‌ಬದುಕಿನ ಆಟ (ಕಿರು ನಾಟಕಗಳು) ಪರಿಚಯ

ಗೀತಾ ಶೇಷಾದ್ರಿ ಅವರು ಅಂಚೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಯಾಗಿದ್ದಾರೆ. ಅವರ ‘ಬದುಕಿನ ಆಟ’ ಪುಸ್ತಕದಲ್ಲಿನ ಮೂರು ಕಿರು ನಾಟಕಗಳ ಕುರಿತು ಲೇಖಕಿ ಸವಿತಾ ರಮೇಶ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ‌ಬದುಕಿನ ಆಟ (ಕಿರು ನಾಟಕಗಳು)
ಲೇಖಕರು :ಗೀತಾ ಶೇಷಾದ್ರಿ
ಮೊದಲ ಮುದ್ರಣ : ೨೦೧೨
ಬೆಲೆ : ೮೫ ರೂಪಾಯಿಗಳು

ನಾನು‌ ಮೊದಲೊಮ್ಮೆ ಇವರ ಕೀರ್ತನಾ ಸಂಕಲನದ ಬಗ್ಗೆ ಪರಿಚಯಿಸಿದ್ದೆ.

ಈ ಪುಸ್ತಕದಲ್ಲಿ ಮೂರು ಕಿರು ನಾಟಕಗಳು ಇದೆ.

೧. ಅಂಚಾಯಣ :

ಈ ನಾಟಕದಲ್ಲಿ ಅಂಚೆ ಇಲಾಖೆಯಲ್ಲಿ ಉಳಿತಾಯ ಮಾಡುವ ವಿವಿಧ ಸೇವೆ, ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲುವಂತೆ ಇದೆ. ಲೇಖಕಿಯವರು ನಾಟಕದ ಮೂಲಕ ಜನರಿಗೆ ಅರಿವನ್ನು ಮೂಡಿಸಿದ್ದಾರೆ. ಮನೆಗೆ ದಿನಾಲು ತರಕಾರಿ ಮಾರುವ ಬರುವ ನಿಂಗಿಗೆ ಬಂದ ಲಾಭದಲ್ಲಿ ಸ್ವಲ್ಪ ಉಳಿಸಿ ಸಣ್ಣ ಉಳಿತಾಯ ಖಾತೆಯಲ್ಲಿ ಕಟ್ಟುವಂತೆ ಹೇಳುವ ದೃಶ್ಯ.

ಹಳ್ಳಿಯ ರೈತರಿಗೆ ಬೆಳೆ ಮಾರಿದ ತಕ್ಷಣ ಬಂದ ಹಣವನ್ನೆಲ್ಲ ಕೈಯಲ್ಲಿ ಇಟ್ಟುಕೊಂಡರೆ ಖಾಲಿಯಾಗುತ್ತದೆ. ಅದನ್ನು ಡಿಪಾಸಿಟ್ ಮಾಡಿ ತಿಂಗಳು ತಿಂಗಳು ಬಡ್ಡಿ ಬರುವ ಹಾಗೆ ಮಾಡುವ ಸೌಲಭ್ಯವನ್ನು ಸಂಭಾಷಣೆ ರೀತಿಯಲ್ಲಿ ವಿವರಿಸಿದ್ದಾರೆ. ಹಾಗೆಯೇ ತಮಾಷೆಯಾಗಿ ಪೋಸ್ಟ್ ಆಫೀಸಿನಲ್ಲಿಯೂ ಸಾಲ ಹೇಳುವ ಜನಗಳ ಬಗ್ಗೆ ಇದೆ. ಒಟ್ಟಿನಲ್ಲಿ ನಾಟಕ ಸ್ವಲ್ಪವು ಬೇಸರವಾಗದಂತೆ ಇದೆ. ಈ ನಾಟಕ ಬೆಂಗಳೂರು, ಮೈಸೂರು, ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಬಿತ್ತರಗೊಂಡಿದೆ. ಅಲ್ಲದೆ ಭಾರತೀಯ ಅಂಚೆ ಇಲಾಖೆಯ ಸಾಂಸ್ಕೃತಿಕ ಮೇಳ ಕ್ಕೆ ಆಯ್ಕೆಯಾಗಿ ಬರೋಡದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ.

೨. ಋಣಾನುಬಂಧ :

ಅತ್ತೆ ಸೊಸೆಯರ ಅನುಬಂಧಗಳ ಬಗ್ಗೆ ನಿರೂಪಣೆ ಗೊಂಡಿದೆ. ಮದುವೆಯ ನಂತರ ಹುಟ್ಟಿದ ಮನೆ ಬಿಟ್ಟು ಗಂಡನ ಮನೆಗೆ ಬರುವ ಹೆಣ್ಣು ಮಕ್ಕಳು ಅಲ್ಲಿ ಒಳ್ಳೆಯ ಸಂಬಂಧವನ್ನು ಬೆಸೆಯುವಾಗ ಹೇಗಿರಬೇಕು. ಹಾಗೆ ಆ ಹುಡುಗಿಯ ಗಂಡನ ಪಾತ್ರ ಹೇಗಿರಬೇಕು. ಮತ್ತೆ ಅತ್ತೆ ಮಾವಂದಿರ ಕರ್ತವ್ಯಗಳೇನು ಎನ್ನುವುದನ್ನು ತುಂಬಾ ಸರಳವಾಗಿ ನಾಟಕ ರೂಪದಲ್ಲಿ ಚಿತ್ರಿಸಿದ್ದಾರೆ. ಈ ನಾಟಕವು ಇಂದಿನ ಸಮಾಜಕ್ಕೆ ಬೇಕಾಗಿರುವ ವಿಷಯ. ಪ್ರತಿಯೊಂದು ಸಂಭಾಷಣೆಯು ಅರ್ಥಪೂರ್ಣವಾಗಿ ಮೂಡಿಬಂದಿದೆ.

೩. ನಿವೃತ್ತಿ ಯಾವಾಗ :

ನಿವೃತ್ತಿ ಯಾವಾಗ ಈ ನಾಟಕವಂತು ಮನ ಕಲಕುವಂತಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ನಿವೃತ್ತಿಯ ನಂತರ ಪೆನ್ಷನ್ ಬರದೇ ಇರುವ ಪಾತ್ರದ ಚಿತ್ರಣವಿದೆ.
ನಮ್ಮ ಸಮಾಜದಲ್ಲಿ ಮಕ್ಕಳನ್ನು ಓದಿಸಿ ಬೆಳಸಿ ಮಕ್ಕಳೇ ಸರ್ವಸ್ವವೆಂದು ಬಂದ ಹಣವನ್ನೆಲ್ಲ ಮಕ್ಕಳಿಗಾಗಿಯೇ ಖರ್ಚು ಮಾಡಿ ಕೊನೆಗೆ ನಿವೃತ್ತಿಯಾದಾಗ ಕೈಯಲ್ಲಿ ಬಿಡಿ ಕಾಸು ಇಲ್ಲದೆ, ಪೆನ್ಷನ್ ಸಹ ಬರದ ಎಷ್ಟೋ ಹಿರಿಯ ಜೀವಗಳು ನಮ್ಮ ಮುಂದೆ ಇದ್ದಾರೆ. ಹಾಗೆಯೇ ಅತಂಹ ಅಪ್ಪ ಅಮ್ಮನನ್ನು ನೋಡಿಕೊಳ್ಳದ ಮಕ್ಕಳು ಇದ್ದಾರೆ.

ಈ ನಾಟಕ ಮಕ್ಕಳನ್ನು ನಂಬಿ ಉಳಿತಾಯ ಮಾಡಿಟ್ಟು ಕೊಳ್ಳದ ಹಿರಿಯ ನಾಗರಿಕರಿಗೆ ಹಾಗೂ ಹೆತ್ತವರನ್ನು ದೂರ ಮಾಡುವ ಮಕ್ಕಳಿಗೆ ಪಾಠದಂತೆ ಇದೆ.

ಮೂರು ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದೆ. ಪುಟ್ಟ ಪುಟ್ಟ ನಾಟಕಗಳು ಪರದೆಯ ಮೇಲೆ ಬಂದರೆ ಸ್ವಲ್ಪವೂ ಬೇಸರವಾಗದಂತೆ ಕುತೂಹಲ ಮೂಡಿಸುವಂತೆ ಇದೆ. ಓದುವಾಗಲು ಅಷ್ಟೇ ಇಷ್ಟು ಬೇಗನೇ ಮುಗಿಯಿತಾ… ಎನ್ನುವಂತೆ ಇದೆ.

ಈ ಪುಸ್ತಕದಿಂದ ತಾವು ಕವನ ಹಾಗೂ‌ ಕೀರ್ತನೆಗಳಲ್ಲದೆ ನಾಟಕ ರಚನೆಯಲ್ಲಿಯೂ ಪ್ರಭುದ್ಧರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಲೇಖಕಿ ಗೀತಾ ಶೇಷಾದ್ರಿ ಅವರು ಈ ಪುಸ್ತಕವನ್ನು ಪ್ರೀತಿಯಿಂದ ಕಳುಹಿಸಿಕೊಟ್ಟ ಗೀತಾ ಅಕ್ಕನವರಿಗೆ ಹೃತ್ಪೂರ್ವಕ ಧನ್ಯವಾದಗಳು.


  • ಸವಿತಾ ರಮೇಶ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading