ಹೂಲಿಶೇಖರ್ ಅವರ ‘ಸುಳಿವಾತ್ಮಎನ್ನೊಳಗೆ’ ನಾಟಕದಲ್ಲಿ ಮೂರು ಮುಖ್ಯ ಸಂಘರ್ಷಗಳು ಇವೆ, ಅರಮನೆ, ಗುರುಮನೆ, ಪುರೋಹಿತಶಾಹಿ. ರಘುನಾಥ್ ಕೃಷ್ಣಮಾಚಾರ್ ಅವರು ನಾಟಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಸುಳಿವಾತ್ಮಎನ್ನೊಳಗೆ
ಲೇಖಕರು : ಹೂಲಿಶೇಖರ್
ಪ್ರಕಾರ : ನಾಟಕ
ಪ್ರಕಾಶಕರು : ಬಸವ ಪ್ರಕಾಶನ , ಗುಲ್ಬರ್ಗಾ
ಸುಳಿವಾತ್ಮಎನ್ನೊಳಗೆ : ಈ ನಾಟಕದಲ್ಲಿ ಮೂರು ಮುಖ್ಯ ಸಂಘರ್ಷಗಳು ಇವೆ.
೧: ಅರಮನೆ: ಅಧಿಕಾರ, ಸಂಚು , ವಿದ್ರೋಹಗಳ ಪ್ರತೀಕವಾಗಿದೆ. ಬಿಜ್ಜಳ ಇದಕ್ಕೆ ಪ್ರತಿನಿಧಿ.
೨: ಗುರುಮನೆ: ಭಕ್ತಿ, ಕಾಯಕ, ದಾಸೋಹಗಳ ಪ್ರತೀಕ. ಇದರ ಪ್ರತಿನಿಧಿ ಇಲ್ಲಿ ಅಪ್ಪಣ್ಣ.
೩; ಪುರೋಹಿತಶಾಹಿ: ವರ್ಣವ್ಯವಸ್ತೆ, ಜಾತಿ, ಒಳ ಸಂಚುಗಳ ಪ್ರತೀಕ. ಇದರ ಪ್ರತಿನಿಧಿ ಮಂಚಣ್ಣ, ಕಸಪಯ್ಯ.
ಇವುಗಳ ನಡುವೆ ನಡೆವ ಸಂಘರ್ಷವೇ ಈ ನಾಟಕದ ಕೇಂದ್ರಬಿಂದು. ವರ್ಣವ್ಯವಸ್ಥೆಯನ್ನು ಮೀರಲು ಹರಳಯ್ಯನ ( ಸಮಗಾರ) ಮಗ ಮತ್ತು ಮಧು ವರಸರ (ಬ್ರಾಹ್ಮಣ) ಮಗಳ ನಡುವೆ ನಡೆಸಿದ ಮದುವೆ ಪುರೋಹಿತಶಾಹಿಗೆ ಸವಾಲಾಗುತ್ತದೆ.ಅವರು ಬಿಜ್ಜಳನನ್ನು ಸಾಧನವಾಗಿ ಬಳಸಿ ಅವರಿಗೆ ಘೋರ ಶಿಕ್ಷೆ ವಿಧಿಸುತ್ತಾರೆ. ಕಡೆಗೆ ಅವನನ್ನು ಕೂಡ ಬಲಿ ತೆಗೆದುಕೊಳ್ಳುತ್ತಾರೆ. ನಿರಂಕುಶ ಪ್ರಭುವಾದ ಬಿಜ್ಜಳ ಅರಮನೆಗೆ ಏಕನಿಷ್ಟೆಯನ್ನು ಬಯಸುತ್ತಾನೆ. ಶರಣರು ಅದನ್ನು ನಿರಾಕರಿಸುತ್ತಾರೆ.ತಮ್ಮ ನಿಷ್ಟೆ ಬಸವಣ್ಣ ಮತ್ತು ಮಹಾಮನೆಗೆ ಮಾತ್ರ ಎಂದು ಅವನಿಗೆ ನಿಷ್ಟುರವಾಗಿ ಅದು ಅವರ ಸಂಘರ್ಷಕ್ಕೆ ನಾಂದಿಹಾಡುತ್ತದೆ. ಅವರನ್ನು ಇಟ್ಟಾಡಿಸಿಕೊಂಡು ಅವನ ಸೈನಿಕರು ಕೊಲೆಮಾಡುತ್ತಾರೆ. ಕಡೆಗೆ ಅದೇ ಸೈನಿಕರೆ ಶರಣರ ವೇಷ ತೊಟ್ಟು ಬಿಜ್ಜಳನ ಕೊಲೆ ಮಾಡುವುದು ವೈರುಧ್ಯವಾಗಿದೆ. ಬಸವಣ್ಣನ ಲಿಂಗನಿಷ್ಟೆ ಮತ್ತು ಜಂಗಮನಿಷ್ಟೆಯ ನಡುವೆ ಜಂಗಮ ಶ್ರೇಷ್ಟ, ಎಂಬುದನ್ನು ಸ್ಥಾಪಿಸುವುದರ ಮೂಲಕ ಅಲ್ಲಮ ,ಬಸವಣ್ಣನಿಗೆ ಇದ್ದ ಲಿಂಗನಿಷ್ಟೆಯ ಭ್ರಮೆಯನ್ನು ಕಳೆಯುವುದು, ಈ ನಾಟಕದ ಇನ್ನೊಂದು ಆಯಾಮವಾಗಿದೆ. “ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ” ಎಂದು ಸಾರಿದ ಬಸವಣ್ಣನೆ ಅದನ್ನು ಅಳವಡಿಸಿಕೊಳ್ಳದ ವೈಪರೀತ್ಯವನ್ನು ಕೂಡ ಇದು ಬಯಲಾಗಿಸುತ್ತದೆ. ಅಂತೆಯೆ ಅವನ ವಚನವನ್ನೇ ಉಲ್ಲೇಖಿಸುವುದಾದರೆ ” ನುಡಿಯೊಳಗಾಗಿ ನಡೆದಿರ್ದೊಡೆ ಕೂಡಲ ಸಂಗಮನೆಂತೊಲಿವನಯ್ಯ” .
ಲೇಖಕರ ಈ ವಸ್ತುನಿಷ್ಟತೆ ನಾಯಕ ಆರಾಧನೆಯಿಂದ ಅದನ್ನು ತಪ್ಪಿಸಿದೆ. ಅಲ್ಲದೆ ಮಹಾಮನೆ ಕೇವಲ ಬಸವಣ್ಣನದಲ್ಲ ಎಲ್ಲ ಶರಣರ ಕಾಯಕದಿಂದಾಗಿ ರೂಪುಗೊಂಡಿದ್ದು .ಆದ್ದರಿಂದ ಅದು ಎಲ್ಲರಿಗೂ ಸೇರಿದ್ದು ಎಂಬ ನಿಲುವು ಆರೋಗ್ಯಕರವಾಗಿದೆ . ಬಳಸಿರುವ ಹಲವಾರು ವಚನಗಳು ಅರ್ಥಪೂರ್ಣವಾಗಿವೆ. ಸಮಾಜವಾದಿ, ಸಮಾನತೆ ಪದಪ್ರಯೋಗಗಳು ನಾಟಕದ ಸಮಕಾಲೀನ ಆಶಯ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.