ಎಸ್ ಎಲ್ ಭೈರಪ್ಪನವರು ಮೈಸೂರಲ್ಲಿ ನಡೆವ ಎಲ್ಲಾ ಸಾಹಿತ್ಯದ ಕಾರ್ಯಕ್ರಮಗಳಿಗೂ ಹೋಗುವಿರಾ? ಎಂದರು. ನಾನು ನಕ್ಕು ‘ಇಲ್ಲ ಸರ್… ತುಂಬಾ ಸೆಲೆಕ್ಟೆಡ್ ಕಾರ್ಯಕ್ರಮಗಳಿಗಷ್ಟೇ ಹೋಗ್ತೇನೆ’ ಅಂದೆ. ಮುಂದೆ ಓದಿ, ಕವಿಯತ್ರಿ ಲಾವಣ್ಯ ಪ್ರಭಾ ಅವರ ನೆನಪಿನಂಗಳದಲ್ಲಿ ಎಸ್ ಎಲ್ ಭೈರಪ್ಪ ಅವರು….
ಮೈಸೂರಿನ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಕೆಲವು ವರ್ಷದ ಹಿಂದೆ ಭೇಟಿಯಾದ ಭೈರಪ್ಪನವರನ್ನು ಕಾರ್ಯಕ್ರಮ ಆರಂಭಕ್ಕೂ ಮೊದಲು ಪಕ್ಕದಲ್ಲಿ ಕೂತು ನನ್ನ ಕವನ ಸಂಕಲನಗಳನ್ನವರಿಗೆ ಕೊಟ್ಟು ಕನಕಪುರದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸಿದೆ. ಆಗ ಸಮ್ಮೇಳನದ ಅಧ್ಯಕ್ಷತೆ ಅವರು ವಹಿಸಿದ್ದರು. ಬಹುಶಃ ಸಮ್ಮೇಳನದ ಇಸವಿ 1998 ಅಂತೇನೋ ನಾನು ಹೇಳುವಾಗ ಅವರು 1999 ಎಂದು ತಿದ್ದಿದ್ದನ್ನು ಕಂಡು ತೊಂಬತ್ತರ ವಯಸ್ಸಿನಲ್ಲೂ ಅವರ ಅಗಾಧ ನೆನಪಿನ ಶಕ್ತಿಗೆ ಆಶ್ಚರ್ಯಗೊಂಡೆ. ನಂತರ ಮೈಸೂರಿನ ಸಾಹಿತ್ಯ ಕಾರ್ಯಕ್ರಮಗಳ ಕುರಿತು ಸಾಹಿತ್ಯ ಕ್ಷೇತ್ರದ ಅಂದಿನ ಸ್ಥಿತಿಗತಿಗಳನ್ನು ಕುರಿತು ಒಂದಷ್ಟು ಮಾತಾಡಿದೆವು. ಒಂದೆರಡು ವಿಷಯಗಳಲ್ಲಿ ಇಬ್ಬರದ್ದೂ ಒಂದೇ ಅಭಿಪ್ರಾಯವೂ ಇತ್ತು. ಮೈಸೂರಲ್ಲಿ ನಡೆವ ಎಲ್ಲಾ ಸಾಹಿತ್ಯದ ಕಾರ್ಯಕ್ರಮಗಳಿಗೂ ಹೋಗುವಿರಾ ಎಂದರು. ನಾನು ನಕ್ಕು ಇಲ್ಲ ಸರ್ ತುಂಬಾ ಸೆಲೆಕ್ಟೆಡ್ ಕಾರ್ಯಕ್ರಮಗಳಿಗಷ್ಟೇ ಹೋಗ್ತೇನೆ ಅಂದೆ. ಅವರೂ ಸಹಾ ನಾನು ಹೋಗುವುದು ತುಂಬಾ ವಿರಳ ಎನ್ನುತ್ತಾ ಕಾರಣಗಳನ್ನು ನೀಡಿದರು, ಅವರ ಕಾರಣಗಳು ನನ್ನವೂ ಆಗಿತ್ತು. ಇಬ್ಬರೂ ನಕ್ಕೆವು.
ಭೈರಪ್ಪನವರು 1999 ರಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಅ.ಭಾ.ಕ.ಸಾ. ಸಮ್ಮೇಳನದಲ್ಲಿ ಅವರೊಂದಿಗಿನ ಭೇಟಿಯ ಕ್ಷಣಗಳಲ್ಲಿ ನಡೆದ ಸಂಭಾಷಣೆ ಮರೆಯಲಾಗುವುದೇ ಇಲ್ಲ. “ನಿಮ್ಮ ಊರು ಯಾವುದಮ್ಮಾ?” ಎಂದರು ಅವರು. ನಾನು “ತವರೂರು ಕನಕಪುರ ಸರ್, ಮದುವೆಯ ನಂತರ ವಾಸ ಮೈಸೂರು” ಎಂದಿದ್ದೆ.

ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕನ್ನಡದ ಅನನ್ಯ ಲೇಖಕರಾದ ಶ್ರೀಯುತ “ಎಸ್.ಎಲ್. ಭೈರಪ್ಪ”ನವರು ವಹಿಸಿದ್ದರು. ಪ್ರೀತಿಯ ಕವಿ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರು ಕವಿಗೋಷ್ಟಿ ಅಧ್ಯಕ್ಷರಾಗಿದ್ದು. ಅದೇ ಕವಿಗೋಷ್ಟಿಯಲ್ಲಿ ನಾನು ಭಾಗವಹಿಸಿ ಕವಿತೆ ವಾಚನ ಮುಗಿದ ಮೇಲೆ ಭೈರಪ್ಪನವರು ಕೇಳಿದ ಈ ಮೇಲಿನ ಪ್ರಶ್ನೆಗೆ ಉತ್ತರಿಸಿ ಆನಂದ ಮತ್ತು ಅಚ್ಚರಿಗೊಂಡಿದ್ದೆ. ಸಾಮಾನ್ಯವಾಗಿ ಅವರು ತಾವಾಗಿಯೇ ಯಾರನ್ನೂ ಮಾತಾಡಿಸುವುದಿಲ್ಲ ಎಂದೇ ಕೇಳಿದ್ದೆ. ವೇದಿಕೆಯ ಮೇಲೆ ಹಲವರಿದ್ದರೂ ಅವರು ತಾವಾಗಿಯೇ ಮಾತಾಡಿಸಿದ ಏಕೈಕ ಕವಯತ್ರಿ ನಾನಾಗಿದ್ದೆ ಎಂಬುದೇ ಹೆಮ್ಮೆಯ ವಿಷಯವಾಗಿತ್ತು .
ಅವರ ಹಲವಾರು ಕಾದಂಬರಿಗಳನ್ನು ಓದಿ ಅವರ ಅಭಿಮಾನಿಯೂ ಆಗಿದ್ದವಳಿಗೆ ಅವರಿದ್ದ ವೇದಿಕೆಯಲ್ಲೇ ನಾನೂ ಇದ್ದದ್ದೇ ದೊಡ್ಡ ಸೌಭಾಗ್ಯ. ಆಗಿನ ಕಾಲದಲ್ಲಿ ನನ್ನ ಬಳಿ ಫೋಟೋ ತೆಗೆದುಕೊಳ್ಳುವ ಹವ್ಯಾಸ ಇರಲಿಲ್ಲ ಮತ್ತು ಆ ಕಾಲದಲ್ಲಿ ಒಳ್ಳೆಯ ಫೋನ್ ಗಳೂ ಇರುತ್ತಿರಲಿಲ್ಲವಾದ್ರಿಂದ ಅವರೊಂದಿಗಿನ ಫೋಟೋ ಮಿಸ್ಸಾದರೂ ಅವರೊಂದಿಗಿನ ನೆನಪುಗಳ ಮೌಲ್ಯವೇ ತೂಕದ್ದು ಮತ್ತು ಘನತೆಯುಳ್ಳದ್ದು ಎಂದೇ ನನ್ನ ಭಾವನೆ.
ಮದುವೆಯಾಗಿ ಮೈಸೂರಿಗೆ ಬಂದ ಮೇಲೆ ನಮ್ಮಮನೆಗೆ ಸ್ವಲ್ಪ ದೂರದಲ್ಲೇ ಭೈರಪ್ಪನವರ ಮನೆಯೂ ಇದೆ. ಅವರ ಮನೆಯ ಸಮೀಪದ ರಸ್ತೆಗಳಲ್ಲಿ ನಾವು ಅಡ್ಡಾಡುವಾಗ ವಾಕಿಂಗ್ ನಲ್ಲಿ ಸಿಗುತ್ತಿದ್ದ ಅವರಿಗೆ ರಸ್ತೆಯಲ್ಲೇ ವಂದಿಸಿ ನಕ್ಕು ನಡೆದಿದ್ದೇನೆ. ಎಂದಿಗೂ ಮನೆಗೆ ಹೋಗಲೇಬೇಕು ಎಂಬ ತರಾತುರಿ ಇರಲಿಲ್ಲ. ಈಗಿನಂತೆ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವ ಹುಚ್ಚೂ ಆಗಿರಲಿಲ್ಲವಾದ್ರಿಂದ ಮೂವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವ ಅಮೂಲ್ಯವಾದ ಕೃತಿಗಳನ್ನು ಕನ್ನಡಕ್ಕೆ ನೀಡಿದ ಅಪರೂಪದ ಕಾದಂಬರಿಕಾರ ಭೈರಪ್ಪನವರೊಂದಿಗೆ ನನ್ನ ಫೋಟೋ ಈಗಲೂ ಇಲ್ಲ. ಈ ಬರಹ ಮಾತ್ರ….ಕನ್ನಡದ ಅದ್ವಿತೀಯ ಕಾದಂಬರಿಕಾರ ಸ್.ಎಲ್. ಭೈರಪ್ಪನವರ ಜೊತೆಗಿನ ಕೆಲ ಕ್ಷಣಗಳ ಒಡನಾಟದ ನೆನಪುಗಳ ಪುಟ ತೆರೆಯುತ್ತದೆ.
ಅವರ ಸ್ಥಾನವನ್ನು ಕನ್ನಡ ಸಾಹಿತ್ಯದಲ್ಲಿ ತುಂಬುವಂತಹ ಮತ್ತೊಂದು ಹೆಸರು ಹಿಂದೆಯೂ ಇಲ್ಲ ಮುಂದೆಯೂ ಇರಲಾರದು. ಅಜರಾಮರರಾದ ಎಸ್.ಎಲ್.ಭೈರಪ್ಪನವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
- ಲಾವಣ್ಯ ಪ್ರಭಾ
