‘ಸುನೀತಗಳು’ ಕೃತಿ ಪರಿಚಯ

ಸಾಹಿತಿ ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲ ಎಂಬ ಗ್ರಾಮದವರು. ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಅವರು “ಸಾಧಿಸ ಬೇಕಾದುದು ಬಹಳಷ್ಟಿದೆ ಎಂಬ ಎಚ್ಚರದಿಂದ ನಿವೃತ್ತಿ ಹೊಂದಿಲ್ಲ.” ಎನ್ನುತ್ತಲೇ ತಮ್ಮ ಕೊನೆಯವರೆಗೂ ಅಕ್ಷರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಮಹಾನುಭಾವರು. ವಿಷ್ಣು ನಾಯ್ಕ ಅವರ ‘ಸುನೀತಗಳು’ ಅವರ ಕೃತಿ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಕೃತಿ : ಸುನೀತಗಳು
ಲೇಖಕರು: ವಿಷ್ಣು ನಾಯ್ಕ
ಪರಿಮಳ ಪ್ರಕಾಶನ ಅಂಬಾರ ಕೊಡ್ಲ 
ಮುದ್ರಣದ ವರ್ಷ: ೨೦೨೧
ಪುಟಗಳು: ೧೬೪
ಬೆಲೆ: ರೂ ೭೯ 

ಇದು ಅವರ ‘ಸುನೀತಗಳು’ ಅಂದರೆ ಅಷ್ಟ ಷಟ್ಪದಿಗಳ ಕವಿತೆಗಳ ಸಂಗ್ರಹ. ತಮಗೆ ಇಷ್ಟವಾದ ವ್ಯಕ್ತಿಗಳ ಬಗ್ಗೆ ಕೂಡ ವ್ಯಕ್ತಿಗತ ಸುನೀತಗಳು ಇಲ್ಲಿವೆ. ಪ್ರಾಸಗಳ ಬಗ್ಗೆ ಅಷ್ಟೇನೂ ಚಿಂತಿಸದೇ, ಮಟ್ಟು ಹಾಳಾಗದಂತೆ ವೈವಿಧ್ಯಮಯ ಪದ್ಯಗಳನ್ನು ಬರೆದಿರುವುದಾಗಿ ಅವರಿಲ್ಲಿ ಹೇಳಿದ್ದಾರೆ. ಈಗ ಕೆಲವು ಸುನೀತಗಳು ನಿಮ್ಮ ಮುಂದೆ….

ಕಣವಿ ಕಾವ್ಯ

ಆ ದಡಕೂ ಈ ದಡಕೂ ಬುದ್ಧಿ ಭಾವವನಪ್ಪಿ
ಭಾವ ಬುದ್ಧಿಯನೊಪ್ಪಿ, ಪ್ರತಿಮಾ ವಿನ್ಯಾಸದೊಳು
ಆಕಾಶವೇ ಬುಟ್ಟಿ! ಮೆರವಣಿಗೆ ದಾರಿಯಲಿ ಕೆಂಪಿ-
ರುವೆ ಸಾಲು, ತುರಿಸಿ ಕೊಳ್ಳಲೇ ಬೇಕು ತಲೆಗೆ
ಕಿರಿ ಕಿರಿಯಾಗಿ, ಹಸಿದುಂಬ ರಸಿಕರಿಗೊ ನೊರೆಹಾಲ
ಕೆಚ್ಚಲುಣಿಸಿದ ರೀತಿಯೇ ಕಣವಿ ಕಾವ್ಯದ ಕೀರ್ತಿ.

ಹೀಗೆ ಕವಿ ಚನ್ನವೀರಕಣವಿಯವರ ಕಾವ್ಯದ ಬಗ್ಗೆ ಬಣ್ಣಿಸಿದ್ದಾರೆ.

* ಬೇಂದ್ರೆಯವರ ನೆನಪಿನ ಬಗ್ಗೆ

ಜಾನಪದ ಸಿರಿಗಂಧ ಅರೆದು ಪರಿಮಳ ಪ್ರೀತಿ ಪುಚ್ಚ
ಗಳಿಗೆಲ್ಲ ಹಚ್ಚುತ ಹಾರಿಬಿಟ್ಟನು ಮೇಲೆ ಪಾರಿವಾಳದ
ಹಿಂಡ, ಕಾರ್ಪಣ್ಯಗಳ ಕಾಲದಲ್ಲೂ, ‘ಹಾಡನಷ್ಟೇ ಹೆಕ್ಕಿ
ಕೊಳಿ’ ಎನುತ ಬೆಂದೀಜೀವ, ‘ಪಾಡ’ ನೆಲ್ಲ ಒಳಗಿಟ್ಟು
ಕಾದಿತ್ತು ಕರಗಿದೆದೆ ಸವಿಗಾಗಿ! ಬಣ್ಣ ಬಣ್ಣದೀ ಅಣ್ಣನ
ನರನಾಡಿಗಳೂ ತಂತಿ, ಶ್ರಾವಣವು ಕರೆದಾಗ, ಒಳ
ಕರುಳು ಮಿಡಿದಾಗ ಹಾಡಿಯೇ ಹಾಡಿದನು, ಆಹಾ!
ಗಾರುಡಿಗ, ತನ್ನ ಮೋಡಿಗೆ ತಾನೇ ಉನ್ಮತ್ತನೊಲು ಬೀಗಿ! .

*ಅ.ನ.ಕೃ ನೆನೆದು ಬರೆದಿದ್ದು ಹೀಗೆ

ನೀನು ಬಂದಿದ್ದೆ ನನಗೆಂದೇ ಬಂದಂತಂದು
ರಣಹಲಗೆ ಜಯಘೋಷ ಹೊಟ್ಟೆ ತುಂಬಾ
ಕಪ್ಪು ಕೋಟೊಂದಿತ್ತು- ತೋಳು ಇರಲಿಲ್ಲದಕೆ
ನಾನೇ ತೋಳಾಗಲೇ ಅಂದು ಕೊಂಡಿದ್ದೆನಾ
ನೀನು ಮಾತಾಡಿದ್ದೆ ನಾಡಮ್ಮನೇ ಆಗಿ
ಅಳವಿತ್ತು ತಿಳಿವಿತ್ತು ದುಗುಡವಿತ್ತಿನ್ನೂ.

* ಕಾರಂತರ ಕುರಿತು…

ಈ ಮನುಷ್ಯನ ಹಿಡಿವ ಹವ್ಯಾಸಿ ಹಟದಿಂದೆ
ಕಲೆ- ಶಿಕ್ಷಣ, ಗುಡಿ-ಕೈಗಾರಿಕೆ, ಸರಿಗಮಪದ
ಸಾಹಿತ್ಯಕೆ, ಕೃಷಿ- ವಿಜ್ಞಾನಕೆ, ಗಿಡ ಮೂಲಿಕೆಗೂ
ಬಲ್ಲಾಳರೇನಲ್ಲ ಎಂತೆಲ್ಲ ಬಹುಮಂದಿ ಬಳಗವೇ
ಮರಳಿ ಯತ್ನವ ಮಾಡಿ ಅರೆದುಂಡು ಮನಶಾಸ್ತ್ರ
ಹಿಡಕೊಂಡು ಮಸೆಗಲ್ಲ ತತ್ವ ಜನರಿತ್ಯಾದಿ
ಬೀಸಿದರೆ ಬಾಹುಗಳ- ಹೊರ ನಿಂತು ನಗುತ್ತಿದ್ದ.
ಪರಿಸರವು ಕೆಡದಂತೆ, ಮಳೆ ತೊಳೆದ ನೆಲದಂತೆ!



*ಸನದಿ ನಗುವಿನ ಬಗ್ಗೆ…
.

ನಗುತ್ತಾನಿವನು ಚೌಕಾಶಿ ಮಾಡದೆ ಬಾಯ್ತುಂಬ ಬೆಳದಿಂಗಳು.
ತೊಳೆದಿಟ್ಟದೆ ಬಟ್ಟಲಿನೊಳಗಿದೆ ನಳನಳಿಸುವ
ನೆಲಸಂಪಿಗೆ
ಬರಿದೇ ಬಿಳಿಹಲ್ಲುಗಳೇ ಅಲ್ಲವೋ ನಕ್ಕಾಗ ಕಾಣುವುದು
ಬಗೆ ಬೆಳಗುವ- ಮೊಗದಕ್ಕರೆ ಸವಿ ಮುತ್ತಿನ ಸಿದ್ಧಿಯ ಸಾಲು.
ಮುಗಿಯದ ಹಗಲಿದೆ ಈಗ ನಮಗೆ ನಡೆನಡೆದಷ್ಟೂ ಹಾದಿ
ಮಾಗಿ ಬಾಗಿದ ಮಾನಸೊಂದರ ಹಿತಕರೆ ಹೆಸರಿದಕೆ
‘ಸನದಿ’

ಹೀಗೆ ಹಲವು ವ್ಯಕ್ತಿ ಗೀತಚಿತ್ರಗಳು ಇಲ್ಲಿವೆ. ಅ.ನ.ಕೃ ರವರ ತೋಳಿಲ್ಲದ ಕೋಟು, ಸನದಿಯವರ ನಗು…ಹೀಗೆ ಎಲ್ಲಾ ಸೂಕ್ಷ್ಮಗಳೂ ಇಲ್ಲಿ ಗಮನೀಯ ಅಂಶವಾಗಿ ಕಾಣುತ್ತದೆ. ಹಾಗಾಗಿ ಸರಳವಾಗಿ ಅರ್ಥವಾಗುವ ಇವುಗಳ ಭಾವಾರ್ಥವನ್ನು ನಾನಿಲ್ಲಿ ಬರೆಯುವ ಗೋಜಿಗೆ ಹೋಗಿಲ್ಲ. ಕವನಗಳ ಕುರಿತು ಆಸಕ್ತಿ ಯುಳ್ಳವರು ಇಂತಹ ಹೊಸ ಪ್ರಯತ್ನ ಮಾಡಬಹುದು. ಆದರೆ ಈ ಕೃತಿಯಲ್ಲಿ ರುವ ೪೯ ಸುನೀತಗಳು ಕೂಡ ನಮಗೆ ಓದುವಾಗ ಹಿತವೆನಿಸುತ್ತಾ….ಮೇರು ವ್ಯಕ್ತಿಗಳ ಪರಿಚಯ ಮಾಡಿಸುತ್ತವೆಂಬುದು ನಿಸ್ಸಂಶಯ.

ಓದಿ ನೋಡಿ….

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW