ಎಂ.ಜಿ. ಕಾವೇರಮ್ಮ ಅವರು ಪ್ರೌಢ ಶಾಲೆಯಲ್ಲೇ ಇರುವಾಗಲೇ ” ಭಗಿನಿ ” ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ್ದರು, ಒಳ ಹರಿವು, ಜೊಂಗೆ ಅರೆ ಭಾಷೆ ಕವನ ಸಂಕಲನ, “ಬೊದ್ಕ್ ” ಕಾದಂಬರಿ, ನೆಂಪುಗಳ ರಂಗೋಲಿ ಸೇರಿದಂತೆ ಸಾಕಷ್ಟು ಬರಹಗಳನ್ನು ಹೊರಕ್ಕೆ ತಂದಿದ್ದಾರೆ. ಅವರ ಅಕ್ಷರ ಪ್ರೀತಿಯ ಕುರಿತು ಬಾಲು ದೇರಾಜೆ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸೂಂತೋಡು ದಿ. ಶ್ರೀ ಅಪ್ಪಣ್ಣ ಗೌಡ ಹಾಗೂ ದಿ. ಶ್ರೀಮತಿ ಮಳಿ ಮುದ್ದಮ್ಮ ದಂಪತಿಗಳಿಗೆ 1939 ನೇ ಇಸವಿ ಜುಲಾಯಿ 14ರಂದು ಜನಿಸಿದ ಮಗಳು ಎಂ.ಜಿ. ಕಾವೇರಮ್ಮ. ನಂತರದ ವರ್ಷಗಳಲ್ಲಿ ಸುಳ್ಯದ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ, ಬೋರ್ಡ್ ಹೈಸ್ಕೂಲಲ್ಲಿ ಪ್ರೌಢ, ಹಾಗೂ ಸ್ಯೆಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು ಇಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮಾಡಿದರು.
ಶ್ರೀಮತಿ ಎಂ.ಜಿ.ಕಾವೇರಮ್ಮರು ಚಿಕ್ಕ ವಯಸ್ಸಿನಿಂದಲೇ ತಮ್ಮ ಜೀವನದಲ್ಲಿ ಸುಳ್ಯದ ಹಲವಾರು ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳು ಅನೇಕ, ಕಂಡ ಅನುಭವಗಳು ಅಪಾರ. ದ.ಕನ್ನಡ ಮತ್ತು ಕೊಡಗು ವಿದ್ಯಾಸಂಘದ ಪದಾಧಿಕಾರಿ, ಸುಳ್ಯದ ಶ್ರೀ ಶಾರದಾ ಹೆಮ್ಮಕ್ಕಳ ಪ್ರೌಢ ಶಾಲೆ ಹಾಗೂ ಮಹಿಳಾ ಸಮಾಜದ ಸ್ಥಾಪಕರ ಲ್ಲೊಬ್ಬರಾಗಿದ್ದುದಲ್ಲದೆ, 28 ವರ್ಷ ಗೌರವ ಕಾರ್ಯದರ್ಶಿ, 7ವರ್ಷ ಅಧ್ಯಕ್ಷೆಯಾಗಿ 35 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದವರು. ಸುಳ್ಯ ಮಹಿಳಾ ಸಮಾಜದಲ್ಲಿ ಸರ್ವೋದಯ ಕಾರ್ಯಕರ್ತರ ಶಿಬಿರ, ಕುಟುಂಬ ಕಲ್ಯಾಣ ಯೋಜನೆ ಶಿಬಿರ, ಭರತ ನಾಟ್ಯ ತರಭೇತಿ, ಹೊಲಿಗೆ ಯಂತ್ರ ವಿತರಣೆ, ಬಾಲವಾಡಿ, ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸುಳ್ಯ ಗ್ರಂಥಾಲಯ ಮಂಡಳಿಯ ಉಪಾಧ್ಯಕ್ಷೆ , ವಯಸ್ಕರ ಶಿಕ್ಷಣ ಸಮಿತಿ ಸದಸ್ಯೆಯಾಗಿ, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಸಿ ಕೊಳ್ಳುದರ ಜೊತೆಗೆ ಪೋಲಿಸ್ ಠಾಣಾ ನಾಗರೀಕ ರಕ್ಷಣ ಸಮಿತಿ ಸದಸ್ಯೆಯಾಗಿ ರೈಫಲ್ ಟ್ರೈನಿಂಗ್ ಕೋರ್ಸ್ ಮಾಡಿಸಿ ಹಲವಾರು ಹೆಣ್ಣು ಮಕ್ಕಳಿಗೆ ಸರ್ಟಿಫಿಕೇಟ್ ಕೊಡಿಸುವ ಮೂಲಕ ಮಾದರಿ
ಆಗಿದ್ದರು.
1968ನೇ ಇಸವಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಗೊಂಡು,ನಂತರ ಜನಸಂಘ ಪಕ್ಷಕ್ಕೆ ಸೇರಿ, ರಾಷ್ಟ್ರಸೇವಿಕಾ ಸಂಘವನ್ನು ಸುಳ್ಯದಲ್ಲಿ ಸ್ಥಾಪಿಸಿ, ಕಾರ್ಯಕರ್ತೆ ಯಾಗಿ ಸೇವೆಸಲ್ಲಿಸಿ, ಹಲವಾರು ವರ್ಷಗಳ ಅನುಭವ ಪಡೆದವರು.1969ನೇ ಇಸವಿಯಲ್ಲಿ ತಾಲೂಕು ಬೋರ್ಡ್ ಸದಸ್ಯೆಯಾಗಿ, ಸುಳ್ಯ ಕ್ಷೇತ್ರಕ್ಕೊಳಪಟ್ಟ 9 ಗ್ರಾಮಗಳ ಪ್ರತಿನಿಧಿಯಾಗಿ 5 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿದವರು. ಬೋರ್ಡ್ ಹೈಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆ, ಸೈಂಟ್ ಬ್ರಿಜಿಡ್ಸ್ ಹಿರಿಯ ಪ್ರಾಥಮಿಕ ಶಾಲೆ, ಶಾರದಾ ಹೆಮ್ಮಕ್ಕಳ ಪ್ರೌಢ ಶಾಲೆ ಸುಳ್ಯ ಮುಂತಾದವುಗಳ ಶಾಲಾಭಿವೃಧಿ ಸಮಿತಿಯ ಸದಸ್ಯೆರಾಗಿ ಕಾರ್ಯನಿರ್ವಹಿಸಿದವರು . ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಯ 5 ವರ್ಷ ಸದಸ್ಯೆಯಾಗಿ ಸೇವೆ ಸಲ್ಲಿಸಿದವರು.
ಶ್ರೀಮತಿ ಎಂ.ಜಿ.ಕಾವೇರಮ್ಮ ಸಾಹಿತ್ಯದಲ್ಲಿ ಆಸಕ್ತಿ ಹೊಂದಿ ಸಾಧನೆಯ ದಾರಿಯಲ್ಲಿ ಮುನ್ನಡೆದವರು. ಪ್ರೌಢ ಶಾಲೆಯಲ್ಲೇ ” ಭಗಿನಿ ” ಎಂಬ ಕೈಬರಹದ ಮಾಸಪತ್ರಿಕೆಯನ್ನು 3 ತಿಂಗಳು ನಡೆಸಿದ್ದು, 2009 ನೇ ಇಸವಿಯಲ್ಲಿ ಸುಳ್ಯ ತಾಲೂಕು 15 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಥಮಬಾರಿಗೆ ಕನ್ನಡ ಕವನ ಸಂಕಲನ ” ಒಳ ಹರಿವು ” ಬಿಡುಗಡೆಗೊಂಡಿತ್ತು. ಇವರು ಮುಖ್ಯವಾಗಿ ಅರೆಭಾಷೆಯ ಅಪ್ಪಟ ಅಭಿಮಾನಿಯಾಗಿದ್ದು, ಸರ್ಮಾಲೆ, ಉಜ್ಜಾಲ್,ಅಲ್ಲದೆ ಸುದ್ದಿ ಬಿಡುಗಡೆ ಹಾಗೂ ಹಿಂಗಾರ ಪತ್ರಿಕೆಗಳಲ್ಲಿ ಪ್ರಕಟಗೊಂಡ ” ಜೊಂಗೆ “ಅರೆ ಭಾಷೆ ಕವನ ಸಂಕಲನ.
“ಬೊದ್ಕ್ ” ಕಾದಂಬರಿ, ಬಾಲ್ಯದಲ್ಲಿ ನಡೆದ ಘಟಣೆಗಳ ಸಂಗ್ರಹಗಳಾದ ನೆಂಪುಗಳ ರಂಗೋಲಿ, ಅಜ್ಜಿ ಕತೆಗಳ ಸಂಗ್ರಹ ಗಳಾದ ಅಜ್ಜಪ್ಪನ ಕತಾ ಬಂಡಾರಂದ ಹೆರ್ಕಿದ ಕತೆಗಳು ಇವು ಅರೆಭಾಷೆ ಅಕಾಡೆಮಿಯಲ್ಲಿ ಪ್ರಕಟಣೆಗೊಂಡ ಕೃತಿಗಳಾಗಿವೆ. ಅಲ್ಲದೆ ಶ್ರೀ ಡಾ.ಪ್ರಭಾಕರ ಶಿಶಿಲರ ಪೌರಾಣಿಕ ಕನ್ನಡ ಕಾದಂಬರಿ ಪುಂಸ್ತ್ರೀಯನ್ನು ಅರೆ ಭಾಷೆಗೆ ಅನುವಾದಿಸಿದ್ದಾರೆ.
ಶ್ರೀಮತಿ ಕಾವೇರಮ್ಮ ರಿಗೆ 1992-93 ನೇ ಇಸವಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವೆಗಾಗಿ ಪ್ರಶಸ್ತಿ , 2004 ರಲ್ಲಿ ಸುಳ್ಯ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವೆಗಾಗಿ ” ಕನ್ನಡ ಸಿರಿ “, ಸುಳ್ಯ ಬ್ರಹ್ಮಾಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ದಲ್ಲಿ ” ಹಿರಿಯ ನಾಗರಿಕ “, ಸುಳ್ಯ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ ಪೂರ್ವಾಧ್ಯಕ್ಷರುಗಳ ಸನ್ಮಾನ ಸಮಾರಂಭದಲ್ಲಿ ಸನ್ಮಾನ- ಗೌರವ, 2017 ನೇ ಇಸವಿಯಲ್ಲಿ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ, ಸಾರ್ವಜನಿಕ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಾಹಿತ್ಯ ಪ್ರಶಸ್ತಿ, 2019 ನೆಯ ಇಸವಿಯಲ್ಲಿ ದಿಂದ ” ಸಂದ್ಯಾ ಚೇತನ ಸಾಹಿತ್ಯ ರತ್ನ ” ಪ್ರಶಸ್ತಿ ಗಳು ಲಭಿಸಿವೆ.
ಇವರ ಅರೆ ಭಾಷೆ ಕವನಗಳಿಗೆ ರಾಗ ಸಂಯೋಜಿಸಿ ಮಡಿಕೇರಿ ಆಕಾಶವಾಣಿಯಲ್ಲಿ ಹಾಡಿನ ರೂಪದಲ್ಲಿ ಪ್ರಸಾರ ಗೊಂಡು, ಕೇಳುಗರು ಹಾಡಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ಚಿತ್ರ ಕಲೆ, ಕಸೂತಿ, ತೋಟಗಾರಿಕೆ, ಅಡುಗೆ ಕಾವೇರಮ್ಮನ ಹವ್ಯಾಸಗಳಾಗಿದ್ದು, ದಿ. ಶ್ರೀ ಮಾವಜಿ ಗೋಪಾಲಕೃಷ್ಣ ಗೌಡರ ಪತ್ನಿಯಾಗಿ, ಏಕೈಕ ಮಗ, 3 ಜನ ಹೆಣ್ಣು ಮಕ್ಕಳು, 8 ಜನ ಮೊಮ್ಮಕ್ಕಳು, ಅಲ್ಲದೆ 2 ಮರಿ ಮಕ್ಕಳಿದ್ದು, ತುಂಬಿದ ಕುಟುಂಬ ದಲ್ಲಿ ತಮ್ಮ 84 ನೇ ವಯಸ್ಸಿನಲ್ಲಿರುವ ಇವರು ಶ್ರವಣ ಶಕ್ತಿ ಕುಂದಿದರೂ ಬಹಳ ಲವಲವಿಕೆಯಿಂದ ಪ್ರೀತಿ ಪೂರ್ವಕವಾದ ಮಾತುಗಳು. ಈಗ ಸುಳ್ಯ ಸಿ.ಎ. ಬ್ಯಾಂಕ್ ನ ಹಿಂಭಾಗದಲ್ಲಿರುವ ತಮ್ಮ ನಿವಾಸ ವಾದ ” ನಿಸರ್ಗ ” ದಲ್ಲಿ ಮಗ, ಸೊಸೆ, ಮೊಮ್ಮಕ್ಕಳೊಡನೆ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಅರೆ ಬಾಸೆ ಬೆಳ್ಯಲಿ
ಅರೆ ಬಾಸೆ ಒಳ್ಯಲಿ
ಎಂ. ಜಿ. ಕಾವೇರಮ್ಮ….ನೂರ್ಕಾಲ….ಬಾಳಲಿ
- ಬಾಲು ದೇರಾಜೆ