ಲೇಖಕಿ ಡಾ.ಎಚ್.ಎಲ್.ಪುಷ್ಪ ಅವರ ‘ಸೊಲೊಬರಸ್ ಹುಡುಗರು ಹಾಗೂ ಎಕ್ಕದ ಬೀಜ’ ಅವರ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಸೊಲೊಬರಸ್ ಹುಡುಗರು ಹಾಗೂ ಎಕ್ಕದ ಬೀಜ
ಲೇಖಕರು : ಡಾ.ಎಚ್.ಎಲ್.ಪುಷ್ಪ
ಪ್ರಕಾಶನ : ಅನ್ವೇಷಣೆ
ಬೆಲೆ : ೧೦೦.೦೦
ಈ ಸಂಕಲನದಲ್ಲಿ ಮೂರು ಭಾಗಗಳು ಇವೆ. ಮೊದಲ ಭಾಗದ ಕವನಗಳು ನಾವು ಒಳಗೊಳ್ಳಬೇಕಾದ ಆರೋಗ್ಯಕರವಾದ ಜೀವಪರಮೌಲ್ಯಗಳನ್ನು ಮತ್ತು ಅದರ ಪ್ರತಿಪಾದಕರನ್ನು ಕುರಿತವು. ಅದರಂತೆ ನಾವು ನಿರಾಕರಣೆ ಮಾಡಬೇಕಾದ ಜೀವವಿರೋಧಿ ಮೌಲ್ಯ ಗಳನ್ನು ಮತ್ತು ಅದರ ಪ್ರತಿಪ್ರಾದಕರನ್ನು ಕುರಿತವು. ಹೀಗೆ ಮಾಡುವಾಗ ಕಾಲ, ದೇಶ, ಭಾಷೆಗಳ ಗಡಿಗಳನ್ನು ಇವು ಮೀರುತ್ತವೆ. ಅಂತೆಯೆ ಜೀವಪರಮೌಲ್ಯಗಳ ಪ್ರತಿಪಾದಿಸಿದ ಏಸು, ಬುದ್ದ,( ಮಹಾರಾತ್ರಿಗಳನ್ನು ಒಟ್ಟಿಗೆ ತಂದ ಕವನ) ಬಸವ, ಗಾಂಧಿ ಹಾಗೂ ಅಂಬೇಡ್ಕರ್ ನೆಲ್ಸನ್ ಮಂಡೆಲಾ ಕುರಿತು ಬರೆದ ಕವನಗಳು ಇಲ್ಲಿ ಇವೆ. ಇದರಂತೆಯೇ ಜೀವವಿರೋಧಿ ಮೌಲ್ಯಗಳ ಪ್ರತಿಪಾದಿಸಿದ ಸೀಸರ್, ಕ್ಲಿಯೋಪಾತ್ರ – ಅಧಿಕಾರ ಕಾಮನೆಗಳ- ಬೆನ್ನುಹತ್ತಿದವರ ಕುರಿತು ಬರೆದ ಕವನಗಳು ಇವೆ. ಇದರಿಂದಾಗಿ ನಮ್ಮ ಸಮಕಾಲೀನ ಸಂದರ್ಭದಲ್ಲಿ ನಾವು ಸ್ವೀಕರಿಸಬೇಕಾದ ಮೌಲ್ಯಗಳು ಮತ್ತು ನಿರಾಕರಿಸಬೇಕಾದ ಮೌಲ್ಯಗಳನ್ನು ಒಟ್ಟಿಗೆ ತರುವ ಮೂಲಕ, ನಾವು ಕಟ್ಟಬೇಕಾದ ಆರೋಗ್ಯಕರವಾದ ನಾಡನ್ನು ಕುರಿತ ಚಿಂತನೆ, ಈ ಮೊದಲ ಭಾಗದ ಕಾವ್ಯದ ಮೂಲ ದ್ರವ್ಯವಾಗಿದೆ. ಎರಡನೇ ಭಾಗದಲ್ಲಿ ಕನ್ನಡ ಪರಂಪರೆಯ ಜತೆಗೇ ಇದನ್ನು ಲಗತ್ತಿಸಲಾಗಿದೆ. ಹಾಗಾಗಿ ಇಲ್ಲಿ ಜಾನಪದ ಹಾಗೂ ದೇಸಿ ಪರಂಪರೆಗಳು ಕಸಿಗೊಂಡು ಹಾಡುಗಳಾಗಿ ಹರಿದಿವೆ. ಇದಕ್ಕೆ ಕಂಬಾರರನ್ನು ಕುರಿತು ಬರೆದ ಹಾಡು ನಿದರ್ಶನ. ಅದರಂತೆ ವೈಜ್ಞಾನಿಕ ದೃಷ್ಟಿಯಿಂದ ಹೊಸ ಬೆಳಕು ತಂದ ಎಚ್.ಎನ್ ಕುರಿತು ಬರೆದ ಕವನ ಕೂಡ. ಮೂರನೇ ಭಾಗದ ಕವನಗಳು ಭಾರತೀಯ ವಿವಿಧ ಭಾಷೆಗಳಿಂದ ಕನ್ನಡಕ್ಕೆ ತಂದವು.

ಈ ಸಂಕಲನದ ವೈಶಿಷ್ಟ್ಯಗಳನ್ನು ಹೀಗೆ ಪಟ್ಟಿ ಮಾಡಬಹುದು:
- ಮೊದಲ ಬಾರಿಗೆ ಕನ್ನಡದ ಪರಂಪರೆಯಲ್ಲಿ ಬೇರು ಬಿಟ್ಟು ವಿಶ್ವಾತ್ಮಕ ನೆಲೆಗಳನ್ನು ಒಳಗೊಂಡಿದೆ.
- ಗ್ರಾಂಥಿಕ ಭಾಷೆಯೊಂದಿಗೆ ಜಾನಪದ ಲಯಗಳನ್ನು ಬಳಸುವ ಮೂಲಕ ವೈವಿಧ್ಯತೆಯನ್ನು ಶೈಲಿಯಲ್ಲಿ ಸಾಧಿಸಿರುವುದು.
- ಬಹುತ್ವದ ಪರಿಕಲ್ಪನೆಯನ್ನು ಬಹುತೇಕ ಹೊಂದಿರುವುದು.
- ಭಾರತದ ಸಮಕಾಲೀನ ತಲ್ಲಣಗಳಿಗೆ ಧ್ವನಿ ನೀಡಿದ್ದಾರೆ: ಸೊಲಬರಸ್ ನ ಕಾಶ್ಮೀರದ ಹುಡುಗರು ನಿತ್ಯ ಗುಂಡುಗಳ ಸದ್ದನ್ನು ಕೇಳುತ್ತಲೇ, ತಮ್ಮ. ಹೆಣ್ಣುಗಳನ್ನು ಕಾಪಾಡುವ ಆತಂಕ ಎದುರಿಸುವುದು. ಮಣಿಪುರಿ ಕವನದ ಅನುವಾದ ಸದ್ಯದ ಮಣಿಪುರದ ತಲ್ಲಣಗಳ ಮೇಲೆ ಬೆಳಕು ಚೆಲ್ಲುತ್ತದೆ.
- ಹೆಣ್ಣು ಮಕ್ಕಳು ಎಂದರೆ ಮೊಲೆ ಯೋನಿ ಮಾತ್ರ ಎಂಬ ಪುರುಷ ಪ್ರಧಾನ ಚಿಂತನೆ ವಿರುದ್ಧದ ಪ್ರತಿಭಟನೆಯ ಧ್ವನಿ ದಾಖಲಿಸಿರುವುದು.

ಮಿತಿಗಳೆಂದು ಕರೆಯಬಹುದಾದರೆ:
- ವಚನ ಪರಂಪರೆಯ ಜತೆಗೆ ತನ್ನನ್ನು ಗುರುತಿಸಿ ಕೊಂಡ ಕವಿ, ಅಲ್ಲಿನ ಮಿತಿಯನ್ನು ಮೀರಿ ಹೋಗಲು ಸಾಧ್ಯವಾಗದೆ ಇರುವುದು. ನಿದರ್ಶನವಾಗಿ ವೈಜ್ಞಾನಿಕತೆಯ ಹೆಸರಿನಲ್ಲಿ ಕಾಯಕಜೀವಿಗಳ ದೈವಾರಾಧನೆಯನ್ನು ಮೂಢನಂಬಿಕೆ ಎಂದು ಬಸವೇಶ್ವರನನ್ನು ಅನುಸರಿಸಿ ತಿರಸ್ಕರಿಸಿರುವುದು. ( ಶಬ್ದಚರಿತ್ರೆ). ಇದು ಸ್ಪಷ್ಟವಾಗಿ ಬಹುತ್ವದ ನಿರಾಕರಣೆ ಆಗಿದೆ. ನೋಡಿ ಮಡಕೆ ದೈವ, ಮೊರದೈವ ವಚನ ಕುರಿತು ಬರೆದ ಡಿ.ಆರ್.ಎನ್ ವ್ಯಾಖ್ಯಾನ.
- ಅನೇಕ ಕಡೆ ಕಾವ್ಯ ಹೇಳಿಕೆಯ ಸ್ವರೂಪ ಪಡೆದು ಕೊಂಡಿರುವುದು.” ಜಾತಿಮತ ಬೇಧವೆಲ್ಲ ಪೊಳ್ಳು ಕಣಾ – “ಇತ್ಯಾದಿ. ಕಳೆದ ವಾರ ಕರ್ನಾಟಕ ಲೇಖಕಿಯರ ಸಂಘಕ್ಕೆ ಹೋದಾಗ, ನನ್ನ ಸಂಗಾತಿಗೆ ೨೦೨೦ ರ ವಿಶಿಷ್ಟ ಲೇಖಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಅವರ ನೇತೃತ್ವದಲ್ಲಿ. ಆಗ ಅವರು ಅವರ ಈ ಕವನ ಸಂಕಲನವನ್ನು ಕೂಡ ಉಡುಗೊರೆ ನೀಡುವ ಮೂಲಕ ಔದಾರ್ಯ ಮೆರೆದರು. ಅದಕ್ಕೆ ವಂದನೆ.ಮತ್ತು ಅಭಿನಂದನ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
