ್ದು ಹೊರಳಾಡಿ ಪೊಲೀಸರ ಮೂಲಕ ಮನೆ ಸೇರುತ್ತಿದ್ದೇವೆ ಅಂದ್ರೆ ನಾಚಿಕೆಯಾಗಬೇಕು ಈ ಮನುಷ್ಯ ಜನ್ಮಕ್ಕೆ. 84ಲಕ್ಷ ಜೀವರಾಶಿಗಳ ( 8.4ಮಿಲಿಯನ್) ದಾಟಿ ಪಡೆದಿರುವ ಪರಮ ಶ್ರೇಷ್ಠ ಜನ್ಮ,ಅದು ಭರತ ಭುವಿಯಲ್ಲಿ ಮಾನವ ಜನ್ಮ, ನಮ್ಮೆಲ್ಲರ ಪುಣ್ಯವೇ ಸರಿ,ಕಾರಣ ಜಂಭುದ್ವೀಪದ ಭರತ ಖಂಡವು, ಧರೆಯ ನವಖಂಡಗಳಲ್ಲಿಯೇ ಸರ್ವ ಶ್ರೇಷ್ಠವು, ಇದು ದೇವಭೂಮಿ ಬ್ರಹ್ಮಾಂಡದ ಸಕಲ ದೇವಾನುದೇವತೆಗಳು ಇಲ್ಲಿ ಅವತಾರಗಳನೆತ್ತಿದ್ದಾರೆ ಹಾಗು ನೆಲಿಸಿದ್ದಾರೆ. ಇಂತಹ ಭುವಿಯಲ್ಲಿ ಹುಟ್ಟಿದ ನಾವುಗಳು, ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ಅನ್ಯಾಯ, ಅತ್ಯಾಚಾರ – ಅನಾಚಾರ, ದುರ್ಮಾರ್ಗ, ದುರಾಚಾರ,ಅನೀತಿ, ಅಸತ್ಯ, ಅಧರ್ಮದಿಂದ ನಡೆದುಕೊಳ್ಳುವದು ಅದೆಷ್ಟು ಸರಿ, ನಾವುಗಳೆಲ್ಲ ನಮ್ಮಂತರಂಗವನ್ನು ಕೇಳಿಕೊಳ್ಳಬೇಕಾಗಿದೆ,ಒಮ್ಮೆ ಯೋಚಿಸಿ ಸದ್ಧರ್ಮ ಮಾರ್ಗವೇ ಮುಕ್ತಿಗೆ ಮೂಲ..,ಅಧರ್ಮವೇ ನರಕಕ್ಕೆ ಮೂಲ, ಅರಿತು ನಡೆಯಿರಿ.

ಯುಗಾದಿ ಪೌರಾಣಿಕ ಹಿನ್ನೆಲೆ

“ಚೈತ್ರ ಮಾಸೇ ಜಗದ್ರಬ್ರಹ್ಮ ಸಮಗ್ರೇ ಪ್ರಥಮೇ ಅಹನಿ |
ಶುಕ್ಲ ಪಕ್ಷೇ ಸಮಗ್ರೇ ತು ಸದಾ ಸೂರ್ಯೋದಯೇ ಸತಿ ||”

ಅರ್ಥ: “ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು( ಪಾಡ್ಯಮಿ ಅಮವಾಸೆ ಮರುದಿನ )ಸೂರ್ಯೋದಯದ ವೇಳೆಯಲ್ಲಿ ಬ್ರಹ್ಮದೇವನು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸುವ ಕಾರ್ಯವನ್ನು ಪ್ರಾರಂಭಿಸಿದನೆಂದು ಬ್ರಹ್ಮ ( ಬ್ರಹ್ಮಾಂಡ ) ಪುರಾಣದಲ್ಲಿ ವಿವರಿಸಲಾಗಿದೆ.

ಯುಗಾದಿಯು “ಯುಗ” (ಕಾಲ) ಮತ್ತು “ಆದಿ” (ಆರಂಭ) ಎಂಬ ಎರಡು ಸಂಸ್ಕೃತ ಪದಗಳಿಂದ ಬಂದಿದೆ, ಇದರರ್ಥ “ಹೊಸ ಯುಗ ಪುರಾಣಗಳ ಪ್ರಕಾರ, ಬ್ರಹ್ಮದೇವನು ಈ ದಿನದಂದೇ ವಿಶ್ವವನ್ನು ಸೃಷ್ಟಿಸಲು ಪ್ರಾರಂಭಿಸಿದನು. ಕಾಲಗಣನೆಯನ್ನು ಸುಗಮಗೊಳಿಸಲು ದಿನಗಳು, ವಾರಗಳು ಮತ್ತು ತಿಂಗಳುಗಳನ್ನು ಇದೇ ದಿನ ಪರಿಚಯಿಸಿದನು ಎಂದು ನಂಬಲಾಗಿದೆ.

ಒಂದು ಕಥೆಯ ಪ್ರಕಾರ  ದೈತ್ಯ ಅಸುರನೊಬ್ಬ ಬ್ರಹ್ಮನಿಂದ ವೇದಗಳನ್ನು ಕದ್ದು ಸಮುದ್ರದಲ್ಲಿ ಬಚ್ಚಿಟ್ಟಿದ್ದನು. ಭಗವಾನ್ ವಿಷ್ಣುವು ಮತ್ಸ್ಯ ಅವತಾರ ತಾಳಿ ದೈತ್ಯನನ್ನು ಸಂಹರಿಸಿ, ವೇದಗಳನ್ನು ಮರಳಿ ಬ್ರಹ್ಮನಿಗೆ ನೀಡಿದ್ದು ಇದೇ ದಿನ ಎನ್ನಲಾಗುತ್ತದೆ.

ಚಾಂದ್ರಮಾನ ಯುಗಾದಿಯು ಹಿಂದೂ ಪಂಚಾಂಗದ ಚೈತ್ರ ಮಾಸದ ಮೊದಲ ದಿನದಂದು ಬರುತ್ತದೆ. ಈ ದಿನವು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಶ್ರೀರಾಮನ ಪಟ್ಟಾಭಿಷೇಕ ಲಂಕೆಯಿಂದ ಹಿಂದಿರುಗಿದ ನಂತರ ಶ್ರೀರಾಮನ ಪಟ್ಟಾಭಿಷೇಕವು ಇದೇ ಶುಭ ದಿನದಂದು ನಡೆಯಿತು ಎಂಬ ಐತಿಹಾಸಿಕ ಉಲ್ಲೇಖಗಳಿವೆ. ಮಹಾಭಾರತದ ಯುದ್ಧದ ನಂತರ ಪಾಂಡವರು ತಮ್ಮ ಆಳ್ವಿಕೆಯನ್ನು ಇದೇ ದಿನದಿಂದ ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ.

  • ಕಲಿಯುಗದ ಆರಂಭ: ಶ್ರೀಕೃಷ್ಣನು ತನ್ನ ಅವತಾರ ಮುಗಿಸಿ ನಿರ್ಗಮಿಸಿದ ದಿನವೇ ಕಲಿಯುಗದ ಆರಂಭ ಎಂದು ಪರಿಗಣಿಸಲಾಗುತ್ತದೆ, ಇದು ಕೂಡ ಯುಗಾದಿಯ ದಿನವೇ ಸಂಭವಿಸಿತು ಎಂಬ ನಂಬಿಕೆಯಿದೆ.
  • ಬೇವು-ಬೆಲ್ಲದ ಮಹತ್ವ: ಜೀವನವು ಸುಖ ಮತ್ತು ಕಷ್ಟಗಳ ಮಿಶ್ರಣವಾಗಿದೆ ಎಂಬುದನ್ನು ಸಾರಲು ಈ ದಿನ ಬೇವು-ಬೆಲ್ಲವನ್ನು ಹಂಚಲಾಗುತ್ತದೆ.
  • ಪಂಚಾಂಗ ಶ್ರವಣ: ವರ್ಷದ ಭವಿಷ್ಯವನ್ನು ತಿಳಿಯಲು ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಒಂದು ಪ್ರಮುಖ ಸಂಪ್ರದಾಯವಾಗಿದೆ

ಸಹೃದಯರೇ ಕಳೆದ ವರುಷದ ಕಹಿಘಟನೆಗಳು ಮರುಕಳಿಸದಿರಲಿ, ಹೊಸ ವರುಷವು ಹರುಷದಿ ಕೂಡಿರಲಿ ಎಂದೂ ಆಶಿಸುತ್ತಾ ಬೇವು – ಬೆಲ್ಲ ಸವಿಯೋಣ.


  • ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW