ವರ್ತಮಾನದ ತಲ್ಲಣ, ಸ್ತ್ರೀ ಸಂವೇದನೆಯ ಪ್ರತಿಧ್ವನಿ (ಭಾಗ ೬)

ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಮಹಿಳೆಯರು ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ರೇಶ್ಮಾ ಗುಳೇದಗುಡ್ಡಕರ್ ಅವರು ತಮ್ಮ ಲೇಖನಿಯಲ್ಲಿ ಹೆಣ್ಣಿನ ಧ್ವನಿಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

  • ಧ್ವನಿ : ರಮ್ಯ. ಎಸ್, ಶಿಕ್ಷಕರು, ಲೇಖಕರು, ಮಂಡ್ಯ

ಸಮಾನತೆ ಎನ್ನುವುದು ಎಲ್ಲಿದೆ??. ಇದೊಂದು ಉತ್ತರ ಇಲ್ಲದ/ ಅಥವಾ ಹುಡುಕಿದರು ಉತ್ತರ ದೊರಕದ ಯಕ್ಷ ಪ್ರಶ್ನೆ.

ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಯ ಭಾಷಣ ಕೇಳುವುದಕ್ಕೆ ಮಾತ್ರ ಚೆನ್ನಾಗಿರುತ್ತದೆ. ಆದರೆ ಅದನ್ನು ಆಚರಣೆಗೆ ತಂದವರ ಸಂಖ್ಯೆ ತುಂಬಾ ಕಡಿಮೆ. ಎಲ್ಲಾ ಕಡೆ ಹೆಣ್ಣು ಗಂಡಿಗೆ ಸಮಾನಳು ಎನ್ನುವ ಮಾತು ಕೇಳುತ್ತೇವೆಯೋ ಹೊರತು, ತಮ್ಮ ಸುತ್ತಲೂ ಇರುವ ಹೆಣ್ಣುಮಕ್ಕಳನ್ನು ತಮ್ಮಷ್ಟೇ ಸಮಾನವಾಗಿ ನೋಡುತ್ತಾರೆಯೇ ಪುರುಷರು?
ಖಂಡಿತ ಇಲ್ಲ.

ಓದು, ವೃತ್ತಿ, ಗೃಹಕೃತ್ಯ, ಮಕ್ಕಳ ಪಾಲನೆ- ಪೋಷಣೆ, ಆರ್ಥಿಕ ಸ್ವಾವಲಂಬನೆ, ಹಣಕಾಸು ವ್ಯವಹಾರಗಳ ಪಾರುಪತ್ಯತೆ ಯಾವುದರಲ್ಲೂ ಹೆಣ್ಣನ್ನು ಮುಂದುವರೆಯಲು ಬಿಟ್ಟಿಲ್ಲ ನಮ್ಮ ಪುರುಷ ಪ್ರಧಾನ ಸಮಾಜ. ಹೆಣ್ಣಿಗಿಂತ ಗಂಡು ವಯಸ್ಸಿನಲ್ಲಿ, ಓದಿನಲ್ಲಿ, ವೃತ್ತಿಯಲ್ಲಿ, ಸಂಪಾದನೆಯಲ್ಲಿ ಮುಂದಿರಬೇಕು ಎನ್ನುವುದು ಅಲಿಖಿತ ನಿಯಮವಾಗಿದೆ.

ಹುಟ್ಟಿದ ಮನೆ ಬಿಟ್ಟು ಬೇರೆ ಮನೆ ಸೇರುವ ಮಗಳನ್ನು ಹೆಚ್ಚು ಓದಿಸಲು ಖರ್ಚು ಮಾಡಿದರೆ, ಅವಳಿಂದ ತಮಗೆ ಬರುವ ಆದಾಯ ಏನಿದೆ ಎಂದು ಯೋಚಿಸುತ್ತಾ, ಮಗನನ್ನು ವಂಶೋದ್ದಾರಕ ಎಂದು ತಲೆ ಮೇಲೆ ಹೊತ್ತು ಮೆರೆಯುವ ಪೋಷಕರ ಮುಂದೆ ಎಲ್ಲಿಂದ ಬರಬೇಕು ಸಮಾನತೆ? ಹೆತ್ತ ತಂದೆ-ತಾಯಿಯರೆ ಮಗಳನ್ನು ಮಗನ ಸಮವಾಗಿ ನೋಡುವುದಕ್ಕೆ ಮುಂದಾಗದೆ ಇರುವಾಗ, ಸಮಾಜದಲ್ಲಿರುವ ಕೋಟ್ಯಾಂತರ ಕುಟುಂಬಗಳ ಮನಸ್ಥಿತಿಯನ್ನು ಕಾನೂನು, ಕಟ್ಟಲೆಗಳ ಮೂಲಕ ಸರಿ ಮಾಡುವುದು ಹೇಗೆ ಸದ್ಯ?
ಕೆಲವೊಂದು ವಿಷಯಗಳಲ್ಲಿ ಸರಿ ಅನ್ನಿಸಿದ್ದು, ಮತ್ಯಾವುದೋ ವಿಷಯದಲ್ಲಿ ತಪ್ಪಾಗಲು ಸಾಧ್ಯವಿದೆ. ಹೀಗಿರುವ ಸಮಾನತೆ ಬೇಕು ಎನ್ನುವುದಕ್ಕಿಂತ ಸಾಮರಸ್ಯದಿಂದ ಬಾಳುವ ರೀತಿಯನ್ನು ಪಾಲಿಸಬೇಕು. ಸಾಮರಸ್ಯವೇ ಸಮಾನತೆಯನ್ನು ಪ್ರತಿಪಾದಿಸುವ ಮುಖ್ಯ ಹೆಜ್ಜೆಯಾಗಿದೆ!!

ನಮ್ಮ ಕೈಯಲ್ಲಿರುವ ಐದು ಬೆರಳುಗಳೇ ಸಮವಾಗಿಲ್ಲ. ಆದರೂ ನಾವು ನಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತೇವೆ ಎಂದರೆ ಅದಕ್ಕೆ ಕಾರಣ ಅವುಗಳನ್ನು ಹಿಡಿದಿಟ್ಟಿರುವ ಮಾಂಸಖಂಡಗಳ ವಿಶೇಷತೆಯನ್ನು ಮೆಚ್ಚಲೇಬೇಕು. ಐದು ಬೆರಳುಗಳ ಮಾಂಸಖಂಡಗಳ ನಡುವಿನ ಸಾಮರಸ್ಯದ ನಡೆಯಿಂದಲೇ ನಾವು ಕೆಲಸ ಮಾಡುವುದು ಸಾಧ್ಯ.
ಭೂಮಿಯ ಮೇಲೆ ಸೃಷ್ಟಿಯಾದ ಎಲ್ಲಾ ಜೀವಗಳಿಗೆ ಅವರದೇ ಆದ ವೈಶಿಷ್ಟ್ಯವಿದೆ. ಕಣ್ಣಿಗೆ ಕಾಣಿಸದ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಗಾತ್ರ ಮತ್ತು ತೂಕದಲ್ಲಿ ಅತಿ ಹೆಚ್ಚು ಎನ್ನಿಸುವ ತಿಮಿಂಗಿಲದ ವರೆಗೆ ಎಲ್ಲಾ ಜೀವಿಗಳು ಅವರದೇ ಆದ ವಿಶೇಷತೆಗಳನ್ನು ಹೊಂದಿವೆ. ಭೂಮಿ ಹಸಿರಾಗಿ ವಿಶೇಷವಾಗಿ ಕಾಣಿಸಲು ಎಲ್ಲಾ ಜೀವಿಗಳು ಕೂಡ ಕಾರಣ. ಹೀಗಿರುವಾಗ ಲಿಂಗದ ಆಧಾರದ ಮೇಲೆ ಹೆಣ್ಣು ಗಂಡು ಸಮಾನರು ಅಥವಾ ಅಸಮಾನರು ಎನ್ನುವ ವಾದವೇ ತಪ್ಪು.

ಹೆಣ್ಣು- ಗಂಡು ಅವರವರ ಸ್ಥಾನದಲ್ಲಿ ನಮ್ಮದೇ ಮಹತ್ವ ಹೊಂದಿದ್ದೇವೆ. ನಮ್ಮನ್ನು ನಾವೇ ಬೇರೆಯ ಲಿಂಗದ ಹೋಲಿಕೆ ಮಾಡಿಕೊಂಡು ‘ಈ ವಿಷಯದಲ್ಲಿ ನಾವು ಸರಿಯಿಲ್ಲ, ಆ ವಿಷಯದಲ್ಲಿ ನಾವು ಅವರಿಗಿಂತ ಹೆಚ್ಚು ಸರಿಯಾಗಿದ್ದೇವೆ’ ಎಂದುಕೊಳ್ಳುವುದು ತಪ್ಪಲ್ಲವೇ?

ಲಿಂಗದ ಆಧಾರದಲ್ಲಿ ನಾವು ಮೇಲು, ಕೀಳು ಎಂದು ಹೋಲಿಸಿಕೊಳ್ಳುವುದನ್ನು ಬಿಡಬೇಕು. ಆಗಲೇ ನಿಜವಾದ ಸಾಮರಸ್ಯ ಮೂಡುವುದು. ಸಾಮರಸ್ಯ ಎನ್ನುವುದನ್ನು ಹೊರಗೆಲ್ಲೋ ಹುಡುಕಬೇಕಿಲ್ಲ. ಅದನ್ನು ಪ್ರತಿ ಕುಟುಂಬದೊಳಗೆ ಬೆಳೆಸಬೇಕು. ಮನೆಯ ಹಿರಿಯ ಜೀವಗಳು ಹೊಂದಣಿಕೆಯಿಂದ ನಡೆಯುವುದನ್ನು ಆರಂಭಿಸಿದರೆ ಅದನ್ನು ಮುಂದಿನ ಪೀಳಿಗೆ ಅನುಸರಿಸುತ್ತದೆ. ತಂದೆ-ತಾಯಿ ಇಬ್ಬರಲ್ಲಿ ಕಾಣುವ ಹೊಂದಾಣಿಕೆಯೇ ಮಕ್ಕಳಿಗೆ ಸಾಮರಸ್ಯದ ಜೀವನ ಪಾಠ ಕಲಿಸುವ ಮೊದಲ ಕಲಿಕೆಯಾಗುತ್ತದೆ.

ಮಗನನ್ನು ರಾತ್ರಿ ತಡವಾಗಿ ಮನೆಗೆ ಬಂದರು ಸುಮ್ಮನಿರುವ ಹಿರಿಯರು, ಮಗಳಿಗೆ ಮನೆ ಸೇರಲು ಸಮಯದ ನಿರ್ಬಂಧ ಹೇರುವುದು ಸರಿಯಲ್ಲ. ಇಬ್ಬರು ಸಮಯಕ್ಕೆ ಸರಿಯಾಗಿ ಮನೆ ಸೇರಿ, ಮನೆಯವರೊಂದಿಗೆ ಒಡನಾಡುವುದನ್ನು ಕಲಿಸಬೇಕು.

ಮಗಳು ಮನೆ ಕೆಲಸ ಮಾಡಲಿ, ಮಗ ಕಚೇರಿ ಕೆಲಸ ಮಾತ್ರ ನೋಡಲಿ ಎನ್ನುವ ಧೋರಣೆ ಬದಲಾಗಬೇಕು. ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ಇಬ್ಬರೂ ತಾಯಿಯ ಗೃಹಕೃತ್ಯಗಳಲ್ಲಿ ಸಮವಾಗಿ ಕೈ ಜೋಡಿಸುವುದರಿಂದ ಹಿಡಿದು, ತಂದೆಯ ಕೆಲಸಕಾರ್ಯದ ಒತ್ತಡದ ಬಗ್ಗೆಯೂ ತಿಳುವಳಿಕೆ ಹೊಂದಬೇಕು. ಆಗಲೇ ಅವರ ಭವಿಷ್ಯದ ಜೀವನದ ಬಗ್ಗೆ ಸ್ಪಷ್ಟವಾದ ಯೋಜನೆ ಮಾಡಿಕೊಳ್ಳಬಹುದು. ಪ್ರತಿಯೊಂದು ಮನೆಯಲ್ಲೂ ಇಂತಹ ಆಚರಣೆಗಳು ಶುರುವಾದರೆ, ಆಗ ಅಸಮಾನತೆಯ ಕೂಗು ಕೇಳಿಸುವುದೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.

********

  • ಧ್ವನಿ : ಚೈತ್ರ ಭಾಗವತ್, ಎಂ.ಎ. ಬಿ.ಎಡ್, ಚಿಕ್ಕನಾಯಕನಹಳ್ಳಿ.

ಸಂಪ್ರದಾಯ, ಸಂಸ್ಕೃತಿಯು ಉಳಿಯುವುದು ಹೆಣ್ಣೊಬ್ಬಳು, ಸೀರೆ, ಬಳೆ, ಕುಂಕುಮ, ಅರಿಶಿನ, ತಾಳಿ, ಕಾಲುಂಗುರು ತೊಟ್ಟಾಗ ಮಾತ್ರ, ಅದೆಲ್ಲವನ್ನೂ ಹೆಣ್ಣು ಪಾಲಿಸಲೇ ಬೇಕೆಂದು, ಹೆಣ್ಣು ಗಂಡು ಇಬ್ಬರೂ ಸಮಾನವಾಗಿ ವಾದ‌ ಮಾಡುತ್ತಾರೆ. ಇದೆಲ್ಲವನ್ನು ಹೆಣ್ಣು ತೊಡಬಾರದು ಎಂಬುದು ನನ್ನ ಮಾತಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಹೆಣ್ಣಿನ ಉಡುಗೆ ತೊಡುಗೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಲೇ ಇರುತ್ತವೆ. ಆ ಸಮಯದಲ್ಲಿ ನನ್ನಲ್ಲಿ ಹುಟ್ಟಿದ ಪ್ರಶ್ನೆಯೊಂದೆ, ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವ ಜವಬ್ಧಾರಿ ಹೆಣ್ಣಿಗಿರುವಷ್ಟೇ ಗಂಡಿಗೂ ಇದೆಯಲ್ಲವೇ?!

ಹೆಣ್ಣು, ಭಾರತೀಯ ಉಡುಪಿನ ಜೊತೆ ಜೊತೆಗೆ, ಅವಳಿಷ್ಟದ ಪಾಶ್ಚಾತ್ಯ ಉಡುಪುಗಳನ್ನು ತೊಟ್ಟಾಗಲೂ, ಸಮಾಜವಾಡುವ ಮಾತುಗಳಿಗೆ ತುತ್ತಾಗುತ್ತಾಳೆ. ಅವಳು ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂಬ ನಿರ್ಧಾರವನ್ನೂ ಸಮಾಜ‌ವೇ ಮಾಡಿಬಿಡುತ್ತದೆ. ಹಾಗೆಂದ ಮಾತ್ರಕ್ಕೆ ಪಾಶ್ಚಿಮಾತ್ಯ ಉಡುಪಿಗೆ ಬೆಂಬಲವಿದೆ ಎಂಬ ಅರ್ಥವಲ್ಲ. ನನ್ನ ಪ್ರಶ್ನೆ ಇರುವುದು, ಹುಡುಗ ತನ್ನಿಚ್ಚೆಯ ಬಟ್ಟೆಯನ್ನು ತೊಟ್ಟಾಗ ಅದೇ ಸಮಾಜ , ಅವನು ಹಾಕಿರುವುದು ಭಾರತೀಯ ಬಟ್ಟೆಯೋ! ಇಲ್ಲ ಪಾಶ್ಚಿಮಾತ್ಯ ಬಟ್ಡೆಯೊ ಎಂಬ ಚರ್ಚೆಯಾಗಲೀ, ಅವನು ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂಬ ನಿರ್ಧಾರವನ್ನಾಗಿ ಮಾಡಿದ್ದನ್ನು ನಾನು ನೋಡಿಯೇ ಇಲ್ಲ. ಈ ತಾರತಮ್ಯವೇಕೆ?

ಕೇಲವ ಐವತ್ತು ಅರವತ್ತು ವರ್ಷಗಳ ಹಿಂದೆ, ಶಿಕ್ಷಕನಾದವನು ಕಚ್ಚೆಪಂಜೆ , ಕರಿಕೋಟನ್ನು ಧರಿಸುತ್ತಿದ್ದರು. ಶಿಕ್ಷಕಿ ಸೀರೆಯನ್ನು ಧರಿಸುತ್ತದರು. ಅರವತ್ತು ವರ್ಷಗಳ, ನಂತರ ಕಾಲಕ್ಕೆ ತಕ್ಕಂತೆ ಶಿಕ್ಷಕನ‌ ಉಡುಪಿನಲ್ಲಿ ಬದಲಾವಣೆಯಾಗಿ, ಕಚ್ಚೆಪಂಜೆಯ ಜಾಗದಲ್ಲಿ ಪಾಶ್ಚಿಮಾತ್ಯ ಶೈಲಿಯ ಪ್ಯಾಂಟು , ಶರ್ಟು ಬಂದು ಕೂತಿವೆ. ಕಚ್ಚಿಪಂಜೆ , ಕರಿ ಕೋಟ್ ಹಾಕಿಕೊಂಡು ಶಾಲೆಗೆ ತೆರಳುವ ಸಂಪ್ರದಾಯ ಇಂದು ಉಳಿದಿಲ್ಲ. ಆದರೆ‌ ಅಂದೂ ಶಿಕ್ಷಕಿ ಸೀರೆಯನ್ನುಟ್ಟೇ ಶಾಲೆಗೆ ತೆರಳುತ್ತಿದ್ದಳು, ಇಂದೂ ಕೂಡ ಶಿಕ್ಷಕಿ ಸೀರೆಯನ್ನುಟ್ಟೇ ಪಾಠವನ್ನು ಹೇಳಿಕೊಡುತ್ತಿದ್ದಾರೆ.

ಸೀರೆ ನಮ್ಮ ಭಾರತೀಯ ಸಂಪ್ರದಾಯ ಹೇಗೊ, ಕಚ್ಚೆಪಂಜೆ ಕರಿಕೋಟು, ಕೂಡ ಭಾರತೀಯ ಸಂಪ್ರದಾಯ.‌! ಇದು ಏಕೆ ಪರಂಪರಾಗತವಾಗಿ ಉಳಿದುಕೊಂಡು ಬರಲಿಲ್ಲ. ಸಂಪ್ರದಾಯವನ್ನು ಕಾಪಾಡುವ ಜವಾಬ್ದಾರಿ ಬರೀ ಹೆಣ್ಣಿಗೆ ಏಕೆ ಮೂಟೆಯುರಿಯಂತೆ ಬೆನ್ನಿಗೆ ಬಿದ್ದಿದೆ. ಸಂಪ್ರದಾಯ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ಹೆಣ್ಣಿನ ಜೊತೆ ಜೊತೆಗೆ ಗಂಡೂ ಹೊರಬಹುದಲ್ಲವೇ. ಇದರಲ್ಲಿಯೂ ಹೆಣ್ಣಿಗೆ ಏರಿಕೆ ಏಕೆ? ಸಮಾನತೆ ಎಲ್ಲರಲ್ಲೂ ಎಲ್ಲಾ ವಿಷಯದಲ್ಲೂ ಇರಬೇಕಲ್ಲವಾ?.


  • ಬರಹ : ರೇಶ್ಮಾ ಗುಳೇದಗುಡ್ಡಕರ್
5 1 vote
Article Rating

Leave a Reply

2 Comments
Inline Feedbacks
View all comments
Ranjita

ಇಬ್ಬರು ಲೇಖಕಿಯರ ಅಭಿಪ್ರಾಯಗಳು ಸರಿಯಾಗಿದೆ, ಉತ್ತಮವಾಗಿ ಉದಾಹರಣೆಯೊಂದಿಗೆ ಬಂದ ಬರಹ ಒಳ್ಳೆಯ ನಿರೂಪಣೆಯನ್ನು ಕಂಡಿದೆ.
ಧನ್ಯವಾದಗಳು.

rashishrirashi

ಸಮಾನತೆ ಬಗ್ಗೆ ಹೇಳಿರುವ ಮಾತುಗಳು ಅನುಸರಣೀಯ. ಪ್ರತಿಯೊಬ್ಬ ತಾಯಿ ತಂದೆ ಪಾಲಿಸಿದರೆ ಮಕ್ಕಳ ಭವಿಷ್ಯ ಸುಂದರ ಆಗುವುದರಲ್ಲಿ ಅನುಮಾನವಿಲ್ಲ.

Home
News
Search
All Articles
Videos
About
2
0
Would love your thoughts, please comment.x
()
x
%d
Aakruti Kannada

FREE
VIEW