ಮತ ಚಲಾಯಿಸುವ ಮುನ್ನ ಸರಿಯಾಗಿ ಯೋಚಿಸಿ, ಒಬ್ಬ ಯೋಗ್ಯ ಅಭ್ಯರ್ಥಿಯನ್ನು ಆರಿಸುವ ಅವಕಾಶ ನಿಮ್ಮ ಕೈಯಲ್ಲಿದೆ. ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ನಿಮ್ಮ ಮತ ವ್ಯರ್ಥವಾಗದಿರಲಿ…
ಚುನಾವಣೆ ಬಂತೆಂದರೆ ಸಾಕು, ಐಷಾರಾಮಿ ಮನೆಯಲ್ಲಿ ಮಲಗಿದ್ದ ಭ್ರಷ್ಟ ನಾಯಕರು ಕಣ್ಣು ತೆರೆದು ತಮ್ಮ ತಮ್ಮ ಪ್ರದೇಶಗಳಿಗೆ ಕಾಲಿಡುತ್ತಾರೆ. ಪಾಪ ಅವರಿಗೆ ಈಗ ಎಚ್ಚರವಾಗಿರಬೇಕು. ದೇಶದಲ್ಲಿ ಏನಾಗುತ್ತಿದೆ? ಯಾವ ಯಾವ ಸಮಸ್ಯೆಗಳಿವೆ? ಅದಕ್ಕೆ ಪರಿಹಾರವೇನು? ಎಂಬುದು ಈಗ ಅವರಿಗೆ ಅರಿವು ಬಂದಿರಬೇಕು. ಚುನಾವಣೆ ಬಂದಿದ್ದೆ ಬಂದಿದ್ದು ಕೆಲವು ಭ್ರಷ್ಟ ನಾಯಕರ ಪ್ರಚಾರ ಮುಗಿಲೆತ್ತರಕ್ಕೆ ಏರಿದೆ. ದೇಶಕ್ಕಾಗಿ ಪ್ರಾಣವನ್ನು ಇವರೇ ಕೊಡುತ್ತಿದ್ದಾರೆ ಏನು ಎಂಬಂತೆ ನಟಿಸುತ್ತಿದ್ದಾರೆ. ಬಡವರ ದಿನ ದಲಿತರ ದುಡ್ಡನ್ನು ಕೊಳ್ಳೆ ಹೊಡೆಯದೆ, ಭ್ರಷ್ಟಾಚಾರದಿಂದ ನಾಗರಿಕರನ್ನು ಲೂಟಿ ಮಾಡದೆ, ನಮ್ಮ ದೇಶ ಪ್ರಗತಿಗಾಗಿ ಬೆವರು ಸುರಿಸಿ ದುಡಿಯುತ್ತಿದ್ದಾರೇನೋ ಎಂಬಂತೆ ಭಾಷಣ ಮಾಡಿ ಮುಗ್ಧರನ್ನು ಸೆಳೆಯುತ್ತಿದ್ದಾರೆ.
ಚುನಾವಣೆ ಹತ್ತಿರ ಬಂದಂತೆ ರಸ್ತೆಯಲ್ಲಿದ್ದ ಗುಂಡಿಗಳು ಮುಚ್ಚಿ ಹೋಗಿ ಹೊಸ ಟಾರ್ ನಿಂದ ಅಲಂಕೃತವಾಗಿರುತ್ತವೆ. ಈ ಅಲಂಕಾರ ಒಂದು ವರ್ಷದ ತನಕ ಇದ್ದರೆ ನಮ್ಮ ಪುಣ್ಯ ಬಿಡಿ. ಹೊಸ ರಸ್ತೆ ಮಾಡಿ ತಿಂಗಳು ಕಳೆಯುವುದರೊಳಗಾಗಿ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗುತ್ತವೆ. ಇವುಗಳೆಲ್ಲ ಭ್ರಷ್ಟಾಚಾರಿಗಳ ಕೆಲಸವೆಂಬುದು ಜನಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ.
ಯಾವುದೋ ಬೆಟ್ಟದ ತುದಿಯಲ್ಲಿ ಪಾಳು ಬಿದ್ದ ಮನೆಯಲ್ಲಿ ವಾಸಿಸುವ ಅಜ್ಜಿಯನ್ನು ಹುಡುಕಿಕೊಂಡು ತಮಗೆ ಮತ ಹಾಕಿ ಎಂದು ಕೈಮುಗಿದು ಕೇಳುತ್ತಾರೆ.ಆ ಮಹಿಳೆಯ ವೋಟಿಗಾಗಿ ಕಾಲು ಬೀಳುತ್ತಾರೆ. ಆದರೆ ಆಕೆಯ ಮನೆಯನ್ನು ಸರಿ ಮಾಡಿಸಬೇಕು ಆ ಬೆಟ್ಟಕ್ಕೆ ನಡೆದಾಡಲು ದಾರಿ ಮಾಡಿಸಬೇಕೆಂದು ಏಕೆ ಯೋಚಿಸುವುದಿಲ್ಲ. ಅವರೇನಾದರೂ ಅಂತ ಒಳ್ಳೆ ಕೆಲಸವನ್ನು ಮಾಡುದ್ದಿದ್ದರೆ ಈಗ ಕೈ ಮುಗಿದು ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ಇಷ್ಟು ವರ್ಷ ಯಾವುದೊ ಒಂದು ಮೂಲೆಯಲ್ಲಿ ಬಿದ್ದಿದ್ದ ಜಾತಿಯೆಂಬ ಪದವು ಈಗ ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ. ನಾನು ನಿಮ್ಮ ಜಾತಿಯವನು, ನಿಮ್ಮ ಸಮಾಜದವನು ನನ್ನನ್ನು ಗೆಲ್ಲಿಸಿ ಎಂಬ ಕೆಲವು ಭ್ರಷ್ಟರು ಬಾಯಿತುಂಬ ಹೇಳಿ ವೋಟು ಕಸಿದುಕೊಳ್ಳುವ ಹುಣ್ಣಾರ ಮಾಡುತ್ತಿದ್ದಾರೆ. ನಾನು ನಿಮ್ಮ ಜಾತಿಯವನು ನನಗೆ ಭಿಕ್ಷೆ ಹಾಕಿರೆಂದು ಭಿಕ್ಷುಕರ ಬೇಡಿದ ಹಾಗೆ. ಕೆಲವರಂತು ಜನರನ್ನು ನಂಬಿಸಲು ಬಡಬಗ್ಗರ ಮನೆಯಲ್ಲಿ ಊಟ ಮಾಡುವ ನಾಟಕ ಮಾಡುತ್ತಿದ್ದಾರೆ. ಚುನಾವಣೆ ಬಂದಾಗಲಷ್ಟೇ ಇವರಿಗೆ ಬಡಬಗ್ಗರ ಮನೆ ನೆನಪಾಗುವುದು. ಕೀಳು ಜಾತಿಯವರ ಜೊತೆ ಊಟ ಮಾಡಿದವೆಂದು ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಭ್ರಷ್ಟನೀಚರಿಗೊಂದು ಪ್ರಶ್ನೆ? ಇಷ್ಟು ವರ್ಷ ಐಷಾರಾಮಿ ಮನೆಯಲ್ಲಿ ಊಟ ಮಾಡುವಾಗ ಕೀಳು ಜಾತಿಯವರ ಹಸಿವು ನಿಮಗೆ ನೆನಪಾಗಿಲ್ಲವೆ? ಮೊದಲೇಕೆ ನೀವುಗಳು ಅವರ ಮನೆಯಲ್ಲಿ ಊಟ ಮಾಡಿ ತಾವೆಲ್ಲರೂ ಒಂದೇ ಎಂದು ಏಕೆ ಹೇಳಲಿಲ್ಲ?
” ಕಾಡು ಕ್ರಮೇಣ ಕ್ಷಿಣಿಸುತ್ತಿತ್ತು. ಆದರೂ ಕೂಡ ಕಾಡಿನ ಮರಗಳು ಕೊಡಲಿಗೆ ವೋಟು ಹಾಕುತ್ತಿದ್ದವು. ಏಕೆಂದರೆ ಕೊಡಲಿ ಹಿಡಿದಿರುವ ಹಿಡಿಕೆ ನಮ್ಮ ಜಾತಿಯವನೆಂದು” ಹೀಗೆ ನನ್ನ ಸಹಮಿತ್ರ ಶ್ರೀಧರ್ ಸ್ಟೇಟಸ್ ಇಟ್ಟಿದ್ದ. ವಿಪರ್ಯಾಸಕ್ಕೆ ಇದು ನಿಜ ಈಗಿನ ಸಮಾಜ ಜಾತಿಯನ್ನು ಬೆಂಬಲಿಸುತ್ತಿದ್ದೆ ಹೊರತು ಒಳ್ಳೆಯ ಅಭ್ಯರ್ಥಿಯನ್ನಲ್ಲ.
ವೋಟು ಹಾಕುವ ಮುನ್ನ ಜನಸಾಮಾನ್ಯರಿಗೊಂದು ಕೋರಿಕೆ. ದಯವಿಟ್ಟು ಚುನಾವಣೆಗೆ ನಿಂತ ಅಭ್ಯರ್ಥಿ ತಮ್ಮ ಜಾತಿಯವನೆಂದು ವೋಟು ಹಾಕಬೇಡಿ ಏಕೆಂದರೆ ಆತನಿಗೆ ಚುನಾವಣೆಯ ಸಮಯದಲ್ಲಿ ಅಷ್ಟೇ ಜಾತಿಯ ಭೂತ ಮೈಗೇರಿರುತ್ತೆ. ಮೊದಲು ಆ ವ್ಯಕ್ತಿಯ ಹಿನ್ನೆಲೆಯನ್ನು ನೋಡಿ ತಮ್ಮ ಸೀಟನ್ನು ದುರುಪಯೋಗ ಪಡೆಸಿಕೊಳ್ಳುವ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅವರ ಮನೆ ಉದ್ಧಾರವಾಗುತ್ತದೆ ಹೊರತು ನಿಮ್ಮ ಪ್ರದೇಶವಲ್ಲ. ಯಾರು ತಮ್ಮ ಕುರ್ಚಿಯನ್ನು ದುರುಪಯೋಗಪಡಿಸಿಕೊಳ್ಳದೆ, ಎಳ್ಳಷ್ಟು ಲಂಚ ತಿನ್ನದೆ, ತಮ್ಮ ಪ್ರದೇಶದ ಏಳಿಗೆಗಾಗಿ ದುಡಿದು ಪ್ರಗತಿಪರ ಕೆಲಸ ಮಾಡುತ್ತಾರೋ ಅವರಿಗೆ ವೋಟು ಹಾಕಿ. ಆ ಓಟಿಗೂ ಒಂದು ಬೆಲೆ ಸಿಗುತ್ತದೆ. ನಿಮ್ಮ ವೋಟಿನಿಂದ ದೇಶದ ಪ್ರಗತಿಯಾಗುತ್ತದೆ.
ಒಬ್ಬ ಯೋಗ್ಯ ಅಭ್ಯರ್ಥಿಯನ್ನು ಆರಿಸುವ ಅವಕಾಶ ಸಿಕ್ಕಿದೆ ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ.
ಇಂತಿ ನಿಮ್ಮ ಪ್ರೀತಿಯ
- ವಿಕಾಸ್. ಫ್. ಮಡಿವಾಳರ