ಹೊಸನಗರ ಸೇರುವ ಮುನ್ನ ಅದೇ ಪಟಗುಪ್ಪೆ ಸೇತುವೆಯ ಮೇಲೆ ವಾಹನ ನಿಲ್ಲಿಸಿ ಸೇತುವೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದೆ.. ಜಲಾಶಯದ ನೀರು ಇಳಿದು ಹೋಗಿದೆ.. ನೀರು ಬರಿದಾದ ಕಾರಣಕ್ಕೆ ಮುಳುಗಡೆಯ ಚಿತ್ರಗಳು ಅನಾವರಣ ಆಗುತ್ತಿವೆ.. – ನಾಗೇಂದ್ರ ಸಾಗರ್ ಅವರ ಒಂದು ಲೇಖನ ತಪ್ಪದೆ ಓದಿ…
ನೆಲೆ ಕಳೆದುಕೊಂಡರೂ ಬುಡ ಕಳಚದ ಒಣಗಿ ನಿಂತ ಮರಗಳು ಎದ್ದು ಕಾಣುತ್ತಿವೆ.. ಇತ್ತ ಕಡೆ ಅನಾದಿ ಕಾಲದಲ್ಲಿ ಬಳಕೆಯಿದ್ದ ರಸ್ತೆ.. ಶಿಥಿಲ ಸೇತುವೆ.. ಹಿಂದಿನ ಕಾಲಘಟ್ಟದ ಸಣ್ಣ ಮೆಲುಕು.. ಝಲಕ್…
ಇಂದಿನ ಕಾರ್ಯಸೂಚಿ ಉದ್ದಕ್ಕೆ ಇದೆ.. ಸಮಯ ವ್ಯರ್ಥ ಮಾಡುವ ಹಾಗಿಲ್ಲ.. ಘಟ್ಟದ ತುದಿಯ ಜಂಕ್ಷನ್ ಮಾಸ್ತಿಕಟ್ಟೆಯ ವಿಸಿಟ್ ಬಳಿಕ ಭಟ್ಕಳಕ್ಕೆ ಹೋಗಿ ಬರಬೇಕಾದೀತು…
ಹೊಸನಗರ ದಾಟಿ ಜಯನಗರ ಜಂಕ್ಷನ್ನಿನಲ್ಲಿ ಕಾಫೀ ಬ್ರೇಕು.. ಹಳೆಯ ಹೋಟೆಲ್ಲು.. ಜಗಲೀಕಟ್ಟೆಯ ಮೇಲೆ ಕುಳಿತು ಹೊರಗಿನ ದೃಶ್ಯಾವಳಿಗಳನ್ನು ನೋಡುತ್ತಾ ಬಿಸಿ ಬಿಸಿ ಕಾಫಿ ಹೀರುವುದರಲ್ಲಿ ಒಂದು ಮಜಾ ಇದೆ.. ಎದುರಲ್ಲಿ ಬಸ್ ಸ್ಟಾಪಿದೆ. ದೊಡ್ಡ ಆಲದ ಮರದ ಕೆಳಗೆ ಕೂರಲು ಒಂದು ಕಟ್ಟೆ. ಕಟ್ಟೆಯ ಆಚೆ ಈಚೆ ಪ್ರಯಾಣಿಕರ ಆಟೋಗಳು, ಲಗೇಜು ಗೂಡ್ಸುಗಳು.. ಏನೇನೋ ಕಾರ್ಯಸೂಚಿ ಇರಿಸಿಕೊಂಡವರ ಕನೆಕ್ಷನ್ನು, ಕಲೆಕ್ಷನ್ನಿನ ತಾಣ..
ಮನೆಗೆ ಮಡದಿಗೆ ಫೋನಾಯಿಸಿದೆ.. ನಮ್ಮ ಸಾವಯವ ಗೊಬ್ಬರ ತಯಾರಿಕೆ ಘಟಕದ ಸಮಸ್ಯೆ ಸರಿಪಡಿಸಲು ಮೆಕ್ಯಾನಿಕ್ ಬಂದಿದ್ದಾನೆ ಎಂಬ ವರ್ತಮಾನ ಕೇಳಿ ಕೊಂಚ ನೆಮ್ಮದಿ. ಎರೆಗೊಬ್ಬರ ಆಧಾರಿತ ಸಾವಯವ ಗೊಬ್ಬರ ತಯಾರಿಕ ಘಟಕವನ್ನು ನಾನು ಯಾಂತ್ರೀಕರಣ ಮಾಡಿದ್ದೇನೆ.. ಹೀಗಾಗಿ ಕಡಿಮೆ ಆಳು ಸಾಕು.. ಉತ್ಪಾದನೆಯೂ ಜಾಸ್ತಿ ಆಯಿತು.. ಇದು ಎಂಟು ವರ್ಷಗಳ ಹಿಂದೆ ಮಾಡಿಕೊಂಡಿದ್ದ ವ್ಯವಸ್ಥೆ.. ಈ ನಡುವೆ ಸಾವಯವ ಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ.. ಸಕಾಲದಲ್ಲಿ ಪೂರೈಕೆ ಆಗಬೇಕು.. ವ್ಯವಸ್ಥೆ ಆಗಾಗ ಕೈ ಕೊಡುತ್ತಿದೆ.. ಸಣ್ಣಪುಟ್ಟ ಮಾರ್ಪಾಡು ಮಾಡಲು ಹೊರಟು ಅದೀಗ ಉದ್ದ ಪುರಾಣವಾಗಿದೆ.. ದುರಸ್ತಿ ಮಾಡುವ ಜವಾಬ್ದಾರಿ ತೆಗೆದುಕೊಂಡವರು ಸೊರಬದ ಉಳವಿಯವರು. ಒಂದು ದಿನ ಬಂದರೆ ಇನ್ನೊಂದು ದಿನ ಬಾರರು.. ಫೋನು, ಹೇಳಿಕೆ ಕೇಳಿಕೆ ಎಲ್ಲವೂ ಮಾಡಿ ಆಯಿತು. ಮತ್ತೆ ಅದೇ ರಾಗ. ಅದೇ ತಂತಿ…
ಇನ್ನು ಹೀಗೆಯೇ ಕೂತರೆ ಇನ್ನಷ್ಟು ತೊಂದರೆ ಎಂದವನೇ ಮುಂಜಾನೆ ಅವರ ಮನೆಗೆ ಹೋಗಿದ್ದೆ.. ಕೆಲಸ ಉದ್ದ ಮಾಡಿದಷ್ಟೂ ನನಗೆ ಆಗುತ್ತಿರುವ ತಾಪತ್ರಯದ ಪಟ್ಟಿ ಕೊಟ್ಟೆ.. ಫೋನು ವಗೈರೆಯಿಂದ ಆಗದ ಕೆಲಸ ಇದೊಂದು ಭೇಟಿಯಿಂದ ಆಗಿತ್ತು.. ಮಧ್ಯಾಹ್ನದ ವೇಳೆಗೆ ಮೆಷಿನ್ನು ಸರಿ ಹೋಗಿತ್ತು.. ಜಗಳ ತೆಗೆಯದೇ ಸಹನೆಯಿಂದ ಹೇಳಿದ ಮಾತುಗಳು ಕೆಲಸ ಮಾಡಿದ್ದವು.. ಇನ್ನು ಟೈಂ ಟೇಬಲ್ಲಿನ ಪ್ರಕಾರ ಗೊಬ್ಬರ ಪೂರೈಕೆ ಮಾಡಬಹುದು..
ಮಾಸ್ತಿಕಟ್ಟೆಯ ಯುವ ಕೃಷಿ ದಂಪತಿಗಳಿಗೆ ಪಶು ಆಹಾರ ಕೊಟ್ಟ ಬಳಿಕ ಕೊಂಚ ಲೋಕಾಭಿರಾಮ.. ಹೌದು ಹಲಸಿನ ಸೀಸನ್ ಆರಂಭವಾಗಿದೆ.. ಹಪ್ಪಳ ಮಾಡುವ ಘಟಕದ ಕೆಲಸ ಎಲ್ಲಿಯ ತನಕ ಬಂತು.. ಮನೆಯ ಯಜಮಾನತಿಯ ಹೆಸರಲ್ಲಿ ಘಟಕ ಆರಂಭಿಸಬೇಕು.. ಮದುವೆಯಾಗಿ ಏಳೆಂಟು ವರ್ಷ ಆಗಿದ್ದರೂ ಆಧಾರ್ ಕಾರ್ಡಿನ ವಿಳಾಸ ತವರು ಮನೆಯದ್ದೇ ಇದೆ.. ಇಲ್ಲಿಗೆ ವರ್ಗಾವಣೆ ಆಗಬೇಕು.. ಈಗೆಲ್ಲಾ ಆನ್ಲೈನಿನ ಕಾಲ.. ಒಂದೂವರೆ ತಿಂಗಳಿಂದ ಪ್ರಯತ್ನಿಸುತ್ತಲೇ ಇದ್ದಾರೆ.. ಆದರೆ ಟೆಕ್ನಿಕಲ್ ಎರರ್.. ಸರಿ ಹೊಂದಿಲ್ಲ.. ಹಿಂದೆಲ್ಲಾ ಸಂಬಂಧಿಸಿದ ಗುಮಾಸ್ತರನ್ನು ಹಿಡಿದು ಸ್ವಲ್ಪ ಹೆಚ್ಚು ಕಡಿಮೆ ಶ್ರಮ ಹಾಕಿ ಬದಲಾವಣೆ ಪತ್ರವನ್ನು ಕೈಯಲ್ಲೇ ಹಿಡಿದು ತರಬಹುದಿತ್ತು.. ಈಗ ಡಿಜಿಟಲ್ ಯುಗ.. ಹಾಗೆಲ್ಲಾ ತಂತ್ರಗಾರಿಕೆ ಬರುವುದಿಲ್ಲ.. ಕೆಲವೊಮ್ಮೆ ಹೀಗೆಯೇ.. ತೊಂದರೆ ತಪ್ಪಿದ್ದಲ್ಲ..
ಕೆಲಸ ಮುಗಿಸಿ ಏಳುವ ಹೊತ್ತಿಗೆ ಮನೆಯಿಂದ ಫೋನು.. ಅರೇ ಇವರಿರುವ ತಾವಿಗೆ ನೆಟ್ವರ್ಕ್ ಇರಲಿಲ್ಲವಲ್ಲ ಎಂದು ಕೊಳ್ಳುತ್ತಿರುವಾಗ ಪ್ರಸಾದ ಭಟ್ಟರು ಬೂಸ್ಟರ್ ಹಾಕಿ ಕೊಂಡೆವು. ಹದಿನೇಳು ಸಾವಿರ ಖರ್ಚಾಯಿತು.. ಆದರೆ ದೊಡ್ಡ ಸಮಸ್ಯೆ ಬಗೆಹರಿದ ಹಾಗಾಯಿತು ಎಂದರು.. ಮಲೆನಾಡಿನ ಮೂಲೆ ಮೂಲೆಗೂ ಸಂಪರ್ಕ ಸೇತು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ.. ಕೊರೋನಾ ಬಳಿಕ ವರ್ಕ ಫ್ರಂ ಹೋಮ್ ಕಾನ್ಸೆಪ್ಟ್ ಬಂದ ಮೇಲೆ ಈ ಡಿಜಟಲೀಕರಣದ ವೇಗವೂ ಬೆಳೆಯುತ್ತಿದೆ..
ಮರಳಿ ಸಾಗರಕ್ಕೆ ಹೊರಡುವ ದಾರಿಯಲ್ಲಿ ಮೇಲಿಂದ ಮೇಲೆ ಭಟ್ಕಳ ಸಾಬರ ಫೋನು… ಮಾತಿನ ಪ್ರಕಾರ ಇಂದು ಅವರಲ್ಲಿಗೆ ಹೋಗುವುದಿತ್ತು.. ಸಾಬರು ನನಗೆ ಬಹಳ ದೊಡ್ಡ ಪ್ರಮಾಣದ ಜೇನುತುಪ್ಪ ಗ್ರಾಹಕರು.. ಪಾರ್ಸಲ್ಲನ್ನು ಬಸ್ಸಲ್ಲಿ ಇಟ್ಟರೂ ಸಾಕು.. ಮೂರ್ನಾಲ್ಕು ಗಂಟೆಯಲ್ಲಿ ಅವರಿಗೆ ತಲುಪಿ ಅವರಿಂದ ದೇಶ ವಿದೇಶಗಳಿಗೆ ರವಾನೆ ಆಗುತ್ತದೆ.. ಹೊಸ ಜೇನುತುಪ್ಪ ಸಂಗ್ರಹಿಸಿದ ದಿನಗಳು.. ಜೇನುತುಪ್ಪದೊಂದಿಗೆ ಬನ್ನಿ, ಮಾತಾಡುವುದಿದೆ.. ಆಗಾಗ ಭೇಟಿ, ಮುಖಾಬಿಲೆ ಇಲ್ಲದೇ ಹೋದರೆ ಹೇಗೆ ಎನ್ನುವ ಆಗ್ರಹ.. ಈ ಕೃಷಿ ಬದುಕಿನಲ್ಲಿ, ಕೃಷಿ ಪೂರಕ ವ್ಯವಹಾರದಲ್ಲಿ ನನಗಿರುವ ಕೆಲವು ಗ್ರಾಹಕರ ಆಗ್ರಹ ಇದೇ ರೀತಿ ಇರುವುದುಂಟು.. ಆನ್ ಲೈನು ವ್ಯವಹಾರ ಇದ್ದದ್ದೇ ಬಿಡಿ.. ವರ್ಷದಲ್ಲಿ ಒಮ್ಮೆಯಾದರೂ ಮುಖಾಬಿಲೆ ಆಗಿ, ಕೊಂಚ ಹೊತ್ತು ಮಾತಾಡಿ ಜೊತೆಗೊಂದು ಕಾಫಿ ಕುಡಿಯದಿದ್ದರೆ ಹೇಗೆ? ಮನುಷ್ಯ ಸಂಬಂಧದ ರಸಸ್ವಾದ ಇರುವುದೇ ಅಲ್ಲಿ.. ಅದನ್ನು ನಾನು ಉಳಿಸಿಕೊಂಡು ಬಂದಿದ್ದೇನೆ.. ಭಟ್ಕಳಕ್ಕಾದರೂ ಅಷ್ಟೇ.. ಪ್ರಯಾಣದಲ್ಲಿ ಜೊತೆಗೊಬ್ಬರು ಕಂಪನಿ ಕೊಡಲು ಸಿಕ್ಕರೆ ಇವತ್ತು ನಾಳೆಯ ಹಾಗೆ ಹೋಗಿ ಬರಬೇಕು…
ಊರು ಹತ್ತಿರ ಬರುತ್ತಿದ್ದಂತೆ ಗಿರೀಶ್ ಮೇಷ್ಟ್ರು ಮಗನ ಉಪನಯನಕ್ಕೆ ಕರೆದು ಹೋದದ್ದು ನೆನಪಿಗೆ ಬಂತು.. ಹೊತ್ತು ಮಿಗರ್ದು ಹೋಗಿದ್ದರೂ ಹೋಗಿ ಬರದಿದ್ದರೆ ಪ್ರೀತಿ ವಿಶ್ವಾಸಕ್ಕೆ ಬೆಲೆ ಇರುವುದಿಲ್ಲ ಎಂದು ಗಡಿಬಿಡಿಯಲ್ಲಿ ದೌಡಾಯಿಸಿದೆ. ಹೋಗಿದ್ದು ಒಳ್ಳೆಯದೇ ಆಯಿತು.. ಉಪನಯನದ ಮಾಣಿಗೂ ಪೋಷಕರಿಗೂ ಖುಷಿಯಾಯಿತು.. ಅದೇ ಹೊತ್ತಿಗೆ ಅದೆಷ್ಟು ಸ್ನೇಹಿತರು, ಪರಿಚಿತರ ಭೇಟಿ ಆಯಿತು.. ಮನಬಿಚ್ಚಿ ಮಾತಾಡಿ ಹಗುರಾಗಲು ಇಂತಹ ಸಂದರ್ಭಗಳು ಅನುಕೂಲ..
ಪ್ರೀತಿ ವಿಶ್ವಾಸದಿಂದ ಬಡಿಸಿದ ಸಣ್ಣಕ್ಕಿ ಕೇಸರಿ ತಿಂದದ್ದು ತುಸು ಹೆಚ್ಚೇ ಆಯಿತೇನೋ? ಹೊಟ್ಟೆ ಭಾರವಾಗಿ ಇನ್ನು ಹೊರಗಿನ ತಿರುಗಾಟ ಇವತ್ತಿಗೆ ಆಗದು ಎಂದು ಡಿಸೈಡು ಮಾಡಿದೆ.. ನಮ್ಮ ಐಸ್ಕ್ರೀಮ್ ಪೈ ಮಾಮಿನ ಮಗ ನಿತಿನ್ ಕಡೆಯಿಂದ ಫೋನು.. ನಿನ್ನೆ ಐಸ್ಕ್ರೀಮ್ ತರಲು ಹೋದಾಗ ರಿಟರ್ನ್ ಭೇಟಿಯ ಮಾತು ಆಗಿತ್ತು.. ಬನ್ನಿ ಕಾಯುತ್ತಿದ್ದೇವೆ ಎಂದಿದ್ದೆ.. ಮುಂದಿನ ಮೂರು ತಾಸುಗಳು ಖುಷಿ ಖುಷಿಯಾಗಿ ಬೆರೆತು ಕಳೆದೆವು. ಪೈ ಮಾಮಿನ ಮಡದಿ ಕವಿತಕ್ಕ ಹೀಗೆ ಹೊರ ಬರುವುದೇ ಅಪರೂಪ.. ಐಟಿ ಜಾಬಿನಲ್ಲಿ ಇರುವ ಮಗ ನಿತಿನ್ ಹಾಗೂ ಆತನ ಮಡದಿ, ಪುಟ್ಟ ಮಗಳು ಇವರೊಡಗೂಡಿದ ಸಂಜೆಯ ಕ್ಷಣಗಳು ವಿಶೇಷ ಖುಷಿ ಕೊಟ್ಟಿತು..
ಮಗಳು ಮಾಡಿದ ಮೊಮೋ ತಿಂಡಿಯೂ, ಮಡದಿ ಮಾಡಿದ ಹಾಲುಬಾಯಿ ಸ್ವೀಟು ಅತಿಥಿಗಳಿಗೆ ಇಷ್ಟವಾಗಿದ್ದು ಆ ಗಳಿಗೆಯನ್ನು ಇನ್ನಷ್ಟು ಸಿಹಿಯಾಗಿಸಿತ್ತು.. ಅತಿಥಿಗಳನ್ನು ಬೀಳ್ಕೊಟ್ಟು ಹರಟೆಯೊಡನೆ ಊಟ ಮಾಡುವ ಹೊತ್ತಿಗೆ ಕರೆಗಂಟೆ ಕೂಗಿತ್ತು.. ಈ ರಾತ್ರಿಯಲ್ಲಿ ಯಾರಿದ್ದಾರು ಎಂದು ನೋಡಿದರೆ ಮುಂಗರವಳ್ಳಿಯ ಸತೀಶ್ ಮಗನ ಮದುವೆಗೆ ಕರೆಯಲು ಬಂದಿದ್ದರು.. ಬಾಗೇಪಲ್ಲಿಯ ವಧು. ದೂರದ ಊರಿನ ಸಂಬಂಧ ಎಂದು ಬಾಯ್ತೆರೆಯುತ್ತಿದ್ದಂತೆ, ಒಂದೇ ಕಂಪನಿಯ ಒಡನಾಡಿಗಳು.. ಅವರು ಪರಸ್ಪರ ಒಪ್ಪಿಕೊಂಡು ಜೀವನಪೂರ್ತಿ ಒಂದಾಗಿರಲು ನಿರ್ಧರಿಸಿದ್ದಾರೆ.. ನಾವು ಹಿರಿಯರು ಹರಸಿ ಹಾರೈಸುವುದಷ್ಟೇ ಕೆಲಸ ಎಂದರು.. ಆಗಲಿ ಮಕ್ಕಳು ಒಳ್ಳೆಯದಾಗಿ ಬದುಕಿ ಬಾಳಿದರೆ ಅದಕ್ಕಿಂತ ಸಂತೋಷ ಬೇರೇನಿದೆ ಎಂದು ಮಾತಾಡಿದ್ದಾಯಿತು.. ಮಡದಿಯ ಹಾಲುಬಾಯಿ ಸ್ವೀಟು ಅವರಿಗೂ ಇಷ್ಟವಾಯಿತು.. ರೆಸಿಪಿ ಹೇಳಿದೆವು.. ಹಾಲುಬಾಯಿಯಂತಹ ದೇಸೀ ಸ್ವೀಟು ಅವರ ಮಗನ ಮದುವೆಯಲ್ಲಿ ಒಂದು ಮೆನು ಆದರೂ ಅಚ್ಚರಿ ಇಲ್ಲ..
ಮಲಗುವ ಮುನ್ನ ಫೋನಿಗೆ ಬಂದ ಮೆಸೇಜು, ವಾಟ್ಸಾಪ್ಪು, ಫೇಸ್ ಬುಕ್ಕು ಎಂತೆಲ್ಲ ಕಣ್ಣು ಹಾಯಿಸಿದೆ.. ಎಲ್ಲೆಲ್ಲೂ ಮುಂಬರುವ ಚುನಾವಣೆಯದ್ದೇ ಸುದ್ದಿ.. ಪರಸ್ಪರರಲ್ಲಿ ಕೆಸರು ಎರಚಾಟ.. ಆತ್ಮೀಯ ಮಿತ್ರರು ಅನ್ನಿಸಿಕೊಂಡವರು ಬಡಿದಾಡಿ ಕೊಳ್ಳುತ್ತಿದ್ದರು… ಕೆಲವರು ಬೌದ್ಧಿಕವಾಗಿ ಬತ್ತಲಾಗುತ್ತಿದ್ದರು.. ಇವೆಲ್ಲದರಿಂದ ನಾನಂತೂ ಗಾವುದ ದೂರ. ಎಷ್ಟು ಬೇಕೋ ಅಷ್ಟು.. ಏನೇನೋ ವಿಷಯದಲ್ಲಿ ಸ್ನೇಹ ವಿಶ್ವಾಸಗಳು ಹಾಳಾಗಬಾರದು ಎನ್ನುವುದು ನನ್ನ ಪಾಲಿಸಿ..
ಈ ಬದುಕೇ ನಮಗೆ ದೊರೆತ ಒಂದು ಅಪೂರ್ವ ಅವಕಾಶ.. ಸಮಯ ಸಂದರ್ಭ ಕೂಡ ಅಮೂಲ್ಯ. ಇದನ್ನು ಸದುಪಯೋಗ ಮಾಡಿಕೊಳ್ಳದೇ ಹೋದರೆ ಅದಕ್ಕಿಂತ ತಪ್ಪು ಕೆಲಸ ಬೇರೊಂದಿಲ್ಲ…
- ನಾಗೇಂದ್ರ ಸಾಗರ್