ಕಠಿಣ ಪರಿಸ್ಥಿತಿಗಳು ಬರುವ ಮೊದಲೇ ನಾವು ಪೂರ್ವ ಸಿದ್ಧತೆಯಲ್ಲಿರಬೇಕು. ಆವಾಗಲೇ ಸಮಸ್ಯೆಗಳು ಬಂದಾಗ ವಿಚಲಿತರಾಗುವುದಿಲ್ಲ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ನಾವು ಬದುಕನ್ನು ಹೇಗೆ ಬದುಕಬೇಕೆಂಬುದು ಬಹುತೇಕರ ಪ್ರಶ್ನೆ. ಬದುಕನ್ನು ಹೀಗೆಯೇ ಬದುಕಬೇಕೆಂಬ ನಿಖರವಾದ ನಿಯಮಗಳಂತೂ ಇಲ್ಲ.
ಆಯಾ ಸಂದರ್ಭ ಸನ್ನಿವೇಶಗಳನುಸಾರ ಬದುಕುವವನ ಗತ್ತನ್ನು ಅವಲಂಬಿಸಿ ಬದುಕು ಅರ್ಥವನ್ನು ಪಡೆಯುತ್ತಾ ಹೋಗುತ್ತದೆ. ಹಾಗಾದರೆ ಈ ಕೆಳಗಿನ ಉದಾಹರಣೆಯನ್ನೊಮ್ಮೆ ಗಮನಿಸೋಣ.
ಒಂದು ಚಿಕ್ಕ ರಾಜ್ಯವಿತ್ತು. ಆ ರಾಜ್ಯದ ರಾಜನಿಗೆ ಗುಪ್ತಚರ ಇಲಾಖೆಯಿಂದ ಗಂಭೀರವಾದ ಖಚಿತ ಮಾಹಿತಿಯೊಂದು ಬಂದಿತು. ಇನ್ನು ಮೂರು ದಿನಗಳೊಳಗೆ ಈ ರಾಜ್ಯದ ಮೇಲೆ ಅತ್ಯಂತ ಬಲಶಾಲಿ ಮತ್ತು ಬೃಹತ್ ಸೈನ್ಯ ಹೊಂದಿದ ಪಕ್ಕದ ರಾಜನು ಆಕ್ರಮಣ ಮಾಡುವವನಿದ್ದಾನೆಂಬುದಾಗಿತ್ತು.
ರಾಜನು ಎಲ್ಲ ಮಂತ್ರಿಗಳು ಮತ್ತು ಸೇನಾಧಿಪತಿಗಳ ತುರ್ತು ಸಭೆ ಕರೆದು ಪರಿಸ್ಥಿತಿಯ ಗಂಭೀರತೆಯ ಕುರಿತು ಚರ್ಚೆಗಿಳಿದನು. ಎಲ್ಲಾ ಕಾರ್ಯಕಾರಿಣಿ ಅಧಿಕಾರಿಗಳು ಒಂದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ನಮ್ಮ ಸೈನ್ಯಕ್ಕಿಂತ ಹಲವು ಪಟ್ಟು ದೊಡ್ಡ ಸೈನ್ಯ ಹೊಂದಿದ ಅವರನ್ನು ಯಾವುದೇ ತಂತ್ರಗಾರಿಕೆಯಿಂದ ಸೋಲಿಸಲು ಸಾಧ್ಯವಿಲ್ಲ. ಶರಣಾಗತಿಯೊಂದೇ ದಾರಿ ಎಂದು ಕೈ ಚೆಲ್ಲಿದರು.
ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ರಾಜನು ಮಂತ್ರಿಗಳಿಗೆ ಮತ್ತು ಸೇನಾಧಿಪತಿಗಳಿಗೆ ಆಜ್ಞೆಯಿತ್ತನು.

ಇಂದೇ..ಇದೇ ರಾತ್ರಿ ನಾವೇ ಅವರ ಮೇಲೆ ಹಠಾತ್ ದಾಳಿ ಮಾಡೋಣವೆಂದು. ಎಲ್ಲರೂ ದಿಗ್ಭ್ರಮೆಗೊಂಡರು. ಆದರೆ ಯಾವುದೇ ಕಾರಣದಿಂದ ಆಕ್ರಮಣ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವಂತಿಲ್ಲವೆಂದು ರಾಜನ ಕಟ್ಟಾಜ್ಞೆಯಾಗಿತ್ತು. ವಿಧಿಯಿಲ್ಲದೆ ಅವತ್ತಿನ ರಾತ್ರಿಯೇ ಪಕ್ಕದ ಬೃಹತ್ ಸೈನ್ಯದ ಮೇಲೆ ಇವರ ಚಿಕ್ಕ ಸೈನ್ಯವು ಅನಿರೀಕ್ಷಿತವಾಗಿ ಹಠಾತ್ ಆಕ್ರಮಣಮಾಡಿಯೇ ಬಿಟ್ಟಿತು.
ಕೊನೆಗೆ ಜಯಶಾಲಿಯಾಗಿದ್ದು ಆ ಚಿಕ್ಕ ಸೈನ್ಯವೇ.
ಪಕ್ಕದ ರಾಜನ ಸೈನ್ಯವು ಅದೆಷ್ಟೇ ದೊಡ್ಡದು, ಬಲಶಾಲಿಯಾಗಿದ್ದರೂ ಯುದ್ಧ ಸನ್ನದ್ಧರಾಗಿರದ ಕಾರಣ ಮತ್ತು ತಮ್ಮ ಆಕ್ರಮಣ ಇನ್ನೂ ಮೂರು ದಿನದ ನಂತರ ಎನ್ನುವ ಪೂರ್ವನಿಯೋಜಿತ ಮನಸ್ಥಿತಿ ಹೊಂದಿದ್ದ ಕಾರಣ, ಚಿಕ್ಕ ಸೈನ್ಯದ ಹಠಾತ್ ದಾಳಿಯಿಂದ ವಿಚಲಿತರಾಗಿ ಹೋರಾಟ ಮಾಡಲಾಗದೇ ಸೋತು ಶರಣಾದರು.
ತಾತ್ಪರ್ಯವಿಷ್ಟೆ ಬದುಕಿನ ದಾರಿಯಲಿ ಬಂದೆರಗುವ ಕೆಲವು ಕಠಿಣ ಪರಿಸ್ಥಿತಿಗಳನ್ನು ಅವು ಬಂದೆರಗುವ ಮುನ್ನ ಊಹಿಸಿ ನಾವೇ ಅವುಗಳ ಮೇಲೆ ಪೂರ್ವ ತಯಾರಿಯ ಸಮೇತ ಸನ್ನದ್ಧರಾಗಿ ಎದುರಿಸಲು ಮುಂದಾಗಿಬಿಡಬೇಕು.
ಪರೀಕ್ಷೆಗಳು ಬಂದೇ ಬರತ್ತವೆ ಎನ್ನುವ ಖಚಿತತೆ ಇದ್ದಾಗಲೂ, ವಿದ್ಯಾರ್ಥಿಗಳು ಮುಂಚಿತವಾಗಿಯೇ ಯಾಕೆ ತಯಾರಿ ಮಾಡಿ ಪರೀಕ್ಷೆಗೆ ಸನ್ನದ್ಧರಾಗಬಾರದು..!
ಆರೋಗ್ಯ ಹಾಳಾಗುತ್ತದೆಂಬ ಖಚಿತತೆ ಇರುವಾಗಲೂ, ಯಾಕೆ ದುಶ್ಚಟಗಳಿಂದ ಮುಂಚಿತವಾಗಿಯೇ ದೂರ ಉಳಿಯಬಾರದು..!
ಝಿಕಾ, ಕೊರೋನಾ ದಂತಹ ಸಾಂಕ್ರಾಮಿಕ ರೋಗಗಳು ಹರಡೇ ಹರಡುತ್ತದೆ ಎನ್ನುವ ಖಚಿತತೆ ಇದ್ದಾಗಲೂ ಮುಂಚಿತವಾಗಿಯೇ ಯಾಕೆ ತಡೆಗಟ್ಟುವ ಕ್ರಮಗಳನ್ನು ಪಾಲಿಸಿಕೊಂಡು ಬಂದು ನಮ್ಮನ್ನು, ನಮ್ಮ ಸುತ್ತಲಿನವರನ್ನು ಸ್ವಯಂ ರಕ್ಷಿಸಿಕೊಳ್ಳಬಾರದು..!
ನಮ್ಮ ಬದುಕು, ನಾವು ಬದುಕುವ ಗತ್ತಿನ ಮೇಲೆ ಅವಲಂಬಿತವಾಗಿದೆ. ಅದನ್ನೇ ‘ATTITUDE’ ಎಂದು ಹೇಳುತ್ತೇವೆ. Attitude matters a lot. ಬರುವ ಕಷ್ಟ, ಸಂಕಷ್ಟಗಳಿಗೆ ಹೆದರಿ, ಚಿಂತಿಸಿ ಸಮಯ ಹಾಳು ಮಾಡುವ ಬದಲು ಧೈರ್ಯದಿಂದ ಸವಾಲುಗಳಿಗೆ ಪ್ರತಿ ಸವಾಲೊಡ್ಡಿ, ತಂತ್ರಕ್ಕೆ ಪ್ರತಿ ತಂತ್ರ ಹೆಣೆದರೆ ಮಾತ್ರ ಈ ಬದುಕೆಂಬ ಯುದ್ಧದಲ್ಲಿ ತಕ್ಕ ಮಟ್ಟಿಗೆ ಗೆಲುವು ನಮ್ಮದಾಗುತ್ತದೆ. ಇಲ್ಲದಿದ್ದರೆ ಬದುಕಿನ ಬವಣೆಗಳಿಗೆ ಸೋತು ಶರಣಾಗಿ ಸಾಯುವುದು ಖಚಿತ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಡಾ. ರಾಜಶೇಖರ ನಾಗೂರ
