ಪ್ರೇಮದ ಸಂಕೇತದ ಮುಂದೆ ನಮ್ಮಿಬ್ಬರ ಪ್ರೇಮಕತೆ

ಪ್ರೀತಿಸಿ ಮದುವೆ ಆದ್ಮೇಲೆ ತಾಜ್ ಮಹಲ್ ನೋಡಲಿಲ್ಲ ಅಂದ್ರೆ ನಮ್ಮ ಪ್ರೇಮಕ್ಕೆ ಅವಮಾನ ಅಂದುಕೊಂಡು, ಆಗ್ರಾ ದತ್ತ ನಮ್ಮ ಪ್ರಯಾಣ ಸಾಗಿತು, ಪ್ರಯಾಣ ಸುಖಕರವಾಗಿತ್ತೋ…ದುಃಖಕರವಾಗಿತ್ತೋ …ತಪ್ಪದೆ ನನ್ನ ಒಂದು ಕತೆಯನ್ನು ಓದಿ, ಇದು ಪ್ರೇಮಿಗಳ ಕತೆ…

ನಮ್ಮ ಪದ್ದಣ್ಣ ನನ್ನ ಹೆಸರಲ್ಲಿ ತಾಜ್ ಮಹಲ್ ಕಟ್ಟೋಲ್ಲ ಅಂತ ಖಾತ್ರಿಯಂತೂ ಆಗಿತ್ತು. ಕೊನೆಪಕ್ಷ ಷಹ ಜಹಾನ್ ಮುಮ್ತಾಜ್ ಮೇಲಿನ ಪ್ರೀತಿಗಾಗಿ ಕಟ್ಟಿದ ತಾಜ್ ಮಹಲ್ ನ್ನಾದರೂ ನೋಡಿ ಸಮಾಧಾನ ಮಾಡಿಕೊಳ್ಳೋಣ ಅಂತ ನಿರ್ಧಾರ ಮಾಡಿದೆ. ಅಲ್ಲಿಗೆ ಒಬ್ಬಳೇ ಅಂತೂ ಹೋಗೋಕೆ ಆಗೋಲ್ಲ, ನಮ್ಮದು ಫುಲ್ ಪ್ಯಾಕೇಜ್ . ಆದ್ರೆ ಈ ಪ್ಯಾಕೇಜ್ ಹೊರಡಿಸಬೇಕು ಅಂದ್ರೆದೊಡ್ಡ ತಲೆನೋವು. ಪದ್ದಣ್ಣನಿಗೆ ಪೀಠಿಕೆ ಹಾಕಿ, ಸಾರಾಂಶ ಡೇ ಹೇಳೋಷ್ಟರಲ್ಲಿ ಸಾಕಾಗಿ ಹೋಗುತ್ತೆ. ಕೊನೆಗೆ ಬೇಡಾ ಅಂದ್ರೆ ಅನ್ನೋ ಭಯ. ಆದ್ರೂ ಕೇಳೇ ಬಿಡೋಣ ಅಂತ ಪದ್ದಣ್ಣನ ಮುಂದೆ ನನ್ನ ಬೇಡಿಕೆಯನಿಟ್ಟೆ. ಈ ಸಣ್ಣ ಮಕ್ಕಳನ್ನ ಕರಕೊಂಡು ಬಿಸಿಲಲ್ಲಿ ಸಾಧ್ಯನೇ ಇಲ್ಲ, ಡಿಸೆಂಬರ್ ಲ್ಲಿ ನೋಡೋಣ ಅಂತ ಮುಂದೆ ತಳ್ಳೋಕೆ ನೋಡಿದ, ನಾವು ಬಿಡಬೇಕಲ್ಲ, ಹು… ಅಂತ ಹಸಿರು ನಿಶಾನೆ ತೋರಿಸೋವರೆಗೂ ಬಿಡಲಿಲ್ಲ. ಅಂತೂ ಆಗ್ರಾ ದತ್ತ ರಯ್ಯ…ರಯ್ಯ…ಅಂದೇ.

ನನ್ನ ಮಕ್ಕಳಿಗೆ ಆಗ ಕೇವಲ ೫ ವರ್ಷ ವಯಸ್ಸು. ನಾವಿಬ್ಬರು ನಮಗಿಬ್ಬರು ಜೊತೆಗೆ ಒಂದಷ್ಟು ಲಗೇಜ್ ಹಾಕಿಕೊಂಡು ನಮ್ಮ ಪಯಣ ತಾಜಮಹಲ್ ನತ್ತ ಸಾಗಿತು.

ಮಕ್ಕಳಿಗೆ ಅದು ಮೊದಲ flight ಅನುಭವ. ಮಕ್ಕಳಿಗೆ ಒಂದೇ ಕಡೆ ಎರಡೂವರೆ ತಾಸು ಹಿಡಿದು ಕೂಡಿಸುವುದೆಂದರೆ ಮದಬಂದ ಆನೆಗೆ ಹಿಡಿದಂತೆ ಆಗಿತ್ತು ನಮ್ಮ ಪರಿಸ್ಥಿತಿ. ಮುಂದೆ ಕೂತಿದ್ದ ಸಹ ಪ್ರಯಾಣಿಕರ ಕೂದಲು ಏಳಿಯುವುದು, ಗಗನ ಸಖಿಯರ ಸೀರೆ ಎಳೆಯುವುದು,ಕೆಳಗೆ ಬಿಟ್ಟರೆ ಓಡೋಡಿ ಹೋಗೋದು, ಅವರನ್ನ ಹಿಡಿಯುವಷ್ಟರಲ್ಲಿ ನಮ್ಮ ಕೂದಲು ಆಂಟೆನಾ ತರ ಎದ್ದು ನಿಂತಿದ್ದವು. ವಿಮಾನ ಲ್ಯಾಂಡ್ ಆದ್ರೆ ಸಾಕಪ್ಪಾ ಅನ್ನೋಷ್ಟು ಬೇಸತ್ತಿ ಹೋಗಿದ್ದೆವು. ಗಗನಸಖಿಯರಂತೂ ಕೊನೆಕೊನೆಗೆ ಅವರ ತೋರಿಕೆಯ ನಗು ಮಾಯವಾಗಿ ಈ ಮಕ್ಕಳಿಗೆ ನಾಲ್ಕು ಕೊಟ್ಟು ಕೂಡಿಸಿದ್ರೆ ಸಾಕು ಅನ್ನೋಷ್ಟು ಕೋಪ ಬಂದಿತ್ತು. ಇಂತಹ ಮಕ್ಕಳನ್ನ ಇಡ್ಕೊಂಡು ತಾಜಮಹಲ್ ನೋಡೋಕೆ ಹೊರಟಿದ್ವಿ ಅಂದ್ರೆ ಅದು ನಮ್ಮ  ಸಾಹಸವೇ ಆಗಿತ್ತು.

ಕಿಟಕಿ ಹೊರಗೆ ತೋರಿಸಿ ನಾಯಿ, ಬೆಕ್ಕು ಅದು ಇದು ಹೇಳಿ ಸುಮ್ಮನೆ ಕೂಡಿಸೋಣ ಅಂದ್ರೆ ವಿಮಾನದಲ್ಲಿ ಅವೆಲ್ಲ ಎಲ್ಲಿಂದ ಬರಬೇಕು. ವಿಮಾನ ಫಾಸ್ಟ್ ಅನ್ನೋದು ಬಿಟ್ಟರೆ ಸುಖಕರ ಪ್ರಯಾಣಕ್ಕೆ ನಮಗೆ ಬಸ್ಸೇ ಬೆಸ್ಟ್ ಆಗಿತ್ತು. ಒಂದೊಂದು ಸ್ಟಾಪ್ ಗೂ ನಿಂಬೆ ಹುಳಿ ರೀ… ಕಡಲೆ ಕಾಯಿ….ಕಡಲೆ ಕಾಯಿ …ಅನ್ನೋ ಆ ಕರ್ಕಶ ಧ್ವನಿ, ಅಕ್ಕಾ…ಅಣ್ಣಾ…ದುಡ್ಡು ಹಾಕಿ ಅಂತ ಬರೋ ಭಿಕ್ಷುಕರು, ಪಕ್ಕದಲ್ಲಿ ನ್ಯೂಸ್ ಪೇಪರ್ ಓದುತ್ತಿದ್ದ ಸಿಡುಕು ಮೂತಿ ಸಿದ್ದಪ್ಪ, ಹಂಚಿ ತಿನ್ನುವ ಮನೋಭಾವವಿರುವ ಸಹಪ್ರಯಾಣಿಕರ ಮಧ್ಯೆ ಸಮಾಜದ ಎಲ್ಲ ವರ್ಗದವರನ್ನ ಬಸ್ ನಲ್ಲಿ ನೋಡುತ್ತಿದ್ದೆವು, ಅದರ ಮುಂದೆ ಈ ವಿಮಾನ ಸಪ್ಪೆನೇ ಆಗಿತ್ತು .

ಅಂತೂ  ಎರಡೂವರೆ ಗಂಟೆ ಪ್ರಯಾಣ ಮುಗಿಸಿ ವಿಮಾನದಿಂದ ಇಳಿಯೋವಷ್ಟರಲ್ಲಿ ನಮ್ಮ ಹವಾ ಎಲ್ಲ ಇಳಿದು ಬಿಟ್ಟಿತ್ತು . ನನ್ನ ಮಕ್ಕಳಿಗಂತೂ ಬೋನ್ ನಿಂದ ಬಿಟ್ಟಷ್ಟೇ ಖುಷಿ ಆಗಿತ್ತು, ಅವರು ಮುಂದೆ ಮುಂದೆ ಓಡ್ತಿದ್ರೆ ನಾವು ಅವರನ್ನ ಹಿಡಿಯೋಕೆ ಹಿಂದೆ ಹಿಂದೆ ಓಡೋ ಪರಿಸ್ಥಿತಿ. ಮಕ್ಕಳು, ಲಗೇಜ್, ನಮ್ಮ ದೇಹ ಎಲ್ಲವನ್ನು ಸಂಬಾಳಸ್ಕೊಂಡು ರೂಮ್ ಮುಟ್ಟುವಷ್ಟರಲ್ಲಿ ನಮ್ಮ ದೇಹ ನೆಲಕ್ಕೆ ಹಚ್ಚಿತ್ತು.  ಆದರೆ ಪ್ರೀತಿಯ ಸಂಕೇತ ತಾಜಮಹಲ್ ಹುಚ್ಚು ನನ್ನಲ್ಲಿ ಮಾಸಿರಲಿಲ್ಲ,ನನ್ನ ದೇಹಕ್ಕೆ ALL IS WELL ಹೇಳಿ, ಇವತ್ತು ನೀನು ರೆಸ್ಟ್ ಮಾಡು ನಾಳೆ ಬೆಳಗ್ಗೆ ನನ್ನ ಕನಸಿನ ಮಹಲ್ ನೋಡೋಕೆ ಸಿದ್ಧವಾಗು ಎಂದು ಸುಧಾರಿಸಿದೆ. ಪದ್ದಣ್ಣ ‘ನೋಡೇ …ನೀನು, ಮಕ್ಕಳು ಪದ್ದಣ್ಣ ಇಲ್ಲಿ ಇಲ್ಲ ಅಂತ ಅನ್ಕೋಬಿಡ್ರಿ, ನಾನು ಮಲಗ್ತೀನಿ’ ಅಂದ.  ‘ಇಲ್ಲ ಅಂತ ಅಂದುಕೊಳ್ಳೋಕೆ ಸಾಧ್ಯನೇ ಇಲ್ಲ…ಜೊತೆಯಾಗಿ…ಹಿತವಾಗಿ…ಸೇರಿ ನಡೆವಾ…ಅಂತ ಹಾಡು ಹೇಳ್ಕೊಂತಾ ಮದುವೆ ಆಗಿಲ್ವ?. ಅದೆಲ್ಲ ನಂಗೆ ಗೊತ್ತಿಲ್ಲ, ನಾಳೆ ಬೆಳಗ್ಗೆ ಬೇಗ ಎದ್ದು ರೆಡಿ ಆಗ್ಬೇಕು ಅಷ್ಟೇ’ ಅಂದೇ. ‘ಹಳ್ಳಕ್ಕೆ ಬೀಳ್ಬೇಡ ಅಂತ ಗಿಣಿಗೆ ಹೇಳಿದ ಹಾಗೆ ಮದುವೆ ಮುಂಚೆ ಎಲ್ಲರೂ ಹೇಳಿದ್ರು, ಸಾಲದಕ್ಕೆ ಕಾಶಿಯಾತ್ರೆಲ್ಲಿ ಓಡಿ ಹೋಗೋಕೆ ಅವಕಾಶವನ್ನು ಕೊಟ್ರು, ನಮ್ಮ ಬುರುಡೆಗೆ ಅವೆಲ್ಲ ಅವಾಗ ಗೊತ್ತಾಗ್ಲಿಲ್ಲ, ಈಗ ಅನುಭವಿಸ್ತಿದ್ದೀವಿ ನೋಡು’… ಅಂತ ಪದ್ದಣ್ಣ ಗೊಣಗಿದ. ಏನಾದ್ರು ಗೊಣಗಲಿ ನನಗೆ ತಾಜ್ ಮಹಲ್ ತೋರಿಸಿದ್ರೆ ಆಯ್ತು ಅಂತ ಸುಮ್ನಾದೆ. ಅಂದು ಹೇಗೋ ಕಳೆಯಿತು.

ಬೆಳಗ್ಗೆ ಆಯಿತು, ತಿಂಡಿ, ತೀರ್ಥ ಎಲ್ಲ ಮುಗಿಸಿ ನಾನು ತಾಜ್ ಮಹಲ್ ಗಾಗಿಯೇ ಒಂದು ಕೆಂಪು ಬಣ್ಣದ ಚೂಡಿದಾರ ತಂದಿದ್ದೆ, ಅದನ್ನು ಹಾಕೊಂಡು ಕನ್ನಡಿ ಮುಂದೆ ನಿಂತೇ, ಅಷ್ಟೋತ್ತಿಗೆ ಪದ್ದಣ್ಣ ನನ್ನ ಅಲಂಕಾರ ನೋಡಿ ‘ತಾಯಿ…ಷಹ ಜಹಾನ್  ಸತ್ತು ಬಾಳ ವರ್ಷ ಆಯ್ತು, ಅದು ನಿಂಗೆ ಗೊತ್ತಿದ್ರೆ ಸಾಕು’… ಅಂದ. ನಾನು ಒಂದ ಲುಕ್ ಕೊಟ್ಟು ‘ಷಹ ಜಹಾನ್ ಗೆ ಇಂಪ್ರೆಸ್ ಮಾಡೋಕೆ ಈ ಅಲಂಕಾರ ಅಲ್ಲ, ಪದ್ದಣ್ಣನಿಗೆ ಇಂಪ್ರೆಸ್ ಮಾಡಿದ್ರೆ ಬೆಂಗಳೂರನಲ್ಲಿ ನಾಲ್ಕು ದಿಕ್ಕಿಗೆ ಒಂದೊಂದು ಮಹಲ್ ಕಟ್ಟಸ್ಥಾನೇನೋ ಅನ್ನೋ ಹುಚ್ಚು ಕಲ್ಪನೆ ಅಷ್ಟೇ’ …ಅಂದೆ. ‘ಅಂದ್ರೆ ಬ್ಯಾಂಕ ಅವರಿಗೆ ನನ್ನ ಅಡ ಇಡೋ ಯೋಚ್ನೆಲ್ಲಿ ಇದ್ದಿ ಅಂತಾಯ್ತು’… ಅಂತ ಪದ್ದಣ್ಣ ತಿರುಗೇಟು ಕೊಟ್ಟ. ನನ್ನ ಪದ್ದಣ್ಣನ ನಡುವೆ ಆಗಾಗ ಪ್ರೀತಿ ವಿಶ್ವಾಸದ ಮಾತುಗಳು ನಡೆಯುತ್ತಲೇ ಇರುತ್ತವೆ.

***

ನನಗಂತೂ ತಾಜ್ ಮಹಲ್ ಗುಂಗು ಬಿಟ್ಟಿರಲಿಲ್ಲ, ಹಾಗೂ- ಹೀಗೂ ಮಾಡ್ಕೊಂಡು ತಾಜ್ ಮಹಲ್ ತಲುಪಿದ್ವಿ. ಆಹಾ..ತಾಜ್ ಮಹಲ್ ಗೇಟ್ ತಲುಪುತ್ತಿದ್ದಂತೆ ಪೊಲೀಸ್ ಬ್ಯಾಗ್ ಚೆಕ್ ಮಾಡಿ, ರಣರಣ ಬಿಸಲಿನಲ್ಲಿ ಬಾಯಿಗೆ ತೊಟ್ಟು ನೀರು ಬೀಳಬಾರದು ಅಂತ ಬ್ಯಾಗ್ ನಲ್ಲಿದ್ದ ನೀರಿನ ಬಾಟಲ್ ಕಿತ್ತಕೊಂಡು ಒಳಕ್ಕೆ ಕಳಸಿದರು. ಈಗ ಷಹ ಜಹಾನ್ ಮುಮ್ತಾಜ್ ಪ್ರೀತಿಯ ಸಂಕೇತ ತಾಜ್ ಮಹಲ್ ಮುಂದೆ ನಿಂತಿದ್ದೆ . ನನ್ನ ಎರಡು ಮಕ್ಕಳು ಅಲ್ಲಿ ಎಲ್ಲಿ ಓಡಲು ಸಿದ್ದರಾಗಿದ್ದರು, ಆದರೆ ನನ್ನ ಗಮನವೆಲ್ಲಾ ತಾಜ್ ಮಹಲ್ ನಲ್ಲಿಯೇ ಇತ್ತು . ಒಳಕ್ಕೆ ಹೋಗುತ್ತಿದ್ದಂತೆ ಫೋಟೋಗ್ರಾಫರ್, ಗೈಡ್ ಗಳು ಬೆನ್ನು ಬಿದ್ದರು. ತಾಜ್ ಮಹಲ್ ಮುಂದೆ ನನಗೆ ಟೈಟಾನಿಕ್ ಪೋಸ್ ಲ್ಲಿ ಒಂದು ಫೋಟೋ ತಗಿಸಿಕೊಳ್ಳಬೇಕು ಎನ್ನುವ ಆಸೆಯಂತೂ ಇತ್ತು. ಆದ್ರೆ ಫೋಟೋಗ್ರಾಫರ್ ಯಾವ ಕಾಲದವನೇನೋ ಹಳೆ ಕಾಲದವರ ತರ ಪದ್ದಣ್ಣನ ಕೈ ನನ್ನ ಹೆಗಲ ಮೇಲೆ ಹಾಕಿಸಿದ, ನಮ್ಮ ತೊಡೆಯ ಮೇಲೆ ನಮ್ಮ ಮಕ್ಕಳನ್ನು ಕೂಡಿಸಿ ಫೋಟೋ ತಗೆದ. ಕೆಂಪು ಬಟ್ಟೆಯಲ್ಲಿ ಫೋಟೋ ಸಕತ್ತಾಗಿಯೇ ಬಂದಿತ್ತು, ಆದರೆ ನನ್ನ ಟೈಟಾನಿಕ್ ಪೋಸ್ ಇರಲಿಲ್ಲ ಅನ್ನೋ ಬೇಸರ ಇತ್ತು, ಈಗ ಬಂದ ಮೊದಲ ಕೆಲಸ ಮುಗಿಸಿ ಆಮೇಲೆ ಫೋಟೋ ಬಗ್ಗೆ ಯೋಚ್ನೆ ಮಾಡಿದರಾಯಿತು ಅಂತ ತಾಜ್ ಮಹಲ್ ಹತ್ರ ಹೋದೆವು. ಮಾರ್ಬಲ್ ನಿಂದ ಕಟ್ಟಿದ ಸುಂದರ ಮಹಲ್ ಅಂದು. ‘ಪದ್ದಣ್ಣ… ಕೊನೆಪಕ್ಷ ನಮ್ಮ ಮನೆಗೆ ನೆಲಕ್ಕಾದ್ರೂ ಮಾರ್ಬಲ್ ಹಾಕ್ಸು, ಶಾಲೂ ಪ್ರೀತಿಗೆ ಪದ್ದಣ್ಣ ಮಾರ್ಬಲ್ ಹಾಕಿಸಿದ ಅಂತ ಮನೆಗೆ ಬಂದವರ ಮುಂದೆ ಹೇಳ್ಕೊಂಡು ತಿರಗ್ತೀನಿ…’ ಅಂದೆ. ಪದ್ದಣ್ಣ ಡಾಂಬರ್ ಮನ್ ನೋಟ ಬೀರಿದ. ಅಲ್ಲಿಗೆ ಸುಮ್ಮನಾದೆ.

ತಾಜ್ ಮಹಲ್ ನೋಡಿ ಆನಂದ ಪಟ್ಟೆ.  ಕೊನೆಗೂ ನಮ್ಮ ಪದ್ದಣ್ಣ ತಾಜ್ ಮಹಲ್ ತೋರಿಸಿ ನನ್ನ ಆಸೆ ಈಡೇರಿಸಿದ ಎನ್ನುವ ಸಂತೋಷ ನನ್ನಲ್ಲಿತ್ತು. ಷಹ ಜಹಾನ್ ಮುಮ್ತಾಜ್ ಪ್ರೀತಿ ಕತೆ ಮನಸ್ಸಲ್ಲಿ ಆಳವಾಗಿ ಬೇರೂರಿತ್ತು, ಪ್ರೀತಿ ಅಂದ್ರೆ ಹೀಗಿರಬೇಕು ಅಂದುಕೊಂಡು ಅಲ್ಲಿಂದ ಹೊರಕ್ಕೆ ನಡೆದೇ. ಮನಸ್ಸು ಪೂರ್ತಿ ಬಿಳಿಯ ತಾಜ್ ಮಹಲ್ ಕೂತುಬಿಟ್ಟಿತ್ತು.  ಆ ಗುಂಗಿನಿಂದ ಹೊರಕ್ಕೆ ಬಂದಾಗ ನನ್ನ ಷಹ ಜಹಾನ್ ಪದ್ದಣ್ಣ ಹಾಗೂ ನನ್ನ ಸಣ್ಣ ಮಗ ಸಕ್ಕರೆ ಕಣ್ಣಿಗೆ ಕಾಣಿಸಲಿಲ್ಲ. ಇಲ್ಲೇ ಎಲ್ಲೋ ಇರಬೇಕು ಅಂದುಕೊಂಡೆ. ಕಣ್ಣು ಸುತ್ತಲೂ ಹುಡುಕಿತು ಪದ್ದಣ್ಣ ನಾಪತ್ತೆ.  ಅಕ್ಕರೆಗೂ ಹೇಳಿದೆ ನೋಡೋ ನಿಮ್ಮ ಅಪ್ಪ ಸಕ್ಕರೆ ಕಾಣ್ತಿಲ್ಲ, ನಿನ್ನ ಕಣ್ಣಿಗೆ ಕಾಣಸ್ತಾರ ನೋಡು ಅಂದೆ. ಪಾಪದ್ದು, ನಾಲ್ಕು ವರ್ಷದ್ದು ಎಲ್ಲಿ ತಾನೇ ನೋಡುತ್ತೆ. ಅಲ್ಲಿಂದ ಶುರು ಆಯ್ತು ನೋಡಿ ನನ್ನ ಕ್ಲೈಮಾಕ್ಸ್ ಸೀನ್. ಅಪ್ಪ, ಮಗ ಇಬ್ಬರೂ ಇಲ್ಲ. ಎಷ್ಟೇ ಹುಡುಕಿದ್ರೂ ಸಿಗ್ತಿಲ್ಲ. ಕೈಯಲ್ಲಿ ಪರ್ಸ್ ಭಾರ ಆಗುತ್ತೆ ಅಂತ ರೂಮಲ್ಲಿಯೇ ಇಟ್ಟು ಬಾ ಅಂತ ಪದ್ದಣ್ಣ ಹೇಳಿದ್ದಕ್ಕೆ ಅಲ್ಲಿಯೇ ಬಿಟ್ಟು ಬಂದಿದ್ದೆ, ಸಾಲದಕ್ಕೆ ಮೊಬೈಲ್ ಪರ್ಸ್ ನಲ್ಲಿಯೇ ಇತ್ತು. ಸುತ್ತಲೂ ಅಪರಿಚಿತರು, ಏನ್ ಮಾಡ್ಲಿ  ಕೈಯಲ್ಲಿ ದುಡ್ಡು ಇಲ್ಲ, ಮೊಬೈಲ್ ಇಲ್ಲದೆ ಎಲ್ಲಿ ಹೋಗಲಿ ಅನ್ನೋ ಆತಂಕ ಶುರುವಾಯಿತು. ಅದೇ ಸಂದರ್ಭದಲ್ಲಿ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ತಾಯಿಯೊಬ್ಬಳು ತನ್ನ ಕಂಕಳಲ್ಲಿ ಮಗುವೊಂದನ್ನು ಎತ್ತಿಕೊಂಡು ‘ಮಾ…ಪೈಸೆ ದೇದೋ…ಭಗವಾನ ಆಪ ಕಾ ಭಲಾ ಕರೇಗಾ’ …ಅಂದಾಗ ಅಯ್ಯೋ ದೇವರೇ … ನನಗೂ ಇದೆ ಪರಿಸ್ಥಿತಿ ಬಂದ್ರೆ …ಛೇ…ಛೇ…ನನ್ನ ಕಡೆ ಈ ತರ ಡೈಲಾಗ್ ಎಲ್ಲ ಅಸಾಧ್ಯ …ನಮ್ಮಪ್ಪ ಬಂಗಾರದ ಹಾಗೆ ಸಾಕಿ, ಗಿಡುಗನ ಕೈಯಲ್ಲಿ ಕೊಟ್ರಾ…ಏನ್ ಮಾಡ್ಲಿ, ಈ ಗಂಡಾಂತರದಿಂದ ತಪ್ಪಿಸಿಕೊಂಡ್ರೆ ಸಾಕಪ್ಪಾ ಅಂತ ಕಣ್ಣಲ್ಲಿ ನೀರು ಧುಮ್ಮಿಕ್ಕಿ ಬರಲು ಸಿದ್ದವಾಗಿತ್ತು, ಅಷ್ಟೋತ್ತಿಗೆ ನನ್ನಲ್ಲಿನ ಅಲ್ಪ ಸ್ವಲ್ಪ ಅಹಂಕಾರ ನನ್ನನ್ನು ತಕ್ಷಣ ಅಳಲು ಬಿಡಲಿಲ್ಲ. ಆದರೂ ಪದ್ದಣ್ಣನ ಮೇಲೆ ನನ್ನ ಮೂರನೇ ಕಣ್ಣು ತೆರೆದುಕೊಂಡಿತು, ಪದ್ದಣ್ಣ ಎಷ್ಟು ದಿನದಿಂದ ಈ ಹೊಂಚು ಹಾಕಿದ್ದನ್ನೋ ಏನೋ ?. ಕರ್ನಾಟಕದಲ್ಲಿ ಯಾವ ಮೂಲೆಯಲ್ಲಿ ಬಿಟ್ರು ನನ್ನ ಹೆಂಡ್ತಿನ್ನ ಯಾರಾದ್ರೂ ಸಾಕೊಂಡು ಬಿಡ್ತಾರೆ. ಕರ್ನಾಟಕದಲ್ಲಿ ಅವಳಿಗೆ ಎಲ್ಲರೂ ಪರಿಚಯಿಸ್ಥರು ಅದರ ಬದಲು ಇವಳನ್ನ ಗೊತ್ತಿಲ್ಲದ ಜಾಗದಲ್ಲಿ, ಅದು ಪ್ರೇಮಿಗಳ ಜಾಗದಲ್ಲಿ, ಭಾಷೆ ಬಾರದ ಜಾಗದಲ್ಲಿ ಬಿಟ್ರೆ ಇವಳು ಮತ್ತೆ ವಾಪಾಸ್ ಬರೋಲ್ಲ, ಇವಳ ಕಾಟ ತಪ್ಪಿಸ್ಕೊಕೆ ಇರೋದು ಇದೆ ಒಂದೇ ದಾರಿ ಅಂತ ಹೀಗೆ ಮಾಡಿದ್ನಾ?! ಅಂತ ನನ್ನ ತಲೆಯಲ್ಲಿ ಕ್ರೈಂ ಡೈರಿ ಓಡೋಕೆ ಶುರು ಮಾಡ್ತು.

ಈಗ ಹೆದರುತ್ತಾ ಕೂಡುವ ಸಮಯವಲ್ಲ ಧೈರ್ಯ ತಗೆದುಕೊಳ್ಳಬೇಕು, ಆ ಧೈರ್ಯ ಬರಿಗೈಯಲ್ಲಿ0ದ ಎಲ್ಲಿ  ಬರುತ್ತೆ?. ಆದರೆ ಏನಾದರು ದಾರಿ ಹುಡುಕಬೇಕು ಅಂತ ಸ್ವಲ್ಪ ದೂರ ಅಕ್ಕರೆಯನ್ನ ಎಳ್ಕೊಂಡು ಹೊರಟೆ. ಅಕ್ಕರೆಗೆ ಪರಿಸ್ಥಿತಿ ಅರಿವೇ ಇರಲಿಲ್ಲ. ನನ್ನ ಕೈ ಹಿಡಿದು ನನ್ನ ಹಿಂದಿಂದೆ ಬಂದ. ಅಷ್ಟೋತ್ತಿಗೆ ನನ್ನ ಕಣ್ಣಿಗೆ ಎಸ್ ಟಿ ಡಿ ಬೂತ್ ವೊಂದು ಕಾಣಿಸಿತು. ಎಸ್ ಟಿ ಡಿ ಬೂತ್ ನಲ್ಲಿ ಕೂತಿದ್ದ ವ್ಯಕ್ತಿಗೆ ಸಂಕೋಚದಿಂದಲೇ ಹಿಂದಿಯಲ್ಲಿಯೇ ‘ಅಣ್ಣಾ… ನನ್ನ ಗಂಡ ಇಲ್ಲಿ ಎಲ್ಲೋ ತಪ್ಪಿಸಿಕೊಂಡಿದ್ದಾರೆ, ಒಂದು ಕರೆ ಮಾಡಬಹುದಾ?. ನನ್ನ ಹತ್ರ ದುಡ್ಡಿಲ್ಲ’ ಅಂದೇ. ಆ ಮನುಷ್ಯ ಆ ಪರಿಸ್ಥಿತಿಗೆ  ನನಗೆ ದೇವರಂತೆ ಕಂಡ. ‘ಎಲ್ಲಿಂದ ಬಂದಿದ್ದೀರಿ?’… ಅಂತ ಹಿಂದಿಯಲ್ಲಿಯೇ ಕೇಳಿದ.  ಕರ್ನಾಟಕದಿಂದ ಅಂದಿದ್ದೆ ತಡ ‘ದುಡ್ಡು ಬೇಡ. ನನ್ನ ತಂಗಿಯಂತೆ ನೀನು, ಕಾಲ್ ಮಾಡು…ಪರವಾಗಿಲ್ಲ’  ಅಂದ. ನನ್ನನ್ನು ನನ್ನ ಗಂಡ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ಯಾವ ಮೂಲೆಯಲ್ಲೂ ಬಿಟ್ರು, ವಾಪಾಸ್ ಬರತೀನಿ ಅಂತ ಅವನಿಗೆ ತೋರಿಸಬೇಕು ಅಂತ ಸಿಟ್ಟಲ್ಲೇ ಅವನ ನಂಬರ್ ಗೆ ಕರೆ ಮಾಡಿದೆ. ಫೋನ್ ರಿಂಗ್  ಆಗಿ… ಆಗಿ… ಕಟ್ ಆಯ್ತು, ಆದ್ರೆ ಪದ್ದಣ್ಣ ಫೋನ್ ಎತ್ತಿಕೊಳ್ಲಲಿಲ್ಲ. ಆಗ ಪಕ್ಕಾ ಕಂಫರ್ಮ್ ಆಯ್ತು, ನನ್ನ ಗಂಡ ಬೇಕು ಅಂತಲೇ ನನ್ನ ನಡುದಾರಿಯಲ್ಲಿಯೇ ಬಿಟ್ಟು ಹೋಗಿದ್ದಾನೆ. ಈಗ ಬೇರೆಯವರ ನಂಬರ್ ಗೆ ಕರೆ ಮಾಡೋಣ ಅಂದ್ರೆ ಯಾರ್ ನಂಬರ್ ಬಾಯಿಗೆ ಬರ್ತಿಲ್ಲ, ಏನ್ ಮಾಡ್ಲಿ, ಅಕ್ಕರೆ ಕರಕೊಂಡು ಎಲ್ಲಿಗೆ ಹೋಗ್ಲಿ,

ಪದ್ದಣ್ಣ ನಾಪತ್ತೆ ಆಗಿ ಅರ್ಧಗಂಟೆನೇ ಕಳೆದಿತ್ತು. ಕೋಪ, ಭಯ, ಆವೇಶ ಎಲ್ಲವೂ ತುಂಬಿ ತುಳುಕುತ್ತಿದೆ. ಅವನೇನಾದ್ರೂ ನನ್ನ ಕೈಗೆ ಸಿಗಲಿ ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ, ಅದು ಇದು ಎಲ್ಲ ಕೇಸ್ ಹಾಕ್ಸಿ ಹೊರಕ್ಕೆ ಬಂದಿರಬಾರದು ಹಾಗೆ ಕಂಬಿ ಎಣಿಸೋ ಹಾಗೆ ಮಾಡ್ತೀನಿ.ಆದ್ರೆ ಈಗ ಬಂದ ಆಪತ್ತಿನಿಂದ ಮೊದಲು ಪಾರು ಆಗ್ಬೇಕು ಆಮೇಲೆ ಅವನ ವಿಚಾರಣೆ ಮಾಡ್ತೀನಿ ಅಂತ ಕಣ್ಣಿನ ಕಟ್ಟೆ ಒಡೆದು ನೀರು ಧಾರಾಕಾರವಾಗಿ ಹರಿಯೋಕೆ ಶುರು ಮಾಡಿತು. ಆಗ ಮಂಜು ಮಂಜಾಗಿ ಪದ್ದಣ್ಣ, ಸಕ್ಕರೆ ದೂರದಲ್ಲಿ ಕಣ್ಣಿಗೆ ಬಿದ್ದರು. ಕಣ್ಣು ಒರೆಸಿಕೊಂಡು ಗುರುಗುಟ್ಟಿಸಿ ನೋಡಿದೆ, ಅದೇ ನನ್ನ ಕ್ರೈಮ್ ಡೈರಿ ಅಪರಾಧಿ ಹತ್ತಿರಕ್ಕೆ ಬಂದ. ಕೈಗೆ ಸಿಕ್ಕರೆ ನಾಲ್ಕು ತಟ್ಟೋಣ ಅಂದುಕೊಂಡವಳಿಗೆ ದುಃಖ ಉಮ್ಮಳಿಸಿ ಬಂತು, ‘ಎಲ್ಲಿ ಹೋಗಿದ್ದೆ? ಆಗ್ಲಿಂದ ಹುಡುಕ್ತಿದ್ದೀನಿ, ಮೊದಲು ನಿನ್ನ ಪರ್ಸ್ ಕೊಡು, ಪರ್ಸ್ ನನ್ನ ಹತ್ರ ಇರಲಿ’… ಅಂದೇ. ‘ಹೇ …ನಿನ್ನ ಮಗ ಅರ್ಜೆಂಟ್ ಕಕ್ಕ ಅಂತ ರಾಗ ತಗೆದ, ಪಬ್ಲಿಕ್ ಟಾಯ್ಲೆಟ್ ಹುಡ್ಕೊಂಡು ಹೋಗೋಷ್ಟ್ರಲ್ಲಿ ಲೇಟ್ ಆಯ್ತು, ಯಾಕೆ ಭಯ ಆಯ್ತಾ? ನೋಡು… ಇನ್ನೊಮ್ಮೆಅವಾಜ್  ಹಾಕ್ತಿಯಾ?’… ತನ್ನ ಹಳೆಯ ಲೆಕ್ಕವನ್ನೆಲ್ಲ ಚುತ್ತಾ ಮಾಡಿಕೊಂಡ.ಅವಾಜ್ ಹಾಕೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ, ಮತ್ತೆ ಪದ್ದಣ್ಣ ನಾಪತ್ತೆ ಆದ್ರೆ ಅನ್ನುವ ಭಯ, ಅದರ ಬದಲು ಕರ್ನಾಟಕದಲ್ಲಿ ವಿಮಾನ ಲ್ಯಾಂಡ್ ಆಗಲಿ… ಶಾಲಿನಿ ಪವರ್ ಏನು ಅಂತ ತೋರಸ್ತೀನಿ…ಅಂತ ಮನಸ್ಸಲ್ಲೇ ಅಂದುಕೊಂಡು ಸುಮ್ಮನಾದೆ.

ಅಂತೂ ನಮ್ಮ ಪದ್ದಣ್ಣ ತಾಜ್ ಮಹಲ್ ನ್ನು ನನ್ನ ಮೆಮೊರಿ ಚಿಪ್ ನಲ್ಲಿ ಮರೆಯದೆ ಸದಾ ಉಳಿಯುವಂತೆ ಮಾಡಿಟ್ಟ,


  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW