ಸುಡುಗಾಡು ಸಿದ್ಧರು – ಟಿ.ಶಿವಕುಮಾರ್

ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಾಣುವ ಈ ಸುಡಗಾಡು ಸಿದ್ಧರು ಊರಿಂದ ಊರಿಗೆ ಅಲೆಯುವ ಇವರು ಮುಂದೆ ಆಗು ಹೋಗುವ ಮಳೆ-ಬೆಳೆ, ಶುಭ ಆಶುಭ ಗಳನ್ನು ಕುರಿತು ಭವಿಷ್ಯವನ್ನು ನುಡಿಯುತ್ತಾರೆ. ಅವರ ಕುರಿತು ಲೇಖಕ ಟಿ. ಶಿವಕುಮಾರ್ ಅವರು ಬರೆದಿರುವ ಲೇಖನ, ಮುಂದೆ ಓದಿ….

ಸುಡುಗಾಡದಲ್ಲಿ ಕುಳಿತು ಕರಾಳ ಅಮಾವಾಸ್ಯೆ ದಿನ ಹೆಣ ಸುಟ್ಟು ಕರಕಲಾದ ಜಾಗದಲ್ಲಿ ಬಿದ್ದ ಬೂದಿಯನ್ನು ಭಸ್ಮ ಮಾಡಿಕೊಂಡು ಅದ್ಯಾವುದೋ ಅಜ್ಜ ಹೇಳಿದ ಮಂತ್ರವನ್ನು ಹೇಳಿ ಮಾಟ ಮಾಡುತ್ತಾ ರಾತ್ರಿಯಲ್ಲಿ ಪಣ ಕಟ್ಟಿ ಹಕ್ಕಿಗಳ ಕೂಗನ್ನು ಕೇಳಿಸುತ್ತಾ ಇತ್ತ ಸರಿ ರಾತ್ರಿಯಲ್ಲಿ ಮಲಗಿದ ಊರಿನವರು ಸುಡಗಾಡು ಸಿದ್ಧರು ಬಂದಿದ್ದಾರೆ.

ಊರಿನ ಮತ್ತು ಜನರ ಭವಿಷ್ಯವನ್ನು ಮುಂದಿನ ದಿನಗಳಲ್ಲಿ ಹೀಗೆ ನಡೆಯುತ್ತದೆ ಎಂದು ಅವ್ವ ಹೇಳಿದ್ದು ಈಗ ನೆನಪು ಮಾತ್ರ. ತಲೆಯ ಮೇಲೊಂದು ರುಮಾಲು ಸುತ್ತಿಕೊಂಡು ಅದರಲ್ಲಿ ನವಿಲುಗರಿಗಳ ಗುಚ್ಚಗಳನ್ನು ಚುಚ್ಚಿಕೊಂಡು, ಕೊರಳ ತುಂಬಾ ರುದ್ರಾಕ್ಷಿ ಮಣಿಸರಗಳನ್ನು ಧರಿಸಿ ಹಣೆಗೆ ವಿಭೂತಿ ಕೈಯಲ್ಲಿ ಶಂಖ ಹಿಡಿದು ಊರಿನ ಕೇರಿಗಳಲ್ಲಿ ಹೊರಟರೇ ಯಾವ ಹಿಮಾಲಯದ ಬೂದಿ ಬಾಬಾಗಳು ನಾಗಾ ಸಾಧುಗಳು ಸಿದ್ಧಿಸಿಕೊಂಡ ರಹಸ್ಯ ಯೋಗಗಳನ್ನು ಸುಡುಗಾಡು ಸಿದ್ಧರಲ್ಲಿ ಕೆಲವರು ಸಿದ್ಧಿಸಿಕೋಳ್ಳುತ್ತಾರೆ ಎಂಬುದು ಜನರ ನಂಬಿಕೆ. ಸುಡುಗಾಡದಲ್ಲಿ ಕುಳಿತು.

ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಇದ್ದಕ್ಕಿದ್ದಂತೆ ಕಾಣುವ ಈ ಸುಡಗಾಡು ಸಿದ್ಧರನ್ನು ನೋಡುವುದೇ ಒಂದು ಖುಷಿ. ಕ್ಷಣ ಮಾತ್ರದಲ್ಲಿ ತಮ್ಮ ಕೈಚಳಕದಿಂದ ಏನಾದರೊಂದನ್ನು ಮಾಯಾ ಮಾಡಿ ಬೇರೆ ವಸ್ತುಗಳನ್ನು ಸೃಷ್ಠಿಸಿ ನೆರೆದ ಜನರಿಗೆ ರಂಜನೆಯನ್ನು ನೀಡುತ್ತಾರೆ. ಊರಿಂದ ಊರಿಗೆ ಅಲೆಯುವ ಇವರು ಮುಂದೆ ಆಗು ಹೋಗುವ ಮಳೆ-ಬೆಳೆ, ಶುಭ ಆಶುಭ ಗಳನ್ನು ಕುರಿತು ಭವಿಷ್ಯವನ್ನು ನುಡಿಯುತ್ತಾರೆ. ರಾಜ್ಯದ ನಾನಾ ಭಾಗಗಳಲ್ಲಿ ಕಾಣುವ ಇವರು ಊರ ಹೊರವಲಯದಲ್ಲಿ ಟೆಂಟ್ ಹಾಕಿಕೊಂಡು ವಾಸಮಾಡುತ್ತಾರೆ. ಸುಡಗಾಡು ಸಿದ್ಧರು ಅಂಥ ಏಕೆ ಕರೆಯುತ್ತಾರೆ ಎಂದು ಕೇಳಿದರೆ ಸುಡುಗಾಡಿನಲ್ಲಿ ಇದ್ದು ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳುವ್ಯದರಿಂದ ನಮಗೆ ಸುಡುಗಾಡು ಸಿದ್ದರು ಎಂದು ಕರೆಯುತ್ತಾರೆ ಎಂದು ಹೇಳುತ್ತಾರೆ ಹಾವೇರಿಯ ಸುಡುಗಾಡು ಸಿದ್ದರ ಜಿಲ್ಲಾ ಆಧ್ಯಕ್ಷ ಬಸವರಾಜ ಬಾದಗಿ.

ಇವರು ಊರಿಂದ ಊರಿಗೆ ಹೋಗಿ ಪಣ ಕಟ್ಟುವ ಪದ್ಧತಿಯಿದೆ. ಅವರು ಯಾವ ಊರಿಗೆ ಹೋಗಿ ಪಣ ಕಟ್ಟುತ್ತಾರೆಯೋ ಆ ಊರಿನಲ್ಲಿ ರಾತ್ರಿ ಸಮಯದಲ್ಲಿ ಶಂಖ ಊದುತ್ತಾ ಬೀದಿಬೀದಿಯಲ್ಲಿ ಅಲೆದಾಡುತ್ತಿರುತ್ತಾರೆ. ಸುಡುಗಾಡು ಸಿದ್ಧರು ತೋರಿಸುವ ಕೈಚಳಕ ರಾಜಮೋಡಿಯ ಗುಂಪಿಗೆ ಸೇರಿದ್ದು ಹಬ್ಬ, ಜಾತ್ರೆ, ಸಂತೆಗಳಲ್ಲಿ ಮಲ್ಲಿಕಾರ್ಜುನ ಮತ್ತು ರೇವಣಸಿದ್ದೇಶ್ವರ ದೇವರನ್ನು ನೆನೆದು ಈ ಜಾದೂ ವಿದ್ಯೆಯನ್ನು ಪ್ರದರ್ಶಿಸುತ್ತಾರೆ. ನಾಣ್ಯದಲ್ಲಿ ಬಸವನ ಮೂರ್ತಿ, ಅಂಜನೇಯನ ಮೂರ್ತಿ, ಕೈಯಿಂದ ಚೇಳು ತೆಗೆಯುವುದು, ಕಪ್ಪೆಯನ್ನು ತೆಗೆಯುವುದು, ಬಾಯಿಯಿಂದ ಕಲ್ಲುಗಳನ್ನು ನುಂಗಿ ದೊಡ್ಡ ಕಲ್ಲು ತೆಗೆಯುವುದು, ಮುಳ್ಳನ್ನು ಸೃಷ್ಠಿಸುವುದು ಹೀಗೆ ಹಲವು ರೀತಿಯಾದ ಕಲೆಗಳನ್ನು ತಮ್ಮ ಕೈಚಳಕದಿಂದ ಪ್ರದರ್ಶನವನ್ನು ಮಾಡಿ ನೋಡುಗರಿಂದ ಶಹಾಬ್ಬಾಶ್ ಗಿಟ್ಟಿಸಿಕೊಳ್ಳುತ್ತಾರೆ ಅವರು ಕೊಟ್ಟ ಕಾಸನ್ನು ಪಡೆಯುತ್ತಾರೆ.

ಇವರು ತಂಡವಾಗಿಯೇ ಪ್ರದರ್ಶನವನ್ನು ಮಾಡುತ್ತಾರೆ ಕನ್ನಡ ತೆಲಗು ಭಾಷೆಯನ್ನು ಮಾತನಾಡಬಲ್ಲ ಇವರು ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲಿಯೇ ಪ್ರದರ್ಶನವನ್ನು ಮಾಡುತ್ತಾರೆ. ಇವರದು ಮೂಲತಃ ಜಂಗಮರ ಬದುಕು ಮನೆ ಮನೆಗೆ ತೆರಳಿ ಭಿಕ್ಷೆಯನ್ನು ಬೇಡಿ ತಿನ್ನುವುದು ಇವರ ದಿನಚರಿ.

ಇತ್ತೀಚಿನ ದಿನಗಳಲ್ಲಿ ಇವರು ವಿದ್ಯಾವಂತರಾಗಿರುವ ಕಾರಣ ಈಗಿನ ಯುವಕರು ಈ ವಿದ್ಯೆಯ ಕಡೆ ಮುಖ ಮಾಡುತ್ತಿಲ್ಲ ಎನ್ನುತ್ತಾರೆ ಹಿರಿಯರು. ಅವನತಿಯ ಅಚಿಚಿನಲ್ಲಿರುವ ಸಂಸ್ಸ್ರತಿಯನ್ನು ಗುರುತಿಸಿ ಸಹಾಚಿ, ಪ್ರೋತ್ಸಹ ನೀಡುವ ಮೂಲಕ ನಾಡಿನ ಒಂದು ಶ್ರೇಷ್ಠ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಿದೆ.


  • ಟಿ. ಶಿವಕುಮಾರ್ – ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading