ಇವರು ಸ್ಪೇನಿನ ಅಂಡಲೂಸಿನಲ್ಲಿ ಜನಿಸಿದ ಅರಬ್ ವಿದ್ವಾಂಸ. ಅತೀಂದ್ರಿಯ ಕವಿ ಮತ್ತು ತತ್ವಜ್ಞಾನಿ. ಇಸ್ಲಾಮಿಕ್ ಚಿಂತನೆಯೊಳಗೆ ಅತ್ಯಂತ ಪ್ರಭಾವಶಾಲಿ. ಅವರ cosmology ಕುರಿತಾದ ಬೋಧನೆಗಳು ಸೂಫಿ ಚಿಂತನೆಗಳಲ್ಲಿ ಬಹುವಾಗಿ ಚರ್ಚಿತವಾಗುತ್ತವೆ. ಈ ಕಿರು ಲೇಖನದಲ್ಲಿ ಅಬ್ನ್ ಅಲ್ ಅರಬಿಯವರ ಒಂದು ದ್ವಿಪದಿಯ ವಿಶ್ಲೇಷಣೆ ಮಾಡಲು ಬಯಸುತ್ತೇನೆ. ನನಗೆ ಏನನ್ನೂ ಗುರುತಿಸಲು ಸಾಧ್ಯವಾಗಲಿಲ್ಲ
“ನೀನು ಅಲ್ಲಿರುವಾಗ ನಾನು ಏನನ್ನಾದರೂ ಹೇಗೆ ಗುರುತಿಸಲಿ?”
ಈ ಮೇಲಿನ ದ್ವಿಪದಿಯಲ್ಲಿ ಅವರು ದೇವರ ವಿಷಯದಲ್ಲಿ ತಾನು ಸಂಪೂರ್ಣ ಅಜ್ಞಾನವನ್ನು ಸ್ವೀಕರಿಸುತ್ತೇನೆ ಎಂದು ಸ್ಪಷ್ಟಪಡಿಸುತ್ತಾರೆ. ಇದು ಬುದ್ಧನು ದೇವರ ವಿಷಯದಲ್ಲಿ ತಾಳಿದ ಮೌನದಂತೆ ತೋರುತ್ತದೆ. ಆದರೆ ಬೆಡಗಿನ ವಚನದಂತಿರುವ ಈ ಸಾಲುಗಳು ಅಧ್ಯಾತ್ಮದ ಹಲವು ಬೇಧಗಳನ್ನು ಅನಾವರಣಗೊಳಿಸುತ್ತವೆ. ಅಜ್ಞಾನವೇ ಜ್ಞಾನ ಎಂದು ಇಬ್ನ್ ಅಲ್ ಅರಬಿ ವಾದಿಸುತ್ತಾರೆ. ದೇವರನ್ನು ಹೊರತುಪಡಿಸಿ ಎಲ್ಲವೂ ಭ್ರಮೆ. ಆದ್ದರಿಂದ ಯಾವುದನ್ನೂ ಸ್ವಭಾವತಃ ಗುರುತಿಸಲು ಸಾಧ್ಯವಿಲ್ಲ. ಎಲ್ಲದರ ಅಸ್ತಿತ್ವವೂ ನಿಖರವಾಗಿ ಯಾವುದೋ ಒಂದು ವಿಷಯದ ಪರಿಕಲ್ಪನೆಯಾಗಿದೆ.

ಕಲ್ಪನೆಯನ್ನು ಮಾತ್ರ ಗುರುತಿಸಬಹುದು ಮತ್ತು ಅದನ್ನೂ ಸ್ವಭಾವತಃ ಅಲ್ಲ. ಏಕೆಂದರೆ ಕಲ್ಪನೆಗೆ ರೂಪವಿಲ್ಲ. ಅದು ನಮ್ಮ ಬುದ್ಧಿಯ ಚಿತ್ರವಷ್ಟೆ. ದೈವವನ್ನು ವೈಯಕ್ತಿಕವಾಗಿ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ದೇವರನ್ನು ಹೊರತುಪಡಿಸಿ ಬೇರೆ ಯಾರೂ ದೇವರನ್ನು ತಿಳಿದಿಲ್ಲ. ಈ ಸತ್ಯವನ್ನು ಒಪ್ಪಿಕೊಂಡು ತಾನು ಅಜ್ಞಾನಿ ಎಂದು ತಿಳಿದವನೇ ನಿಜವಾದ ಜ್ಞಾನಿ. ಏನೂ ತಿಳಿಯದೇ ತಾನೇ ಜ್ಞಾನಿ ಎನ್ನುವಂತೆ ವರ್ತಿಸುವವ ತಿಳಿಗೇಡಿ ಅವನೇ ಅಜ್ಞಾನಿ.
ನಮಗೆ ದೇವರು ಗುಡಿಯಲ್ಲೋ, ಮಸೀದಿಯಲ್ಲೋ, ಚರ್ಚಿನಲ್ಲೋ, ಇನ್ನೆಲ್ಲೋ ಕಂಡಿದ್ದಾನೆ. ಅದಕ್ಕಾಗಿ ನಮ್ಮ ದೇವರು ಗುಡಿ, ಮಸೀದಿ, ಚರ್ಚುಗಳನ್ನು ಬಿಟ್ಟು ಹೊರಬರಲು ಒಲ್ಲ. ಆತ ಉಸಿರುಗಟ್ಟುವ ವಾತಾವರಣದಲ್ಲಿ ಬಂಧಿತನಾಗಿರುವ ಬಡ ಕೈದಿ. ಆದರೆ ಸೂಫಿಗಳಿಗೆ ಇದಾವುದರ ಹಂಗಿಲ್ಲ. ಬಂಧಿತ ದೇವರನ್ನು ಅವರು ಪೂಜಿಸಲೂ ಇಲ್ಲ. ಅವರಿಗೆ ಎಲ್ಲೆಲ್ಲೂ ಅವನೇ ಕಂಡಿದ್ದಾನೆ. ನನ್ನಲ್ಲೂ, ನಿನ್ನಲ್ಲೂ, ಅವನಲ್ಲೂ.
- ಇಮ್ತಿಯಾಜ್ ಖಾನ್ – ಸಂತಶಿಶು
