ಮನೆಗೆ ಯಾರಾದರೂ ಬಂದ್ರೆ ಸಂತೋಷದಿಂದ ಊಟ ಬಡಿಸಿ, ಉಪಚರಿಸಿ. ಅವರ ಮುಖದಲ್ಲಿ ಮೂಡುವ ಮಂದಹಾಸ ನಿಮ್ಮ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ. ಅನ್ನದಾತೋ ಸುಖೀಭವ ಸಂದೇಶವಿರುವ ವೀಣಾ ವಿನಾಯಕ ಅವರ ಲೇಖನವನ್ನು ತಪ್ಪದೆ ಓದಿ…
ಅವತ್ತು ಮಧ್ಯಾಹ್ನ ಒಂದು ಗಂಟೆ ಆಗಿರ್ಬೋದು. ಬೇಗ ಒಂದು ಸಾರು ಪಲ್ಯ ಮಾಡಿ ಮುಗ್ಸಿದ್ದೆ. ಸಣ್ಣ ತಲೆ ನೋವು. ಬೇಗ ಊಟ ಮಾಡಿ ಮಲಗಬೇಕು ಅಂದ್ಕೊಂಡು ಕೂತಿದ್ದೆ. ಅಷ್ಟರಲ್ಲಿ ಪತಿರಾಯರು ಬಂದ್ರು. ಬೇಗ ಬಂದ್ರಲ್ಲ ಸಧ್ಯ. ದಿನಾ ಮೂರು ಗಂಟೆಯ ಕಮ್ಮಿ ಬರೋರಲ್ಲ. ಊಟಕ್ಕೆ ರೆಡಿ ಮಾಡ್ಬೇಕಂದ್ಕಂಡು ಎದ್ದೆ.
ಅಡುಗೆ ಆಯ್ತಾ ಅಂದ್ರು ಮೆಲ್ಲಗೆ. ಒಂದೈದು ಜನ ಊಟಕ್ಕೆ ಬರ್ತಾರೆ ರೆಡಿ ಮಾಡು ಅಂದ್ರು. ಎಲ್ಲಿತ್ತೋ ಸಿಟ್ಟು. ಇನ್ನರ್ಧ ಗಂಟೆ ಬಿಟ್ಟು ಹೇಳ್ಬೇಕಿತ್ತು. ಐದು ಜನಕ್ಕೆ ಊಟ ರೆಡಿ ಇರೋಕೇನಿದು ಹೋಟೆಲ್ . ಬರ್ತಾರೆ ಅಂದ್ರೇ ಬೇಗ ಹೇಳೋದಲ್ವಾ ನೀವು ಅಂದೆ. ಸಾಮಾನ್ಯವಾಗಿ ನಾವು ಜಾಸ್ತಿನೇ ಮಾಡಿರ್ತೀವಿ. ಮನೆಯವರಿಗಷ್ಟೇ ಅಂತ ಮಾಡಿರೋಲ್ಲ. ಹಾಗಂತ ಐದಾರು ಜನಕ್ಕೆ ಬಡಿಸೋಷ್ಟು ಮಾಡಿರೋಲ್ಲ.
ಅವ್ರು ಬರೋದು ಎರಡು ಗಂಟೆಗೆ. ಹೋಟೆಲ್ ಹೋಗ್ತೀನಿ ಅಂದ್ರು ನಾನೇ ಬರೋಕೆ ಹೇಳ್ದೆ. ಇಷ್ಟು ಹತ್ರ ಮನೆ ಇದ್ದೂ ಹೋಟೆಲ್ ಗೆ ಯಾಕೆ ಹೋಗ್ತೀರಿ ಅಂತ … ಮನೆ ಅಲ್ಲ ಹೆಂಡತಿ ಬೇಯ್ಸಿ ಹಾಕೋಕೆ ಗಟ್ಟಿ ಇದ್ದಾಳೆ ಅನ್ಬೇಕಿತ್ತು ಅಂದೆ.
ಅವರ ಮೊಗದ ಭಾವನೆ ಗಮನಿಸಿದೆ “ತಂದು ಹಾಕ್ತೀನೀ ಬೇಯ್ಸೋಕೇನು” ಅನ್ನೋ ಹಾಗಿದ್ಯಾ ?ಅಂತ. ಸರೀ ಮಾಡ್ತೀನಿ ಅಂದೆ.
ಸಿಟ್ಟಲ್ಲಿ ನೀನೇನೂ ಮಾಡೋದ್ಬೇಡ ಹೋಟೆಲ್ ಹೋಗೋಕೆ ಹೇಳ್ತೀನಿ ಅಂದ್ರು. ಅವ್ರು ಹೇಳೋಲ್ಲ ಅಂತ ಗೊತ್ತಿತ್ತು. ಹೇಳಿದರೂ ನನಗೆ ಅವಮಾನ. ಗಂಡ ಊಟಕ್ಕೆ ಕರೆದು ಕ್ಯಾನ್ಸಲ್ ಮಾಡಿದ್ರೇ ನನ್ನ ಮೇಲೇ ಬರೋದಂತ. ಹೆಂಗಸರು ಬರ್ತಾರಾ? ಅಂದೆ. ಒಬ್ರು ಬರ್ಬೋದೇನೊ ಅಂದ್ರು ಮೊದಲನೆಯದು ಹೆಣ್ಮಕ್ಕಳು ಬಂದ್ರೆ ಅವರಿಗೆ ಅರಸಿನ ಕುಂಕುಮ ಕೊಡೋಕೆ ಮೊದಲೇ ರೆಡಿ ಮಾಡ್ಕೋಬೇಕು. ಕಾಯಿ, ಬಳೆ, ದುಡ್ಡು ಎಲ್ಲಾ ಎತ್ತಿಡ್ಬೇಕು. ಅದು ನಮ್ಮ ಸಂಪ್ರದಾಯ.
ಎರಡನೇಯದು ಪಾಪ ಸೀದಾ ಅಡುಗೆ ಮನೆಗೆ ಬರ್ತಾರೆ. ಮಾತಾಡೋಣ ಅಂತ. ಅಡುಗೆ ಸಲೀಸಾಗಿ ಮಾಡಲು ನಮಗೆ ಮುಜುಗರ. ಇನ್ನೊಂದು ನಮ್ಮ ಅಡುಗೆ ಮನೆ ಸೀಕ್ರೇಟ್ಸೆಲ್ಲಾ ಗೊತ್ತಾಗ್ಬಿಡುತ್ತೆ. ಪರಿಚಯದವರಾದರೆ ನೆಂಟರಾದರೆ ಪರ್ವಾಗಿಲ್ಲ, ಹೊಸಬರಾದರೆ ಅಡುಗೆ ಮನೆಯ ರಂಪಾ ಎಲ್ಲಾ ನೋಡಿದ್ರೇ ಅಂತ. ಗಂಡಸರಾದರೆ ಅಡುಗೆ ಮನೆಗೆ ಬರೋಲ್ಲ. ಊಟ ಮಾಡಿ ಸೀದಾ ಹಾಲಲ್ಲಿ ಹೋಗಿ ಕೂರ್ತಾರೆ ಅನ್ನೋ ಲೆಕ್ಕಾಚಾರ.
ಸರೀ ಫ್ರಿಜ್ ನಲ್ಲಿದ್ದ ತರಕಾರಿ ಚೂರೂ ಪಾರು ಇದ್ದದ್ದೆಲ್ಲಾ ಹಾಕಿ ಬಾತ್ ಮಾಡಿದೆ. ಅದಕ್ಕೊಂದು ಮೊಸರು ಬಜ್ಜಿ. ಈರುಳ್ಳಿ ಬೋಂಡ. ಶ್ಯಾವಿಗೆ ಪಾಯಸ. ಸಾರನ್ನ ಸ್ವಲ್ಪ ಉದ್ದ ಮಾಡಿದೆ. ಪಲ್ಯ ಸೈಡಿಗೆ ಅಂತ ಇಟ್ಟೆ. ಸಂಡಿಗೆ ಮೆಣಸು ಕರಿದೆ. ಅಷ್ಟರಲ್ಲಿ ನನ್ನ ತಲೆನೋವು ಮಾಯ.
ಎರಡುವರೆಗೆ ಬಂದರು. ಸಧ್ಯ ಅಡುಗೆ ಮನೆ ಕ್ಲೀನಾಗಿತ್ತು. ಊಟ ಬಡಿಸಿದೆ. ತುಂಬಾ ಖುಷಿಯಿಂದ ಊಟ ಮಾಡಿದರು. ಅಡುಗೆ ಹೊಗಳಿದ್ದೇ ಹೊಗಳಿದ್ದು. ಎಷ್ಟೆಲ್ಲಾ ಮಾಡಿದ್ರೀ ಅಂದ್ರು. ನನಗೊ ಭಾರೀ ಖುಷಿ. ಊಟ ಮಾಡಿವರು ಅಡುಗೆ ಚನ್ನಾಗಿದೆ ಅಂತ ಹೊಗಳಿಕೆಯ ಮುಂದೆ ಹೆಣ್ಮಕ್ಕಳಿಗೆ ಬೇರೆ ಯಾವ್ದೂ ಬೇಡ. ಹೆಣ್ಮಗಳು ಅಡುಗೆ ಮನೆಗೆ ಬರೋದ್ರೊಳ್ಗೆ ಎಲ್ಲಾ ಕ್ಲೀನ್ ಆಗಿತ್ತು. ನಗು ನಗುತ್ತಾ ಬಡಿಸಿದೆ. ನೀವು ಕೂತ್ಕೊಳಿ ಅಂತ ಆಕೆ ನನಗೆ ಬಡಿಸಿದ್ರು.
ಇವರ ಸ್ನೇಹಿತರೆಂದ್ರು “ಅನ್ನದಾತೋ ಸುಖೀಭವ” ಹೋಟೆಲ್ ಊಟ ಮಾಡಿದ್ರೇ ಅವರ ಜೊತೆ ಬಂದ ಹಿರಿಯರಿಗೆ ಆಗ್ತಿರಲಿಲ್ವಂತೆ. ಆರೋಗ್ಯ ಸಮಸ್ಯೆ. ನಿಮ್ಮಾಕೆಗೊಂದು ಥ್ಯಾಂಕ್ಸ್ ಹೇಳು ಅಂದ್ರು. ನಮ್ ತೋಟದ್ದು ಅಂತ ಬಾಳೆಗೋನೆ, ಹಲಸಿನ ಹಣ್ಣು, ಲಿಂಬೆ ಹಣ್ಣು ಅಂತ ಎಲ್ಲಾ ಕೊಟ್ಟು, ಕಳಿಸಿದರು ನನ್ನವರು. ಹೆಣ್ಮಗಳಿಗೆ ಬಾಗಿನ ಕೊಟ್ಟು ಕಳಿಸಿದೆ.
ಅವರೆಲ್ಲಾ ಹೊರಟು ಹೋದ್ಮೇಲೆ ನಾನಂದೆ. ಪಾಪ ಎಷ್ಟ ಖುಷಿಯಿಂದ ಊಟ ಮಾಡ್ಕೊಂಡ್ ಹೋದ್ರು. ನೀವ್ ಕೂಡ ನಾ ಮಾಡಿದ ಅಡುಗೆ ಹೆಂಗಿದೆ ಅಂತ ಬಾಯ್ಬಿಡೋಲ್ಲ. ಅವರು ನೋಡಿ ಅಂದೆ. ನಮ್ಮವರಂದ್ರು ಮತ್ತೆ ಆಗ ಗುರಾಯಿಸ್ತಿದ್ದಿ!. ಆಗ ಸನ್ನಿವೇಶ ಹಾಗಿತ್ತು ಅಂದೆ ತಲೇ ನೋವಿತ್ತು ಅಂದೆ.
ಯಾರೇ ಬಂದ್ರೂ ನಾವು ಅಡುಗೆ ಮಾಡಿ ಬಡಿಸ್ತೀವಿ. ಅವರಿಗಿಷ್ಟವಾದ ಖಾದ್ಯ ಮಾಡ್ತೀವಿ. ಖುಷಿಯಿಂದ ಬಡಿಸ್ತೀವಿ. ಅವ್ರಿಂದ ಹೊಗಳಿಸ್ಕೋತೀವಿ. ನಗ್ತಾ ಮಾತಾಡ್ತೀವಿ. ಬಂದವರೆದುರು ತೋರಿಸ್ಕೊಳ್ಳೋಲ್ಲ… ಅಂದ್ಮೇಲೆ ಸಿಟ್ಯಾಕೆ ಮಾಡ್ಕೇಬೇಕು.? ಬಿ ಪಿ ಯಾಕೆ ರೈಸ್ ಮಾಡ್ಕೋಬೇಕು? ಗಂಡನ ಕೆಂಗಣ್ಣಿಗೆ ಯಾಕೆ ಗುರಿಯಾಗ್ಬೇಕು.? ಬರೋರು ದಿನಾ ಏನ್ ಬರ್ತಾರಾ? cool ಆಗಿದ್ರೇ ಅಡುಗೆಯೂ ಚನ್ನಾಗಾಗತ್ತೆ.” ಸರ್ವ ಬಣ್ಣ ಮಸಿ ನುಂಗ್ತು” ಅನ್ನೋ ಗಾದೆ ತರ ಮಧ್ಯೆ ಸಿಟ್ಯಾಕೆ? ಬರೋರು ಅನ್ನ ಸಾರಾದ್ರೂ ಸರಿ ಊಟ ಮಾಡ್ತಾರೆ. ಅವರೇನು ಇದೇ ಅದೇ ಮಾಡಿ ಅನ್ನೋಲ್ಲ.
ಪಂಚ ಭಕ್ಷ ಪರಮಾನ್ನ ಬೇಕೆಂದು ಅವ್ರೇನಾದ್ರೂ ಕೇಳ್ತಾರಾ? ನಾವೇ ಮಾಡೋದು ತಾನೇ? ಯಾವ್ದನ್ನಾದ್ರೂ ಪ್ರೀತಿಯಿಂದ ನಗು ನಗುತ್ತಾ ಬಡಿಸಿದ್ರಾಯ್ತು..ಅವರೂ ಅಷ್ಟೇ ಖುಷಿಯಿಂದ ಊಟ ಮಾಡ್ತಾರೆ. ಬಾಯ್ತುಂಬ ಹರಸ್ತಾರೆ.
ಮನುಷ್ಯ ನನ್ನ ಅಷ್ಟೈಶ್ವರ್ಯ. ಹಣ, ಉಡುಗೊರೆ ಯಾವುದರಿಂದಲೂ ತೃಪ್ತಿ ಪಡಿಸೋಕೆ ಆಗಲ್ಲ. ಅವನು ಸಾಕು ಅನ್ನೋಲ್ಲ. ಇನ್ನೂ ಸ್ವಲ್ಪ ಕೊಟ್ಟಿದ್ರೇ ಅಂದ್ಕೋತಾನೆ. ಆದ್ರೇ ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ನಾವು ಬಡಿಸಿದ್ರೂ ಹಾಕಿಸ್ಕೊಳ್ಳೋಲ್ಲ. ಸಾಕು ಅಂತಾನೆ.. ಹೊಟ್ಟೆ ತುಂಬಿತು ಅಂತಾನೆ ತೃಪ್ತನಾಗ್ತಾನೆ.
ಹಸಿದವರಿಗೆ ಅನ್ನ ಹಾಕುವುದಕ್ಕಿಂತಲೂ ಪುಣ್ಯದ ಕೆಲಸ ಬೇರೆ ಯಾವ್ದಿದೆ? ಅಲ್ವಾ.. ಏನಿದ್ಯೋ ಇದ್ದದ್ದರಲ್ಲೇ ಶುಚಿಯಾಗಿ ರುಚಿಯಾಗಿ ಮಾಡಿ ಬಡಿಸಿದ್ರಾಯ್ತು..ಒತ್ತಾಯ ಮಾಡಿ ಚೆಲ್ಲುವಷ್ಟು ಬಡಿಸಬಾರದು. ತುತ್ತು ಅನ್ನಕ್ಕಾಗಿ ಹಾತೋರೆಯುವ ಸಾವಿರಾರು ಬಾಯಿಗಳಿವೆ…
- ವೀಣಾ ವಿನಾಯಕ