ಲೇಖಕಿ ‘ಶಶಿಕಲಾ ಹೆಗಡೆ’ ಅವರ ‘ಸೂರಿ ಪರ್ವ’ ಪುಸ್ತಕದ ಕುರಿತು ಲೇಖಕ ಹಾಗೂ ವಿಮರ್ಶಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಒಂದು ಲೇಖನವನ್ನು ತಪ್ಪದೆ ಓದಿ …
ಪುಸ್ತಕ : ಸೂರಿ ಪರ್ವ
ಲೇಖಕರು : ಶಶಿಕಲಾ ಹೆಗಡೆ
ಶಶಿಕಲಾ ಹೆಗಡೆ: ಕನ್ನಡದ ಮೊದಲ ಸಾಮಾಜಿಕ ನಾಟಕದ ಕರ್ತೃವಾದ ಸೂರಿ ವೆಂಕಟರಮಣ ಶಾಸ್ತ್ರಿ ಕರ್ಕಿಯವರ ಅನ್ಯಾನ್ಯ ಮುಖಗಳ ಅನಾವರಣವನ್ನು ಈ ಕೃತಿಯಲ್ಲಿ ಲೇಖಕಿ ಮಾಡಿದ್ದಾರೆ. ತಮಗೆ ದೊರೆತ ಆಕರಗಳನ್ನು ಆಧರಿಸಿ. ಅವುಗಳನ್ನು ಐದು ನೆಲೆಗಳಲ್ಲಿ ಗುರುತಿಸಬಹುದು.
೧ . ವೈಯಕ್ತಿಕ: ಶಾಸ್ತ್ರಿಗಳ ವೈಯಕ್ತಿಕ ಜೀವನದ ವಿವರಗಳನ್ನು ಮೊದಲ ಭಾಗದಲ್ಲಿ ನೀಡಲಾಗಿದೆ. ಅದರ ಪ್ರಕಾರ ಅವರು ಉತ್ತರ ಕನ್ನಡದ ಕರ್ಕಿ ಎಂಬ ಚಿಕ್ಕ ಹಳ್ಳಿಯಲ್ಲಿ ೧೮೫೨ ರಲ್ಲಿ ಜನಿಸಿದರು. ವೈದಿಕ ಮನೆತನದ ಅವರು ಸಹಜವಾಗಿ ಸಂಸ್ಕೃತ ಅಧ್ಯಯನ ಕೈಗೊಂಡರು.ಅದರ ಪರಿಣಾಮವಾಗಿ ರಾಮಚಂದ್ರಾಪುರ ಮಠದ ಮೊಕ್ತೇಸರರಾಗಿ ನೇಮಕಗೊಂಡರು. ಅಲ್ಲಿನ ಅವ್ಯವಹಾರವನ್ನು ಸಹಿಸಲಾರದೆ ಅದನ್ನು ತ್ಯಜಿಸಿ, ಮೈಸೂರಿನಲ್ಲಿ ಫೌಜುದಾರರಾಗಿ ನೇಮಕಗೊಂಡರು. ಅಲ್ಲಿ ಸಮರ್ಥ ವಾಗಿ ಅದನ್ನು ಬಿಟ್ಟು ಮುಂಬಯಿಗೆ ತೆರಳಿ ಅಲ್ಲಿ ವಿವಿಧ ಬಗೆಯ ಕಟ್ಟೋಣದಲ್ಲಿ ತೊಡಗಿಕೊಂಡರು.
೨ . ಮುಂಬಯಿ ಕಾರ್ಯರಂಗದಲ್ಲಿ ಮುಖ್ಯವಾಗಿ ನಾಲ್ಕು ಕಾರ್ಯಗಳನ್ನು ಕೈಗೊಂಡರು.
೩. ಪತ್ರಿಕೆಯ ಪ್ರಕಟಣೆ : ಹವ್ಯಕ ಸುಬೋಧ , ಹವ್ಯಕ ಹಿತೈಷಿ. ಮೊದಲ ಪತ್ರಿಕೆ ೧೮೮೫ ರಲ್ಲಿ ಪ್ರಕಟಣೆ .ಎರಡು : ೧೮೮೭ ರಲ್ಲಿ ಮಕ್ಕಳಿಗೆ. ತನ್ನ ಕ್ರಾಂತಿಕಾರಿ ಮತ್ತು ಪ್ರಾಮಾಣಿಕ ನಿಲುವನ್ನು ನಿರ್ಭಯವಾಗಿ ವ್ಯಕ್ತಪಡಿಸಿದ ಪರಿಣಾಮ ಬ್ರಿಟಿಷ್ ರ ಕೆಂಗಣ್ಣಿಗೆ ಗುರಿಯಾಗಿ ಅವರು ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡರು. ಮೊದಲ ಬಾರಿಗೆ ವ್ಯಂಗ್ಯ ಚಿತ್ರಗಳನ್ನು ಅಚ್ಚುಹಾಕಿದ ಶ್ರೇಯಸ್ಸು ಈ ಪತ್ರಿಕೆಗೆ ಸಲ್ಲಬೇಕು ಎಂದು ಲೇಖಕಿ ಸರಿಯಾಗಿ ಅದರ ಮಹತ್ವವನ್ನು ಗುರುತಿಸಿದ್ದಾರೆ. ಅದರ ಕೆಲವನ್ನು ಪುಸ್ತಕದಲ್ಲಿ ಸೇರಿಸಿರುವುದು ಅಧಿಕೃತತೆಗೆ ಕಾರಣವಾಗಿದೆ. ಎರಡನೇ ಪತ್ರಿಕೆ ಮಕ್ಕಳಿಗೆ ಆಕರ್ಷಕ ವಾಗಿ ಹಿತೋಪದೇಶವನ್ನು ಸಾರುತ್ತದೆ. ಅದರಲ್ಲಿ ಕೊಟ್ಟ ಒಂದು ಹಿಂದು ಮುಸ್ಲಿಮ್ ಕುರಿತ ಉದಾಹರಣೆ ಅನೌಚಿತ್ಯದಿಂದ ಕೂಡಿದೆ. ಮಕ್ಕಳಿಗೆ ಹಿತೋಪದೇಶ ಹೇಳುವ ನೆಪದಲ್ಲಿ ಅವರ ನಡುವೆ ಇರುವ ಗುಣಾತ್ಮಕ ಅಂತರವನ್ನು ನಿರ್ದೇಶಿಸುವುದು ಸರಿಯಲ್ಲ.
೪. ಗ್ರಂಥ ಪ್ರಕಟಣೆ: ಅವರ ಪ್ರಸಿದ್ಧವಾದ ಇಗ್ಗಪ್ಪಹೆಗ್ಗಡೆಯ ಪ್ರಹಸನ ಅಥವಾ ಕನ್ಯಾವಿಕ್ರಯ ನಾಟಕವನ್ನು ವಿವರವಾಗಿ ಪರಿಚಯಿಸಿದ್ದಾರೆ. ಹವ್ಯಕ ಹಿತೇಚ್ಛು ಎನ್ನುವ ಹೆಸರಿನಿಂದ ಬರೆಯಲ್ಪಟ್ಟ ಈ ಕೃತಿ ಅವರದೆ ಎಂದು ನಂತರ ಪತ್ತೆ ಮಾಡಲಾಯಿತು. ಹೆಸರನ್ನು ಇಟ್ಟು ಕೊಳ್ಳಲು ವಿವಿಧ ಕಾರಣಗಳನ್ನು ನೀಡಲಾಗಿದೆ. ನನಗೆ ಅನಿಸಿವ ಮಟ್ಟಿಗೆ ಯಾವುದೇ ಸಮುದಾಯದ ಹಿತವನ್ನು ಸಾಧಿಸಲು ಅದರ ಆತ್ಮವಿಮರ್ಶೆ ಆವಶ್ಯಕ. ಅದರಂತೆ ತಮ್ಮ ಸಮುದಾಯಕ್ಕೆ ಹತ್ತಿದ ಗೆದ್ದಲನ್ನು ತೊಡೆದುಹಾಕಲು, ಆ ಸಮುದಾಯದ ವ್ಯಕ್ತಿಯೆ ಮುಂದೆ ಬರಬೇಕು. ಶಾಸ್ತ್ರಿಗಳು ತಮ್ಮ ಸಮುದಾಯದ ಹಿತೈಷಿಗಳಾಗಿ ಅದನ್ನು ಕುರಿತು ನಿರ್ಭಯವಾಗಿ ಬರೆದಿರುವುದು ಆ ಕಾಲದ ಮಹತ್ವದ ಸಾಂಸ್ಕೃತಿಕ ಘಟನೆ. ಅದನ್ನು ಕುರಿತು ಲೇಖಕಿ ಉಲ್ಲೇಖ ಮಾಡಿದ ಶ್ರೀ ಪಾದಭಟ್ಟರ ಗ್ರಹಿಕೆ ಮಹತ್ವದ್ದು. ಅವರು ಅದರಲ್ಲಿ ಬರುವ ವಿವಿಧ ಸಂಘರ್ಷಗಳ ಕುರಿತು ಗಮನಸೆಳೆದಿದ್ದಾರೆ. ಇದಲ್ಲದೆ ಅವರು ಅನಾರ್ಯವಿವರ , ದಕ್ಷಿಣ ಭಾರತ ಯಾತ್ರೆ ( ಮೊದಲ ಪ್ರವಾಸ ಕಥನ) ಗಳನ್ನು ಪ್ರಕಟಿಸಿದರು.
(ಶಶಿಕಲಾ ಹೆಗಡೆ ಅವರ ಸೂರಿ ಪರ್ವ ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ)
೫. ಗ್ರಂಥ ಸಂಪಾದನೆಗೆ ಅವರು ಕೊಟ್ಟ ಕೊಡುಗೆ ಯಲ್ಲಿ ಪರಮದೇವನ ತುರಂಗಭಾರತ, ಶಂಕರ ಸಂಹಿತೆ ಇತ್ಯಾದಿ ಪುಸ್ತಕಗಳನ್ನು ಅಚ್ಚು ಹಾಕಿಸಿದ ಶ್ರೇಯಸ್ಸು ಅವರದು.
ಅವರ ಕುರಿತು ಬರೆದ ಶಾಲಿನಿ ರಘುನಾಥ್, ಅಮಿತಾ ಭಾಗ್ವತ್( ಇಂಗ್ಲಿಷ್) ಲೇಖಕರ ಲೇಖನಗಳನ್ನು ಕೊಡಲಾಗಿದೆ. ಇವನ್ನು ಅನುಬಂಧದಲ್ಲಿ ಕೊಡಬಹುದಾಗಿತ್ತು. ಕೊನೆಯಲ್ಲಿ ಹಿತೋಪದೇಶದ ವಚನಗಳನ್ನು, ಮತ್ತು ನಾಟಕವನ್ನು ಕೊಡಲಾಗಿದೆ. ಇದರಿಂದಾಗಿ ಕರ್ಕಿಯವರ ಕುರಿತು ತಕ್ಕಮಟ್ಟಿನ ಮಾಹಿತಿಯನ್ನು ಒಟ್ಟಿಗೆ ಒದಗಿಸಿದ ಶ್ರೇಯಸ್ಸು ಲೇಖಕಿಯದು. ಕೊನೆಗೆ ಕೊಟ್ಟಿರುವ ಆಕರಗಳಪಟ್ಟಿ ಅವರ ವಿಸ್ತೃತ ಅಧ್ಯಯನಕ್ಕೆ ಸಾಕ್ಷಿ.
( ಸೂರಿ ಪರ್ವ ಲೇಖಕಿ ಶಶಿಕಲಾ ಹೆಗಡೆ)
ಕಳೆದ ವಾರ ನಡೆದ ಅವರ ಮಹಿಳಾ ಸಮಾವೇಶದಲ್ಲಿ ನನ್ನ ಸಂಗಾತಿ ಗಿರಿಜಾಶಾಸ್ತ್ರಿಯವರ ವಿಶೇಷ ಉಪನ್ಯಾಸ ಏರ್ಪಡಿಸಿ ಗೌರವಿಸಿದರು. ಅಲ್ಲದೇ ಈ ಪುಸ್ತಕವನ್ನು ಕೊಟ್ಟು ಸೌಜನ್ಯ ಮೆರೆದ ಲೇಖಕಿಗೆ ಅಭಿನಂದನ ಕೃತಜ್ಞತೆ. ಮಾರ್ಗದರ್ಶನ ಮಾಡಿ ಪ್ರಕಟಿಸಿದ ಮು.ವಿ.ವಿ.ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಣೇಶ ಉಪಾಧ್ಯ ಕೂಡ ಅಭಿನಂದನಾರ್ಹರು.
ಕೆಲವು ಮುದ್ರಣ ದೋಷಗಳು ಮತ್ತು ತಪ್ಪು ಪದಪ್ರಯೋಗ ಉಳಿದು ಬಂದಿದೆ .ಉದಾಹರಣೆಗೆ ಬುದ್ದಿಕೋನ / ದೃಷ್ಟಿಕೋನದ ಬದಲಾಗಿ. ಇವು ಗೌಣ. ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ- ಎನ್ನುವ ಬಸವ ವಚನದಂತೆ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿಗಳು ಮೊದಲು ನಾಟಕದ ಮೂಲಕ ತಮ್ಮ ಸಮುದಾಯದ ದೋಷಗಳನ್ನು, ತಿದ್ದಲು ಪ್ರಯತ್ನ ಮಾಡಿದರು ಅದರಿಂದಾಗಿ ಅವರ ಹವ್ಯಕ ಹಿತೇಚ್ಛುಗಳಾದರು, ನಂತರ ತಮ್ಮ ಪತ್ರಿಕೆ ಯ ಮೂಲಕ ಲೋಕದ ಡೊಂಕು ತಿದ್ದಲು ಪ್ರಯತ್ನ ಮಾಡಿದರು. ಆ ಮೂಲಕ ಲೋಕದ ಹಿತೈಷಿಗಳಾದ ಮಹಾನುಭಾವರು.ಇತರರಿಗೆ ಮಾದರಿಯಾದರು.
ತಮಗಿಂತ ಮೊದಲೇ ಪ್ರಹಸನ ರಚನೆ ಮಾಡಿದ ಕರ್ಕಿ ವೆಂಕಟರಮಣಶಾಸ್ತ್ರಿಗಳ ಪರಿಚಯವಿಲ್ಲದ ಕೈಲಾಸಂ ತಮ್ಮನ್ನು ತಾವು ಪ್ರಹಸನ ಪಿತಾಮಹ ಎಂದು ಕರೆದುಕೊಂಡು, ಕರ್ಕಿಯವರು ಪ್ರಾರಂಭಿಸಿದ ಸ್ವಾತ್ಮ ವಿಮರ್ಶೆಯ ಪ್ರಹಸನ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದರು..
- ರಘುನಾಥ್ ಕೃಷ್ಣಮಾಚಾರ್