ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು

ಕವಿ ಮತ್ತು ವಿಮರ್ಶಕರಾಗಿರುವ ಡಾ.ಗಿರಿಜಾ ಶಾಸ್ತ್ರಿ ಅವರ ‘ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು’ ಕೃತಿಯ ಕುರಿತು ಖ್ಯಾತ ವಿಮರ್ಶಕರಾದ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಅಭಿಪ್ರಾಯವನ್ನು ಓದುಗೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು
ಲೇಖಕರು : ಡಾ. ಗಿರಿಜಾ ಶಾಸ್ತ್ರಿ
ಪ್ರತಿಗಳಿಗೆ : 8976541989 / ೯೩೪೨೨೭೪೩೩೧

ಮುಂಬೈ ವಾಸಿಯಾಗಿರುವ ಡಾ. ಗಿರಿಜಾ ಶಾಸ್ತ್ರಿಯವರು ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ವಿಶಿಷ್ಟ ಲೇಖಕಿ. ವಿಸ್ತಾರವಾದ ಓದು ಮತ್ತು ಅನುಭವಗಳ ಸಹಾಯದಿಂದ ಸಹಜವಾಗಿ ಹುಟ್ಟುವ ಪ್ರಖರ ವೈಚಾರಿಕತೆಗೆ ಭಾವುಕತೆಯನ್ನು ಹದವಾಗಿ ಬೆರೆಸಿ ಅವರು ಕನ್ನಡದಲ್ಲಿ ಬರೆಯುವ ವಿಧಾನ ಬಹಳ ವಿನೂತನವಾದುದು. ಕವಿ ಮತ್ತು ವಿಮರ್ಶಕರಾಗಿ ಹೆಸರು ಮಾಡಿರುವ ಅವರು ಇದೀಗ ಪ್ರಸ್ತುತ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು ಮೂರು ಭಾಗಗಳಿವೆ. ಮೊದಲನೆಯ ಭಾಗವಾದ ʼಕಲ್ಯಾಣದ ಮೂರು ದಾರಿಗಳʼಲ್ಲಿ ವಿಶ್ವದ ಶಕ್ತಿಯನ್ನು ತಮ್ಮ ಮಾನವೀಯ ಗುಣಗಳಿಂದ ತಮ್ಮದೇ ರೀತಿಯಲ್ಲಿ ಸಂವರ್ಧಿಸಿದ ಮಹನೀಯರು ಮತ್ತು ಕೆಲವು ಸಂಘಟನೆಗಳ ಬಗ್ಗೆ ವಿವರಗಳಿವೆ. ಎರಡನೇ ಭಾಗಕ್ಕೆ ʼ ಹೋರಾಟದ ಹಾದಿಯಲ್ಲಿʼ ಎಂದು ಹೆಸರಿಟ್ಟು ಇದರಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕಟವಾದ ಕೆಲವು ಮುಖ್ಯ ಕೃತಿಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲಾಗಿದೆ. ಮೂರನೆಯ ಭಾಗವಾದ ʼಬೇರುಂಟೆ ಜಗದೊಳಗೆʼಯಲ್ಲಿ ನಾವು ಸಾಧಾರಣವಾಗಿ ಬಹಳ ಅಮುಖ್ಯ ಎಂದು ಭಾವಿಸಲಾದ, ಆದರೆ ನಾಡಿನ ಉಳಿವಿಗೆ ಶ್ರಮಿಸುತ್ತಿರುವ ವ್ಯಕ್ತಿಗಳ ಸಾಧನೆಗಳ ಪರಿಶೀಲನೆಯಿದೆ. ಜೊತೆಗೆ ಅವರು ಶ್ರೀಲಂಕಾದಿಂದ ಆಫ್ಘಾನಿಸ್ಥಾನದವರೆಗೆ, ನೇಪಾಳದಿಂದ ಭಾರತದ ಪಶ್ಚಿಮ ಕರಾವಳಿಯವರೆಗೆ ನಮ್ಮ ಇಡೀ ನಾಗರಿಕತೆಯೇ ಸಂಕಷ್ಟದಲ್ಲಿರುವುದನ್ನು ಎಚ್ಚರದಿಂದ ಗುರುತಿಸಿ ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ.

ನಾಗರಿಕ ಸಮಾಜದ ಯೋಚನಾ ಶಕ್ತಿಯೇ ಕೊಲೆಯಾಗುತ್ತಿರುವಾಗ ಲೇಖಕರು ಸುಮ್ಮನೆ ಕುಳಿತಿರುವುದು ಅಪೇಕ್ಷಣೀಯವಲ್ಲ. ಈ ಅರಿವಿನಲ್ಲಿ ಪ್ರಸ್ತುತ ಪುಸ್ತಕದ ಲೇಖನಗಳನ್ನು ಓದಿದರೆ ಶಾಸ್ತ್ರಿಯವರ ಬರವಣಿಗೆಯ ಮಹತ್ವ ತಿಳಿಯುತ್ತದೆ. ಅವರು ಯುದ್ದವನ್ನು ಖಂಡ ತುಂಡವಾಗಿ ವಿರೋಧಿಸಿ, ಬುದ್ದನ ಹಾದಿ ಹಿಡಿಯುತ್ತಾರೆ. ೧೪ ನೆಯ ಶತಮಾನದ ಮರಾಠಿ ಸಂತ ಚೋಖಮಿಳನ ಹಾಡುಗಳನ್ನಾಧರಿಸಿ ʼಹಾರುವ-ಹೊಲೆಯʼ ಅಂತರಗಳನ್ನು ನಿರಾಕರಿಸುತ್ತಾರೆ. ಅದೇ ಉಸಿರಲ್ಲಿ ಅತ್ಯಂತ ಮಾನವೀಯ ಮತ್ತು ಮುಗ್ಧವಾಗಿರುವ ರಿಹಾನಾ, ಮಾದೇವಿಯರನ್ನು ಅಪ್ಪಿಕೊಳ್ಳುತ್ತಾರೆ. ಅವರಿಬ್ಬರ ಮೂಲಕ ಈ ನೆಲದ ಸಂಪತ್ತಾದ ಕೋಮು ಸೌಹಾರ್ದತೆಯ ಬಗ್ಗೆ ಬರೆಯುತ್ತಾರೆ. ಹನುಮಂತನ ಪಾತ್ರಮಾಡುವ ಸಾಬಿಯನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇಂಥ ವಿಷಯಗಳಿಗೆ ಕನ್ನಡ ಸಾಹಿತಿಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಹುಡುಕಿ ತೆಗೆಯುತ್ತಾರೆ. ಯುವ ತಲೆಮಾರಿಗೆ ಇಂಥ ಲೇಖನಗಳು ತಲುಪಬೇಕು.

ಈ ಪುಸ್ತಕವು ಇವತ್ತು ನಾವು ಗಮನ ಹರಿಸಲೇ ಬೇಕಾದ ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡುತ್ತದೆ. ೨೧ನೇ ಶತಮಾನದ ಮೂರನೇ ದಶಕದಲ್ಲಿ ಕಾಲಿಟ್ಟಿರುವ ನಮಗೆ ಇಂಥ ಪುಸ್ತಕವೊಂದು ಅಗತ್ಯವಾಗಿ ಬೇಕಾಗಿತ್ತು. ಅದನ್ನು ಸಾಧ್ಯಮಾಡಿದ ಡಾ. ಗಿರಿಜಾ ಶಾಸ್ತ್ರಿಯವರಿಗೆ ಅಭಿನಂದನೆಗಳು.


  • ಪುರುಷೋತ್ತಮ ಬಿಳಿಮಲೆ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW